ಪ್ರವಾಸ ಎನ್ನುವುದು ಒಂದು ಉದ್ಯಮ ಸ್ವರೂಪವನ್ನು ತಾಳಿದೆ

Date: 14-10-2024

Location: ಬೆಂಗಳೂರು


“ಅಂಡಮಾನ್ ಪ್ರವಾಸ ಕೈಗೊಳ್ಳುವವರಿಗೆ ಈ ಕೃತಿ ಮಾರ್ಗದರ್ಶಿಯಾಗಿ ಉಪಯುಕ್ತವಾಗಿದೆ” ಎನ್ನುತ್ತಾರೆ ವೆಂಕಟೇಶ್ ಮಾಚಕನೂರು. ಅವರು ಸಂಗಮೇಶ ಬಾದವಾಡಗಿ ಅವರ ‘ಕಾಡು, ಕಡಲ ತೀರಗಳ ನಾಡು ಅಂಡಮಾನ್’ ಪ್ರವಾಸ ಕಥನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಪ್ರವಾಸ ಕಥನಗಳಿಗೊಂದು ಮುನ್ನುಡಿಯ ಹಂಗು ಬೇಕಿಲ್ಲ. ಪ್ರವಾಸ ಅನ್ನುವುದೇ ಬಹು ಜನರ ಪಾಲಿಗೆ ಒಂದು ಮೋಜು ಮಸ್ತಿಯ ವಿಹಾರ. ಈಗಂತೂ ಪ್ರವಾಸಿ ಸೌಲಭ್ಯಗಳು ಹೆಚ್ಚಳಗೊಂಡಿವೆ. ಪ್ರವಾಸ ಮಾಡುವವರು ಹೆಚ್ಚಾಗಿದ್ದಾರೆ. ಸ್ವದೇಶ ಆಯಿತು, ವಿದೇಶವಾಯಿತು ಪ್ರವಾಸಕ್ಕೆ ತಕ್ಕಂತೆ ಸಕಲ ಸೌಲಭ್ಯ ಕಲ್ಪಿಸುವ ನೂರಾರು ಏಜೆನ್ಸಿಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡಿವೆ. ಜನರ ಕೈಯಲ್ಲಿ ಹಣದ ಹರಿವು ಹೆಚ್ಚಿದೆ. ಅದರಲ್ಲೂ ಜೀವನದ ಒಂದು ಹಂತದಲ್ಲಿ ಎಲ್ಲ ಸಾಂಸಾರಿಕ ಜವಾಬ್ದಾರಿಗಳು ತೀರಿದ ಮೇಲೆ ಹಾಗೂ ನಿವೃತ್ತಿ ನಂತರ ಪೂರ್ಣ ಸ್ವತಂತ್ರಗೊಂಡ ಬಳಿಕ ಮನಸ್ಸು ಅತ್ತಲಿತ್ತ ಸುಳಿಯಲು ಹವಣಿಸುತ್ತದೆ. ಪ್ರವಾಸಿಗರ ಮನೋಭಿಲಾಷೆಗೆ ತಕ್ಕ ಪ್ರವಾಸಿ ತಾಣಗಳಿಗೆ ಕೊರತೆ ಇಲ್ಲ. ಒಂದಿಷ್ಟು ಸಮಾನ ಮನಸ್ಕರು, ಸಮಾನ ವಯಸ್ಕರರು ಸೇರಿದರೆ ಅಥವಾ ಸಹ ಧರ್ಮಿಣಿಯೊಂದಿಗೆ ಹೊರಟರಾಯಿತು. ಗುಂಪು ಪ್ರವಾಸಗಳಲ್ಲಿ ಎಲ್ಲರೊಂದಿಗೆ ಬೆರೆತು ಒಂದಾಗಿ ಬೇಕೆಂದಲ್ಲಿ ಹೋಗಿ ಬರುವ ಅನುಕೂಲಗಳು ಈಗ ಸಾಕಷ್ಟಿವೆ. ಒಂದು ಕಾಲಕ್ಕೆ ಪ್ರವಾಸ ಎನ್ನುವುದು ಪ್ರಯಾಸದ ಕೆಲಸವಾಗಿತ್ತು. ಈಗ ಹಾಗಿಲ್ಲ ನಮ್ಮ ಜೇಬಿನ ಅಳತೆಗೆ ತಕ್ಕಂತೆ ಪ್ರವಾಸ ಏರ್ಪಡಿಸುವ ನೂರೆಂಟು ಸಂಘ ಸಂಸ್ಥೆಗಳಿವೆ. ಅನೇಕ ಸರಕಾರಿ ಸ್ವಾಮ್ಯದ ಸಂಸ್ಥೆಗಳೂ ಉಂಟು. ಹೀಗಾಗಿ ಈಗ ಪ್ರವಾಸ ಮಾಡುವವರು ಹೆಚ್ಚಾಗಿದ್ದು, ಪ್ರವಾಸ ಎನ್ನುವುದು ಒಂದು ಉದ್ಯಮ ಸ್ವರೂಪವನ್ನು ತಾಳಿದೆ.

ಪ್ರವಾಸೋದ್ಯಮ ಇಂದು ಹಲವಾರು ಸಕಾರಾತ್ಮಕ, ನಕಾರಾತ್ಮಕ ಬೆಳವಣಿಗೆಗಳಿಗೂ ಕಾರಣವಾಗಿದೆ. ಧಾರ್ಮಿಕ ಕ್ಷೇತ್ರಗಳ ಪ್ರವಾಸ, ಐತಿಹಾಸಿಕ ಸ್ಥಳಗಳ ವೀಕ್ಷಣೆ ಅಥವಾ ನೈಸರ್ಗಿಕ ಚೆಲುವಿನ ತಾಣಗಳು, ಶುದ್ಧ ಮೋಜು, ಮಸ್ತಿ ಕೇಂದ್ರಗಳು ಎಲ್ಲಿ ನೋಡಿದಲ್ಲಿ ಜನ ಜಂಗುಳಿ. ಹತ್ತು ಹದಿನೈದು ವರ್ಷಗಳ ಹಿಂದೆ ನಮಗೆ ಬೇಕಾದ ಸ್ಥಳಗಳಿಗೆ ಒಂದಿಷ್ಟು ವಿರಾಮದಲ್ಲಿ ಹೋಗಿ ಒಂದೆರಡು ದಿನ ತಂಗಿ ಬರಬಹುದಿತ್ತು. ಆದರೆ ಈಗ ವರ್ಷದುದ್ದಕ್ಕೂ ಎಲ್ಲಾ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ಧಾರ್ಮಿಕ ಕೇಂದ್ರಗಳಲ್ಲಿ ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನ ಜಂಗುಳಿ ಅತೀ ಹೆಚ್ಚು. ಹಿಮಾಲಯ ಪರಿಸರದ ಉತ್ತರಾಖಾಂಡ, ಹಿಮಾಚಲ ಪ್ರದೇಶ, ಕಾಶ್ಮೀರದಂತಹ ಸ್ಥಳಗಳ ದೇವಾಲಯಗಳು, ಭಕ್ತರ ಒತ್ತಡದಿಂದ ನಲುಗಿ ಹೋಗಿವೆ. ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಮಾಡಲಾದ ಸಾರಿಗೆ ಸಂಪರ್ಕ ಅವ್ಯವಸ್ಥೆಯಿಂದಾಗಿ ಹಿಮಾಲಯದಲ್ಲಿ ಅವಘಡಗಳು ಸಂಭವಿಸತೊಡಗಿವೆ. ಮಳೆ ಮಹಾಪೂರದಂತಹ ನೈಸರ್ಗಿಕ ವಿಕೋಪಗಳಿಂದ ವಿಪರೀತ ಹಾನಿ ಸಂಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ದೇಶದ ಜನಸಂಖ್ಯೆ ಒತ್ತಡವನ್ನು ಪ್ರತಿಯೊಂದು ರಂಗದಲ್ಲಿ ನಾವು ಎದುರಿಸಬೇಕಿದೆ. ಆದ್ದರಿಂದ ಕೆಲವೊಂದು ಸ್ಥಳಗಳಿಗೆ ಪ್ರವಾಸಿಗರನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಪರಿಸರ ಸೂಕ್ಷ್ಮ ಸ್ಥಳಗಳ ಧಾರಣ ಶಕ್ತಿಗೆ ಅನುಗುಣವಾಗಿ ಮಾತ್ರ ಸೌಲಭ್ಯಗಳನ್ನು ವಿಸ್ತರಿಸಬೇಕು. ಇಲ್ಲದಿದ್ದರೆ ಕಳೆದ ಕೆಲವು ವರ್ಷಗಳಿಂದ ನಮ್ಮ ಉತ್ತರದ ಪ್ರವಾಸಿ ಸ್ಥಳಗಳಲ್ಲಿ ಸಂಭವಿಸುತ್ತಿರುವ ಸಾವು ನೋವುಗಳು ಪ್ರತೀ ವರ್ಷ ಅದು ಸಾಮಾನ್ಯವಾಗಬಹುದು. ಆದ್ದರಿಂದ ಪ್ರವಾಸೋಧ್ಯಮ ಕೂಡ ಒಂದು ಇತಿಮಿತಿಗೊಳಪಡುವ ಅಗತ್ಯತೆ ಇದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು.

ಸಂಗಮೇಶ್‌ ಬಾದವಾಡಗಿ ಅವರ ಅಂಡಮಾನ್ ಪ್ರವಾಸ ಕಥನ ಓದುತ್ತಾ ಇಷ್ಟೆಲ್ಲಾ ವಿಚಾರಗಳು ಸುಳಿದುಹೋದವು. ನಾನೂ ಸ್ವಲ್ಪ ದೇಶ, ವಿದೇಶಗಳನ್ನು ಸುತ್ತಿ ಸುಳಿದವನಾಗಿ ಅನೇಕ ಸ್ಥಳಗಳ ವೀಕ್ಷಣೆಯಿಂದ ಕಂಡುಂಡ ಅನುಭವದ ಹಿನ್ನೆಲೆಯಲ್ಲಿ ಈ ಕೆಲ ಮಾತುಗಳನ್ನು ಹೇಳಬೇಕಾಯಿತು. ಪ್ರವಾಸದ ಹಿನ್ನೆಲೆ, ತಯಾರಿ ಹಾಗೂ ಪ್ರವಾಸ ಕುರಿತು ತಮ್ಮ ಅನೇಕ ಅಭಿಪ್ರಾಯಗಳನ್ನು ಆರಂಭದಲ್ಲೇ ಹೇಳುತ್ತಾ ತಮ್ಮ ಒಂದು ವಾರದ ಅಂಡಮಾನ್ ಕುರಿತು ಸಂಗಮೇಶ್ ಅವರು ಸರಳವಾಗಿ ನಿರೂಪಿಸಿದ್ದಾರೆ. ಅಂಡಮಾನ್ ಕುರಿತು ಅನೇಕ ಪ್ರವಾಸ ಕಥನಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ಪ್ರತೀ ವರ್ಷ ಬರುತ್ತಲೂ ಇವೆ. ಒಬ್ಬೊಬ್ಬರದು ಒಂದೊಂದು ರೀತಿ ಅನುಭವ, ಒಬ್ಬೊಬ್ಬರದು ಒಂದೊಂದಕ್ಕೆ ಒತ್ತು ಕೊಟ್ಟು ಬರೆಯುತ್ತಾರೆ. ಅಂಡಮಾನ್ ನಡುಗಡ್ಡೆಗಳ ವೈಶಿಷ್ಟ್ಯ ಅಲ್ಲಿನ ನೈಸರ್ಗಿಕ ಚೆಲುವು, ಅಲ್ಲಿನ ಕಾಡುಗಳು, ಜರವಾ ಜನಾಂಗ, ಸಮುದ್ರ ಕಿನಾರೆಗಳು, ಅಲ್ಲಿನ ನೀರಾಟಗಳು, ಜನಜೀವನ, ಸೆಲ್ಯುಲಾರ್ ಜೈಲು ಮತ್ತು ಸ್ವಾತಂತ್ರ್ಯ ಪೂರ್ವ ಅಂಡಮಾನಿನಲ್ಲಿ ಘಟಿಸಿದ ಮಹತ್ವದ ಬೆಳವಣಿಗೆಗಳು ಅನೇಕ ಸ್ವಾತಂತ್ರ್ಯ ಸೇನಾನಿಗಳಿಗೆ ದುಸ್ವಪ್ನವಾಗಿ ಕಾಡಿ ಅವರನ್ನು ಆಹುತಿ ತೆಗೆದುಕೊಂಡ ಸ್ಥಳ ಕುರಿತು ವಿವರಗಳು ಹೀಗೆ ಅಂಡಮಾನ್ ಪ್ರವಾಸ ಕಥನಗಳು ಗಮನ ಸೆಳೆಯುತ್ತವೆ. ಮಾನವ ಜನಾಂಗದ ಐತಿಹಾಸಿಕ ಬೆಳವಣಿಗೆಯ ದೃಷ್ಟಿಯಿಂದಲೂ ಅಂಡಮಾನ್ ನಡುಗಡ್ಡೆಗಳು, ಮಹತ್ವದ ಸ್ಥಳಗಳಾಗಿವೆ. ಬಾದವಾಡಗಿಯವರು ಅಂಡಮಾನ್ ನಡುಗಡ್ಡೆಗಳ ವಿವರಗಳನ್ನು ದಾಖಲಿಸುತ್ತಾ ಆ ನಡುಗಡ್ಡೆಗಳಲ್ಲಿ ಸ್ನೇಹಿತ ಬಳಗದೊಂದಿಗೆ ನಡೆಸಿದ ಮೋಜು ಮಸ್ತಿಯ ವಿವರಗಳನ್ನು ಲಘು ದಾಟಿಯಲ್ಲಿ ದಾಖಲಿಸಿದ್ದಾರೆ. ಅಂಡಮಾನ್ ಪ್ರವಾಸ ಕೈಗೊಳ್ಳುವವರಿಗೆ ಈ ಕೃತಿ ಮಾರ್ಗದರ್ಶಿಯಾಗಿ ಉಪಯುಕ್ತವಾಗಿದೆ.

ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಾದವಾಡಗಿಯವರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಡನಾಡಿದವರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಅವರ ಅಂಡಮಾನ್ ಪ್ರವಾಸ ಕಥನ ಓದುಗರಿಗೆ ಮುದ ನೀಡಲಿ ಎಂದು ಹಾರೈಸುತ್ತೇವೆ.

- ವೆಂಕಟೇಶ್ ಮಾಚಕನೂರು

MORE NEWS

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...

ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?

15-10-2024 ಬೆಂಗಳೂರು

“ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂ...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...