ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

Date: 26-09-2024

Location: ಬೆಂಗಳೂರು


"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್ಕೂಲ್ ಫಸ್ಟ್ ಈಯರ್ ವಿದ್ಯಾರ್ಥಿ. ಧರ್ಮಸಿಂಗ್ ಅದೇ ಮೊದಲ ಬಾರಿಗೆ ನಮ್ಮೂರು ಕಡಕೋಳಕ್ಕೆ ಬಂದಿದ್ದರು. ಅದು ಜೇವರ್ಗಿ ವಿಧಾನಸಭಾ ಮತಕ್ಷೇತ್ರದ ಅವರ ಪ್ರಥಮ ಚುನಾವಣೆ ಪ್ರಚಾರ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ‘ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು’ ಲೇಖನ ನಿಮ್ಮ ಓದಿಗಾಗಿ..

ಹಾಗೆ ನೋಡಿದರೆ ಧರ್ಮಸಿಂಗ್ ಅವರೊಂದಿಗೆ ನನ್ನದು ನಿರಂತರ ಒಡನಾಟವೇನಲ್ಲ. ಅವರೊಂದಿಗೆ ಒಡನಾಡಿದ ಕೆಲವೇ ಕೆಲವು ಅನುಭವಗಳಾದರೂ ಧರ್ಮಸಿಂಗ್ ಅವರ ನೆನಪನ್ನು ಚಿರಂತನಗೊಳಿಸಿವೆ. ಅಂತೆಯೇ ಅಂತಹ ಕೆಲವು ಸಾಂದರ್ಭಿಕ ನೆನಪುಗಳು ನನ್ನೊಳಗೆ ನಿತಾಂತವಾಗಿ ಬತ್ತದ ವರತೆಯಂತೆ ಕಾಪಿಟ್ಟು ಕೊಂಡಿವೆ. ಅಂತಹ ವರತೆಯಿಂದ ತೆಗೆದು ತುಂಬಿಕೊಂಡ ಕೆಲವು ಬೊಗಸೆ ನೆನಪುಗಳು.

ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್ಕೂಲ್ ಫಸ್ಟ್ ಈಯರ್ ವಿದ್ಯಾರ್ಥಿ. ಧರ್ಮಸಿಂಗ್ ಅದೇ ಮೊದಲ ಬಾರಿಗೆ ನಮ್ಮೂರು ಕಡಕೋಳಕ್ಕೆ ಬಂದಿದ್ದರು. ಅದು ಜೇವರ್ಗಿ ವಿಧಾನಸಭಾ ಮತಕ್ಷೇತ್ರದ ಅವರ ಪ್ರಥಮ ಚುನಾವಣೆ ಪ್ರಚಾರ. ಆಗಿನ್ನೂ ಅವರು ಮುವತ್ತಾರರ ಹರೆಯದ ತೆಳ್ಳನೆಯ ತರುಣ. ಆಗ ಅವರು ಬಿಳಿ ಪೈಜಾಮ ಮತ್ತು ಬಿಳಿ ಶ್ಲ್ಯಾಗ್ ಉಡುಪಿನಲ್ಲಿದ್ದ ಬರೋಬ್ಬರಿ ದ್ಯಾಸ ನನ್ನದು. ಅವರೊಂದಿಗೆ ಬಂದಿದ್ದ ನಾಕೈದು ಮಂದಿ ಹಿರೀಕರು, ಹಳ್ಳದಾಚೆಯ ವಾರಿಯ ಮೇಲೆ 'ಜೀಪ್' ನಿಲ್ಲಿಸಿ ಬಂದಿದ್ದರು.

ಏಕೆಂದರೆ ನಮ್ಮೂರ ಹಿರೇಹಳ್ಳಕ್ಕೆ ಆಗಿನ್ನೂ ಪೂಲ್ ಕಟ್ಟಿರಲಿಲ್ಲ. ಹಾಗಾಗಿ ಊರೊಳಕ್ಕೆ ಜೀಪ್ ಬರುತ್ತಿರಲಿಲ್ಲ. ಹಾಗೆ ಹಳ್ಳ ದಾಟಿ ಊರೊಳಕ್ಕೆ ನಡಕೊಂಡು ಬರುತ್ತಿದ್ದ ಧರ್ಮಸಿಂಗ್ ಸತತವಾಗಿ ನಾಲ್ಕು ಸಾರಿ ಶಾಸಕರಾಗಿ ಆರಿಸಿ ಬಂದು ಅವರು ಲೋಕೋಪಯೋಗಿ ಸಚಿವರಾದ ಮೇಲೆ ನಮ್ಮೂರ ಹಿರೇಹಳ್ಳಕ್ಕೆ ಸರಕಾರದಿಂದ ಪೂಲ್ (ಸೇತುವೆ) ಕಟ್ಟಿಸಿ ಕೊಡುತ್ತಾರೆ. ಆದರೆ ಮೊದಲ ಬಾರಿ ಹಿರೇಹಳ್ಳ ದಾಟಿ ಬರುವಾಗ ಧರ್ಮಸಿಂಗ್ ತಮ್ಮ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಕೊಂಡೇ ಹಳ್ಳ ದಾಟಿದ ನೆನಪು ನನ್ನಲ್ಲಿನ್ನೂ ಹಚ್ಚ ಹಸಿರಾಗಿ ಕಣ್ಣಿಗೆ ಕಟ್ಟಿದಂತಿದೆ. ಅಂದಹಾಗೆ ಅವರು ಲೋಕೋಪಯೋಗಿ ಮಂತ್ರಿ ಆಗಿದ್ದಾಗ ಕಟ್ಟಿಸಿದ ಕಡಕೋಳ ಸೇತುವೆ ಇದೀಗ ಶಿಥಿಲಗೊಂಡಿದೆ. ಕೆ.ಕೆ. ಆರ್.ಡಿ.ಬಿ. ಅಧ್ಯಕ್ಷರಾಗಿರುವ ಅವರ ಮಗ ಡಾ. ಅಜಯಸಿಂಗ್ ಸೇತುವೆ ಪಕ್ಕ ಹೊಸದೊಂದು ಸೇತುವೆ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆಂದು ಕೇಳಿದ್ದೇನೆ.

ಅಂದು ಹಾಗೆ ಬಂದವರೆ ಧರ್ಮಸಿಂಗ್ ಮೊದಲು ಮಠಕ್ಕೆ ಭೆಟ್ಟಿಕೊಟ್ಟು ಮಡಿವಾಳಪ್ಪನ ಕರ್ತೃ ಗದ್ದುಗೆಗೆ ನಮಸ್ಕರಿಸಿದರು. ಅಂದಿನ ಹಿರಿಯ ಗುರುಗಳಾದ ಪೂಜ್ಯ ಶ್ರೀವೀರೇಶ್ವರ ಮಹಾದೇವರ ಆಶೀರ್ವಾದ ಪಡೆದರು. ಊರ ಹಿರಿಯರಾದ ಮಾಲಿ ಸಿದ್ರಾಮಪ್ಪಗೌಡ, ಹುಡೇದ ಚಂದ್ರಾಮ, ಕವಲ್ದಾರ ತಿಪ್ಪಣ್ಣ, ಕುಲಕರ್ಣಿ ಮನೋಹರರಾವ್, ದೊರೆಗಳ ರಾಜಶೇಖರಪ್ಪ, ಶಿವಪ್ಪ ಸಾಹುಕಾರರು ಹೀಗೆ ಊರ ಮುಖಂಡರ ಗುಂಪು ಸೇರಿತು. ಧರ್ಮಸಿಂಗ್ ಅವರು ಮತ ಯಾಚಿಸುವ ಮೊದಲೇ "ನಮ್ಮ ಓಟು ನಿಮಗೇ - ಅರ್ಥಾತ್ ಇಂದ್ರಾಗಾಂಧಿಗೇ " ಎಂದು ನಮ್ಮೂರ ಹಿರಿಯರೆಲ್ಲರೂ ವಚನ ಕೊಟ್ಟೇ ಬಿಟ್ಟರು.

"ಹರಿಚಂದ್ರಾಯನ ಗಾಳಿ ಬೀಸ್ಯಾದ ನಿನ್ನ ಗೆಲುವು ಗ್ಯಾರಂಟಿ" ಎಂದು ಮಠದ ಹಿರಿಯ ಗುರುಗಳು ಶಕುನ ನುಡಿದಂತೆ ಆಶೀರ್ವಾದ ಮಾಡಿದರು. ಆ ಕೂಡಲೇ ಗುರುಗಳಿಗೆ ಧರ್ಮಸಿಂಗ್ ಸಾಷ್ಟಾಂಗ ಹಾಕಿದರು. ಹೌದು ಹಿರಿಯ ಗುರುಗಳು ಅಂದದ್ದು ಎಂದೂ ಹುಸಿಯಾಗುತ್ತಿರಲಿಲ್ಲ. ಹೀಗೆಂದು ಗುರುಗಳ ದಿಟದ ಮಾತಿಗೆ ಹುಡೇದ ಚಂದ್ರಾಮ ತಲೆದೂಗಿದಂತೆ ಅಂದು ಸಾಕ್ಷ್ಯ ನುಡಿದಿದ್ದರು. ಹೌದು ಹಿರಿಯ ಗುರುಗಳ ದಿಟದ ಮಾತುಗಳು ಅವರು ಬದುಕಿದ್ದ ಕಾಲದುದ್ದಕ್ಕೂ ಘಟಿಸಿದ್ದು ಮಾತ್ರ ಖರೇವಂದ್ರ ದಿಟವೇ ಆಗಿದ್ದವು.

ಹಾಗೆ ವರ್ಷದಲ್ಲಿ ಮೂರ್ನಾಲ್ಕು ಬಾರಿ ಧರ್ಮಸಿಂಗ್ ನಮ್ಮೂರಿಗೆ ಬಂದು ಹೋಗುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಕಡ್ಡಾಯವೆಂಬಂತೆ ಬಂದೇ ಬರುತ್ತಿದ್ದರು. ಅಂತೆಯೇ ಇವತ್ತಿಗೂ ಕಾಂಗ್ರೆಸ್ ಮತ್ತು ಧರ್ಮಸಿಂಗ್ ಅವರಿಗೆ ನಮ್ಮೂರ ಮತಗಳ ಮೊದಲ ಆದ್ಯತೆ. ಅಷ್ಟೇಯಾಕೆ ಕಳೆದ 2023 ರ ಚುನಾವಣೆಯಲ್ಲಿ ಅವರ ಮಗ ಡಾ. ಅಜಯಸಿಂಗ್ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಲೂ ನಮ್ಮೂರು ಮೊದಲ ಆದ್ಯತೆಯ ಅಧಿಕ ಮತಗಳನ್ನು ನೀಡಿದ ನಿದರ್ಶನ.

ಧರ್ಮಸಿಂಗ್ ಮುಖ್ಯಮಂತ್ರಿಯಾದಾಗ ಅವರಿಗಿಂತ ಅಧಿಕ ಪ್ರಮಾಣದಲ್ಲಿ ಖುಷಿಪಟ್ಟವರು ಜೇವರ್ಗಿ ಮತಕ್ಷೇತ್ರದ ನಮ್ಮ ಸಾಮಾನ್ಯ ಜನರು. ಅವರನ್ನು ಎಂಟು ಬಾರಿ ಆರಿಸಿ ಕಳಿಸಿದ ನಿರಂತರ ಪ್ರೀತಿಗೆ ಶೃಂಗಪ್ರಾಯದಂತೆ ಅವರು ಮುಖ್ಯಮಂತ್ರಿ ಆದಾಗ ಜೇವರ್ಗಿ ಕ್ಷೇತ್ರಕ್ಕೆ ರಾಜಕೀಯ ನಕಾಶೆಯಲ್ಲಿ ಅನನ್ಯತೆಯ ಸ್ಥಾನಮಾನ. ಬೆಂಗಳೂರಿಗೆ ನಮ್ಮ ಕ್ಷೇತ್ರದ ಜನರು ಹೋದಾಗ ಆಟೋ ಓಡಿಸುವವರು ಸಹಿತ ಜೇವರ್ಗಿ ಅಂತ ನಾವು ಹೇಳಿದರೆ ಸಾಕು ''ಮುಖ್ಯಮಂತ್ರಿ ಧರ್ಮಸಿಂಗ್ ‌ಊರಿನವರೆಂದು'' ಮರ್ಯಾದೆ ಕೊಡುತ್ತಿದ್ದರು. ಅದೊಂದು ಬಗೆಯ ಯತಾರ್ಥತೆ ಮತ್ತು ಹದುಳಮಯ ಸಂಬಂಧ ಪ್ರತೀತಿ.

ಮುಂದೆ ಎಂದಾದರೂ ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಅವಕಾಶ ದೊರಕುತ್ತದೋ ಇಲ್ಲೋ ಗೊತ್ತಿಲ್ಲ. ಅಂತಹದ್ದೊಂದು ಅಪರೂಪದ ಮತ್ತು ಅಪೂರ್ವ ಅವಕಾಶಕ್ಕೆ ಕಾರಣರಾದ ಅವರಿಗೆ ನಾವೆಲ್ಲ ಋಣಿ. ಆದರೆ ಅವರ ಮುಖ್ಯಮಂತ್ರಿ ಅಧಿಕಾರದ ಅವಧಿಯಲ್ಲಿ ಜೇವರ್ಗಿ ಕ್ಷೇತ್ರವನ್ನು ಅಕ್ಷರಶಃ "ನಂದನವನ" ಮಾಡಬಹುದಿತ್ತು. ನೆಲದ ಋಣ ತೀರಿಸಬಹುದಿತ್ತು. ಯಾಕೆ ಮಾಡಲಿಲ್ಲ ಎಂದು ಅವರನ್ನು ಕೇಳದಷ್ಟು ಮೊಗಲಾಯಿ ಮಂದಿ ನಾವು. ಬೆಂಗಳೂರಿನ ಕೆಲವು ಜಾಣ ಪತ್ರಕರ್ತರು ಆಫ್ ದಿ ರೆಕಾರ್ಡ್ ಧರ್ಮಸಿಂಗ್ ಕತೆಗಳ ಹುಡುಕಾಟಕ್ಕೆ ಹಾತೊರೆಯುತ್ತಿದ್ದರು. ಆದರೆ ಧರ್ಮಸಿಂಗ್ ಅವರ ಬದುಕು ಯಾವತ್ತೂ ಆನ್ ದಿ ರೆಕಾರ್ಡ್ ಕತೆಗಳ ಮಹಾಗುಚ್ಛವೇ ಆಗಿತ್ತು. ಉರ್ದು ಶಾಯರಿಗಳ ಕಡುಮೋಹಿಯಾಗಿದ್ದ ಧರ್ಮಸಿಂಗ್ ಅಂತಹ ಜಾಣ ಪತ್ರಕರ್ತರಿಗೆ ಶ್ಯಾಣೇತನದಿಂದ ಉರ್ದುವಿನ ಶಾಯರಿ, ಗಝಲ್, ನಝ್ಮೆಗಳನ್ನು ಹೇಳಿ ಅವರನ್ನು 'ರೆಕಾರ್ಡ್' ಕತೆಗಳಿಂದ ಹಾಳತವಾದ ಕಾವ್ಯಲೋಕಕ್ಕೆ ಕರೆದೊಯ್ಯುತ್ತಿದ್ದರು. ಬೇಕಾದರೆ ಅದನ್ನು ರಾಜಕಾರಣದ ಜಾಣಪಟ್ಟು ಎಂತಲೇ ಕರೆಯಬಹುದು.

ದಿನಾಂಕ ೨೫.೦೭.೨೦೧೭ ರಂದು ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಅವರ ನನ್ನ ಕೊನೆಯ ಭೆಟ್ಟಿ. ಅಂದು ನಮ್ಮೂರ ಶ್ರೀಮಠದ ಡಾ‌. ರುದ್ರಮುನಿ ಶಿವಾಚಾರ್ಯರು ಧರ್ಮಸಿಂಗ್ ಅವರ ಆರೋಗ್ಯ ಕುಶಲೋಪರಿ ವಿಚಾರಿಸಲೆಂದು ಬಂದಿದ್ದರು. ಅವತ್ತು ಎಂ. ಎಲ್. ಸಿ. ವಿಜಯಸಿಂಗ್ (ಅವರ ಹಿರಿಯ ಮಗ) ಜತೆಗಿದ್ದರು. ಧರ್ಮಸಿಂಗ್ ಅವರೂರು ನೆಲೋಗಿಯ ಹಣಮಂದೇವರ ಪರಮಭಕ್ತರು. ಆ ಕುರಿತು ಅದೇನೋ ಹೇಳುತ್ತಿರುವಾಗ ಅವರ ಊರಿಗೆ ಸನಿಹದ ನ್ಯಾವನೂರಿನ ಹಿರಿಯ ನಾಗರಿಕರೊಬ್ಬರು ಧರ್ಮಸಿಂಗ್ ಅವರ ಭೆಟ್ಟಿಗೆ ಬಂದಿದ್ದರು. ನನಗೆ ನೆನಪಿರುವಂತೆ ಅವರ ಹೆಸರು ಇಮಾಮಸಾಬ. ಧರ್ಮಸಿಂಗ್ ಅವರು ಆತನ ಹೆಸರು ಹಿಡಿದೇ ಕರೆದು ನಿನ್ನ ವಯಸ್ಸೆಷ್ಟು.? ಅಂತ ಕೇಳಿದರು. ಆತ ಎಪ್ಪತ್ತೈದು ಎಂದರು. ಅರೆ ನನಗಿಂತ ಆರ್ವರ್ಷ ಸಣ್ಣಾಂವಿದ್ದೀದಿ. ಕೈಯ್ಯಾಗ ಕೋಲ ಬಂದಾದ ಎಷ್ಟ ಮುದುಕಾಗಿದಿಯಲ್ಲ.

ಹಾಗೆ ಪ್ರತಿಕ್ರಿಯಿಸಿದ ಧರ್ಮಸಿಂಗ್ ಆತನ ಊರಿನ ಹತ್ತಾರು ಮಂದಿ ಹಿರೀಕರ ಹೆಸರು ಉಲ್ಲೇಖಿಸಿ ಉಭಯ ಕುಶಲೋಪರಿ ವಿಚಾರಿಸಿದರು. ಅವರದು ಅಗಾಧವಾದ ನೆನಪಿನ ಶಕ್ತಿ. ಕ್ಷೇತ್ರದ ಸಹಸ್ರಾರು ಜನರ ಹೆಸರುಗಳು, ಫೋನ್ ನಂಬರುಗಳು ಅವರ ದ್ಯಾಸದ ಫ್ಲ್ಯಾಪಿಯಲ್ಲಿ ದಾಖಲಾಗಿದ್ದವು. ಅಂದಹಾಗೆ ಈ ಸಲ ಅವರ ಊರಿನ ಧರ್ಮರಾಯನ ಹೇಳಿಕೆ - ಕಾರ್ಣಿಕ ಏನಾಯ್ತು.? ಹೀಗೆ ವಿವರವಾಗಿ ಅಗ್ದಿ ಆಸಕ್ತಿದಾಯಕ ದಖನಿ ಉರ್ದುವಿನಲ್ಲೇ ಅವರಿಬ್ಬರ ಜವಾರಿ ಮಾತುಕತೆ ಜರುಗಿದ್ದು ಮಾತ್ರ ಹೂಬಾ ಹೂಬಾ ಎನ್ನುವಂತಿತ್ತು. ನಾನು, ಡಾ. ರುದ್ರಮುನಿ ಶಿವಾಚಾರ್ಯರು ಮತ್ತು ವಿಜಯಸಿಂಗ್ ಮೂಕವಿಸ್ಮಿತರಾಗಿ ಅವರ ಮಾತುಕತೆಗಳನ್ನು ಕೇಳುತ್ತಾ ಕುಳಿತೆವು. ಅದಾದ ಎರಡೇ ದಿನಕ್ಕೆ (27.07.2017) ಧರ್ಮಸಿಂಗ್ ಅವರು ಇಹಲೋಕ ಯಾತ್ರೆ ಮುಗಿಸಿದರು. ಕಳೆದ ವರ್ಷ ಅವರ ಆರನೇ ವರ್ಷದ ಪುಣ್ಯಸ್ಮರಣೆ (27.07.2023) ನೆಲೋಗಿಯಲ್ಲಿ ಜರುಗಿತು. ಜಾತಿ, ಮತ, ಧರ್ಮಾತೀತ ಜನನಾಯಕನ ಅಪಾರ ಸಂಖ್ಯೆಯ ಅಭಿಮಾನಿಗಳು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

ಒಂದೆರಡು ಮರೆತ ನೆನಪುಗಳು

ಕಲಬುರ್ಗಿ ಶಹರದ ಶಹಾಬಜಾರದಲ್ಲಿ ಅವರ ವಕೀಲಗಿರಿಯ ಪುಟ್ಟದೊಂದು ಮಳಿಗೆಯಂತಹ ಕಚೇರಿಯಿತ್ತು. ಅದಕ್ಕೆ ಕಟ್ಟಿಗೆ ಫಡಕಾಗಳ ಫೋಲ್ಡಿಂಗ್ ಬಾಗಿಲಿತ್ತು. ಪ್ರೊ. ಎಂ. ಎಚ್. ಹಂಚಿನಾಳ ಸರ್ ಜತೆ ಒಮ್ಮೆ ಅವರ ಕಚೇರಿಗೆ ಭೆಟ್ಟಿಕೊಟ್ಟ ಗಟ್ಟಿನೆನಪು ನನ್ನದು. ಅವರು ಎಡಗೈಯಿಂದ ಸುಲಲಿತವಾಗಿ ಬರೆಯುತ್ತಿದ್ದರೆ ಅವರು ಲಿಟ್ರಲೀ ರೀಯಲ್ ಲೆಫ್ಟಿಸ್ಟ್ ಅನಿಸುತ್ತಿತ್ತು. ಅಷ್ಟಕ್ಕೂ ಅವರ ಬದುಕಿನ ರಾಜಕೀಯದ ಆರಂಭಿಕ ಕ್ಷಣಗಳು ಶುರುವಾಗಿದ್ದೇ ಎಡಪಂಥೀಯ ಐಡಿಯಾಲಜಿಯಿಂದ. ಅದನ್ನು ಪ್ರೊ. ಹಂಚಿನಾಳ ಅನೇಕ ಬಾರಿ ಮರೆಯದಂತೆ ನನಗೆ ಹೇಳುತ್ತಿದ್ದರು.

ಧರ್ಮಸಿಂಗ್ ಅಕ್ಷರಶಃ ಅಜಾತಶತ್ರು ಎಂಬ ಪದಕ್ಕೆ ಹೇಳಿ ಮಾಡಿಸಿದವರು. ಬೈಯ್ದವರೆನ್ನ ಬಂಧುಗಳೆಂಬೆ ಎಂಬ ಬಸವಣ್ಣನ ವಚನದ ಮಾತುಗಳನ್ನು ಇಂಚಿಂಚು ಬಾಳಿದವರು. ಅದು ಅವರ ಹುಟ್ಟೂರು ನೆಲ್ಲಿಗೆಯಿಂದ ದೂರದ ದಿಲ್ಲಿಯವರೆಗೂ ಲಾಗೂ ಆಗುವಂತಹ ಸಾಮಾಜಿಕ ‌ನಡವಳಿಕೆಯೇ ಆಗಿರುತ್ತಿತ್ತು. ಇಂದಿರಾ ಗಾಂಧಿ ಕ್ಯಾಬಿನೆಟ್ಟಿನಲ್ಲಿದ್ದ ಕೇರಳದ ಶ್ರೀ ಸಿ. ಎಂ. ಸ್ಟೀಫನ್ ಸೋತು ಮನೆ ಸೇರಿದ್ದರು. ಇಂದಿರಾಜಿ ಆಣತಿಯಂತೆ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಲಬುರ್ಗಿಯಿಂದ ಕೇರಳದ ಸ್ಟೀಫನ್ ಅವರ ಗೆಲ್ಲಿಸಿಕೊಟ್ಟ ಕೀರ್ತಿ ಧರ್ಮಸಿಂಗ್ ಅವರ ಸಹೃದಯ ಗುಣ. ಚುನಾವಣೆ ಸಂದರ್ಭದಲ್ಲಿ ಸ್ಟೀಫನ್ ಅವರನ್ನು ತಿಪ್ಪಣ್ಣ ಎಂದು ಗ್ರಾಮೀಣ ಜನರಿಗೆ ಚುನಾವಣಾ ಪ್ರಚಾರಕರು ಯಾಮಾರಿಸಿದಂತೆ ಪರಿಚಯಿಸುತ್ತಿದ್ದರು. ಅದೇನೇ ಇರಲಿ ಅನೇಕ ರಾಜಕೀಯ ಇತಿಹಾಸದ ಪಕ್ಷನಿಷ್ಠೆಗೆ ಧರ್ಮಸಿಂಗ್ ದಿಟದ ನಿದರ್ಶನ.

ಜೇವರ್ಗಿಯಲ್ಲಿ ಐವತ್ತೊ ಅರವತ್ತೋ ಹೀಗೆ ಕೇವಲ ಎರಡಂಕಿ ಮತಗಳ ಅಂತರದಲ್ಲಿ ಸೋತರು. ಆದರೆ ಧೃತಿಗೆಡಲಿಲ್ಲ. ನಂತರದ ಬೀದರ ಲೋಕಸಭೆಯಿಂದ ಒಮ್ಮೆ ಗೆದ್ದು ಅವರ ಬದುಕಿನ ಕಡೆಯಲ್ಲಿ (೨೦೧೪) ಅದೇ ಬೀದರ ಲೋಕಸಭಾ ಚುನಾವಣೆಯಲ್ಲಿ ಸೋತ ಕಹಿನೆನಪು. ಅದೇ ವರ್ಷದ ಕಡೆಯಲ್ಲಿ ಕಡಕೋಳದ ಜಾತ್ರೆಗೆ ಬಂದಿದ್ದರು. ಆಗ ನನ್ನ ಪುಸ್ತಕ ಬಿಡುಗಡೆ ಮಾಡಿದರು. ಅದೇಕೋ ಫೋಟೋಗ್ರಾಫರನಿಗೆ ಹೇಳಿ ನನ್ನ ಹೆಗಲ ಮೇಲೆ ಕೈ ಹಾಕಿ ಒಂದೆರಡು ಹೆಚ್ಚಿನ ಫೋಟೋ ತೆಗೆಸಿದರು. ಅವತ್ತು ತುಂಬಾ ಸೊಗಸಾಗಿ ಮಾತಾಡಿದ್ದರು. 'ಕಡಕೋಳ ಮಡಿವಾಳಪ್ಪನ ತತ್ವಪದಗಳು' ಎಂಬ ಆ ಪುಸ್ತಕ ಕುರಿತು ಅಂದು ಡಾ. ರಹಮತ್ ತರಿಕೆರೆ ಬಹಳೇ ಚೆಂದ ಮಾತಾಡಿದರು. ತಮ್ಮ ಮೆಚ್ಚುಗೆಯ ಶಹಬ್ಬಾಶ್ ಗಿರಿಯ ಮಾತುಗಳನ್ನು ಧರ್ಮಸಿಂಗ್, ರಹಮತ್ ತರಿಕೆರೆಗೆ ಸೊಗಸಾದ ಉರ್ದುವಿನಲ್ಲಿ ಹಂಚಿಕೊಂಡರು.

- ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...

ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

28-09-2024 ಬೆಂಗಳೂರು

"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...

ಕನ್ನಡ ವಿಮರ್ಶೆ -1

23-09-2024 ಬೆಂಗಳೂರು

"ಪಾಶ್ಚಾತ್ಯ ಸಾಹಿತ್ಯ ಮತ್ತು ವಿಮರ್ಶೆ, ಸಂಸ್ಕೃತ ಸಾಹಿತ್ಯ ಮತ್ತು ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಹೊಸ...