ದೇಶದ ವಿದ್ಯಮಾನಗಳೆಲ್ಲಾ ಈ ಪೇಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ; ಜಿ. ಪಿ. ಬಸವರಾಜು


`ಡಂಕಲ್‌ಪೇಟೆ- ಒಂದು ಕಲ್ಪನಾವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ ಮಳೆ ದೂಳು ಕೆಸರು ಉಸಿರು ಬೆವರು ಜನ ಭಾಷೆ ಸಂಸ್ಕೃತಿ ನಂಬಿಕೆ ನಿತ್ಯದ ಗೋಳು ನಗುವಿನ ಅಬ್ಬರ- ಎಲ್ಲವನ್ನೂ ಕಟ್ಟಿಕೊಂಡಿರುವ ನಿಜಪೇಟೆ' ಎನ್ನುತ್ತಾರೆ ಜಿ. ಪಿ. ಬಸವರಾಜು. ಅವರು ವೀರೇಂದ್ರ ರಾವಿಹಾಳ್ ಅವರ ‘ಡಂಕಲ್‌ಪೇಟೆ’ ಕಥೆಗಳು ಕುರಿತು ಬರೆದ ಪ್ರಸ್ತಾವನೆ ನಿಮ್ಮ ಓದಿಗಾಗಿ….

ಡಂಕಲ್‌ಪೇಟೆ- ಒಂದು ಕಲ್ಪನಾವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ ಮಳೆ ದೂಳು ಕೆಸರು ಉಸಿರು ಬೆವರು ಜನ ಭಾಷೆ ಸಂಸ್ಕೃತಿ ನಂಬಿಕೆ ನಿತ್ಯದ ಗೋಳು ನಗುವಿನ ಅಬ್ಬರ- ಎಲ್ಲವನ್ನೂ ಕಟ್ಟಿಕೊಂಡಿರುವ ನಿಜಪೇಟೆ. ದೇಶದ ವಿದ್ಯಮಾನಗಳೆಲ್ಲಾ ಈ ಪೆಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ. ಜನರ ಸಿಟ್ಟು ಸೆಡವುಗಳು ಇಲ್ಲಿ ಸಿಡಿಯುತ್ತವೆ. ಕಾಲಾಂತರದ ಇತಿಹಾಸ, ವರ್ತಮಾನದ ಅವಾಂತರಗಳು, ಏಳು-ಬೀಳುಗಳ ನಡುವೆ ಈ ಬದುಕಿನ ಬಂಡಿಯನ್ನು ಎಳೆಯುತ್ತಾ ಸಾಗಿದ ಮಂದಿ. ಹೀಗಾಗಿಯೇ ಇಲ್ಲಿ ಮಸೀದಿ- ಮಂದಿರಗಳ ಬಡಿದಾಟವಿದೆ; ಕೊರೋನಾದ ಭೀಕರ ನೆರಳಿದೆ; ನೋಟು ಅಮಾನೀಕರಣದ ಬೆಂಕಿ ಸಾಮಾನ್ಯ ಜನತೆಯ ಬದುಕನ್ನು ಸುಟ್ಟು ಕರಕು ಮಾಡಿದ ಕಟು ಸತ್ಯವೂ ಇದೆ. ಡಂಕಲ್‌ಪೇಟೆಯ ರೊಕ್ಕದ ವಹಿವಾಟೂ ಇದೆ. ಹಾಗೆಯೇ ಅಳದಲ್ಲಿ ಮನುಷ್ಯ ಮನುಷ್ಯನನ್ನು ನಂಬಿಕೆಯಿಂದ, ಪ್ರೀತಿಯಿಂದ ನೋಡುವ ಹೃದಯವಂತಿಕೆಯೂ ಇದೆ.

ಇಂಥಾ ನೆಲೆಗಟ್ಟಿನಲ್ಲಿ ನಿಂತು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾ, ಮಿಡಿಯುತ್ತ, ತಮ್ಮ ಲೇಖನಿಯನ್ನು ಚುರುಕಾಗಿ, ಕ್ರಿಯಾತ್ಮಕವಾಗಿ ಇಟ್ಟುಕೊಂಡಿರುವ ತರುಣ ಮಿತ್ರ ವೀರೇಂದ್ರ ರಾವಿಹಾಳ್ ಸಹಜ ಕಥೆಗಾರ, ಅನುಭವ ಸಮೃದ್ಧಿ, ಸ್ಥಳೀಯ ಭಾಷೆಯ ಕಸುವು, ಕಥನ ತಂತ್ರ, ನಿರೂಪಣೆಯ ಸೊಗಸು- ಇವುಗಳಿಂದಾಗಿ ವೀರೇಂದ್ರರ ಕತೆಗಳು ಗಮನ ಸೆಳೆಯುತ್ತವೆ. 'ಕಾಡಿ' ಎನ್ನುವ ಕತೆಯ ಸಾಮಾನ್ಯ ನಾಯಿಯೊಂದು ಬೆಳೆಯುತ್ತ ಬೆಳೆಯುತ್ತ ಇಡೀ ವಿದ್ಯಮಾನಗಳನ್ನು ಅವರಿಸುವುದು, ಬದುಕಿನ ಸಂಕೀರ್ಣ ಸಂಗತಿಗಳನ್ನು ಕಟ್ಟಿಕೊಡುತ್ತಾ ಹೋಗುವುದು; ತಿಳಿಹಾಸ್ಯವನ್ನು ಹೊದ್ದುಕೊಂಡೇ ಬದುಕಿನ ಗಂಭೀರ ಸಮಸ್ಯೆಗಳಿಗೆ ಎದುರಾಗಿ ನಿಲ್ಲುವುದು- ವೀರೇಂದ್ರರ ಕಥನ ಪ್ರತಿಭೆಗೆ ಕನ್ನಡಿ ಹಿಡಿಯುತ್ತವೆ.

ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ, ಸುಡುಸುಡು ವರ್ತಮಾನವೇ ಅವರ ಪ್ರಧಾನ ಅಖಾಡ, ಭೂತ- ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್‌ಪೆಟೆಯಲ್ಲಿಯೇ. ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.

ಕಾಡಸಿದ್ದೇಶ್ವರ, ಹಳೇಕೋಟೆ ವೀರಭದ್ರ, ಚಾಮುಂಡವ್ವ, ಸುಂಕ್ರಮ್ಮ, ಜಂಡಾಕಟ್ಟೆ ಎಲ್ಲವೂ ಜೀವತಳೆದು ಡಂಕಲ್‌ಪೇಟೆಯ ಜೀವಂತ ಪಾತ್ರಗಳಾಗಿ ಜನರ ಬದುಕನ್ನು ಸಂಕೀರ್ಣವೂ, ಸೂಕ್ಷ್ಮವೂ. ಸಹನೀಯವೂ, ಮಾನವೀಯವೂ ಮಾಡುತ್ತಾ ಬೆಳೆಯುವ ಪರಿ ವೀರೇಂದ್ರರ ಕತೆಗಳಿಗೆ ವಿಭಿನ್ನ ಆಯಾಮಗಳನ್ನು ಕೂಡಿಸುತ್ತವೆ.

ತನ್ನ ನೆಲದಲ್ಲಿ ನಿಂತು ಬರೆಯುವ ಕತೆಗಾರ ಎಂದೂ ಹುಸಿಯಾಗಲಾರ. ಈ ಸಂಕಲನದಲ್ಲಿರುವ ಎಲ್ಲ ಕತೆಗಳೂ ಕೊರತೆಯನ್ನು ಮೀರಿದ ಕತೆಗಳೆಂದು ನಾನು ಹೇಳುತ್ತಿಲ್ಲ. ಒಂದೆರಡು ಕತೆಗಳನ್ನು ಮತ್ತೆ ಬರೆಯಬೇಕಾದ, ತಿದ್ದಿ ತೀಡಬೇಕಾದ ಅಗತ್ಯವೂ ಇದೆ. ವಿಮರ್ಶೆಯ ಹತಾರವನ್ನು ಹಿಡಿದು ಹೊರಟವರಿಗೆ ಕತೆಗಾರನ ಹೆಜ್ಜೆಗಳಲ್ಲಿ ಇನ್ನೂ ಕೆಲವು ಕೊರತೆಗಳು ಕಾಣಬಹುದು. ಅದು ಸಹಜ ಕೂಡ. ಆದರೆ ವಿರೇಂದ್ರ ಅವರು ಪಯಣವನ್ನು ಇದೀಗ ಆರಂಭಿಸಿರುವ ಉತ್ಸಾಹಿ. ಅವರು ಇಂಥ ಎಲ್ಲ ತೊಡಕುಗಳನ್ನು ದಾಟುತ್ತಾರೆ ಎಂಬ ವಿಶ್ವಾಸ ನನ್ನದು. ಇಲ್ಲಿನ ಕೆಲವು ಕತೆಗಳಾದರೂ ನನ್ನ ಮಾತಿಗೆ ಸಾಕ್ಷಿ ಹೇಳುತ್ತವೆ.

-ಜಿ. ಪಿ. ಬಸವರಾಜು

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...