Date: 22-02-2021
Location: .
‘ಪಕ್ಷಪಾತ’, ‘ನಾಯಕಪೂಜೆ’ ನಮ್ಮ ಕಾಲದ ಅನೇಕ ಬುದ್ಧಿಜೀವಿಗಳ ಜೀವನಧರ್ಮವಾಗಿಬಿಟ್ಟಿದೆ ಎನ್ನುವ ಹಿರಿಯ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು, ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆಯ ಮುಖವಾಡಗಳು ಹಾಗೂ ಸಾರ್ವಜನಿಕರ ಹೊಣೆಗಾರಿಕೆಯ ಎಚ್ಚರ ಕುರಿತು ತಮ್ಮ ‘ಆವುಗೆಯ ಕಿಚ್ಚು’ ಅಂಕಣದಲ್ಲಿ ಚರ್ಚಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಮೌನವು ಅಪರಾಧವಾಗುತ್ತದೆ. ಸುಮ್ಮನಿರುವುದರ ಪರವಾಗಿ ನಾವು ಕೊಟ್ಟುಕೊಳ್ಳುವ ಕಾರಣಗಳು ನೆಪಗಳಾಗಿ ಬಿಡುತ್ತವೆ. ಸಮಕಾಲೀನವಾದ ಒತ್ತಡ ಮತ್ತು ಒಲುವೆಗಳನ್ನು ಮೀರಿಯೂ ನಮ್ಮ ಕಾಲಕ್ಕೆ ಸರಿಯಾದುದನ್ನು ನಾವೇ ಹುಡುಕಿ ಕಂಡುಕೊಳ್ಳುವ ಸವಾಲನ್ನು ಎದುರಿಸಲೇ ಬೇಕಾಗುತ್ತದೆ. ಹಾಗೆ ಕಂಡಿದ್ದನ್ನು ಗಟ್ಟಿ ದನಿಯಲ್ಲಿ ಹೇಳಬೇಕಾಗುತ್ತದೆ. ಇದು ಅಪರಾಧಿಗಳನ್ನು ಹುಡುಕಿ ಶಿಕ್ಷೆ ಕೊಡುವ ಪ್ರಶ್ನೆಯಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಹಿಂಜರಿಯುತ್ತ ಕೂಡುವುದು ಸರಿಯಲ್ಲ. ಸತ್ಯವೆಂದು ಮಂಡಿಸಲಾಗುತ್ತಿರುವ ಸುಳ್ಳುಗಳನ್ನು ಬಯಲಿಗೆ ತರುವುದು ಅನಿವಾರ್ಯವಾದಾಗ, ಆ ಕೆಲಸ ಮಾಡುವವರಿಗೆ ಉರಿಯ ನಾಲಿಗೆಯೂ ಇರಬೇಕು. ಇವರ ಮಾತನ್ನು ನಂಬಬಹುದು ಎಂಬ ‘ವಿಶ್ವಸನೀಯತೆ’ಯೂ ಇರಬೇಕು.
ದೇಶಭಕ್ತಿಯನ್ನು. ಮೊದಲಿನಿಂದಲೂ ನಮ್ಮ ನಡುವೆ ಇದ್ದ, ಈಗಲೂ ಇರುವ ದೈವಭಕ್ತಿ ಮತ್ತು ರಾಜಭಕ್ತಿಗಳ ಮುಂದುವರಿಕೆಯಾಗಿ ಕಾಣುವ ಪ್ರಕ್ರಿಯೆಯಲ್ಲೇ ನಮ್ಮ ಸಮಸ್ಯೆಯಿದೆ. ನಮಗಿಂತ ಭಿನ್ನವಾದ ‘ಅನ್ಯ’ವನ್ನು ಗುರುತಿಸಿ, ಅದರೊಂದಿಗೆ ಸಂಘರ್ಷದ ಸಂಬಂಧಗಳನ್ನು ಕಟ್ಟಿಕೊಳ್ಳುವುದು ಸಹಜವೆಂದು ತಿಳಿಯುವ ವ್ಯವಸ್ಥೆಯಲ್ಲಿ ಹಿಂಸೆ ಮತ್ತು ದ್ವೇಷಗಳನ್ನು ಪರಾಕ್ರಮವೆಂದು ತಪ್ಪು ತಿಳಿಯುತ್ತೇವೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳ ಯೂರೋಪಿನಲ್ಲಿ ಪ್ರಬಲವಾದ ‘ನೇಶನ್’ ಎಂಬ ಪರಿಕಲ್ಪನೆಯು, ತನ್ನ ಸಕಲ ಪರಿವೇಷಗಳೊಂದಿಗೆ ಇಡೀ ಜಗತ್ತನ್ನು ವ್ಯಾಪಿಸಿತು. ಇದರ ಸಂಗಡವೇ ಇಂತಹ ರಾಷ್ಟ್ರಗಳ ಗಡಿಗೆರೆಗಳನ್ನು ಮೀರಿ, ಆರ್ಥಿಕ ಚಕ್ರಾಧಿಪತ್ಯವನ್ನು ಸ್ಥಾಪಿಸಿ, ಖಂಡಾಂತರಗಳನ್ನೇ ಸೂರೆಹೊಡೆಯಲು ಬಯಸಿದ ವಸಾಹತುಶಾಹಿಯೂ ಪ್ರಬಲವಾಯಿತು. ಇವೆರಡೂ ಪ್ರಕ್ರಿಯೆಗಳೂ ಇಂದಿಗೂ ಜಾರಿಯಲ್ಲಿವೆ. ರಾಷ್ಟ್ರಗಳ ಮುಖವಾಡವನ್ನು ಕಳಚಿ, ವಿಶ್ವವ್ಯಾಪಿಯಾಗಲು ಬಯಸುವ ಕಾರ್ಪೊರೇಟ್ ಹಿತಾಸಕ್ತಿಗಳು ದೇಶಭಕ್ತಿಯ ಬೆಂಕಿಗೆ ತುಪ್ಪ ಸುರಿದು ಆಯುಧಗಳು ಮತ್ತು ಇತರ ಸಂಪನ್ಮೂಲಗಳ ಮಾರಾಟದಲ್ಲಿ ತೊಡಗಿಕೊಂಡಿವೆ. ಮೊದಲಿನಿಂದಲೂ ಆಗುತ್ತಿರುವಂತೆ ಈಗಲೂ ಧರ್ಮ ಮತ್ತು ರಾಜಶಕ್ತಿಗಳು ಒಂದನ್ನೊಂದು ಬಲಪಡಿಸುತ್ತಾ ತಮ್ಮೊಂದಿಗೆ ವ್ಯಾಪಾರದ ‘ಆರ್ಥಿಕ ಶಕ್ತಿ’ಯನ್ನೂ ಸೇರಿಸಿಕೊಂಡು ಇನ್ನಷ್ಟು ಪ್ರಬಲವಾಗಿವೆ. ಇದು ನಮ್ಮ ದೇಶದಲ್ಲಿರುವ ವರ್ಣವ್ಯವಸ್ಥೆಯ ಇನ್ನೊಂದು ಅವತಾರ. ‘ಧರ್ಮ’, ‘ಅಧಿಕಾರ’ ಮತ್ತು ‘ದುಡ್ಡು’ಗಳ ತ್ರಿಕೂಟದಲ್ಲಿ ಯಾವ ಯಾವ ಜಾತಿಯವರು ಎಲ್ಲೆಲ್ಲಿ ಇದ್ದಾರೆ, ಎನ್ನುವುದು ಗೌಣ. ಮುಖವಾಡಗಳು ಬೇರೆಯಾದರೂ ಮುಖಗಳು ಮಾತ್ರ ಅದೇ. ಅಂದಿನಂತೆ ಇಂದು ಕೂಡಾ ಆಸ್ತಿಯಿಲ್ಲದವರು, ದುಡಿಯುವವರು, ಅಂಚಿಗೆ ತಳ್ಳಲ್ಪಟ್ಟವರು ಕಹಿಯನ್ನು ಉಣ್ಣುತ್ತಲೇ ಇದ್ದಾರೆ. ಸದಾ ಶ್ರೀಮಂತಿಕೆಯ ಬಿಸಿಲುಗುದುರೆಯ ಬೆನ್ನುಹತ್ತುವ ಸುಶಿಕ್ಷಿತ ಮಧ್ಯಮವರ್ಗದವರು, ಯಾವ ನೀರಾದರೂ ಸರಿ, ಯಾವ ಬೆಂಕಿಯಾದರೂ ಸರಿ, ನಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದೇವೆ. ಕವಿ ಸಿದ್ದಲಿಂಗಯ್ಯನವರು ‘ಅಲ್ಲೇ ಕುಂತವ್ರೆ.’ ಎಂದು ಹೇಳಿದ್ದು ನಿಜ. ದುರಂತವೆಂದರೆ, ಅನೇಕ ಬುದ್ಧಿಜೀವಿಗಳು, ಕವಿಗಳು, ಕಲಾವಿದರು ಕೂಡಾ ‘ಅಲ್ಲೇ ಕುಂತವ್ರೆ.’
ಈ ಎಲ್ಲ ಆಗುಹೋಗುಗಳು ಕೇವಲ ನೆನ್ನೆ ಮೊನ್ನೆಯವಲ್ಲ. ಎಪ್ಪತ್ತು ವರ್ಷಗಳಿಂದ ಹಲ್ಲು ಉಗುರುಗಳನ್ನು ಮರೆಮಾಡಿಕೊಂಡು ಕೊಲ್ಲುತ್ತಿದ್ದ ದುಷ್ಟ ಶಕ್ತಿಗಳು ಈಗ ಮುಖವಾಡಗಳ ಅವಶ್ಯಕತೆಯಿಲ್ಲದೆ ಬತ್ತಲಾಗಿವೆ. ಪ್ರಜಾಪ್ರಭುತ್ವವೆಂಬ ನಿರಂತರ ನಾಟಕದ ಅಂಕಗಳಾದ ಚುನಾವಣೆಯಲ್ಲಿ ಗೆದ್ದವರು, ಗೆಲ್ಲಿಸಿದವರು, ಹೀಗೆ ಗೆಲ್ಲಿಸಲು ಇದ್ದ ಕಾರಣಗಳು ಮುಂತಾದವನ್ನು ಗಮನವಿಟ್ಟು ನೋಡಿದಾಗ ‘ರಾಜಕೀಯ ಶಿಕ್ಷಣ’ ಮತ್ತು ‘ಜನಪರ ನಾಯಕತ್ವ’ದ ಅಭಾವವು ಕಣ್ಣಿಗೆ ರಾಚುತ್ತದೆ. ಆದ್ದರಿಂದ ಇಂದಿನ ದುರಂತದ ಬೇರುಗಳು ಗತಕಾಲದ ನೆಲದಲ್ಲಿಯೂ ಅಡಗಿವೆ.
ಆದ್ದರಿಂದ ಇಂದು, ಇಲ್ಲಿ ‘ದೇಶಭಕ್ತಿ’ ಎಂಬ ಪದಕ್ಕೆ ಇರುವುದು ಒಂದೇ ಒಂದು ಬಣ್ಣ. ಆಳುವ ಪಕ್ಷದ ಯಾವುದೇ ನಿಲುವನ್ನು ಕ್ರಿಯಾಶೀಲವಾಗಿ ಸಮರ್ಥಿಸುವವರೆಲ್ಲರೂ ದೇಶಭಕ್ತರು. ಅದನ್ನು ಯಾವುದೇ ರೀತಿಯಲ್ಲಿ ಖಂಡಿಸುವವರು, ದೇಶದ್ರೋಹಿಗಳು. ಆಡಳಿತ ಪಕ್ಷವು ಮೊದಲಿನಿಂದಲೂ ಪೋಷಿಸಿಕೊಂಡು ಬಂದಿರುವ ಮತಬ್ಯಾಂಕುಗಳನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವುದೆಂದರೆ, ದ್ವೇಷದ ಫಲವಾದ ‘ಪರಾಕ್ರಮ’ವನ್ನು ಹಲವು ಬಗೆಯಲ್ಲಿ ಉದ್ದೀಪಿಸುವುದು. ತಮ್ಮನ್ನು ವಿರೋಧಿಸುವವರು ಪ್ರಾಮಾಣಿಕರಾದರೆ, ಅವರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲದಿದ್ದರೆ ಅವರಿಂದ ಇನ್ನಷ್ಟು ಅಪಾಯ. ತಮ್ಮ ಆರ್ಥಿಕ ಚಟುವಟಿಕೆಗಳಿಂದ, ನಿಜವಾಗಲೂ ಜನವಿರೋಧಿಯೂ ದೇಶವಿರೋಧಿಯೂ ಆಗಿರುವ ವ್ಯಾಪಾರೀ ಹಿತಾಸಕ್ತಿಗಳ ಕೈಗೆ ದೇಶವನ್ನು ಒಪ್ಪಸಿಬಿಡುವ ಖಾಸಗೀಕರಣವನ್ನು ಯಾರೂ ದೇಶದ್ರೋಹವೆಂದು ಕರೆಯುವುದಿಲ್ಲ. ಜನಸಾಮಾನ್ಯರ ಬಗ್ಗೆ, ದೇಶದ ಬಗ್ಗೆ ಕಾಳಜಿಯಿರುವ ಸರ್ಕಾರಗಳು ಉಳ್ಳವರಿಂದ ಪಡೆಯುವ ತೆರಿಗೆಯ ಹಣದಿಂದ ನಿರ್ವಹಿಸ ಬೇಕಾದ ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳನ್ನು ‘ಗಿಫ್ಟ್ ಪ್ಯಾಕ್’ನಲ್ಲಿ ಕಟ್ಟಿ ಖಾಸಗಿಯವರ ಕೈಯಲ್ಲಿ ಒಪ್ಪಿಸುತ್ತಿರುವ ಸರ್ಕಾರಗಳು, ದೇಶದ್ರೋಹಿಗಳಲ್ಲವೇ? ಜನದ್ರೋಹಿಗಳಲ್ಲವೇ? ಇಡೀ ದೇಶವನ್ನು ವ್ಯಾಪಿಸಿರುವ ‘ಭ್ರಷ್ಟಾಚಾರ’ಗಳು, ಇಲ್ಲವೇ ಇಲ್ಲವೆಂದು ಕಣ್ಣುಮುಚ್ಚಿರುವ ಎಲ್ಲ ಎಲ್ಲ ರಾಜಕಾರಣಿಗಳು ದೇಶದ್ರೋಹಿಗಳಲ್ಲವೇ? ದೇಶ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ, ಅಲ್ಲಲ್ಲ, ರಾಜಾರೋಷವಾಗಿ ಐಷಾರಾಮವಾಗಿ ಬದುಕುತ್ತಿರುವ ವರ್ತಕರು, ರೌಡಿಗಳು ದೇಶದ್ರೋಹಿಗಳು ಲೆಕ್ಕವಿಲ್ಲದಷ್ಟು ಇದ್ದಾರೆ. ಹೀಗಿರುವಾಗ, ತಮಗೆ ಅನ್ನಿಸಿದ್ದನ್ನು ಗಟ್ಟಿದನಿಯಲ್ಲಿ ಹೇಳುತ್ತಿರುವ ತರುಣ-ತರುಣಿಯರು, ಮುದುಕರು ಸೆರೆಮನೆವಾಸ ಅನುಭವಿಸುವುದು ಯಾವ ಬಗೆಯ ದೇಶದ್ರೋಹದಿಂದ? ನಾವು ‘ಅಪರಾಧ’ ಮತ್ತು ‘ಶಿಕ್ಷೆ’ ಎಂಬ ಪದಗಳ ಅರ್ಥವನ್ನೇ ಮತ್ತೊಮ್ಮೆ ಪರಿಶೀಲಿಸ ಬೇಕಾಗಿ ಬಂದಿದೆ. ಆರ್ಥಿಕ ನೆಲೆಯಲ್ಲಿ ಹಲವು ದಶಕಗಳಿಂದ ನಡೆಯುತ್ತಿದ್ದ ಅಪರಾಧಕ್ಕೆ, ಕಳೆದ ಕೆಲವು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ನಡೆಯುವ ‘ಮೂಲಭೂತವಾದಗಳ’ ಆಯಾಮವೂ ಸೇರಿಕೊಂಡಿದೆ.
‘ಸತ್ಯ’ವೆನ್ನುವುದು ‘ಮಾಧ್ಯಮ’ಗಳ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಸರಕಾದಾಗ, ನಮ್ಮೊಳಗಿನ ವಿವೇಕವೇ ನಿಜವಾದ ಗುರುವಾಗುತ್ತದೆ. ‘ನಡೆದ ಘಟನೆ’ ಮತ್ತು ‘ಸೃಷ್ಟಿಸಿದ ಸುಳ್ಳು’ಗಳ ನಡುವಿನ ಅಂತರವೇ ಅಳಿಸಿಹೋದಾಗ ಜನರು ಮಾಹಿತಿವಿಷವನ್ನು ನುಂಗಿ ದ್ವೇಷವಿಷವನ್ನು ಕಕ್ಕುತ್ತಾರೆ. ಇಂಥ ಸನ್ನಿವೇಶದಲ್ಲಿ ‘ವಾಕ್ ಸ್ವಾತಂತ್ರ್ಯ’ ಮತ್ತು ಪ್ರತಿಭಟನೆಯ ಸ್ವಾತಂತ್ರ್ಯಗಳು ಹಿಂದೆಂದಿಗಿಂತ ಮುಖ್ಯವಾಗುತ್ತವೆ. ಇಂಥ ಅಭಿವ್ಯಕ್ತಿಯ ವಿರುದ್ಧ, ನಮ್ಮ ಪೊಲೀಸರು ಮತ್ತು ನಮ್ಮ ಸೈನ್ಯ ಮತ್ತು ನಮ್ಮ ಕೋರ್ಟುಗಳನ್ನು ಬಳಸಿಕೊಳ್ಳುವ ಅವಶ್ಯಕತೆಯು, ಇಷ್ಟೊಂದು ಜರೂರಾಗಿ ಬರುವುದಿಲ್ಲ. ಕಾಲೇಜು ಮುಗಿಸಿದ ಹುಡುಗಿಯರು, ಪರಿಸರದ ಬಗ್ಗೆ ಮಾತಾಡುವವರು, ತಮ್ಮ ತವಕ ತಲ್ಲಣಗಳನ್ನು ಹೇಳಿಕೊಳ್ಳುವವರು ಮತ್ತು ಸರ್ಕಾರದ ಕ್ರಮಗಳನ್ನು ಖಂಡಿಸುವವರು ನಿಜವಾಗಿಯೂ ದೇಶದ ಭದ್ರತೆಗೆ ಅಪಾಯ ತರುವ ಭಯೋತ್ಪಾದಕರಲ್ಲ. ಈ ಗುಬ್ಬಿಗಳ ಮೇಲೆ ಅನುಶಾಸನ, ಸುಗ್ರೀವಾಜ್ಞೆಗಳ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದು ಎಷ್ಟಕ್ಕೂ ತರವಲ್ಲ.
ಆದರೆ ಪ್ರಗತಿಪರವಾದ, ಜನಪರವಾದ ಹೋರಾಟಗಳಲ್ಲಿ ತೊಡಗಿಕೊಂಡಿರುವವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿರುವ ಈ ದಿನಗಳಲ್ಲಿ, ಅಂಥ ಹೋರಾಟಗಾರರು ಕೂಡ ‘ಆತ್ಮಾವಲೋಕನ’ ಮತ್ತು ‘ಆತ್ಮವಿಮರ್ಶೆ’ಗಳನ್ನು ಮಾಡಿಕೊಳ್ಳಬೇಕು. ತಪ್ಪು ಮಾಡುತ್ತಿರುವವರನ್ನು ಟೀಕಿಸುವಾಗಲೂ ತಾವು ಸಮರ್ಥಿಸುತ್ತಿರುವವರು ಮಾಡಿರುವ, ಮಾಡುತ್ತಿರುವ ತಪ್ಪುಗಳನ್ನು ಮರೆಯಬಾರದು. ಬಿ.ಜೆ.ಪಿ, ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ, ಅವುಗಳಲ್ಲಿ ಯಾವುದನ್ನೂ ಸಾರಾಸಗಟಾಗಿ ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಮೂಲಭೂತವಾದ, ಹಿಂದುತ್ವದ ಪ್ರತಿಪಾದನೆ, ಹಲವು ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕುವಿಕೆ ಮುಂತಾದ ಕೆಲವು ಸಂಗತಿಗಳಲ್ಲಿ ನಮ್ಮ ದೇಶವು ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾದ ಅವನತಿಯನ್ನು ಕಂಡಿವೆ. ಆದರೆ, ಆರ್ಥಿಕ ಕ್ಷೇತ್ರಗಳಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ನಾವು ಖಾಸಗೀಕರಣ ಮತ್ತು ಶೋಷಣೆಗಳ ಹಾದಿಯಲ್ಲೇ ನಡೆದಿದ್ದೇವೆ. ಇದಕ್ಕೆ ಅಂತಾರಾಷ್ಟ್ರೀಯ ಒತ್ತಡಗಳ ನೆಪ ಹೇಳಿ ತಪ್ಪಿಸಿಕೊಳ್ಳುವುದು ನ್ಯಾಯವಲ್ಲ., ಇಂತಹ ವಿಷಯಗಳಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ನಡುವೆ ಆರಿಸಿಕೊಳ್ಳುವಂಥದೇನೂ ಇಲ್ಲ.
ನಮ್ಮ ಬುದ್ಧಿಜೀವಿಗಳು, ಮಾಧ್ಯಮಜೀವಿಗಳು ಮತ್ತು ಕಲಾವಿದರಲ್ಲಿ ಬಹಳಷ್ಟು ಜನರು, ಇಂತಹ ಸಂದರ್ಭದಲ್ಲಿ ತಳೆಯುವ ನಿಲುವುಗಳು ಅವರ ವೈಯಕ್ತಿಕವಾದ ಅಜೆಂಡಾಗಳೊಂದಿಗೆ ತಳುಕು ಹಾಕಿಕೊಂಡಿರುವುದು ನಮ್ಮ ಕಾಲದ ದುರಂತ. ನಾವು ‘ಪಬ್ಲಿಕ್ ಇಂಟೆಲೆಕ್ಚುಯಲ್’ ಎಂಬ ಪದವನ್ನು ಬಹಳ ಹಗುರವಾಗಿ ಬಳಸುತ್ತಿದ್ದೇವೆ. ನಿಜ. ಪ್ರತಿಯೊಬ್ಬನಿಗೂ ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತಗಳ ಬಗ್ಗೆ ಒಲವು, ಒಲುಮೆ ಇರುತ್ತದೆ. ಆದರೆ ರಾಜಕೀಯ ಸಿದ್ಧಾಂತಗಳಿಗೂ ರಾಜಕೀಯ ಪಕ್ಷಗಳ ನಡಾವಳಿಗೂ ಮತ್ತು ನಿರ್ದಿಷ್ಟ ರಾಜಕಾರಣಿಗಳ ನಡತೆಗೂ ಅಂತರವಿದೆ. ‘ಸಾರ್ವಜನಿಕ ಬುದ್ಧಿಜೀವಿ’ಗಳು ಈ ಮೂರರ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ಅವೆಲ್ಲದರಿಂದಲೂ ದೂರ ಇರಬೇಕಾಗುತ್ತದೆ. ಅವನಿಗೆ ತನ್ನ ರಾಜಕೀಯ ಒಲವುಗಳನ್ನು ಕೂಡ ವಿಮರ್ಶೆ ಮಾಡಿಕೊಳ್ಳುವ ಹೊಣೆ, ಸಮಕಾಲೀನ ಗೊಳಿಸಿಕೊಳ್ಳುವ ಹೊಣೆ ಇರುತ್ತದೆ. ಅಷ್ಟೇ ಮುಖ್ಯವಾಗಿ, ತಾನು ಪ್ರತಿನಿಧಿಸುವ ವಲಯದ ಹಿತಾಸಕ್ತಿಗಳನ್ನು ಮಾತ್ರ ನೋಡದೆ, ಒಟ್ಟು ಸಮಾಜದ ಬಗ್ಗೆ ಯೋಚಿಸುವ ಜವಾಬ್ದಾರಿ ಅವನಿಗೆ/ಅವಳಿಗೆ ಇರುತ್ತದೆ. ರೈತ, ಕಾರ್ಮಿಕ, ಸರ್ಕಾರೀ ನೌಕರ, ಹೆಣ್ಣು, ಹಿಂದೂ, ಅಧ್ಯಾಪಕ, ಸಾಹಿತಿ ಮುಂತಾದ ಬ್ರಾಂಡುಗಳ ಹಣೆಪಟ್ಟಿಯನ್ನು ಅಂಟಿಸಿಕೊಂಡು ಕೇವಲ ಅವುಗಳ ಪರವಾಗಿ ಮಾತನಾಡುವ ಅಥವಾ ಆ ನಿಟ್ಟಿನಿಂದಷ್ಟೇ ಯೋಚಿಸುವ ಬುದ್ಧಿಜೀವಿಗಳು ಸಮುದಾಯಗಳಿಗೆ ಮಾರ್ಗದರ್ಶನ ಮಾಡಲು ಅಥವಾ ಅವರ ನಂಬಿಕೆಯನ್ನು ಗಳಿಸಲು ಅರ್ಹರಾಗುವುದಿಲ್ಲ. ಡಿ.ವಿ.ಜಿ., ಕುವೆಂಪು, ಲಂಕೇಶ್, ಅನಂತಮೂರ್ತಿ, ನಂಜುಂಡಸ್ವಾಮಿ, ದೇವನೂರ ಮಹಾದೇವ, ನಾಗೇಶ ಹೆಗಡೆ, ಬರಗೂರು ರಾಮಚಂದ್ರಪ್ಪ ಮುಂತಾದವರ ಸಾರ್ವನಿಕ ವ್ಯಕ್ತಿತ್ವಗಳ ನಡುವೆ ಇರುವ ವ್ಯತ್ಯಾಸವನ್ನು ಎಚ್ಚರಿಕೆಯಿಂದ ಗಮನಿಸಿದಾಗ ನನ್ನ ಮಾತು ಅರ್ಥವಾಗುತ್ತದೆ. ತನ್ನ ಜೊತೆಗಿದ್ದವರನ್ನೂ ಟೀಕಿಸಿ, ಸರಿದಾರಿಗೆ ತರಲು ಪ್ರಯತ್ನಿಸಿದ ರವೀಂದ್ರನಾಥ ಟ್ಯಾಗೋರ್, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ವರ್ತನೆಯೂ ಗಮನೀಯವಾದುದು. ಇವರೆಲ್ಲರೂ ನೆಹರೂ ಜೊತೆಯಲ್ಲಿ ಹೊಂದಿದ್ದ ಭಿನ್ನಾಭಿಪ್ರಾಯಗಳು ಪರಸ್ಪರ ರಾಡಿಯ ಅಭಿಷೇಕ ಮಾಡುವ ಬೀದಿಜಗಳದ ಹಂತಕ್ಕೆ ಇಳಿಯಲಿಲ್ಲ. ಹಾಗೆಂದು ಒಬ್ಬರೊಡನೊಬ್ಬರು ರಾಜೀ ಕಬೂಲಿ ಮಾಡಿಕೊಂಡು ಫಲಾನುಭವಿಗಳಾಗಲೂ ಇಲ್ಲ. ನಿಜವಾದ ಬುದ್ಧಿಜೀವಿಯು ಒಟ್ಟು ಜೀವನದ ಬಗ್ಗೆ, ಭೂತ-ಭವಿಷ್ಯತ್-ವರ್ತಮಾನಗಳ ಬಗ್ಗೆ, ‘ಸಕಲ ಜೀವಾತ್ಮ’ರ ಬಗ್ಗೆ ಏಕಕಾಲದಲ್ಲಿ ಯೋಚಿಸಬೇಕಾಗುತ್ತದೆ. ಇದು ಕುವೆಂಪು ಮತ್ತೆ ಮತ್ತೆ ಹೇಳುತ್ತಿದ್ದ ‘ಪೂರ್ಣದೃಷ್ಟಿ’. ಮೂರ್ತವನ್ನು ಅಮೂರ್ತಗಳ ಹಿನ್ನೆಲೆಯಲ್ಲಿ ಅಮೂರ್ತವಾದುದನ್ನು ಕಣ್ಣೆದುರಿಗಿನ ಮೂರ್ತ ಸತ್ಯಗಳ ಚೌಕಟ್ಟಿನಲ್ಲಿ ಇಟ್ಟು ನೋಡುವುದು ಅವನಿಗೆ ಸಾಧ್ಯವಾಗಬೇಕು. ತನ್ನವರನ್ನು ಮೆಚ್ಚಿಸುವುದಕ್ಕಿಂತ ‘ಅನ್ಯ’ರನ್ನು ಒಪ್ಪಿಸುವ ಒಲಿಸುವ ಸಾಧ್ಯತೆಯ ಬಗ್ಗೆ ಅವನು ಯೋಚಿಸಬೇಕು. ಅದು ಸಾಧ್ಯವಾಗಲು ಅವನಿಗೆ ಶತ್ರುಗಳ ಬಗ್ಗೆಯೂ ಪ್ರೀತಿ ಇರಬೇಕು. ಇದು ಹೇಳಿದಷ್ಟು ಸುಲಭವಲ್ಲ. ‘ಪಕ್ಷಪಾತ’ವೇ ‘ನಾಯಕಪೂಜೆ’ಯೇ ನಮ್ಮ ಕಾಲದ ಅನೇಕ ಬುದ್ಧಿಜೀವಿಗಳ ಜೀವನಧರ್ಮವಾಗಿಬಿಟ್ಟಿದೆ. ಇಂಥವರು ಎಲ್ಲ ಪಕ್ಷಗಳ ಪರವಾಗಿಯೂ ಇದ್ದಾರೆ. ವ್ಯಂಗ್ಯ-ವಿಡಂಬನೆಗಳನ್ನೇ ಸಹಜ ಶೈಲಿಯಾಗಿಸಿಕೊಂಡ ಬರಹಗಾರನು ಅನ್ಯರೊಂದಿಗಾಗಲೀ ತನ್ನೊಂದಿಗಾಗಲೀ ಆರ್ತವಾದ ಪ್ರಾಮಾಣಿಕವಾದ ಸಂವಾದ ನಡೆಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಆದ್ದರಿಂದ ನಮ್ಮೆಲ್ಲರ ಮಾತು ಮರ್ಯಾದೆಯನ್ನು ಮೀರಿದೆ ಮತ್ತು ಮರ್ಯಾದೆಯನ್ನು ಕಳೆದುಕೊಂಡಿದೆ. ಜನರು ಕೂಡ ತಮ್ಮ ಸುತ್ತಲಿನವರ ಬದುಕಿನ ಬವಣೆಗಳನ್ನು ಕಾಣುವ, ಕೇಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ವೈಯಕ್ತಿಕವಾದ ನೆಲೆಯಲ್ಲಿ ಒಳ್ಳೆಯವರೇ ಆಗಿರಬಹುದಾದ ಅನೇಕರು ಗುಂಪಾಗಿ ಯೋಚಿಸುವಾಗ ತಮಗೂ ತಿಳಿಯದಂತೆ ಸಮೂಹಸನ್ನಿಗೆ ಒಳಗಾಗಿದ್ದಾರೆ. ಇಂದು ತಮ್ಮ ಮೇಲೆ ಹೇರಲಾಗಿರುವ ‘ಕಲ್ಪಿತ’ ಚರಿತ್ರೆಯ ಭಾರದಿಂದಲೇ ಕುರುಡಾಗಿರುವ ಸಮುದಾಯಗಳ ಸೃಷ್ಟಿಯಾಗಿದೆ.
ಇದೆಲ್ಲಾ ಸರಿ. ಆದರೆ ಮೇಲೆ ಹೇಳಿದ ಯಾವ ಮಾತು ನಮ್ಮ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮೌನವಹಿಸಲು ಪರವಾನಿಗೆ ಆಗಬಾರದು. ಲಜ್ಜೆಗೇಡಿತನ ಮತ್ತು ಮಾತುಗಾರಿಕೆಗಳೇ ಬಂಡವಾಳವಾಗಿರುವ ಸರ್ಕಾರಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತ್ತಿನಲ್ಲಿ ಇಡುತ್ತಿವೆ. ಅವನ ಖಾಸಗಿತನ’ವನ್ನು ಕಿತ್ತುಕೊಳ್ಳುತ್ತಿವೆ. ‘ಬಿಗ್ ಬ್ರದರ್ ಈಸ್ ವಾಚಿಂಗ್’ ಎನ್ನುವುದು ದಿನದಿನವೂ ಅನುಭವಕ್ಕೆ ಬರುತ್ತಿದೆ. ಉಸಿರು ಬಿಟ್ಟರೆ ಜೈಲು, ಹೆಸರು ಹೇಳಿದರೆ ಮೊಕದ್ದಮೆ ಎನ್ನುವುದು, ಭ್ರಷ್ಟಾಚಾರವೇ ದಿನಚರಿಯಾಗಿರುವ ನಮ್ಮ ದೇಶದಲ್ಲಿ ಬಹು ದೊಡ್ಡ ವಿರೋಧಾಭಾಸ. ಆನೆ ಕದ್ದವರು ಕಣ್ಣೆದುರಿನಲ್ಲಿಯೇ ಮೋಜು ಮಾಡುತ್ತಿರುವಾಗ ಅಡಿಕೆಯನ್ನೂ ಕದಿಯದವರು ವಿಚಾರಣೆ ಹಾಗೂ ಶಿಕ್ಷೆಗಳಿಗೆ ಗುರಿಯಾಗಬಾರದು. ಒಂದು ದೇಶದಲ್ಲಿ ಆತ್ಮಗೌರವವನ್ನು ಕಾಪಾಡಿಕೊಂಡು ಜೀವಿಸುತ್ತಿರುವ ನಾಗರಿಕರು ಇರಬೇಕೋ, ಆಜ್ಞಾಪಾಲಕರಾದ ಕುರಿಗಳು ಇರಬೇಕೋ ಎನ್ನುವುದು ಆಯ್ಕೆಯ ಪ್ರಶ್ನೆಯಲ್ಲ. ಅದು ನಮ್ಮೆಲ್ಲರ ಕನಿಷ್ಠ ಅಪೇಕ್ಷೆ, ನಿರೀಕ್ಷೆ. ನಮ್ಮ ದೇಶವು ಈಗ ಹೋಗುತ್ತಿರುವ ದಿಕ್ಕನ್ನು ನೋಡಿದರೆ ಈ ಪುಟ್ಟ ಹಂಬಲವೂ ನಿಜವಾಗುವ ಸಾಧ್ಯತೆಯು ದೂರ ದೂರ ಹೋಗುತ್ತಿದೆ.
ಈ ಬರವಣಿಗೆಯನ್ನು ಗುರುದೇವ ರವೀಂದ್ರರ
ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ಧೂಳೊಡೆಯದಿಹುದೊ,- ತಾನಾ ನಾಡಿನಲ್ಲಿ;
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ;
ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ, ತೋಳನೀಡಿಹುದೊ ತಾನಾ ನಾಡಿನಲ್ಲಿ;
ಎಲ್ಲಿ ಸುವಿಚಾರ ಜಲದೊಸರು ನಿರ್ಮಲ ಹರಿದು,
ಕಾಳುರೂಢಿಯ ಮರಳೊಳಿಂಗಿ ಕೆಡದಲ್ಲಿ;
ಎಲ್ಲಿ ನೀನೆಮ್ಮ ಚಿಂತನವನುದ್ಯಮದ ಸುವಿ-
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ;
ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿರಲಿ.
(ಕನ್ನಡ ಭಾವಾನುವಾದ, ಎಂ..ಎನ್. ಕಾಮತ್ (೧೯೧೭)
ಎನ್ನುವ ಪದ್ಯದೊಂದಿಗೆ ಮುಗಿಸಲು ನನಗೆ ಇಷ್ಟವಾಗುತ್ತಿದೆ/
ಮೂಲ:
Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action
Into that heaven of freedom, my Father, let my country awake.)
(ಈ ಕವಿತೆಯ ಕನ್ನಡ ಅನುವಾದಕ್ಕಾಗಿ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ, ಇಂದಿನ ನಮ್ಮ ಭಾರತದಲ್ಲಿ ರವೀಂದ್ರರ ಅಂದಿನ ಕನಸು ನಿಜವಾಗಿದೆಯೆಂದು ಹೇಳುವ ಎರಡು ಪೋಸ್ಟುಗಳು ಕಂಡುಬಂದವು!)
ಈ ಅಂಕಣದ ಹಿಂದಿನ ಬರೆಹಗಳು
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.