''ಒಂದು ಜೀವನಕ್ರಮವನ್ನು ಅದಕ್ಕೆ ನಿಕಟವಾದ ಭಾಷೆ, ಪರಿಭಾಷೆ, ನುಡಿಗಟ್ಟು, ನಂಬಿಕೆ ಮತ್ತು ಆಚರಣೆಗಳ ಮಟ್ಟದಲ್ಲಿಯೇ ಹಿಡಿಯುವ ಸಂಪಿಗೆ ನಾಗರಾಜರು ನಿಜವಾಗಿ ಈ ಕಥೆಯನ್ನು ಕಾದಂಬರಿಯಾಗಿ ವಿಸ್ತರಿಸಬಹುದೆಂಬ ವಿಚಾರ ಓದುಗರಲ್ಲಿ ಮೂಡುತ್ತದೆ. ಇದು ಈ ಸಂಕಲನದ ಕಥೆಗಳಲ್ಲೇ ತುಸು ಲಘುಧಾಟಿಯದೆಂದು ತೋರುವ ರಚನೆ,'' ಎನ್ನುತ್ತಾರೆ ಸಿ. ಎಸ್. ಭೀಮರಾಯ. ಅವರು ಸಂಪಿಗೆ ನಾಗರಾಜ ಅವರ ‘ಭೂಮಿ ತಾಯವ್ವ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಲೇಖಕ: ಡಾ. ಸಂಪಿಗೆ ನಾಗರಾಜ
ಪುಟ: 132, ಬೆಲೆ: 140/-
ಪ್ರಕಾಶನ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ
ಡಾ. ಸಂಪಿಗೆ ನಾಗರಾಜ ಕಥೆ, ಪ್ರಬಂಧ, ಕಾದಂಬರಿ ಮತ್ತು ವಿಮರ್ಶೆ ಕ್ಷೇತ್ರಗಳಲ್ಲಿ ಈಗಾಗಲೇ ಕೆಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭೂಮಿ ತಾಯವ್ವ’ ಸಂಪಿಗೆ ನಾಗರಾಜರ ಎರಡನೆಯ ಕಥಾಸಂಕಲನ.
ನಮ್ಮ ಇತ್ತೀಚಿನ ಕಥಾ ಸಾಹಿತ್ಯ ಕಾರ್ಪೊರೇಟ್ ಸಭಾಂಗಣದ ಜಾಗತೀಕೃತ ವಾತಾವರಣದಲ್ಲಿ ಒದ್ದಾಡುತ್ತಿರುವಂತೆ ಕಾಣುತ್ತಿರುವ ಸಂದರ್ಭದಲ್ಲಿ ಸಂಪಿಗೆ ನಾಗರಾಜ ಅವರ ‘ಭೂಮಿ ತಾಯವ್ವ’ ಸುಳಿಗಾಳಿಯಂತೆ ಬಂದಿದೆ. ಈ ಸಂಕಲನದಲ್ಲಿ ಒಂಬತ್ತು ಕಥೆಗಳಿವೆ. ಅಪರೂಪವಾಗುತ್ತಿರುವ ಪ್ರಾದೇಶಿಕ ಸೊಗಡಿನೊಂದಿಗೆ ಆಧುನಿಕತೆಯ ಚಿಂತನೆಯ ಎಳೆಗಳೂ ಸೇರಿಕೊಂಡ ಬದುಕಿನ ಒಂದು ದಟ್ಟ ನೇಯ್ಗೆಯನ್ನು ನಾವು ಇಲ್ಲಿ ಕಾಣುತ್ತೇವೆ. ಇಲ್ಲಿ ಬದುಕಿನ ಸೆಲೆ ಸಮೃದ್ಧವಾಗಿದೆ. ವರ್ತಮಾನದ ಸಮಾಜದಲ್ಲಿ ಕಾಣಸಿಗುವ ಭ್ರಷ್ಟವ್ಯವಸ್ಥೆ, ಜಾತೀಯತೆ, ಮನುಷ್ಯನ ದುಷ್ಟತನ, ಆಕ್ರಮಣ, ಅವಮಾನ, ಕೇಡು, ಹಾದರ, ಕೌಟುಂಬಿಕ ವಿಘಟನೆ, ಗಣಿಗಾರಿಕೆ, ವಲಸೆ, ಬಡತನ, ಮೌಲ್ಯಗಳ ನಾಶ, ಆಧ್ಯಾತ್ಮಿಕತೆ, ಬರಗಾಲ-ಇತ್ಯಾದಿ ಇಲ್ಲಿನ ಕಥೆಗಳ ವಸ್ತು.
ಸಂಕಲನದ ಮೊದಲ ಕಥೆ ‘ಊರ ಮಧ್ಯದ ಕಾಡಿನೊಳಗೆ’ ಸತ್ತವರೊಡನೆ ಸಂಬಂಧ, ವರ್ತಮಾನದೊಡನೆ ಸಂಬಂಧ ಇವೆರಡನ್ನೂ ಏಕಕಾಲಕ್ಕೆ ಶ್ರದ್ಧೆಯ ನಿಕಷಕ್ಕೆ ಒಡ್ಡುತ್ತದೆ. ನಾಗಚಂದ್ರ ಈ ಕಥೆಯ ಮುಖ್ಯ ಪಾತ್ರ. ನಾಗಚಂದ್ರನ ಮನಸ್ಸಿನೊಳಗಣ ಸಂಕಟ, ತಳಮಳ ಮತ್ತು ಇಕ್ಕಟ್ಟುಗಳು ಅನಾವರಣಗೊಳ್ಳುವ ಬಗೆಯನ್ನು ಕಥೆ ಮನೋಜ್ಞವಾಗಿ ತೆರೆದಿಡುತ್ತದೆ. ತಂದೆ ಮತ್ತು ಮಗನ ಸಂಬಂಧವನ್ನು ಶೋಧಿಸುತ್ತ, ಅದರ ವಿವಿಧ ವಿಸ್ತಾರ ಮತ್ತು ಆಯಾಮಗಳನ್ನು ಅನಾವರಣಗೊಳಿಸುತ್ತ ಸಾಗುವ ಈ ಕಥೆಯಲ್ಲಿ ಲೇಖಕರ ಗಮನ ಕುಟುಂಬದ ಚೌಕಟ್ಟಿನ ಆಚೆಗೂ ಹರಿದಿದೆ. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳು ವೈಯಕ್ತಿಕ ಜೀವನವನ್ನು ತಟ್ಟುವ, ಕದಡುವ ಬಗೆಯನ್ನು ಇಲ್ಲಿ ಗಮನಿಸಲಾಗಿದೆ. ಜೀವನದಲ್ಲಿ ಎಲ್ಲ ಕಷ್ಟ-ನಿಷ್ಟುರಗಳನ್ನು ಎದುರಿಸಿ ನಿಲ್ಲುವ ಕಥಾನಾಯಕ ನಾಗಚಂದ್ರನ ಚೈತನ್ಯವನ್ನು ಕಥೆಯು ಸ್ಪರ್ಶಿಸಿರುವ ಕ್ರಮ ಅನನ್ಯವಾಗಿದೆ.
ಸಂಪಿಗೆ ನಾಗರಾಜರು ತಮ್ಮ ಕಥೆಗಳಲ್ಲಿ ಮತ್ತೆ ಮತ್ತೆ ಕಟ್ಟಿಕೊಡುವ ಅನುಭವ ಲೋಕವೆಂದರೆ ಗ್ರಾಮೀಣ ಜಗತ್ತಿನಲ್ಲಿ ತಮ್ಮ ವಿಶೇಷ ವ್ಯಕ್ತಿತ್ವ, ನಡವಳಿಕೆ, ಸ್ವಭಾವ ಮತ್ತು ವೈಚಿತ್ಯ್ರಗಳಿಂದ ಖ್ಯಾತರಾದ ಅಥವಾ ಕುಖ್ಯಾತರಾದ ವ್ಯಕ್ತಿಗಳ ಬದುಕನ್ನು, ಮುಚ್ಚು ಮರೆಯಿಲ್ಲದೆ, ಯಾರ ಮುಲಾಜಿಗೂ ಬಗ್ಗದೆ ಬದುಕುವ ಇಂಥ ಮನುಷ್ಯರು ಸಮುದಾಯ ನಿರ್ಮಿತ ಚೌಕಟ್ಟನ್ನು ಉಲ್ಲಂಘಿಸುವ ಪ್ರಕ್ರಿಯೆಯಿಂದಾಗಿ ವಿವಿಧ ಬಗೆಯ ದುರಂತಗಳ ನಿರ್ಮಾಣಕ್ಕೆ ಕಾರಣವಾಗಿ ತಮ್ಮನ್ನು ನಂಬಿದ ಎಲ್ಲರಿಗೂ ಅನಾಹುತಗಳ ಹುಟ್ಟು ಹಾಕುವರು.
ಈ ಸಂಕಲನದ ಯಶಸ್ವೀ ಕಥೆಯಾದ ‘ಹಾಳೂರೊಳಗೊಂದು ನಾಯಿ ಜಗಳ’ ತನ್ನ ದಟ್ಟವಾದ ಗ್ರಾಮೀಣ ಅನುಭವ ಶ್ರೀಮಂತಿಕೆಯಿಂದ ಹಾಗೂ ಅದನ್ನು ಭಾಷಿಕ ರೂಪದಲ್ಲಿ ಹಿಡಿದಿಡುವ ಕಲಾತ್ಮಕತೆಯ ಪರಿಶ್ರಮದಿಂದ ನಮ್ಮ ಗಮನ ಸೆಳೆಯುತ್ತದೆ. ಈ ಕಥೆಯ ರುದ್ರಪ್ಪ, ಶಿವರುದ್ರ, ಶಿವಮ್ಮ ಮತ್ತು ಮಾಳವ್ವವರೆಲ್ಲಾ ತಮ್ಮ ತಮ್ಮೊಳಗಿನ ವಿಚಿತ್ರವಾದ ಸ್ವಭಾವಗಳಿಂದಲೇ ಪ್ರಸಿದ್ಧರಾದವರು. ಇವರ ಈ ವಿಚಿತ್ರ ಸ್ವಭಾವಗಳು ಉಂಟುಮಾಡುವ ಪರಿಣಾಮಗಳಿಂದ ಕುಟುಂಬ, ಊರು ಮತ್ತು ಕೇರಿಗಳು ತಲ್ಲಣಗೊಳ್ಳುತ್ತವೆ. ಕಥೆಗಾರನ ಗಮನ ಇಂಥ ಕಥೆಗಳಲ್ಲಿ ಕಥಾನಾಯಕರ ವಿಶಿಷ್ಟ ವ್ಯಕ್ತಿತ್ವ ಅನಾವರಣ ಮಾಡುವ ಕಡೆ ಹೆಚ್ಚು ಕೇಂದ್ರಿತವಾಗಿರುವುದರಿಂದ ಕೆಲವೊಮ್ಮೆ ಇವು ನುಡಿ ಚಿತ್ರಗಳಂತೆ ಭಾಸವಾಗುತ್ತವೆ.
ಕೇವಲ ಐವತ್ತು ವರ್ಷಗಳ ಅಲ್ಪಾವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಆದ ಪಲ್ಲಟಗಳನ್ನು ಅದ್ಭುತವಾಗಿ ಸೆರೆ ಹಿಡಿದಿರುವ ಕಥೆ ಎಂದರೆ ‘ಭೂಮಿ ತಾಯವ್ವ’. ಈ ಕಥೆಯು ಉತ್ತಮಪುರುಷ ನಿರೂಪಣೆಯಲ್ಲಿದ್ದು, ನಿರೂಪಕನ ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲೇ ಈ ಪಲ್ಲಟಗಳನ್ನು ದಾಖಲಿಸುವುದರಿಂದ ಒಂದು ಬಗೆಯ ತೀವ್ರತೆ ಈ ಕಥನಕ್ಕೆ ತಾನಾಗಿ ಬಂದುಬಿಟ್ಟಿದೆ. ತಾಯವ್ವನ ಪಾಲಿಗೆ ಬಂದ ಹೊಲವು ಈಗ ಗಣಿಯಾಗಿ ಮಾರ್ಪಾಟವಾಗುವುದು, ವ್ಯವಸಾಯದ ಸಲಕರಣೆಗಳ ಸ್ಥಾನವನ್ನು ಬೃಹತ್ ಜೆಸಿಬಿ ಯಂತ್ರಗಳು ಆಕ್ರಮಿಸಿಕೊಳ್ಳುವುದು, ಹಳ್ಳದ ನೀರು ಮತ್ತು ಪಕ್ಷಿಗಳು ಕಣ್ಮರೆಯಾಗುವುದು, ಜನರ ಉಸಿರಾಟಕ್ಕೆ ತೊಂದರೆಯಾಗುವುದನ್ನು ನೋಡಿ ಆಶ್ಚರ್ಯಚಕಿತನಾಗುವ ಕಥಾನಾಯಕ ಚಂದ್ರಶೇಖರ ಗಣಿಗಳ್ಳರ ವಿರುದ್ಧ ಹೋರಾಟ ಮಾಡುವುದು, ಅವನು ಜನರನ್ನು ಜಾಗೃತಗೊಳಿಸುವುದು, ಮೈದುನರ ಸಂಚನ್ನು ಅರಿಯದೆ ಮೋಸಕ್ಕೊಳಗಾಗಿ ತಾಯವ್ವ ದುಃಖಪಡುವುದು, ಗಣಿಗಾರಿಕೆಯಿಂದ ಹಳ್ಳದ ನೀರು ಕೆಂಪು ಬಣ್ಣಕ್ಕೆ ತಿರುಗುವುದನ್ನು ಕಥೆಯು ಸೂಕ್ಷ್ಮ ಸ್ವರೂಪದ ಪಲ್ಲಟಗಳ ಕಥನದಿಂದ ಸ್ಥೂಲ ಸ್ವರೂಪದ, ವಿರಾಟ್ ಎನ್ನಬಹುದಾದ ಬದಲಾವಣೆಗಳತ್ತ ವಿಸ್ತರಿಸುತ್ತದೆ. ತಾನು ಹುಟ್ಟಿ ಬೆಳೆದ ತನ್ನ ಪ್ರೀತಿಯ ಊರು ನಿರೂಪಕನಿಗೆ ನರಕವಾಗಿ ಕಾಣಲಾರಂಭಿಸುತ್ತದೆ. ಪಾತ್ರ ಪೋಷಣೆ, ಕಥಾ ಆವರಣ, ಕಥೆಗೆ ಪೂರಕವಾದ ಪ್ರಾಕೃತಿಕ ಸನ್ನಿವೇಶ ನಿರ್ಮಾಣಗಳೆಲ್ಲ ಸೊಗಸಾಗಿ ಮೂಡಿ ಬಂದಿವೆ, ಕಥೆಯನ್ನು ಪೋಷಿಸಿವೆ. ಕಥೆಗಾರ ಎಲ್ಲಿಯೂ ಆವೇಶಕ್ಕೆ ಒಳಗಾಗದೇ, ಕಥೆಯೇ ತನ್ನ ಆಶಯವನ್ನು ಹೇಳುವ ಹಾಗೆ ಕಥೆ ಕಟ್ಟಲ್ಪಟ್ಟಿದೆ. ಇದು ಈ ಸಂಕಲನದ ಮತ್ತೊಂದು ಅತ್ಯುತ್ತಮ ಕಥೆ.
ಒಂದು ಸಾಂಪ್ರದಾಯಿಕ ಆವರಣದಲ್ಲಿ ಕುಟುಂಬವೊಂದರ ಆಶೋತ್ತರಗಳನ್ನು ಚಿತ್ರಿಸುವ ‘ಬಯಲ ಆಲಯದೊಳಗೆ’ ಕಥೆಯು ಆಧ್ಯಾತ್ಮಿಕ-ತಾತ್ವಿಕ ವಿಚಾರಗಳೊಂದಿಗೆ ಬೆಸೆಯುವ ಪರಿ ಅದ್ಭುತವಾದದ್ದು. ವಾಸ್ತವಿಕ ವಿವರಗಳನ್ನು ವಾಸ್ತವೇತ್ತರವಾದ ವಿವರಗಳ ಜೊತೆ ಬೆರೆಸುವಾಗ ಲೇಖಕರು ಯಾವುದೇ ‘ತಂತ್ರ’ದ ಪ್ರಯೋಗವನ್ನು ಮಾಡುತ್ತಿದಾರೆ ಎಂದು ಅನ್ನಿಸುವುದೇ ಇಲ್ಲ. ಒಂದು ಜೀವನಕ್ರಮವನ್ನು ಅದಕ್ಕೆ ನಿಕಟವಾದ ಭಾಷೆ, ಪರಿಭಾಷೆ, ನುಡಿಗಟ್ಟು, ನಂಬಿಕೆ ಮತ್ತು ಆಚರಣೆಗಳ ಮಟ್ಟದಲ್ಲಿಯೇ ಹಿಡಿಯುವ ಸಂಪಿಗೆ ನಾಗರಾಜರು ನಿಜವಾಗಿ ಈ ಕಥೆಯನ್ನು ಕಾದಂಬರಿಯಾಗಿ ವಿಸ್ತರಿಸಬಹುದೆಂಬ ವಿಚಾರ ಓದುಗರಲ್ಲಿ ಮೂಡುತ್ತದೆ. ಇದು ಈ ಸಂಕಲನದ ಕಥೆಗಳಲ್ಲೇ ತುಸು ಲಘುಧಾಟಿಯದೆಂದು ತೋರುವ ರಚನೆ.
ಸಂಪಿಗೆ ನಾಗರಾಜರ ಸಾಮಾಜಿಕ, ರಾಜಕೀಯ ಮತ್ತು ತಾತ್ವಿಕ ಜಿಜ್ಞಾಸೆಗಳ ಆವರಣಗಳು ‘ಬದುಕು ಚಲಿಸುವ ಪರಿ’ ಕಥೆಯಲ್ಲಿ ಚಿತ್ರಿತಗೊಂಡಿವೆ. ದೈನಂದಿನ ಜೀವನದ ಸಾಮಾನ್ಯ ಸಂದರ್ಭಗಳಲ್ಲಿಯೂ, ವಿವರಗಳಲ್ಲಿಯೂ ಅವರ ಮೂಲಭೂತ ಹುಡುಕಾಟಗಳ ಛಾಯೆ ಬೇರೆಬೇರೆ ಪ್ರಮಾಣದಲ್ಲಿ ಕಂಡುಬರುವುದನ್ನು ಓದುಗರು ಅಲಕ್ಷಿಸುವಂತಿಲ್ಲ. ಈ ಕಥೆಯ ರಂಗನಾಥನ ಛಲ ಬೆರಗು ಹುಟ್ಟಿಸುವಂಥದ್ದು.
ಉದ್ಯೋಗ, ಶಿಕ್ಷಣ, ಮಾನಸಿಕ ಯೋಗಕ್ಷೇಮ, ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಸಾಮಾಜಿಕ ಕ್ರಿಯಾಶೀಲತೆಗೆ ಸಂಬಂಧಿಸಿದಂತೆ ಜನರ ಜೀವನದ ಮೇಲೆ ಕೋವಿಡ್-19 ರೋಗದ ತಕ್ಷಣದ ಪರಿಣಾಮಗಳನ್ನು ‘ಕರಳು ಕರಗಿದ ಸಮಯ’ ಕಥೆ ಚಿತ್ರಿಸುತ್ತದೆ. ಇದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಥೆ. ಕೌಟುಂಬಿಕ ಕಥೆಗಳನ್ನು ರಸವತ್ತಾಗಿ ನಿರೂಪಿಸಬಲ್ಲ ಕಲೆ ನಾಗರಾಜರಿಗೆ ಕರಗತವಾಗಿದೆ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಆದರೆ ಅವರ ಇತರ ಕಥೆಗಳಲ್ಲಿ ಕಂಡುಬರುವ ಅತಿಯಾದ ವಿವರ ಈ ಕಥೆಯಲ್ಲಿ ಇಲ್ಲ. ಕಣ್ಣ ಪಟ್ಟಿ ಕಟ್ಟಿಕೊಂಡ ಕುದುರೆಯಂತೆ ಈ ಕಥೆ ನೇರವಾಗಿ ಸಾಗುತ್ತದೆ. ಕೋವಿಡ್-19 ಇಡೀ ಜಗತ್ತನೇ ತಲ್ಲಣಗೊಳಿಸಿದ ರೋಗ. ಕಥಾನಾಯಕಿ ದಮಯಂತಿಯ ಆತಂಕ, ಒತ್ತಡ ಮತ್ತು ಅನಿಶ್ಚಿತತೆಯಂತಹ ಭಾವನೆಗಳನ್ನು ಲೇಖಕರು ಯಥಾವತ್ತಾಗಿ ಚಿತ್ರಿಸಿದ್ದು ಕಂಡುಬರುತ್ತದೆ. ನರ್ಸ್ ದಮಯಂತಿಯ ಜೀವನ ಕಥೆಯನ್ನು ಅನಿವಾರ್ಯವಾಗಿ ಕೇಳಿಸಿಕೊಳ್ಳಬೇಕಾಗಿ ಬಂದ ನಿರೂಪಕನು ಅಸಂಗತ ನಾಟಕವೊಂದರ ಪ್ರೇಕ್ಷಕನಂತೆ ಆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾನೆ. ಡಿ. ಸಿ. ಕಛೇರಿಯ ಕೊರೋನಾ ಕಂಟ್ರೋಲ್ ರೂಮಿನ ನೋಡಲ್ ಆಫೀಸರ್ ಅಗಿರುವ ಸಂಗಮನಾಥ ಮತ್ತು ನರ್ಸ್ ದಮಯಂತಿಯರ ಪರಸ್ಪರ ‘ಮಾತುಕಥೆ’ಯೇ ‘ಕಥೆ’ಯಾಗಿ ರೂಪಾಂತರಗೊಳ್ಳುವ ಕುತೂಹಲಕಾರೀ ರಚನೆ ಇದು.
‘ಗುಳೆ’ ಕಥೆಯಲ್ಲಿ ಲೇಖಕರು ಕಥಾನಾಯಕ ಮಾನಿಂಗನ ಹಂಬಲ ಮತ್ತು ಹಳವಂಡಗಳನ್ನು ನಿರೂಪಿಸುತ್ತ ಬರಗಾಲದಿಂದ ತತ್ತರಿಸಿದ ಬದುಕು, ಅವನು ಹಳ್ಳಿ ತೊರೆದು ನಗರಕ್ಕೆ ಕೂಲಿ ಹುಡುಕಿಕೊಂಡು ಬರುವ ದಾರುಣ ಚಿತ್ರಣ ಕೊಡುತ್ತಾರೆ. ಉಳಿದ ಕಥೆಗಳಲ್ಲಿ ಕಾಣಿಸಿಕೊಳ್ಳದ ನಿರಾಶೆಯ ಛಾಯೆ ಈ ಕಥೆಯಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ. ಈ ಕಥೆಯಲ್ಲಿ ಕಥೆಗಾರರು ತೋರಿರುವ ಸಂಯಮ ಅಪೂರ್ವವಾದುದು.
‘ಧರಣಿ ಮಂಡಲ ಮಧ್ಯದೊಳಗೆ’ ಕಥೆ ವರ್ತಮಾನದ ಮುಖ್ಯ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುತ್ತದೆ. ಅಲ್ಲದೆ ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ನಡೆಯುತ್ತಿರುವ ಮಧ್ಯವರ್ತಿ ಮತ್ತು ನೇಮಕಾತಿ ವಿಭಾಗದ ಭ್ರಷ್ಟಾಚಾರದ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಕಥೆ ಸಂಕಲನದ ಉಳಿದ ಕಥೆಗಳಿಂತ ಭಿನ್ನವಾದದ್ದು. ಮಧ್ಯವರ್ತಿ ಮತ್ತು ನೇಮಕಾತಿ ವಿಭಾಗದವರ ಮರಳು ಮಾತಿಗೆ ಒಳಗಾಗಿ ತಮ್ಮ ಹೊಲವನ್ನು ಶಾನುಭೋಗರಿಗೆ…ಒತ್ತೆಯಿಟ್ಟು ಹಣ ಸಂಗ್ರಹಿಸಿ, ಆ ಹಣವನ್ನು ನೇಮಕಾತಿ ವಿಭಾಗದ ಸದಸ್ಯನಿಗೆ ನೀಡುವುದು, ಅವರು ಕೆಲಸ ಕೊಡದೆ ಮೋಸ ಮಾಡುವುದು, ನಿರುದ್ಯೋಗಿಗಳ ಕುಟುಂಬ ಕಡೆಗೆ ಯಾವ ಸ್ಥಿತಿಗೆ ತಲುಪುತ್ತದೆಯೆಂಬುದನ್ನು ಮಾರ್ಮಿಕವಾಗಿ ಈ ಕಥೆ ನಮ್ಮ ಮುಂದಿಡುತ್ತದೆ. ಶಿವಮಲ್ಲಪ್ಪ, ರಾಮರಾಯ ಶಾನುಭೋಗ ಮತ್ತು ಖಾದಿಧಾರಿ ಪಡಶೆಟ್ಟಿ ಸಾಹೇಬರಂಥ ವ್ಯಕ್ತಿಗಳು ಇಂದು ಎಲ್ಲಾ ಕಡೆ ಇದ್ದಾರೆ. ಇವರು ಮಾಡುವ ಮೋಸಕ್ಕೆ ಅಂಜಿನಪ್ಪನ ಕುಟುಂಬ ಬೀದಿಗೆ ಬೀಳುತ್ತದೆ. ಸುಧಾಮ ಬೆಂಗಳೂರಿಗೆ ಬಂದು ಶಿವಮಲ್ಲ ಮತ್ತು ಪಡಶೆಟ್ಟಿಯರನ್ನು ಹುಡುಕುವ ದಿನದ ಅವಧಿಯಲ್ಲಿ ಜರುಗುವ ಘಟನೆಗಳು ಉಸಿರಾಡಲೂ ಆಗದಂತೆ ದಿಗ್ಭ್ರಮೆಗೊಳಿಸುತ್ತವೆ. ಘಟನೆಯಿಂದ ಘಟನೆಗೆ ಕಥೆ ಮುಂದುವರಿದಂತೆ ಕಥೆ ಆಳವಾಗುತ್ತಾ, ಸಂಕೀರ್ಣವಾಗುತ್ತಾ, ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ.
ಕುಟುಂಬದೊಳಗಿನ ಸೊಸೆಯಂದಿರ ಮನಸ್ಸಿನ ಈರ್ಷ್ಯಾಸೂಯೆಗಳನ್ನು, ತಳಮಳಗಳನ್ನು ಮತ್ತು ಸ್ಪರ್ಧಾಭಾವನೆಗಳನ್ನು ಕುತೂಹಲಕಾರಿಯಾಗಿ ಚಿತ್ರಿಸುವ ಕಥೆ ‘ಸೋರುತಿಹುದು ಮನೆಯ ಮಾಳಿಗೆ...’ ಗ್ರಾಮೀಣ ಪ್ರದೇಶದಲ್ಲಿನ ಒಡೆದ ಕುಟುಂಬವೊಂದರ ಚಿತ್ರ ಈ ಕಥೆಯಿಂದ ನಮಗೆ ಸಿಗುತ್ತದೆ. ದೇಸಿಯ ಸೊಗಡು ಉದ್ದಕ್ಕೂ ಕಥೆಗೆ ಸಹಜತೆಯನ್ನೊದಗಿಸಿದೆ. ಅತ್ತೆ-ಮಾವ ಮತ್ತು ಗಂಡ-ಹೆಂಡತಿಯರ ವರ್ತನೆ, ಸ್ವಭಾವ, ಮನಸ್ಸಿನ ಹೊಯ್ದಾಟ, ಚಿತ್ತದ ವ್ಯಾಪಾರಗಳು ಒಟ್ಟೊಟ್ಟಿಗೆ ಸೊಗಸಾಗಿ ಒಡಮೂಡಿವೆ. ಪಂಪಣ್ಣನ ಹೆಂಡತಿ ನೀಲವ್ವ, ಹಿರಿಯ ಮಗ ಮಲ್ಲಯ್ಯ, ಕಿರಿಯ ಮಗ ತಿಮ್ಮಪ್ಪ ಮತ್ತು ಸೊಸೆಯಂದಿರು ಹಾಗೂ ಪಂಪಣ್ಣನ ಸಂಸಾರ ಚಿತ್ರವನ್ನು ಈ ಕಥೆಯಲ್ಲಿ ಕಾಣುತ್ತೇವೆ. ಒಡೆದುಹೋದ ಸಂಸಾರದ ಸುಂದರ ಚಿತ್ರ ಈ ಕಥೆಯಲ್ಲಿ ಸಿಗುತ್ತದೆ. ಜೀವನದ ದುಃಖ, ಕಹಿಗಳನ್ನು ಪಂಪಣ್ಣನ ಮುಗ್ಧ ಉತ್ಸಾಹ ಮರೆಸಿ ಕಥೆಗೆ ಒಂದು ಮೆರಗನ್ನು ಕೊಡುತ್ತದೆ. ನೀಲವ್ವನ ದುರಂತ ಮರಣ ಮತ್ತು ಪಂಪಣ್ಣನ ನಿಸ್ಸಾಹಾಯಕ ಜೀವನ ಓದುಗರ ಕರುಳನ್ನು ಮಿಡಿಯುತ್ತದೆ. ತಂದೆ-ತಾಯಿಯರ ಸಂಬಂಧ, ಮಕ್ಕಳು ಮತ್ತು ಸೊಸೆಯಂದಿರ ಸಂಬಂಧಗಳು ಹಲವು ಕಾರಣಗಳಿಂದಾಗಿ ಕಲುಷಿತಗೊಳ್ಳುವ ಪರಿಯನ್ನು ಕಥೆ ಸೂಕ್ಷ್ಮವಾಗಿ ದಾಖಲಿಸುತ್ತದೆ.
ನಾಗರಾಜರ ಈ ಸಂಕಲನದ ಒಂದೆರಡು ಕಥೆಗಳನ್ನು ಬಿಟ್ಟರೆ ಉಳಿದ ಎಲ್ಲ ಕಥೆಗಳಲ್ಲಿಯೂ ಗ್ರಾಮ ಜೀವನದ ದಟ್ಟವಾದ ಅನುಭವದ ಕಲಾತ್ಮಕವಾದ ಅಭಿವ್ಯಕ್ತಿ ಇದೆ. ಅವರು ಭಾಷೆಯನ್ನು ಅದರ ಸಕಲ ಸಾಧ್ಯತೆಗಳೊಡನೆ ದುಡಿಸಿಕೊಳ್ಳುತ್ತಾರೆ. ಕಥೆಗಳಲ್ಲಿ ಬರುವ ಸಂಕೇತ-ಪ್ರತಿಮೆಗಳು ಕಥೆಯ ಒಂದು ಸಹಜ ಅಂಗವಾಗಿಯೇ ಬರುತ್ತವೆ.
ಈ ಸಂಕಲನದ ಮುಖ್ಯ ಕಥೆಗಳಾದ ‘ಊರ ಮಧ್ಯದ ಕಾಡಿನೊಳಗೆ’, ‘ಭೂಮಿ ತಾಯವ್ವ’, ‘ಗುಳೆ’, ‘ಬಯಲ ಆಲಯದೊಳಗೆ’, ‘ಬದುಕು ಚಲಿಸುವ ಪರಿ’ ಮೊದಲಾದ ಕಥೆಗಳಲ್ಲಿ ಗ್ರಾಮೀಣ ಜಗತ್ತಿಗೆ ಆಧುನಿಕತೆ ಪ್ರವೇಶಿಸಿದ್ದರಿಂದಾಗಿ ಅಲ್ಲಿ ಉಂಟಾಗಿರುವ ತಲ್ಲಣಗಳನ್ನು ಹಾಗೂ ಪಾರಂಪರಿಕ ಜಗತ್ತು ತನ್ನ ಬೇರುಗಳನ್ನು ಕಳೆದುಕೊಂಡು ಅವನತಿಯ ಕಡೆ ಸಾಗುವುದನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಈ ಆಧುನಿಕತೆಗೆ ಒಂದು ಮುಖವಿಲ್ಲ. ಅದು ಬೇರೆ ಬೇರೆ ಸ್ವರೂಪಗಳಲ್ಲಿ, ವಿವಿಧ ಬಗೆಯ ವೇಷಗಳಲ್ಲಿ ಪಾರಂಪರಿಕ ಸಮುದಾಯವನ್ನು ಪ್ರವೇಶಿಸುತ್ತದೆ. ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿ ನಿಲ್ಲದ ಒಂದು ನಿರಂತರ ಸಂಘರ್ಷವೇ ಆಗಿ ಕಾಣುತ್ತದೆ. ನಮ್ಮ ಎಲ್ಲಾ ಸಾಹಿತ್ಯಿಕ ಚಳವಳಿಗಳ ಮುಖ್ಯ ತಾರ್ಕಿಕ ತಳಹದಿಯೇ ಇದೆ ಆಗಿದೆಯೇನೋ ಎನ್ನುವಷ್ಟು ಇದು ನಮ್ಮ ಲೇಖಕರನ್ನು ಕಾಡಿದೆ. ಸಂಪಿಗೆ ನಾಗರಾಜ ಸಹಜ ಕಥೆಗಾರರು. ಕಥೆ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ. ಅವರಿಗಿರುವ ಗ್ರಾಮೀಣ ಜಗತ್ತಿನ ದಟ್ಟ ಅನುಭವವನ್ನು ಕಲಾತ್ಮಕವಾಗಿ ಹೇಗೆ ಮಂಡಿಸಿಬಹುದೆಂಬುದರ ಅರಿವೂ ಅವರಿಗಿದೆ. ಅವರು ಕಥೆಗಳಲ್ಲಿ ಸಾದೃಶ್ಯ ಮತ್ತು ಸಂಕೇತಗಳನ್ನು ಸಮರ್ಥವಾಗಿ ಬಳಸಬಲ್ಲರು. ವಸ್ತುವಿನ ಆಯ್ಕೆಯಲ್ಲಿಯೂ, ಅದನ್ನು ನಿರ್ವಹಿಸುವಲ್ಲಿಯೂ ಅವರು ತೋರಿರುವ ಕೌಶಲ ಮೆಚ್ಚುವಂಥದು. ನಾಗರಾಜರು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಭಾಷೆಯ ನುಡಿಗಟ್ಟುಗಳನ್ನು ಹೇರಳವಾಗಿ ಬಳಸಿದ್ದಾರೆ. ತಮ್ಮದೆ ಆದ ಶೈಲಿ, ನಿರೂಪಣಾ ವಿಧಾನ, ಆಡುಮಾತಿನ ವೈಶಿಷ್ಟ್ಯಗಳಿಂದ ಗಮನ ಸೆಳೆದಿರುವ ಸಂಪಿಗೆ ನಾಗರಾಜರಿಂದ ಇನ್ನೂ ಹೆಚ್ಚಿನ ಉತ್ತಮ ಕಥೆಗಳನ್ನು ನಿರೀಕ್ಷಿಸಬಹುದು. ನಮ್ಮ ಈ ನಿರೀಕ್ಷೆ ವ್ಯರ್ಥವಾಗುವುದಿಲ್ಲ.
- ಸಿ. ಎಸ್. ಭೀಮರಾಯ (ಸಿಎಸ್ಬಿ)
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.