ಭಾರತದ ಆರ್ಥಿಕತೆ ಇಟ್ಟ ಹೆಜ್ಜೆಗಳು ತೊಟ್ಟ ರೂಪಗಳ ಅನಾವರಣ


"ಈ ಪುಸ್ತಕ ಆಗ ಅವರಿಂದ ಪಡೆದ ಒಳನೋಟವನ್ನು, ವಿಸ್ತಾರವಾಗಿ ರುಜುವಾತು ಪಡಿಸಿತು. ನಾನು 1979 ರಲ್ಲಿ ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಕನ್ನಡ ಸ್ನಾತಕೋತ್ತರ ಪದವಿಗೆ ಸೇರಿದೆ. ಅಲ್ಲಿಗೆ ನನ್ನ ಅರ್ಥಶಾಸ್ತ್ರದ ನಂಟು ತಪ್ಪಿತು," ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ರಾಜಾರಾಂ ತಲ್ಲೂರು ಅವರ ‘M ಡಾಕ್ಯುಮೆಂಟ್’ ಕೃತಿ ಕುರಿತು ಬರೆದ ವಿಮರ್ಶೆ.

ಮೂಲ: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
ಅನುವಾದ: ರಾಜಾರಾಂ ತಲ್ಲೂರು

ಐದು ವರ್ಷಗಳ ಹಿಂದೆ ನಾವು ಮೊದಲ ಬಾರಿಗೆ ಅಮೇರಿಕಾಗೆ ಹೋದಾಗ, ನನ್ನ ಮಗನಿದ್ದ ಮನೆಯ ಎದುರಿನ ಮನೆಯಲ್ಲಿ ವಾಸ ಇದ್ದ ,ನಿವೃತ್ತ ಅಂತಾರಾಷ್ಟ್ರೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕರು, ನಮ್ಮನ್ನು ಭೇಟಿಯಾಗಲು ಬಯಸಿ ಅವರ ಮನೆಗೆ ಆಹ್ವಾನಿಸಿದರು.ನಾವು ಆಶ್ಚರ್ಯಗೊಂಡರು, ಅವರ ಆಹ್ವಾನವನ್ನು ಮನ್ನಿಸಿ ,ಅವರ ಮನೆಗೆ ಹೋದೆವು. ನಾವಿಬ್ಬರೂ ಶಿಕ್ಷಕರಾಗಿ ನಿವೃತ್ತಿ ಹೊಂದಿದವರು, ಅದು ಭಾರತದಿಂದ ಹೋದವರು ಎಂಬುದು ನಮ್ಮನ್ನು ಕರೆಯಲು ಕಾರಣ ಎಂದು, ಅವರ ಮನೆಗೆ ಹೋದ ನಂತರ ತಿಳಿಯಿತು. ನಾನು ಐದು ವರ್ಷಗಳ ಕಾಲ, ಐದು ದಶಕಗಳ ಹಿಂದೆ ಅರ್ಥಶಾಸ್ತ್ರದ ವಿದ್ಯಾರ್ಥಿ ಆಗಿದ್ದುದರಿಂದ, ಅವರ ಅರ್ಥಶಾಸ್ತ್ರದ ಪ್ರಾಧ್ಯಾಪಕರೆಂದು ತಿಳಿದ ಮೇಲೆ, ಅವರಿಂದ ಭಾರತದ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿಕೊಂಡೆ. ಆಗ ಅವರು ಹೇಳಿದ ಒಂದು ಮಾತು ನಮ್ಮ ಆಶ್ಚರ್ಯಕ್ಕೆ ಕಾರಣವಾಯಿತು. ಅದು: "ಭಾರತ ಒಂದು ಬೌದ್ಧಿಕ ಶಕ್ತಿ ಕೇಂದ್ರ " ಎಂಬ ಮಾತು. ಗೆಳೆಯರಾದ ರಾಜಾರಾಂ ತಲ್ಲೂರು ಅವರು ಅನುವಾದ ಮಾಡಿದ ಈ ಪುಸ್ತಕ, ಅವರ ಮಾತಿಗೆ ಒಂದು ಜೀವಂತ ಸಾಕ್ಷಿ.ಅವರ ಭಾರತದ ಭೇಟಿಯಲ್ಲಿ ನಮ್ಮ ಪ್ರಧಾನಿ ಡಾ.ಮನಮೋಹನ್ ಅವರನ್ನು, ಮತ್ತು ಇತರರನ್ನು ಭೇಟಿ ಮಾಡಿದ ನೆನಪು ಮಾಡಿಕೊಂಡು, ಉತ್ಸಾಹದಿಂದ ಒಂದು ಗಂಟೆಗೂ ಹೆಚ್ಚುಕಾಲ, ನಮ್ಮ ಜೊತೆಗೆ ನಿರ್ಭಿಡೆಯಿಂದ ಮಾತನಾಡಿದರು. ಅದರ ವಿವರಗಳನ್ನು ಬೇರೊಂದು ಕಡೆ ದಾಖಲಿಸಿರುವೆ. ನಮ್ಮ ದೇಶದ ಆರ್ಥಿಕ ಪ್ರಗತಿಯ ಕುರಿತು, ನಮಗಿಂತ ಹೆಚ್ಚು ಉತ್ಸಾಹದಿಂದ ಅವರು ಮಾತನಾಡಿದ್ದು ನೋಡಿ, ಅಮೇರಿಕಾಗೆ ನಮ್ಮ ಬಗ್ಗೆ ಕೀಳಂದಾಜು ಇದೆ ಎಂದುಕೊಂಡಿದ್ದ ನಮಗೆ, ನಮ್ಮ ತಪ್ಪು ತಿಳುವಳಿಕೆಯನ್ನು ತಿದ್ದಿಕೊಳ್ಳುವಂತೆ ಮಾಡಿದರು. ಅಲ್ಲದೆ ಸಹಜವಾಗಿಯೆ ಅವರ ಮಾತುಗಳು, ನಮ್ಮ ದೇಶದ ಬಗ್ಗೆ ಅಭಿಮಾನ ಪಟ್ಟುಕೊಳ್ಳುವಂತೆ ಮಾಡಿತು.

ಈ ಪುಸ್ತಕ ಆಗ ಅವರಿಂದ ಪಡೆದ ಒಳನೋಟವನ್ನು, ವಿಸ್ತಾರವಾಗಿ ರುಜುವಾತು ಪಡಿಸಿತು. ನಾನು 1979 ರಲ್ಲಿ ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಕನ್ನಡ ಸ್ನಾತಕೋತ್ತರ ಪದವಿಗೆ ಸೇರಿದೆ. ಅಲ್ಲಿಗೆ ನನ್ನ ಅರ್ಥಶಾಸ್ತ್ರದ ನಂಟು ತಪ್ಪಿತ.

ಅದೇ ವರ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಮನಮೋಹನ್ ಸಿಂಗ್ ಅವರ ಕರೆಯ ಮೇರೆಗೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅಮೇರಿಕಾದಲ್ಲಿ, ಆರ್ಥಿಕ ತಜ್ಞರಾಗಿ ಮಾಡುತ್ತಿದ್ದ ಕೆಲಸಕ್ಕೆ ರಾಜಿನಾಮೆ ನೀಡಿ, ಭಾರತಕ್ಕೆ ಬಂದರು. ಅಲ್ಲದೆ ಸರ್ಕಾರದ ಕೆಲಸಕ್ಕೆ ಸೇರಲು ಅವಶ್ಯಕತೆ ಇದ್ದ, ನಾಗರಿಕ ಸೇವಾ ಪರೀಕ್ಷೆ ಬರೆದು ತೇರ್ಗಡೆ ಹೊಂದಿದರು. ಆ ಮೂಲಕ ಭಾರತ ಸರ್ಕಾರದ ಅರ್ಥಿಕ ಸಚಿವಾಲಯದ ಭಾಗವಾದರು. ಇವರು ಸೇರಿದಾಗ ಮನಮೋಹನ್ ಸಿಂಗ್ ಅವರು ಇವರಿಗೆ "ಅಮೇರಿಕಾದಲ್ಲಿ ಹೆಚ್ಚಿನ ಸಂಬಳದ ಹುದ್ದೆಯನ್ನು ಬಿಟ್ಟು, ಇಲ್ಲಿಗೆ ಬಂದು ಕಡಿಮೆ ಸಂಬಳದ ಕೆಲಸಕ್ಕೆ ಸೇರಿದ್ದಕ್ಕೆ ಪಶ್ಚಾತ್ತಾಪ ಇಲ್ಲ ತಾನೇ " ಎಂದು ಕೇಳಿದರು. "ನಿಮ್ಮ ಜೊತೆ ಕೆಲಸ ಮಾಡುವ ಭಾಗ್ಯದ ಮುಂದೆ ಅದು ಕ್ಷುಲ್ಲಕ" ಎಂದು ಉತ್ತರ ನೀಡಿದರು. ಮುಂದೆ ಮೂರೂವರೆ ದಶಕಗಳ ಕಾಲ ಅವರ ಜೊತೆ ಕೆಲಸ ಮಾಡಿದ ಮೇಲೆ ,ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇವರು ರಾಜೀನಾಮೆ ಕೊಡಲು ಅವರ ಬಳಿಗೆ ಹೋದಾಗ "ಇಬ್ಬರಿಗೂ ಅದು ಭಾವುಕ ಕ್ಷಣಗಳಾಗಿತ್ತು" ಎಂದು ನೆನಪು ಮಾಡಿಕೊಂಡು, ಅಮೇರಿಕಾ ಬಿಟ್ಟು ಬಂದುದಕ್ಕೆ ಈಗಲೂ ನನಗೆ ಪಶ್ಚಾತ್ತಾಪ ಇಲ್ಲ " ಎಂದು ದಾಖಲಿಸಿದ್ದಾರೆ. ಪಶ್ಚಿಮ ಮುಖಿಯಾಗಿರುವ ಇಂದಿನ ನಮ್ಮ ಯುವ ಜನಾಂಗಕ್ಕೆ ಇದೊಂದು ಮಾದರಿಯೇ ಸರಿ.

ಸಾಮಾನ್ಯವಾಗಿ ಸಿಖ್ ಜನಾಂಗದ ದೇಶ ಭಕ್ತಿಯನ್ನು ಅವರು ಧೀರ ಯೋಧರಾಗಿ, ಭಾರತೀಯ ಸೈನ್ಯದಲ್ಲಿ ಹೋರಾಡುವವರು ಎಂಬ ಕಲ್ಪನೆ ಎಲ್ಲರಿಗೂ ಇದೆ. ಅದು ಇಂದಿಗೂ ನಿಜ ಕೂಡ ಹೌದು. ಆದರೆ ಅದಕ್ಕೆ ಅಪವಾದಗಳು ಇವೆ. ಆಡಳಿತಾತ್ಮಕ ಸೇವೆಯ ಮೂಲಕ ಕೂಡ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಕಾರ್ಯದಲ್ಲಿ ತೊಡಗುವದು, ಕೂಡ ದೇಶ ಭಕ್ತಿಯೇ ಎನ್ನುವುದಕ್ಕೆ ನಿದರ್ಶನವಾಗಿ ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಕರ್ನಾಟಕ ಸರ್ಕಾರದ ಆಡಳಿತ ಅಧಿಕಾರಿಯಾಗಿದ್ದ ಚಿರಂಜೀವಿ ಸಿಂಗ್ ಮುಂತಾದವರು ಇದ್ದಾರೆ.

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಈ ಎಂ.ಡಾಕುಮೆಂಟ್ ಮೇಲೆ ಉಲ್ಲೇಖಿಸಿದ ಅಭಿವೃದ್ಧಿ ಪಥದಲ್ಲಿ ಭಾರತವನ್ನು ಮುನ್ನಡೆಸಿ, ಅದಕ್ಕೆ ಇದ್ದ ಹಿಂದುಳಿದ ದೇಶ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಿ, ಅಭಿವೃದ್ಧಿ ಶೀಲ ದೇಶವನ್ನಾಗಿ. ಮಾರ್ಪಡಿಸುವಲ್ಲಿ ಇವರು ಮತ್ತು ಇವರ ಸಹೋದ್ಯೋಗಿಗಳು ಎಸಗಿದ ಅಪೂರ್ವ ಸಾಹಸಗಾಥೆಯಾಗಿದೆ.

ಈ ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನೋಡಬಹುದು. 1: ವೈಯಕ್ತಿಕ 2: ಆರ್ಥಿಕ. 3. ಆಡಳಿತಾಧಿಕಾರಿಯಾಗಿ. 4: ರಾಜಕೀಯ

1: ವೈಯಕ್ತಿಕ: ಇದರಲ್ಲಿ ಅವರ ಕೌಟುಂಬಿಕ ಹಿನ್ನೆಲೆ, ಅವರ ವಿದ್ಯಾಭ್ಯಾಸ, ಅವರು ಮತ್ತು ಈಷರ್ ಅವರ ಪ್ರೇಮ, ಅಮೇರಿಕಾದಲ್ಲಿ ಅವರ ಜೀವನ, ಭಾರತಕ್ಕೆ ಮರಳಿದ ಮೇಲೆ ಅವರ ಕುಟುಂಬದ ಬೆಳವಣಿಗೆ, ಬೌದ್ಧಿಕ ಸಂಗಾತಿಯಾಗಿ ಈಷರ್ ಅವರ ಪಾತ್ರಗಳನ್ನು ಒಳಗೊಂಡ ಒಂದು ಸಾಹಸಗಾಥೆಯಾಗಿದೆ. ಇವರ ತಂದೆ ಸಿಖ್ ಆದರೆ ತಾಯಿ ಹಿಂದು. ಬಹುಶಃ ಇದೇ ಇವರಿಗೆ ಬೆಂಗಾಲಿ ಮೂಲದ ಈಷರ್ ಅವರನ್ನು ಪ್ರೀತಿಸಿ ಮದುವೆಯಾಗಲು ಪ್ರೇರಣೆ ನೀಡಿತು. ಮುಂದೆ ಬೆಂಗಾಲ್ ಗೆ ಹೋದಾಗ ಅಲ್ಲಿ ಈಷರ್ ರವೀಂದ್ರ ನಾಥ್ ಠಾಕೂರರ" ಏಕ್ ಲಾ ಚಲೋ" ಹಾಡು ಹಾಡಿ ಸಂಭ್ರಮಿಸಲು ಕಾರಣವಾಯಿತು. ತಂದೆ ತಾಯಿಗಳ ಅಂತರ ಧರ್ಮೀಯ ವಿವಾಹ, ಇಂದಿರಾ ಗಾಂಧಿಯ ಕೊಲೆಯ ನಂತರ ಹಿಂದೂಗಳು ಸಿಖ್ ಹತ್ಯಾಕಾಂಡದಲ್ಲಿ, ಹಿಂದೂ ಆದ ಅವರ ತಾಯಿಯನ್ನು ಕಾಪಾಡಿದರೆ, ಅವರ ತಂದೆಯನ್ನು ಇವರ ವಿನಂತಿಯ ಮೇಲೆ ಅರುಣ್ ಶೌರಿ ಅವರು, ತಮ್ಮ ಕಾರಿನಲ್ಲಿ ಬಚ್ಚಿಟ್ಟುಕೊಂಡು ಸುರಕ್ಷಿತವಾಗಿ ತಂದು ಇವರ ಬಳಿ ಬಿಡಬೇಕಾಯಿತು. ಇಷ್ಟಾದರೂ ಇವರಿಗೆ ಹಿಂದೂಗಳ ಮೇಲೆ ಯಾವುದೇ ಅಸಮಾಧಾನ ಇಲ್ಲದಿರುವುದು, ಅವರ ಹಿಂದೂ ಸಹೋದ್ಯೋಗಿಗಳ ಜೊತೆಗಿನ ಸೌಹಾರ್ದತೆಯ ಸಂಬಂಧದ ದ್ಯೋತಕವಾಗಿದೆ. ಅಲ್ಲದೆ ತಮ್ಮ ತಂದೆ ತಾಯಿಗಳ ಅಂತರ್ ಧರ್ಮೀಯ ವಿವಾಹ, ತಮ್ಮ ಪ್ರೇಮ ವಿವಾಹ ಕೂಡ ಕಾರಣವಾಗಿರಬಹುದು. ಬೌದ್ದಿಕ ಸಂಗಾತಿಯಾದ ಅವರು ಕೂಡ ಪ್ರಸಿದ್ಧ ಅರ್ಥಶಾಸ್ತ್ರಜ್ಞೆಯಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಲೇಖಕಿಯಾಗಿ ಈಷರ್ ಭಾರತದ ಅಭಿವೃದ್ಧಿಯ ಪಥದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಅಲ್ಲದೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಅಂತರರಾಷ್ಟ್ರೀಯ ಅವಕಾಶಗಳನ್ನು, ಒಪ್ಪಿಕೊಂಡು ಬೆಳೆಯಲು ಸಹಕರಿಸುತ್ತಾರೆ. ಸತಿಪತಿಗಳೊಂದಾಗಿ ಭಾರತದ ಯಶೋಗಾಥೆಯಲ್ಲಿ ಪಾಲ್ಗೊಂಡ ಅಪೂರ್ವ ಜೋಡಿಗಳಾಗಿ ಕಂಗೊಳಿಸಿದ್ದಾರೆ. ಇಂದು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಅಜ್ಜನಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ಅದರ ಸಿಂಹಪಾಲು ಈಷರ್ ಅವರಿಗೆ ಸೇರಿದ್ದು.ಅಂತೆಯೇ ಈ ಕೃತಿಯನ್ನು ಅವರಿಗೆ ಅರ್ಪಿಸಿರುವುದು ಯಥೋಚಿತವಾಗಿದೆ.

2. ಆರ್ಥಿಕ: ಭಾರತ ಪ್ರಪಂಚದ ಆರ್ಥಿಕ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡುವಲ್ಲಿ, ಮಾಂಟೆಕ್ ಸಿಂಗ್ ಮತ್ತು ಅವರ ಸಂಗಡಿಗರು ವಹಿಸಿದ ಪಾತ್ರ ಅಪೂರ್ವವಾದದ್ದು. ಸ್ವಾತಂತ್ರ್ಯಾ ನಂತರದ ಮೂರು ದಶಕಗಳ ನಂತರ, ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆ ಆದ ಇವರು, ತಮ್ಮ ಸ್ವೋಪಜ್ಞವಾದ ಚಿಂತನೆ ಮತ್ತು ಕಾರ್ಯಸೂಚಿಗಳ ಮೂಲಕ ಎಲ್ಲರ ಅದರಲ್ಲೂ ಆಗ ವಿತ್ತ ಸಚಿವರಾಗಿದ್ದವರ ಗಮನ ಸೆಳೆದರು. ಭಾರತ ಎದುರಿಸುತ್ತಿರುವ ವಿವಿಧ ಆರ್ಥಿಕ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಗುರುತಿಸಿ, ಅದಕ್ಕೆ ಪರ್ಯಾಯಗಳನ್ನು ಕಂಡುಕೊಂಡು, ಲೇಖಕರ ಮಾತಿನಲ್ಲಿ ಹೇಳುವುದಾದರೆ ನೀತ್ಯಾತ್ಮಕವಾದ ನಿರ್ದಿಷ್ಟ ಸಲಹೆಗಳನ್ನು ವಿವರವಾದ ಟಿಪ್ಪಣಿ ಮೂಲಕ, ತಮ್ಮ ಸಹೋದ್ಯೋಗಿಗಳನ್ನು ಚರ್ಚಿಸಿ ಸಿದ್ಧಪಡಿಸಿ ಸಚಿವರಿಗೆ ಸಲ್ಲಿಸುತ್ತಿದ್ದರೆ. ಯಾವ ಯಾವ ಕ್ಷೇತ್ರದಲ್ಲಿ ,ತಕ್ಷಣ ಯಾವ ಕ್ರಮ ಕೈಗೊಂಡರೆ ಸೂಕ್ತ, ಎಂದು ಇದರಿಂದ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಕೈಗಾರಿಕೆ, ಕೃಷಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಅದಕ್ಕೆ ಬೇಕಾದ ಆರ್ಥಿಕ ಒತ್ತಾಸೆಯನ್ನು ನೀಡುವುದು. ಹಾಗೂ ಸಂಪನ್ಮೂಲಗಳನ್ನು ಕಂಡುಕೊಳ್ಳಲು ಯೋಜನೆಗಳನ್ನು ರೂಪಿಸುವುದು. ಕೊರತೆ ಬಡ್ಜೆಟ್ ಹೆಚ್ಚಾಗದಂತೆ ನೋಡಿ ಕೊಳ್ಳುವುದು, ಇದಕ್ಕೆ ವಿದೇಶಿ ಸಾಲವನ್ನು ಆದಷ್ಟು ಕಡಿಮೆ ಮಾಡಿ, ಸ್ವಾವಲಂಬನೆಯ ದಾರಿಯಲ್ಲಿ ಸಾಗುವುದು. ರಫ್ತನ್ನು ಹೆಚ್ಚು ಮಾಡಿ, ಆಮದನ್ನು ಕಡಿಮೆ ಮಾಡುವುದು. ಅದಕ್ಕೆ ಇರುವ ಸರ್ಕಾರದ ಅಡೆತಡೆಗಳನ್ನು ತೆಗೆದು ಹಾಕಿ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವುದು. ಮತ್ತು ಸುಂಕಗಳನ್ನು ಕಡಿಮೆ ಮಾಡುವುದು. ಇದು ಉದ್ಯಮಿಗಳಲ್ಲಿ ಪೈಪೋಟಿಯನ್ನು ಹೆಚ್ಚು ಮಾಡುತ್ತದೆ. ಇದಕ್ಕೆ ಮುಕ್ತ ಮಾರುಕಟ್ಟೆ ಅಗತ್ಯ. ಇದರಿಂದ ಗ್ರಾಹಕರಿಗೆ ಕೂಡ ಪೈಪೋಟಿಯ ದರದಲ್ಲಿ ವಸ್ತುಗಳು ಲಭ್ಯವಾಗುತ್ತದೆ.

ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಪರವಾನಗಿ ಕೊಡುವಾಗ, ತಮಗೆ ಬೇಕಾದಂತೆ ಕೊಡುವ ಅಧಿಕಾರಿಗಳ ಭ್ರಷ್ಟಾಚಾರವನ್ನು ನಿಯಂತ್ರಿಸಲು, ಅವುಗಳನ್ನು ಪಾರದರ್ಶಕವಾಗಿ ಮಾಡಲು ಹರಾಜು ಹಾಕಿ, ಹೆಚ್ಚಿನ ಮೊಬಲಗನ್ನು ಪಾವತಿಸುವರಿಗೆ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಮತ್ತು,ಅವುಗಳಿಂದ ಹೊರಡುವ ತ್ಯಾಜ್ಯಗಳನ್ನು ನದಿಗೆ, ಸುರಿದು ಜಲ ವಾಯುಮಾಲಿನ್ಯಗಳಿಗೆ ತಕ್ಕ ಪರಿಹಾರವನ್ನು ಕೊಡುವುದನ್ನು, ಕರಾರಿನ ಭಾಗವನ್ನಾಗಿ ಮಾಡುವುದಲ್ಲದೆ, ಸ್ಥಳೀಯರಿಗೆ ಸಾಧ್ಯವಾದಷ್ಟು ಉದ್ಯೋಗ ಒದಗಿಸುವದು. ಒತ್ತುವರಿ ಜಮೀನಿಗೆ ಪರ್ಯಾಯ ಸ್ಥಳಗಳನ್ನು ನೀಡುವುದು, ಇತ್ಯಾದಿಗಳ ಕಡೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಅದರಂತೆ ಕೃಷಿಗೆ ಸಂಬಂಧಿಸಿದಂತೆ ನೀಡುವ ಉಚಿತ ವಿದ್ಯುತ್ ಗೆ ಬದಲಾಗಿ ಅವರ ಉತ್ಪನ್ನಗಳಿಗೆ ತಕ್ಕ ನ್ಯಾಯ ಬೆಲೆಯನ್ನು ನಿಗದಿ ಪಡಿಸಿ, ಸರಕಾರವೇ ನೇರವಾಗಿ ಅವರಿಂದ ಕೊಳ್ಳುವ ವ್ಯವಸ್ಥೆ ಮಾಡುವುದು. ಅದನ್ನು ಸಂಗ್ರಹಿಸಿಡಲು ದಾಸ್ತಾನು ಮಳಿಗೆಗಳ ನಿರ್ಮಾಣ, ನ್ಯಾಯ ಬೆಲೆ ಅಂಗಡಿಗಳ ಮೂಲಕ ಅದನ್ನು ಅರ್ಹರಿಗೆ ವಿತರಿಸುವ ವ್ಯವಸ್ಥೆ.

ಅಲ್ಲದೆ ಕೃಷಿಯೇತರ ಗೃಹ ಕೈಗಾರಿಕೆಗಳಿಗೆ ಅವಶ್ಯವಾದ ಬಂಡವಾಳವನ್ನು, ಸುಲಭ ದರಗಳಲ್ಲಿ ಬ್ಯಾಂಕ್ ಗಳು ಸಾಲ ನೀಡುವಂತೆ ಮಾಡುವುದು.

ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವಾಗ, ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಆಗುವ ಅರಣ್ಯನಾಶವನ್ನು ಆದಷ್ಟು ತಪ್ಪಿಸುವುದು, ವಿದ್ಯುತ್ ಸ್ಥಾವರ ಸ್ಥಾಪನೆಗಳ ಸಂದರ್ಭದಲ್ಲಿ, ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಬೇಕು. ಎಂದು ಎನ್ರಾನ್ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದ ಜನರ ಪ್ರತಿಭಟನೆಯನ್ನು ಉದಾಹರಣೆ ನೀಡಲಾಗಿದೆ.

ಆದ್ದರಿಂದ ಹೆಚ್ಚು ಸುಸ್ತಿರ ಅಭಿವೃದ್ಧಿ ಕಾರ್ಯಗಳಿಗೆ, ಪ್ರೋತ್ಸಾಹ ನೀಡುವುದು ಸೂಕ್ತ ಎಂದಿದ್ದಾರೆ.

ಮೇಲೆ ಸೂಚಿಸಿದ ಅಭಿವೃದ್ಧಿ ಕಾರ್ಯಗಳ ಫಲವಾಗಿ, ವಿವಿಧ ವರ್ಷಗಳ ಉಂಟಾದ ಏರಿಕೆಗೆ ಅವರು ಕೊಟ್ಟ ಕೋಷ್ಟಕಗಳು ಸಾಕ್ಷಿಯಾಗಿವೆ.

90 ರ ದಶಕದಲ್ಲಿ ಪಿ. ವಿ.ನರಸಿಂಹರಾವ್ ಅವರ ಕಾಲದಲ್ಲಿ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣಗಳನ್ನು ಪರಿಚಯಿಸಿದರು. ಇದಕ್ಕೆ ಮುಕ್ತ ಮಾರುಕಟ್ಟೆ, ವಿದೇಶೀ ನೇರ ಬಂಡವಾಳ ಗಳನ್ನು ಆಹ್ವಾನಿಸಿದರು. ಅದರ ಫಲವಾಗಿ ವಿದೇಶಿಯರು ಇಲ್ಲಿ ಕಾರ್ಖಾನೆಗಳ ಸ್ಥಾಪನೆ ಮಾಡಲು ಅವಕಾಶ ಕಲ್ಪಿಸಲಾಯಿತು. ಖಾಸಗೀಕರಣದ ಫಲವಾಗಿ, ಸಾರ್ವಜನಿಕ ಮತ್ತು ಖಾಸಗಿ ಜಂಟಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಿತು. ವಿದೇಶಗಳಿಗೆ ತೆರಳಿ ಅಲ್ಲಿನ ಉದ್ದಿಮೆದಾರರ ಸಂಗಡ ಮಾತನಾಡಿ ಅವರ ಮನವೊಲಿಸಿ, ಅವರು ಭಾರತದಲ್ಲಿ ತಮ್ಮ ಉದ್ದಿಮೆಗಳನ್ನು ತೆರೆಯಲು, ಇಲ್ಲವೆ ಬಂಡವಾಳ ಹೂಡಿಕೆಗೆ ಹೆದ್ದಾರಿ ತೆರೆಯಲಾಯಿತು.

ಪ್ರತಿಪಕ್ಷಗಳು ಮೊದಲು ಇದನ್ನು ವಿರುದ್ಧ ಪ್ರತಿಭಟನೆ ನಡೆಸಿದರು, ಅವರು ಆಡಳಿತದ ಚುಕ್ಕಾಣಿ ಹಿಡಿದಾಗ, ಇದನ್ನೇ ಮುಂದುವರೆಸಿದರು. ಇದು ಅವರ ಇಬ್ಬಗೆಯ ನೀತಿಗೆ ಸಾಕ್ಷಿ. ಅಲ್ಲದೆ ಇತರ ಜನಕಲ್ಯಾಣ ಯೋಜನೆಗಳು - ನರೇಗಾವನ್ನು ಮನರೇಗಾ ಎಂದು ಸ್ವಚ್ಛತೆಯನ್ನು ಸ್ವಚ್ಚತಾ ಅಭಿಯಾನ ಎಂದು ಬೇರೆ ಹೆಸರುಗಳಿಂದ ಅವನ್ನೇ ಮುಂದುವರಿಸಿದರು.

ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಬೇಕಾದ ಸಂಪನ್ಮೂಲಗಳನ್ನು ಸಂಗ್ರಹಿಸಲು ಎರಡು ದಾರಿಗಳಿವೆ. ಒಂದು: ತೆರಿಗೆ ಸಂಗ್ರಹ: ಇದರಲ್ಲಿ ಎರಡು ವಿಧ: ಪ್ರತ್ಯಕ್ಷ ತೆರಿಗೆ: ಪ್ರತ್ಯಕ್ಷವಾಗಿ ತಲೆಗಂದಾಯ ಹೇರಿಕೆ ಎರಡು: ಪರೋಕ್ಷ ತೆರಿಗೆ: ಉತ್ಪಾದನಾ ಸರಕುಗಳ ಮೇಲೆ ತೆರಿಗೆ. ಮೊದಲನೆಯ ತೆರಿಗೆ ವರಮಾನದ ಆಧಾರದ ಮೇಲೆ ವಿಧಿಸುವ ತೆರಿಗೆ. ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹೇರಿ, ಕಡಿಮೆ ಆದಾಯ ಇರುವವರಿಗೆ ಕಡಿಮೆ ತೆರಿಗೆ ಹಾಕುವುದು. ಪರೋಕ್ಷ ತೆರಿಗೆಯಲ್ಲಿ ಕೂಡ ಶ್ರೀಮಂತರು ಬಳಸುವ ಸಾಮಾಗ್ರಿಗಳ ಮೇಲೆ ಹೆಚ್ಚಿನ ತೆರಿಗೆ ವಸೂಲಿ ಮಾಡಿ, ( ಮಧ್ಯ, ಕಾರು. ಇತ್ಯಾದಿ ಭೋಗ ಸಾಮಗ್ರಿಗಳು ) ಅದನ್ನು ಸಾಮಾನ್ಯರು ಬಳಸುವ ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ಕುಗ್ಗಿಸುವ ಪ್ರಯತ್ನ. ಇದಕ್ಕೆ ವೈಯಕ್ತಿಕವಾಗಿ ಇವರು ವಿರುದ್ಧ ಇದ್ದರೂ ಎಲ್ಲಾ ಅರ್ಥ ಮಂತ್ರಿಗಳು, ಸಾಮಾನ್ಯವಾಗಿ ಇದನ್ನು ಅನುಸರಿಸುತ್ತಿದ್ದರು. ಇನ್ನೊಂದು ಆದಾಯ ಮೂಲವೆಂದರೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಅವರ ಮೇಲೆ ತೆರಿಗೆ ಹೇರದೆ, ಸರಕು ಸಾಗಾಣಿಕೆಯ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು. ಮಮತಾ ಬ್ಯಾನರ್ಜಿ ಮಂತ್ರಿಯಾಗಿದ್ದಾಗ ಇದನ್ನು ಜಾರಿಗೆ ತಂದರು.

ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರಿಂದ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾದ್ಯವಾಯಿತು. ಆಡಳಿತದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಪರಿಚಯಿಸಿ, ಅದಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಸ್ವಾಯತ್ತ ಅಧಿಕಾರ ನೀಡಲಾಯಿತು. ಇದರಿಂದಾಗಿ ಅವರೇ ತಮ್ಮ ಗ್ರಾಮದ ಅಗತ್ಯಗಳಿಗೆ ಅನುಗುಣವಾಗಿ, ಸಂಪನ್ಮೂಲಗಳನ್ನು ಸಂಗ್ರಹಿಸಿ, ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಯಿತು.

ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಸಹಯೋಗದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲು, ಮತ್ತು ಅದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಎರಡೂ ಹಂಚಿಕೊಂಡು ಮಾಡಲು, ಹಲವು ಬಾರಿ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಅಧಿಕಾರಿಗಳ ಸಭೆಗಳನ್ನು ದೆಹಲಿಯಲ್ಲಿ ಏರ್ಪಡಿಸಿದ್ದರು. ಅವುಗಳಲ್ಲಿ ಲೇಖಕರು ಪಾಲ್ಗೊಂಡು ರಾಜ್ಯಗಳ ಆವಶ್ಯಕತೆಗಳನ್ನು ಮನಗಾಣಲು ಸಾಧ್ಯವಾಯಿತು.ಅಂತಹ ಹಲವು ಸಭೆಗಳ ನಡಾವಳಿಗಳನ್ನು ಲೇಖಕರು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಅದರಲ್ಲಿನ ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭೇಟಿಗಳು ಗಮನಾರ್ಹ. ಅವರ ಸಮಾನ ಆಕ್ಷೇಪಣೆ "ನಮ್ಮ ರಾಜ್ಯದ ಸಂಪನ್ಮೂಲಗಳನ್ನು, ನಮ್ಮ ರಾಜ್ಯದ ಯೋಜನೆಗಳಿಗೆ ಖರ್ಚು ಮಾಡಲು ದೆಹಲಿಗೆ ಯಾಕೆ ಬರಬೇಕು" ಎಂದು. ಅದಕ್ಕೆ ಉತ್ತರ ಕೊಡುವಾಗ ಇವರ ಹಾಸ್ಯ ಪ್ರಜ್ಞೆ ಎದ್ದು ಕಾಣುತ್ತದೆ.

ಸರ್ಕಾರದ ಯೋಜನೆಗಳ ಜನರಿಗೆ ತಲುಪಿಸುವ ಉದ್ದೇಶದಿಂದ, ಎಲ್ಲರಿಗೂ ಒಂದು ಗುರುತು ಚೀಟಿಯನ್ನು ಮಾಡಲು ಅದಕ್ಕೆ ನಾರಾಯಣ ಮೂರ್ತಿ ಅವರ ಸಹೋದ್ಯೋಗಿಗಳಾದ ನಂದನ್ ನೀಲಕೇಣಿ ಅವರನ್ನು ಆಹ್ವಾನಿಸಿದಾಗ, ಅವರು ತಮಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತರೆ ಮಾತ್ರ, ತಾವು ಇದನ್ನು ಒಪ್ಪಿಕೊಳ್ಳುವುದಾಗಿ ಷರತ್ತು ಹಾಕುತ್ತಾರೆ. ಅದನ್ನು ಒಪ್ಪಿಕೊಂಡು ಅವರು ಬಂದು ಎಲ್ಲರಿಗೂ ಆಗುವಂತೆ ಆಧಾರ ಕಾರ್ಡ್ ನ್ನು ಪರಿಚಯಿಸುತ್ತಾರೆ. ಇದರಿಂದಾಗಿ ಹೆಚ್ಚು ಜನರಿಗೆ ಅವರಿಗೆ ಅವಶ್ಯವಾದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿದೆ.

ಹೀಗೆ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು, ಅದಕ್ಕೆ ಅವಶ್ಯಕತೆ ಇರುವ ತಜ್ಞರ ಸಮಿತಿಯೊಂದನ್ನು ರಚಿಸಿ ಅವರ ಮೂಲಕ ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲು, ಸಲಹೆಗಳನ್ನು ಇವರು ನೀಡಿ, ಕಾರ್ಯಗಳನ್ನು ಜಾರಿಗೆ ತರಲು ಅನುವು ಮಾಡಿಕೊಡುತ್ತಾರೆ.

ಈ ಎಲ್ಲ ಸಾಮೂಹಿಕ ವ್ಯವಸ್ಥೆ ಪ್ರಯತ್ನಗಳ ಫಲವಾಗಿ ಅಭಿವೃದ್ಧಿ ಕಾರ್ಯಗಳು ಏರುಗತಿಯಲ್ಲಿ ಸಾಗಲು ಸಾಧ್ಯವಾಯಿತು.ಒಂದೆರಡು ಸಲ ನೈಸರ್ಗಿಕ ಕಾರಣಗಳಿಗಾಗಿ ಇಳಿಕೆಯನ್ನು ಕಂಡರು.

2004ರ ವರೆಗೆ ಹೀಗೆ ಮೂರುವರೆ ದಶಕಗಳ ಕಾಲ ಭಾರತದ ಆರ್ಥಿಕ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಿದ, ಅವುಗಳ ಜಾರಿಯನ್ನು ಪ್ರತ್ಯಕ್ಷವಾಗಿ ನೋಡಲು, ಅದರ ಫಲಗಳಿಗೆ ಕೂಡ ಸಾಕ್ಷಿಯಾದರು. ಇದೆಲ್ಲ ಸಕ್ರಿಯವಾಗಿ ಇವರು ಭಾಗವಹಿಸಿದ್ದ ಕುರಿತು ತಮ್ಮ ಆತ್ಮತೃಪ್ತಿಯನ್ನು, ಇದರಲ್ಲಿ ತಮಗೆ ದೊರೆತ ಹಲವಾರು ಬುದ್ಧಿಜೀವಿಗಳ ನೆರವನ್ನು, ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಅವರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ತಾವು ಪಡೆದ ಅನುಭವ ಅವಿಸ್ಮರಣೀಯ ಎಂದು ದಾಖಲಿಸಿದ್ದಾರೆ.

3. ಆಡಳಿತ ಅಧಿಕಾರಿಯಾಗಿ ಆರ್ಥಿಕ ಸಚಿವಾಲಯದ ವಿವಿಧ ವಿಭಾಗಗಳಲ್ಲಿ, ಕಾರ್ಯ ನಿರ್ವಹಿಸುವ ಅವಕಾಶ ದೊರೆಯಿತು. ತಮ್ಮ ಮತ್ತು ತಮ್ಮ ಸಹೋದ್ಯೋಗಿಗಳ ಜೊತೆ ಜೊತೆಗಿನ ಹಲವು ಭಿನ್ನ ಅಭಿಪ್ರಾಯಗಳಿಂದಲೂ ತಾನು ಕಲಿಯಲು ಸಾಧ್ಯವಾಯಿತು, ಎಂದು ನೆನಪು ಮಾಡಿಕೊಂಡಿದ್ದಾರೆ. ಅಂತಿಮವಾಗಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ಕೂಡ ದೊರೆತದ್ದು, ಅವರಿಗೆ ವಿತ್ತ ಸಚಿವರ ಜೊತೆ ಜೊತೆಗೆ, ಮತ್ತು ಹಲವು ಸಲ ನೇರವಾಗಿ ಪ್ರಧಾನಿಗಳ ಕಾರ್ಯಾಲಯದಲ್ಲಿದ್ದಾಗ, ಜೊತೆ ಜೊತೆಗೆ ಮುಖಾಮುಖಿಯಾಗುವ ಅವಕಾಶ ದೊರೆಯಿತು. ಇದರಿಂದ ಬಡ್ಜೆಟ್ ತಯಾರಿಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಅದಕ್ಕೆ ಬೇಕಾದ ದೀರ್ಘ ಟಿಪ್ಪಣಿಗಳನ್ನು ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಿ ಸಿದ್ಧ ಪಡಿಸಿಕೊಡುತ್ತಿದ್ದರು. ಅದರ ಅಂತಿಮ ರೂಪವನ್ನೇ ಸಚಿವರು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದರು. ಇದು ಅವರ ಕಾರ್ಯದ ಮಹತ್ವಕ್ಕೆ ಸಾಕ್ಷಿ.

ನಿವೃತ್ತರಾದ ನಂತರ ಕೂಡ ,ಹೊಸ ಸರ್ಕಾರದ ಯೋಜನೆಗಳ ಕುರಿತು ವಸ್ತುನಿಷ್ಠವಾಗಿ ಬರೆದು, ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿರುವುದು, ಅವರ ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

4: ರಾಜಕೀಯ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ಅವರ ಮೊದಲ ಒಲವು, ತಮ್ಮನ್ನು ಅಧಿಕಾರಕ್ಕೆ ತಂದ ಜನರ ಮತಗಳನ್ನು, ಸೆಳೆಯಲು ಉಳಿಸಿಕೊಳ್ಳಲು ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು, ಜಾರಿಗೆ ತರಲು ಯತ್ನಿಸುವುದು. ಇದಕ್ಕೆ ಜನರಿಗೆ ಅಂದರೆ ಫಲಾನುಭವಿಗಳಿಗೆ, ತಮ್ಮ ಅಭಿವೃದ್ಧಿ ಕಾರ್ಯಗಳು ನೇರವಾಗಿ ತಲುಪುತ್ತಿವೆ, ಎಂದು ತಿಳಿದುಕೊಳ್ಳಲು ಇದ್ದ ಏಕೈಕ ಮಾರ್ಗ ಎಂದರೆ, ಅವರ ಬಳಿಗೆ ನೇರವಾಗಿ ಹೋಗಿ ಪ್ರತ್ಯಕ್ಷವಾಗಿ ಅದನ್ನು ಪರಿಶೀಲಿಸುವುದು. ಇದಕ್ಕಾಗಿ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಆದಾಗ ಕೈಗೊಂಡ ಮೊದಲ ಕಾರ್ಯವೆಂದರೆ, ಹಿಂದುಳಿದ ರಾಜ್ಯವಾದ ಒರಿಸ್ಸಾದ ಒಂದು ಕುಗ್ರಾಮಕ್ಕೆ ಭೇಟಿ ನೀಡಿದ್ದು. ಆಗ ಆ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದ್ದರಿಂದ, ಇವರು ಎಲಿ ಕಾಪ್ಟರ್ ನಲ್ಲಿ ಅಲ್ಲಿಗೆ ಪ್ರಯಾಣ ಮಾಡಿ ಅಲ್ಲಿ ಇಳಿದಾಗ ಕಂಡದ್ದು, ಆ ಜನರ ಕಡು ಬಡತನ. ಸರ್ಕಾರ ಅವರಿಗಾಗಿ ಖರ್ಚು ಮಾಡುವ ಹಣದ ಕಾಲು ಭಾಗದಷ್ಟು ಕೂಡ ಅವರಿಗೆ ಅದು ತಲುಪುತ್ತಿಲ್ಲ, ಅದರ ಮುಕ್ಕಾಲು ಭಾಗ ಭ್ರಷ್ಟ ಅಧಿಕಾರಿಗಳ ಕಿಸೆಯಲ್ಲಿ ಸೋರಿ ಹೋಗುತ್ತಿದೆ, ಎಂಬ ಕಹಿ ವಾಸ್ತವದ ಅರಿವು ಅವರಿಗೆ ಆಯಿತು. ಆಗ ಅವರಿಗೆ ಮನವರಿಕೆಯಾದ ಸಂಗತಿ ಎಂದರೆ ಈ ಮಧ್ಯವರ್ತಿಗಳನ್ನು ತಪ್ಪಿಸಿ, ನೇರವಾಗಿ ಹಣ ಫಲಾನುಭವಿಗಳಿಗೆ ಸಿಕ್ಕುವಂತೆ ಮಾಡುವುದು. ಇದಕ್ಕೆ ಅವರು ಕಂಡುಕೊಂಡ ಉಪಾಯವೆಂದರೆ ಆಧುನಿಕ ತಂತ್ರಜ್ಞಾನದ ಬಳಕೆ.‌ ಆವಶ್ಯಕ ಫಲಾನುಭವಿಗಳ ಗುರುತಿಸಿ ಅವರ ಅಂಕಿ ಅಂಶಗಳನ್ನು ಸಿದ್ಧ ಪಡಿಸಿ, ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವಂತೆ ಮಾಡುವುದು.

ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ ಜಾರಿಗೆ ತಂದ ಉದಾರೀಕರಣದ ಸಂದರ್ಭದಲ್ಲಿ, ಅವರು ಸಾರ್ವಜನಿಕವಾಗಿ ಹೇಳಿಕೆ ಕೊಡುವ ಸಂದರ್ಭದಲ್ಲಿ, ತಾವು ಬದಲಾವಣೆಯ ಪರವೆಂದು, ಇವರು ಸಾತತ್ಯದ ಪದವೆಂದು ಹೇಳಿ ಇವರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಎಲ್ಲಾ ಸರ್ಕಾರಗಳು ಪಕ್ಷಾತೀತವಾಗಿ, ಚುನಾವಣಗಳ ಸಂದರ್ಭದಲ್ಲಿ, ಬೆಲೆ ಏರಿಕೆ ಅನಿವಾರ್ಯವಾದರೂ, ಅವಕಾಶ ಕೊಡುತ್ತಿರಲಿಲ್ಲ, ಅದಕ್ಕೆ ಕಾರಣ ಎಂದರೆ ಜನರ ಮತಗಳ ಮೇಲೆ ಕಣ್ಣಿಟ್ಟು.ಅದರ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದ್ದವು. ಚುನಾವಣೆಗಳು ಮುಗಿದು, ಮೇಲೆ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ. ಇದು ಇನ್ನಷ್ಟು ತೊಡಕಿಗೆ ಸಿಕ್ಕಿದ್ದು ಸಂಮಿಶ್ರ ಸರ್ಕಾರಗಳ ರಚನೆಯಾದಾಗ. ಜೊತೆಗೂಡಿದ ಪಕ್ಷಗಳನ್ನು ಸರ್ಕಾರ ತೊರೆಯದಂತೆ ಉಳಿಸಿಕೊಳ್ಳಲು, ಅವರಿಗೆ ಅಪ್ರಿಯವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಇರಲಿಲ್ಲ. ಅದಕ್ಕೆ ಬದಲಾಗಿ ಅವರನ್ನು ಉಳಿಸಿಕೊಳ್ಳಲು ನಾನಾ ಬಗೆಯ ಸರ್ಕಸ್ ಗಳನ್ನು ಮಾಡಬೇಕಾಗುತ್ತಿತ್ತು. ಇದು ಇವರ ಅನುಭವಕ್ಕೆ ಬಂದುದು ಯು.ಪಿ.ಎ ಮತ್ತು ಎನ್. ಡಿ.ಎ ಗಳ ಸರ್ಕಾರದ ಸಂದರ್ಭದಲ್ಲಿ. ಮನಮೋಹನ್ ಸಿಂಗ್ ಇದಕ್ಕಾಗಿ ಹಲವು ಬಾರಿ ಪಕ್ಷಗಳ ಜೊತೆಗೆ, ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದರು. ಇಷ್ಟಾದರೂ ಅವರು ಎಲ್ಲರನ್ನೂ ತಮ್ಮ ಜೊತೆಗೆ ಕರೆದೊಯ್ಯುವ, ಜಾಣ್ಮೆ ಮತ್ತು ತಾಳ್ಮೆ ಕೂಡ ಅವರಿಗೆ ಇತ್ತು. ತಮ್ಮ ನೀತಿಗಳನ್ನು ಕಟುವಾಗಿ ವಿರೋಧಿಸಿದ ರಘುರಾಂ ರಾಜನ್ ಅವರನ್ನು ರಿಸರ್ವ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇದಕ್ಕೆ ನಿದರ್ಶನ. ಇದರೊಂದಿಗೆ ಇತರ ಅರ್ಥಶಾಸ್ತ್ರಜ್ಞರ ಟೀಕೆ ಟಿಪ್ಪಣಿಗಳಿಗೆ ಅವರು ಓಗೊಡುತ್ತಿದ್ದರು. ಇದಕ್ಕೆ ಮುಂಬೈ ವಿ.ವಿ.ಯ ಅರ್ಥ ಶಾಸ್ತ್ರ ವಿಭಾಗವನ್ನು ಕಟ್ಟಿ ಬೆಳೆಸಿದ ಅಭಿವೃದ್ಧಿ. ಅರ್ಥಶಾಸ್ತ್ರಜ್ಞರಾದ ಡಾ. ಪಿ. ಆರ್ ಬ್ರಹ್ಮಾನಂದ ಅವರು ಇವರ ನೀತಿಗಳನ್ನು ನಿರ್ಭಿಡೆಯಿಂದ ಟೀಕಿಸಿದರು, ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದ, ಅವರ ಜೊತೆಗೆ ವೈಯಕ್ತಿಕ ಸಂಬಂಧ ಹೊಂದಿದ್ದರು. ಹೊಸದಾಗಿ ಬಂದ ಸರ್ಕಾರದ ರಾಜಕೀಯ ಬೆಳವಣಿಗೆಗಳು, ಸಹಜವಾಗಿಯೇ ಅಭಿವೃದ್ಧಿ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರಿದವು. ಭಾರತದ ಆರ್ಥಿಕ ಅಭಿವೃದ್ಧಿಯ ಕುರಿತು ಆತ್ಯಂತಿಕ ಕಾಳಜಿ ಇದ್ದ ಇವರಿಗೆ, ಈ ಎಲ್ಲ ಸಹಜವಾಗಿಯೇ ಒಂದು ಬಗೆಯ ತಲ್ಲಣಕ್ಕೆ ಕಾರಣವಾಯಿತು. ಆದರೆ ಭಾರತದ ಅಭಿವೃದ್ಧಿಯ ಅಂತ:ಶಕ್ತಿಯ ಬಗ್ಗೆ ಅಪಾರವಾದ ಆತ್ಮವಿಶ್ವಾಸ ಇರುವ ಇವರಿಗೆ, ಭಾರತಕ್ಕೆ ಉಜ್ವಲವಾದ ಭವಿಷ್ಯವಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಇವರ ಕೌಟುಂಬಿಕ ಮತ್ತು ಇತರ ಚಿತ್ರಗಳು, ಇವರು ದೇಶ ವಿದೇಶಗಳಲ್ಲಿ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಕ್ಕೆ, ಸಕ್ರಿಯವಾಗಿ ಭಾಗವಹಿಸಿದ್ದಕ್ಕೆ ಸಾಕ್ಷಿಗಳಾಗಿವೆ.

ಇಂತಹ ಕೃತಿಯ ಮಹತ್ವವನ್ನು ಅರಿತು, ಇದನ್ನು ಕನ್ನಡಕ್ಕೆ ತಂದ ಗೆಳೆಯರಾದ ರಾಜಾರಾಂ ತಲ್ಲೂರು, ಅವರು ಕನ್ನಡಕ್ಕೆ ಒಂದು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಇದನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನ ಕೂಡ ಅಭಿನಂದನೆಗೆ ಅರ್ಹ. ಹಲವಾರು ಪಾರಿಭಾಷಿಕ ಪದಗಳನ್ನು ಅನುವಾದ ಮಾಡುವಾಗ ಅವರು ಪ್ರಾದೇಶಿಕ ಶಬ್ದಗಳನ್ನು ಬಳಸಿದ್ದಾರೆ. ಇದು ಆ ಪ್ರದೇಶಕ್ಕೆ ಸೇರದವರಿಗೆ ಸಂವಹನಕ್ಕೆ ತೊಡಕನ್ನು ಉಂಟುಮಾಡುತ್ತದೆ. ಆದ್ದರಿಂದ ಅದಕ್ಕೆ ಸಂವಾದಿಯಾಗಿ ಟಿಪ್ಪಣಿಗಳನ್ನು ಅಡಿ ಟಿಪ್ಪಣಿಗಳ ರೂಪದಲ್ಲಿ, ಇಲ್ಲವೇ ಕೃತಿಯ ಕೊನೆಯಲ್ಲಿ ಟಿಪ್ಪಣಿಗಳನ್ನು ಕೊಡಬಹುದಿತ್ತು. ಕೆಲವು ಇಂಗ್ಲಿಷ್ ಶಬ್ದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅರ್ಥಶಾಸ್ತ್ರದ ಪ್ರವೇಶ ಇಲ್ಲದವರಿಗೆ ಅಥವಾ ನನ್ನಂತಹ ಕನ್ನಡ ಮಾಧ್ಯಮದಲ್ಲಿ ಇಡಿಯಾಗಿ ಶಿಕ್ಷಣ ಪಡೆದವರಿಗೆ ,ಕೂಡ ಇದು ಸ್ವಲ್ಪ ತೊಡಕನ್ನು ಉಂಟು ಮಾಡೀತು. ಏನಿದ್ದರೂ ಈ ಕೃತಿಯ ಮಹತ್ವದ ಎದುರು ಇದು ಗೌಣವೇ ಸರಿ. ಕೈ ಕೆಸರಾಗದೆ ಬಾಯಿ ಮೊಸರಾಗಲು ಸಾಧ್ಯವಿಲ್ಲ. ಒಳ್ಳೆಯ ಕೃತಿಗಳನ್ನು ಗ್ರಹಿಸಲು ಬೇಕಾದ ಸಿದ್ಧತೆ ನಡೆಸುವುದು ,ಒಳ್ಳೆಯ ಓದುಗರ ಕರ್ತವ್ಯ. ಇದನ್ನು ಕಳಿಸುವ ಮೂಲಕ, ಎಂದೋ ಓದಿ ಮರೆತಿದ್ದ ,ಭಾರತದ ಆರ್ಥಿಕ ಅಭಿವೃದ್ಧಿಯ ಸಾಹಸಗಾಥೆ ನನ್ನ ಅರಿವಿನ ಭಾಗವಾಯಿತು. ಅದಕ್ಕೆ ಕಾರಣಕರ್ತರಾದ ಗೆಳೆಯರಾದ ರಾಜಾರಾಂ ತಲ್ಲೂರು ಅವರಿಗೆ, ಅನಂತ ಕೃತಜ್ಞತೆಗಳು ಅಭಿನಂದನೆ ಸಲ್ಲುತ್ತವೆ.

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...