ಅವನು ಹೋರಾಟದ ಅಂತರಗಂಗೆ

Date: 10-05-2022

Location: ಬೆಂಗಳೂರು


'ಮೊದಲ ಬಾರಿಯ ಲಾಕ್ ಡೌನ್ ಸಂದರ್ಭದ ಸಮುದಾಯ ರಂಗಚಿಂತನ ವೆಬಿನಾರ್ ಕಾರ್ಯಕ್ರಮದಲ್ಲಿ ನಾನು ಮಂಡಿಸಿದ ಸುದೀರ್ಘ ಪ್ರಬಂಧವನ್ನು ವಿಠಲ ಬಹಳೇ ಮೆಚ್ಚಿಕೊಂಡಿದ್ದ. ಅದು ಹೃದಯಸ್ಪರ್ಶಿ ಮಾತ್ರವಲ್ಲ ಸಮಗ್ರ ರಂಗಭೂಮಿ ಕುರಿತು ಗಂಭೀರ ವಿಚಾರಗಳ ಮಂಡನೆ ಮುಂತಾಗಿ ಪ್ರೀತಿ ತೋರಿದ್ದ' ಎನ್ನುತ್ತಾರೆ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಅಗಲಿದ ಚೇತನ ಲೇಖಕ, ರಂಗಕರ್ಮಿ ಡಾ.ವಿಠ್ಠಲ ಭಂಡಾರಿಯವರ ನೆನಪುಗಳೊಂದಿಗೆ ಅವರ ಆಪ್ತ ಒಡನಾಟದ ಕುರಿತು ಬರೆದಿದ್ದಾರೆ.

ಅವನ ತಂದೆ ರೋಹಿದಾಸ ವಿಠಲ ಭಂಡಾರಿಯ ಸ್ನೇಹಿತ ನಾನು. ಅಂದರೆ ಅಂದಿನ ಬಂಡಾಯ ಸಾಹಿತ್ಯ ಸಂಘಟನೆಯ ಹಿರಿಯ ಗೆಳೆಯ ಆರ್. ವಿ. ಭಂಡಾರಿ, ತನ್ನ ತಂದೆಯ ಹೆಸರನ್ನೇ ಮಗ ವಿಠಲನಿಗೆ ಇಟ್ಟಿದ್ದರು. ದೂರದ ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣದಲ್ಲಿ ಶಾಲಾ ಮಾಸ್ತರನಾಗಿದ್ದ ರೋಹಿದಾಸ ಪ್ರಗತಿಪರ ಕವಿಯೂ ಆಗಿದ್ದರು. ಭಂಡಾರಿಗಳೆಂದರೆ ದೇವಳಗಳಲ್ಲಿ ಮಂಗಳವಾದ್ಯ ನುಡಿಸುವ ಕ್ಷೌರಿಕ ಜನಾಂಗದವರು. ಅಂತಹ ಜನಾಂಗದವರು ಅರ್ಧ ಶತಮಾನದಷ್ಟು ಹಿಂದೆಯೇ ಶಾಲಾ ಮಾಸ್ತರನಾಗುವುದೆಂದರೆ ಸಣ್ಣ ಸಾಹಸದ ಕೆಲಸ ಅದಲ್ಲ. ಜುಬ್ಬಾಧಾರಿ ಕವಿ ರೋಹಿದಾಸನ ಪುಷ್ಕಳ ಕೇಶಸೌಂದರ್ಯ ಬಡಗುತಿಟ್ಟಿನ ಯಕ್ಷಗಾನ ಕಲಾವಿದರ ಕೇಶ ವಿನ್ಯಾಸ ಹೋಲುತಿತ್ತು. ಅಷ್ಟಕ್ಕೂ ರೋಹಿದಾಸ ತಾಳಮದ್ದಲೆ ನುಡಿಸುವ ಬಡಗುತಿಟ್ಟಿನ ಅರ್ಥಧಾರಿಯೂ ಆಗಿದ್ದವರು. ಬಂಡಾಯ ಸಾಹಿತ್ಯವನ್ನು ಮತ್ತು ಜನಪರ ಲೋಕ ಸಂವೇದನೆಗಳನ್ನು ಅಂಥದೊಂದು ನೆಲಮೂಲ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡುವ ಜವಾರಿತನದ ಒಳಗಣ್ಣು ಆರ್. ವಿ. ಭಂಡಾರಿಯದು. ಅವರ ಅಂತಹ ಆಳದ ಒಳನೋಟಗಳಿಂದಾಗಿಯೇ ಹೊನ್ನಾವರದ ಕೆರೆಕೋಣ ಇಂದು ಜನ ಚಳವಳಿಯ ಸಾಂಸ್ಕೃತಿಕ ನಕ್ಷೆಯಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ.

ತನ್ನ ತಂದೆಯ ಗೆಳೆಯ ಮತ್ತು ವಯಸಿನ ಹಿರಿತನದ ಕಾರಣಕ್ಕಾಗಿಯೇ ಇದ್ದೀತು, ನನ್ನೊಂದಿಗೆ ಅವನು ಹೆಚ್ಚು ಸಲುಗೆಯಿಂದ ಬೆರೆಯಲಾಗುತ್ತಿರಲಿಲ್ಲ. ಆದರೆ ನನ್ನ ಬರಹಗಳನ್ನು ಅತ್ಯಂತ ಸ್ವಾಸ್ಥ್ಯ ಮನಸಿನಿಂದ ಓದಿ ಪ್ರತಿಕ್ರಿಯಿಸುತ್ತಿದ್ದ ಗೆಳೆಯ ಭಂಡಾರಿ ವಿಠಲ. ಅವೇನು ಕಾಂಜಿ ಪೀಂಜಿ ಓದಿನ ಪ್ರತಿಕ್ರಿಯೆಗಳಾಗಿರುತ್ತಿರಲಿಲ್ಲ. ಆತನ ಅಂತರಂಗ ಹೌದೆಂದಾಗಲೇ ಪ್ರತಿಕ್ರಿಯೆ ಅಂತಃಶ್ರೋತಗೊಳ್ಳುತ್ತಿತ್ತು.

ಕಾಲೇಜು ದಿನಗಳಿಂದಲೇ ಡಿ. ವೈ. ಎಫ್. ಐ. ಮತ್ತು ಎಸ್.ಎಫ್. ಐ. ನಂತಹ ಪ್ರಗತಿಪರ ಯುವ ಸಂಘಟನೆಗಳ ಗರಡಿಯಲ್ಲಿ ಬೆಳೆದು ಬಂದ ವಿಠಲ ಅಪ್ಪಟ ಚಿನ್ನದಂತಹ ಪ್ರತಿಭೆ. ಅಲ್ಲೆಲ್ಲೂ ತೋರಿಕೆ, ಸೋಗಲಾಡಿತನಕ್ಕೆ ಸಾಸಿವೆ ಕಾಳಿನರ್ಧದಷ್ಟೂ ಅವಕಾಶ ಇರುತ್ತಿರಲಿಲ್ಲ. ಮನವರಿಯದ ಕಳ್ಳತನ ಯಾವುದಯ್ಯ ಎಂಬ ವಚನದಂತೆ ಅವನದು ಸದಾ ಆತ್ಮಸಾಕ್ಷಿಯ ಬದುಕು. ಅಂತಃಕರಣ ತುಂಬಿದ ನಡೆ. ಮಕ್ಕಳು, ತರುಣರು, ಮುದುಕರೆನ್ನದೇ ಜೊತೆ ಜೊತೆಯಾಗಿ ಹೆಜ್ಜೆಹಾಕುವ ತಾಯ್ತನದ ಸಹಯಾನ.

ಯಾರ್ಯಾರೋ ತರಕಲಾಂಡಿ ರಾಜಕಾರಣಿಗಳು ಸತ್ತಾಗ ತುಂಬಲಾಗದ ನಷ್ಟವೆಂದು ಬೋಂಗು ಬಿಡುತ್ತೇವೆ. ವಿಠಲ ಭಂಡಾರಿ ಅಗಲಿಕೆ ಅಂಥದಲ್ಲ. ವಿಠಲ ನಿರ್ಗಮನದಿಂದ ಜೀವಪರ ಮಾನವೀಯ ಸಮೂಹಕ್ಕೆ, ವಿಶೇಷವಾಗಿ ಯುವಜನಾಂಗಕ್ಕೆ ಅಕ್ಷರಶಃ ಬಹುದೊಡ್ಡ ನಷ್ಟ ಉಂಟಾಗಿದೆ. ನಿಜಕ್ಕೂ ಅದು ಭರಿಸಲಾಗದ ಹಾನಿ. ಕೆಲವು ಬಾಯ್ಬಡುಕ ಬುಡುಬುಡಿಕೆ ಪ್ರಗತಿಪರರ ನಡುವೆ ತನ್ನ ಕೆಚ್ಚಿನ ಹೆಜ್ಜೆ, ಅದರ ಅಸಲಿಯತ್ತು ಜತನ ಮಾಡಿಟ್ಟುಕೊಳ್ಳುವಲ್ಲಿ ಒಳಗೊಳಗೆ ಹೆಣಗುತ್ತಿದ್ದ. ಅದಕ್ಕೆಲ್ಲ ಸರಳ ಮತ್ತು ಪ್ರೀತಿ ತುಂಬಿದ ಸಹಜಯಾನ ನಡಿಗೆಯೇ ಸಾಕಿತ್ತು. ಅದುವೇ ಸಹಯಾನದ ಪದಪಯಣ. ಸಿದ್ಧಾಂತಗಳ ಅಧ್ಯಯನಕ್ಕಿಂತ ಅನುಷ್ಠಾನದಲ್ಲಿ ಅಪಾರ ನಂಬುಗೆ. ಅವನು ಯಾವತ್ತೂ ಮನದ ಮೃದುತ್ವ ಕಳಕೊಳ್ಳುತ್ತಿರಲಿಲ್ಲ. ಅದರ ಸೂಕ್ಷ್ಮತೆಯ ಆಳಕ್ಕಿಳಿದು ನೋಡುವ ಒಳಗಣ್ಣುಗಳು.

ಮೊದಲ ಬಾರಿಯ ಲಾಕ್ ಡೌನ್ ಸಂದರ್ಭದ ಸಮುದಾಯ ರಂಗಚಿಂತನ ವೆಬಿನಾರ್ ಕಾರ್ಯಕ್ರಮದಲ್ಲಿ ನಾನು ಮಂಡಿಸಿದ ಸುದೀರ್ಘ ಪ್ರಬಂಧವನ್ನು ವಿಠಲ ಬಹಳೇ ಮೆಚ್ಚಿಕೊಂಡಿದ್ದ. ಅದು ಹೃದಯಸ್ಪರ್ಶಿ ಮಾತ್ರವಲ್ಲ ಸಮಗ್ರ ರಂಗಭೂಮಿ ಕುರಿತು ಗಂಭೀರ ವಿಚಾರಗಳ ಮಂಡನೆ ಮುಂತಾಗಿ ಪ್ರೀತಿ ತೋರಿದ್ದ. ನೀವೆಲ್ಲ ತಲಸ್ಪರ್ಶಿ ವಿಚಾರಧಾರೆಯ ಅಕಾಡೆಮಿಷಿಯನ್ಸ್. ನಾನು ಮೆಟ್ರಿಕ್ ಓದಿದವನು., ನನ್ನ ಓದಿನ ಮಿತಿ ಕನ್ನಡಕ್ಕೆ ಸೀಮಿತ ಅಂತ ನಾನು ಅಂದಿದ್ದೆ. ಶೈಕ್ಷಣಿಕ ಓದು ನಿಮ್ಮ ಅನುಭವ, ಅಧ್ಯಯನದ ಜತೆ ಹೋಲಿಸಲಾಗದು, ಅವನು ಅಂದಿದ್ದ.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದ ನನ್ನ ಲೇಖನಗಳಿಗೆ ಗಂಭೀರವಾಗಿ ಸ್ಪಂದಿಸುತ್ತಿದ್ದ. ಪ್ರಕಟಣೆ ಪೂರ್ವದ ಯಡ್ರಾಮಿ ಸೀಮೆ ಕಥನಗಳು ನನ್ನ ಪುಸ್ತಕದ ಬಿಡಿ ಲೇಖನಗಳನ್ನು ವಾಟ್ಸ್ಯಾಪ್ ಮೂಲಕ ವಿಠಲಗೆ ಕಳಿಸುತ್ತಿದ್ದೆ. ಅವನ್ನು ಓದಿ ಪುಸ್ತಕ ರೂಪದಲ್ಲಿ ತರಲು ಹುರುಪು ತೋರಿದ್ದ. ಅಂದುಕೊಂಡಂತೆ ಪುಸ್ತಕಕ್ಕೆ ಮೀನಾಕ್ಷಿ ಬಾಳಿ ಹಾರೈಸಿ ಬರೆದ ಬೆನ್ನುಡಿ ಅವನ ಓದಿಗೆ ಹಾಕಿದ್ದೆ. ಭಾಳಂದ್ರ ಭಾಳ ಖುಷಿಯೇನು ಸಂಭ್ರಮನೇ ಪಟ್ಟಿದ್ದ. ನನ್ನ ಮಾತುಗಳಲ್ಲಿ ಅದು ಹಂಡೆಹಾಲು ಕುಡಿದ ಖಂಡುಗ ಖುಷಿಯಂತಹದ್ದು.

ಅದೇ ನನ್ನ ಪುಸ್ತಕಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಮತ್ತು ಕಳೆದ ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರ ಬಂದಾಗಂತೂ ಫೋನ್ ಮಾಡಿ ಖುಷಿ ಹಂಚಿಕೊಂಡಿದ್ದ. ಅದು ಸಾಲದ್ದೆಂದು ವಾಟ್ಸ್ಯಾಪ್ ಮೆಸೆಜ್ ಕಳಿಸಿ " ಸಮಗ್ರವಾಗಿ ಓದಲೇಬೇಕಿದೆ ಈಗಲಾದರೂ ಪುಸ್ತಕ ಕಳಿಸಿರೆಂದು" ಅಲವತ್ತುಗೊಂಡಿದ್ದ. ಅವನಿಗೆ ಯಡ್ರಾಮಿ ಸೀಮೆ ಕಥನಗಳು ಕಳಿಸದ, ಬಾಕಿ ಉಳಿಸಿಕೊಂಡ ಹಳಹಳಿ ನನ್ನಲ್ಲಿ ಕೊನೆತನಕ ಉಳಿದೇ ಹೋಯಿತು. ಹಾಳಾದ ನನ್ನ ಮರೆಗುಳಿತನಕ್ಕೆ ಶಪಿಸಿಕೊಳ್ಳುತ್ತಿರುವೆ.

ನಾನು ಕರ್ನಾಟಕ ರಂಗಸಮಾಜದ ಸದಸ್ಯನಾಗಿದ್ದಾಗ ಶಿವಮೊಗ್ಗೆಯ ರಂಗಾಯಣದಲ್ಲಿ ಜರುಗಿದ ರಾಷ್ಟ್ರೀಯ ನಾಟಕೋತ್ಸವಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಆಗ ನಾವಿಬ್ಬರೂ ಬಹಳಷ್ಟು ಹೊತ್ತು ಆಧುನಿಕ ರಂಗಭೂಮಿ ಹಾಗೂ ರಂಗಾಯಣಗಳ ಪ್ರಾದೇಶಿಕ ರಂಗಸಂವೇದನೆಗಳನ್ನು ಕುರಿತು ಚರ್ಚಿಸಿದ್ದು ನನ್ನ ನೆನಪಿನ ಉಸಿರಲ್ಲಿ ಹಚ್ಚ ಹಸಿರಾಗೇ ಇದೆ. ಕಲಬುರ್ಗಿಯಂಥಲ್ಲಿ ಪುರವಂತರಾಟ, ಚಕ್ಕೀಪದ, ಪಾರಿಜಾತ ಭಜನೆ, ಅಲಾಯಿ ಕುಣಿತ ಮತ್ತಿತರೆ ಪ್ರಾದೇಶಿಕ ಸಂಸ್ಕೃತಿಯ ಪರಂಪರೆಗಳನ್ನು ಬಳಸಿಕೊಂಡು ಅಲ್ಲಿನ ರಂಗಾಯಣ ಕಟ್ಟಬೇಕೆಂಬುದು ನಮ್ಮ ಮಾತುಕತೆಗಳಲ್ಲಿ ಪ್ರಸ್ತಾಪಗೊಂಡ ಮುಖ್ಯವಿಷಯ ಎಂಬ ಖಾತರಿಯಾದ ನೆನಪು ನನಗಿದೆ.

ಸಂವಿಧಾನದ ಓದು ಜನಸಾಮಾನ್ಯರಿಗೆ ತಲುಪಬಲ್ಲ ಸಮರ್ಥವಾದ ಪುಟ್ಟ ಪುಸ್ತಕ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಹತ್ತಾರು ಮುದ್ರಣ ಕಂಡಿರುವ ಕನ್ನಡನಾಡಿನ ಮನೆ ಮಾತಾಗಿದೆ. ಅದರ ಹಿಂದಿನ ನೇಪಥ್ಯ ಶಕ್ತಿಯೇ ನಮ್ಮ ವಿಠಲ. ಪುಸ್ತಕದ ರಚಯಿತೃ ನ್ಯಾಯಮೂರ್ತಿ ನಾಗ ಮೋಹನದಾಸ್ ಅವರಿಗೆ ಒತ್ತಾಸೆಯಾಗಿ ನಿಂತದ್ದು ವಿಠಲ. ವಿಠಲ ನಿರ್ಗಮಿಸಿದಾಗ ನಾಗಮೋಹನದಾಸ ಅವರು, ಮನ ಕಲಕುವಂತೆ ಅದನ್ನು ಹೇಳಿದರು. ಅಂತೆಯೇ ವಿಠಲ ಸಂವಿಧಾನ ಓದು ಮಹಾನ್ ಅಭಿಯಾನದ ಹಿಂದಿನ ಧೀಶಕ್ತಿ. ಅದನ್ನೊಂದು ಸಮುದಾಯಪ್ರಜ್ಞೆಯಂತೆ ಊರೂರಿಗೂ ಕೊಂಡೊಯ್ದವನು ಅವನು. ನಮ್ಮ ದಾವಣಗೆರೆಗೂ ಓದು ಅಭಿಯಾನ ರಥದ ಸೂರ್ಯನನ್ನು ಎಳಕೊಂಡು ಬಂದಿದ್ದ. ಸಂಗಾತಿ ಕೆ. ಮಹಾಂತೇಶ ಬರೆದ ಒಡಲಾಳದ ಕಥೆಗಳು ಪುಸ್ತಕ ಬಿಡುಗಡೆಗೂ ಬಂದಿದ್ದ. ಹೌದು ಹೀಗೆ ನಮ್ಮ ವಿಠಲ ತಿರುಗಾಡದ ಊರುಗಳೇ ಉಳಿದಿಲ್ಲ.

ನಿಜದ ನೆಲೆಯ ಎಡಪಂಥೀಯನೆಂದರೆ ಅನಾಹತ ನಾದದ ಅಂತರ್ಮುಖಿಯೇ ಆಗಿರ್ತಾನೆ. ವಿಠಲನಲ್ಲಿ ನನಗೆ ಅಂತಹ ಓಬ್ಬ ಸಮಾಜಮುಖಿ ಭಂಡಾರಿಯೇ ಕಂಡಿದ್ದ. ಅದು ತಾಯ್ತನದ ಜೀವಸಂವೇದನೆ ಹೊಂದಿರುವ ಗುಣವೇ ಹೌದು. ವಿಠಲನೆಂದರೆ ಸಭ್ಯತೆ, ಸಜ್ಜನಿಕೆ, ಸಾತ್ವಿಕತೆ, ಸರಳತೆ ತುಂಬಿದ ಸೂಕ್ಷ್ಮತೆಯ ದಿವಿನಾದ ಕಡಲು. ಅದು ಗೆಳೆತನದ ವರತೆ ತುಂಬಿದ ಜೀವದೊಡಲು. ವರ್ತಮಾನದ ಸಂದಿಗ್ಧ ಬದುಕಿಗೆ ಅಂತಹ ನಿರ್ಗುಣ ಪ್ರಜ್ಞೆಯ ತುರ್ತು ಅಗತ್ಯವಿದೆ. ಐವತ್ತೊಂದು ಸಾಯುವ ವಯಸ್ಸೇನಲ್ಲ. ಅವನಿಲ್ಲದ ಕ್ಷಣಗಳಿಗೆ ಅರ್ಥ ಹುಡುಕುವುದು ಸಲ್ಲ. ಕೊರೊನಾ ಯಾಮಾರಿಸಿತು. ಅವನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗಿನಿಂದ ಹೊರ ಬರಲಾಗುತ್ತಿಲ್ಲ.

ಚುಕ್ಕಿಯೊಳಗಣ ಕನಸಿನಂತೆ

ನಮ್ಮೆಲ್ಲರ ಮನೆ ಮನಸುಗಳಲ್ಲಿ ಮನೆಮಾಡಿದ್ದ. ಬೆನ್ನಿಗೆಬಿದ್ದ ನಮ್ಮ ಮನೆಯ ತಮ್ಮನಂತಿದ್ದ. ಮತ್ತೊಂದೆಡೆ ಅವನು ಎಲ್ಲೂ ಹೋಗಿಲ್ಲ ನಮ್ಮೊಳಗೇ ಇದ್ದಾನೆ ಎಂಬ ಜೀವಧ್ವನಿ ಆರ್ದ್ರತೆಯಿಂದ ಕೂಗಿ ಹೇಳುತ್ತಲೇ ಇದೆ. ಕೆರೆಕೋಣದ ಚಿಂತನಶೀಲ ಸಹಯಾನಿಗರೆಲ್ಲರೂ ಎಲ್ಲ ದಿಕ್ಕುಗಳಲ್ಲೂ ನಾಡಿನ ತುಂಬೆಲ್ಲಾ ಅವನ ಕನಸುಗಳ ಹೆಜ್ಜೆಗಳನ್ನಿಡಬೇಕು. ಅವನು ನಮ್ಮೆಲ್ಲರ ದಮನಿಗಳಲ್ಲಿ ಹೋರಾಟದ ಅಂತರಗಂಗೆ ಹರಿಸಿದ್ದಾನೆ. ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ವಿಠಲನ ಪ್ರೀತಿಯ ಲಯಬದ್ಧ ನಿನಾದ ಕೇಳಿ ಬರಬೇಕು. ತನ್ಮೂಲಕ ಸಹಯಾನ ಸಹಜವಾಗಿ ಮಹಾಯಾನ ಆದೀತು. ಅವನ ಕನಸು ನನಸಾದೀತು. ಅವನ ನೆನಪಲ್ಲಿ ಒಂದು ವರುಷ ಉರುಳಿ ಹೋಯಿತು.

ಮೇ; ಏಳು ಅವನು ನಮ್ಮನ್ನು ಅಗಲಿದ ದಿನ. ಮೇ 7 ಮತ್ತು 8 ಎರಡು ದಿನಗಳ ಕಾಲ ಕೆರೆಕೋಣದಲ್ಲಿ ಸಹಯಾನದ ಸಾಹಿತ್ಯೋತ್ಸವ ಜರುಗಿತು. ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್, ಪ್ರೊ. ರಹಮತ್ ತರೀಕೆರೆ, ಡಾ. ಮೀನಾಕ್ಷಿ ಬಾಳಿ, ಡಾ. ಶ್ರೀಪಾದ ಭಟ್, ಕಿರಣಭಟ್, ಪ್ರೊ. ರಾಜೇಂದ್ರ ಚೆನ್ನಿ, ಯಮುನಾ ಗಾಂವಕರ್, ಇಂದಿರಾ ಭಂಡಾರಿ, ಮಾಧವಿ ಭಂಡಾರಿ, ಕೆ. ಎಸ್. ವಿಮಲಾ, ಎಸ್. ಜಿ. ಸಿದ್ಧರಾಮಯ್ಯ, ಕೆ. ಮಹಾಂತೇಶ್ ಇನ್ನೂ ಅನೇಕರು ವಿಠಲ ಭಂಡಾರಿ ನೆನಪಿನ ಸಾಹಿತ್ಯಯಾನದಲ್ಲಿ ಭಾಗಿಯಾಗಿದ್ದರು. ಮೀನಾಕ್ಷಿ ಬಾಳಿ ಸಂಪಾದಿಸಿದ " ಪ್ರೀತಿ ಪದಗಳ ಸಹಯಾನಿ ವಿಠಲ" ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು.

-ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...