ಅಂದಿನ ಕಾಲದ ಮನೆ ಮನೆಯ ಅಜ್ಜಿಯರ ಪ್ರತಿರೂಪ ಈ ‘ಮಲೆನಾಡ ಅಜ್ಜಿ’


"ಅಜ್ಜಿ ಮೊಮ್ಮಗಳ ಆ ಪುಟ್ಟ ಪ್ರಪಂಚದಲ್ಲಿ ಏನಿದೆ, ಏನಿಲ್ಲ? ಅಜ್ಜಿ ತನ್ನ ಕೈಂಕರ್ಯಗಳನ್ನು ತಣ್ಣಗೆ ಮಾಡುತ್ತಾ ಮೊಮ್ಮಗಳಿಗೆ ಜೀವನ ದರ್ಶನ ಮಾಡಿಸುವ ಪರಿ ಅದ್ಭುತವಾಗಿದೆ. ಅವಳ ಕಾರ್ಯ ದಕ್ಷತೆ, ಗಟ್ಟಿತನ, ಆತ್ಮಾಭಿಮಾನ, ಅವಳಲ್ಲಿದ್ದ ಇತಿ ಮಿತಿಗಳ ಅರಿವು ಇವುಗಳನ್ನು ನೋಡುತ್ತಾ ಬೆಳೆದ ಮೊಮ್ಮಗಳಿಗೆ ಅಜ್ಜಿ ಕಲಿಸಬೇಕಿರಲಿಲ್ಲ. ಅವು ತಂತಾನೇ ಮೊಳಕೆಯೊಡೆದು ಬೆಳೆಯಿತು," ಎನ್ನುತ್ತಾರೆ ಸಿರಿ ಮೂರ್ತಿ ಕಾಸರವಳ್ಳಿ. ಅವರು ಶೋಭಾ ರಾವ್ ಅವರ ‘ಮಲೆನಾಡ ಅಜ್ಜಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ನನ್ನ ನೆಚ್ಚಿನ ಪುಟ್ಟ ತಂಗಿ ಶೋಭಾಳ ‘ಮಲೆನಾಡ ಅಜ್ಜಿ’ ಪುಸ್ತಕ ಬಿಡುಗಡೆಯಾದಾಗಿನಿಂದ ಓದುವ ಕಾತರ ಹೆಚ್ಚಾಗಿದ್ದು, ಅವಳಲ್ಲಿ ಅಜ್ಜಿ ನನ್ನ ಮನೆಗೆ ಯಾವಾಗ ಬರುವುದು ಎಂದು ಕೇಳಿದ್ದೆ. ಶೀಘ್ರದಲ್ಲಿ ಬರುತ್ತಾಳಕ್ಕಾ ಎಂದಿದ್ದಳು. ಅವಳು ನನ್ನ ಮನೆಗೆ ಬರುವಾಗ ನನಗೆ ನನ್ನ ‘ಶಾಂತಿಧಾಮ’ ಪುಸ್ತಕ ಲೋಕಾರ್ಪಣೆಯ ಗಡಿಬಿಡಿ. ಆದರೂ ಸಮಯ ಹೊಂದಿಸಿ ಓದಿ ಮುಗಿಸಿದ್ದೆ. ಅದೇ ಸಮಯದಲ್ಲಿ ಊರಿಗೆ ಬಂದ ಮಗನಿಗೆ ಓದಲು ಕೊಟ್ಟೆ.

ಅಣ್ಣ ಏಕಾಗ್ರತೆಯಲ್ಲಿ ಓದುವುದು ಕಂಡು ಮನೆಯಲ್ಲಿದ್ದ ಅವನ ತಮ್ಮ ತಾನೂ ಓದಿದ. ಅವರಿಗೆ ಇಷ್ಟವಾಗುತ್ತೆಂಬ ಭರವಸೆ ನನಗಿತ್ತು. ಯಾವ ದೇಶದಲ್ಲಿದ್ದರೂ ಬೇರು ಇಲ್ಲಿಯದೇ ಅಲ್ಲವೇ? ಅವರೂ ತಮ್ಮ ಮಲೆನಾಡ ಅಜ್ಜಿಯ ಕೈತುತ್ತ ರುಚಿಯನ್ನು ಉಂಡು ಅನುಭವಿಸಿದವರೇ. ಅಜ್ಜಿಯ ಪ್ರೀತಿಯ ಸೆಳೆತ ಅಷ್ಟು ಸುಲಭದಲ್ಲಿ ಕಳಚಲಾರದು, ಮರೆಯಲಾಗದು.

‘ಅಮ್ಮಾ…. ಓದುವಾಗ ತೇಟ್‌ ನಮ್ಮ ದೊಡ್ಡಮ್ಮನೇ ಮಲೆನಾಡ ಅಜ್ಜಿ ಎನಿಸಿತು’ ಎಂದು ದೊಡ್ಡವ ಹೇಳಿದರೆ, ತಮ್ಮ,‘ನಮ್ಮ ದೊಡ್ಡಮ್ಮನ ಜೀರಿಮೆಣಸಿನ ಹುಳಿ ನೆನಪಾಗಿ ಬಾಯಲ್ಲಿ ನೀರೂರಿತು’ ಎಂದನೇ ವಿನ: ನೀನು ಮಾಡು ಅನ್ನಲಿಲ್ಲ. ಗೊತ್ತು ಅವನಿಗೆ ಅಜ್ಜಿಯ ಕೈ ರುಚಿ ಅಮ್ಮನಿರಲಿ ಯಾರು ಮಾಡಿದರೂ ಬರಲಾರದೆಂದು. ಅಂದಿನ ಕಾಲದ ಮನೆ ಮನೆಯ ಅಜ್ಜಿಯರ ಪ್ರತಿರೂಪ ಈ ‘ಮಲೆನಾಡ ಅಜ್ಜಿ’.

ಯಾರಮ್ಮಾ ಈ ಶೋಭಾ? ಎಂದು ಮಗ ಕೇಳಿದ. ಯಾರೆಂದು ಹೇಳಲಿ? ‘ನನ್ನ ತವರೂರಿನ ಮಗಳು. ಇವ್ಳೂ ಒಂತರಾ ಜೀರಿ ಮೆಣಸಿನ ಕಾಯಿಯಂತೇ ಕಣಪ್ಪಾ, ಜೀರಿಗೆ ಮೆಣಸು ಗಾತ್ರದಲ್ಲಿ ಚಿಕ್ಕದಾದರೂ ಖಾರದಿಂದ ಅದು ಪ್ರಸಿದ್ದಿ ಪಡೆದಿದೆ. ಈ ಚಿಕ್ಕ ಹುಡುಗಿಯೂ ಹಾಗೇ ಅವಳ ತಲೆಯಲ್ಲಿ ಎಷ್ಟೆಲ್ಲಾ ವಿಚಾರಗಳು ತುಂಬಿವೆ. ಅವು ಅನುಭವದ ಒರೆಯಲ್ಲಿ ಎಷ್ಟು ಪಕ್ವವಾಗಿದೆಯೆಂದು ಪುಸ್ತಕ ಓದಿದಾಗ ಅನಿಸಿಲ್ವಾ’ ಎಂದಾಗ ಮಗ ಒಪ್ಪಿಗೆಯಿಂದ ತಲೆಯಾಡಿಸಿದ.

ಅಜ್ಜಿ ಮೊಮ್ಮಗಳ ಆ ಪುಟ್ಟ ಪ್ರಪಂಚದಲ್ಲಿ ಏನಿದೆ, ಏನಿಲ್ಲ? ಅಜ್ಜಿ ತನ್ನ ಕೈಂಕರ್ಯಗಳನ್ನು ತಣ್ಣಗೆ ಮಾಡುತ್ತಾ ಮೊಮ್ಮಗಳಿಗೆ ಜೀವನ ದರ್ಶನ ಮಾಡಿಸುವ ಪರಿ ಅದ್ಭುತವಾಗಿದೆ. ಅವಳ ಕಾರ್ಯ ದಕ್ಷತೆ, ಗಟ್ಟಿತನ, ಆತ್ಮಾಭಿಮಾನ, ಅವಳಲ್ಲಿದ್ದ ಇತಿ ಮಿತಿಗಳ ಅರಿವು ಇವುಗಳನ್ನು ನೋಡುತ್ತಾ ಬೆಳೆದ ಮೊಮ್ಮಗಳಿಗೆ ಅಜ್ಜಿ ಕಲಿಸಬೇಕಿರಲಿಲ್ಲ. ಅವು ತಂತಾನೇ ಮೊಳಕೆಯೊಡೆದು ಬೆಳೆಯಿತು. ಅಜ್ಜಿಯ ವ್ಯಕ್ತಿತ್ವ ಅಂತಹದು. ಅವಳು ಶಾಲೆ ಮೆಟ್ಟಿಲು ಹತ್ತಿಲ್ಲ, ಅಕ್ಷರ ಜ್ನಾನವಿಲ್ಲ. ಅವಳ ಅನುಭವದ ಕಲಿಕೆಗೆ ಇವ್ಯಾವುದೂ ಸಾಟಿಯಲ್ಲ. ಪ್ರತಿ ಹೆಜ್ಜೆ ಇಡುವಾಗಲೂ ಅವಳು ಧೃಡವಾಗಿ ಕಾಲೂರುತ್ತಿದ್ದಳು. ಅವಳ ನೆರಳಾಗಿ ಹಿಂಬಾಲಿಸುವ ಮೊಮ್ಮಗಳಿಗೆ ಅಜ್ಜಿಯ ಹೆಜ್ಜೆಯ ಗುರುತು ಸ್ವಷ್ಟವಾಗಿ ಗೋಚರಿಸುತ್ತಿತ್ತು. ಆ ಹೆಜ್ಜೆಯ ಮೇಲೇ ತನ್ನ ಪುಟ್ಟ ಕಾಲೂರುತ್ತಾ ಬಂದವಳು ಅದೇ ವ್ಯಕ್ತಿತ್ವವನ್ನು ತನ್ನೊಳಗೆ ಬೆಳಸಿಕೊಳ್ಳುತ್ತಾ ದೊಡ್ಡವಳಾಗಿಬಿಟ್ಟಳು.

ಶೋಭಾಳ ‘ಮಲೆನಾಡ ಅಜ್ಜಿ’ ಓದುತ್ತಿರುವಾಗ ಒಂದೆಡೆ ಶಾರದಮ್ಮ ಎನ್ನುವವರ ಉಲ್ಲೇಖನವಿತ್ತು. ಅರೇ ಅವರು ನನ್ನಜ್ಜಿಯ ತಂಗಿ. ತಮ್ಮ ಬದುಕನ್ನೆಲ್ಲ ಪರರಿಗಾಗಿಯೇ ಗಂಧ ತೇದಂತೆ ತೇದ ಮಹಾತಾಯಿ. ಅವರು ಹೇಗಿಲ್ಲಿ ಬಂದರು? ಎಲ್ಲಿಂದೆಲ್ಲಿಗೆ ಸಂಬಂಧ? ಓದುತ್ತಿದ್ದಂತೇ ಶೋಭಾ ಇನ್ನೂ ಹತ್ತಿರದವಳಾಗಿಬಿಟ್ಟಳು. ಆ ಕಾಲದ ವಿಧವೆಯರ, ಅಜ್ಜಿಯಂದಿರ ಬದುಕು ಬವಣೆಗಳೆಲ್ಲಾ ಅಬ್ಬರದ ಅಲೆಗಳಂತೆ ಎದ್ದೆದ್ದು ಬಂದವು. ಮನಸ್ಸು ಮೂಕವಾಯಿತು.

ಶೋಭಾ, ನಿನ್ನಿಂದ ಇಂತಹಾ ಒಳ್ಳೆಯ ಬರಹಗಳು ನಿರಂತರ ಬರುತ್ತಿರಲಿ. ನೀನು ನಂಬಿದ ದೈವ ನಿನ್ನನ್ನು ಎತ್ತರಕ್ಕೆ ಬೆಳಸಲಿ ಎಂಬ ಹಾರೈಕೆಗಳೊಡನೆ

ಸಿರಿ ಮೂರ್ತಿ ಕಾಸರವಳ್ಳಿ

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...