Date: 21-06-2024
Location: ಬೆಂಗಳೂರು
"ಲೋಕ ನೀತಿಗಳು ಬದುಕನ್ನು ವಿಕರ್ಷಣೆಗೆ ಒಡ್ಡಿದಾಗ ಉಂಟಾಗುವ ಸಂಬಂಧಗಳ ಕಂದರ ಪ್ರತ್ಯೇಕತೆಯನ್ನುಂಟು ಮಾಡುತ್ತದೆ. ರಾಜಕೀಯದ ನಿಲುವುಗಳು ಈ ಕಂದರವನ್ನು ವ್ಯವಹಾರ ಮತ್ತು ತನ್ನ ಅಸ್ತಿತ್ವಕ್ಕೆ ಬಳಸಿಕೊಂಡು ಸರ್ವಾಧಿಕಾರದ ಸ್ಥಿತಿಯನ್ನು ವಿಧಿಸುತ್ತವೆ. ಈ ಸ್ಥಿತಿ ಕಾಲದ ಅನನ್ಯತೆಯನ್ನು ಕಳೆಯುತ್ತದೆ. ಅಂತರಂಗದ ಸೌಂದರ್ಯವನ್ನು ಕುರೂಪಿಗೊಳಿಸುತ್ತದೆ. ಇದು ಒಂದು ಕಾಲದ ಸಮಸ್ಯೆಯಲ್ಲ. ನಿರಂತರ ಸವಾಲನ್ನೊಡ್ಡುವ ಪ್ರಕ್ರಿಯೆ," ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ʻಆದಿಪುರಾಣ–ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆʼ ಕುರಿತು ಬರೆದಿದ್ದಾರೆ.
ಮನುಷ್ಯ ಬದುಕುವ ಮತ್ತು ಆಲೋಚಿಸುವ ಕ್ರಿಯೆಗಳು ಪರಸ್ಪರ ತದ್ವಿರುದ್ಧವಾಗಿರುತ್ತವೆ. ಇವುಗಳ ಸಮನ್ವಯದ ಶೋಧ ನಿರಂತರ ಲೋಕದಲ್ಲಿ ನಡೆಯುತ್ತಿರುತ್ತದೆ. ಲೋಕತತ್ವವನ್ನು ನಿರೂಪಿಸುವ ಧರ್ಮಗಳು ಲೋಕವಿರೋಧಿಯಾದಾಗ ಈ ಸಮಸ್ಯೆ ಸಂಭವಿಸುತ್ತದೆ. ಧರ್ಮವೆಂಬುದು ಚಲನೆಯನ್ನು ಬಯಸುವ, ಸಮಗ್ರತೆಯನ್ನುಂಟು ಮಾಡುವ ಪ್ರಕೃತಿ ಸಂಬಂಧಿ ನಿರ್ಮೋಹ ಸ್ಥಿತಿ. ಪ್ರತಿಯೊಂದು ಜೀವಿಯನ್ನು ಆವರಿಸಿಕೊಂಡು ನಿಯಂತ್ರಿಸುವ, ಮುನ್ನೆಡೆಸುವ ಶಕ್ತಿಯು ಇದಕ್ಕಿದೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಧರ್ಮತತ್ವವನ್ನು ರೂಪಿಸುವ ದೊಡ್ಡ ಅನ್ವೇಷಣೆ ನಡೆದಿದೆ. ಈ ಅನ್ವೇಷಣೆ ಪ್ರತ್ಯೇಕ ಗೊಡ್ಡು ಜ್ಞಾನ ಪ್ರತಿಪಾದನೆಯಲ್ಲ ಬದುಕಿನ ವಿನ್ಯಾಸದೊಂದಿಗೆ ಮುಖಾಮುಖಿಯಾಗಿ, ಅಂತರಂಗವನ್ನು ಪುನರ್ ಪ್ರತಿಷ್ಠಾಪಿಸುವುದು. ಲೋಕ ನೀತಿಗಳು ಬದುಕನ್ನು ವಿಕರ್ಷಣೆಗೆ ಒಡ್ಡಿದಾಗ ಉಂಟಾಗುವ ಸಂಬಂಧಗಳ ಕಂದರ ಪ್ರತ್ಯೇಕತೆಯನ್ನುಂಟು ಮಾಡುತ್ತದೆ. ರಾಜಕೀಯದ ನಿಲುವುಗಳು ಈ ಕಂದರವನ್ನು ವ್ಯವಹಾರ ಮತ್ತು ತನ್ನ ಅಸ್ತಿತ್ವಕ್ಕೆ ಬಳಸಿಕೊಂಡು ಸರ್ವಾಧಿಕಾರದ ಸ್ಥಿತಿಯನ್ನು ವಿಧಿಸುತ್ತವೆ. ಈ ಸ್ಥಿತಿ ಕಾಲದ ಅನನ್ಯತೆಯನ್ನು ಕಳೆಯುತ್ತದೆ. ಅಂತರಂಗದ ಸೌಂದರ್ಯವನ್ನು ಕುರೂಪಿಗೊಳಿಸುತ್ತದೆ. ಇದು ಒಂದು ಕಾಲದ ಸಮಸ್ಯೆಯಲ್ಲ. ನಿರಂತರ ಸವಾಲನ್ನೊಡ್ಡುವ ಪ್ರಕ್ರಿಯೆ. ಸಾಂಸ್ಕೃತಿಕ ಪರಿಸರ ಇಂತಹ ನಿಯಂತ್ರಣಗಳಿಗೆ ಒಳಗಾಗುತ್ತಿರುತ್ತದೆ. ಈ ನಿಯಂತ್ರಣದಿಂದ ಪಾರಾಗುವ ಬಗೆಯೇ ಹೊಸ ಅನ್ವೇಷಣೆ. ಇಂತಹ ಹೆದ್ದಾರಿಯೊಂದನ್ನು ಪಂಪ ನಿರ್ಮಿಸಿಕೊಟ್ಟಿದ್ದಾನೆ.
ಆದಿಪುರಾಣ ಕೃತಿಯನ್ನು ಧಾರ್ಮಿಕ, ಅಲೌಕಿಕ, ಕೇವಲಜ್ಞಾನ ನಿರೂಪಣೆಯೆಂದು ಕರೆಯುತ್ತೇವೆ. ಇಷ್ಟೇ ಕೃತಿಯೆಂದು ಭಾವಿಸಿದರೆ ಸರಳೀಕರಿಸದಂತಾಗುತ್ತದೆ. ಈ ಕೃತಿ ಮನುಷ್ಯನ ಸಂಕೀರ್ಣ ಸ್ಥಿತಿಯನ್ನು ನಿಕಷಕ್ಕೊಡ್ಡಿ ವೈವಿಧ್ಯಮಯ ಅನುಭವಗಳಿಂದ ನಿಚ್ಚಂಪೊಸತಾದ ಭಾವಕೋಶವೊಂದನ್ನು ಕಟ್ಟಿಕೊಡುತ್ತದೆ. ಸಮುದಾಯ ನೆಲೆಯಲ್ಲಿ ಸಾಹಿತ್ಯಕ ಪರಿಭಾಷೆಯೊಂದನ್ನು ರೂಪಿಸಿ ಸಾಂಸ್ಕೃತಿಕ ಸಂವೇದನೆಯನ್ನುಂಟು ಮಾಡುತ್ತದೆ. `ಬೆಳಗುವೆನಿಲ್ಲಿ ಲೌಕಿಕಮನ್’ ಎನ್ನುತ್ತಾ ಕಾಲದ ಸಾತತ್ಯ ಮತ್ತು ಸಂಸ್ಕೃತಿಯನ್ನು ಮತ್ತೆ ಮತ್ತೆ ಬೆಳಕಿನಲ್ಲಿ ನೋಡುವಂತೆ ಮಾಡುತ್ತಾನೆ. ಪಂಪ ಬ್ರಾಹ್ಮಣ ಧರ್ಮದಿಂದ ಜಿನಧರ್ಮಕ್ಕೆ ಬರುವಾಗ ರೂಪಕವೊಂದನ್ನು ಕೊಡುತ್ತಾನೆ. ಅವನ ತಾತನ ಕಾಲದಲ್ಲಿ ಯಜ್ಞದ ಧೂಪ ಬೆಳೆಬೆಳೆದು ವ್ಯಕ್ತಿತ್ವವನ್ನು ಕಪ್ಪುಗಟ್ಟಿಸಿತು ಅಂತ. `ಕಪ್ಪುಗಟ್ಟಿದ’ ಎಂಬ ರೂಪಕ ವಿಶೇಷವಾದುದು. ಕಪ್ಪು ಆತ್ಮದ್ದು, ಧರ್ಮದ್ದು, ದೇಹದ್ದು, ಜ್ಞಾನದ್ದು, ಮನಸ್ಸಿನದು ಆಗಿರಬಹುದು. ಅದನ್ನು ಮತ್ತೆ ಮತ್ತೆ ತೊಳೆದು ಬೆಳಕನ್ನುಂಟುಮಾಡುವುದು ಮುಖ್ಯ. ಪಂಪ ಅದಕ್ಕಾಗಿ ಆದಿಪುರಾಣದಲ್ಲಿ ಜನ್ಮ ಜನ್ಮಗಳ ಕಥನಗಳನ್ನು ಹೆಣೆಯುತ್ತಾ ಹೋಗುತ್ತಾನೆ. ಜನ್ಮಗಳ ಕಥನ ಕಾಲಕ್ಕೆ ಸಂಬಂಧಿಸಿದವು. ಮನುಷ್ಯ ವೈಭೋಗದ ಕೂಪದೊಳಗೆ ಮುಳುಗುತ್ತಾ ಹೋದಂತೆ ಬದುಕಿನ ನಿಜತ್ವ, ಅಂತಃಸತ್ವ ಕಾಣುವುದೇ ಇಲ್ಲ. ಅದರ ಬೆನ್ನತ್ತಿ ಸಾಂಸ್ಕೃತಿಕ ಬದುಕನ್ನು ನೈತಿಕ ಅರ್ಧಃಪತನಕ್ಕೀಡುಮಾಡುತ್ತಾನೆ. ಈ ಕಾರಣಕ್ಕೆ ಪಂಪ ಆದಿಪುರಾಣದಲ್ಲಿ ವೈಭೋಗದ ಅಗಾಧತೆಯನ್ನು ನಿರೂಪಿಸುತ್ತಲೇ ವೈರಾಗ್ಯದ ಆನನ್ಯತೆಯನ್ನು ಸ್ಥಾಪಿಸುತ್ತಾನೆ. ವೈರಾಗ್ಯ ಮತ್ತು ವೈಭೋಗವನ್ನು ಸಾಮುದಾಯಿಕ, ಜಾರಿತ್ರಿಕ, ಪೌರಾಣಿಕ, ಧಾರ್ಮಿಕ ನೆಲೆಯಲ್ಲಿ ಮುಖಾಮುಖಿಯಾಗಿಸುವುದು ಅಪಾರ ಬೌದ್ಧಿಕ ಪರಿಶ್ರಮವನ್ನು ಬೇಡುತ್ತದೆ.
ಈ ಕೃತಿಯಲ್ಲಿ ಪಂಪ ಜೈನದರ್ಶನ ಮತ್ತು ಕಾವ್ಯದರ್ಶನ ಒಗ್ಗೂಡಿಸಿದ್ದಾನೆ. ಪಂಪ ಜೈನದರ್ಶನ ಮತ್ತು ಕಾವ್ಯದರ್ಶನದ ಮೂಲಕ ಲೋಕದರ್ಶನವೊಂದನ್ನು ಕಾಣಿಸುತ್ತಾನೆ ಅದು ಮಹತ್ವವಾದುದು. ಯಾಕೆಂದರೆ, ಜೈನದರ್ಶನ ಲೋಕವನ್ನು ವೈವಿಧ್ಯತೆಯಲ್ಲಿ ಗ್ರಹಿಸುತ್ತದೆ. ಮನುಷ್ಯನ ನಡವಳಿಕೆಯ ಚೈತನ್ಯವನ್ನು ಪ್ರಕೃತಿ ನೆಲೆಯಲ್ಲಿ ಅರ್ಥೈಯಿಸುತ್ತದೆ. ಮಾನವನನ್ನು ನಿರಂತರ ಕಾಡುವ ಮೋಹದ ಒತ್ತಡಗಳು ಬದುಕನ್ನು ಕತ್ತಲಾಗಿಸುತ್ತದೆ. ಅದಕ್ಕೊಂದು ಬಿಡುಗಡೆಯ ದಾರಿ ಬೇಕು. ಜೈನದರ್ಶನ ಬಿಡುಗಡೆಯ ದಾರಿಯೊಂದು ತೋರಿಸುತ್ತದೆ.
ಈ ಬಿಡುಗಡೆಯ ಪರಿಕಲ್ಪನೆಯೇ ವಿಸ್ಮಯಕರವಾದುದು. ಮನುಷ್ಯ ಯಾವುದರಿಂದ ಬಿಡುಗಡೆ ಪಡೆಯಬೇಕು. ನಂತರ ಎಲ್ಲಿ ಹೋಗಬೇಕು? ಬಿಡುಗಡೆ ಎಂಬುದು ಇದೆಯೆ? ನಾವು ಜೀವನದ ಸಹಜ ಗುಣಗಳಿಂದ ಬಿಡುಗಡೆಯಾಗಿ ವೈರಾಗ್ಯ ಸ್ಥಿತಿಯನ್ನು ಹೊಂದಿದರೆ ಏನಾಗುತ್ತದೆ. ಕ್ಷಣ ಹರಿಯುವ ನೀರು ನಿಂತಂತೆ ಆಗುವುದಿಲ್ಲವೆ? ಈ ಪ್ರಶ್ನೆಗಳು ಪಂಪನನ್ನು ಕಾಡಿವೆ. ಅವನ ಕಾಲದ ಸಾಂಸ್ಕೃತಿಕ ಪರಿಸರ ಮತ್ತು ಚರಿತ್ರೆಯ ಜೀವನ ವಿನ್ಯಾಸ ಪಂಪನಿಗೆ ಹೊಸ ತಾತ್ವಿಕತೆಯನ್ನು ಆಲೋಚಿಸುವಂತೆ ಮಾಡಿದೆ. ಆದ್ದರಿಂದ ಜೈನಧರ್ಮದ ವಿವೇಕದ ಮೂಲಕ ಮನುಷ್ಯನ ಆವ್ಯಂತಿಕ ಉತ್ಕಾಟತೆಗಳಾದ ವೈಭೋಗ ಮತ್ತು ವೈರಾಗ್ಯವನ್ನು ಮುಖಾಮುಖಿಯಾಗಿಸುತ್ತಾನೆ. ವೈಭವದ ಉತ್ತುಂಗತೆಯನ್ನು ನಿರೂಪಿಸುತ್ತಾನೆ. ಹಾಗೆ ವೈರಾಗ್ಯದ ತುತ್ತತುದಿಯನ್ನು ದರ್ಶಿಸುತ್ತಾನೆ. ಈ ಸ್ಥಿತಿಗಳು ಅಂತಿಮವಾಗಿ ಮನುಷ್ಯನಿಗೆ ಏನನ್ನು ಕೊಡುತ್ತವೆ. ಇವು ಅಳಿಯಲಾರದ ನಿರಂತರ ಪ್ರಕ್ರಿಯೆ ಎಂಬುದನ್ನು ಸೂಚಿಸುತ್ತಿದ್ದಾನೆಯೆ? ಆದಿಪುರಾಣದ ಲಲಿತಾಂಗ, ವಜ್ರಜಂಘ, ಆದಿನಾಥ, ಭರತ, ಬಾಹುಬಲಿಯರ ಕಥನದ ಮೂಲಕ ಈ ಮೂಲನೆಲೆಗಳನ್ನೇ ಶೋಧಿಸುವ ಪ್ರಯತ್ನ ಪಂಪ ಮಾಡುತ್ತಾನೆ.
ಭವಾವಳಿಗಳ ಕ್ರಮವು ವೈಭೋಗದ ನಿರಂತರತೆಯನ್ನು ರಚಿಸುತ್ತದೆ. ಜನ್ಮದಲ್ಲಿ ಅನುಭವಕ್ಕೆ ಬರುವ ಕಾಮ, ಭೋಗ, ಅಧಿಕಾರ, ಸಂಪತ್ತು, ಯುದ್ಧ, ಹಿಂಸೆಯಂತಹ ಸಂಗತಿಗಳು ಬೆನ್ನತ್ತಿ ಬದುಕನ್ನು ವಿಘಟನೆಗೊಳಿಸುತ್ತಲೇ ಇರುತ್ತವೆ. ಲೋಕ ಇವುಗಳ ಪಾಶಕ್ಕೆ ಒಳಗಾಗಿ ಹಿಂಸೆಯ, ವಿಕೃತಿಯ ಹಪಾಹಪಿಯೊಂದನ್ನು ಮೈಗೂಡಿಸಿಕೊಳ್ಳುತ್ತಿರುತ್ತದೆ. ಅದು ಅತಿಯ ಸ್ಥಿತಿ ತಲುಪಿದಾಗ ಪ್ರತಿಜನ್ಮದಲ್ಲೂ ಬಂಧನ ಆವರಿಸಿಕೊಳ್ಳುತ್ತದೆ. ಅಂದರೆ, ಮನುಷ್ಯ ತನ್ನತನವನ್ನು ಕಂಡುಕೊಳ್ಳುವುದು ವೈಭೋಗದ ಕುಲುಮೆಯಲ್ಲಿ ಸುಟ್ಟು ಸುಟ್ಟು ಗಟ್ಟಿಯಾದಾಗಲೆ. ನಂತರವೇ ಸಿದ್ಧಿ, ಅರಿವು ಸಂಸ್ಕಾರ, ಮುಕ್ತಿ ದೊರೆಯುತ್ತದೆ. ಮುಕ್ತಿಯ ಹಂತವೇ ವೈರಾಗ್ಯದ ಸ್ಥಿತಿ. ವೈರಾಗ್ಯದ ನಂತರ ಮತ್ತೆ ಜನನವಿಲ್ಲ. ಆದಿನಾಥನ ಕತೆ ಆರಂಭವಾಗಿ ಅವನೊಂದಿಗೆ ಮುಗಿಯುವುದಿಲ್ಲ. ಭರತನ ವೈಭೋಗದ ನಾಶ ಮತ್ತು ಕೇವಲ ಜ್ಞಾನದಿಂದ ಮುಕ್ತಾಯವಾಗುತ್ತದೆ. ಈ ಸಂದರ್ಭದಲ್ಲಿ ಬರುವ ಜನ್ಮ ಜನ್ಮಗಳ ಭವಾವಳಿಗಳ ವೈಭೋಗವನ್ನು ಮೀರುತ್ತಾ, ಲೌಕಿಕದಿಂದ ಮುಕ್ತಿ ಪಡೆಯುತ್ತಲೇ ಇರಬೇಕಾಗುತ್ತದೆ. ಮುಕ್ತಿ ಒಮ್ಮೆ ಸಿಕ್ಕು ಮುಗಿದು ಹೋಗುವುದಿಲ್ಲ. ಅದು ಮತ್ತೆ ಪಡೆಯುತ್ತಲೇ ಇರಬೇಕಾದ ನಿರಂತರ ಪ್ರಕ್ರಿಯೆ. ಅದಕ್ಕೆ ಪಂಪ ಆದಿದೇವನು ಪಡೆಯುವ ಜನ್ಮಗಳ ವಿವರ ಮತ್ತು ವೈಭೋಗ ಜೀವನವನ್ನು ಕಟ್ಟಿಕೊಡುತ್ತಾನೆ. ಒಂದು ಪದ್ಯದಲ್ಲಿ ಸಂಗ್ರಹವಾಗಿ ಆದಿದೇವನ ಜನ್ಮಗಳನ್ನು ಹೇಳುತ್ತಾನೆ.
ಭೋಗಕಾಂಕ್ಷೆಯೊಳ್ ಜಯವಮಳಂ, ಬವೆಕೀ ಮಹಾಬಳಂ,
ಲಲಿತಾಗಂ, ವಜ್ರಜಂಘಂ
ಭೋಗಭೂಮಿಜಂ ಶ್ರೀಧರ ದೇವರ, ಸುವಿಧನರಾಧಿಪನ್,
ಅಮ್ಯತೇಂದ್ರಂ ಸಾಗರಾಂತಂ
ನೆಲನನಿತುಮಂ ಚಕ್ರದಿಂದ ಬೆಸರಯ್ಯದ ವಜ್ರನಾಭಿಯಾಗಿ
ಸವಾರ್ಥಸಿದ್ಧಿಯೊಳ್ ಪುಟ್ಟಿ ಬಂದಿಲ್ಲ ತಾನಾದಿ ದೇವನದಂ (ಆದಿಪು. 11-44)
ಆದಿದೇವನು ಮುಕ್ತಿಯನ್ನು ವೈರಾಗ್ಯದ ಹಂತವನ್ನು ತಲುಪಲು ಒಂಭತ್ತು ಜನ್ಮಗಳನ್ನು ಪಡೆಯಬೇಕಾಯಿತು. ಜಯವರ್ಮನು ಮಹಾಬಳ, ಲಲಿತಾಂಗ, ವಜ್ರಜಂಘಿ, ಆರ್ಯ, ಶ್ರೀಧರದೇವ, ಸುವಿಧಿ, ಅಚ್ಯತೇಂದ್ರ, ವಜ್ರನಾಭಿ, ಅಹಮಿಂದ್ರನೆಂಬ ಒಂಬತ್ತು ಜನ್ಮಗಳನ್ನು ತಾಳಬೇಕಾಯಿತು. ಈ ಹಂತದಲ್ಲಿ ಆದಿದೇವನು ಅನುಭವಿಸುವ ವೈಭೋಗ ಉತ್ಕೃಷ್ಟವಾದುದು. ಈ ವೈಭೋಗ ಅನುಭವವನ್ನು ಸೃಷ್ಟಿಸುವುದಿಲ್ಲ. ಜೀವನಕ್ಕೆ ಪದಾರ್ಥವನ್ನು ತೋರಿಸುವುದಿಲ್ಲ. ಸಮಸ್ತವನ್ನು ಭೋಗದ ನೆಲೆಯಲ್ಲಿಯೇ ನೋಡುತ್ತದೆ. ಇದರಿಂದ ವ್ಯವಸ್ಥೆ ಅನೈತಿಕ ಸ್ವರೂಪ ಪಡೆಯುತ್ತದೆ. ಇದರಿಂದ ಪಾರಾಗುವ ಮಾರ್ಗ ವೈರಾಗ್ಯ. ವೈಭೋಗದ ಅನುಭವಗಳು ಸಂಪೂರ್ಣ ವೈರಾಗ್ಯದ ಅಂಶಗಳನ್ನು ಮರೆಮಾಚಿದರೆ ಅಲ್ಲಿ ಲೋಕನೀತಿ, ಧರ್ಮ ಉಳಿಯುವುದಿಲ್ಲ. ಈ ಆತಂಕ ಪಂಪನದು. ಆದ್ದರಿಂದ ಪಂಪ ವೈರಾಗ್ಯದ ಅನುಭವವನ್ನು ದರ್ಶನ ಮಾಡಿಸುತ್ತಾನೆ. ಲೋಕ ಸುಸ್ಥಿತಿಯಲ್ಲಿರಬೇಕಾದರೆ ಈ ಎರಡು ಅನುಭವಗಳು ಸಂಯೋಗಗೊಳ್ಳಬೇಕು. ಆಗ ನೈತಿಕ ಆವರಣ ವ್ಯವಸ್ಥೆಯಲ್ಲಿ ನಿರ್ಮಾಣವಾಗುತ್ತದೆ. ಇಲ್ಲದಿದ್ದರೆ ಹಿಂಸೆಯೇ ಬದುಕಿನ ಮಾನದಂಡ ಮತ್ತು ಮೌಲ್ಯವಾಗುತ್ತದೆ. ಆದ್ದರಿಂದ ಜೀವನ ಹೆಚ್ಚು ಭೋಗ ಲಾಲಸೆ, ಮೋಹ, ಲೋಭ, ವಿಜೃಂಭಣೆಯಿಂದ ಕೂಡಿರಬಾರದು. ಇದರಿಂದ ಕಳಚಿಕೊಳ್ಳುವ ಅರಿವು ಇರಬೇಕು. ಇಂತಹ ಅರಿವನ್ನು ಮನಗಾಣಿಸುವುದೇ ಪಂಪನ ಆದಿಪುರಾಣ. ಆ ಅರಿವು ಸೃಷ್ಟಿಯಾಗುವುದೆ ವೈಭೋಗ ಮತ್ತು ವೈರಾಗ್ಯದ ಮುಖಾಮುಖಿಯಲ್ಲಿ. ಎಲ್ಲಿವರೆಗೆ ನೋಡುವ, ಸವಿಯುವ, ಭೋಗಿಸುವ ಮನದ್ದೊಂದು ಇರುತ್ತದೆಯೋ ಅಲ್ಲಿವರೆಗೆ ವೈಭೋಗ ಹಿಡಿದಿರುತ್ತದೆ. ಅಲ್ಲಿ ಅರಿವು ಮೂಡುವುದಿಲ್ಲ.
ವೈರಾಗ್ಯವೊಂದು ಸ್ವಾತಂತ್ರ್ಯದ ಮುಖ. ಲೋಕಾಂತರದಿಂದ ಬಿಡುಗಡೆಯಾಗಿ ತನ್ನನ್ನು ತಾನು ಅರ್ಥಮಾಡಿಕೊಳ್ಳುತ್ತಾ ಮುನ್ನಡೆಯುವುದು. ಇದು ಅನುಭವಕ್ಕೆ ನಿಲುಕಬೇಕು. ಉಪದೇಶ, ನೀತಿ, ಆದರ್ಶದಿಂದ ಹುಟ್ಟುವಂತದಲ್ಲ. ತನಗೇನು ದಕ್ಕಲಿಲ್ಲ, ತನ್ನಿಂದ ಆಗುವುದಿಲ್ಲ. ಇನ್ನೊಬ್ಬರಂತೆ ನಾನಿಲ್ಲ ಎಂದು ಪಲಾಯನಗೈಯ್ದು ವೈರಾಗ್ಯ ಪಡೆಯುವ ಮುಖವಾಡ ನಿಜವಲ್ಲ. ಅದು ಮತ್ತೆ ಜನ್ಮಾಂತರದೊಳಗೆ ಹಿಂದಿನ ನೆನಪಿಗೆ ಕೊಂಡೊಯ್ಯುತ್ತದೆ. ಆದಿದೇವನಿಗೆ ಜನ್ಮಾಂತರದ ನೆನಪುಗಳೇ ಕಾಡುತ್ತಲೇ ಹೋಗುತ್ತವೆ. ಅದಕ್ಕೆ ಜನ್ಮ ತಳೆಯುತ್ತಾ ವೈಭೋಗದಲ್ಲಿ ಮುಳುಗುತ್ತಾನೆ. ಆತನಿಗೆ ಸ್ವಾತಂತ್ರವೇ ಇಲ್ಲ. ಮೊದಲ ಜನ್ಮದ ಜಯವರ್ಮ ತನಗೆ ರಾಜ್ಯ ದೊರೆಯಲಿಲ್ಲವೆಂದು ವೈರಾಗ್ಯ ಪಡೆಯುತ್ತಾನೆ. ಮುಂದಿನ ಜನ್ಮದ ಮಹಾಬಲ ಸ್ವಯಂಬುದ್ದಿಯ ಮಾತುಕೇಳಿ ವೈರಾಗ್ಯ ತಾಳುತ್ತಾನೆ. ಲಲಿತಾಂಗ ಕೂಡ ಹಿಂದಿನ ನೆನಪುಗಳಿಂದ ಪಾರುಮಾಡೆಂದು, ನೆನಪುಗಳೇ ಅಳಿಸದೆ ಭಯಗೊಂಡು ವೈರಾಗ್ಯ ಪಡೆಯಲು ಬಯಸುತ್ತಾನೆ. ವಜ್ರಜಂಘನ ವಿರಹ, ಪ್ರೇಮ, ಕಾಮವು ಕೂಡ ವೈರಾಗ್ಯಕ್ಕೆ ಪ್ರೇರೇಪಿಸುತ್ತದೆ. ವಜ್ರಜಂಘಿ ಮತ್ತು ಶ್ರೀಮತಿ ಹಿಂದಿನದನ್ನು ನೆನಪಿಸಿಕೊಂಡು ಅದರಿಂದ ಬಿಡುಗಡೆಯಾಗಬೇಕೆಂದು ಬಯಸುತ್ತಲೇ ಕಾಮೋನ್ಮತ್ತರಾಗುತ್ತಾರೆ. ಇದೊಂದು ರೀತಿಯ ವೈರಾಗ್ಯವೆ. ವಜ್ರಬಾಹುವಿನದು ವಿಚಿತ್ರವಾದ ವೈರಾಗ್ಯ ಬದುಕಿರುವಾಗಲೇ ಸಾವಿನ ಅನುಭವ ಪಡೆಯಬೇಕೆಂದು ಬಯಸುತ್ತಾನೆ. ವಜ್ರಜಂಘನಾಗುವ ಹೊತ್ತಿಗೆ ಹಿಂದಿನ ಎಲ್ಲಾ ನೆನಪುಗಳನ್ನು ಕಳೆದುಕೊಂಡಿದ್ದಾನೆ. ಆದರೆ, ನೋಡುವ ಆಶೆ ತೀರಿಲ್ಲ. ವಜ್ರನಾಭಿ ಬದುಕಿಗೆ ಅರ್ಥವಿಲ್ಲವೆಂದು ಸನ್ಯಾಸ ಸ್ವೀಕರಿಸುತ್ತಾನೆ. ಇವು ಯಾವುವು ಪರಿಪೂರ್ಣ ವೈರಾಗ್ಯ ಸ್ಥಿತಿಯಲ್ಲ. ಅನುಭವದ ಅರ್ಥೈಯಿಸುವಿಕೆಯಿಂದ ಹುಟ್ಟಿದವುಗಳಲ್ಲ.
ನೀಲಾಂಜನೆಯ ನೃತ್ಯದ ಸಂದರ್ಭದಲ್ಲಿ ಕ್ಷಣ ಮಾಯವಾಗುವ ನೀಲಾಂಜನೆ ಬದುಕಿನ ದರ್ಶನವನ್ನು ಮಾಡಿಸುತ್ತಾಳೆ. ವೃಷಭನಾಥ ಏಕಕಾಲಕ್ಕೆ ನಿತ್ಯದ ವೈಭವ ಮತ್ತು ವೈರಾಗ್ಯದ ಅನುಭವವನ್ನು ಪಡೆಯುತ್ತಾನೆ. ಈ ಕ್ಷಣದಲ್ಲಿಯೇ ವೃಷಭನಾಥನಿಗೆ ಅರಿವು ಮೂಡುತ್ತದೆ. ಈ ಅರಿವಿನ ಕಿಡಿಯೇ ತೀರ್ಥಂಕರ ಸ್ಥಿತಿಗೆ ಒಯ್ಯುತ್ತದೆ. ಆದರೂ ಮನುಷ್ಯ ಮತ್ತೆ ವೈಭೋಗಕ್ಕೆ ಮರಳುತ್ತಾನೆ. ಕಾವ್ಯದಲ್ಲಿ ಇಷ್ಟೆಲ್ಲಾ ಅನ್ವೇಷಣೆ ನಡೆದರೂ ಭರತ ಮತ್ತೆ ವೈಭೋಗದಲ್ಲಿ ಮುಳುಗುತ್ತಾನೆ. ಎಲ್ಲಾರು, ಎಲ್ಲವು ತನ್ನ ಅಧೀನದಲ್ಲಿ ಇರಬೇಕೆಂದು ಬಯಸುತ್ತಾರೆ. ಅವನ ತೀರದ ದಾಹ ದಾಯಾದಿ ಸಂಘರ್ಷಕ್ಕೆ ಭಾರಿ ಮಾಡುತ್ತದೆ. ಇದು ನಿರಂತರವಾಗಿರುವ ವಾಸ್ತವ ಸಂಗತಿ. ಆದ್ದರಿಂದ ಪಂಪ ಬಾಹುಬಲಿಯ ಮೂಲಕ ಲೋಕಕ್ಕೆ ಮತ್ತೊಂದು ವೈರಾಗ್ಯದ ವಾಸ್ತವವನ್ನು ಮನಗಾಣಿಸುತ್ತಾನೆ.
ಭರತ ಬಾಹುಬಲಿಯ ನಡುವಿನ ಸಂಘರ್ಷ ಅರಿವಿನ ಕಿಡಿಯನ್ನು ಹುಟ್ಟಿಸುತ್ತದೆ. ಮನುಷ್ಯನೊಳಗೆ ನೆಲೆಸಿರುವ ಅಧಿಕಾರ ಮಧ, ಸರ್ವವೂ ನನ್ನದಾಗಬೇಕೆಂಬ ಅತಿಯಾಸೆ, ಅಹಂಕಾರ, ಹಿಂಸೆಯ ಮನೋವೃತ್ತಿ ಭರತನ ಮೂಲಕ ಅನಾವರಣಗೊಳ್ಳುತ್ತದೆ. ಭರತ ಎಲ್ಲವೂ ತನ್ನಿಂದಲೇ ನಡೆಯಬೇಕು. ಸರ್ವಸ್ವವೂ ತಲೆಬಾಗಿ ನಡಕೊಳ್ಳಬೇಕೆಂಬ ಸರ್ವಾಧಿಕಾರಿ ಮನೋಧರ್ಮವೇ ವೈಭೋಗದ ತುಟ್ಟತುದಿ. ಇದೇ ಲೋಕದಲ್ಲಿ ಮೌಲ್ಯ. ಇದನ್ನು ಸ್ಥಾಪಿಸಲು ಯುದ್ಧಗಳು ಬೇಕು. ಯುದ್ದದಿಂದ, ಬಲದಿಂದ ಬಗ್ಗು ಬಡಿದು ತನ್ನಾಧೀನ ಮಾಡಿಕೊಂಡು ಚಕ್ರಾಧಿಪತ್ಯ ಕಟ್ಟಿಕೊಳ್ಳುತ್ತಾ ಹೋಗುವುದು. ಮಾನವ ಸಂತತಿ ಹೀಗೆ ಬೆಳೆದಿದೆ. ಇದು ನಿರರ್ಥಕ. ಆದ್ದರಿಂದ ಪಂಪ ಭರತನ ಮನೋಭಾವಕ್ಕೆ ಬಲವಾದ ವೈರಾಗ್ಯದ ಶಕ್ತಿಯನ್ನು ಸೃಷ್ಟಿಸುತ್ತಾನೆ. ಭರತ ಭೂಮಂಡಲವನ್ನೆಲ್ಲ ಗೆಲ್ಲುತ್ತಾನೆ. ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಯುದ್ಧದಾಹ. ವಿಜಯೋತ್ಸವ ತೀರುವುದೇ ಇಲ್ಲ. ಎಲ್ಲವನ್ನು ಗೆದ್ದು ವೃಷಭಾಚಲಕ್ಕೆ ಬರುತ್ತಾನೆ. ಅಲ್ಲಿ ತನ್ನ ವಿಜಯೋತ್ಸವಗಳನ್ನು ಕೆತ್ತಿಸಿಬೇಕೆಂದು ಬಂಡೆಗಳನ್ನೆಲ್ಲ ನೋಡುತ್ತಾನೆ. ಎಲ್ಲಿಯೂ ಸ್ವಚ್ಚವಿರುವುದಿಲ್ಲ. ಎಲ್ಲಾ ಬಂಡೆಗಳ ಮೇಲೆ ಹಿಂದಿನ ರಾಜರ ದಿಗ್ವಿಜಯ ವರ್ಣನೆಗಳು ಇರುತ್ತವೆ. ಆಗ ಪಂಪ `ಸೊಂದುಳಿದು ಕೊಳಗೊಂಡ ಗರ್ವರಸು’ ಎನ್ನುತ್ತಾನೆ. ಆದರೂ ಬಂಡೆಯ ಮೇಲಿನ ಅಕ್ಷರ ಅಳಿಸಿ ತನ್ನ ದಿಗ್ವಿಜಯಗಳನ್ನು ಬರೆಸುತ್ತಾನೆ. ಇಲ್ಲಿ ಗಮನಿಸಬೇಕಾದ್ದು ಆಳುವ ವ್ಯವಸ್ಥೆ ಹಿಂಸೆಯನ್ನೇ ನಂಬಿಕೊಂಡಿದೆ. ಹಿಂಸೆಯನ್ನು ಜೀವಂತಗೊಳಿಸಲು ವೈಭೋಗ ಬೇಕು. ವೈಭೋಗ ಹೆಚ್ಚಿದಂತೆ ಒಂದು ಸರ್ವಾಧಿಕಾರದ ಪ್ರಭಾವಳಿ ಬೆಳೆಯುತ್ತದೆ. ಅದು ಯುದ್ಧವನ್ನೇ ಸೃಷ್ಟಿಸುತ್ತದೆ. ಎಲ್ಲಾ ಕಾಲದಲ್ಲಿಯೂ ಈ ನಿಲುವು ಚಲನೆಯಲ್ಲಿದೆ. ಆದ್ದರಿಂದ ಪಂಪ ಈ ಚಲನೆಯನ್ನು ಬೇರೆಡೆಗೆ ತಿರುಗಿಸುತ್ತಾನೆ. ಲೋಕ ಯುದ್ಧ, ವೈಭೋಗದಲ್ಲಿ ಮುಳುಗಿಹೋದರೆ, ಮನುಷ್ಯನ ಅಸ್ತಿತ್ವಕ್ಕೆ ಆಸ್ಪದ ಎಲ್ಲಿ ಎಂಬುದು ಕಾಡುತ್ತದೆ.
ಭರತನ ಮೋಹ ತನ್ನ ತಮ್ಮಂದಿರು ಅಡಿಯಾಳಾಗಬೇಕೆಂದು ಬಯಸುತ್ತದೆ. ಬಾಹುಬಲಿ ಎದುರು ನಿಲ್ಲುತ್ತಾನೆ. ಭರತನನ್ನು ಸೋಲಿಸಿ ಮತ್ತೆ ಅದೇ ಯುದ್ಧೋತ್ಸಾಹ ವೈಭೋಗದಲ್ಲಿ ಬಾಹುಬಲಿ ಮುಂದುವರೆಯುವುದಿಲ್ಲ. ವೈರಾಗ್ಯದ ಅನುಭವವನ್ನು ಅಣ್ಣನಿಗೆ ಮಾಡಿಸುತ್ತಾನೆ. ಅರಿವಿನ ದಾರಿ ತೋರಿಸುತ್ತಾನೆ. ಸೋತ ಅಣ್ಣನಿಗೆ ಸರ್ವವನ್ನು ಬಾಹುಬಲಿ ಒಪ್ಪಿಸುತ್ತಾನೆ. ಈ ಸಂದರ್ಭದಲ್ಲಿ ಬಾಹುಬಲಿ ಯೋಚಿಸುವುದು ವೈರಾಗ್ಯದ ನೆಲೆಯನ್ನು ಗಟ್ಟಿಗೊಳಿಸುತ್ತದೆ.
ಸೋದರರೊಳ್ ಸೋದರರಂ
ಕಾದಿಸುವುದು, ಸುತನಂ ತಂದೆಯೆಡೆಯೊಳ್ ಬಿಡ
ದುತ್ಪಾದಿಸುವುದು ಕೋಪಮನ್, ಆಳ
ವೀ ದೊರೆತೆನೆ ತೊಡರ್ವುದೆಯ ರಾಜ್ಯಶ್ರೀಯೊಳ್ (ಆದಿಪು14-122)
ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಮೀ ಭಟಖಡ್ಗ ಮಂದಲೋ ತ್ಪಲವನ ವಿಭ್ರಮಭ್ರ ಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ, ಭೂವಲಯ ಮನಯ್ಯನಿತ್ತುದು ಮನಾಂನಿನಗಿತ್ತೇನ್, ಇದೇವುದಣ್ಣ ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತಿ ಮಾಸದೇ? (ಆದಿಪು 14-130)
ಈ ರಾಜ್ಯವನ್ನೆಲ್ಲ ಮತ್ತೆ ನಿನಗೆ ಕೊಡುತ್ತೇನೆ ನೀನು ಬಯಸಿದ್ದಕ್ಕೆ ನಾನು ಆಶೆ ಪಡುವುದು ನನಗೆ ಕಂಟಕ ಎಂದು ಬಾಹುಬಲಿ ಎಲ್ಲವನ್ನು ಅಣ್ಣನಿಗೆ ಒಪ್ಪಿಸುತ್ತಾನೆ. ತನಗೆ ಕಟಂಕ ಬರುವುದಿಲ್ಲವೆ ಎಂಬ ಬಾಹುಬಲಿಯ ಮಾತು ವೈರಾಗ್ಯವು ಒಂದು ವ್ಯವಸ್ಥೆಯಾಗಬಾರದು ಎಂಬುದನ್ನು ಸೂಚಿಸುತ್ತದೆ. ಭರತನ ವೈಭೋಗದ ಮಿತಿ ಬಾಹುಬಲಿಯ ವೈರಾಗ್ಯದಿಂದ ಗೋಚರಿಸುತ್ತದೆ. ವೈರಾಗ್ಯವು ಕೂಡ ಕಠೋರ ಆಚರಣೆಯಾಗಿ, ನಿಯಂತ್ರಣಯಾಗಿ ನಿಲ್ಲಬಾರದು ಹಾಗಾದರೆ ಅದಕ್ಕೆ ಅರ್ಥವಿಲ್ಲ. ಆದ್ದರಿಂದ ಪಂಪನಿಗೆ ಇವೆರಡರ ಸಂಯೋಗದಿಂದ ಹುಟ್ಟುವ ಅರಿವು ಮುಖ್ಯವಾದುದು ಲೋಕ ಈ ಅರಿವು ದಾರಿಯಲ್ಲಿ ನಡೆಯಬೇಕು.
ಪಂಪನಿಗೆ ಈ ಸಂಗತಿ ಯಾಕೆ ಕಾಡುತ್ತದೆಂದರೆ ಸೃಷ್ಟಿಯನ್ನು ಕೆಡಿಸುತ್ತದೆ ಎಂಬ ಆತಂಕ. `ಸೃಷ್ಟಿಯು ಕೆಟ್ಟುಪೋಗುದೆ’ (8.11 ಆಪು) ಎನ್ನುತ್ತಾನೆ. ಯಾವಾಗ ಸೃಷ್ಟಿ ಕೆಡುತ್ತದೆಂದರೆ ವೈಭೋಗವೇ ಜೀವನ ಮೂ ಮೌಲ್ಯವಾದಾಗ. ಶಾಂತಿ,
ಅಹಿಂಸೆ ನೆಲೆಗೊಳ್ಳಲು ಈ ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಸೃಷ್ಟಿ ಸರಿಯಾಗಿರಬೇಕು. ಇಲ್ಲದಿದ್ದರೆ ಅರಾಜಕತೆ, ತಲೆ ಎತ್ತುತ್ತದೆ. ಸೃಷ್ಟಿ ಸರಿಯಾಗಿದ್ದಲ್ಲಿ ಧರ್ಮ ನೆಲೆಸುತ್ತದೆ. ಅದಕ್ಕೆ ಪಂಪ `ಜಗತೀ ಸಂತತಿ ನೀವೆ ನಿನಗೆ ಧರ್ಮ ಸಂತತಿ ನಿಾಂ (8: 13 ಆಪು) ಎನ್ನುತ್ತಾನೆ. ಜಗತ್ತಿನ ಸರ್ವ ಸಂತತಿಯು ಉಳಿದು ಬಾಳಬೇಕು. ಅಲ್ಲಿ ಧರ್ಮ ತಾನಾಗಿಯೇ ನೆಲೆ ನಿಲ್ಲುತ್ತದೆ. ಸಂತತಿಯನ್ನೇ ನಾಶ ಮಾಡುವುದು ವೈಭೋಗ.
ಭೋಗಕ್ಕೆ ಅಂಟಿಕೊಂಡ ಮಹಾಬಲವನ್ನು ಸ್ವಯಂಬದ್ಧ ಹೀಯಾಳಿಸುವ ಪದ್ಯ ವೈಭೋಗದ ಮಿತಿಯನ್ನು ಸೂಚಿಸುತ್ತದೆ. ವಯಸ್ಸಾದರೂ ಇನ್ನೂ ಅಧಿಕಾರಕ್ಕೆ, ಭೋಗಕ್ಕೆ ಮಹಾಬಲ ಹಾತೊರೆಯುತ್ತಿದ್ದಾನೆ. ತಪಸ್ಸಿಗೆ ಹೋಗಬೇಕಾದವನು ಹೇಗೆ ಮೋಹದಲ್ಲಿದ್ದಾನೆ ಎಂದು ಸ್ವಯಂಬುದ್ಧ ಪ್ರಲಾಪಿಸುತ್ತಾನೆ.
ಮಂದಿ ಕೋತಿಯಂತೆ ತನ್ನ ಮುಖ ಸುಕ್ಕುಗಟ್ಟಿದ್ದರೂ ಇವನಿಗೆ ಅಳುಕಿಲ್ಲ. ದೇಹವೆಲ್ಲ ಗುಡುಗೂರಿ ಎಲುಬುಗೂಡಾಗಿದ್ದರೂ ಇವನಿಗೆ ಅದು ಕಾಣುವುದೇ ಇಲ್ಲ. ವ್ಯಸನ, ಉದ್ರೇಕಗಳು ನಿರಂತರ ಉಂಟಾಗುತ್ತಿದ್ದರೂ ಇವನಿಗೆ ತಿಳುವಳಿಕೆಯೇ ಮೂಡುತ್ತಿಲ್ಲ. ಶಕ್ತಿ ಕುಂದುತ್ತಿದ್ದರೂ, ಮುಪ್ಪು ಅಡರುತ್ತಿದ್ದರೂ, ರೋಗ ಪೀಡಿತವಾಗಿದ್ದರೂ ಇವನು ತನ್ನ ಮುಂಚಿನ ವ್ಯಾಮೋಹ ಕಾಮುಕತನಗಳೇನನ್ನೂ ಬಿಡುತ್ತಿಲ್ಲ. (2:45 ಆಪು) ವೈರಾಗ್ಯದ ಸಂದರ್ಭದಲ್ಲಿಯೂ ವೈಭೋಗದಲ್ಲಿ ಮುಳುಗುವುದು ಸೃಷ್ಟಿಯನ್ನು ಕೆಡಿಸುತ್ತದೆ.
ವೈರಾಗ್ಯವು ಕೂಡ ಪಲಾಯನವಾದಿಯಾಗಿರಬಾರದು. ಅದು ಬದುಕನ್ನು ಮುನ್ನಡೆಸುವ ಕ್ರಮವಾಗಬೇಕು. ಸಮಾಜದ ತಳಪಾಯವನ್ನು ಗಟ್ಟಿಗೊಳಿಸುವ ವ್ಯವಸ್ಥೆಯಾಗಬೇಕು. ಅನುಭವಿಸುವ ಕರ್ತವ್ಯಗಳು ಸಮಾಜಮುಖಿಯಾಗಿದ್ದು ಸ್ಪಷ್ಟ ರಾಜನೀತಿಯನ್ನು ಹೊಂದಿರಬೇಕು. ಮಾಡುವ ಕರ್ತವ್ಯದಿಂದ ವಿಮುಖನಾಗಿ ನಡೆಯುವುದು ವೈರಾಗ್ಯವಲ್ಲ. ವಜ್ರದಂತನ ಮಗ ಅಮಿತೇಜ ತನಗೆ ಭೌತಿಕ ಸುಖ ಬೇಡವೆಂದು ತಪಸ್ಸು ಕೈಗೊಳ್ಳುತ್ತಾನೆ. ಇದು ವೈರಾಗ್ಯದ ಸ್ಥಿತಿಯಲ್ಲ. ಇಂತಹ ಕರ್ತವ್ಯಚ್ಯುತಿ ವೈರಾಗ್ಯವಲ್ಲ. ನಿರಾಕರಣೆ ಲೋಕಕ್ರಮಗಳನ್ನು ಮೀರದೆ ಲೋಕದೊಳಗೆ ಒಂದಾಗುವುದು. ತನ್ನತನ ಕಂಡುಕೊಂಡು ಅನ್ವೇಷಣೆ ಮಾಡಿಕೊಳ್ಳುವುದು. ಲೋಕನೀತಿಯನ್ನು ಸೃಷ್ಟಿಸುತ್ತಲೇ ಮಾನವೀಯ ಬದುಕನ್ನು ಸೃಷ್ಟಿಸುವುದು ವೈರಾಗ್ಯ. ದರ್ಪ, ದೌರ್ಜನ್ಯ, ದಬ್ಬಾಳಿಕೆಯ ನೆಲೆಯನ್ನು ನಿರಾಕರಿಸುವುದು.
ಲೋಕಕ್ರಮ ಮೀರಿದರೆ ಎಂಥ ಶಿಕ್ಷೆ ಎಂಬುದನ್ನು ಪಂಪ ಹೇಳುತ್ತಾನೆ. ಇದು ವೈಭೋಗದ ಲಾಲಸೆಗಾಗಿ ನೀತಿ ತಪ್ಪಿದರೆ ಆಗುವ ಉಗ್ರಶಿಕ್ಷೆ.
ಸದಾ ಸುಳ್ಳು ಪುರುಕನಾದವನ ನಾಲಿಗೆಯನ್ನು ಕೆಲವರು ಇಕ್ಕುಳದಿಂದ ಕೇಳುತ್ತಾರೆ. ಪರವಧು ವ್ಯಸನಿಯೊಬ್ಬನನ್ನು ನೀನು ಯಾವಾಗಲೂ ಇನ್ನೊಬ್ಬರ ಅಂಗನೆಯನ್ನು ಆಶಿಸುವನಾದ್ದರಿಂದ ತಗೋ ಈ ಹೆಣ್ಣನ್ನು ಅಪ್ಪಿಕೊ ಎಂಬ ಕೆಂಪಗೆ ಕಾದ ಲೋಹದ ಹೆಣ್ಣು ಬೊಂಬೆಯನ್ನೂ ಅಪ್ಪಿಸುತ್ತಾರೆ. (5:81 ಆಪು)
ಪಂಪನಿಗೆ ವೈರಾಗ್ಯವೆಂಬುದು ಲೋಕನಿರಾಕರಣೆಯಲ್ಲ ಲೋಕಪ್ರೀತಿ. ವೈಭೋಗ ಲೋಕಪ್ರೀತಿಯನ್ನು ನಿರಾಕರಿಸಿ, ತನ್ನ ಅಧೀನಗೊಳಿಸುವ ಬಲಪ್ರಯೋಗ ಮಾಡುತ್ತದೆ. ಇದರಿಂದ ಬಿಡುಗಡೆಯಾಗುವುದು ಮುಖ್ಯ ಸಂಸಾರ ಪ್ರೀತಿ ಮೊದಲು. ನಂತರ ವೈರಾಗ್ಯ ಭೋಗ ಮತ್ತು ಯೋಗಗಳು ಸಮನ್ವಯ ಸ್ಥಿತಿಯಲ್ಲಿರಬೇಕು. ಮಾನವನ ಮಿತಿ ಭೋಗದಲ್ಲಿಯೇ ಮುಳುಗುವುದು. ಇದು ಅಪಾಯಕಾರಿಯಾದುದು. ಭೋಗಸುಖ ಮತ್ತು ಯೋಗಸುಖಗಳು ಅತೀ ಸ್ಥಿತಿಗೆ ಹೋಗಬಾರದು. ಯೋಗಸುಖ ಮನೋಸುಖವಾದುದು. ಮನೋಸುಖವೇ ಮುಖ್ಯವೆಂದು ಭಾವಿಸಿದರೆ ಅದೊಂದು ಲೋಕವಿರೋಧಿಯಾಗಿ ಅನೈತಿಕತೆ ಪಡೆಯುತ್ತದೆ. ಆದ್ದರಿಂದ ವೈಭೋಗ ಮಿತಿಯಲ್ಲಿರಬೇಕು. ವೈರಾಗ್ಯ ಕ್ರಿಯಾಹೀನವಾಗಿರಬಾರದು. ಕಾಯಕದೊಂದಿಗೆ ಇರಬೇಕು. ಇಲ್ಲದಿದ್ದರೆ ಅದರಿಂದ ಯಾವ ಪ್ರಯೋಜನವಿಲ್ಲ. ವೈಭೋಗ ಮತ್ತು ವೈರಾಗ್ಯಕ್ಕೆ ಲೋಕಕಲ್ಯಾಣವೇ ಧರ್ಮವಾಗಬೇಕು ಆಗ ಧರ್ಮ ಆತ್ಮಸಾಕ್ಷತ್ಕಾರ ನಿರ್ಮಿಸುತ್ತದೆ. ಮಾನವನು ಧರ್ಮವಂತನಾಗುತ್ತಾನೆ.
- ಹಳೆಮನೆ ರಾಜಶೇಖರ
ಕನ್ನಡ ವಿಭಾಗ
ಶ್ರಿ ಧ. ಮಂ. ಕಾಲೇಜು(ಸ್ವಾಯತ್ತ), ಉಜಿರೆ
9008528112
ಈ ಅಂಕಣದ ಹಿಂದಿನ ಬರಹಗಳು:
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು
ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.