Date: 08-01-2025
Location: ಬೆಂಗಳೂರು
"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ.ಹೆಚ್ ನಾಯಕರು ಹೇಳಿರುವಂತೆ “ಈ ಕಥೆಯು ಸುಸಂಬದ್ಧ ನಿರೂಪಣೆಯ ಗತಿಯಲ್ಲಿಯೇ ಒಂದು ಅಸಂಬದ್ಧ ಸ್ಥಿತಿಯನ್ನು ಸಮರ್ಥವಾಗಿ ಎದುರು ನಿಲ್ಲಿಸುತ್ತದೆ”, ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ಎ.ಕೆ. ರಾಮಾನುಜನ್ ಅವರ “ಅಣ್ಣಯ್ಯನ ಮಾನವಶಾಸ್ತ್ರ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಸಾಹಿತ್ಯ ಸಂದರ್ಭದಲ್ಲಿ ಎ.ಕೆ. ರಾಮಾನುಜನ್ ಅವರ ಹೆಸರು ಪ್ರಸಿದ್ಧವಾಗಿದೆ. ಕವಿಗಳು, ಲೇಖಕರು, ಹಾಗೂ ಉತ್ತಮ ಭಾಷಾಂತಕಾರರು ಆದ ಇವರು 1929 ಮಾರ್ಚ್ 16 ರಂದು ಮೈಸೂರಿನಲ್ಲಿ ಜನಿಸಿದರು. 1961 ರಲ್ಲಿ ಭಾಷಾಶಾಸ್ತ್ರದಲ್ಲಿ “ಜನರೇಟಿವ್ ಗ್ರಾಮರ್ ಆಫ್ ಲಿಂಗಸ್ಟಿಕ್” ಎಂಬ ವಿಷಯದ ಮೇಲೆ ಪಿ.ಹೆಚ್.ಡಿ ಪದವಿಯನ್ನು ಪಡೆದರು. ಇವರು ಪ್ರಸಿದ್ಧ ಕಥೆಗಾರರು ಅಲ್ಲದಿದ್ದರೂ “ಅಣ್ಣಯ್ಯನ ಮಾನವಶಾಸ್ತ್ರ”, “ಮಧುರೆಯಲ್ಲಿ ಒಂದು ತಲೆ”. ಎಂಬೆರಡು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. “ಹೊಕ್ಕುಳಲ್ಲಿ ಹೂವಿಲ್ಲ”, ಹಾಗೂ “ ,,,,,,, ಮತ್ತು ಇತರ ಪದ್ಯಗಳು”, “ಕುಂಟೆಬಿಲ್ಲೆ”, ಎಂಬ ಕವನ ಸಂಕಲನಗಳು ಪ್ರಕಟವಾಗಿದ್ದು, ಭಾಷಾಂತಕಾರರಾಗಿ “ಶೌರಿಯವರ ಹಳದಿ ಮೀನು”, ಮತ್ತು “ಸ್ಪೀಕಿಂಗ್ ಆಫ್ ಶಿವ”, ಅನಂತಮೂರ್ತಿಯವರ “ಸಂಸ್ಕಾರ” ಕಾದಂಬರಿ ಕೂಡ ಈ ಮೇಲಿನ ಭಾಷಾಂತರಕೆ ಸೇರ್ಪಡೆಗೊಳ್ಳುತ್ತದೆ.
ಇವರ ಅಣ್ಣಯ್ಯನ ಮಾನವಶಾಸ್ತ್ರ ಎಂಬ ಕಥೆಯು ಒಂದು ವಿಭಿನ್ನ ಆಯಾಮ ಹೊಂದಿದ ಕಥೆಯಾಗಿ ನಮಗೆ ಗೋಚರಿಸುತ್ತದೆ. ಕನ್ನಡ ಕಥಾಲೋಕದಲ್ಲಿ ಒಂದು ವಿಶಿಷ್ಟತೆಯಿಂದ ನೋಡುವ ಕಥೆಯಾಗಿದೆ. ಈ ಕಥೆಯು ಚಿಕಾಗೋದಲ್ಲಿ ಇರುವ ಅಣ್ಣಯ್ಯನು ಫರ್ಗುಸನ್ ಬರೆದ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಅಲ್ಲಿಯೇ ಕೂತು ಓದಿ ಕನಲುತ್ತಾ, ವಿಚಾರ ವಿಶಿಷ್ಟತೆ ವಿಸ್ಮಯತೆಗಳ ನಡುವೆ ಒಡಕುಗಳನ್ನು ತೊಡಕುಗಳನ್ನು ಪ್ರತಿಬಿಂಬಿಸುವಂತೆ ತೋರುತ್ತದೆ. ಹಿಂದೂ ಧರ್ಮದ ಪ್ರಕಾರ ಮನು ಹೇಳಿದ 12 ದ್ರವಗಳಿಂದ ನಮಗೆ ಉಂಟಾಗುವ ಸೋಕು; ಇದರ ಕುರಿತಾಗಿ ಪ್ರಾರಂಭವಾಗುವ ಕಥೆಯು ಮನುಷ್ಯನ ಬದುಕಿನ ಹುಟ್ಟು,ಮುಟ್ಟು, ಸಾವು, ಇವುಗಳಲ್ಲಿ ಬರುವ ಸೂತಕಗಳ ಬಗ್ಗೆ ತೆರೆದುಕೊಳ್ಳುತ್ತದೆ. ಚಿಕ್ಕಂದಿನಿಂದಲೇ ಮಲ ಮೂತ್ರ ಮಾಡಿದಾಗ ಕೈ ತೊಳೆಯಬೇಕು ಎಂಜಲು ಮಾಡಬಾರದು. ಹಾಗೆ ದಕ್ಷಿಣ ದೇಶದಲ್ಲಿ ಬಾಯಿಗಿಟ್ಟು ಊದುವ ಪೀಪಿ ನಾದಸ್ವರಗಳೆಲ್ಲ ಮುಟ್ಟಬಾರದ ವಸ್ತು. ವೀಣೆ ಬ್ರಾಹ್ಮಣರಿಗೆ ಮತ್ತು ಮುಖವೀಣೆ ಹೊಲೆ ಜಾತಿಗೆ, ಮಡಕೆಗಿಂತ ಬೆಳ್ಳಿ, ಹತ್ತಿಗಿಂತ ರೇಷ್ಮೆ ಉತ್ತಮ. ಆದರೆ ರೇಷ್ಮೆಯೇ ರೇಷ್ಮೆ ಹುಳದ ಮೈಯ ಮಲ ಎನ್ಬುವುದು ನಿಜ. ಆದರೆ ಅದು ಮಾತ್ರ ಮನುಷ್ಯರಿಗೆ ಮಡಿ ವಸ್ತುಗಳು. ಹೀಗೆ ಸಾಗುವ ಕಥೆಯು ಕೊನೆಗೆ ಅವರ ಕುಟುಂಬದ ದಾಯಾದಿಯಾದ ಸುಂದರರಾಯರ ಚಿತ್ರಗಳು, ಆತನ ಸ್ಟುಡಿಯೊ, ಅಪ್ಪ ಸತ್ತ ಸನ್ನಿವೇಶ, ತಾಯಿಯ ವೈಧವ್ಯದ ಸ್ಥಿತಿ. ಹೆಣ ಸುಡುವ ಸಂದರ್ಭಗಳಲ್ಲಿ ಅಗ್ನಿಗೆ ಹೇಳುವ ಮಂತ್ರ, ಸತ್ತವನು ದೇವರಂತೆ, ಆ ದೇಹ ವಿಷ್ಣು. ಆಕೆಯದಾದರೆ ಲಕ್ಷ್ಮಿ. ಸುಡುಗಾಡಿನಲ್ಲಿ ದಕ್ಷಿಣ ಮುಖವಾಗಿ ಚಿತೆಯ ಮೇಲೆ ದೇಹವನ್ನು ಇಡುವುದು, ಬಾಯಿಗೆ ಗಂಜಿ ಅಕ್ಷತೆ ಹಾಕುವುದು, ಚಿನ್ನ ಅರೆದು ಬಿಡುವುದು, ಈ ದುಬಾರಿ ಚಿನ್ನದ ದರದಲ್ಲಿ ಚಿನ್ನವನ್ನು ಬಿಡುವುದಾದರೂ ಎಂದು? ನಂತರ ಸೀಮಂತದ ಚಿತ್ರಣ ಹೀಗೆ ಅಣ್ಣಯ್ಯ ಚಿಕಾಗೊದಲ್ಲಿ ಕೂತು ಪುಸ್ತಕವನ್ನು ಓದುತ್ತಾ ಹೋದಂತೆ ತನ್ನ ಮನೆಯ ಮೈಸೂರಿನ ಚಿತ್ರಣವೇ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ. ಫರ್ಗುಸನ್ ಗೆ ಈ ಎಲ್ಲಾ ವಿವರಗಳನ್ನು ಹೇಳಿರುವ ತನ್ನ ದಾಯಾದಿ ಬಗ್ಗೆ ಮತ್ತು ಆತನ ವ್ಯಾಪಾರಿ ಬುದ್ಧಿಯ ಕುರಿತು ಈ ಮೋದಲೇ ರೋಸಿ ಹೋಗಿರುತ್ತಾನೆ ಅಣ್ಣಯ್ಯ. ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಾ ಮುನ್ನುಡಿ ಹೀಗೆ ಎಲ್ಲಾ ಓದುತ್ತಾ ಬಂದಾಗ ತನಗೆ ತಿಳಿಯದೆ ಇರುವ ಅದೆಷ್ಟೋ ವಿಚಾರಗಳು ಇವೆಯಲ್ಲ ಈ ಪುಸ್ತಕದಲ್ಲಿ ಎಂದೆನಿಸುತ್ತದೆ.
ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ.ಹೆಚ್ ನಾಯಕರು ಹೇಳಿರುವಂತೆ “ಈ ಕಥೆಯು ಸುಸಂಬದ್ಧ ನಿರೂಪಣೆಯ ಗತಿಯಲ್ಲಿಯೇ ಒಂದು ಅಸಂಬದ್ಧ ಸ್ಥಿತಿಯನ್ನು ಸಮರ್ಥವಾಗಿ ಎದುರು ನಿಲ್ಲಿಸುತ್ತದೆ”.
ಅವರ ನಿಲುವಿನಂತೆ ಅರ್ಥಾತ್ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತೆರೆದಿಡುತ್ತಲೇ, ಅಣ್ಣಯ್ಯನ ಅಪ್ಪನ ಸಾವು ಹಿಂದೂ ಧರ್ಮದ ಕ್ರಿಯೆಗೆ ಪೂರಕವಾಗಿ ಕಂಡುಬಂದರೂ ಸಹ ದೂರದಲ್ಲಿದ್ದ ಮಗನಿಗೆ ಬರಗೊಡದೆ ದಾಯಾದಿ ಸುಂದರರಾಯನೇ ಎಲ್ಲ ಕರ್ಮ ನಿರ್ವಹಿಸಿದಂತೆ ವ್ಯಕ್ತವಾಗುವ ಹಾಗೂ ತನ್ನ ಅಮ್ಮನೇ ಮಗನಿಗೆ ತೊಂದರೆಯಾಗುವುದು ಬೇಡ ದೂರದಲ್ಲಿರುವಾತ ಎಂದು ಹೇಳಿರಬಹುದೇ?. ಎಂಬ ಆಲೋಚನೆ ಮತ್ತು ಸುಂದರರಾಯನ ಮಾತಂದರೆ ‘ಬಾವಿಗೆ ಹಾರುವುದಕ್ಕೂ ಸಿದ್ದ ಅಮ್ಮ’ ಎಂದು ಅಸಮಾಧಾನ ತೋರ್ಪಡಿಸುವ ಅಣ್ಣಯ್ಯನ ಚಿಂತನೆಗಳೆಲ್ಲ ಗಾಳಿಗೆ ಹರಿಬಿಟ್ಟ ಪಟದಂತೆ ಎಲ್ಲೆಂದರಲ್ಲಿ ಹಾಯ್ದು ಮತ್ತೆ ಓದುವ ಪುಸ್ತಕದಲ್ಲಿ ಸ್ಥಿರಗೊಳ್ಳುತ್ತದೆ.
ಈ ಕಥೆಯಲ್ಲಿ ಅಣ್ಣಯ್ಯನ ಅಪ್ಪನ ಸಾವು ಹಿಂದೂ ಧರ್ಮದ ಸತ್ವ ಹೀನ ಸ್ಥಿತಿಯಂತೆ ಧ್ವನಿಸುತ್ತದೆ. ಕಾರಣ ಅಣ್ಣಯ್ಯನಿಗೆ ವಿಷಯ ತಿಳಿಸದೆ ದಾಯಾದಿ ಸುಂದರರಾಯ ತಾನೇ ಕರ್ಮ ಮಾಡಿದ. ಜೊತೆಗೆ ತಾಯಿಗೆ ತಲೆ ಬೋಳಿಸಿ ಬಿಟ್ಟರೂ ಏನೋ ಎಲ್ಲಾ ಆಚಾರವಂತರು ಸೇರಿಕೊಂಡು ಎನ್ನುವಾಗಿನ ಆತನ ಚಿಂತಾಕ್ರಾಂತ ಮನದ ಸ್ಥಿತಿ ಹಿಂದೂ ಧರ್ಮದ ಆಚಾರವಿಚಾರಗಳು ಬಗ್ಗೆ ಕ್ರೋದ ವ್ಯಕ್ತವಾಗುವುದು. ಇಂತಹ ಹೀನಾಯ ಸ್ಥಿತಿಯನ್ನು ಇದರೊಟ್ಟಿಗೆ ಏಕಮುಖವಾಗಿ ಸಂಪ್ರದಾಯ ಬದ್ದ ಆಚಾರಗಳಿಗೆ ಹೆಣ್ಣಿನ ವೈಧವ್ಯದ ಸ್ಥಿತಿಗೆ ಹಿಂದೂ ಧರ್ಮ ಸೂತ್ರಗಳು ಅರ್ಥ ಕಳೆದುಕೊಂಡು ಹೆಣ್ಣಿನ ಶೋಚನೀಯ ಸ್ಥಿತಿಗೆ ಹಾಗೂ ಧರ್ಮಸೂತ್ರಗಳ ಅಧ್ಯಯನದಲ್ಲಿ ತೊಡಗಿರುವ ಅಣ್ಣಯ್ಯನ ಸ್ಥಿತಿಗೂ ಮಧ್ಯ ಸಂಬಂಧ ಏರ್ಪಡಿಸುವ ಒಂದು ಸೂಕ್ಷ್ಮ ತರವಾದ ಹಾಗೂ ಅಷ್ಟೇ ತೀವ್ರವಾಗಿ ನಮಗೆ ಕಾಡಿ ವ್ಯಕ್ತವಾಗುವ ಒಳ ಸೂಕ್ಷ್ಮತೆಯ ಧ್ವನಿಯು ಎಚ್ಚರಿಸುವಂತಿದೆ.
ಹಿಂದು ಧರ್ಮದ ವಿಚಾರಗಳು ಹಾಗೂ ವಾಸ್ತವ ಬದುಕಿನ ಕ್ರೌರ್ಯ ಎರಡು ಸಹ ನಮಗೆ ಆಗೋಚರವಾದ ಅರ್ಥ ಸಂಬಂಧವನ್ನು ತೋರಿಸುತ್ತವೆ. ಸುಂದರರಾಯ ಎಂಬ ದಾಯಾದಿ ಹಿಂದೂ ಧರ್ಮ ಸಾರವನೆಲ್ಲ ಫರ್ಗುಸನ್ ನಿಗೆ ಮಾರಾಟ ಮಾಡಿದನು ಎಂಬ ದಿಗಿಲು ಆತಂಕ ಅಣ್ಣಯ್ಯನಿಗೆ ಮೂಡುವುದು. “ಕಾಮಾತುರದ ಹಾಗೆ ಈ ಆತ್ಮ ಜ್ಞಾನದ ಆತುರ-ಲಜ್ಜೆ ಇಲ್ಲ, ಭಯವಿಲ್ಲ ಇದಕ್ಕೂ. ಹಿಂದೂ ದೇಶದ ಸಂಪ್ರದಾಯಗಳ ಬಗ್ಗೆ ಮಾನವಶಾಸ್ತ್ರಜ್ಞರ ಬರಹ ಸಿಕ್ಕ ಸಿಕ್ಕಿದ್ದು ಓದಿದ”. ಎಂದು ಫರ್ಗುಸನ್ ಬಗ್ಗೆ ಆಲೋಚಿಸುವ ಅಣ್ಣಯ್ಯ ತಾನು ಕೂಡ ಚಿಕಾಗೋದಲ್ಲಿ ಯಾರೋ ಎಂಜಲು ಮಾಡಿಟ್ಟ ಕೂಡಿಟ್ಟ ತನ್ನ ಸ್ವಂತಿಕೆ ಇರದ ವಿಚಾರಗಳ ಕುರಿತು ಎಂಜಲು ಚಪ್ಪರಿಸುತ್ತಿರುವೆ ಎನ್ನುವುದು ಆತನಿಗೆ ಜ್ಞಾನವಿಲ್ಲ. ದಾಯಾದಿ ಸುಂದರರಾಯ ಹಿಂಧು ಧರ್ಮ ಸಾರವನ್ನು ಮಾರಾಟ ಮಾಡಿದ ನಿಜ. ಆದರೆ ತನ್ನ ಅರಿವಿಗೆ ಬಾರದೆ ಮಾರಾಟ ಮಾಡಿದ ಅಂಶವನ್ನು ವಸ್ತು ಸ್ಥಿತಿಯನ್ನು ಇಲ್ಲಿ ಕೂತು ಖರೀದಿಸುತ್ತದ್ದಾನೆ ಅಣ್ಣಯ್ಯ. ಅಲ್ಲಿ ಇದ್ದಾಗ ಅರ್ಥೈಸದೆ ಹೋಗಿರುವುದರ ಬಗ್ಗೆ ಆತನಿಗೆ ಪಶ್ಚಾತಾಪವಿಲ್ಲ. ಯಾರೋ ಹಿಂದೂ ಧರ್ಮ ಸಾರವನ್ನು ಮಾರಾಟ ಮಾಡಿದರು ಎಂಬುದರ ಬಗ್ಗೆ ಆಕ್ಷೇಪಣೆ ಇದೆ ಅಷ್ಟೇ. ಈ ತರನಾದ ವ್ಯಂಗ್ಯ ಈ ಕಥೆಯಲ್ಲಿ ಅಡಕವಾಗಿದೆ.
ಧರ್ಮಸೂತ್ರ ಓದುತ್ತಿರುವ ಅಣ್ಣಯ್ಯನಿಗೆ ತಾನು ಚಪ್ಪರಿಸಿ ಆಕ್ಷೇಪಣೆ ಮಾಡುತ್ತಿರುವುದು ನಮ್ಮವರಿಂದಲೇ ಪಡೆದುಕೊಂಡು ಬಂದ ಎಂಜಲು ಎಂಬ ಅರಿವು ಅಣ್ಣಯ್ಯನಿಗಿಲ್ಲ. ಯಾರೋ ನಮ್ಮದನ್ನು ಅಳವಡಿಸಿಕೊಂಡಿರುವುದು ಹಾಗೂ ಯಾರೋ ನಮ್ಮ ಸಿದ್ಧಾಂತಗಳನ್ನು ಪಡೆದು ವ್ಯಾಖ್ಯಾನಿಸುವುದು ನಮ್ಮಲ್ಲಿರುವ ಅಗಾಧವಾದ ಶಕ್ತಿ ಪಾಂಡಿತ್ಯಗಳ ಅರಿವು ನಮಗಿರದೆ ಬಿಟ್ಟುಕೊಡುವುದು ನಂತರ ಇವೆಲ್ಲವನ್ನು ಮಾರಾಟ ಮಾಡಿರುವವರ ಬಗ್ಗೆಯೇ ನಮ್ಮ ತಕರಾರು ಇರುತ್ತದೆಯೇ ಹೊರತು ನಮಗೆ ನಮ್ಮತನಗಳ ಬಗ್ಗೆ ನಾವು ಕಲಿತು ಸಾಗಬೇಕು ಎನ್ನುವುದರ ತಿಳಿವು ಇಲ್ಲದ್ದು ನಮ್ಮ ದೌರ್ಭಾಗ್ಯ.
ಇದೇ ಕಥೆಯನ್ನು ಸಮಕಾಲಿನ ಸಂದರ್ಭಕ್ಕೆ ವಿಮರ್ಶಿಸಿದಾಗ ವಸ್ತು ವಿಷಯ ಬೇರೆಯಾದರೂ ಇಂದು ಸಾಯುವ ಮುನ್ನ,ನಮ್ಮ ಸಾವಿನ ಕುರಿತಾದ ವಿಧಿ ವಿಧಾನಗಳನ್ನು ಖಾಸಗಿಯವರು ಬಂದು ನಡೆಸಲು ನಾವೇ ಖುದ್ದಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವಂತಹ ಹೀನಾಯ ಪರಿಸ್ಥಿತಿ ಎದುರಾಗಿರುವುದರ ಹಿನ್ನೆಲೆಯಾದರೂ ಏನು? ಎಂಬುದನ್ನು ಅವಲೋಕಿಸಿದಾಗ ಸಂಬಂಧಗಳ ಸಡಿಲತೆ, ಜಾಳುತನ, ಮೌಲ್ಯಗಳ ಕುಸಿತ, ಇತ್ಯಾದಿ ಎಂಬುದುನ್ನು ಅವಲೋಕಿಸಿಬಹುದು.ಪ್ರತಿಯೊಂದರ
ಅನುಕರಣಶೀಲ ಮನಸ್ಥಿತಿಯನ್ನು ಹೊಂದಿದ ನಾವು ಪಾಶ್ಚಿಮಾತ್ಯರ ಶೈಲಿಗೆ ಮಾರುಹೋಗಿದ್ದೇವೆ. ಆದರೆ ಅವರು ಇಂದು ನಮ್ಮ ಧರ್ಮಸಾರದ ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಮಲ ಮೂತ್ರ ಸೂತಕ ಇತ್ಯಾದಿಗಳ ಬಗ್ಗೆ ಸಾರ ಏನೇ ಹೇಳಿದರು ಎಲ್ಲವನ್ನು ವೈಜ್ಞಾನಿಕ ದೃಷ್ಟಿಕೋನದಡಿಯಲ್ಲಿ ವೀಕ್ಷಿಸಿದಾಗ ಹಿಂದಿನವರ ಪ್ರತಿಯೊಂದು ಆಚಾರಗಳಿಗೂ ಪ್ರಕೃತಿದತ್ತವಾದ ವಿಚಾರವಂತಿಕೆ ಮತ್ತು ಪ್ರಕೃತಿಯೊಂದಿಗೆ ಸಹ ಬಾಳ್ವೆ ಕಾಣುತ್ತದೆ. ಹಾಗಂತ ಅಸ್ಪೃಶ್ಯತರನ್ನು ಇನ್ನಷ್ಟು ಅಸ್ಪೃಶ್ಯರನ್ನಾಗಿ ದೂರ ಇಡು ಎಂದು ಯಾವ ಧರ್ಮಗ್ರಂಥಗಳು ಹೇಳಿದರೂ ಅಥವಾ ಹೇಳದಿದ್ದರೂ ಪ್ರಕೃತಿ ಎಂದೂ ಹೇಳಲಾರದು.ಪ್ರಕೃತಿಗೆ ಎಲ್ಲರೂ ಒಂದೆ ನೀತಿಯನ್ನು ಕಲಿಸಿದೆ.
ಕೆಲವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿ ಕೊಂಡಿರುವುದು ದುರಂತ.ಮುಖ ವೀಣೆಯನ್ನು ಕೇವಲ ಹೊಲೆ ಜಾತಿಯವರಿಗಷ್ಟೆ ಸಿಮೀತ ಎಂಬು ಕುರುಡು ಆಚಾರ ವಿಚಾರಗಳನ್ನು ಹಾಗೂ ಹೆಣಕ್ಕೆ ತೊಡಿಸಿದ ಬಟ್ಟೆ ಕೇವಲ ಹೊಲೆಯರಷ್ಟೆ ತೊಡಬೇಕು ಎಂಬೆಲ್ಲ ಇತ್ಯಾದಿ ಗೊಡ್ಟು ಸಂಪ್ರದಾಯಗಳನ್ನು ತೊರೆಯಬೇಕಿದೆ, ನಮ್ಮ ಮನದೊಳಗೆ ಇರುವ ಸ್ತರ ವಿನ್ಯಾಸದ ಅಸ್ಪೃಶ್ಯತೆಯ ಮನೋಭಾವವನ್ನು ಮೊದಲು ಕಿತ್ತೊಗೆಯಬೇಕಿದೆ. ಯಾವುದೇ ವಿಚಾರಗಳನ್ನು ನಮ್ಮದಾಗಿಸಿಕೊಳ್ಳದೆ, ನಮ್ಮ ಪಾಂಡಿತ್ಯ ಬೇರೆಯವರಿಗೆ ಕೊಟ್ಟು ನಂತರ ಅವರಲ್ಲಿಯೇ ಕೈಯೊಡ್ಡಿ ನಿಂತು ಎಂಜಲನ್ನು ಚಪ್ಪರಿಸುವಂತಹ ಹೀನ ಸ್ಥಿತಿ ಬಂದು ಒದಗಿರುವುದರ ಸೂಕ್ಷ್ಮಾತಿ ಸೂಕ್ಷ್ಮ ಅಂಶ ಈ ಕಥೆಯಲ್ಲಿ ವ್ಯಂಗ್ಯದೊಂದಿಗೆ ತೆರೆದುಕೊಳ್ಳುತ್ತದೆ. ಆದರೆ ಸಾಮಾನ್ಯ ಓದುಗನಿಗೆ ದಕ್ಕಿಸಿಕೊಳ್ಳಲಾರದ ಸುಸಂಬದ್ಧವಲ್ಲದ ಅರ್ಥ ಕಾಠಿಣ್ಯತೆ, ಕತೆಯೊಳಗೊಂದು ಕತೆಯಂತೆ ತೋರುವ, ಪಾತ್ರಗಳ ತೊಡಗುವಿಕೆ ಇರದೆ, ನಿರೂಪಕನೇ ಕಥಾಬಿಂದುವಾಗಿ, ಕಥಾತಂತ್ರ ಭಿನ್ನವಾಗಿ ತೋರುವುದು.ನಿರೂಪಣೆಯ ದಾಟಿ ಎಲ್ಲ ಎಲ್ಲೆಗಳ ಮೀರಿ ತೊಡಕು ಜಿಗುಟು ಅನಿಸದೆ ಇರಲಾರದು.
ಈ ಅಂಕಣದ ಹಿಂದಿನ ಬರಹಗಳು:
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.