ಉತ್ತಮ ಕೌಟುಂಬಿಕ ಧಾರಾವಾಹಿಗಳನ್ನು ಬರೆಯುವ ಎಲ್ಲಾ ಶಕ್ತಿಯೂ ಲೇಖಕರಲ್ಲಿದೆ


"ಅಂತ್ಯಪೂರ್ವ ಹಂತದಲ್ಲಿ ಆಧುನಿಕ ಭರಾಟೆ, ಪಟ್ಟಣದ ಗಾಳಿ, ಹಪಾಹಪಿ, ಅಭಿವೃದ್ಧಿ ಸೋಗಿನ ಚೆಲುವಿಗೆ ಕಥೆ ತಿರುಗಿಸಬಹುದಾಗಿತ್ತು. ಆದರೆ ಗ್ರಾಮೀಣ, ಜನಪದರ ಜೀವನ ವ್ಯವಸ್ಥೆ ವಿಶ್ವಾಸ ದೃಢವಾಗಿರುವುದರಿಂದ ಚಿಂತನೆಗಳು, ಎಷ್ಟೇ ಜಾಗತೀಕವಾದರೂ ಸ್ಥಳೀಯರ ಮೌಡ್ಯವಿಲ್ಲದ ನಿಜ ನಂಟಿಗೆ ಬೆಲೆ ಸಿಗುತ್ತವೆ," ಎನ್ನುತ್ತಾರೆ ವಾಸುದೇವ ಅಗ್ನಿಹೋತ್ರಿ. ಅವರು ಸುಧೀರ ಎಸ್ ಬಿರಾದಾರ ಅವರ ‘ಗೆದ್ದ ಕೀರ್ತಿ’ ಕೃತಿ ಕುರಿತು ಬರೆದ ವಿಮರ್ಶೆ.

ನಮ್ಮ ಪ್ರಶಿಷ್ಯ ಹಾಗೂ ಮಾಧ್ಯಮ ಮಿತ್ರ ಸುಧೀರ ಬಿರಾದಾರ ಅವರು ಬರೆದ ಈ ಚೊಚ್ಚಿಲ ಕಥಾ ಸಂಕಲನವು ತುಂಬಾ ಚೆನ್ನಾಗಿದೆ. ನಶಿಸಿ ಹೋಗುತ್ತಿರುವ ನಮ್ಮ ಗ್ರಾಮೀಣ ಸಮಾಜದ ಕುಟುಂಬ ಮೌಲ್ಯಗಳನ್ನು ಪುನಃ ಸ್ಥಾಪಿಸಿ, ಬೆಳೆಸುವಲ್ಲಿ ಇವುಗಳು ತುಂಬಾ ಕೆಲಸ ಮಾಡುತ್ತವೆ. ಇಲ್ಲಿನ ಎಲ್ಲಾ ಕಥೆಗಳು ಸುಖಾಂತ್ಯದಲ್ಲಿ ಮುಗಿಯುತ್ತವೆ. ಒಳಹಂದರ, ತಾತ್ವಿಕ, ನೈತಿಕ ಹಾಗೂ ಆರ್ಥಿಕವಾಗಿ ಹೆಣೆಯಲ್ಪಟ್ಟಿದೆ. ಪಾತ್ರಗಳ, ಗ್ರಾಮಗಳ ಹೆಸರುಗಳು ಅನ್ವರ್ಥಕವಾಗಿವೆ.

ಕೃಷಿಕ ಕೆಳವರ್ಗ, ಕಾರ್ಮಿಕ, ಶ್ರಮಿಕ, ಮೊದಲಾದವರು, ದುಶ್ಚಟ, ದುಸ್ಸಾಹಸ, ಅನುಮಾನಗಳಿಗೆ ಒಳಗಾಗಿ ಅಪನಂಬಿಕೆಗಳಿಂದ ದುರ್ಗತಿ ಹೊಂದುತ್ತಾರೆ. ಪಶ್ಚಾತ್ತಾಪ, ಹಿರಿಯರ ಮಧ್ಯಪ್ರವೇಶ, ಆಶೀರ್ವಾದ, ಕಿವಿಮಾತು, ಬುದ್ದಿ ಹೇಳುವುದರಿಂದ ಬಹುತೇಕ ಸಮಾಜ ಸರಿಹೋಗುತ್ತವೆ. ಒಂದೆರಡು ಕಡೆ ಪೊಲೀಸ್ ಭಾಷೆ, ಠಾಣೆ, ಜೈಲು ಶಿಕ್ಷೆ, ಬಹಿಷ್ಕಾರಗಳಿಂದ ಸರಿಪಡಿಸಿದ ಉದಾಹರಣೆಗಳು ಇವೆ. ತಪ್ಪು ಮಾಡಿದವರಿಗೆ ಕ್ಷಮೆ ಹಾಗೂ ಅಪರಾಧಿಗಳಿಗೆ ದಂಡ ಸಮ ಸಮವಾಗಿವೆ. ಎಲ್ಲಿಯೂ ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಎನ್ನುವ ಹಾಗೆ ತಪ್ಪು ಸಂದೇಶವಿಲ್ಲ. ಓದುವ ಕಾತುರ ನಿಧಾನವಾಗಿದ್ದು, ಓದಿಸಿಕೊಂಡು ಹೋಗುವ ಗುಣ ಎಲ್ಲ ಕಥೆಗಳಲ್ಲಿದೆ. ಅಂತ್ಯಪೂರ್ವ ಹಂತದಲ್ಲಿ ಆಧುನಿಕ ಭರಾಟೆ, ಪಟ್ಟಣದ ಗಾಳಿ, ಹಪಾಹಪಿ, ಅಭಿವೃದ್ಧಿ ಸೋಗಿನ ಚೆಲುವಿಗೆ ಕಥೆ ತಿರುಗಿಸಬಹುದಾಗಿತ್ತು. ಆದರೆ ಗ್ರಾಮೀಣ, ಜನಪದರ ಜೀವನ ವ್ಯವಸ್ಥೆ ವಿಶ್ವಾಸ ದೃಢವಾಗಿರುವುದರಿಂದ ಚಿಂತನೆಗಳು, ಎಷ್ಟೇ ಜಾಗತೀಕವಾದರೂ ಸ್ಥಳೀಯರ ಮೌಡ್ಯವಿಲ್ಲದ ನಿಜ ನಂಟಿಗೆ ಬೆಲೆ ಸಿಗುತ್ತವೆ.

ಒಂದೆರಡು ಕಡೆ ವಾಚ್ಯವಾಗಿ ಕಥೆಗೆ ಸಾಮಾಜಿಕ ಸಂದೇಶವನ್ನು ಹೇಳುವಂತೆ ಕಂಡರೂ ಅದು ಸೂಚ್ಯವಾಗಿದೆಯೇ ಹೊರತು, ವಾಚ್ಯವಾಗದಂತೆ ನೋಡಿಕೊಳ್ಳುವುದು ಪ್ರಗತಿಪರ ಸ್ವಭಾವಕ್ಕೆ ಸಾಕ್ಷಿಯಾಗಿದೆ. ಮಹಿಳಾ ಉತ್ಥಾನ ಎಂಬ ಹೆಸರು ಹೇಳದೆ ಮಹಿಳೆಯನ್ನು ಸಬಲಗೊಳಿಸಿದ ಆಕರ್ಷಣೆ ತಂದ ಆಪತ್ತು, ಉಪಕಾರಕ್ಕೆ ಅಪಕಾರ ಮೊದಲಾದ ಕಥೆಗಳಲ್ಲಿ ಕಂಡುಬರುತ್ತದೆ. ಕೈ ಕೆಸರಾದರೆ ಬಾಯಿ ಮೊಸರು, ದುಡಿಮೆ ದುಡ್ಡಿನ ತಾಯಿ, ಸೋಬತಿ ತಕ್ಕ ಫಲ ಮೊದಲಾದ ಸಾಮಾಜಿಕ ಮೌಲ್ಯಗಳು ಇಂದಿಗೂ ಗ್ರಾಮೀಣ ಪರಿಸರದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಪುನಃ ಸ್ಥಾಪಿಸುವುದು ಕಥೆಗಾರನ ಉದ್ದೇಶವಾಗಿದೆ. ಉತ್ತಮ ಕೌಟುಂಬಿಕ ಧಾರಾವಾಹಿಗಳನ್ನು ಬರೆಯುವ ಎಲ್ಲಾ ಶಕ್ತಿಯೂ ಲೇಖಕರಲ್ಲಿದೆ.ಮುಂದೆ ಇವರೊಬ್ಬ ಸೃಜನಶೀಲ ಕಥೆಗಾರರಾಗಲಿ ಎಂದು ಹಾರೈಸುತ್ತೇನೆ. ಆದರ್ಶ ಹಾಗೂ ಅನುಕರಣೀಯ ಪಾತ್ರಗಳು ಇದರಲ್ಲಿವೆ. ಮೊಬೈಲ್, ಟ್ರಾಫಿಕ್, ದುರ್ಘಟನೆ, ಹೋರಾಟ, ಮುಷ್ಕರ, ಸಂಘಟನೆ.. ಇವುಗಳ ಗೋಜಿಲ್ಲದೆ ಶುದ್ಧ ಹಾಗೂ ಅಪ್ಪಟ ಕಥೆಗಳು ಈ ಸಂಕಲನದಲ್ಲಿವೆ.
-
ಡಾ. ವಾಸುದೇವ ಅಗ್ನಿಹೋತ್ರಿ

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...