Date: 19-04-2023
Location: ಬೆಂಗಳೂರು
“ವ್ರತಕ್ಕೆ ಕಾಳವ್ವೆ ಬಹಳ ಮಹತ್ವ ನೀಡಿದ್ದಾಳೆ. ವ್ರತ ಎಂಬುದನ್ನು ಕಾಳವ್ವೆ, ನಿಷ್ಠೆ-ಪ್ರಾಮಾಣಿಕತೆ ಎಂಬರ್ಥದಲ್ಲಿ ಹೇಳಿದ್ದಾಳೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಕಾಳವ್ವೆ ವಚನಗಳ ಕುರಿತ ಅಧ್ಯಯನದ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಕಾಳವ್ವೆಯ ಹೆಸರಿನ ನಾಲ್ಕು ಶರಣೆಯರು ವಚನಗಳನ್ನು ರಚಿಸಿದ್ದಾರೆ. ಅವರುಗಳಲ್ಲಿ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಪ್ರಮುಖ ವಚನಕಾರ್ತಿಯಾಗಿದ್ದಾಳೆ. ಈಕೆಯ ವಚನಗಳ ಅಧ್ಯಯನದಿಂದ ಈಕೆ ಅಸ್ಪೃಶ್ಯ ಜನಾಂಗದ ಅದರಲ್ಲಿಯೂ ಮಾದಿಗ ಜನಾಂಗದಲ್ಲಿ ಹುಟ್ಟಿಬಂದ ಶರಣೆಯಾಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ಈ ವಚನಕಾರ್ತಿಯನ್ನು ಕುರಿತು ಯಾವುದೇ ನಡುಗನ್ನಡ ಕವಿಗಳು ಕಾವ್ಯ ರಚಿಸಿಲ್ಲ, ಪುರಾಣ ಕಾವ್ಯಕೃತಿಗಳಲ್ಲಿ, ಈಕೆಯ ಪ್ರಸ್ತಾಪವಿಲ್ಲ. ಕೆಲವು ಐತಿಹ್ಯಗಳ ಆಧಾರದಿಂದ ಈಕೆಯ ಜೀವನ ಚರಿತ್ರೆಯನ್ನು ಹೀಗೆ ಕಟ್ಟಿಕೊಳ್ಳಬಹುದಾಗಿದೆ.
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಕಂಧಾರ ಗ್ರಾಮದಲ್ಲಿ ಪೆದ್ದಣ್ಣನೆಂಬ ಕಳ್ಳನಿದ್ದ. ಈತ ಅಸ್ಪೃಶ್ಯ ಜನಾಂಗಕ್ಕೆ ಸೇರಿದ್ದು ಕಳ್ಳತನ ಮಾಡುತ್ತಿದ್ದ. ಒಂದು ದಿನ ಕಳವು ಮಾಡಲೆಂದು ಆ ಊರಿನ ಶ್ರೀಮಂತ ಸೂರಯ್ಯನ ಮನೆಗೆ ಕನ್ನಹಾಕಲು ಹೋದಾಗ, ಆ ಮನೆಯಲ್ಲಿ ಉರಿಲಿಂಗದೇವರಿಂದ ಲಿಂಗದೀಕ್ಷಾ ಕಾರ್ಯಕ್ರಮ ನಡೆದಿರುತ್ತದೆ. ಅದನ್ನು ಮಾಳಿಗೆಯ ಮೇಲಿಂದ ನೋಡಿದ ಪೆದ್ದಣ್ಣನ ಮನಪರಿವರ್ತನೆಯಾಗುತ್ತದೆ. ಅಂದಿನಿಂದ ಆತ ಕಳ್ಳತನವನ್ನು ಬಿಟ್ಟು, ತಾನೂ ಉರಿಲಿಂಗದೇವ ಗುರುಗಳಿಂದ ಲಿಂಗದೀಕ್ಷೆ ಪಡೆಯಬೇಕೆಂದು ನಿರ್ಧರಿಸುತ್ತಾನೆ. ಈತನ ಹೆಂಡತಿಯೇ ಕಾಳವ್ವೆಯಾಗಿದ್ದು, ಕಳ್ಳತನ ಸರಿಯಲ್ಲ, ಬೇರೆ ವೃತ್ತಿಯನ್ನು ಮಾಡೆಂದು ಗಂಡನಿಗೆ ಬುದ್ಧಿಹೇಳುತ್ತಿರುತ್ತಾಳೆ. ಉರಿಲಿಂಗದೇವನ ಮಾತುಗಳನ್ನು ಕೇಳಿಸಿಕೊಂಡ ಮೇಲೆ ಕಾಳವ್ವೆಯು ಹೇಳಿದ್ದ ಮಾತುಗಳು ನೆನಪಾಗುತ್ತವೆ. ಆಗ ಆತ ತಕ್ಷಣವೇ ಕಳ್ಳತನದ ವೃತ್ತಿಯನ್ನು ಕೈ ಬಿಡುತ್ತಾನೆ. ಅದೇ ಉರಿಲಿಂಗದೇವರಿಂದ ದಂಪತಿಗಳಿಬ್ಬರು ಲಿಂಗದೀಕ್ಷೆ ಪಡೆದು ಶರಣರಾಗಿ ಪ್ರಸಿದ್ಧರಾಗುತ್ತಾರೆ. ಉರಿಲಿಂಗದೇವರು ಲಿಂಗೈಕ್ಯರಾದ ಮೇಲೆ ತಾನೇ ಕಂಧಾರಮಠದ ಪೀಠಾಧಿಪತಿಯಾಗುತ್ತಾನೆ. ಆಧ್ಯಾತ್ಮಕ್ಷೇತ್ರದಲ್ಲಿ ಸಾಧನೆ ಮಾಡಿ ದೊಡ್ಡ ಶರಣನಾಗುತ್ತಾನೆ.
ಪತಿಗೆ ಬೆಂಬಲವಾಗಿ ನಿಂತ ಕಾಳವ್ವೆ ಶರಣೆಯಾಗಿ ಬೆಳೆದು ನಿಲ್ಲುತ್ತಾಳೆ, ವಚನಗಳನ್ನು ರಚಿಸುತ್ತಾಳೆ. ಮೈಸೂರು ವಿಶ್ವವಿದ್ಯಾಲಯದ "ಕನ್ನಡ ಸಾಹಿತ್ಯ ಚರಿತ್ರೆ" ಕೃತಿಯಲ್ಲಿ ಬಾಚಿಕಾಯಕದ ಬಸವಪ್ಪಯ್ಯಗಳ ಪುಣ್ಯಸ್ತ್ರೀ ಕಾಳವ್ವೆ, ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯರ ಪ್ರಸ್ತಾಪವಿದೆಯೇ ಹೊರತು, ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯ ಪ್ರಸ್ತಾಪವಿಲ್ಲ. ಕರ್ನಾಟಕ ಕವಿಚರಿತೆಯಲ್ಲಿಯೂ ಈಕೆಯ ಹೆಸರಿಲ್ಲ. ಈ ದಂಪತಿಗಳು ಬಸವಣ್ಣನವರ ಸಮಕಾಲೀನರಾಗಿದ್ದರೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ನನ್ನ ಪ್ರಕಾರ ಇವರು, ಬಸವಣ್ಣನವರ ನಂತರದಲ್ಲಿ ಇದ್ದವರೆಂದು ಹೇಳಬಹುದಾಗಿದೆ.
ಉರಿಲಿಂಗ ಪೆದ್ದಿಯು ಮಠದ ಪೀಠಾಧಿಪತಿಯಾಗಿರುವುದನ್ನು ಗಮನಿಸಿದರೆ, ಈ ದಂಪತಿಗಳು ಬಸವಣ್ಣನವರ ಸಮಕಾಲೀನರಾಗಿರದೆ, ಶರಣಕ್ರಾಂತಿಯ ನಂತರ ಬಂದ ಶರಣರಾಗಿರಬಹುದಾಗಿದೆ. ಶರಣಕ್ರಾಂತಿಯ ನಂತರ ಮಠವ್ಯವಸ್ಥೆ ಪ್ರಬಲವಾಯಿತು.
ಹೀಗಾಗಿ ಇವರು ಕ್ರಿ.ಶ.1180ರ ಅವಧಿಯಲ್ಲಿ ಬದುಕಿರಬಹುದಾಗಿದೆ. ಬಸವೇಶ್ವರ ಮತ್ತು ಅವರ ಸಮಕಾಲೀನ ವಚನಕಾರರ ವಚನಗಳಲ್ಲಿ ಕಾಳವ್ವೆಯ ಪ್ರಸ್ತಾಪವಿಲ್ಲ. ಆದುದರಿಂದ ಶರಣಕ್ರಾಂತಿಯಾದ ಕೆಲವೇ ವರ್ಷಗಳಲ್ಲಿ ಈ ರೀತಿಯ ಶರಣರು ಬಸವಾದಿಶರಣರ ಸಂದೇಶಗಳಿಗೆ ಬದ್ಧರಾಗಿ ವಚನಗಳನ್ನು ರಚಿಸಿರಬಹುದಾಗಿದೆ. ಜನಪದ ಕಾವ್ಯದಲ್ಲಿಯೂ ಕಾಳವ್ವೆಯ ಪ್ರಸ್ತಾಪವಿಲ್ಲ, ಶೂನ್ಯಸಂಪಾದನೆಗಳಲ್ಲಂತೂ ಕಾಳವ್ವೆ ಕಾಣಿಸುವುದೇ ಇಲ್ಲ. ಹೀಗಾಗಿ ಕಾಳವ್ವೆ ಮುಂತಾದ ಶರಣೆಯರ ಜೀವನ ಚರಿತ್ರೆಗಳು ಅಪೂರ್ಣವಾಗಿಯೇ ಉಳಿದುಬಿಟ್ಟಿವೆ.
ಮಹಾರಾಷ್ಟ್ರದ ಕಂಧಾರ, ಬಸವಕಲ್ಯಾಣ, ಮೈಸೂರು ಮುಂತಾದ ಕಡೆಗಳಲ್ಲಿ ಉರಿಲಿಂಗಪೆದ್ದಿಗಳ ಮಠಗಳಿವೆ. ಬಸವಕಲ್ಯಾಣದಲ್ಲಿರುವ ಉರಿಲಿಂಗಪೆದ್ದಿಯ ಮಠ ಹೆಚ್ಚು ಕ್ರಿಯಾಶೀಲವಾಗಿದ್ದು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿರುತ್ತದೆ. ಆಧುನಿಕ ಸಾಹಿತ್ಯಕ್ಕೆ ಬಂದಾಗ ಕಾಳವ್ವೆಯನ್ನು ಕುರಿತು ನಾಟಕಗಳು ಪ್ರಕಟವಾಗಿವೆ. ಅವುಗಳಲ್ಲಿ ನನ್ನ "ಉರಿಲಿಂಗ" ನಾಟಕವೂ ಸೇರಿಕೊಂಡಿದೆ. ಮಹಾದೇವ ಬಣಕಾರ ಅವರ "ಉರಿಲಿಂಗ ಪೆದ್ದಿ" ನಾಟಕವು ಸಾಣೇಹಳ್ಳಿಯ ಶಿವಸಂಚಾರದಿಂದ ಪ್ರಯೋಗಗೊಂಡಿದೆ. ನನ್ನ ನಾಟಕವನ್ನು ಸಿ.ಜಿ.ಕೆಯವರು ನಿರ್ದೇಶಿಸಿದ್ದರು. ಆಗ ಅನೇಕ ಪ್ರಯೋಗಗಳನ್ನು ಕಂಡ ನನ್ನ ನಾಟಕವನ್ನು ಇತ್ತೀಚೆಗೆ ಬೀದರದ ಸರಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಯೋಗ ಮಾಡಿದ್ದಾರೆ.
ನನ್ನ ನಾಟಕವಾಗಲಿ, ಮಹಾದೇವ ಬಣಕಾರರ ನಾಟಕವಾಗಲಿ ಉರಿಲಿಂಗ ಪೆದ್ದಿಯ ಜೀವನ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕಾಗಿ ಯಾವುದೇ ಆಕರಗಳನ್ನೊದಗಿಸುವುದಿಲ್ಲ. ಆದರೆ ನನ್ನ "ಉರಿಲಿಂಗ" ನಾಟಕದಲ್ಲಿ ಕಾಳವ್ವೆ ಮಹತ್ವದ ಪಾತ್ರ ವಹಿಸಿದ್ದಾಳೆ. ಆ ಕುರಿತು ನಾನೇ ಹೇಳುವುದು ಸೂಕ್ತವಲ್ಲವಾದ್ದರಿಂದ ಒಂದೆರಡು ಪತ್ರಿಕಾ ವಿಮರ್ಶೆಗಳನ್ನು ಕೊಟ್ಟಿದ್ದೇನೆ. "ಉರಿಲಿಂಗ-ನಾಟಕದಲ್ಲಿ ಹನ್ನೆರಡು ದೃಶ್ಯಗಳಿವೆ. ಕಳ್ಳನಾಗಿದ್ದ ಅಸ್ಪೃಶ್ಯ ಪೆದ್ದಣ್ಣ ತನ್ನ ಮನಪರಿವರ್ತನೆಯಾಗಿ, ಉರಿಲಿಂಗದೇವರ ನೆಚ್ಚಿನ ಶಿಷ್ಯನಾಗಿ, ಅವರಿಂದಲೇ ಪಟ್ಟಾಭಿಷಿಕ್ತನಾಗಿ ಕಂದಾರಮಠದ ಮಠಾಧಿಪತಿಯಾಗಿ, ಶರಣರ ಸಮಸಮಕ್ಕೆ ನಿಲ್ಲಬಲ್ಲ ಅನುಭಾವಿಯಾಗಿ ಈ ನಾಟಕದಲ್ಲಿ ಉರಿಲಿಂಗ ಬೆಳೆದು ನಿಂತಿದ್ದಾನೆ. ತನ್ನ ಹೆಂಡತಿ ಕಾಳವ್ವೆಯಿಂದ ಪ್ರೇರಿತನಾಗಿ ಮಹಾಶರಣನಾಗುವ ಹಲವು ಘಟ್ಟಗಳನ್ನು ನಾಟಕ ಚಿತ್ರಿಸುತ್ತದೆ. ಲಿಂಗದೀಕ್ಷೆ ತೆಗೆದುಕೊಂಡ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ದಂಪತಿಗಳು ಕೊನೆಯಲ್ಲಿ ಅನುಭವ ಮಂಟಪಕ್ಕೆ ಹೋಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ."
- ಪ್ರಜಾವಾಣಿ, ಬೆಂಗಳೂರು, 05.07.2009
"ಹನ್ನೆರಡು ದೃಶ್ಯಗಳಲ್ಲಿ ಹರಡಿಕೊಂಡಿರುವ ಈ ನಾಟಕವು ದೃಶ್ಯದಿಂದ ದೃಶ್ಯಕ್ಕೆ ಸಾಗುತ್ತ ಹೋಗುತ್ತದೆ. ನಾಂದೇಡದ ಕಳ್ಳನೊಬ್ಬ ಶರಣನಾಗಿ, ಉರಿಲಿಂಗ ದೇವರ ಉತ್ತರಾಧಿಕಾರಿಯಾಗಿ ಬೆಳೆದು ನಿಲ್ಲುವುದು ಗಮನ ಸೆಳೆಯುತ್ತದೆ. ನಾಟಕದಲ್ಲಿ ಪಾತ್ರೋಚಿತವಾಗಿ ಗ್ರಾಮ್ಯಭಾಷೆಯನ್ನು ಬಳಸಲಾಗಿದೆ. ಶರಣರ ಸಮಾಜ ಸುಧಾರಣೆಯ ತತ್ವಗಳನ್ನು ನಾಟಕದಲ್ಲಿ ಅಭಿವ್ಯಕ್ತಪಡಿಸಲಾಗಿದೆ. ನಾಟಕಕಾರರು ಯಶಸ್ವಿಯಾಗಿದ್ದಾರೆ".
- ಸಂಕ್ರಮಣ, ಮಾರ್ಚ್ – 2010
ಹೀಗೆ ಈ ನಾಟಕಗಳಲ್ಲಿ ಉರಿಲಿಂಗಪೆದ್ದಿ ಮತ್ತು ಕಾಳವ್ವೆಯ ಜೀವನಚರಿತ್ರೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳಿರದಿದ್ದರೂ, ಕಾಳವ್ವೆ ಇಂದು ಹೇಗೆ ಪ್ರಸ್ತುತಳಾಗಿದ್ದಾಳೆಂಬುದು ಸ್ಪಷ್ಟವಾಗುತ್ತದೆ. ಕಾಳವ್ವೆ ಮಹತ್ವದ ವಚನಕಾರ್ತಿಯಾಗಿದ್ದು ಆಕೆಯ ಹನ್ನೆರಡು ವಚನಗಳು ಪ್ರಕಟವಾಗಿವೆ. "ಉರಿಲಿಂಗ ಪೆದ್ದಿಗಳರಸ" ಎಂಬುದು ಆಕೆಯ ವಚನಾಂಕಿತವಾಗಿದೆ. ವ್ರತಕ್ಕೆ ಕಾಳವ್ವೆ ಬಹಳ ಮಹತ್ವ ನೀಡಿದ್ದಾಳೆ. ಮೂರು ವಚನಗಳಲ್ಲಿ ವ್ರತದ ಬಗೆಗೆ ಪ್ರಸ್ತಾಪವಿದೆ. ವ್ರತ ಎಂಬುದನ್ನು ಕಾಳವ್ವೆ, ನಿಷ್ಠೆ-ಪ್ರಾಮಾಣಿಕತೆ ಎಂಬರ್ಥದಲ್ಲಿ ಹೇಳಿದ್ದಾಳೆ. "ಅರ್ಥಪ್ರಾಣಾಭಿಮಾನದ ಮೇಲೆ ಬಂದರೂ ಬರಲಿ ವ್ರತಹೀನನ ನೆನೆಯಲಾಗದು - (ವ.1)" ಎಂದು ಹೇಳಿದ್ದಾಳೆ. "ವ್ರತವೆಂಬುದು ನಾಯಕರತ್ನ ವ್ರತವೆಂಬುದು ಸುಪ್ಪಾಣಿಯ ಮುತ್ತು, ವ್ರತವೆಂಬುದು ಜೀವನ ಕಲೆ, ವ್ರತವೆಂಬುದು ಸುಯಿದಾನ (ವ- 11)" ಎಂದು ವ್ರತದ ಬಗೆಗೆ ವಿವರಣೆ ನೀಡಿದ್ದಾಳೆ. "ವ್ರತ ಹೋದಾಗಲೆ ಇಷ್ಟಲಿಂಗದ ಕಳೆನಷ್ಟವವ್ವಾ ಅವರು ಲಿಂಗವಿದ್ದೂ ಭವಿಗಳು (ವ.12)" ಎಂದು ಸ್ಪಷ್ಟಪಡಿಸಿದ್ದಾಳೆ.
"ಹೊಲಸು ತಿಂಬುವವನೇ ಹೊಲೆಯ, ಕೊಲ್ಲುವವನೇ ಮಾದಿಗ" ಎಂಬುದು ಬಸವಣ್ಣನವರ ಪ್ರಸಿದ್ಧವಾದ ವಚನವಾಗಿದೆ. ಹೊಲೆಮಾದಿಗರನ್ನು ಅಪ್ಪ-ಬೊಪ್ಪ ಎಂದು ಕರೆದ ಬಸವಣ್ಣ, "ಗೋತ್ರವಾವುದೆಂದು ಕೇಳಿದಡೆ ಮಾದಾರ ಚೆನ್ನಯ್ಯನ ಗೋತ್ರವೆಂದು ಹೇಳಿರಯ್ಯಾ"ಎಂದು ತಿಳಿಸಿದ ಬಸವಣ್ಣ ಹೊಲೆ-ಮಾದಿಗರ ಬಗೆಗೆ ಹೀಗೇಕೆ ಈ ವಚನದಲ್ಲಿ ತಿರಸ್ಕರಿಸಿ ಬರೆದಿದ್ದಾನೆಂದೆನಿಸುತ್ತಿತ್ತು. ಆದರೆ ಕಾಳವ್ವೆಯ ವಚನ ಪ್ರಕಟವಾದ ಮೇಲೆ ಅದಕ್ಕೆ ಸರಿಯಾದ ಅರ್ಥ ಗೊತ್ತಾಯಿತು. ಅಂತಹ ಮಹತ್ವದ ವಚನವನ್ನು ಕಾಳವ್ವೆ ರಚಿಸಿದ್ದಾಳೆ. ಆ ವಚನ ಹೀಗಿದೆ- "ಕೃತಯುಗ ಮೂವತ್ತೆರಡು ಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು. ತ್ರೇತಾಯುಗ ಹದಿನಾರು ಲಕ್ಷ ವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕುವಾಗ ಮಹಿಷನೆಂಬ ಕರಿಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು. ದ್ವಾಪರಯುಗ ಎಂಟುಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಅಶ್ವನೆಂಬ ಕುದುರೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು. ಕಲಿಯುಗ ನಾಲ್ಕುಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಜಾತಿಯಾಡಿನ ಮಗ ಹೋತನ ಕೊಂದು ಹೋಮವನಿಕ್ಕಿದರು. ಬ್ರಾಹ್ಮಣರು `ಅಣೋರಣೀಯಾನ್ ಮಹತೋಮಹಿಯಾನ್' ಎಂದುದಾಗಿ ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗ ಜಂಗಮಕ್ಕೆ ಶರಣೆನ್ನದೆ ಮುನ್ನ ಒಂಟಿಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ ಎಂಬತ್ತು ನಾಲ್ಕು ಲಕ್ಷ ಯೋನಿಯಲ್ಲಿ ಹಂದಿಯ ಬಸುರಲ್ಲಿ ಬಪ್ಪದು ತಪ್ಪದು ಕಾಣಾ ಉರಿಲಿಂಗ ಪೆದ್ದಿಗಳರಸ ಒಲ್ಲನವ್ವಾ"
- (ಸ.ವ.ಸಂ5, ವ-5, 1993)
ಕಾಳವ್ವೆಯ ಈ ವಚನ ಸ್ಪಷ್ಟವಾಗಿದೆ, ನೇರವಾಗಿದೆ. ಕೃತಯುಗದಲ್ಲಿ ಕುಂಜರನೆಂಬ ಆನೆಯನ್ನು, ತ್ರೇತಾಯುಗದಲ್ಲಿ ಮಹಿಷನೆಂಬ ಕೋಣನನ್ನು, ದ್ವಾಪರಯುಗದಲ್ಲಿ ಅಶ್ವನೆಂಬ ಕುದುರೆಯನ್ನು, ಕಲಿಯುಗದಲ್ಲಿ ಹೋತನನ್ನು ಕೊಂದು ಬ್ರಾಹ್ಮಣರು ಹೋಮವನ್ನಿಕ್ಕಿದರೆಂದು ಈ ವಚನದಲ್ಲಿ ತಿಳಿಸಲಾಗಿದೆ. ಅಂದರೆ ಬ್ರಾಹ್ಮಣರು ಹೋಮವನ್ನಿಕ್ಕುವಾಗ ಯುಗಯುಗಗಳಿಂದ ಪ್ರಾಣಿಗಳನ್ನು ಕೊಲ್ಲುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಕೊಂದ ಪ್ರಾಣಿಗಳನ್ನು ಅವರೇ ತಿನ್ನುತ್ತಿದ್ದರೆಂದು ಉಳಿದ ಕಡೆ ವಿವರಿಸಲಾಗಿದೆ. ಈ ಸಂಗತಿಯನ್ನರಿತಿದ್ದ ಬಸವಣ್ಣ ಹೊಲಸು ತಿಂಬುವವನೇ ಹೊಲೆಯ, ಕೊಲ್ಲುವವನೇ ಮಾದಿಗನೆಂದು ಹೇಳಿದ್ದು ಈ ಜಾತಿ ಬ್ರಾಹ್ಮಣರನ್ನು ಕುರಿತಾಗಿಯೇ ಹೊರತು, ಊರ ಹೊರಗಿರುತ್ತಿದ್ದ ಹೊಲೆಮಾದಿಗರನ್ನು ಕುರಿತಾಗಿ ಅಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕೊಲ್ಲುವ, ಪ್ರಾಣಿಹಿಂಸೆ ಮಾಡುವ ಬ್ರಾಹ್ಮಣರ ಕಂಡು ಶರಣಾರ್ಥಿ ಎನಬಾರದೆಂದು, ಕಾಳವ್ವೆ ಇಲ್ಲಿ ಶರಣರನ್ನು ಎಚ್ಚರಿಸಿದ್ದಾಳೆ. ಹೀಗೆ ಇಂತಹ ಕೊಲೆಗಡುಕರಿಗೆ ಗೌರವ ಕೊಟ್ಟು ನಮಸ್ಕರಿಸಿದರೆ, ಅಂತವರು ಹಂದಿಗಳಾಗಿ ಹುಟ್ಟುತ್ತಾರೆಂದು ಹೆದರಿಸಿದ್ದಾಳೆ. ತನ್ನ ಇನ್ನೊಂದು ವಚನದಲ್ಲಿ ದಲಿತ ಆಹಾರ ಪದ್ಧತಿ ಕುರಿತಂತೆ ಕಾಳವ್ವೆ ಮಹತ್ವದ ವಿಚಾರಗಳನ್ನು ಹೇಳಿದ್ದಾಳೆ.
"ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆಶೋಭಿತವಾಗಿ ನಾಯಿನೆಕ್ಕಿ ಹೋಯಿತು. ಮಾದಿಗರುಂಡುದು
ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು."
- (ಸ.ವ.ಸಂ. 5, ವ-4, 1993)
ಈ ವಚನದಲ್ಲಿ ಕಾಳವ್ವೆ ಪ್ರಾಣಿಗಳಲ್ಲಿ ಎರಡು ರೀತಿಯ ಪ್ರಾಣಿಗಳಿವೆಯೆಂದು ತಿಳಿಸಿದ್ದಾಳೆ. ಕುರಿ-ಕೋಳಿ-ಕಿರಿಮೀನು ಇವುಗಳನ್ನು ಯಾರೂ ಪೂಜಿಸುವುದಿಲ್ಲ. ಹೀಗೆ ಪೂಜೆಗೆ ಯೋಗ್ಯವಲ್ಲದ ಪ್ರಾಣಿಗಳನ್ನು ಬ್ರಾಹ್ಮಣರು ತಿನ್ನುತ್ತಿದ್ದರು. ಶಿವನಿಗೆ ಪಂಚಾಮೃತ ಕೊಡುವ ಆಕಳು ಪೂಜನೀಯ ಪ್ರಾಣಿಯಾಗಿದೆ. ಆಕಳನ್ನು ಎಲ್ಲರೂ ಪೂಜಿಸುತ್ತಾರೆ. ಇಂತಹ ಪೂಜನೀಯ ಪ್ರಾಣಿ ಸತ್ತಾಗ, ಅದನ್ನೆಳೆದು ತಂದು ಹೊಲೆ ಮಾದಿಗರು ತಿನ್ನುತ್ತಿದ್ದರು. ಹಿಂಸೆ ಮಾಡಿ, ಪ್ರಾಣಿಗಳನ್ನು ಕೊಂದು ತಿನ್ನುವವರು ಕುಲಜರಾಗುತ್ತಾರೆ, ಅಹಿಂಸೆಯಿಂದ ಪ್ರಾಣಿಯನ್ನು ತಿನ್ನುವ ತಾವು ಹೇಗೆ ಹೊಲೆಮಾದಿಗರಾಗುತ್ತೇವೆಂದು ಕಾಳವ್ವೆ ಪ್ರಶ್ನಿಸಿದ್ದಾಳೆ. ಈ ವಚನ ದಲಿತ ಆಹಾರಪದ್ಧತಿಗೆ ಸಂದ ಗೌರವವಾಗಿದೆ. ಕಾಳವ್ವೆಯ ಈ ವಚನಗಳನ್ನು ಕುರಿತು ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ.
ವಿಜಯಶ್ರೀ ಸಬರದ
9845824834
ಈ ಅಂಕಣದ ಹಿಂದಿನ ಬರೆಹಗಳು:
ಶಿವಶರಣೆ ಸತ್ಯಕ್ಕ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ವಚನಗಾರ್ತಿ ಮುಕ್ತಾಯಕ್ಕ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.