ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ


"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ್ಠಿ ಮುಗಿದ ನಂತರ ತಲ್ಕಿ ಎಂಬ ವಿಶೇಷ ನಾಟಕವಿತ್ತು. ರಂಗಭೂಮಿಯ ಒಡನಾಟದಲ್ಲಿರುವ ನಾನು ನಾಟಕ ನೋಡದೇ ಮರಳಬಾರದೆಂದು ಸಭಾಂಗಣದಲ್ಲಿಯೇ ಝಂಡಾ ಊರಿದೆ. ಇನ್ನೇನು ನಾಟಕ ಮುಗಿಯುವ ವೇಳೆಗೆ ಮಳೆಯ ಸದ್ದು ಕೇಳಿದಂತಾಗಿ ಹೊರಬಂದರೆ ಅರೆ! ಬೆಂಗಳೂರಿನಲ್ಲಿ ಧಾರಾಕಾರ ಮಳೆ!," ಎನ್ನುತ್ತಾರೆ ಸುಧಾ ಆಡುಕಳ. ಅವರು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಕುರಿತು ಬರೆದ ಲೇಖನ.

ಇತ್ತೀಚೆಗೆ ಸುನಂದಾ ಕಡಮೆ ಅಕ್ಕನಿಗೆ ಪೋನ್ ಮಾಡುವಾಗ ಹೇಳಿದ್ದೆ, ಅಪರೂಪಕ್ಕೆ ಮಹಿಳೆಯರ ಸಮ್ಮೇಳನ ನಡೀತಿದೆ, ನಮ್ಮದೇ ಸಮಾರಂಭಕ್ಕೆ ನಾವೇ ಹೋಗದಿದ್ದರೆ ಹೇಗೆ? ಸಾಧ್ಯ ಮಾಡಿಕೊಂಡು ಹೋಗೋಣ ಎಂದು. ಅದಕ್ಕೆ ಸರಿಯಾಗಿ ಅದೇ ದಿನ ಬೆಂಗಳೂರಿನಲ್ಲಿ ಮೌಲ್ಯಮಾಪನ ಕಾರ್ಯವೂ ನಿಗದಿಯಾಯಿತು. ಅವಸರದಲ್ಲಿ ಕೆಲಸ ಮುಗಿಸಿ, ಲಘುಬಗೆಯಿಂದ ಆಟೋ ಬುಕ್ ಮಾಡಿ ಸಭಾಂಗಣ ತಲುಪಿದಾಗ ಹೆಣ್ಣುಭಾಷೆ ವಿಚಾರಗೋಷ್ಠಿ ನಡೆಯುತ್ತಿತ್ತು. ಮುಂದೆ ನಡೆಯುವ ಮೆಗಾ ಕವಿಗೋಷ್ಠಿಯನ್ನು ಆಸ್ವಾದಿಸಬಹುದಲ್ಲಾ ಎಂಬ ಖುಶಿಯಲ್ಲಿ ಸುತ್ತ ನೋಡಿದರೆ ಎಲ್ಲೆಲ್ಲೂ ಪರಿಚಿತರೆ. ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ್ಠಿ ಮುಗಿದ ನಂತರ ತಲ್ಕಿ ಎಂಬ ವಿಶೇಷ ನಾಟಕವಿತ್ತು. ರಂಗಭೂಮಿಯ ಒಡನಾಟದಲ್ಲಿರುವ ನಾನು ನಾಟಕ ನೋಡದೇ ಮರಳಬಾರದೆಂದು ಸಭಾಂಗಣದಲ್ಲಿಯೇ ಝಂಡಾ ಊರಿದೆ. ಇನ್ನೇನು ನಾಟಕ ಮುಗಿಯುವ ವೇಳೆಗೆ ಮಳೆಯ ಸದ್ದು ಕೇಳಿದಂತಾಗಿ ಹೊರಬಂದರೆ ಅರೆ! ಬೆಂಗಳೂರಿನಲ್ಲಿ ಧಾರಾಕಾರ ಮಳೆ!

ಮೊದಲೇ ಬೆಂಗಳೂರಿನ ಪ್ರಯಾಣವೆಂದರೆ ಪ್ಯಾನಿಕ್ಆಗಿಬಿಡುವ ನಾನು ಸುರಿವ ಮಳೆಯಲ್ಲಿ ನಿಂತು ಓಲಾ ಆಟೋ ಬುಕ್ ಮಾಡತೊಡಗಿದೆ. ಒಂದಾಯ್ತು, ಎರಡಾಯ್ತು, ಮೂರಾಯ್ತು....ಎಲ್ಲಾ ಆಟೋದವರೂ ಒಪ್ಪುವುದು, ಇನ್ನೇನು ಐದು ನಿಮಿಷವಿದೆಯೆನ್ನುವಾಗ ತಪ್ಪಿಸಿ ಓಡುವುದು. ಮಳೆಯಲ್ಲಿ ತೋಯ್ದು ತೊಪ್ಪೆಯಾದ ನಾನು ಕೊಂಡಜ್ಜಿ ಸಭಾಭವನದೆದುರು ನಿಂತು ಬಂದ ಆಟೋಗಳಿಗೆಲ್ಲ ಕೈತೋರಿಸತೊಡಗಿದೆ. ಅದೇನು ಮಾಯೆಯೋ ತಿಳಿಯದು! ಚೂರು ಮಳೆಬಂದರೆ ಜನನಿಬಿಡ ಬೆಂಗಳೂರು ರಸ್ತೆಗಳು ನಿರ್ಜನವಾಗಿಬಿಡುವವು. ತೊಪ್ಪೆಯಾದ ನಾನು ಮತ್ತೆ ಸಭಾಂಗಣದೊಳಗೆ ಹೋಗಲು ನಾಚಿ, ಆಪದ್ಭಾಂದವ ಮಗನಿಗೆ ಕರೆಮಾಡಿದೆ. ನಿನ್ನೆಯಷ್ಟೇ ರಂಗಶಂಕರದ ನಾಟಕ ನೋಡಲು ಹೊರಟು ಹೀಗೆಯೇ ಅರ್ಧತಾಸು ಆಟೋ ಬುಕ್ ಆಗದೇ ನಿರಾಸೆಯಿಂದ ಮರಳಿದ ಕತೆ ಹೇಳಿದಾಗ ನಂಗೆ ಹೇಳಿದರೆ ಉಡುಪಿಯಿಂದಲೇ ಬುಕ್ ಮಾಡಿಕೊಡುತ್ತಿದ್ದೆ ಎಂದಿದ್ದ ಮಗರಾಯ ಮಳೆ ಎಂಬ ಶಬ್ದ ಕೇಳಿದ್ದೇ ಇನ್ನು ಆಟೋ, ಗೀಟೋ ಸಿಗಲ್ಲ. ವಿಧಾನಸೌಧ ಮೆಟ್ರೋ ಸ್ಟೇಷನ್ ಗೆ ಹೋಗು ಎಂದ. ಗೂಗಲ್ ಮ್ಯಾಪ್ ಹಾಕಿದ್ರೆ ಭರ್ತಿ ಒಂದೂವರೆ ಕಿ. ಮೀ. ತೋರಿಸ್ತಿದೆ! ಸುರಿವ ಮಳೆಯಲ್ಲಿ ಮೊಬೈಲ್ ತೋರಿಸಿದತ್ತ ಓಡೋಡುತ್ತಲೇ ಹೊರಟಾಗ ಗಂಟೆ ಎಂಟೂವರೆ ಅಂದರೆ ಉಡುಪಿಯವರಿಗೆ ಮಲಗುವ ಸಮಯ. ಹೋಗುತ್ತಿರುವ ದಾರಿ ಸರಿಯಿದೆಯಾ ಕೇಳೋಣವೆಂದರೆ ನರಪಿಳ್ಳೆಯ ಸುಳಿವಿಲ್ಲ. ಬೆಂಗಳೂರಿನವರು ಈ ಪಾಟಿ ಅಂಜುಬುರುಕರೆಂದು ನನಗೇನು ಗೊತ್ತು? ಅಂತೂ, ಇಂತು ಬದುಕಿದೆಯಾ ಬಡಜೀವವೇ ಎಂದು ವಿಧಾನಸೌಧದ ಮೆಟ್ರೋ ತಲುಪಿಯಾಯ್ರು. ಅಲ್ಲಿಂದ ಮೆಜೆಸ್ಟಿಕ್, ಮತ್ತೆ ಟ್ರೈನ್ ಬದಲಾಯಿಸಿ ಹಾಸ್ಟೆಲ್ ತಲುಪಿದಾಗ ಹೋದಜೀವ ಮರಳಿಬಂತು.

ಆದರೂ...ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ, ಬೆಂಗಳೂರಿನಲ್ಲೂ ತಿರುಗಬಹುದೆಂಬ ಅರಿವಿನ ಜತೆಗೆ ನಮ್ಮನ್ನೂ ಹೆಣ್ಣುಮಕ್ಕಳೆಂದು ಗುರುತಿಸಿ, ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದಿರಲ್ಲಾ ಎಂಬ ರೇವತಿಯವರ ಮಾತುಗಳು, ಟ್ರಾನ್ಸ್ ಕಮ್ಯುನಿಟಿಯ ವಿಶೇಷ ನುಡಿಗಟ್ಟುಗಳಲ್ಲಿ ಕಟ್ಟಿದ ತಲ್ಕಿಯೆಂಬ ಚಂದದ ನಾಟಕ ನನ್ನ ಅರಿವಿನ ಪರಿಧಿಯನ್ನು ಹಿಗ್ಗಿಸಿದ್ದಂತೂ ಸುಳ್ಳಲ್ಲ. ನಾಳೆಯಿಂದ ಸಂಜೆ ಮಳೆ ಬಾರದಿರಲಿ. ಇನ್ನಷ್ಟು ನಾಟಕಗಳನ್ನು ನೋಡುವ ಅವಕಾಶ ಸಿಗಲಿ...

MORE FEATURES

ತೀವ್ರವಾಗಿ ಓದಿಸಿಕೊಂಡು ಹೋಗುವ ಕಾದಂಬರಿಯಿದು

26-04-2025 ಬೆಂಗಳೂರು

"ಕಣ್ಸಣ್ಣೆಗೆ ದಕ್ಕುವ ಎಲ್ಲಾ ಚೆಲುವೆಯರನ್ನು ಆ ವಾಚಿನ ಬಲದಿಂದ ಒಲಿಸಿಕೊಂಡು ಕಾಣದ ಯಾವುದೋ ಲೋಕದಲ್ಲಿ ಸುಖದಿಂದ ವಿ...

ಚಿಂತನೆಗಳ ಹಿಂದಿನ ಬೆಳಕು 

26-04-2025 ಬೆಂಗಳೂರು

"ಅಂತಿಮವಾಗಿ ಜೊತೆಗೆ ಯಾವುದನ್ನೂ ತೆಗೆದುಕೊಂಡು ಹೋಗುವ ಆಯ್ಕೆ ಆತನಿಗಿಲ್ಲ. ಬಹುಶಃ ಇದು ಆಸ್ತಿ ಅಥವಾ ಸಂಪತ್ತಿನ ದೃ...

ರಾಜ್ಯ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆಗೆ ಸಾವಿರ ಕೋಟಿ ರೂ. ಅನುದಾನ ನೀಡಬೇಕು; ಮನುಬಳಿಗಾರ್

25-04-2025 ಬೆಂಗಳೂರು

ಬೆಂಗಳೂರು: ರಾಜ್ಯ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆಗೆ ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ...