ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ


“ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂಶಯವಾಗಿ ಕಳೆದ ಐದು ಆರು ವರ್ಷಗಳಲ್ಲಿ ನಾನೋದಿದ ಅತ್ಯುತ್ತಮ ಐದು ಕೃತಿಗಳಲ್ಲಿ ಇದೂ ಒಂದು,” ಎನ್ನುತ್ತಾರೆ ಪ್ರಶಾಂತ ಭಟ್‌ ಅವರು ದೀಪಾ ಜೋಶಿ ಅವರ “ತತ್ರಾಣಿ” ಕೃತಿ ಕುರಿತು ಬರೆದ ವಿಮರ್ಶೆ.

ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ. ದೀಪಾ ಜೋಶಿಯವರ ಈ ಕೃತಿ ಉತ್ತರ ಕರ್ನಾಟಕದ ರಾಣೆಬೆನ್ನೂರಿನ ಕಡೆಯದ್ದು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಶುರುವಾಗಿ ಸುಮಾರು ಐವತ್ತು ವರ್ಷಗಳ ಕಾಲ ಒಂದು ಬಡ ಮಾಧ್ವ ಬ್ರಾಹ್ಮಣ ಕುಟುಂಬದ ಜೀವನವನ್ನು ಚಿತ್ರಿಸುವ ಕೃತಿ. ದೈನಂದಿನ ಜೀವನ ನಿರ್ವಹಣೆಯೇ ಕೃತಿಯ ಮೂಲ ದ್ರವ್ಯ. ಒಂದು ಸಾವಿನೊಂದಿಗೆ ಆರಂಭವಾಗುವ ಕೃತಿ ಇಡಿಯ ಬದುಕನ್ನು ನಿರ್ಭಾವುಕವಾಗಿ ಗಟ್ಟಿತನದಿಂದ ತೆರೆದಿಡುತ್ತದೆ.

ಹುಚ್ಚಾಚಾರ್ರ ಸಾವು ಕುಟುಂಬವನ್ನು ಅಲ್ಲಾಡಿಸಿದ ಬಗೆ, ಅವರ ಮಗ ಭುಜಂಗಾಚಾರ್ರು ಸಂಸಾರದ ನೊಗ ಹೊತ್ತು ನಡೆಸಲು ಪಟ್ಟ ಪಾಡು ,ಕುಟುಂಬದ ಸ್ತ್ರೀಯರ ಚಿತ್ರಣ, ಹೆಂಗಸರ ಗಟ್ಟಿ ವ್ಯಕ್ತಿತ್ವ ದರ್ಶನ ,ಕಾದಂಬರಿಯಲ್ಲಿ ದೀರ್ಘವಾಗಿ ಬರುವ ಬದರಿಯಾತ್ರೆಯ ವಿವರಣೆ, ಆಗಿನ ಕಾಲದ ರೀತಿ ರಿವಾಜು, ಆಚಾರಗಳು ,ಸಂಭಾಷಣೆ ಓಹ್! ಏನೆಂದು ಹೇಳಲಿ?

ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂಶಯವಾಗಿ ಕಳೆದ ಐದು ಆರು ವರ್ಷಗಳಲ್ಲಿ ನಾನೋದಿದ ಅತ್ಯುತ್ತಮ ಐದು ಕೃತಿಗಳಲ್ಲಿ ಇದೂ ಒಂದು. ಇಡಿಯ ಕಾದಂಬರಿಯನ್ನು ಎರಡು ಬಾರಿ ಓದಿದೆ. ಒಂದೇ ಒಂದು ಸಾಲು ಅನಗತ್ಯ ಅನಿಸದ ಹಾಗೆ ಇದೆ. ಕತೆಯನ್ನು ,ಕತೆಯ ಪಾತ್ರಗಳ ಭಾವವನ್ನು ಇನ್ನಷ್ಟು ಹಿಗ್ಗಿಸಿ ಬರೆಯಬಹುದೇ ಹೊರತು ಇದನ್ನು ಹೃಸ್ವ ಮಾಡುವುದು ಸಾಧ್ಯವಿಲ್ಲ.

ಉತ್ತರ ಕರ್ನಾಟಕದ ಭಾಷೆಯನ್ನು ಲೇಖಕಿ ಬಳಸಿಕೊಂಡ ಬಗೆ, ಆ ಕಾಲದ ಮಡಿ ಮೈಲಿಗೆ ರೀತಿ ರಿವಾಜುಗಳ ವರ್ಣನೆ, ಎಲ್ಲದಕ್ಕಿಂತ‌ ಕಳಶಪ್ರಾಯವಾಗಿ ಬದರಿ ಯಾತ್ರೆಯ ಭಾಗ ಇದೆಯಲ್ಲ ಅದಂತೂ ಕಣ್ಣಿಗೆ ಕಟ್ಟಿದ ಹಾಗೆ ಬಂದಿದೆ.

ಆ ಕಾಲದ ಹೆಣ್ಮಕ್ಕಳ ಬವಣೆ , ಸಂಸಾರದಲ್ಲಿ ಬೆಂದು ಗಟ್ಟಿಯಾದ ಅನುಭವದ ಮಾತುಗಳು, ಗಂಡಸರ ಗಡಸುತನ ,ಕೋಪ‌, ಹುಡುಗರ ಹುಡುಗುಬುದ್ಧಿ ಯಾವ ವಿಷಯದಲ್ಲೂ ಒಂಚೂರು ಆಚೀಚೆ ಆಗದ ಹಾಗೆ ಕಟ್ಟಿಕೊಟ್ಟ ರೀತಿ.

ಇದು ಇವರ ಮೊದಲ ಕಾದಂಬರಿ ಎಂದರೆ ನಂಬುವುದು ಕಷ್ಟ. ಇದನ್ನು ನಾನು ಓದಿ ಪಟ್ಟ ಖುಷಿಯನ್ನು ನೀವೂ ಅನುಭವಿಸಬೇಕು ಅನ್ನುವುದಷ್ಟೆ ನನ್ನ ಬಯಕೆ. ಶ್ರೀನಿವಾಸ ವೈದ್ಯರ ' ಹಳ್ಳ ಬಂತು ಹಳ್ಳ' ಓದಿ ಯಾವ ಖುಷಿ ಅನುಭವಿಸಿದ್ದೆನೋ ಅದೇ ಸಂತೋಷ ಈ ಕೃತಿ ನೀಡಿತು‌ ಹೆಚ್ಚಿಗೆ ಹೇಳಲಿಕ್ಕಿಲ್ಲ. ಇದನ್ನು ದಯವಿಟ್ಟು ಓದಿರಿ.

MORE FEATURES

ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಬಗ್ಗೆ ಒಂದು ಚರ್ಚೆ

21-04-2025 ಬೆಂಗಳೂರು

ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...

ಹಕ್ಕಿಗಳ ಗರಿಗಳಿರುವುದೆ ಹಾರುವುದಕ್ಕೆ, ಮುಂದಕ್ಕೆ ಕಳಿಸಿ ಕೊಡು

21-04-2025 ಬೆಂಗಳೂರು

“ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡ...

ಈ ಕಥಾಸಂಕಲನದಲ್ಲಿ ಏಳು ಪತ್ತೇದಾರಿ ಸಾಹಸ ಕತೆಗಳಿವೆ

21-04-2025 ಬೆಂಗಳೂರು

"ಷರ್ಲಾಕ್ ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿ...