"ಷರ್ಲಾಕ್ ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿಸುತ್ತದೆ. ಹೋಮ್ಸ್‌ನ ಕುಶಾಗ್ರಬುದ್ಧಿ, ಸೂಕ್ಷ್ಮ ದೃಷ್ಟಿ, ವಿದ್ಯುತ್‌ಗಿಂತಲೂ ಪ್ರಬಲ ಶಾಕ್ ಆಗುವಂಥ ಅವನ ಚಮತ್ಕಾರಿ ಗುಣ ಓದುಗರನ್ನು ದಂಗಾಗಿಸುತ್ತದೆ," ಎನ್ನುತ್ತಾರೆ ಎಂ. ವಿ. ನಾಗರಾಜರಾವ್. ಅವರು ತಮ್ಮ "ಷರ್ಲಾಕ್ ಹೋಮ್ಸ್ ಸಾಹಸಗಳು" ಪತ್ತೇದಾರಿ ಕಥೆಗೆ ಬರೆದ ಲೇಖಕರ ಮಾತು.
ಬ್ರಿಟಿಷ್ ಲೇಖಕ, 54 ಕತೆಗಳು ಮತ್ತು 4 ಕಾದಂಬರಿಗಳನ್ನು ಬರೆದು ಅಪಾರ ಜನಪ್ರಿಯತೆ ಗಳಿಸಿದ್ದ ಸರ್ ಆರ್ಥರ್ ಕಾನನ್ ಡಾಯ್ಸ್ ಹುಟ್ಟಿದ್ದು ಸ್ಕಾಟ್ಲೆಂಡಿನ ಎಡಿನ್‌ಬರೋದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಜನಮನ್ನಣೆ ಪಡೆದರು.
ಪ್ರಾರಂಭದಲ್ಲಿ ಅವರ ಎರಡು ಕೃತಿಗಳು 'ಎ ಸ್ಟಡಿ ಇನ್ ಸ್ಕಾರ್ಲೆಟ್' ಮತ್ತು 'ದಿ ಕೈನ್ ಆಫ್ ಷೋರ್' ಬಹು ಬೇಗನೆ ಓದುಗರ ಮನಸೆಳೆಯಿತು. ಇಲ್ಲಿಯ ಕತೆಯ ಹೀರೋ 'ಷರ್ಲಾಕ್ ಹೋಮ್ಸ್'. ಇದು ಒಂದು ಕಾಲ್ಪನಿಕ ಪಾತ್ರ. ಆದರೆ ಈ ಪಾತ್ರ ಜೀವಂತ ವ್ಯಕ್ತಿ ಎನ್ನುವ ಭ್ರಮೆ ಓದುಗರನ್ನು ಮರಳು ಮಾಡಿತು. ವೈಜ್ಞಾನಿಕ ಹಿನ್ನೆಲೆ, ಚತುರತೆ, ಬುದ್ದಿಮತ್ತೆ ಇತ್ಯಾದಿ ಆ ಪಾತ್ರದ ಗುಣಗಳಾಗಿದ್ದು ಲೇಖಕರ ಶೈಲಿ, ಭಾಷೆಯಲ್ಲಿನ ಸಂಯಮ ಬಹುಬೇಗ ಓದುಗರನ್ನು ತನ್ನತ್ತ ಆಕರ್ಷಿಸಿತು. ಷರ್ಲಾಕ್ ಹೋಮ್ಸ್‌ನ ಮಿತ್ರ, ಸಹಾಯಕ, ಸಲಹೆಗಾರ ಮತ್ತು ವಿಮರ್ಶಕ ಡಾಕ್ಟರ್ ವಾಟ್ಸನ್ ಓದುಗರಿಗೆ ಪ್ರಿಯರಾದರು. ಷರ್ಲಾಕ್ ಹೋಮ್ಸ್‌ನ ಪತ್ತೇದಾರಿ ಸಾಹಸಗಳನ್ನು ಓದಲು ಓದುಗರು ತುದಿಗಾಲಿನಲ್ಲಿ ನಿಂತು ಕಾಯತೊಡಗಿದರು. ಪುಸ್ತಕಗಳು ಅತಿ ಶೀಘ್ರದಲ್ಲಿ ಓದುಗರ ಮನಸ್ಸನ್ನು ಸೆರೆ ಹಿಡಿದವು.
ಹೀಗೆ ಷರ್ಲಾಕ್ ಹೋಮ್ಸ್‌ನ ಕಾಲ್ಪನಿಕ ಪಾತ್ರ ತನ್ನನ್ನು ಸೃಷ್ಟಿಸಿದವರನ್ನೇ ಹಿಂದಿಕ್ಕಿ ಜನಪ್ರಿಯವಾಗಿ ವಿಜೃಂಭಿಸಿದೆ. ಪ್ರಪಂಚದಾದ್ಯಂತ ಹೋಮ್ಸ್‌ನ ನಿರ್ಣಯ ಸಾಮರ್ಥ್ಯ ಮೆಚ್ಚುಗೆಗಳಿಸಿದೆ. ಇದು ಜಾಗತಿಕವಾಗಿ ಪೋಲೀಸ್ ಇಲಾಖೆಗೆ ಬಹುದೊಡ್ಡ ಸ್ಫೂರ್ತಿಯಾಗಿತ್ತು. ಚೀನಾದಲ್ಲಿ ಪಠ್ಯಕ್ರಮದ ಒಂದು ಭಾಗವೂ ಆಗಿತ್ತು. ಷರ್ಲಾಕ ಹೋಮ್ಸ್‌ನ ಕತೆಗಳು ರಹಸ್ಯಗಳನ್ನು ಬಿಡಿಸುವ ರೋಮಾಂಚನದ ಜೊತೆ ಯುವ ಮನಸ್ಸುಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನೂ ಪ್ರೋತ್ಸಾಹಿಸಿವೆ.
ಷರ್ಲಾಕ್ ಹೋಮ್ಸ್‌ನನ್ನು ವಿಶ್ವದಾದ್ಯಂತ ಒಬ್ಬ ಶ್ರೇಷ್ಠ ಪತ್ತೇದಾರ ಎಂದು ಪರಿಗಣಿಸಲಾಗಿದೆ. ಅವನಿಗೆ ಹುಟ್ಟು ಮತ್ತು ಸಾವು ಯಾವುದೂ ಇಲ್ಲ. ಷರ್ಲಾಕ್ ಹೋಮ್ಸ್‌ನ ಸರಳತೆ, ಬುದ್ಧಿವಂತಿಕೆ, ಸೂಕ್ಷ್ಮ ಅವಲೋಕನ, ವಿಲಕ್ಷಣ ವಿಶ್ಲೇಷಣಾ ಪ್ರತಿಭೆ ಮತ್ತು ಅವನ ಸಾಹಸ ಪ್ರವೃತ್ತಿಗೆ ಓದುಗರು ಚಿತ್ ಆಗಿದ್ದಾರೆ. ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿಸುತ್ತದೆ. ಹೋಮ್ಸ್‌ನ ಕುಶಾಗ್ರಬುದ್ಧಿ, ಸೂಕ್ಷ್ಮ ದೃಷ್ಟಿ, ವಿದ್ಯುತ್‌ಗಿಂತಲೂ ಪ್ರಬಲ ಶಾಕ್ ಆಗುವಂಥ ಅವನ ಚಮತ್ಕಾರಿ ಗುಣ ಓದುಗರನ್ನು ದಂಗಾಗಿಸುತ್ತದೆ.
ಸರ್ ಆರ್ಥರ್ ಕಾನನ್ ಡಾಯ್ಸ್ ಒಂದು ಅತ್ಯದ್ಭುತ ಮತ್ತು ಬುದ್ಧಿವಂತಿಕೆಯ ಪಾತ್ರವನ್ನು ಸೃಷ್ಟಿಸಿ ಪತ್ತೇದಾರಿ ಸಾಹಸ ಕತೆಗಳ ಸಾರ್ವಭೌಮರಾಗಿ ಹೆಸರು ಪಡೆದರು.
ತಮ್ಮ ಈ ವಿಶಿಷ್ಟ ಪಾತ್ರದ ಅಂತ್ಯ ಕಾಣಿಸಲು ಒಬ್ಬ ಕುಖ್ಯಾತ ದರೋಡೆಕೋರ, ಅಪರಾಧಿ ಜೊತೆ ಹೋರಾಡುತ್ತಾ ಪ್ರಪಾತವೊಂದರಲ್ಲಿ ಬಿದ್ದು ಷರ್ಲಾಕ್ ಹೋಮ್ಸ್ ಮರಣಿಸಿದ ಎಂದು ಚಿತ್ರಿಸಿದರು. ಈ ಕಥಾಸಂಕಲನದಲ್ಲಿ ಏಳು ಪತ್ತೇದಾರಿ ಸಾಹಸ ಕತೆಗಳಿವೆ. ಕೊನೆಯ ಕತೆಯಲ್ಲಿ ಷರ್ಲಾಕ್ ಹೋಮ್ಸ್ ಕೇಡಿಯೊಡನೆ ಹೋರಾಡುತ್ತಾ ಪ್ರಪಾತವೊಂದರಲ್ಲಿ ಬಿದ್ದು ಮರಣಿಸಿದ ಸನ್ನಿವೇಶವಿರುವುದನ್ನು ಗಮನಿಸಬಹುದು.
ಇದರಿಂದ ವಿಶ್ವದ ನಾನಾ ಭಾಗಗಳಿಂದ ಓದುಗರ ಕೋಪ ಮತ್ತು ಪ್ರತಿಭಟನೆ ಯನ್ನು ಲೇಖಕ ಎದುರಿಸಬೇಕಾಯಿತು. ಪ್ಯಾರಿಸ್, ಲಂಡನ್ ಮತ್ತು ಇತರ ನಗರಗಳಲ್ಲಿ ಹೆಂಗಸರು ಮತ್ತು ಗಂಡಸರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದುಂಟು. ಷರ್ಲಾಕ್ ಹೋಮ್ಸ್‌ನ ಮರಣಕ್ಕೆ ಸಂತಾಪ ಸಭೆಗಳನ್ನು ನಡೆಸಿ ಅವನಿಗೆ ಶ್ರದ್ಧಾಂಜಲಿಯನ್ನು ಕೋರಿದ್ದು ಅವನ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಪತ್ರ ಮತ್ತು ಟೆಲಿಗ್ರಾಂಗಳ ಮೂಲಕ ಓದುಗರು ಷರ್ಲಾಕ್ ಹೋಮ್ಸ್‌ನನ್ನು ಮತ್ತೆ ಬದುಕಿಸಬೇಕು ಎಂದು ಲೇಖಕನನ್ನು ಒತ್ತಾಯಿಸಿದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ಲೇಖಕ ಆರ್ಥರ್ ಕಾನನ್ ಡಾಯ್ಸ್... 'ಕೇಡಿಗಳನ್ನು ಮೂರ್ಖರನ್ನಾಗಿಸಲು ಷರ್ಲಾಕ್ ಹೋಮ್ಸ್ ಸತ್ತಂತೆ ನಟಿಸಿದ...' ಎಂದು ಮತ್ತೆ ಜೀವ ಕೊಟ್ಟು ಕತೆಗಳನ್ನು ಮುಂದುವರಿಸಬೇಕಾಯಿತು ಷರ್ಲಾಕ್ ಹೋಮ್ಸ್ ಜೀವಂತ ವ್ಯಕ್ತಿ ಎನ್ನುವ ಭ್ರಮೆಯಿಂದ ಅಸಂಖ್ಯಾತ ಓದುಗರು ಅವನನ್ನು ಭೇಟಿ ಮಾಡಲು ಇಚ್ಚಿಸಿದರು. ಹೀಗಾಗಿ ಒಂದು ನಕಲಿ ವಿಳಾಸವನ್ನು - ಷರ್ಲಾಕ್ ಹೋಮ್ಸ್, 221-ಬಿ, ಬೇಕರ್ ಸ್ಟ್ರೀಟ್, ಲಂಡನ್ ಎಂದು ಸೂಚಿಸಲಾಯಿತು. ಅಲ್ಲಿಗೆ ಬಂದು ಮೋಸ ಹೋದ ಓದುಗರ ಲಕ್ಷಾಂತರ ಪತ್ರ ಮತ್ತು ಟೆಲಿಗ್ರಾಂಗಳನ್ನು ಕಂಡು ಅಂಚೆ ಪೇದೆ ಗಲಿಬಿಲಿಗೊಂಡಿದ್ದನು. ಅದಕ್ಕಾಗಿ ಒಂದು ಕಚೇರಿಯನ್ನೇ ಆರಂಭಿಸಬೇಕಾಯಿತು.
ಇಂಗ್ಲೆಂಡ್ ಸರ್ಕಾರ 1951ರಲ್ಲಿ ಷರ್ಲಾಕ್ ಹೋಮ್ಸ್‌ನ ನೆನಪಿನಲ್ಲಿ, 221-ಬಿ, ಬೇಕರ್ ಸ್ಟ್ರೀಟ್, ಲಂಡನ್‌ನಲ್ಲಿ ಒಂದು ಕೊಠಡಿಯನ್ನು ನಿರ್ಮಿಸಿದೆ. ಓದುಗರಿಗೆ ಇಂದಿಗೂ ಅದು ಆಕರ್ಷಣೆಯ ಕೇಂದ್ರವಾಗಿದೆ.
1930ರಲ್ಲಿ ಇಂಗ್ಲೆಂಡಿನ ಕ್ರಾಫ್‌ಬರೋನಲ್ಲಿ ಮರಣಿಸಿದ ಸರ್ ಆರ್ಥರ್ ಕಾನನ್ ಡಾಯ್ಸ್ ಸೃಷ್ಟಿಸಿದ ಕಾಲ್ಪನಿಕ ಪಾತ್ರ ಷರ್ಲಾಕ್ ಹೋಮ್ಸ್‌ನ ಪತ್ತೇದಾರಿ ಸಾಹಸಗಳನ್ನು ಓದಿ ಇಂದಿಗೂ ಓದುಗರು ರೋಮಾಂಚನಗೊಳ್ಳುತ್ತಾರೆ.
ಕರ್ನಾಟಕದ ಪ್ರತಿಷ್ಠಿತ 'ಅಂಕಿತ ಪುಸ್ತಕ' ಪ್ರಕಾಶನ ಸಂಸ್ಥೆಯಿಂದ ಈ ಕೃತಿ ಹೊರಬರುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಇದಕ್ಕಾಗಿ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾರವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಪುಸ್ತಕ ಅಂದವಾಗಿ ಹೊರಬಂದಿದೆ. ಇದಕ್ಕಾಗಿ ಶ್ರಮಿಸಿರುವ ಎಲ್ಲ ಆತ್ಮೀಯ ಬಂಧುಗಳಿಗೆ ನನ್ನ ನಮನಗಳು. ಎಂದಿನಂತೆ ಪುಸ್ತಕದ ಪ್ರತಿ ಹಂತದಲ್ಲಿ ನನಗೆ ಉತ್ಸಾಹ ತುಂಬಿದ ನನ್ನ ಹಿರಿಯ ಮಗ ಎಂ.ಎನ್. ರಾಘವೇಂದ್ರ ರಾವ್ ಮತ್ತು ಮಡದಿ ಶ್ರೀಮತಿ ನಾಗರತ್ನರಾವ್ ಗೆ ಶುಭ ಹಾರೈಕೆಗಳು.
"ಹಳ್ಳಿಯ ಸರ್ವೆ ಸಾಮಾನ್ಯ ಸಮಸ್ಯೆಗಳಾದ ಮನೆ ಯಜಮಾನನ ಕುಡಿತ, ವೇಶ್ಯಾವಾಟಿಕೆ, ಜಾತಿ ವ್ಯವಸ್ಥೆ, ಶಿಕ್ಷಣದಿಂದ ವಂಚಿ...
"ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿರುವ ಚಿರಂಜೀವಿಯವರು ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಬರಹಗಾರರು...
"ವಿಮರ್ಶೆಯನ್ನು ಹೊರತುಪಡಿಸಿ ಇತರ ಕೆಲವು ಲೇಖನಗಳು ಈ ಸಂಕಲನದಲ್ಲಿವೆ. ಬೆಳಗೆರೆಯವರ ಅಭಿಮಾನಿಯಾಗಿ ‘ಬೆಳಗೆರ...
©2025 Book Brahma Private Limited.