ಹಕ್ಕಿಗಳ ಗರಿಗಳಿರುವುದೆ ಹಾರುವುದಕ್ಕೆ, ಮುಂದಕ್ಕೆ ಕಳಿಸಿ ಕೊಡು


“ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡಿಸಲಾಗಿದೆ,” ಎನ್ನುತ್ತಾರೆ ನರಸಿಂಹಮೂರ್ತಿ ಹೂವಿನಹಳ್ಳಿ. ಅವರು ತಮ್ಮ “ತುಂಬಿ ಬಂದಿತ್ತ ಬೇಂದ್ರೆ ಕಾವ್ಯದ ಅಧ್ಯಯನ” ಕೃತಿಗೆ ಬರೆದ ಲೇಖಕರ ಮಾತು.

ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡಿಸಲಾಗಿದೆ. ಓದುಗರು, ವಿಮರ್ಶಕರು, ಕನ್ನಡದ ಲೇಖಕರು, ಲೇಖಕಿಯರು ಇಲ್ಲಿ ಚರ್ಚಿಸಿರುವ ಪದ್ಯಗಳ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳನ್ನು ಚರ್ಚಿಸಿ ಬೆಳೆಸಬಹುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಸಂಶೋಧಕರಿಗೆ, ಸಂಶೋಧಕಿಯರಿಗೆ ನೆರವಾಗಲೆಂದು ಬೇಂದ್ರೆಯವರ ಪದ್ಯಗಳ ಬಗ್ಗೆ ಬರೆದವರ ಅಭಿಪ್ರಾಯಗಳನ್ನು ನನ್ನ ಅಧ್ಯಯನಕ್ಕೆ ಪೂರಕವಾಗುವಂತೆ ಬಳಸಿಕೊಂಡಿದ್ದೇನೆ.

ಲಂಕೇಶರ “ಮನಕೆ ಕಾರಂಜಿಯ ಸ್ಪರ್ಶ" ಪುಸ್ತಕವನ್ನು ಓದುತ್ತಿದ್ದೆ. ಆಗ ನನಗೆ ಬೇಂದ್ರೆಯವರ "ಗರಿ" ಪದ್ಯ ನೆನಪಿಗೆ ಬಂತು. ಹಕ್ಕಿಗಳ ಗರಿಗಳಿರುವುದೆ ಹಾರುವುದಕ್ಕೆ, ಮುಂದಕ್ಕೆ ಕಳಿಸಿ ಕೊಡು ಎನ್ನುವ ಅರ್ಥದಲ್ಲಿ ಬೇಂದ್ರೆಯವರು ಹೇಳಿದ್ದರು.

ಪದ್ಯವನ್ನು ಬರೆಯುವ ಕವಿ, ಕವಿಯಿತ್ರಿ ಓದುಗ, ವಿಮರ್ಶಕ ಇಬ್ಬರೂ ಆದಾಗ ಪದ್ಯದಲ್ಲಿರುವ, ಕೃತಿಯಲ್ಲಿರುವ ಲೋಪ ದೋಷಗಳು ಅರ್ಥವಾಗುತ್ತವೆ. ಆಗ ನಾವು ಇನ್ನಷ್ಟು ತಿದ್ದಿ, ಟ್ರಿಮ್ ಮಾಡಿದರೆ ಮೌಲ್ಯಯುತವಾದ, ಗಟ್ಟಿತನ ಕೃತಿಗೆ ಬರುತ್ತದೆ ಎಂಬ ಕಾರಣಕ್ಕೆ ಈ ಮಾತನ್ನು ಹೇಳಿದೆ. ಬೇಂದ್ರೆಯವರ ಕಾವ್ಯ ಪ್ರಕೃತಿ, ಬದುಕು, ಮಾನವ ಸಂಬಂಧಗಳನ್ನು ಕುರಿತು ಮಾತಾಡುತ್ತದೆ. ನಮ್ಮ ನಡುವೆ ಇದುವರೆಗೂ ಕಡೆಗಣಿಸಿದ್ದ ಜನಪದ ಭಾಷೆ, ಬಡತನ, ಮಹಿಳೆಯರ ಬದುಕು ಅವರ ಪದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಹೆಣ್ಣು ಅವರ ಪದ್ಯಗಳ ಪ್ರಾಣ. ಪ್ರಕೃತಿ ಮತ್ತು ಮಾನವ ಬದುಕು ಕವಿತೆಗಳಲ್ಲಿ ಮುಖಾ ಮುಖಿಯಾಗಿರುವ ಕ್ರಮ, ಜಡವಾದುದನ್ನು ತಿರಸ್ಕರಿಸಿ, ಜೀವ ಇರುವ ಸಸ್ಯ, ಪ್ರಾಣಿ, ಮಾನವ ಜಗತ್ತನ್ನು ನೋಡಿರುವ ಕ್ರಮ ಬೇಂದ್ರೆಯವರ ಕವಿತೆಗಳಲ್ಲಿದೆ. ಕನ್ನಡ ಸಾಹಿತ್ಯದ ಬರವಣಿಗೆಯ ದಿಕ್ಕನ್ನೇ ಬದಲಾಯಿಸಿದ ಬರಹಗಾರರಲ್ಲಿ ಬೇಂದ್ರೆ ಮುಖ್ಯರು.

ಬೇಂದ್ರೆಯವರ ಬರವಣಿಗೆಯ ಬದುಕಿಗೆ ಅವರ ಸುತ್ತಮುತ್ತಲಿನ ಪರಿಸರ, ಬೆಳೆದ ವಾತಾವರಣ, ಜನರ ನಡುವೆ ಓಡಾಡಿ ನೋಡಿದ, ಅನುಭವಿಸಿದ ಬದುಕು, ಪಟ್ಟ ಪಾಡು, ಬಡತನ, ನೋವು, ಗೆಳೆಯರ ಬಳಗ, ಓದಿಕೊಂಡ ಜ್ಞಾನದ ಸಂಪತ್ತು ಇದೆಲ್ಲದರ ಸಾರ ಬೇಂದ್ರೆ ಕಾವ್ಯದ ಪ್ರಾಣ. ಬೆಳಕು ಎಂದಾಕ್ಷಣ ಆವರಿಸಿರುವ ಕತ್ತಲು ದೂರಾಗಿ ಬೆಳಕಾಗುವುದಲ್ಲ, ಮನುಷ್ಯ ಜಗತ್ತು, ಪ್ರಾಣಿ ಜಗತ್ತು, ಸಸ್ಯ ಜಗತ್ತಿನಲ್ಲಿ ನಡೆಯುತ್ತಿರುವ ಕ್ರಿಯಾ ಚಟುವಟಿಕೆಯನ್ನು ಕುರಿತು ಅವರ ಕಾವ್ಯ ಮಾತಾಡುತ್ತದೆ. ಬೇಂದ್ರೆ ಅವರ ಕವಿತೆಗಳಲ್ಲಿ ಕಳೆದು ಹೋದದ್ದನ್ನು ನೆನಪು ಮಾಡಿಕೊಳ್ಳುವ ಜನರಿದ್ದಾರೆ; ಬಡತನ, ಶೋಷಣೆಗೆ ಒಳಗಾದ ಮಹಿಳೆಯರಿದ್ದಾರೆ. ಕನಸುಗಳಿವೆ, ಪ್ರೀತಿ ಪ್ರೇಮ ಇದೆ, ಕಾಲವನ್ನು ಕುರಿತು ಮಾತಾಡುವ ಪದ್ಯದ ರೂಪಕಗಳಿವೆ. ಆರ್ಥಿಕ ವ್ಯವಸ್ಥೆಯನ್ನು ಕುರಿತು ಮಾತಾಡುತ್ತಾರೆ. ಜನಪದ ಭಾಷೆ, ಗ್ರಂಥಸ್ಥ ಭಾಷೆ, ಪ್ರಾಸಗಳು ಬೇಂದ್ರೆಯವರ ಕವನ ಸಂಕಲನಗಳಲ್ಲಿ ಬರುತ್ತವೆ.

ಬೌದ್ಧಿಕ ಚಟುವಟಿಕೆಗೆ ಸಂಬಂಧಿಸಿದ ಪದ್ಯಗಳೂ ಇವೆ. ಜಗತ್ತಿನ ಮಹಿಳಾ ಸಾಹಿತ್ಯವನ್ನು ಕುರಿತು ಬರೆಯುವವರು, ಮಾತನಾಡುವವರು ಬೇಂದ್ರೆ ಕಾವ್ಯವನ್ನು ಓದಬೇಕು. ಅವರ ಕವಿತೆಗಳಲ್ಲಿ ಬರುವ ಮಹಿಳೆಯರ ಬದುಕನ್ನು, ಸಮಸ್ಯೆಗಳನ್ನು, ಸಮಾನತೆಯನ್ನು ಕುರಿತು ಮಾತನಾಡುವಷ್ಟು ವಸ್ತುವಿದೆ. 'ಜೋಗಿ' ಪದ್ಯದಲ್ಲಂತೂ ಮನುಷ್ಯ ಲೋಕ, ಪ್ರಕೃತಿ ಲೋಕದ ದಟ್ಟ ಅನುಭವವಾಗುತ್ತದೆ. ಬೇರೆ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ನಿರೂಪಕ ಬರುತ್ತಾನೆ. ಹೊಸ ಲೋಕಗಳು ತೆರೆದುಕೊಳ್ಳುತ್ತವೆ. ಬೇಂದ್ರೆಯವರ ಪದ್ಯಗಳಲ್ಲಿ ಶೋಷಣೆಗೆ ಒಳಗಾಗಿರುವ ಮಹಿಳೆಯರು ಬರುತ್ತಾರೆ. ತಾಯಿ ಮಕ್ಕಳ ಸಂಬಂಧವನ್ನು ಪ್ರಾಣಿ ರೂಪಕಗಳ ಮೂಲಕ ಮನುಷ್ಯನ ನಡತೆ ವರ್ತನೆಯನ್ನು ಹೇಳುವ ಪದ್ಯಗಳಿವೆ. ಪುರಾಣ ಪ್ರತೀಕಗಳನ್ನು ಬಳಸಿ ತಾಯಿ ಮಕ್ಕಳ ಸಂಬಂಧವನ್ನು ಹೇಳುವ ಪದ್ಯಗಳನ್ನು ಬರೆದಿದ್ದಾರೆ. ಕೌಟುಂಬಿಕ ನೆಲೆಯಿಂದ ಹಿಡಿದು ರಾಜ್ಯ, ರಾಷ್ಟ್ರ, ವಿಶ್ವ ಮಟ್ಟದ ತಾಯಂದಿರನ್ನು ಕುರಿತು ಮಾತಾಡುತ್ತಾರೆ. ದೇಹವನ್ನು ರೂಪಕವಾಗಿಟ್ಟುಕೊಂಡು ಜೀವ ಪರವಾದ ಚಲನಶೀಲತೆಯ ಬಗ್ಗೆ ಮಾತಾಡಿದ್ದಾರೆ. ಬೇಂದ್ರೆ ಪದ್ಯಗಳನ್ನು ಓದುತ್ತಾ ಹೋದರೆ ದಟ್ಟವಾದ ಕಾಡನ್ನು, ನಾಡನ್ನು ಪ್ರವೇಶಿಸಿದ ಅನುಭವವಾಗುತ್ತದೆ. ನಮ್ಮ ನಡುವೆ ಇಂದು ಹಣವೇ ಗುಮ್ಮವಾಗಿ ಓಡಾಡುತ್ತಾ ನಮ್ಮನ್ನು ಹೆದರಿಸುತ್ತಿದೆ; ಜನಗಳನ್ನು ದಾಸರನ್ನಾಗಿ ಮಾಡಿಕೊಂಡಿದೆ. ಅಧಿಕಾರ ಉಳ್ಳವರು ಯುದ್ಧದ ಕಾಯಿಲೆಯಿಂದ ಉನ್ಮತ್ತರಾದರೆ ಜನರು ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ. ಮಾನವನ ಅಭಿವೃದ್ಧಿಗೆ ಬೇಕಾದ ಪೂರ್ವ ಸಿದ್ಧತೆಗಳಿಗಿಂತ, ಯುದ್ಧಕ್ಕೆ ಬೇಕಾದ ಪೂರ್ವ ಸಿದ್ಧತೆಗಳು ನಮ್ಮ ನಡುವೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ. ಯುದ್ಧಗಳು ಧರ್ಮಗಳಾಗಿ, ಜನಾಂಗ ಜನಾಂಗಗಳ ನಡುವೆ ದ್ವೇಷ ಸಾಧಿಸುವ, ಅಧಿಕಾರ ಹಿಡಿಯುವ ಭಯೋತ್ಪಾದಕ ಚಟುವಟಿಕೆಗಳಾಗಿ ಮುಂದುವರಿಯುತ್ತಿವೆ. ಬೇಂದ್ರೆಯವರಷ್ಟು ಸಾವು ನೋವು ಬಡತನ ಅನುಭವಿಸಿ ಪದ್ಯಗಳನ್ನು ಬರೆದವರು ಅಪರೂಪ.

ಈ ಕೃತಿಯು ಭಿನ್ನವಾಗಿ ಹೊಸರೂಪ ಪಡೆಯಲು ಮಾರ್ಗದರ್ಶನ ಕೊಟ್ಟ ಡಾ. ನಟರಾಜ್ ಹುಳಿಯಾರ್ ಅವರಿಗೂ, ಕವಿ, ಅನುವಾದಕರೂ ಆದ ಪುರುಷೋತ್ತಮ ದಾಸ್ ಹೆಗ್ಗಡೆಯವರಿಗೂ ನನ್ನ ವಿಶೇಷ ಕೃತಜ್ಞತೆ.

ಕೃತಿಯಲ್ಲಿರುವ ತಪ್ಪುಗಳನ್ನು ತಿದ್ದಿ, ಪ್ರೋತ್ಸಾಹಿಸಿದ. ಚರ್ಚಿಸಿದ 'ಮಯೂರ'ದ ಉಪ ಸಂಪಾದಕರಾಗಿದ್ದ ಸಂದೀಪ ನಾಯಕರಿಗೆ ನನ್ನ ವಿಶೇಷ ಕೃತಜ್ಞತೆ.

ಪುಟ ವಿನ್ಯಾಸ ಮಾಡಿದ ಶಾರದಾ ಬಸವರಾಜ್ ಅವರಿಗೆ, ಈ ಕೃತಿಯನ್ನು ಪ್ರಕಟಿಸುತ್ತಿರುವ ಲಕ್ಷ್ಮೀ ಮುದ್ರಣಾಲಯದ ಮಂಜು ಮತ್ತು ಬಳಗದವರಿಗೆ, ಪುಸ್ತಕ ಪ್ರಕಟಣೆಗೆ ಸಹಕರಿಸಿದ ಪತ್ನಿ ಚಂದ್ರಕಲಾ, ಪುತ್ರಿ ಪ್ರೇರಣ ಅವರಿಗೆ ನನ್ನ ವಂದನೆಗಳು. ಮುಖಪುಟ ಬರೆದು ಕೊಟ್ಟ ಮುರಳೀಧರ ರಾಠೋಡ್ ಅವರಿಗೂ, ಓದುಗರಿಗೂ ನನ್ನ ವಂದನೆಗಳು.

MORE FEATURES

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ!

07-05-2025 ಬೆಂಗಳೂರು

"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...

ಈ ಕತೆಗಳು ಬದುಕಿನ ವಿವಿಧ ಮುಖವಾಡಗಳನ್ನು ಬಯಲಿಗೆಳೆಯುತ್ತವೆ

07-05-2025 ಬೆಂಗಳೂರು

"ಆಹುತಿ ಕತೆಯಲ್ಲಿ ಹೆಣ್ಣಿನ ಶೋಷಣೆಯ ಚಿತ್ರಣವಿದೆ. ಶೀನಪ್ಪ ಮೇಷ್ಟರ ಮುಖವಾಡದ ಕತೆಯಿದೆ. ಹೊರಗಣ ಸಮಾಜಕ್ಕೆ ಸಂಭಾವಿ...

ಬೆಂಗಳೂರಿನಲ್ಲಿ ಕೊಂಡಿಯೊಂದು ಕಳಚಿತು....

06-05-2025 ಬೆಂಗಳೂರು

“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್‌ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...