ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಬಗ್ಗೆ ಒಂದು ಚರ್ಚೆ


ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸಾಹಿತ್ಯ ವಿಮರ್ಶೆಯ ಬಗ್ಗೆ ಪ್ರಕಟಿಸಿದ ಎರಡು ಕೃತಿಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ.. 
     
   ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸಾಹಿತ್ಯ ವಿಮರ್ಶೆಯನ್ನು ಪ್ರಧಾನ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಶಾಸನ ಸಂಶೋಧನೆ, ಸಂಸ್ಕೃತಿ ಚಿಂತನೆ, ಗ್ರಂಥ ಸಂಪಾದನೆ ಇತ್ಯಾದಿ ವಿದ್ವತ್ ಕ್ಷೇತ್ರಗಳಲ್ಲಿಯೂ ಅವರು ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ಇತ್ತೀಚೆಗೆ ಪ್ರಕಟವಾಗಿರುವ ಅವರ ಎರಡು ಪುಸ್ತಕಗಳು ಕನ್ನಡ ಸಾಹಿತ್ಯ ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಕೃತಿಗಳು.

    ಕನ್ನಡ ವಿಭಾಗವೇ ಪ್ರಕಟಿಸಿರುವ `ವಿಮರ್ಶೆಯ ಒಲವು ನಿಲುವು' ಕೃತಿಯು ಮುಖ್ಯವಾಗಿ ಕನ್ನಡ ವಿಮರ್ಶೆ ಸಾಗಿ ಬಂದ ಬಗೆಯನ್ನು ಗುರುತಿಸಿ, ಪ್ರಸ್ತುತ ಅದು ತೊಟ್ಟಿರುವ ರೂಪಗಳನ್ನು ಸಮೀಕ್ಷಿಸಿ, ವಿವಿಧ ಸಾಹಿತ್ಯ ಪ್ರಕಾರಗಳನ್ನು ಹೇಗೆ ವಿಮರ್ಶೆ ಮಾಡಬಹುದು ಎಂದು ತೋರಿಸಿಕೊಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯ ವಿಮರ್ಶೆಯ ಕುರಿತು ಆಸಕ್ತಿಯುಳ್ಳ ಓದುಗರಿಗೆ ಇದೊಂದು ಉಪಯುಕ್ತ ಕೈಪಿಡಿಯಾಗಿದೆ. ಸಾಹಿತ್ಯ ವಿಮರ್ಶೆ ಅಂದರೆ ಏನು, ವಿವಿಧ ವಿಮರ್ಶಾ ಪ್ರಸ್ಥಾನಗಳು ಯಾವುವು ಎಂದು ಪರಿಚಯಿಸುವ ಕೃತಿಗಳು ಕನ್ನಡದಲ್ಲಿ ಇವೆ. ಆದರೆ ಕನ್ನಡ ಸಾಹಿತ್ಯ ವಿಮರ್ಶೆ ಸಾಗಿ ಬಂದ ದಾರಿ, ಮುಖ್ಯ ವಿಮರ್ಶಕರ ಚಿಂತನೆಗಳು ಇವುಗಳನ್ನು ಪರಿಚಯಿಸುವ ಕೃತಿಗಳು ಇಲ್ಲವೆಂಬಷ್ಟು ಕಡಿಮೆ.   

    ಈ ಪುಸ್ತಕದ ಮುಖ್ಯ ಲೇಖನ, `ಕನ್ನಡ ವಿಮರ್ಶೆ ಸಾಂಪ್ರತ ವಿದ್ಯಮಾನಗಳು' ಎರಡನೆಯ ಪುಸ್ತಕದಲ್ಲಿಯೂ ಸೇರಿದೆ. ಯಾಕೆಂದರೆ ಅದು ಎರಡೂ ಪುಸ್ತಕಗಳಿಗೆ ಒಂದು ಉತ್ತಮ ಪ್ರವೇಶಿಕೆಯನ್ನು ಒದಗಿಸಿಕೊಡುವುದು. ಆಧುನಿಕ ಸಾಹಿತ್ಯದ ಪ್ರಾರಂಭದಿಂದ ಬೆಳೆದು ನವ್ಯದ ನಂತರ ಹೆಚ್ಚು ವಿಸ್ತಾರವಾದ ಕನ್ನಡ ವಿಮರ್ಶೆ ಇಪ್ಪತ್ತೊಂದನೆಯ ಶತಮಾನದ ಕಾಲುಭಾಗವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಕನ್ನಡ ವಿಮರ್ಶೆ 'ಬಹುತ್ವ' ಮತ್ತು 'ವಾಗ್ವಾದ'ಗಳಿಂದ ಸಮೃದ್ಧವಾಗಿದೆ ಎಂಬ ನಿಲುವನ್ನು ಅವರು ತಳೆಯುತ್ತಾರೆ.

    ಮುಂದಿನ ಮೂರು ಲೇಖನಗಳು, `ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರವಾಗಿ ವಿಮರ್ಶೆ'; `ಪ್ರೌಢ ವಿಮರ್ಶಕ ಶಂಕರ ಮೊಕಾಶಿ ಪುಣೇಕರ'; `ವಿಮರ್ಶೆ- ಜನಾರ್ದನ ಭಟ್ ಅವರ ನಿಲುವು' ಮತ್ತು `ಕನ್ನಡ ವಿಮರ್ಶೆಗೆ ಡಾ. ಜಿ. ಎಂ. ಹೆಗಡೆ ಅವರ ಕೊಡುಗೆ' – ಇವು ಮೇಲಿನ ಲೇಖನಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ಚರ್ಚಿಸುತ್ತವೆ.

    ನಂತರ ಪ್ರಾಯೋಗಿಕ ವಿಮರ್ಶೆಯ ಪರಿಚಯದ ದೃಷ್ಟಿಯಿಂದ ವಿವಿಧ ಪ್ರಕಾರಗಳ ಕೃತಿಗಳನ್ನು ಲೇಖಕರು ವಿಮರ್ಶಿಸಿರುವ ಲೇಖನಗಳನ್ನು ಕೊಡಲಾಗಿದೆ. ಅವು: `ಬದುಕಿನ ಲಯ - ಲಹರಿಗಳ ಅನ್ವೇಷಣೆ' (ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಪ್ರಬಂಧಗಳ ಬಗ್ಗೆ); `ಬಹು ಆಯಾಮಗಳ ಉತ್ಕೃಷ್ಟ ಕಾದಂಬರಿ 'ಅಜ್ಞಾತನೊಬ್ಬನ ಆತ್ಮಚರಿತ್ರೆ' (ಹನೂರರ ಕಾದಂಬರಿಯ ಬಗ್ಗೆ)'; `ಭಾರತೀಯ ರಂಗಭೂಮಿಗೆ ಗಿರೀಶ್ ಕಾರ್ನಾಡ್‌ರ ಕೊಡುಗೆ'; `ಹಂಪನಾ ಅವರ 'ಚಂದ್ರಕೊಡೆ'ಯ ಚೆಲುವು'; `ಬದುಕಿನ ವಿಕಾಸದ ಗತಿಯನ್ನು ತೆರೆಯುವ ಚಿಂತನೆಗಳು' (ಕೆ. ವಿ. ಸುಬ್ಬಣ್ಣ ಅವರ ಚಿಂತನ ಬರಹಗಳ ಅವಲೋಕನ); `ಬೇಂದ್ರೆ ಗೋಕಾಕರಿಗೊಬ್ಬ ಬಾಸ್ವೆಲ್' (ಜೀವಿ ಕುಲಕರ್ಣಿಯವರ `ನಾ ಕಂಡ ಬೇಂದ್ರೆ' ಮತ್ತು `ನಾ ಕಂಡ ಗೋಕಾಕ' ಕೃತಿಗಳ ಬಗ್ಗೆ); `ಮಾನವ್ಯ ಧೋರಣೆ' (ಇದು `ಸನದಿ ಅವರ ಒಂದು ಕವಿತೆಯ ವಿಮರ್ಶೆ'); `ಕಣವಿ ಅವರ ಒಂದು ಕವಿತೆಯ ಕುರಿತಿಷ್ಟು' ('ಮಂದಿ' ಕವಿತೆಯ ಬಗ್ಗೆ); `ವಿಮರ್ಶೆ ಸಾಹಸಯಾತ್ರೆಯ ಕಥನ ಕಾರ್ಯ' (ಕುವೆಂಪು ಅವರ `ಕಾವ್ಯ ವಿಹಾರ' ಕೃತಿಯ ಬಗ್ಗೆ); 'ಹಕ್ಕಿ ಮತ್ತು ಅವಳು' (ಕನ್ನಡ ಆಸ್ತಿ ಕಥಾಲೋಕದೊಳಗಿನ ವಿಶಿಷ್ಟ ಧ್ವನಿಯಾಗಿ ಮಿತ್ರಾ ವೆಂಕಟರಾಜರ ಕಥಾ ಸಂಕಲನದ ವಿಮರ್ಶೆ); `ಸಾಮಯಿಕ ಮಹತ್ವವಿರುವ ಕೃತಿ' (ಕಲಾ ಭಾಗವತ್ ಅವರ ಲೇಖನಗಳ ಸಂಕಲನ `ಜಾಲಂದರ'ದ ಸಮೀಕ್ಷೆ); `ಚಿರಂತನ ದಾಹ' (ಕಣವಿಯವರ ಇನ್ನೊಂದು ಕವಿತೆಯ ವಿಮರ್ಶೆ) – ಇವು ಈ ಪುಸ್ತಕದಲ್ಲಿ ಸೇರಿವೆ.

    ಇನ್ನೊಂದು ಗ್ರಂಥ `ಕನ್ನಡ ವಿಮರ್ಶೆ : ಸಾಂಪ್ರತ ವಿದ್ಯಮಾನಗಳು ಹಾಗೂ ಕೆಲವು ಕೃತಿಗಳ ಪಕ್ಷಿನೋಟ' ಕಳೆದೆರಡು ದಶಕಗಳಲ್ಲಿ ಬಂದ ಉತ್ತಮ ಕೃತಿಗಳ ಅವಲೋಕನವಾಗಿದೆ. ಈ ಬಗೆಯ ಸಂಪುಟಗಳು ಕನ್ನಡ ಸಾಹಿತ್ಯದ ಪ್ರಸಕ್ತ ಒಲವು ನಿಲುವುಗಳನ್ನು ಪರೋಕ್ಷವಾಗಿ ತಿಳಿಸಿಕೊಡುತ್ತವೆ. ಅಲ್ಲದೆ ನಿರ್ದಿಷ್ಟ ಕೃತಿಗಳನ್ನು ಓದಲಾಗದವರಿಗೆ ಆಯಾಯ ಕೃತಿಗಳ ಪರಿಚಯ ಮಾಡಿಕೊಳ್ಳಲು ಇದು ಉಪಯುಕ್ತ. ಅಭಿರುಚಿ ನಿರ್ಮಾಣದ ಕಾರ್ಯವೂ ಆನುಷಂಗಿಕವಾಗಿ ಆಗುತ್ತದೆ.

    68 ಲೇಖನಗಳಿರುವ ಇದರಲ್ಲಿರುವ ಮುಖ್ಯ ಬರಹಗಳು - ಕುಸುಮಾಕರ ದೇವರಗೆಣ್ಣೂರರ 'ನಾಲ್ಕನೆಯ ಆಯಾಮ', ಡಾ. ಸಿದ್ದಲಿಂಗಯ್ಯ ಅವರ ಸಮಗ್ರ ಕಾವ್ಯ, 'ಚಾರುವಸಂತ', ಜಯಂತ್ ಕಾಯ್ಕಿಣಿಯವರ `ತೂಫಾನ್ ಮೇಲ್', 'ಇಹದ ಪರಿಮಳದ ಹಾದಿಯಲ್ಲಿ' (ಕೆ.ಎಸ್.ನ. ಬಗ್ಗೆ ನರಹಳ್ಳಿಯವರ ಪಿಎಚ್.ಡಿ. ಗ್ರಂಥ), `ಬಾ ಕುವೆಂಪು ದರ್ಶನಕೆ' (ನರಹಳ್ಳಿ), ವಿಜಯಶಂಕರರ 'ಒಳದನಿ', ತರೀಕೆರೆಯವರ `ಕರ್ನಾಟಕದ ಸೂಫಿಗಳು',  ಎಲ್.ವಿ. ಶಾಂತಕುಮಾರಿಯವರ ವಿಮರ್ಶೆಯಲ್ಲಿ ಮಾಸ್ತಿ ಅವರ ಕತೆಗಳ ಮಹತಿ, ಬಿ. ಜನಾರ್ದನ ಭಟ್ ಅವರ 'ಕನ್ನಡ ಕಾದಂಬರಿ ಮಾಲೆ', `ಕರಾವಳಿಯ ಕವಿರಾಜ ಮಾರ್ಗ', 'ಸಾಹಿತ್ಯ ವಿಮರ್ಶೆ', `ಭಾಷಾಂತರ ಅಧ್ಯಯನ' ಮತ್ತು `ಜಗತ್ಪ್ರಸಿದ್ಧ ಸಣ್ಣಕತೆಗಳು' (ಅನುವಾದ); ಉಮಾ ರಾಮ ರಾವ್ ಅವರು ಭೈರಪ್ಪನವರ ಕುರಿತು ಮಾಡಿದ ಅಧ್ಯಯನದ ಕೃತಿ, ಹಂಪನಾ ಅವರ ಶೋಧಗ್ರಂಥ 'ಶ್ರೀವಿಜಯ', ಶಶಿಧರ ಹಾಲಾಡಿ ಅವರ `ಅಬ್ಬೆ', `ತುರಂಗ ಭಾರತ', `ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ', ಡುಂಡಿರಾಜ್ ಬರೆದ ಹನಿಗವನ ಕೈಪಿಡಿ, ಜೋಕಟ್ಟೆಯವರ `ಮುಂಬಯಿ ಮಿಂಚು', ಅನಿತಾ ತಾಕೊಡೆಯವರ `ಸುವರ್ಣ ಯುಗ', ಅನಿಲ್ ಕುಮಾರ್ ಶೆಟ್ಟಿಯವರ `ಉಡುಪಿ ಜಿಲ್ಲಾ ಬರಹಗಾರರ ಕೋಶ', ಅಜಕ್ಕಳ ಗಿರೀಶ್ ಭಟ್ ಅವರ `ಸಂಶೋಧನ ರಾಜಮಾರ್ಗ', `ಒಂದು ಪುರಾತನ ನೆಲದಲ್ಲಿ' (ಮಿತ್ರಾ ವೆಂಕಟರಾಜ್ ಅವರು ಮಾದಿದ ಅಮಿತಾವ್ ಘೋಷ್ ಕಾದಂಬರಿಯ ಅನುವಾದ), `ಸ್ವೀಕೃತಿ' (ಜಿ. ಎಸ್. ಆಮೂರ ಅಭಿನಂದನ ಗ್ರಂಥ) - ಹೀಗೆ ವಿವಿಧ ಪ್ರಕಾರಗಳ ಕೃತಿಗಳ ಬಗ್ಗೆ ಉಪಾಧ್ಯರು ಬರೆದಿರುವ ಲೇಖನಗಳು ಇಲ್ಲಿವೆ. ಹಲವಾರು ಹೊಸ ಲೇಖಕರ ಕೃತಿಗಳನ್ನು ಅವರು ಸಹೃದಯತೆಯಿಂದ ಪರಿಶೀಲಿಸಿ ವಿಮರ್ಶಿಸಿದ್ದಾರೆ. ಜತೆಗೆ ಕೆಲವು ಸಾಹಿತ್ಯಿಕ ಪ್ರಬಂಧಗಳನ್ನು ಕೂಡ ಅವರು ಇಲ್ಲಿ ಸೇರಿಸಿದ್ದಾರೆ. ಅವು - `ಚಾರಿತ್ರಿಕ ಮಹತ್ವದ ಸೊಲ್ಲಾಪುರ ಶಾಸನ' (ಸಾಂಸ್ಕೃತಿಕ ಅಧ್ಯಯನ), `ಕರಾವಳಿ ಕರ್ನಾಟಕದ ಆತ್ಮಕಥೆಗಳು', `ಕುವೆಂಪು ಕಥನ ಸಾಹಿತ್ಯ', `ವ್ಯಾಸರಾಯ ಬಲ್ಲಾಳರ ಸಣ್ಣಕತೆಗಳು' ಇತ್ಯಾದಿ. ಈ ಲೇಖನಗಳು ಉಪಯುಕ್ತ ಸಾಹಿತ್ಯ ಚಿಂತನೆಗಳಾಗಿವೆ., ಪರಾಮರ್ಶನಕ್ಕೆ ಒದಗುವಂಥವಾಗಿವೆ  
    
    ಅನುಬಂಧ ರೂಪದಲ್ಲಿ ಜಿ.ಎನ್. ಉಪಾಧ್ಯರ ಕುರಿತಿ ಡಾ. ಜಿ.ವಿ. ಕುಲಕರ್ಣಿಯವರು ಬರೆದ, `ಕನ್ನಡ ನುಡಿಯ ಕಿಂಕರ, ಕರ್ಮಯೋಗಿ' ಎನ್ನುವ ಲೇಖನವೂ, ಅವರ ಸಾಧನೆಯ ಬಗ್ಗೆ ಇತರ ಮಾಹಿತಿಗಳೂ, ಅವರು ಪ್ರಕಟಿಸಿದ ಕೃತಿಗಳು ಇತ್ಯಾದಿ ಮಾಹಿತಿಗಳೂ ಇವೆ.

    ಹೀಗೆ ಈ ಎರಡು ಕೃತಿಗಳು ಕನ್ನಡ ವಿಮರ್ಶೆಯ ಒಂದು ಅವಲೋಕನ, ಹೊಸ ಕೃತಿಗಳ ಪರಿಚಯ ಮತ್ತು ಒಟ್ಟು ಕನ್ನಡ ಸಾಹಿತ್ಯದ ಪ್ರಮುಖ ಸಾಹಿತ್ಯ ಸಾಧನೆಗಳ ಅವಲೋಕನ ಮಾದರಿಗಳ ಸಂಕಲನವಾಗಿದೆ. ಕನ್ನಡ ಸಾಹಿತ್ಯದಲ್ಲಿ ಕೃತಿ ಪರಿಚಯ ಮತ್ತು ವಿಮರ್ಶೆ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಈ ಕೃತಿಗಳ ಪ್ರಕಟಣೆ ಮುಖ್ಯವೆನಿಸುತ್ತದೆ.

ಕೃತಿಗಳ ಮಾಹಿತಿ ಹೀಗಿದೆ.. 

1. ವಿಮರ್ಶೆಯ ಒಲವು ನಿಲುವು 
ಲೇ.: ಪ್ರೊ.ಜಿ.ಎನ್. ಉಪಾಧ್ಯ
ಪ್ರಕಾಶನ: ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ
ಪ್ರಕಟಣೆಯ ವರ್ಷ: 2024
ಪುಟಗಳು: 186. ಬೆಲೆ: ರೂ. 150

2. ಕನ್ನಡ ವಿಮರ್ಶೆ : ಸಾಂಪ್ರತ ವಿದ್ಯಮಾನಗಳು
ಹಾಗೂ ಕೆಲವು ಕೃತಿಗಳ ಪಕ್ಷಿನೋಟ
ಲೇ.: ಪ್ರೊ.ಜಿ.ಎನ್. ಉಪಾಧ್ಯ
ಪ್ರಕಾಶಕರು: ಶ್ರೀರಾಮ ಪ್ರಕಾಶನ, ಮಂಡ್ಯ. 571401 
ಪ್ರಕಟಣೆಯ ವರ್ಷ: 2024 
ಪುಟಗಳು: 360. ಬೆಲೆ: ರೂ. 400

MORE FEATURES

ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಸಮೃದ್ಧ ಆಕರ ಗ್ರಂಥ

30-04-2025 ಬೆಂಗಳೂರು

"ಪ್ರತಿಯೊಂದು ಲೇಖನವು ಕೃತಿಯ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಕಾದಂಬರಿಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅದರ ...

ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುವ ಉತ್ತಮ ಕಥನವಿದು

30-04-2025 ಬೆಂಗಳೂರು

"ಜಾಗದ ಮಾಹಿತಿಯೊಂದಿಗೆ ಮನುಷ್ಯ ಸಂಬಂಧಗಳು, ಆಹಾರ ಪದ್ಧತಿ, ಯೋಚನಾಲಹರಿಗಳಲ್ಲಿನ ಸಾಮ್ಯತೆ, ಭಿನ್ನತೆ, ವೈವಿಧ್ಯತೆಗ...

ಬದುಕು ನಮ್ಮ ಕಲ್ಪನೆಗೂ ಮೀರಿದ ಒಂದು ವಾಸ್ತವ

30-04-2025 ಬೆಂಗಳೂರು

“ಗ್ರಾಮೀಣ ಭಾಗದ ಒಂದು ಬಡ ಕುಟುಂಬದ ಬವಣೆಯನ್ನು ಈ ಸಾಮಾಜಿಕ ಕಾದಂಬರಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಓದುಗರ ಮನ ಮುಟ...