ನೆನಪು - ಕನಸುಗಳ ನೆರಳು - ಬೆಳಕಿನ ಕಥೆಗಳು


ಮೊದಲ ಕಥಾ ಸಂಕಲನವಾದರೂ ಅನನ್ಯರ ಕಥೆಗಳಲ್ಲಿ ತೀರಾ ಎಳಸು ಎಲ್ಲಿಯೂ ಕಾಣುವುದಿಲ್ಲ. ನೈಜತೆ, ಸಹಜ ನಿರೂಪಣೆ ಮತ್ತು ಸಂಗತಿಗಳ ಯಥಾರ್ಥ ಚಿತ್ರಣದಿಂದ ಕಥೆಗಳು ಪಕ್ವವೆನಿಸುತ್ತವೆ. ಬಯಲು ಸೀಮೆಯ ಗ್ರಾಮ್ಯ ಭಾಷೆಯ ಬಳಕೆ ಕಥೆಗಳಿಗೆ ವಿಶೇಷ ಮೆರುಗು ನೀಡಿದೆ. ನೆನಪುಗಳಿಂದ ಹೆಕ್ಕಿದ ಹಳ್ಳಿಯ ಕಥೆಗಳನ್ನು ಮತ್ತು ಅನುಭವದಿಂದ ಹುಟ್ಟಿದ ಮಹಾನಗರದ ಕಥೆಗಳನ್ನು ಲೇಖಕಿ ಇಲ್ಲಿ ಹೇಳಿದ್ದಾರೆ ಎನ್ನುತ್ತಾರೆ ಲೇಖಕ ಅಜಿತ್ ಹರೀಶಿ. ಅವರು ಅನನ್ಯ ತುಷಿರ ಅವರ ಅರ್ಧ ನೆನಪು - ಅರ್ಧ ಕನಸು ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...

ಕೃತಿ: ಅರ್ಧ ನೆನಪು - ಅರ್ಧ ಕನಸು
ಲೇಖಕ: ಅನನ್ಯ ತುಷಿರ 
ಪ್ರಕಾಶನ: ಅಂಕಿತ ಪ್ರಕಾಶನ 
ಪುಟಗಳು: 146 
ಬೆಲೆ ರೂ: 150 

ಕನಸುಗಳಿಲ್ಲದೇ ಜೀವನವಿಲ್ಲ, ಹಾಗೇ ನೆನಪುಗಳಿಲ್ಲದ ಜೀವನ ಕೂಡ ಇಲ್ಲ. ನಮ್ಮ ವರ್ತಮಾನದ ಬದುಕು ನೆನಪು - ಕನಸುಗಳ ಮೇಲೆಯೇ ನಿಂತಿರುವುದು. ಇಂಥ ನೆನಪು - ಕನಸುಗಳ ನಡುವೆ ಜೀಕುವ ಕಥೆಗಳನ್ನು ಪುಸ್ತಕವಾಗಿಸಿ ಓದುಗರ ಕೈಗಿತ್ತಿದ್ದಾರೆ ಅನನ್ಯ ತುಷಿರ. ಅಂಕಿತ ಪ್ರತಿಭೆ ಮಾಲಿಕೆಯ ಏಳನೇ ಕೃತಿಯಾಗಿ ಈ ಪುಸ್ತಕ ಪ್ರಕಟಗೊಂಡಿದೆ. ಮೂಲತಃ ತಾಳಿಕೋಟೆಯವರಾದ ಅನನ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 'ಅರ್ಧ ನೆನಪು - ಅರ್ಧ ಕನಸು' ಇದು ಅನನ್ಯರ ಮೊದಲ ಕಥಾ ಸಂಕಲನ. ('ಅನನ್ಯ ನಿನಾದ' ಎಂಬ ಕವನ ಸಂಕಲನ  ಪ್ರಕಟವಾಗಿದೆ.) ಮೊದಲ ಕಥಾ ಸಂಕಲನವಾದರೂ ಅನನ್ಯರ ಕಥೆಗಳಲ್ಲಿ ತೀರಾ ಎಳಸು ಎಲ್ಲಿಯೂ ಕಾಣುವುದಿಲ್ಲ. ನೈಜತೆ, ಸಹಜ ನಿರೂಪಣೆ ಮತ್ತು ಸಂಗತಿಗಳ ಯಥಾರ್ಥ ಚಿತ್ರಣದಿಂದ ಕಥೆಗಳು ಪಕ್ವವೆನಿಸುತ್ತವೆ. ಬಯಲು ಸೀಮೆಯ ಗ್ರಾಮ್ಯ ಭಾಷೆಯ ಬಳಕೆ ಕಥೆಗಳಿಗೆ ವಿಶೇಷ ಮೆರುಗು ನೀಡಿದೆ. ನೆನಪುಗಳಿಂದ ಹೆಕ್ಕಿದ ಹಳ್ಳಿಯ ಕಥೆಗಳನ್ನು ಮತ್ತು ಅನುಭವದಿಂದ ಹುಟ್ಟಿದ ಮಹಾನಗರದ ಕಥೆಗಳನ್ನು ಲೇಖಕಿ ಇಲ್ಲಿ ಹೇಳಿದ್ದಾರೆ. 

'ಜೋಳದ ಕಾಳು' ಕಥೆಯಲ್ಲಿ ರಾಜೇಸಾಬ ಮತ್ತು ಶ್ರೀಕಂಠಸ್ವಾಮಿಗಳ ಗಾಢ ಸ್ನೇಹ, ಜೀವ ಜೀವಗಳ ನಡುವಿನ  ಸಂಬಂಧದ ಆಳ ಮತ್ತು ವೈಶಾಲ್ಯತೆಯನ್ನು ಹೇಳುವುದರ ಜೊತೆ ಮಾಧುಗೌಡನ ಕಳ್ಳತನ ಬೆಳಕಿಗೆ ಬರದೇ, ನಿಜವಾದ ಅಪರಾಧಿ ನಿರ್ಭಯವಾಗಿ ಬದುಕುವ ದುರಂತ ವ್ಯಂಗ್ಯವನ್ನು ಚಿತ್ರಿಸಿದೆ. ಉತ್ತಮ ನಿರೂಪಣೆಯೊಂದಿಗೆ ಮೂಡಿ ಬಂದ 'ರಮಾಕಾಂತ್' ಕಥೆ, ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳನ್ನು ತುಂಬಿಸಿಕೊಂಡು ಭ್ರಮಾಧೀನನಾದ ಮನುಷ್ಯನ ಸುತ್ತ ಸುತ್ತುವ ಕಥೆ. ಇದು ಬದುಕಿನ ದಾರಿಯಲ್ಲಿ ಮನುಷ್ಯ ಗುರಿ ತಪ್ಪಿ ಅಲೆಯುವ, ಮೂಲ ಉದ್ದೇಶವನ್ನೇ ಮರೆತುಬಿಡುವ ವಿಪರ್ಯಾಸವನ್ನು ಚಿತ್ರಿಸುತ್ತದೆ. ಮತ್ತು ಮನುಷ್ಯ ವಾಸ್ತವಕ್ಕಿಂತ ಹೆಚ್ಚು ಭ್ರಮೆಯಲ್ಲೇ ಬದುಕುತ್ತಾನೆಂಬ ಸತ್ಯವನ್ನೂ ಹೇಳಲೆತ್ನಿಸಿದೆ. 'ಕಟ್ಟೆ' ಕಥೆ ಅಸ್ಪೃಶ್ಯತೆಯ ಕುರಿತ ಕಥೆಯಾಗಿದ್ದು, ಮಾನವೀಯ ಸಂವೇದನೆಗಳಿಗೆ ಜಾತಿಯ ಚೌಕಟ್ಟಿಲ್ಲ, ಅಸ್ಪೃಶ್ಯತೆ ಅನ್ವಯಿಸಲಾರದು ಎಂಬ ಉನ್ನತ ಮೌಲ್ಯವನ್ನು ಎತ್ತಿ ಹಿಡಿಯುವ ಕಥೆ. ಮೇಲು - ಕೀಳುಗಳನ್ನು ನಿರ್ಣಯಿಸುವ 'ಕಟ್ಟೆ' ಇಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಈ ಕಥೆಯಲ್ಲಿ ಬರುವ ಸಾಲು '.......ಏರೀನೀ ಅನ್ಕೋಬೇಕು, ಒಂದಿನ ಇಳದ ನಡೀಬೇಕು' ಅರ್ಥಗರ್ಭಿತವಾಗಿದೆ.

'ಭ್ರಮೆಯ ಬಸಿರಿನಲ್ಲಿ' ಮಾತು, ಮುನಿಸು, ಮೌನ ಆದರೆ ಇವೆಲ್ಲವನ್ನು ಮೀರಿದ ಪ್ರೇಮವೇ ಜೀವಾಳವಾಗಿರುವ ದಾಂಪತ್ಯದ ಕಥೆ. 'ಅಜ್ಜಯ್ಯ' ಕಥೆಯಲ್ಲಿ ಒಂದು ಹಸು ನಿರೂಪಕನಾಗಿರುವುದು ಕಥೆಯನ್ನು ವಿಶೇಷವೆನಿಸುವಂತೆ ಮಾಡುತ್ತದೆ. 'ದಕ್ಕುವ ಬೆಳಕು' ಕಥೆ ಸದಾಶಿವ ಎಂಬುವನ ಜೀವನದಲ್ಲಿ ಚಕ್ಕನೆ ಮ್ಯಾಜಿಕ್ ನಂತೆ ನಡೆಯುವ ತರ್ಕಕ್ಕೆ ನಿಲುಕದ ಸಂಗತಿಗಳನ್ನು ಯಾವುದೇ ಅನಗತ್ಯ ವಿಜೃಂಭಣೆ ಇಲ್ಲದೇ ನಿರೂಪಿಸುವ ಕಥೆ. ಫೇಸ್ಬುಕ್ ನಿಂದ ಆಗುವ ಕೆಲವು ಗೊಂದಲಗಳು, ಸಂಕೀರ್ಣತೆಗಳು ಕೊನೆಗೆ ದುರಂತಕ್ಕೆ ಕಾರಣವಾಗುವ ಕಥೆ 'ಅ -ನಿಕೇತ್'. ಕೌತುಕದ ಜೊತೆಗೇ ನವಿರಾಗಿ ಸಾಗುವ 'ಹೂಗಂಧ ಹನಿ ಹಸಿರು', ಬಹಳ ಹೊತ್ತು ಗುಂಗನ್ನು ಉಳಿಸಿ ಕಾಡುವ ಶಿವಮಾದಯ್ಯನ ಕಥೆ 'ಹಾದಿ' ಕೂಡ ಚೆನ್ನಾಗಿವೆ. ಹೀಗೆ ಹದಿನಾಲ್ಕು ಕಥೆಗಳ ಗುಚ್ಛವಿದು. 

ಈ ಕಥೆಗಳು ಬದುಕಿನ ವ್ಯಂಗ್ಯ, ವಿಡಂಬನೆ, ಮುಗ್ಧತೆ, ವಾಸ್ತವದ ವಿದ್ಯಮಾನಗಳ ಜೊತೆಗೆ ತೀವ್ರ ಸಂವೇದನೆ ಮತ್ತು ಮೌಲ್ಯಗಳನ್ನು ಸಂಕರಗೊಳಿಸುತ್ತ ನಿರೂಪಿಸುತ್ತವೆ. ವರ್ತಮಾನದ ಬೆಳಕಿನಲ್ಲಿ ಗತಕಾಲದ ನೆರಳನ್ನು ಹುಡುಕುತ್ತವೆ. 'ಇಲ್ಲಿ ದಾಟಿಸಿದ್ದು ದಾಟಲೆತ್ನಿಸಿದ್ದು ಭಾವವನ್ನಷ್ಟೇ, ಕಥೆಗಳಿಂದ ಮುಕ್ತವಾಗದೇ ಅವುಗಳನ್ನು ನಾನು ಎದೆಗಾನಿಸಿಕೊಂಡಿದ್ದೇನೆ' ಎನ್ನುವ ಅನನ್ಯಾ ತುಷಿರ ಇನ್ನಷ್ಟು ಬರೆಯಲಿ ಎಂದು ಆಶಿಸುತ್ತಾ ಶುಭ ಹಾರೈಸುತ್ತೇನೆ.

ಅನನ್ಯ ತುಷಿರಾ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಅರ್ಧ ನೆನಪು ಅರ್ಧ ಕನಸು ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಅಜಿತ್ ಹರೀಶಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

 

MORE FEATURES

ಲೇಖಕಿಯ ನೈಜ ಬದುಕಿನ ಬಾಲ್ಯದ ಅನಾವರಣವಿಲ್ಲಿದೆ

03-12-2024 ಬೆಂಗಳೂರು

"ಎಳವೆಯಲ್ಲಿಯೇ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ತಾಯಿ, ತಮ್ಮನ ಜೊತೆ ತಾಯಿಯ ತಾಯಿಯ ಅಂದರೆ ಅಜ್ಜಿಮನೆ-ಸಂ...

ಇಲ್ಲಿನ ಬಹುತೇಕ ಪುಟ್ಟ ಕಥೆಗಳು ಯಾವುದೋ ಸಂಗತಿಯೇನೋ ಎಂಬಷ್ಟು ಸಹಜವಾಗಿವೆ

03-12-2024 ಬೆಂಗಳೂರು

"ಲೇಖಕಿ ಅಶ್ವಿನಿ ಸುನಿಲ್ ಅವರು ವಾರದ ಹಿಂದೆ ತಮ್ಮ ಈ ಹೊಸ ಕೃತಿಯ ಬಗ್ಗೆ ಪುಸ್ತಕ ಅವಲೋಕನ ಬಳಗದಲ್ಲಿ ಪೋಸ್ಟ್ ಹಾಕಿ...

ಶರಣರು ಮೊದಲು ನಡೆದರು ನಂತರ ನುಡಿದರು

03-12-2024 ಬೆಂಗಳೂರು

“ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸ...