‘ಕಿಲಿಗ್’ ಈ ಕಾಲಮಾನದ ದೊಡ್ಡ ಸಂಖ್ಯೆಯ ಸಮೂಹವೊಂದರ ಕಥೆ...


"ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳು. ಕೆಲ ವರ್ಷಗಳ ಹಿಂದೆ ಪ್ರೀತಿ, ಪ್ರೇಮ, ದಾಂಪತ್ಯಗಳ ಬಗ್ಗೆ ಮಾತಾಡುತ್ತ ಸ್ನೇಹಿತನೊಬ್ಬ "ಪ್ರತಿಯೊಂದು ಪ್ರೇಮ ಸಂಬಂಧವೂ ಭಾವನೆ ಹಾಗೂ ಕಾಮನೆಗಳ ಹದವಾದ ಮಿಶ್ರಣವಾಗಿರಬೇಕು," ಎನ್ನುತ್ತಾರೆ ವಿನಾಯಕ ಅರಳಸುರಳಿ. ಅವರು ಜಯರಾಮಾಚಾರಿ ಅವರ ‘ಕಿಲಿಗ್’ ಕಾದಂಬರಿ ಕುರಿತು ಬರೆದಿರುವ ವಿಮರ್ಶೆ.

ಕಿಲಿಗ್ ಮನಸ್ಸುಗಳ ಕಥೆ. ಮನಸ್ಥಿತಿಗಳ ಕಥೆ. ಈ ಕಾಲಮಾನದ ದೊಡ್ಡ ಸಂಖ್ಯೆಯ ಸಮೂಹವೊಂದರ ಕಥೆ. ಹೊರಗಿನ ಪ್ರಪಂಚಕ್ಕೆ ಮುಕ್ಕಾಲು ಭಾಗಕ್ಕಿಂತ ಕಡಿಮೆ ತಾಕದಂತೆ, ಅಭಿಪ್ರಾಯ, ಅಸಹನೆ, ಅಭಿರುಚಿಗಳ ಹೊರಗೆಡವದಂತೆ ಬದುಕುವುದು ಅಸಾಧ್ಯವಾದ ಕಾಲಮಾನದಲ್ಲಿ ನಾವೀಗ ಇದ್ದೇವೆ. ಪ್ರತಿ ದಿನ, ಪ್ರತಿ ಕ್ಷಣ ನಮ್ಮನ್ನು ಯಾವುದೋ ಹೊಸ ಆಮಿಷಕ್ಕೆ ಕನೆಕ್ಟ್ ಮಾಡಲು ಹವಣಿಸುವ ಸೋಶಿಯಲ್ ಮೀಡಿಯಾಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಮನಸ್ಸಿನ ಒಳಪದರಗಳಲ್ಲಿ ಅಡಗಿರುವ ವಿಕಾರಗಳಿಗೆಲ್ಲ ಹೊರಬರುವ ಹೊಸ ಹೊಸ ದಾರಿಗಳು ಇಲ್ಲೀಗ ಲಭ್ಯವಿದೆ. ನಾವು ತೆರೆಯ ಮೇಲೆ ನೋಡುವ ನಾಯಕರು ಅಲ್ಲಿ ತಾವು ಆವಾಹಿಸಿಕೊಂಡ ಆದರ್ಶಗಳನ್ನೇ ತಮ್ತಮ್ಮ ವಯಕ್ತಿಕ ಬದುಕುಗಳಲ್ಲಿ ಮೀರುತ್ತ, ಛಿದ್ರವಾಗಿಸುತ್ತ ಬದುಕಿರುವಾಗ 'ಬೇಲಿ ದಾಟುವುದು' ನಮಗೆಲ್ಲ ಸಹಜವಾಗಿಹೋಗಿದೆ. ಎಲ್ಲವಕ್ಕೂ ಸಮರ್ಥನೆಗಳೂ, ನಿದರ್ಶನಗಳೂ ಕಾಲು ಕಾಲಿಗೆ ಸಿಕ್ಕುವ ಸಮಾಜದಲ್ಲಿ ಮನಸ್ಸು ಸರಿ-ತಪ್ಪುಗಳ ನಡುವೆ ಜೀಕಾಡುತ್ತದೆ. ಅಂಥದೇ ಸುಳಿಗೆ ಸಿಲುಕುವ ಈ ಹೊತ್ತಿನ ವರ್ಕಿಂಗ್ ದಾಂಪತ್ಯವೊಂದರ ನವಿರಾದ ಕಥೆ 'ಕಿಲಿಗ್'.

ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳು. ಕೆಲ ವರ್ಷಗಳ ಹಿಂದೆ ಪ್ರೀತಿ, ಪ್ರೇಮ, ದಾಂಪತ್ಯಗಳ ಬಗ್ಗೆ ಮಾತಾಡುತ್ತ ಸ್ನೇಹಿತನೊಬ್ಬ "ಪ್ರತಿಯೊಂದು ಪ್ರೇಮ ಸಂಬಂಧವೂ ಭಾವನೆ ಹಾಗೂ ಕಾಮನೆಗಳ ಹದವಾದ ಮಿಶ್ರಣವಾಗಿರಬೇಕು. ಆದರೆ ಕೆಲವರಲ್ಲಿ ಯಾವುದೋ ಒಂದು ಹೆಚ್ಚಿದ್ದು ಇನ್ನೊಂದು ಕಡಿಮೆಯಿರುವುದೇ ಈಗಿನ ಪ್ರೇಮ ಹಾಗೂ ದಾಂಪತ್ಯಗಳ ವೈಫಲ್ಯಕ್ಕೆ ಕಾರಣ" ಎಂದಿದ್ದ. ಈ ಎರಡಂಶಗಳ ಮೇಲಾಟಕ್ಕೊಳಗಾಗುವ ವ್ಯಕ್ತಿಯ ಪಾಡಿನ ಚಿತ್ರಣ ಕಿಲಿಗ್ ನಲ್ಲಿದೆ.

ಈ ಕಿರು ಕಾದಂಬರಿಯ ಹೆಚ್ಚುಗಾರಿಕೆಯೆಂದರೆ ಇಲ್ಲಿನ ಹದವಾದ ನಿರೂಪಣೆ ಹಾಗೂ ದಾಂಪತ್ಯ, ಪ್ರೇಮ, ಕಾಮಗಳ ಬದುಕನ್ನು ತೆಳುವಾಗಿ ತೆರೆದಿಡುವ ಇದರ ಭಾವನೆಗಳ ದನಿ. ಸರಳತೆಗೆ ಅಂಟಿಕೊಳ್ಳದೇ, ಸಂಕೀರ್ಣತೆಗೂ ಈಡಾಗದೇ ಅಲ್ಲಲ್ಲಿ ಚಂದದ ಸಾಲುಗಳ ಮೂಲಕ ಸಾಗುವ ಇಲ್ಲಿನ ಕಥೆ ಯುವ ಮನಸ್ಸುಗಳನ್ನೆಲ್ಲ ಒಳಗೊಳ್ಳುತ್ತ ಹರಿದಿದೆ. ಉದಾಹರಣೆಗೆ 'ಹಾಳು ನೆನಪುಗಳಿಗೂ ರೂಟ್ ಕ್ಯನಾಲ್ ಇರಬೇಕಿತ್ತು', 'ಹಳೆ ಹುಡುಗಿಯ ನೆನಪುಗಳಿಂದ, ಕಿತ್ತು ತಿನ್ನುವ ಟ್ಯಾಕ್ಸ್ ಬಲೆಯಿಂದ ಮಿಡಲ್ ಕ್ಲಾಸ್ ಹುಡುಗರು ಪಾರಾಗುವುದು ಹೇಗೆ ಸಾಧ್ಯ?', 'ದಾಂಪತ್ಯದ ಸಂಕೀರ್ಣತೆಗೆ ಅದರದ್ದೇ ಆದ ಸದ್ದುಗಳಿರುತ್ತವೆ', 'ಉದ್ದುದ್ದದ ಸಾರಿ ಮೆಸೇಜುಗಳನ್ನು ಟೈಪಿಸುವ ವಯಸ್ಸನ್ನು ದಾಟಿಯಾಗಿದೆ' ಮುಂತಾದ ಸಾಲುಗಳು ಅಲ್ಲಲ್ಲಿ ಎದುರಾಗಿ ವಾವ್ ಎನಿಸುತ್ತವೆ.

ಕಾಮನೆಗಳನ್ನೂ ಆದರ್ಶಗಳನ್ನೂ ಸಮಾನವಾಗಿ ಉತ್ಪಾದಿಸುವ ಮನಸ್ಸೊಂದು ಎರಡರದ್ದೂ ಹಿಡಿತಕ್ಕೀಡಾಗುತ್ತ, ಎರಡರಿಂದಲೂ ಪಾರಾಗುತ್ತ ಕೊನೆಗೆ ಹೋಗಿ ತಲುಪುವ ಬಿಂದುವೇ ಈ ಕಥೆಯ ನಿಲ್ದಾಣ. ಅದರಾಚೆಗೂ ಚಾಚಿಕೊಂಡ ಬದುಕಿಗೆ ಈ ಅಂತ್ಯವೇ ಒಂದು ಆರಂಭವೂ ಹೌದು. ಸೋಶಿಯಲ್ ಮೀಡಿಯಾದ ಮೂಲಕ ವಯಕ್ತಿಕ ಬದುಕಿನೊಳಗೆ, ತೀರಾ ಬೆಡ್ರೂಮಿನ ತನಕವೂ ನುಸುಳಿ ಬಂದಿರುವ ಕಾಮನೆಗಳ ಕರೆಯನ್ನು ನೀಗಿಕೊಳ್ಳುವ ಯುದ್ಧದಲ್ಲಿ ಮನುಷ್ಯನಿಗಿರುವ ಏಕ ಮಾತ್ರ ಜೊತೆಗಾರ ಅವನ ಆತ್ಮಸಾಕ್ಷಿಯೊಂದೇ ಎಂಬ ಚಂದದ ಸಂದೇಶವನ್ನು ಹೇಳದೆಯೂ ಧ್ವನಿಸುವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ. ಕಥೆಯ ಹರಿವಿನಲ್ಲಿ ಸಹಜವಾಗಿ ತೇಲುವ ಇನ್ನಿತರ ಕೆಲ ಅಂಶಗಳನ್ನೂ ಇದು ಒಳಗೊಂಡಿದೆಯಾದರೂ ತನ್ನ ವ್ಯಾಪ್ತಿಯಾಚೆಗಿನ ಯಾವ ಅನಾವಶ್ಯಕ ದಡಗಳಿಗೂ ಹತ್ತಿಲ್ಲ. ಇಬ್ಬರೂ ದುಡಿಯುವ ಈ ಕಾಲದ ದಾಂಪತ್ಯದ ಒದ್ದಾಟಗಳು, ವೈರುಧ್ಯ ಅಭಿಪ್ರಾಯಗಳ ತಾಕಲಾಟಗಳು, ಗಮನ ಕೇಂದ್ರೀಕರಿಸಲಾಗದ ಕಾರಣಕ್ಕೆ ಕಳೆದುಕೊಳ್ಳುವ ಸಂಬಂಧಗಳು.. ಈ ಎಲ್ಲವನ್ನೂ ನಡುನಡುವೆ ನಿಲ್ದಾಣದಂತೆ ಹಾದು ಕಥೆ ಮುಂದೆ ಸಾಗುತ್ತದೆ.

 

 

MORE FEATURES

ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮ ಒಂದು ಸಮಷ್ಟಿ ಕಲೆ

25-11-2024 ಬೆಂಗಳೂರು

“ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ...

ಅನಿಲ್ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು

25-11-2024 ಬೆಂಗಳೂರು

"‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ...

ಧರ್ಮ ಇರೋದು ನಾವು ಸುಖವಾಗಿ ಬಾಳೋದಕ್ಕಂತಲೇ ಹೊರತು…

24-11-2024 ಬೆಂಗಳೂರು

“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...