“ಐಷಾರಾಮಿ ಸಾಧನಗಳೊಟ್ಟಿಗೆ ತುಸು ಅತೃಪ್ತಿಯೊಂದಿಗೇ ಬದುಕುತ್ತಿರುವ ಎರಡೂ ಬಗೆಯ ಬದುಕು ಕಂಡ ನನ್ನಂತಹವರಿಗೆ ನನ್ನ ಹಿರಿಯ ತಲೆಮಾರಿನ ಬದುಕು ಕುತೂಹಲ ಮತ್ತು ವಿಸ್ಮಯ. ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳನ್ನು ಬರೆಯುವಾಗಲೂ ನನ್ನನ್ನು ಮತ್ತೆ ಮತ್ತೆ ಸೆಳೆಯುತ್ತಿದ್ದುದು ನನ್ನ ಹಿರಿಯ ತಲೆಮಾರಿನ ವಸ್ತು ವಿಷಯಗಳೇ,” ಎನ್ನುತ್ತಾರೆ ದೀಪಾ ಜೋಶಿ ಅವರು ತಮ್ಮ "ತತ್ರಾಣಿ" ಕೃತಿಗೆ ಬರೆದ ಲೇಖಕರ ಮಾತು.
ಪ್ರಿಯ ಓದುಗರೇ,
ಬದುಕು ಕೇವಲ ಸುಖವಲ್ಲ, ದುಃಖವೂ ಅಲ್ಲ, ಅದು ಯಾವ ಮಾನದಂಡಕ್ಕೂ ಸಿಕ್ಕದ ಬಹುದೊಡ್ಡ ಬೆರಗು. ಬದುಕಿನ ಮೊದಲ ಹಂತವನ್ನು ಐಹಿಕ ಅನುಕೂಲಗಳ ಹಂಗಿಲ್ಲದೆಯೂ ಸುಖವಾಗಿ ಕಳೆದು, ಎರಡನೆಯ ಹಂತದಲ್ಲಿ ಅನೇಕ ಸವಲತ್ತು, ಐಷಾರಾಮಿ ಸಾಧನಗಳೊಟ್ಟಿಗೆ ತುಸು ಅತೃಪ್ತಿಯೊಂದಿಗೇ ಬದುಕುತ್ತಿರುವ ಎರಡೂ ಬಗೆಯ ಬದುಕು ಕಂಡ ನನ್ನಂತಹವರಿಗೆ ನನ್ನ ಹಿರಿಯ ತಲೆಮಾರಿನ ಬದುಕು ಕುತೂಹಲ ಮತ್ತು ವಿಸ್ಮಯ. ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳನ್ನು ಬರೆಯುವಾಗಲೂ ನನ್ನನ್ನು ಮತ್ತೆ ಮತ್ತೆ ಸೆಳೆಯುತ್ತಿದ್ದುದು ನನ್ನ ಹಿರಿಯ ತಲೆಮಾರಿನ ವಸ್ತು ವಿಷಯಗಳೇ.
ಹೀಗೇ ಒಮ್ಮೆ ಬರೆದ ಅಂತಹ ಲಲಿತ ಪ್ರಬಂಧವನ್ನು ಓದಿದ ಗೆಳತಿ ಮಾಲಿನಿ ಗುರುಪ್ರಸನ್ನ ಇದನ್ನು ಕಾದಂಬರಿಯಾಗಿಸುವಂತೆ ಸೂಚಿಸಿದಳು. ಕಾದಂಬರಿ ಪ್ರಕಾರದ ವಿಸ್ತಾರ, ಅಷ್ಟು ದೊಡ್ಡ ಹರಹು ನನ್ನ ಬರಹಕ್ಕೆ ಒಗ್ಗುವುದೇ ಎಂಬ ಅನುಮಾನ ನನಗೆ. ಅದೇ ಸಮಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀಯುತ ವೀರನಾರಾಯಣ ಪಾಂಡುರಂಗಿಯವರು ಕಳೆದ ತಲೆಮಾರುಗಳ ಕುಟುಂಬ ವ್ಯವಸ್ಥೆ ಮತ್ತು ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನೀವು ಕಾದಂಬರಿಯೊಂದನ್ನು ಬರೆಯಬೇಕೆಂಬ ಸಲಹೆ ನೀಡಿದಾಗ ಕಾದಂಬರಿ ಬರೆಯುವ ಬಯಕೆ ಚಿಗುರಿತು.
ವಿಜಯ ಕರ್ನಾಟಕ ವಿಶೇಷಾಂಕದಲ್ಲಿ ಪ್ರಕಟವಾದ ಬದರಿಯಾತ್ರೆ ಎಂಬ ಲಲಿತ ಪ್ರಬಂಧವನ್ನು ಅನೇಕರು ಮೆಚ್ಚಿಕೊಂಡಿದ್ದರು. ಬಾಲ್ಯದಿಂದ ನನ್ನ ಅಜ್ಜನ ಸಾಹಸಗಾಥೆಗಳನ್ನು ಕೇಳುತ್ತಾ ಬೆಳೆದಿದ್ದ ನನಗೆ ಅದರ ಹಿಂದುಮುಂದು, ಅವರ ಬದುಕಿನ ಅನೇಕ ಘಟ್ಟಗಳ ಬಗ್ಗೆ ಹೇಳುವ ತವಕ ಮೂಡಿತ್ತು. ನನ್ನ ತಂದೆ ಶ್ರೀಯುತ ಮಧ್ವಾಚಾರ್ಯ ಪಾಂಡುರಂಗಿಯವರ ಬಳಿ ಈ ಬಗ್ಗೆ ಮಾತನಾಡಿದಾಗ ಅವರ ಉತ್ಸಾಹದ ಪ್ರತಿಕ್ರಿಯೆಯೇ ನನ್ನನ್ನು ಈ ಕಾದಂಬರಿಯನ್ನು ಬರೆಯಲು ಹಚ್ಚಿತೆಂದರೆ ತಪ್ಪಾಗಲಾರದು. ಎಂಬತ್ತರ ಹರಯದಲ್ಲೂ ಅಪ್ಪನ ನೆನಪಿನ ಶಕ್ತಿ ಆಗಾಧ. ಸುಮಾರು ಆರುವತ್ತು, ಎಪ್ಪತ್ತು ವರ್ಷಗಳ ಹಿಂದಿನ ಘಟನೆಗಳನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ಅವರು ಹೇಳುತ್ತಾ ಹೋದಂತೆ ಅದರೊಡನೆ ಕಲ್ಪನೆಯನ್ನು ಬೆರೆಸುತ್ತಾ, ಕಥೆ ಕಟ್ಟುತ್ತಾ ಹೋದೆ.
ಈ ಕಥೆಯನ್ನು ಬದುಕಿದ ನನ್ನಜ್ಜ, ಅಜ್ಜಿಯರನ್ನು ಪ್ರೀತಿಯಿಂದ ಸ್ಮರಿಸುತ್ತಾ, ನನಗೆ ಇಂಚಿಂಚೂ ಬಿಡದಂತೆ ಕಥೆಯನ್ನು ಹೇಳಿ ಬರೆಸುತ್ತಾ, ಯಾವುದೂ ಅತಿಯಾಗ ದಂತೆ ಮಧ್ಯೆ ಮಧ್ಯೆ ಎಚ್ಚರಿಸುತ್ತಾ ಇಡಿಯ ಕಾದಂಬರಿಯನ್ನು ಕಟ್ಟುವುದಕ್ಕೆ ಕಾರಣ ಕರ್ತರಾದ ನನ್ನ ತಂದೆಯವರಿಗೆ ಅತ್ಯಂತ ಪ್ರೀತಿಯಿಂದ ಈ ಕಾದಂಬರಿಯನ್ನು ಅರ್ಪಿಸುತ್ತೇನೆ.
ಬದುಕಿನ ಅನೇಕ ಮಗ್ಗುಲುಗಳನ್ನು ನೋಡುವ ದೃಷ್ಟಿ ಕಲಿಸಿಕೊಟ್ಟ, ಈ ಕಾದಂಬರಿ ಓದಿ ಸ್ಪಷ್ಟ ಅಭಿಪ್ರಾಯ ಹೇಳುತ್ತಿದ್ದ ನನ್ನ ತಾಯಿ ಸುನಂದಾಬಾಯಿಯವರಿಗೆ ನಮನ.
ಕಾದಂಬರಿ ಬರೆಯುವಾಗ ಪ್ರತಿ ಅಧ್ಯಾಯವನ್ನೂ ಜೊತೆಗೇ ಓದುತ್ತಾ, ಸಂಭ್ರಮಿಸುತ್ತಾ, ತಿದ್ದುತ್ತಾ, ಮೊದಲನೇ ದಿನದಿಂದ ಜೊತೆಗಿದ್ದು ಕಾದಂಬರಿಯ ಬಗ್ಗೆ ಭರವಸೆಯ ಮಾತುಗಳನ್ನು ಆಡುತ್ತಾ, ಕೇಳಿದಾಕ್ಷಣ ಪ್ರೀತಿಯಿಂದ ಬೆನ್ನುಡಿಯನ್ನು ಬರೆದುಕೊಟ್ಟ ಹಿರಿಯ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿಯವರಿಗೆ ನಾನು ಚಿರಋಣಿ. ನಲೆಯ ವಂದನೆಗಳು ಅವರಿಗೆ. 0 0 0ಬ ಏರಿದ ರೂ. ಗಿ
ಕಾದಂಬರಿಯ ಪ್ರತಿಯನ್ನು ಓದಿ ಸಾಕಷ್ಟು ಸಲಹೆಗಳನ್ನು ಕೊಟ್ಟು ಸಹಕರಿಸಿದವರು ಹಿರಿಯ ಸ್ನೇಹಿತರೂ, ಆಧ್ಯಾತ್ಮ ಚಿಂತಕರೂ ಆದ ಶ್ರೀಯುತ ರಾಘವೇಂದ್ರ ಜೋಶಿ ಯವರು. ಪ್ರತಿಯೊಂದು ಪುಟವನ್ನೂ ತಿದ್ದಿ, ಸೂಕ್ತ ಸಲಹೆಗಳನ್ನೂ ಕೊಟ್ಟರು. ಅವರನ್ನೂ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಹಿರಿಯ ಕವಿ, ವಿಮರ್ಶಕರಾದ ಶ್ರೀಯುತ ಆನಂದ ಝುಂಜರವಾಡರಿಗೆ ಕಾದಂಬರಿಯ ಪ್ರತಿ ಕಳಿಸಿದಾಗ ಒಂದು ಸಾಲೂ ಬಿಡದಂತೆ ಇಡೀ ಕಾದಂಬರಿಯ ಅವಲೋಕನ ಮಾಡಿ ಬೆನ್ನು ತಟ್ಟಿದಾಗ ಸಾರ್ಥಕಭಾವ. ತಪ್ಪುಗಳನ್ನು ತಿದ್ದುವುದರ ಜೊತೆಗೆ ಕಾದಂಬರಿಗೆ ಹೆಸರನ್ನೂ ಸೂಚಿಸಿದ. ಅವರಿಗೆ ಧನ್ಯವಾದ ಮತ್ತು ಕೃತಜ್ಞತೆ.
ನನ್ನ ತಲೆಯಲ್ಲಿ ಈ ಕಾದಂಬರಿಯ ಹುಟ್ಟಿನ ಬೀಜ ಬಿತ್ತುವುದರೊಂದಿಗೆ, ಪ್ರಕಟಣೆಯ ಹಾದಿಯವರೆಗೆ ಪ್ರತಿ ಹೆಜ್ಜೆಯಲ್ಲೂ ಜೊತೆಯಾದವಳು ಗೆಳತಿ ಮಾಲಿನಿ ಗುರುಪ್ರಸನ್ನ. ಇವಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ನನ್ನ ಪ್ರೀತಿಯ ಧನ್ಯವಾದಗಳು ಅವಳಿಗೆ.
ಅತ್ಯಂತ ಆಕರ್ಷಕವಾಗಿ ಮುಖಪುಟವನ್ನು ವಿನ್ಯಾಸ ಮಾಡಿಕೊಟ್ಟ ಶ್ರೀ ಕಿರಣ್ ಮಾಡಾಳುರವರಿಗೆ ಹೃತ್ತೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
ಪೂರ್ತಿ ಕಾದಂಬರಿಯನ್ನು ಮೊಬೈಲಿನಲ್ಲಿ ಟೈಪಿಸಿದ ನನ್ನನ್ನು ಬೈಯುತ್ತಾ, ಎಲ್ಲವನ್ನೂ ಲ್ಯಾಪ್ ಟ್ಯಾಪ್‌ಗೆ ವರ್ಗಾಂತರಿಸಿ, ಭಾಷಾ ತಪ್ಪುಗಳನ್ನು ತಿದ್ದಿ, ಅವುಗಳನ್ನು ಜೋಡಿಸಿ, ಕಾದಂಬರಿಯ ರೂಪವನ್ನು ಕೊಡುವಲ್ಲಿ ಪರಿಶ್ರಮಿಸಿದ ನನ್ನ ಪತಿ ಶ್ರೀಯುತ ಗೋವಿಂದ ಜೋಶಿ ಮತ್ತು ಮಕ್ಕಳಾದ ಆದಿತ್ಯ, ಅಕ್ಷತಾರಿಗೆ ಪ್ರೀತಿಯ ಧನ್ಯವಾದಗಳು.
ನನ್ನ ಈ ಚೊಚ್ಚಲ ಕಾದಂಬರಿಯನ್ನು ಓದುಗರಿಗೆ ಪರಿಚಯಿಸುವ ಧೈರ್ಯ ಮಾಡಿದ 'ಅಂಕಿತ ಪುಸ್ತಕ'ದ ಶ್ರೀಯುತ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಕಂಬತ್ತಳ್ಳಿ ದಂಪತಿಗಳಿಗೆ ಹೃತೂರ್ವಕ ಧನ್ಯವಾದಗಳು.
ಈ ಕಾದಂಬರಿಯ ಅನೇಕ ಪಾತ್ರಗಳು ನನ್ನನ್ನು ಬಹಳ ಕಾಡಿವೆ, ಕೆಲವು ತಮ್ಮ ಬಗ್ಗೆ ಇನ್ನೂ ವಿವರವಾಗಿ ಬರೆಯುವಂತೆ ಒತ್ತಾಯಿಸಿವೆ. ಕೆಲವು ತಮ್ಮನ್ನು ಅರ್ಥಮಾಡಿ ಕೊಂಡಿದ್ದೀಯ ಎಂದು ನಕ್ಕಿವೆ, ಕೆಲವು ತಮ್ಮ ಕಥೆ ಹೇಳಲು ಬಿಗುಮಾನ ತೋರಿಸಿ, ನಾನು ಕಲ್ಪನೆಯನ್ನು ಬೆರೆಸಿ ಚಿತ್ರಿಸಿದಾಗ ಅರೆ, ನಿನಗೆ ಹೇಗೆ ತಿಳಿಯಿತು ಎಂದು ಬಿಕ್ಕಿವೆ. ಈ ಎಲ್ಲ ಪಾತ್ರಗಳೂ ನನ್ನ ಬದುಕಿನ ದೃಷ್ಟಿಕೋನವನ್ನು ಬಹಳ ಮಟ್ಟಿಗೆ ಬದಲಿಸಿವೆ ಮತ್ತೂ ಕೊಂಚ ಮಾಗಿಸಿವೆ.. ಎಲ್ಲ ಮುಗಿದ ಹೊತ್ತಿನಲ್ಲಿ ಓದಿದ ನಿಮ್ಮ ಅಭಿಪ್ರಾಯ ಈಗ ಅತೀ ಮುಖ್ಯ ನನಗೆ. ಹೇಳುತ್ತೀರಲ್ಲ?
- ದೀಪಾ ಜೋಶಿ
“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...
“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...
“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...
©2025 Book Brahma Private Limited.