ವಸುಧೇಂದ್ರರ ಸುಲಲಿತ ಬರಹದ ಶೈಲಿಯಿಂದ ಇಲ್ಲಿನ ಎಲ್ಲಾ ಕಥೆಗಳು ಇಷ್ಟವಾಗುತ್ತವೆ. ಜೀವನಾನುಭವವೇ ಇಲ್ಲಿನ ಸಣ್ಣಕಥೆಗಳ ಜೀವಾಳ ಎನ್ನುತ್ತಾರೆ ಬರಹಗಾರ್ತಿ ಶೀಲಾ ಪೈ. ಲೇಖಕ ವಸುಧೇಂದ್ರ ಅವರ ಹಂಪಿ ಎಕ್ಸ್ ಪ್ರೆಸ್ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..
“ಹಂಪಿ ಎಕ್ಸ್ ಪ್ರೆಸ್” ವಸುಧೇಂದ್ರರ ಕಥಾ ಸಂಕಲನ. ಈ ಪುಸ್ತಕದಲ್ಲಿ ಒಟ್ಟು ಎಂಟು ಕಥೆಗಳಿವೆ. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಲೇಖಕರು ಬಳ್ಳಾರಿ ಮತ್ತು ಬೆಂಗಳೂರು ನಗರದ ಸುತ್ತ ಈ ಕಥೆಗಳನ್ನು ಹೆಣೆದಿದ್ದಾರೆ.
ಮೊದಲ ಓದಿಗೆ ಈ ಪುಸ್ತಕದಲ್ಲಿ ಎದ್ದು ಕಾಣುವ ಕಥೆ “ಕೆಂಪು ಗಿಣಿ”. ಹೊಲವನ್ನೇ ಕಾಣದ ಚಿಕ್ಕ ಹುಡುಗ ಬರೆಯುವ ನಮ್ಮ ಹೊಲ ಎನ್ನುವ ಪ್ರಬಂಧ ಹಾಸ್ಯದ ಹೊನಲನ್ನೇ ಹರಿಸುತ್ತದೆ ಮುಂದೊಂದು ದಿನ ತನ್ನ ಅಕ್ಕ ಮತ್ತು ತಂದೆಯೊಡನೆ ಹೊಲವನ್ನು ಮೊದಲ ಬಾರಿಗೆ ನೋಡಲು ಹೋಗುತ್ತಾನೆ. ಹೊಲದ ತುಂಬಾ ಹಸಿರು ಗಿಣಿಗಳನ್ನು ನೋಡಿದ ಖುಷಿ ಮಕ್ಕಳದ್ದು. ಹೊಲದಲ್ಲಿ ಗೆಯ್ಯುವ ಈರಪ್ಪ ಮಾತ್ರ ಗಿಣಿಗಳ ಹಸಿರು ಬಣ್ಣದ ಕಾರಣದಿಂದ ತನಗೆ ಅವುಗಳ ಉಪಟಳವನ್ನು ತಡೆಯಲಾಗದು ಎಂದು ದೂರಿದಾಗ ಹುಡುಗ ಗಿಣಿಗಳಿಗೆ ಕೆಂಪು ಬಣ್ಣ ಹಚ್ಚುವ ಮಾತನಾಡುತ್ತಾನೆ. ಹುಡುಗನ ಕಲ್ಪನೆ ಅಕ್ಕನಿಗೆ ಇಷ್ಟವಾಗುತ್ತದೆ. ಗಿಡಗಳ ತುಂಬ ಕೆಂಪು ಗಿಣಿಗಳು ದಾಸವಾಳದ ಹೂ ಸುರಿದಂತೆ ಕಾಣುವುದೇನೋ ಎಂದು ಅವಳು ಅಂದ ಮಾತು ಹುಡುಗನಿಗೆ ಮತ್ತೆ ನೆನಪಾಗುವುದು ಇಪ್ಪತ್ತು ವರ್ಷಗಳ ನಂತರ ಮತ್ತೆ ಅದೇ ಹೊಲಕ್ಕೆ ಅವನು ಬಂದಾಗ . ಮೈನ್ಸ್ ಕೆಲಸದ ಧೂಳಿನಿಂದ ಆವೃತವಾದ ಊರು, ಮಣ್ಣನ್ನು ಅಗೆಯುವ ದೈತ್ಯಾಕಾರದ ಮೆಶೀನುಗಳು, ಮೈ ತುಂಬಾ ಧೂಳು ಮುಚ್ಚಿಕೊಂಡ ಮನುಷ್ಯರು, ಗಿಣಿಗಳು ಕೂಡ. ಮೈಯನ್ನು ಸದಾ ಚೊಕ್ಕವಾಗಿಟ್ಟುಕೊಳ್ಳುವಂತಹ ಗಿಣಿಗಳ ಮೈಯ ಕೆಂಪು ಕಂಡು ಹುಡುಗನಿಗೆ ಆಘಾತವಾಗುತ್ತದೆ. ಚಿಕ್ಕಂದಿನಲ್ಲಿ ಕೇಳಿದ್ದ ನಿಧಿಯನ್ನು ಕಾಯುವ ಏಳು ಹೆಡೆಯ ಸರ್ಪ ಈ ಮಣ್ಣನ್ನು ಅಗೆಯುವ ದೈತ್ಯಾಕಾರದ ಮಶೀನೇ ಎಂದೆನಿಸಿ ವಿಹ್ವಲನಾಗುತ್ತಾನೆ. ಬಾಲ್ಯದ ನೆನಪುಗಳ ಒಂದು ಸುಂದರ ಭಾಗವಾಗಿದ್ದ ಹಸಿರು ಹೊಲ, ಊರು ನಾಶವಾಗುವುದರ ಸಂಕೇತವಾಗಿ ಕಾಣುವ ಧೂಳಿನಿಂದಾವೃತವಾದ ಗಿಣಿಗಳ ಬಗ್ಗೆ ಅಕ್ಕನಿಗೆ ಸಂದೇಶ ಕಳುಹಿಸುತ್ತಾನೆ .
“ಅಕ್ಕಾ ,ಕೆಂಪು ಗಿಣಿಗಳನ್ನುಈವತ್ತು ನೋಡಿದೆ. ಗಿಡದಲ್ಲಿ ಅವು ಕುಳಿತರೆ ದಾಸವಾಳದ ಹೂ ಸುರಿದಂತೆ ಕಾಣುವುದಿಲ್ಲಕ್ಕ ಚರ್ಮ ಸುಲಿದು ಅಂಗಡಿಯಲ್ಲಿ ನೇತುಹಾಕಿದ ಮಾಂಸದ ತುಂಡುಗಳಂತೆ ಕಾಣುತ್ತವೆ”
“ಕ್ಷಮೆಯಿಲ್ಲದೂರಿನಲಿ “ ಬೆಂಗಳೂರು ನಗರದ ಮೇಲ್ವರ್ಗದ ಅಪಾರ್ಟ್ಮೆಂಟಿನಲ್ಲಿ ನಡೆಯುವ ವಿದ್ಯಮಾನಗಳನ್ನು ಹೇಳುವ ಕಥೆ. ಮೊದಲು ನನ್ನನ್ನು ಅಷ್ಟಾಗಿ ತಟ್ಟದ, ಆಮೇಲೆ ಅದೇ ಕಾರಣಕ್ಕಾಗಿ ನನ್ನ ಒಳಗನ್ನು ಅಸ್ವಸ್ಥಗೊಳಿಸಿದ ಕಥೆ. ಏಕೆಂದರೆ ಇಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ನಾವು ದಿನನಿತ್ಯ ಈ ಬೆಂಗಳೂರು ಮಹಾನಗರಿಯಲ್ಲಿ ನೋಡುವಂತಹದ್ದು, ಕೇಳುವಂತಹದ್ದು. ದಿನಪತ್ರಿಕೆಯಲ್ಲಿ ನಿತ್ಯವೂ ಬರುವ ಅಪಘಾತದ ವರದಿಗಳನ್ನು ಹೇಗೆ ನಾವು ನೋಡಿಯೂ ನೋಡದಂತಿರುತ್ತೇವೆಯೋ ಹಾಗೆಯೇ ನಾನು ಇದನ್ನು ಓದಿಯೂ ಗಮನಿಸದೆ ಮುಂದಿನ ಕಥೆಗೆ ಹೋಗಿಬಿಟ್ಟಿದ್ದೆ. ಆಧುನಿಕ, ಸುಶಿಕ್ಷಿತ ಎನ್ನಿಸಿಕೊಳ್ಳುವ ಸುಜಾ ಮತ್ತು ರೇಖಾ ಎನ್ನುವ ಮಹಿಳೆಯರಿಬ್ಬರು ಕ್ಷುಲ್ಲಕ ಕಾರಣಗಳಿಗಾಗಿ ರೆಸಿಡೆಂಟ್ಸ್ ಯಾಹೂ ಗ್ರೂಪಿನಲ್ಲಿ ವಿವೇಚನೆಯಿಲ್ಲದೆ ವೈಯಕ್ತಿಕ ಆರೋಪ ಪ್ರತ್ಯಾರೋಪಗಳನ್ನು ಹೊರಿಸುತ್ತಾರೆ . ಇವರ ಮೆಸೇಜು ಗಳಿಗೆ ಪ್ರತಿಕ್ರಿಯೆ ನೀಡುವ ಉಳಿದ ಸದಸ್ಯರು, ಇಬ್ಬರಿಗೂ ಫೋನ್ ಮಾಡಿ ಪರಸ್ಪರರ ಮೆಸೇಜುಗಳನ್ನು ನೋಡಲು ನೆನಪಿಸುವ ಸ್ನೇಹಿತೆ (?) ಆಕೃತಿ ನಮ್ಮ ಸುತ್ತು ಮುತ್ತ ಕಾಣುವ ಪಾತ್ರಗಳು . ಮನಸ್ಸಿಗೆ ಅನಿಸಿದ ತಕ್ಷಣ ನಮ್ಮ ಭಾವನೆಗಳನ್ನು ಪೂರ್ವಾಪರ ಯೋಚನೆಯಿಲ್ಲದೆ ಬಹಿರಂಗವಾಗಿ ಹೊರಹಾಕಿದರೆ ಇನ್ನೊಬ್ಬರ ಜೀವನದ ಮೇಲೆ ಅನೈಚ್ಛಿಕ ಪರಿಣಾಮಗಳಾಗಬಹುದು ಎನ್ನುವುದನ್ನು ಸೂಚಿಸುವ ಕಥೆ. ಮನುಷ್ಯ ಅಂತರ್ಜಾಲದ ಜಾಲದಲ್ಲಿ ಸಿಕ್ಕಿ ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎನ್ನುವ ಪ್ರಶ್ನೆ ಓದುಗರ ಮುಂದೆ ಬರುತ್ತದೆ. ಕಥೆಯ ಕೊನೆಯಲ್ಲಿ ಸುಜಾ ತನ್ನ ಗಂಡನ ಕೊಲೆಯಾಗಿದೆ ಎಂದು ಆಕೃತಿಗೆ ಫೋನ್ ಮಾಡಿ ಸಹಾಯ ಕೇಳಿದಾಗಲೂ ಅವಳು ಹೊರಡುವ ಮುನ್ನ ಯಾಹೂ ಗ್ರೂಪಿಗೆ ಲಾಗಿನ್ ಮಾಡಿ ನಡೆದ ಘಟನೆಯ ಬಗ್ಗೆ ಬರೆದೇ ಹೊರಡುವುದು ಮಾತ್ರ ಅಸೂಕ್ಷ್ಮತೆಯ ಪರಾಕಾಷ್ಠತೆಯಾಗಿ ಕಾಣಿಸುತ್ತದೆ.
“ಹೊಸ ಹರೆಯ” ಸಮಕಾಲಿನ ಸಮಸ್ಯೆಯೊಂದರ ಸುತ್ತ ಹೆಣೆದ ಕಥೆ. ಹೆತ್ತವರು , ತಮ್ಮ ಮತ್ತು ಬೆಳೆದ ಮಕ್ಕಳ ನಡುವೆ ಮೂಡುವ ಕಂದಕವನ್ನು ದಾಟಲಾಗದ ಅಸಹಾಯಕತೆ ಇಲ್ಲಿ ಕಾಣಿಸುತ್ತದೆ. ತನ್ನ ರೂಪವತಿ ಮಗಳು ಮಿಸ್ ಇಂಡಿಯಾ ಆಗಬೇಕೆಂದು ಆಶಿಸುವ ಮಿಸೆಸ್ ಚಟರ್ಜಿ ತಾನು ಪ್ರಗತಿಶೀಲ ಎಂದು ತಿಳಿದುಕೊಂಡು ಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದರೆ ಆವಿವಾಹಿತ ಮಗಳು ತಾನು ಬಸುರಿ , ಮಗುವನ್ನು ಒಂಟಿಯಾಗಿ ಬೆಳೆಸುತ್ತೇನೆ ಎನ್ನುವಾಗ ಮಾತ್ರ ಅದನ್ನು ಒಪ್ಪಿಕೊಳ್ಳಲಾರದೆ ಮಾನಸಿಕವಾಗಿ ಕುಸಿದುಬಿಡುತ್ತಾರೆ. ಗಾಯತ್ರಿ ಇವರ ಸ್ನೇಹಿತೆ . ತನ್ನ ಮಗ ಅಭಿ , ಇಂಜಿನಿಯರಿಂಗು ಅರ್ಧಕ್ಕೇ ಬಿಟ್ಟು ಕಾಲ್ ಸೆಂಟರ್ ನೌಕರಿ ಮಾಡಿದಾಗಲೂ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾಳೆ , ಆದರೆ ಅವನು ತನ್ನನ್ನು ಪ್ರೀತಿಸುವ ಹುಡುಗಿಯನ್ನು ಗೆಲ್ಲಲು, ಸೆಕ್ಸ್ ಕನ್ಸಲ್ಟೆಂಟ್ ಒಬ್ಬಳ ಸಹಾಯ ಪಡೆದುಕೊಳ್ಳುತ್ತಿದ್ದೇನೆಂದಾಗ ಮಾತ್ರ ಮಗ ಅಪರಿಚಿತನಂತೆ ಭಾಸವಾಗುತ್ತಾನೆ . ಈ ಕಥೆಯಲ್ಲಿ ಒಂದೆಡೆ ಯುವ ಜನಾಂಗದ ವ್ಯಕ್ತಿ ಸ್ವಾತಂತ್ರ್ಯದ ಹಪಾಹಪಿ , ಇನ್ನೊಂದೆಡೆ ತಮಗಿಂತ ಹತ್ತು ಹೆಜ್ಜೆ ಮುಂದಿರುವ ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ಹೆಣಗಾಟದಲ್ಲಿ ಹತಾಶರಾಗುವ ಹೆತ್ತವರ ಚಿತ್ರಣವಿದೆ .
ಬಳ್ಳಾರಿಯ ಮೈನ್ಸ್ ಧೂಳು, ನೀರಿನ ಸಮಸ್ಯೆ, ಜನರ ಬಡತನ, ಪ್ರಾಮಾಣಿಕತೆ ಇವೆಲ್ಲಾ ಇಲ್ಲಿನ ಕೆಂಧೂಳಿ ,ಪೆದ್ದಿ ಪದ್ಮಾವತಿ,ಎರಡು ರೂಪಾಯಿ ಕಥೆಗಳಲ್ಲಿ ಕಾಣಸಿಗುತ್ತದೆ. ಈ ಕಥಾಸಂಕಲನದ ಮೊದಲ ಕಥೆ ಸೀಳುಲೋಟ ಬಹಳ ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಅಣ್ಣ ತಂಗಿಯರ ಬಾಂಧವ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಬಡತನದಲ್ಲಿಯೂ ಪ್ರಾಮಾಣಿಕತೆ ಮತ್ತು ಸರಳ ವ್ಯಕ್ತಿತ್ವದ ಹುಲಿಕುಂಟಿ ಹಾಗೂ ರಮಾಬಾಯಿ ಓದುಗರಿಗೆ ಆಪ್ತರಾಗುತ್ತಾರೆ.
ಜೀವನಾನುಭವವೇ ಇಲ್ಲಿನ ಸಣ್ಣಕಥೆಗಳ ಜೀವಾಳ. ವಸುಧೇಂದ್ರರ ಸುಲಲಿತ ಬರಹದ ಶೈಲಿಯಿಂದ ಇಲ್ಲಿನ ಎಲ್ಲಾ ಕಥೆಗಳು ಇಷ್ಟವಾಗುತ್ತವೆ .
“ಹಂಪಿ ಎಕ್ಸ್ ಪ್ರೆಸ್“ ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಪುಸ್ತಕ ಬಹುಮಾನ, ವಸುದೇವ ಭೂಪಾಲಂ ಪ್ರಶಸ್ತಿ ಪಡೆದ ಕೃತಿ.
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.