ಮೋಟಾ ಪೇಟ್, ಛೋಟಾ ಧಿಮಾಕ್!


"ಮೋಟಾ ಪೇಟ್, ಛೋಟಾ ಧಿಮಾಕ್ ಅಂದ್ರೆ ಏನು ಅಂತ ತಿಳ್ಕೋಬೇಕಾದ್ರೆ ಪುಸ್ತಕ ಓದ್ಬೇಕು. ನಾನು ನನ್ನಪ್ಪನನ್ನು ಎಷ್ಟು ಮಿಸ್ ಮಾಡಿಕೊಂಡೆ ಎಂದು ಈ ಕೃತಿ ನೆನಪಿಸಿದೆ. ಇಲ್ಲದ ಅಪ್ಪನ ಮೇಲೆ ಲವ್ ಜಾಸ್ತಿ ಆಗಿದೆ. ಏನೋ ಒಂದು ಕೊರಗಂತು ಇದ್ದೇ ಇದೆ!," ಎನ್ನುತ್ತಾರೆ ಯುವಲೇಖಕ ಅನಂತ ಕುಣಿಗಲ್. ಅವರು ಮಹೇಶ ಅರಬಳ್ಳಿ ಅವರ ‘ನೆನಪಿನ ಡಬ್ಬಿ’ ಕುರಿತು ಬರೆದಿರುವ ವಿಮರ್ಶೆ.

ಮಹೇಶ್ ಅರಬಳ್ಳಿ ಹೆಸರನ್ನು ಸಾಹಿತ್ಯ ವಲಯದಲ್ಲಿರುವ ಬಹುತೇಕ ಬರಹಗಾರರು ಮತ್ತು ಓದುಗರು ಕೇಳಿರುತ್ತಾರೆ. ನನಗೆ ವಯಸ್ಸಿನಲ್ಲಿ ಅಣ್ಣನೂ, ಹತ್ತಿರದಿಂದ ಮಾರ್ಗದರ್ಶಿಯೂ ಆಗಿರುವ ಈ ಮನುಷ್ಯ ವರ್ಷಕ್ಕೆ 200 ಕ್ಕೂ ಹೆಚ್ಚು ಪುಸ್ತಕಗಳನ್ನ ಓದುತ್ತಾರೆಂದರೆ ಅವರ ಶ್ರದ್ಧೆ ನಿಜಕ್ಕೂ ಒಬ್ಬ ಸಾಮಾನ್ಯ ಓದುಗನ ಊಹೆಗೆ ನಿಲುಕದ್ದು.

ಕನ್ನಡದ ರೀಡಿಂಗ್ ಮಷೀನ್ ಎಂದೇ ಕರೆಸಿಕೊಳ್ಳವ ಇವರು "ನೆನಪಿನ ಡಬ್ಬಿ" ಎಂಬ ಪುಸ್ತಕದ ಕರ್ತೃ ಕೂಡ. ಈ ವಿಷಯ ಎಷ್ಟೋ ಜನಕ್ಕೆ ಗೊತ್ತಿಲ್ಲ. ಕಾರಣ ಬರವಣಿಗೆಗಿಂತ ಓದು ತುಂಬಾನೇ ಮುಖ್ಯ ಎನ್ನುತ್ತಾರೆ. ಸಮಯ ವ್ಯರ್ಥವಾಗುವುದನ್ನು ಕಂಡಾಗ "ಈ ಬಿಸಿ ಲೈಫಿನಲ್ಲಿ ನಗಾಕೆ ಟೈಮಿಲ್ಲ, ಇನ್ನು ಇವಕ್ಕೆಲ್ಲ ಟೈಂ ಇನ್ವೆಸ್ಟ್ ಮಾಡ್ಬೇಕಾ?" ಅಂತ ನಸುನಗುತ್ತಲೇ ಸಣ್ಣದಾಗಿ ಬದುಕಿನ ಪಾಠ ಹೇಳುತ್ತಾರೆ. ಅವರ ಈ ಪುಸ್ತಕ ಕೈಗೆ ಸಿಕ್ಕ ದಿನದಿಂದಲೂ ಆಗಾಗ ಎರಡೆರಡು ಲೇಖನಗಳನ್ನು ಓದುತ್ತಾ ಸುಮ್ಮನಾಗಿಬಿಡುತ್ತಿದ್ದೆ. ಹೊಸ ವರ್ಷಕ್ಕೆ ಈ ಪುಸ್ತಕವನ್ನು ಓದಲೇಬೇಕು ಎಂದು ಕೂತು ಓದಿದೆ. ಓದಿ ಮುಗಿಸಿದ ಕ್ಷಣದಿಂದ ಯಾವುದೋ ಒಂದು ಆಪ್ತ (ಅಪ್ಪನ) ಭಾವ ನನ್ನನ್ನು ಬಿಡದಂತೆ ಆವರಿಸಿಕೊಂಡಂತಾಗಿದೆ.

ಬದುಕಿಗೆ ಹೆಗಲಾದ ಅಪ್ಪನ ಚಿತ್ರಣಗಳೇ "ನೆನಪಿನ ಡಬ್ಬಿ" ಕೃತಿಯ ಒಳ ಪುಟಗಳು. ಹಾಗಂತ ಇದು ಆತ್ಮಕತೆ ಅಲ್ಲ. ಲೇಖಕರು ಅಪ್ಪನಿಂದ ಕಲಿತ ಪಾಠಗಳು ಹಾಗೂ ಬದುಕಿನಿಂದ ಕಲಿತ ಪಾಠಗಳು ಎರಡನ್ನೂ ಇಲ್ಲಿ ದಾಖಲಿಸಲಾಗಿದೆ. ಬದುಕು ಹೇಗೆ ಕಟ್ಟಲ್ಪಡುತ್ತದೆ? ಏಳುಬೀಳುಗಳು, ಅಡೆತಡೆಗಳನ್ನು ದಾಟಬೇಕಾದ ಜವಾಬ್ದಾರಿಗಳು, ಮಧ್ಯಮವರ್ಗದ ತುಂಬು ಕುಟುಂಬ ಎದುರಿಸಬೇಕಾದ ಆತಂಕಗಳು, ಬಾಲ್ಯದ ನೆನಪುಗಳು ಎಲ್ಲವೂ ಇಲ್ಲಿ ಊಟದೆಲೆಯ ಮೇಲಿನ ಉಪ್ಪು, ಉಪ್ಪಿನಕಾಯಿ, ಸಂಡಿಗೆ, ಒಬ್ಬಟ್ಟು, ಅನ್ನ, ತಿಳಿಸಾರು, ಮೊಸರಿನಂತೆ ಸಮವಾಗಿ ಹಂಚಿಕೊಂಡಿವೆ.

ಮಹೇಶ್ ಅಣ್ಣನವರೊಂದಿಗೆ ಮಾತನಾಡುವಾಗ ಅವರದು ಎಷ್ಟು ಡೀಸೆಂಟ್ ವ್ಯಕ್ತಿತ್ವ ಎನಿಸದೆ ಇರದು. ಇದಕ್ಕೆಲ್ಲ ಕಾರಣ ನೆನಪಿನ ಡಬ್ಬಿ ಕೃತಿಯನ್ನು ಓದುವಾಗ ತನ್ನ ಅಪ್ಪನಿಂದಲೇ ತಾನು ರೂಪುಗೊಂಡದ್ದು, ತನ್ನಪ್ಪ ಕಲಿಸಿದ ಪಾಠಗಳೇ ಈ ದಿನದ ಬದುಕಿಗೆ ಪ್ರೇರಣೆಯಾದದ್ದು ಎಂದು ತಿಳಿಯುತ್ತದೆ.

ಶಾಲೆಯಲ್ಲಿ ನಿದ್ದೆಹೋಗಿ ಕೊಠಡಿಯ ಒಳಗೇ ಸೇರಿಕೊಂಡ ತಮ್ಮನ ಅಳು ಪ್ರಸಂಗವಾಗಿರಬಹುದು, ಕಡಕ್ ಇಸ್ತ್ರೀ ಮಾಡುತ್ತಿದ್ದ ಅಪ್ಪನ ಶಿಸ್ತಿರಬಹುದು, ತಿಂಗಳ ದಿನಸಿಯನ್ನು ತರಲು ಲೆಕ್ಕಾಚಾರ ಮಾಡುತ್ತಿದ್ದ ಆ ದಿನಗಳು ನಮಗೆ ನೆನಪಾಗದೆ ಇರದು. ಸ್ನೇಹಿತನಂತೆ ಉಭಯ ಕುಶಲೋಪರಿ ವಿಚಾರಿಸುವ ಕುಟುಂಬದ ಪಿಲ್ಲರ್ ಅಪ್ಪನಂತೆ, ಅಪ್ಪನಿಗಾಗಿ 28 ಜನ ಬಂದು ರಕ್ತದಾನ ಮಾಡಿ ಹೋದ ಸಹಾಯ ಹಸ್ತಗಳಂತೆ, ಸಾವಿರ ಚಿಂತೆ ತೊರೆದಂತೆ ನಿಂತ ಎದೆ ಬಡಿತದ ಸದ್ದಿನಂತೆ, ಅಪ್ಪ ಹೇಳಿಕೊಟ್ಟ ವರ್ಣಮಾಲೆಯ ವಿಭಿನ್ನ ಶೈಲಿಯಂತೆ, ಬದುಕಿನ ಬಗೆಗಿನ ಅಚ್ಚರಿಗಳನ್ನ ತೋರಿಸುತ್ತಾ ಬರವಸೆಯನ್ನು ಹುಟ್ಟು ಹಾಕುತ್ತಾ ಎಚ್ಚರಿಕೆಗಳನ್ನು ಬಿತ್ತುವ ಕುಕ್ಕರ್ ವಿಶಲ್ನಂತೆ, ಸರಳತೆಯಲ್ಲಿ ಸಂಯಮ ಕಾಣುವ ನೆಮ್ಮದಿ ಹುಡುಕುವ ಮಿಡಲ್ ಕ್ಲಾಸ್ ಫ್ಯಾಮಿಲಿಯಂತೆ, ಚಾಮುಂಡಿ ಬೆಟ್ಟದ ಚಾರಣ ಮಾಡುವಾಗ ಬೆಟ್ಟದ ಮೆಟ್ಟಿಲ ಉದ್ದಕ್ಕೂ ಸಿಗುವ ಅಪರಿಚಿತರಂತೆ, ಪ್ರಕೃತಿಯಲ್ಲಿ ಲೀನವಾದ ಅಪ್ಪನಂತೆ, ಅಕ್ಕನ ನೃತ್ಯಕ್ಕೆ ಮೆಚ್ಚಿ ಯಾರಿಗೂ ತಿಳಿಯದಂತೆ ಚಂಪಕಲಿ ಸಿಹಿ ತಿನಿಸಿದಂತೆ, ಬಿಟ್ಟರೂ ಬಿಡದಂತೆ ಕಾಡುವ ಅಪ್ಪನ ಅಮೂರ್ತ ರೂಪಗಳಂತೆ ಈ ಪುಸ್ತಕ ನನ್ನನ್ನು ಕಾಡಿದೆ.

ಮೋಟಾ ಪೇಟ್, ಛೋಟಾ ಧಿಮಾಕ್ ಅಂದ್ರೆ ಏನು ಅಂತ ತಿಳ್ಕೋಬೇಕಾದ್ರೆ ಪುಸ್ತಕ ಓದ್ಬೇಕು. ನಾನು ನನ್ನಪ್ಪನನ್ನು ಎಷ್ಟು ಮಿಸ್ ಮಾಡಿಕೊಂಡೆ ಎಂದು ಈ ಕೃತಿ ನೆನಪಿಸಿದೆ. ಇಲ್ಲದ ಅಪ್ಪನ ಮೇಲೆ ಲವ್ ಜಾಸ್ತಿ ಆಗಿದೆ. ಏನೋ ಒಂದು ಕೊರಗಂತು ಇದ್ದೇ ಇದೆ!

ಸಧ್ಯಕ್ಕೆ ಈ ಕೃತಿಯ ಸಾವಿರ ಪ್ರತಿಗಳೂ ಖಾಲಿಯಾಗಿವೆ. ಓದುಗರು ಮನಸ್ಸು ಮಾಡಿದರೆ, ಮಹೇಶಣ್ಣನವರು ಎರಡನೇ ಮುದ್ರಣಕ್ಕೆ ಮುಂದಾಗಬಹುದು. ಅದು ಆಗಲಿ ಎಂದು ಆಶಿಸುವೆ.

ನನ್ನ ಹೊಸ ವರ್ಷದ ಓದು ಇಲ್ಲಿಂದ ಶುರು..

- ಅನಂತ ಕುಣಿಗಲ್

MORE FEATURES

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...

ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ

07-01-2025 ಬೆಂಗಳೂರು

“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...