ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ ಶ್ರೀಮಂತ ಎಂಬುದರ ಪ್ರೇರಣೆಯಾಗುತ್ತದೆ ಎನ್ನುತ್ತಾರೆ ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ . ಲೇಖಕಿ ಕೆ. ಆರ್. ಉಮಾದೇವಿ ಉರಾಳ ಅವರ "ಮುಳ್ಳುಬೇಲಿಯ ಹೂಬಳ್ಳಿ" ಪ್ರಬಂಧ ಸಂಕಲನಕ್ಕೆ ಅವರು ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ..
ಮುನ್ನುಡಿ
ಶ್ರೀಮತಿ ಕೆ.ಆರ್.ಉಮಾದೇವಿ ಉರಾಳ ಅವರ "ಮುಳ್ಳುಬೇಲಿಯ ಹೂಬಳ್ಳಿ" ಹದಿನೈದು ಪ್ರಬಂಧಗಳ ಸಂಕಲನ. ಉಮಾದೇವಿಯವರು ನನಗೆ ಪತ್ರಿಕೆಯಲ್ಲಿ ಪ್ರಕಟವಾದ ಅವರ ಪ್ರಬಂಧಗಳನ್ನು ಓದಿ ಪರಿಚಿತರು. ಆಗ ಈಗ ಒಮ್ಮೊಮ್ಮೆ ಆಕಾಶವಾಣಿಯಲ್ಲಿ ಅವರ ಚಿಂತನಗಳ ಪ್ರಸಾರವನ್ನೂ ಕೇಳಿ ಬಲ್ಲೆ. ಅವರ ಚಿಂತನ ಲೇಖನಗಳು 'ಮುಂಬೆಳಕಿನ ಮಿಂಚು' ಎಂಬ ಸಂಕಲನವಾಗಿ ಹೊರ ಬಂದುದನ್ನೂ ಗಮನಿಸಿದೆ. ಒಂದು ಸಾಹಿತ್ಯ ಕಾರ್ಯಕ್ರಮಕ್ಕಾಗಿ ತೀರ್ಥಹಳ್ಳಿಯ ತುಂಗಾ ಕಾಲೇಜಿಗೆ ಹೋಗಿದ್ದಾಗ ಅವರ ಪರಿಚಯವೂ ಆಯಿತು. ಚಿಕ್ಕಮಗಳೂರು ಜಿಲ್ಲೆ ಕೊಪ್ಪಾ ತಾಲ್ಲೂಕಿನ ಕಮ್ಮರಡಿಯವರಾದ ಉಮಾದೇವಿಯವರು ಒಂದು ದಶಕದ ಹಿಂದೆ ಉಪನ್ಯಾಸಕಿಯಾಗಿ ನಿವೃತ್ತರಾಗಿ ತೀರ್ಥಹಳ್ಳಿಯಲ್ಲೇ ನೆಲೆಸಿರುವ ವಿಚಾರವೂ ತಿಳಿಯಿತು. ಅವರ ಪರಿಚಯವಾದ ಬಳಿಕ ಸುಧಾ, ಪ್ರಜಾವಾಣಿ, ತುಷಾರ, ಹೊಸತು, ಕಸ್ತೂರಿ ಮೊದಲಾದ ಪತ್ರಿಕೆಗಳಲ್ಲಿ ಅವರ ಬರಹಗಳು ಕಣ್ಣಿಗೆ ಬಿದ್ದಾಗ ತಪ್ಪದೆ ಓದುತ್ತಿದ್ದೆ. ಇದೀಗ, ಮುನ್ನುಡಿಯ ನಾಲ್ಕು ಮಾತುಗಳನ್ನು ಈ ಸಂಕಲನಕ್ಕೆ ಅವರ ಬಯಕೆಯಂತೆ ಬರೆಯುವ ಗೌರವ ನನ್ನದಾಗಿದೆ.
ಇಲ್ಲಿನ ಲೇಖನಗಳು ಪ್ರಬಂಧದ ಸ್ವರೂಪದಲ್ಲಿದ್ದರೂ, ಅವುಗಳಲ್ಲಿ ಹಲವು ಲಲಿತ ಪ್ರಬಂಧಗಳ ಲಕ್ಷಣಗಳನ್ನೂ ಹೊಂದಿವೆ. ಆತ್ಮೀಯ ಶೈಲಿ, ಭಾರವಲ್ಲದ ವೈಚಾರಿಕತೆ ಹಾಗೂ ವೈನೋದಿಕ ಧಾಟಿ ಲಲಿತ ಪ್ರಬಂಧದ ಮುಖ್ಯ ಗುಣಗಳು. ಇಲ್ಲಿನ ಪ್ರಬಂಧಗಳಲ್ಲಿ ವೈನೋದಿಕ ಧಾಟಿಗೆ ಪ್ರಾಮುಖ್ಯವಿಲ್ಲ. ಅದರ ಬದಲು ಅವುಗಳು ನೆನಪುಗಳನ್ನು ಹೆಚ್ಚು ನಂಬಿವೆ. ಹಾಗಾಗಿ ಇಲ್ಲಿನ ಬರಹಗಳು ಪ್ರಬಂಧಗಳನ್ನು ನೆನಪಿಸುತ್ತವೆ. "ಕರುಬುವವರಿರಬೇಕಿರಬೇಕು..." ಎಂಬ ಪ್ರಬಂಧ ಸಾಕಷ್ಟು ವಿನೋದವನ್ನು ಒಳಗೊಳ್ಳಲು ಅನುಕೂಲವಿರುವ ಬರಹ. ಆದರೆ ಉಮಾದೇವಿಯವರು ಅಲ್ಲಿ ವಿಶ್ಲೇಷಣೆ ಮತ್ತು ವಿವರಣೆಗಳ ಹದನಾದ ವೈಚಾರಿಕ ಬಂಧವನ್ನು ಆತ್ಮೀಯವಾದ ಶೈಲಿಯಲ್ಲಿಯೇ ಹೇಳಿದ್ದಾರೆ. ಅವರಿಗೆ ವಿನೋದಕ್ಕಿಂತಲೂ ವಿಚಾರ ಮುಖ್ಯ ಎಂಬುದು ಸಂಕಲನದ ಮೊದಲಿಗೇ ಭಾಸವಾಗುತ್ತದೆ. ಹಾಗಾಗಿ ಅವರಿಗೆ ಇನ್ನೊಬ್ಬರ ಭಾಗ್ಯಕ್ಕೆ ಕರುಬದೆ ತನ್ನ ಭಾಗ್ಯವನ್ನು ಬೇರೊಂದೆಡೆ ಕಾಣುವ ಸುರೇಶ ಸದಾ ನೆನಪಿನಲ್ಲುಳಿಯುತ್ತಾನೆ. ನೆನಪು ಅವರಿಗೆ ಪೂರಕ ಅನುಭವ.
'ಪುಸ್ತಕ ಲೋಕದ ಕಲ್ಪನಾ ವಿಲಾಸ'ದಲ್ಲಿ ಅವರಿಗೆ ನಮ್ಮ ಇಂದಿನ ಹಲವು ತರುಣರ ಭಾವನಾತ್ಮಕ ಬರಡುತನಕ್ಕೆ, 'ಬೋರಾಗುವ' ಮಾನಸಿಕ ಶಿಥಿಲತೆಗೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾದುದೇ ಕಾರಣ ಅನಿಸುತ್ತದೆ. ಇಲ್ಲಿಯೂ ವಿದೇಶ ಪ್ರಯಾಣದ ನೆನಪು ಅವರ ಪುಸ್ತಕ ಪ್ರೀತಿಗೆ ಪ್ರೇರಕವಾಗಿ ಬರುತ್ತದೆ.
'ಕಾಗದವೆಲ್ಲಿದೆ, ಕಾಗದ?' ಹಿಂದೆ ಪತ್ರಗಳನ್ನು ಬಟವಾಡೆ ಮಾಡುತ್ತಿದ್ದ ಅಂಚೆಯ ಅಣ್ಣನ ನೆನಪಿನಿಂದಲೇ ಪ್ರಾರಂಭವಾಗುತ್ತದೆ. ಪತ್ರಗಳ ಜೊತೆ ಪ್ರವಹಿಸಿ ಬರುತ್ತಿದ್ದ ಭಾವನೆಗಳ ನಂಟು ಇನ್ನೂ ಅವರ ಮನಸ್ಸಿನಲ್ಲಿ ಅಂಟಿ ಕುಳಿತಿದೆ. ಪತ್ರಗಳ ಸಂಗದ ಹಲವು ನೆನಪುಗಳಲ್ಲಿ ಮದುವೆ ನಿಶ್ಚಯವಾದ ತರುಣ ತರುಣಿಯರಿಂದ ಮದುವೆ ಇನ್ನೂ ನಿಶ್ಚಯವಾಗದ ಪ್ರೇಮಿಗಳವರೆಗೆ ಹಲವು ವಿಧಗಳು. ಇಂದಿನ ಇಮೈಲ್ ಯುಗದಲ್ಲಿ; ಅದರ ಗೋಪ್ಯತೆಯ ಸಂರಕ್ಷಣೆಯಲ್ಲಿ ಹಿಂದೆ ಪತ್ರಗಳ ಜೊತೆಗಿದ್ದ, ಆತಂಕ ಹಾಗೂ ಕಾಯುವ ಸುಖದು:ಖಗಳು ಅರ್ಥವಾಗಲು ಸಾಧ್ಯವಿಲ್ಲ. ಸಾಹಿತಿಗಳಲ್ಲಿ ಪತ್ರ ಲೋಕದ ಸಾರ್ವಭೌಮರು ಶಿವರಾಮ ಕಾರಂತರು. ವಿ.ಕೃ.ಗೋಕಾಕ, ಎ.ಎನ್.ಮೂರ್ತಿರಾವ್, ನಿರಂಜನ, ಪಂಡಿತ ಸಿ.ಕೃಷ್ಣ, ರಾಜೇಶ್ವರಿ ತೇಜಸ್ವಿ_ ಹೀಗೆ ಹಲವರ ಪತ್ರಗಳು ಇಲ್ಲಿ ಪ್ರಸ್ತಾಪವಾಗುತ್ತವೆ. ಇಂಗ್ಲಿಷ್ ಸಾಹಿತ್ಯದ ಕೀಟ್ಸ್ ಮೊದಲಾದವರ ಪತ್ರಗಳಂತೂ ಜಗದ್ವಿಖ್ಯಾತವಾದವು.
ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ ಶ್ರೀಮಂತ ಎಂಬುದರ ಪ್ರೇರಣೆಯಾಗುತ್ತದೆ.
'ಆಬೋಲಿನ ಮತ್ತು ಹಲಸಿನ ಮರ' ನೆನಪುಗಳಲ್ಲೆ ಕಟ್ಟಿದ ಒಂದು ಭಾವ ಚಿತ್ರ. ಆಗ್ನೆಸ್ ಬಾಯಿಯ ಮಗಳು ಆಬೋಲಿನ ಜೀವ ಚೈತನ್ಯದ ಬುಗ್ಗೆ, ಸರ್ವಾನುರಾಗಿ. ಇಂತಹ ಚೈತನ್ಯಶೀಲೆಯ ಬದುಕು ಕಾಯಿಲೆಯೊಂದಕ್ಕೆ ತುತ್ತಾಗಿ ಯಾಕೆ ಬೇಗ ಕೊನೆಗಾಣಬೇಕು? ಉತ್ತರವಿಲ್ಲದ ಈ ಪ್ರಶ್ನೆ ಎಲ್ಲರ ಬದುಕಿನ ವಿಷಾದ ಪರ್ವದ ಒಂದು ಭಾಗವೇ ಆಗಿ ಬಿಡುತ್ತದೆ. ಒಬ್ಬರ ಅನುಭವ ಎಲ್ಲರ ಅನುಭವದ ಭಾಗವಾಗುವುದೇ ಉತ್ತಮ ಬರಹಗಳ ಲಕ್ಷಣ. ಬರಹಗಳಲ್ಲಿ ಸಾಧಾರಣೀಕರಣ ಸದಾ ಸ್ವಾಗತಾರ್ಹ.
'ಮುಳ್ಳುಬೇಲಿಯ ಹೂಬಳ್ಳಿ' ಮನೆ-ಅಂಗಡಿಯ ಕೆಲಸಕ್ಕೆ ಸೇರಿದ ರಮೇಶ ಕಾಲಕ್ರಮೇಣ ಎಲ್ಲರ ಮನಸೂರೆಗೊಳ್ಳುವ; ನಿರಕ್ಷರಕುಕ್ಷಿಯೊಬ್ಬ ಪುಟ್ಟ ಬರಹಗಾರನಾಗಿ ಬೆಳೆಯುವ, ಆಲಸ್ಯವಿಲ್ಲದ ಕೆಲಸಗಾರನ ಶ್ರದ್ಧೆ, ಕಲಿಕೆಯ ಶ್ರಮಗಳ ನೆನಪು. "ಮುಳ್ಳು ಬೇಲಿಗೇ ಹಬ್ಬಿ ಬೆಳೆಯಬೇಕಿರುವ ತನ್ನ ಬಾಳ ಬಳ್ಳಿಯನ್ನು ಮುಳ್ಳುಗಳು ತಾಗದಂತೆ ಹಬ್ಬಿಸುತ್ತಾ ಹೂವರಳಿಸುವ ಜೀವನ ಕಲೆ ಅವನಿಗೆ ಕರಗತವಾಗಿತ್ತು" ಎಂಬಂತಹ ವಾಕ್ಯಗಳು ಅಲ್ಲಲ್ಲಿ ಮಿಂಚುವುದು ಇಲ್ಲಿನ ವಾಕ್ಯಗಳ ಸೊಗಸಿಗೊಂದು ಉದಾಹರಣೆ. ಹೋಲಿಕೆ, ರೂಪಕಗಳು, ಗಾದೆಗಳು ಹೀಗೆ ಹಲವು ಪರಿಕರಗಳಿಂದ ಲೇಖಕಿಯ ಬರಹಗಳ ರಚನೆ ಆಕಾರ ಪಡೆಯುತ್ತವೆ. 'ಬೇಲಿಗೂ ಹೂ ಬೆರಳಿದೆ' ಎಂಬುದು ಬೇಂದ್ರೆಯವರ ಮಾತು. ಬೇಲಿಯಲ್ಲಿ ಹಬ್ಬಿ ಹೂವರಳಿಸುವ ಲತೆಯ ಚಿತ್ರ ಉಮಾದೇವಿಯವರ ಭಾರವಿಲ್ಲದ ವೈಚಾರಿಕತೆಗೆ ಪೂರಕವಾದ ವಿಚಾರವೂ ಹೌದು.
'ಬೆಕ್ಕಮ್ಮನ ಬಾಣಂತನ' ಅವರು ಬದುಕಿನ ಚಿತ್ರಗಳನ್ನು ಕಟ್ಟಿಕೊಡುವ ಹಲವು ಉದಾಹರಣೆಗಳಲ್ಲಿ ಒಂದು. 'ಬನ್ನಿ, ಕಾಫಿ ತಗೊಳ್ಳಿ' ನಿತ್ಯದ ಅಭ್ಯಾಸವೇ ಬದುಕಿನ ಸಂತೋಷದ ಕ್ಷಣವಾಗಿರುವ ಚಿತ್ರಗಳನ್ನು ನೀಡುತ್ತದೆ. ಬದುಕು ನಡೆಯುವುದೇ ಹೀಗೆ ನಿತ್ಯದ ಸಾಮಾನ್ಯತೆಯ ಸಹಜ ಲಯದಲ್ಲಿ ಅಲ್ಲವೇ? ಎಂಬ ಪ್ರಶ್ನೆ ಹಾದು ಹೋಗುತ್ತದೆ. ಅಜ್ಜಿ-ಮೊಮ್ಮಕ್ಕಳ ಸಂಬಂಧವೂ ಹೀಗೆ ಬಾಳನ್ನು ಬೆಳಗುವ ಕ್ಷಣ (ಮುದ್ದು ಮಕ್ಕಳ ಉಸಿರು-ಉಲ್ಲಾಸದ ಹಸಿರು). ಹಾಗೆಯೇ ಅವರ ಪರಿಸರ ಕಾಳಜಿ ಅವರ 'ಎದೆಗೆ ಚೂರಿ ಹಾಕಿದ' ಅನುಭವದಂತೆ ಓದುಗರದ್ದೂ ಆಗುತ್ತದೆ. ಗಂಗಾಸ್ನಾನ ತುಂಗಾಪಾನ ಎಂಬ ಮಾತು ಇನ್ನು ಮುಂದೆ ಉಳಿದೀತೆ ಎಂಬ ಆತಂಕವಾಗುತ್ತದೆ (ದುಪ್ಪಟ್ಟು ಫಲಾನುಭವಿ).
ಹೀಗೆ ಬದುಕಿನ ಹಲವು ವಿವರಗಳ ಬಂಧ ಅವರ ಪ್ರಬಂಧ. ಹಲವು ಸಲ ಅಲ್ಲಿನ ಲಾಲಿತ್ಯ ಗುಣದಿಂದಾಗಿ ಲಲಿತವಾದ ಪ್ರಬಂಧಗಳಂತೆ ಭಾಸವಾಗುತ್ತದೆ. ಭಾಷೆ ವಿಚಾರ ವಿವರಗಳು ಎಲ್ಲೂ ಓದುಗನಿಗೆ ತಲೆ ಮೇಲಿನ ಭಾರ ಅನಿಸುವುದಿಲ್ಲ. ಕುವೆಂಪು ಹೇಳಿರುವ ಹಾಗೆ ನಮ್ಮ ಮುಗ್ಧತೆ ಸದಾ "ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು." ಪ್ರತಿ ಮನುಷ್ಯನೊಳಗೂ ಅಂತಹ ಒಂದು ಮುಗ್ಧ ಭಾವ ಇರುತ್ತದೆ. ಹಲವು ಸಲ ಅರಿವಿಗೆ ಬಾರದೆ ಅಡಗಿರುತ್ತದೆ. ಆನಂದ ಅದರ ಭಾವ ಮಾರ್ಗ. ಲೋಕಗ್ರಹಿಕೆಯ ಅಂತಹ ಒಂದು ಮುಗ್ಧಭಾವ ಇಲ್ಲಿನ ಹಲವು ಬರಹಗಳ ಪ್ರೇರಣೆ. ಅಂತಹ ಪ್ರಬಂಧಗಳನ್ನು ಕನ್ನಡಿಗರು ಸ್ವಾಗತಿಸಿ ಓದಲಿ ಎಂಬ ಹಾರೈಕೆ-ನನ್ನದು.
- ಎಸ್. ಆರ್. ವಿಜಯಶಂಕರ
ಎಸ್. ಆರ್. ವಿಜಯಶಂಕರ್ ಅವರ ಲೇಖಕ ಪರಿಚಯ...
"ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್...
"ಪುಸ್ತಕ ತೆರೆದಾಕ್ಷಣ ಕಾಣಿಸುವ “ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ...
“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...
©2025 Book Brahma Private Limited.