ಅಖಂಡ ನಾಲ್ಕು ವರ್ಷಗಳ ಚಿಂತನ ಮಂಥನ ಪಾತ್ರಗಳ ಪರದಾಟ..


“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿದ ಬೇತಾಳದಂತೆ ಬೆನ್ನಿಗೆ ಬಿದ್ದು ಬೇಡ ಬೇಡವೆಂದರೂ ಬಂದು ಕಾಡುವ ಪರಮ ಹಿಂಸೆಯ ನೆನಪುಗಳು ಅವು,” ಎನ್ನುತ್ತಾರೆ ಡಾ. ಲಕ್ಷ್ಮಣ ವಿ ಎ ಅವರು ತಮ್ಮ "ಪಿ.ಎಚ್.ಸಿ. ಕವಲುಗುಡ್ಡ 24/7" ಪುಸ್ತಕಕ್ಕೆ ಬರೆದ ಲೇಖಕರ ಮಾತು.

ಕೆಂಡದ ದಾರಿಯನ್ನು ತುಳಿದು ಬಂದಿದ್ದೆ.
ನಾಲ್ಕು ವರ್ಷಗಳ ಹಿಂದೆ. ಗಾಯ ವಾಸಿಯಾಗಿರಲಿಲ್ಲ, ಮತ್ತೆ ಮತ್ತೆ ರಸಿಕೆಯಾಡಿ ಹಿಂಸಿಸುತ್ತಲೇ ಇತ್ತು. ಇದನ್ನು ಕಥೆ ಎನ್ನಿರಿ ಕಾದಂಬರಿ ಎನ್ನಿರೆ ಅಖಂಡ ಕಾವ್ಯವೆನ್ನಿರಿ.... ಏನಂದರೂ ಸರಿಯೇ! ಮನುಕುಲಕ್ಕೆ ಇನ್ನಿಲ್ಲದಂತೆ ಪೀಡಿಸಿ ಕಾಡಿಸಿದ ಕೋವಿಡ್ ಎಂಬ 'ಮಹಾ ಮಾರಿ' ಕೊಟ್ಟ ಏಟು ಅಷ್ಟಿಷ್ಟಲ್ಲ. ಕಾಯಿಲೆ ಹೆಸರು ನೆನಪಿಸಿಕೊಂಡರೇ ಇನ್ನೂ ಪತರುಗುಟ್ಟಿ ಹೋಗುತ್ತೇನೆ. ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿದ ಬೇತಾಳದಂತೆ ಬೆನ್ನಿಗೆ ಬಿದ್ದು ಬೇಡ ಬೇಡವೆಂದರೂ ಬಂದು ಕಾಡುವ ಪರಮ ಹಿಂಸೆಯ ನೆನಪುಗಳು ಅವು.

ಅಖಂಡ ನಾಲ್ಕು ವರ್ಷಗಳ ಚಿಂತನ ಮಂಥನ ಪಾತ್ರಗಳ ಪರದಾಟ... ಇಂದು ಬರೆದೇನು ನಾಳೆ ಬರೆದೇನು... ಉಹುಂ ನನಗೆ ಬರೆಯಲಾಗುವುದಿಲ್ಲ. ನಾನೇಕೆ ಬರೆಯಲಿ? ಒಮ್ಮೆ ಹಾಯ್ದು ಬಂದ ಕೆಂಡದ ದಾರಿಯನ್ನು ಮತ್ತೊಮ್ಮೆ ಯಾಕೆ ಹಾಯಬೇಕು? ಇಲ್ಲ... ಇಲ್ಲ ಬರೆಯದೇ ನಾನು ಹಗುರಾಗಲಾರೆ. ನಾನು ಬರೆಯದೇ ಹೋದರೆ ಈ ಪಾತ್ರಗಳೇ ಬಂದು ಒಂದು ದಿನ ನನ್ನ ಮುಗಿಸಿಬಿಡಬಹುದು. ಹೆಗಲ ಭಾರ ಇಳಿಸದೆ ವಿಧಿಯಿರಲಿಲ್ಲ... ಒಂದು ದಿನ ಬರೆಯಲು ಕುಳಿತೆ. ಸಪ್ಟೆಂಬರ್ ಇಪ್ಪತ್ತು ಮೊದಲ ಅಧ್ಯಾಯ ಬರೆದು ಗೆಳೆಯನೊಬ್ಬನಿಗೆ ಕಳಿಸಿದೆ. ಅವರಿಂದ ಸಿಕ್ಕ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅಬ್ಬಬ್ಬ ಅಂದರೆ ನೂರು ಪುಟವಾಗಬಹುದೆಂಬ ಮನಸಿನಲ್ಲಿ ಒಂದು ನೀಲ ನಕ್ಷೆಯಿತ್ತು. ಆದರೆ ಅದು ಹಾಗಾಗಲಿಲ್ಲ. ಆರಂಭ ನನ್ನ ಕೈಲೇ ಇತ್ತು. ಅಂತ್ಯ ಮಾತ್ರ ಪಾತ್ರಗಳೇ ಪೋಷಿಸಿಕೊಂಡವು.

ಅಖಂಡ ಐವತ್ತೈದು ದಿನ ಈ ಪಾತ್ರಗಳ ಹೊತ್ತು ತಿರುಗಿದೆ. ಅವು ಉಂಡಾಗ ಊಟ ಮಾಡಿದೆ. ಅವಕೆ ಜ್ವರ ಬಂದಾಗ ನನಗೂ ಜ್ವರ ಬಂತು. ನಾಯಕ ನೀರು ಕುಡಿದರೆ ನನಗೂ ಕುಡಿದಂತೆನಿಸಿತು.. ಕೆಂಡದ ಹಾದಿ ಮತ್ತೊಮ್ಮೆ ತುಳಿದೆ...!

ಗಾಡಿ ಅನ್ನುವಂಗಿಲ್ಲ. ಅನುಭವಿಸುವ ಹಾಗಿಲ್ಲ. ಒಂಬತ್ತು ತಿಂಗಳ ಬಸುರಿಯ ಹಾಗೆ, ಎಡಕೆ ಹೊರಳಿದರೂ ಬಲಕೆ ಹೊರಳಿದರೂ ಒಳಗಿನ ಮಗು ಒದೆಯುತ್ತಲೇ ಇತ್ತು. ನಿದ್ದೆ ಇರದ ರಾತ್ರಿಗಳು. ತೂಕಡಿಕೆಯ ಹಗಲುಗಳು ಹೆಂಡತಿ ಇವನಿಗೆ ಹುಚ್ಚೇ ಹಿಡಿದಿದೆ ಎಂದು ಮರುಕಪಟ್ಟಳು. ಈ ನಡುವೆ ಚೂರು ಅನಾರೋಗ್ಯ, ಅವಳ ಸಾವು ಬದುಕಿನ ಹೋರಾಟ ಅವಳ ಆರೈಕೆ. ಊರು ಸುತ್ತಾಟ, ಕವಿಗೋಷ್ಠಿ ಭಾಷಣ ವೇದಿಕೆ... ಇಲ್ಲೆಲ್ಲಾ ಹೊತ್ತು ತಿರುಗಿದೆ ಪಾತ್ರಗಳ.....!

ಕಾದಂಬರಿಯೆಂಬ ಬರಹ ಕೊಟ್ಟ ಸುಖ ಸಂಕಟ ಯಾತನೆ.... ಇದು ಬೇಕಿತ್ತಾ ಮಗನೇ ನಿನಗೆ ಎಂಬ ನನ್ನೊಳಗನ್ನು ತಿವಿಯುವ ನನ್ನಂತಹ ಇನ್ನೊಬ್ಬ... ಅಂತೂ ಹಗೂರಾದೆ... ಅಬ್ಬ... ಇಷ್ಟೆಲ್ಲಾ ನಿಮಗೆ ಹೇಳಬೇಕೆನಿಸಿತು...!

ವಿಷಯ ಅದೂ ಅಲ್ಲ... ನೀವು ಓದಬೇಕು. ನನ್ನ ಚೊಚ್ಚಲ ಕಾದಂಬರಿ ಇದು. ಹೀಗಾಗಿ ಈ ನನ್ನ ಕಾದಂಬರಿ ನಿಮ್ಮ ಓದು ಮತ್ತು ಅನಿಸಿಕೆಗೆ ಮುಕ್ತವಾಗಿದೆ.

ನನ್ನ ಚೊಚ್ಚಲ ಕಾದಂಬರಿ ಪ್ರಕಟವಾಗುತ್ತಿರುವ ಹೊತ್ತಲ್ಲಿ ನಾನು ನೆನೆಯಬೇಕಾದ ಅಕ್ಷರ ಬಳಗ ತುಂಬಾ ದೊಡ್ಡದಿದೆ. ನನ್ನ ಪಾಡಿಗೆ ನಾನು ಬರೆಯುವ ಸ್ವಾತಂತ್ರ್ಯ ಕೊಟ್ಟ ಮಡದಿ ಗೀತಾ ಮಗ ತನಯ್, ಕನ್ನಡ ಕಲಿಸಿದ ಗುರುಗಳು ಡಿಗ್ರಿ ಕಾಲೇಜಿನ ಸಹಪಾಠಿಗಳಿಗೂ ಈ ಕಾದಂಬರಿಯ ಪ್ರತಿ ಅಧ್ಯಾಯವನ್ನು ಓದಿ ತಮ್ಮ ಅಮೂಲ್ಯವಾದ ಅನಿಸಿಕೆ ಹಂಚಿಕೊಂಡ ನೆಚ್ಚಿನ ಕಥೆಗಾರ ಗೆಳೆಯ ಇಂದ್ರಕುಮಾರ್ ಎಚ್.ಬಿ. ವಿದ್ಯಾರಶ್ಮಿ ಪೆಲತ್ತಡ್ಕ, ಸದಾಶಿವ ಸೊರಟೂರು ಅವರಿಗೂ ಬರಹ ಓದಿಗೆ ಬೆನ್ನೆಲುಬಾಗಿ ನಿಂತಿರುವ ಕಾವ್ಯ ಕೇಳಿ ಮತ್ತು ಕಥೆ ಕೂಟದ ಎಲ್ಲ ಬಂಧುಗಳಿಗೂ ಪ್ರಕಟಿಸುತ್ತಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ಅಶ್ವತ್ ಎಸ್.ಎಲ್ ಮತ್ತು ಅಪಾರ ಓದಿನ ನಾಡಿನ ಚಿರಪರಿಚಿತ ಸೃಜನಶೀಲ ಲೇಖಕ ಅನುಬೆಳ್ಳೆಯವರಿಗೂ ಅಂದದ ಮುಖಪುಟ ಬರೆದ ಕಿರಣ್ ಮಾಡಾಳು ಡಿ.ಟಿ.ಪಿ. ತಿದ್ದಿದ ಕೊಟ್ರೇಶ ಕೊಟ್ಟೂರು, ಪುಟ ವಿನ್ಯಾಸ ಮಾಡಿದ ನರೇಶ್ ಬಿ.ಆರ್‌ರವರಿಗೂ ಇವರೆಲ್ಲನ್ನೂ ಹೃತ್ತೂರ್ವಕವಾಗಿ ನೆನೆಯುವೆ

- ಡಾ. ಲಕ್ಷ್ಮಣ ವಿ ಎ

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...