ಲೇಖಕರ ಹತ್ತನೇ ಕಥಾಸಂಕಲನವಾದ ಪ್ರಸ್ತುತ ಪುಸ್ತಕದಲ್ಲಿ ಏಳು ಸಣ್ಣ ಕಥೆಗಳಿವೆ. ಜೊತೆಗೆ "ಸಾಹಿತ್ಯ: ನನ್ನ ಬರೆಯುವ ಅನುಭವದಲ್ಲಿ" ಎಂಬ ಪುಟ್ಟ ಲೇಖನವೂ ಇದೆ ಎಂಬುದು ಲೇಖಕಿ ವೀಣಾ ನಾಯಕ್ ಅವರ ಮಾತು..ಅವರು ಯಶವಂತ ಚಿತ್ತಾಲರ ‘ಕೋಳಿ ಕೂಗುವ ಮುನ್ನ’ ಸಣ್ಣ ಕಥೆಗಳ ಸಂಕಲನದ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..
ಪುಸ್ತಕ : ಕೋಳಿ ಕೂಗುವ ಮುನ್ನ (ಸಣ್ಣ ಕಥೆಗಳು)
ಲೇಖಕರು : ಯಶವಂತ ಚಿತ್ತಾಲ
ಪ್ರಕಾಶನ: ಪ್ರಿಸಮ್ ಬುಕ್ಸ್ ಪ್ರೈ.ಲಿ. ಬೆಂಗಳೂರು
ಫೋನ್ ನಂಬರ್. 080 2671 4108
ಪುಟಗಳು 104
ಬೆಲೆ: 120
ಒಬ್ಬ ಸಾಹಿತಿ ತನ್ನ ಸಾರ್ಥಕ ಜೀವನದಲ್ಲಿ ಅರುವತ್ತು ವರ್ಷಗಳನ್ನು ಸಾಹಿತ್ಯ ಸೃಷ್ಟಿಗೆ ಮುಡುಪಾಗಿಟ್ಟಾಗಲೇ ಅವರ ಅನುಭವ, ಬದ್ಧತೆ, ಮತ್ತು ಸೃಜನಶೀಲತೆಯ ಬಾಹುಳ್ಯದ ಅರಿವಾಗುತ್ತದೆ. ಅವರೇ ಯಶವಂತ ಚಿತ್ತಾಲರು. ಇವರಿಗೆ 'ಪರಿಚಯ'ದ ಹಂಗಿಲ್ಲ. ಬಹಳ ದೂರದಿಂದ ಸಾಹಿತ್ಯವನ್ನು ನೋಡಿದವರಿಗೂ ಚಿತ್ತಾಲರ ಹೆಸರು ತಿಳಿದಿದೆ.
ಲೇಖಕರ ಹತ್ತನೇ ಕಥಾಸಂಕಲನವಾದ ಪ್ರಸ್ತುತ ಪುಸ್ತಕದಲ್ಲಿ ಏಳು ಸಣ್ಣ ಕಥೆಗಳಿವೆ. ಜೊತೆಗೆ "ಸಾಹಿತ್ಯ: ನನ್ನ ಬರೆಯುವ ಅನುಭವದಲ್ಲಿ" ಎಂಬ ಪುಟ್ಟ ಲೇಖನವೂ ಇದೆ.
ಮೊದಲನೇ ಕಥೆ 'ದಿಗ್ಬಂಧನ'.
ಕೇಶವ ಮತ್ತು ಅನಸೂಯ ದಂಪತಿಗಳು ಮುಂಬಯಿ ಮಹಾನಗರದ 'ಸಾಗರದರ್ಶನ' ವೆಂಬ ಕಟ್ಟಡದ ಮೂರನೇ ಮಜಲೆಯಲ್ಲಿರುವ ತಮ್ಮ ಮನೆಯಲ್ಲಿ ಸುಖ ಸಂಸಾರ ಹೂಡಿದ್ದರು. ಒಂದು ಸಂಜೆ ಮಳೆ ಬರುವ ಲಕ್ಷಣಗಳು ಆಕಾಶ ತುಂಬಾ ಹರಡಿದ್ದು, ಮನಸ್ಸನ್ನೂ ಮಂಕಾಗಿಸುವ ಸ್ಥಿತಿ! ಆಫೀಸಿನಿಂದ ಹಿಂತಿರುಗಿ ಬಂದ ಕೇಶವನಿಗೆ ಮನೆಯಲ್ಲಿ ಅಪರಿಚಿತ ವ್ಯಕ್ತಿಯ ಅನಿರೀಕ್ಷಿತ ಭೇಟಿಯಾಗುತ್ತದೆ.
ಆ ವ್ಯಕ್ತಿಯ ಆಂಗಿಕ ಭಾಷೆಯಿಂದ ವಿಲಕ್ಷಣವಾದ ಸಮಸ್ಯೆಯ ಆಭಾಸವಾಗುತ್ತಿತ್ತು. ಔಪಚಾರಿಕ ಸೌಜನ್ಯವನ್ನೂ ತೋರದೆ ಅವನು ಆಡಿದ ಬಿರುಸಾದ ಮಾತುಗಳು ಕೇಶವ ಮತ್ತು ಅನುಸೂಯ ಇಬ್ಬರನ್ನೂ ವಿಕ್ಷಿಪ್ತರನ್ನಾಗಿಸುತ್ತದೆ. ತನ್ನ ಹೆಸರು, ಊರು, ವಿಳಾಸ ಏನನ್ನೂ ಹೇಳದೆ, ಕೇಶವನ ಮಾತನ್ನೂ ಗಮನಿಸದೆ ದುರ್ದಾನ ತೆಗೆದುಕೊಂಡವನಂತೆ ಮನೆಯಿಂದ ಹೊರಗೆ ಹೋಗುತ್ತಾನೆ.
ಆಗಂತುಕನ ಹೇಳಿಕೆ: ಅವನು ಹುಟ್ಟಿದ ನಾಲ್ಕನೇ ದಿನ ತಾಯಿ ಮತ್ತು ತಂದೆಯೊಂದಿಗೆ ಈಗ ಕೇಶವನಿರುವ ಮನೆಗೆ ಬಂದಿದ್ದ. ಹೊಸದಾಗಿ ಕಟ್ಟಿದ ಕಟ್ಟಡದಲ್ಲಿರುವ ಆ ಮನೆಯನ್ನು ಅವನ ತಂದೆ ಖರೀದಿ ಮಾಡಿದ್ದರು. ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ್ದಾದರೂ, ಅದು ತಮ್ಮ ಸ್ವಂತ ಮನೆ ಅನ್ನುವ ಸಮಾಧಾನವಿತ್ತು. ಜೊತೆಗೆ ಪುತ್ರ ಸಂತಾನದ ಆಗಮನವೂ ಆಗಿತ್ತು.
ಇವೆರಡರ ಸಂಭ್ರಮದಲ್ಲಿದ್ದ ಮನೆಯ ಯಜಮಾನನಿಗೆ ಹತ್ತಾರು ರೌಡಿಗಳಂತೆ ತೋರುವ ಜನರೊಡನೆ ಮನೆಗೆ ಬಂದ ಆ ವ್ಯಕ್ತಿಯ ಮಾತುಗಳನ್ನು ಕೇಳಿ ಆಶ್ಚರ್ಯ ವಾಗುತ್ತದೆ.
ಅವನ ಮಾತಿನ ಪ್ರಕಾರ, ಹೊಸ ಮನೆ ಆಗಂತುಕ ವ್ಯಕ್ತಿಯದೆಂದೂ, ಕೂಡಲೇ ಅವರಿಗೆ ಮನೆ ಬಿಟ್ಟು ಕೊಡದಿದ್ದರೆ ಸರಿಯಾದ ಜನರನ್ನು ಕರೆಸಿ ಗಲಾಟೆ ಮಾಡಿ, ಓಡಿಸುತ್ತಾರೆಂದೂ ಹೆದರಿಸುತ್ತಾರೆ. ಮನೆಗೆ ಸಂಬಂಧಿಸಿದ ಹಕ್ಕುಪತ್ರವನ್ನು ತೋರಿಸುವುದಾಗಿ ಹೇಳಿದರೂ ಕೇಳದಿದ್ದಾಗ, ತನ್ನ ನಾಲ್ಕು ದಿನದ ಮಗುವನ್ನು ತೋರಿಸಿ ಕಾಲಾವಕಾಶ ಕೇಳಿದರೂ ಒಪ್ಪದೆ ಎಳೆಮಗು ಸಮೇತ ಮನೆಯಲ್ಲಿದ್ದವರನ್ನು ಹೊರದಬ್ಬುತ್ತಾರೆ. ಜೀವ ಭಯದಿಂದ ಅಲ್ಲಿಂದ ಹೋದವರು ಮರ್ಯಾದೆಗೆ ಅಂಜಿ, ತಾವು ನಿವೃತ್ತ ರಾಗುವವರೆಗೂ ತಮ್ಮ ಅಧೀನವಿಲ್ಲದ ಮನೆಯ ಸಾಲದ ಕಂತುಗಳನ್ನು ಕಟ್ಟಿ ಸಾಲ ತೀರಿಸುತ್ತಾರೆ.
ವಯಸ್ಸಾಗಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿ, ಮರಣದ ಆಗಮನವನ್ನು ನಿರೀಕ್ಷಿಸುವಂತಾದಾಗ ಮನ ತಡೆಯದೆ ಮಗನಿಗೆ ಮೂವತ್ತು ವರ್ಷಗಳಿಂದ ರಹಸ್ಯವಾಗಿಟ್ಟ, ಆ ಮನೆಗೆ ಸಂಬಂಧಿಸಿದ ಘಟನೆಯನ್ನು ತಿಳಿಸಿ ಅಸುನೀಗುತ್ತಾರೆ. ತನ್ನ ತಂದೆಗಾದ ಅನ್ಯಾಯವನ್ನು ಸಹಿಸಲಾಗದೆ ರೋಷಗೊಂಡ ಆ ತರುಣ ತಂದೆ ಹೇಳಿದ ಮನೆಯನ್ನು ಹುಡುಕಿ ಬಂದು ಕೇಶವನನ್ನು ಭೇಟಿಯಾಗುತ್ತಾನೆ. ತಾನು ತಿಳಿಸಬೇಕಾಗಿದ್ದ ವಿಷಯವನ್ನು ಕೇಶವನಿಗೆ ತಿಳಿಸಿ ಮನೆಯಿಂದ ಹೊರಟಾಗ ಆ ತರುಣ ಹೇಳಿದ ಮಾತುಗಳು ಅವನ ಮನಸ್ಸಿನ ದ್ವಂದ್ವವನ್ನು ತೋರಿಸುತ್ತದೆ. ಕೇಶವನ ನಿರಪರಾಧಿ ಸ್ಥಿತಿ ಮತ್ತು ಅಸಹಾಯಕತೆಯನ್ನು ಅವನು ಅರಿತಂತೆ ಭಾಸವಾಗುತ್ತದೆ.
"ಕೊನೆಗೂ ನಮ್ಮ ತಾಬೆಗೆ ಬಂದೇ ಇರದ ಮನೆಗಾಗಿ ಹಣ ಪಾವತಿಸಿದವನ (ತಂದೆಯ) ಭಾವನೆಯನ್ನು ಊಹಿಸಿಯೇ ಕ್ಷೋಭೆಗೊಂಡಾಗ ಹಿಂದು ಮುಂದಿನ ವಿಚಾರ ಮಾಡದೇ ಇಲ್ಲಿಗೆ ಬಂದುಬಿಟ್ಟೆ. ಇಲ್ಲಿಂದ ಹೊರಟು ಹೋಗಲು ಎದ್ದು ನಿಂತಾಗ ನನ್ನದು ದುಷ್ಟತನವಾಯಿತು ಅನ್ನಿಸತೊಡಗಿದೆ."
ಇಷ್ಟೆಲ್ಲಾ ಆದ ಮೇಲೆ ಕೇಶವ ಮತ್ತು ಅನಸೂಯಳ ಮನಸ್ಥಿತಿ ಕದಡಿತು. ಕಳೆದ ಮೂವತ್ತು ವರ್ಷಗಳಿಂದ ಅವರು ಅದೇ ಮನೆಯಲ್ಲಿ ವಾಸವಾಗಿರುವುದರಿಂದ ಅನ್ಯಾಯ ಆಗಿದ್ದರೆ, ಅದು ಕೇಶವನ ದಿವಂಗತ ತಂದೆಯಿಂದಲೇ ಆಗಿರಬಹುದು ಎಂಬ ನಿರ್ಣಯಕ್ಕೆ ತಲುಪುತ್ತಾರೆ. ಅಲ್ಲಿಂದ ಮುಂದೆ ಧರ್ಮ ಸಂಕಟದ ದಿಗ್ಬಂಧನಕ್ಕೆ ಒಳಗಾದವರಂತೆ ಇಬ್ಬರೂ ಕೊರಗುತ್ತಾರೆ.
ಧರ್ಮಭೀರುಗಳಾದ ದಂಪತಿಗಳಿಗೆ ತಮ್ಮಲ್ಲಿಗೆ ಬಂದು ಹೋದ ತರುಣನ ಹೆಸರು, ವಿಳಾಸವೂ ಗೊತ್ತಿಲ್ಲದೆ ಪರಿಹಾರದ ದಾರಿಯೂ ಮುಚ್ಚಿದಂತಾಗುತ್ತದೆ.
ಇಂಥಾ ಸನ್ನಿವೇಶದಲ್ಲಿ, ತಂದೆಯಿಂದಾದ ತಪ್ಪನ್ನು ಸರಿಪಡಿಸಲು ಕೇಶವ ಏನು ಮಾಡುತ್ತಾನೆ ? ಇದನ್ನು ಪುಸ್ತಕ ಓದಿಯೇ ತಿಳಿಯಬೇಕಿದೆ.
ಒಂದು ಸಣ್ಣ ಕಥೆ ಹೇಳಿ ಲೇಖಕರು ಓದುಗನ ಆತ್ಮವನ್ನೇ ಕೆಣಕುತ್ತಾರೆ. ಯಾರು ಸರಿ, ಯಾರು ಸರಿಯಲ್ಲವೆಂಬ ತಾಕಲಾಟ ಮನದಲ್ಲಿ ಉಳಿದು ಬಿಡುತ್ತದೆ. ಇದು ಚಿತ್ತಾಲರ ಬರಹದ ತಾಕತ್ತು.
ಕೋಳಿ ಕೂಗುವ ಮುನ್ನ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಸಾಹಿತಿ ಯಶವಂತ ಚಿತ್ತಾಲರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.