'ಬೆಳಕಿಗೆ ಹರಿಯುವ ಶಕ್ತಿ ಇದೆ ಎಂದು ಹೇಳಿದ ತತ್ವಜ್ಞಾನಿ ಬೇಂದ್ರೆ'


"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಜ್ಞಾನದ ಮಂಡಲವನ್ನು ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು," ಎನ್ನುತ್ತಾರೆ ಕೃಷ್ಣ ಕಟ್ಟಿ ಯಲಗೂರ. ಅವರು ಬೇಂದ್ರೆಯವರ ಕುರಿತು ಬರೆದ ಲೇಖನ.

ಬೇಂದ್ರೆಯವರು ತಮ್ಮ ಮೊದಲ ಕವನ ಸಂಕಲನ 'ಗರಿ'ಯಲ್ಲಿ 'ಬೆಳಗು' ಪದ್ಯವನ್ನು ಪ್ರಕಟಿಸಿ ಜಗತ್ತಿಗೆ ಬೆಳಕು- ಬೆಳಕಿನ ವೈಶಿಷ್ಟ್ಯತೆಯನ್ನು ಹಂಚಿದರು. ಆ ಪದ್ಯದಲ್ಲಿ ಬೆಳಕು ಬರುವ ಸ್ಥಳ, ಬೆಳಕು ಬರುವ ಕ್ರಮವನ್ನು ಮನೋಜ್ಞವಾಗಿ ಹೇಳಿದ್ದಾರೆ. ಮೂಡಲ ದಿಕ್ಕು ಬೆಳಕಿನ ಮನೆ. ಪ್ರತಿ ದಿನ ಬೆಳಗಿನ ಜಾವದಲ್ಲಿ ಆ ಮನೆಯ ಬಾಗಿಲು ತೆರೆಯುತ್ತದೆ. ಬಾಗಿಲು ತೆರೆಯುತ್ತಿದ್ದಂತೆ ಬೆಳಕು ಚಿಮ್ಮಿ ಹರಿದು ಬರುತ್ತದೆ ಎಂದು ಹೇಳಿದ್ದಾರೆ. ಹರಿಯುವದು ದ್ರವ ಪದಾರ್ಥದ ಗುಣ ಧರ್ಮ. ಬೆಳಕಿಗೆ ಹರಿಯುವ ಶಕ್ತಿ ಇದೆ ಎಂದು ಹೇಳಿದ ತತ್ವಜ್ಞಾನಿ ಬೇಂದ್ರೆ. ಬೆಳಗಿನ ಬೆಳಕಿನಿಂದ ಪ್ರಭಾವಿತರಾಗಿ ಹರಿಯುವಿಕೆಯಲ್ಲಿ ಮಿಂದೆದ್ದು ತೊಯ್ಸಿಕೊಂಡು, ಸೂರ್ಯಪಾನ ಮಾಡಿದ ಕವಿ ಇವರು. ಈ ಬೆಳಕಿನ ಮೂಲಕ ಸೂರ್ಯನನ್ನು ಕಂಡುಂಡು ಅನೇಕ ಪದ್ಯಗಳಲ್ಲಿ ಅವನನ್ನು ಭಿನ್ನ-ಭಿನ್ನ ನೆಲೆಗಳಲ್ಲಿ ಹಿಡಿದು ಹಾಕಿದ್ದಾರೆ. ಅವನ ಗುಣ, ರೂಪ, ಅಸ್ತಿತ್ವ, ಪ್ರಯೋಜನ ಒಂದೆ, ಎರಡೆ ಅನೇಕಾನೇಕ ವಿಚಾರಗಳನ್ನು ಔನ್ನತ್ಯ ಹಾಗೂ ಬೌದ್ಧಿಕ ಮಟ್ಟದಲ್ಲಿ ತಮ್ಮ ಕಾವ್ಯದಲ್ಲಿ ಪ್ರತಿಷ್ಠಾಪಿಸಿದ್ದಾರೆ.

1956 ರಲ್ಲಿ 'ಸೂರ್ಯಪಾನ'ಎಂಬ ಕವನ ಸಂಕಲನ ಪ್ರಕಟವಾಯಿತು. ಅದರ ಮೊದಲನೆಯ ಪದ್ಯವೆ 'ಸೂರ್ಯಪಾನ'. ಬೇಂದ್ರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದದ್ದು ಅವರ 'ಅರಳು ಮರಳು' ಕೃತಿಗೆ. ಅದು ಪಂಚ ಕಾವ್ಯ ಸಂಕಲನಗಳ ಗುಚ್ಛ. ಅದರಲ್ಲಿ 'ಸೂರ್ಯಪಾನ' ಕವನ ಸಂಕಲನ ಮೊದಲನೆಯದು. ಬೇಂದ್ರೆಯವರು ಈ ಪದ್ಯಕ್ಕೆ ಬರೆದ ಭಾವ ಸಂದರ್ಭದಲ್ಲಿ ಈ ರೀತಿ ಇದೆ.' ಸೂರ್ಯಪಾನ ವಿಜ್ಞಾನದ ಜ್ಯೋತಿಗಾಗಿ ತಪಿಸುವ ಹೃದಯ ಕಮಲವನ್ನು ಪ್ರತಿಮಿಸುವದು 'ಸೂರ್ಯಪಾನ ಎಂದರೆ ಇದು ಹೊಲದಲ್ಲಿ ಬೆಳೆಯುವ ಒಂದು ತೈಲ ಗಿಡ. ಸೂರ್ಯಪಾನ ಎಂದರೆ ಸೂರ್ಯನನ್ನು ಪಾನ ಮಾಡುವದು. ಸೂರ್ಯನನ್ನು ಪಾನ ಮಾಡುವದೆಂದರೆ ಜ್ಞಾನವನ್ನು ಪಡೆಯುವದು. ಸೂರ್ಯ ಜ್ಞಾನದ ಅಧಿದೈವ. ವಿಜ್ಞಾನದ ಜ್ಯೋತಿಗಾಗಿ ತಪಿಸುವದು ಎಂದಲ್ಲಿ, ವಿಜ್ಞಾನ ಎಂದರೆ ಬ್ರಹ್ಮಾಂಡದ ಬಗ್ಗೆ ಪರೀಕ್ಷಣೆಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ವ್ಯವಸ್ಥಿತ ಯೋಜನೆ ಇದು. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಜ್ಞಾನದ ಮಂಡಲವನ್ನು ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು. ಈ ಜ್ಞಾನಕ್ಕೆ,ಜ್ಞಾನದ ಜೊತೆಗೆ ತಪಿಸುವ, ತಪ-ಇಸು-ವ, ಅಂದರೆ ಅವನ ಹೃದಯ ಕಮಲವು, ಪ್ರತಿಮೆ-ಇಸುವ-ಅದು. ಆತ್ಮ ಸಾಕ್ಷಾತ್ಕಾರಕ್ಕೆ ಸೂರ್ಯಪಾನವನ್ನು ಪ್ರತಿನಿಧಿಸುವದು.
-1-
'ಏನಿದರ ಔನ್ನತ್ಯ ಏನಿದರ ಔದ್ಧತ್ಯ
ಕುಕ್ಕಿಸುವ ಕಣ್ಣುಗಳ ದಿಟ್ಟಿಸುವದು.
ಬಾನಗಣ್ಣಿನ ಬಿಸಿಯ ಹಸಿಯಾರದಲೆ ಕುಡಿದು
ಬೆಳಕ ನೀರಡಿಕೆಯನು ಹುಟ್ಟಿಸುವದು.'

ಈ ನುಡಿಯಲ್ಲಿ ಒಂದು ಅದ್ಭುತವಾದ ಸಾಲು ಇದೆ. ಅದನ್ನು ಕಾವ್ಯ ಜಗತ್ತಿನಲ್ಲಿ ಬೇಂದ್ರೆ ಮಾತ್ರ ಬರೆಯಲು ಸಾಧ್ಯ. 'ಬೆಳಕ ನೀರಡಿಕೆಯನು ಹುಟ್ಟಿಸುವದು'. ಎಂದು ಹೇಳಿ ಜಗತ್ತನ್ನು ದಿಗ್ಭ್ರಮೆಗೊಳಿಸಿದ್ದಾರೆ. ಪಾನ ಮಾಡುವ ಸೂರ್ಯನನ್ನು ಕುರಿತು ಹೇಳುತ್ತಾರೆ. 'ಏನಿದರ ಔನ್ನತ್ಯ-ಔದ್ಧ್ರತ್ಯ ಎಂದು ಉದ್ಗಾರ ತೆಗೆದಿದ್ದಾರೆ. ಔನ್ನತ್ಯ ಮತ್ತು ಔದ್ಧ್ರತ್ಯ ಎಂದರೆ, ಸೂರ್ಯನ ಶ್ರೇಷ್ಠತೆ ಮತ್ತು ನಡವಳಿಕೆ.ಅದನ್ನು ಅರ್ಥಮಾಡಿಕೊಳ್ಳಬೇಕಾದರೆ ವೇದದ ಮೊರೆ ಹೋಗಬೇಕು.ಅರ್ಥವಣಿ ಸುರ್ಯೋಪನಿಷತ್ ಈ ರೀತಿ ವರ್ಣಿಸುತ್ತದೆ.'ಷಟ್ ಸ್ವರೂಪಾರೂಢೇನ ಬೀಜೇನ ಷಡಂಗ ರಕ್ತಾಂಬುಜ ಸಂಸ್ಥಿತ ಸಪ್ತಾಶ್ವರಥಿನಂ, ಹಿರಣ್ಯ ವರ್ಣಂ ಚತುರ್ಭುಜ ಪದ್ಮದ್ವಯಾಭಯ, ವರದ ಹಸ್ತಂ ಕಾಲಚಕ್ರ ಪ್ರಣೀತಾರಂ ಶ್ರೀ ಸೂರ್ಯನಾರಾಯಣಂ ಯ ಏವಂ ವೇದ' ಇಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ಹೇಳಿದ್ದೇನೆ.

ನಾಲ್ಕು ವೇದಗಳಲ್ಲಿ, ಉಪನಿಷತ್ತಗಳಲ್ಲಿ, ಪುರಾಣ, ಇತಿಹಾಸ, ಮಹಾಕಾವ್ಯಗಳಲ್ಲಿ ಸೂರ್ಯನನ್ನು ಕುರಿತು ಅನೇಕ ಮಂತ್ರಗಳಿವೆ. ಬೇಂದ್ರೆಯವರು ಸೂರ್ಯನನ್ನು ಕುರಿತು ಬರೆದ ಪದ್ಯಗಳೊಂದಿಗೆ ಅವುಗಳನ್ನು ಸಂವಾದಾತ್ಮಕವಾಗಿ ನೋಡಬೇಕು. ಅವನ ಶ್ರೇಷ್ಠತೆಯ ಜೊತೆಗೆ, ಅವನ ನಡುವಳಿಕೆ ನಮ್ಮ ಜೊತೆಗೆ ಬಹಳ ಉನ್ನತ ಮಟ್ಟದಲ್ಲಿದೆ. ಅವನಿಲ್ಲದೆ ಜಗತ್ತೇ ಇಲ್ಲ‌ ಎನ್ನುವ ಅರಿವು ನಮಗೆ ಬೇಕಾದರೂ. ಸೂರ್ಯನು ಸರ್ವದರ್ಶಿ. ತನ್ನ ಕಾರ್ಯ ನಿಯಮದಲ್ಲಿ ಮಹಾನನು ಮತ್ತು ಉದಾರ ಅನುಗ್ರಹ ಶೀಲನು. ಅವನ ಕಿರಣಗಳು ಅಂತಸ್ಫುರತೆಯ ಕಿರಣಗಳು.ಅವು ಉಪಾಸಕನನ್ನು ಜ್ಞಾನದ ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತವೆ. ಅವನು ಎಲ್ಲ ದಿಶೆಗಳನ್ನು ಬೆಳಗಿ ಪ್ರಜ್ಞಾಯುಕ್ತನನ್ನಾಗಿ ಮಾಡುತ್ತಾನೆ. ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ, ಸೂರ್ಯನ ಕಿರಣಗಳನ್ನು ನೋಡುವ ಅನುಭವವೇ ಭಿನ್ನ- ಭಿನ್ನವಾದ್ದು. ನಾವು ಅವನನ್ನು ನೋಡುವದು, ಅವನು ನಮ್ಮನ್ನು ನೋಡುವದು, ಈ ಅನುಭವ ಕ್ರಿಯೆಯನ್ನು ಬೇಂದ್ರೆ ವರ್ಣಿಸುವದು ಹೀಗೆ. 'ಕುಕ್ಕಿಸುವ ಕಣ್ಣುಗಳ ದಿಟ್ಟಿಸುವದು. ಬಾನಗಣ್ಣಿನ ಬಿಸಿಯ ಹಸಿಯಾರದಲೆ ಕುಡಿದು, ಬೆಳಕ ನೀರಡಿಕೆಯನು ಹುಟ್ಟಿಸುವದು'. ಆಕಾಶದ ಕಣ್ಣು ಸೂರ್ಯ. ಅವನ ರಶ್ಮಿಯನು ದಿಟ್ಟಿಸುವದರಿಂದ ನಮ್ಮ ಕಣ್ಣು ಹಸಿಯಾಗುತ್ತದೆ. ಆ ಹಸಿ ಆರುವ ಪೂರ್ವದಲ್ಲಿ ಅದನ್ನು ಪಾನ ಮಾಡಬೇಕು ಎನ್ನುತ್ತಾರೆ ಕವಿ. ಇದು ಸೂಚನೆ. ಹಾಗಾದಾಗ ಆ ಬೆಳಕು, ಇಂದ್ರಿಯ ಜನ್ಯ ಹಾಗೂ ಗಮ್ಯವಾದದ್ದು. ಆ ಬೆಳಕು ನಮ್ಮಲ್ಲಿ ನೀರಡಿಯನ್ನು ಹುಟ್ಟಿಸುತ್ತದೆ. ಇಲ್ಲಿ ನೀರಡಿಕೆಯೆಂದರೆ ಜ್ಞಾನ ಪಿಪಾಸಿಗೆ ಆಗುವ ಅನುಭವ. ನೀರಡಿಕೆ ಆದಾಗ ನೀರು ಕುಡಿಯುವದು, ಮನುಷ್ಯ ಪ್ರಕೃತಿ ಧರ್ಮ. ಇಲ್ಲಿ ಕವಿ ಹೇಳುವದೇನೆಂದರೆ, ಸೂರ್ಯನನ್ನು ಪಾನ ಮಾಡಿರಿ ಇದೊಂದು ದಿವ್ಯಾನುಭವ.
-2-
'ಗಿರಿನಾರ ಕೋಡಿನಲೊ ಕೈಲಾಸ ಶಿಖರದಲೊ
ವಿಶ್ವದೀಪಕ ದೃಷ್ಟಿ ಮೂಡುವಂತೆ
ದಿಂಬಿನಲಿ ಮೊಗದೋರಿ ಎಸಳನಾಯಾಳಿಸುತ
ಸಿಂಹಾವಲೋಕನದಿ ನೋಡುವಂತೆ.'

ಬೇಂದ್ರೆ ಈ ನುಡಿಯಲ್ಲಿ ಒಂದು ಚಮತ್ಕಾರ ಮಾಡುತ್ತಾರೆ. 'ಗಿರಿನಾರ ಕೋಡಿನಲೊ'ಕೋಡಿ ಎಂದರೆ ನೀರು ಹರಿಯುವ ಹಾದಿ. ಮಳೆಗಾಲದಲ್ಲಿ ಎಲ್ಲ ಕಡೆ ಕೇಳಿ ಬರುವ ಶಬ್ದ ಕೋಡಿ. ಕೆರೆಗೆ ಕೋಡಿ ಬಿತ್ತು ಎಂದು. ಕೋಡಿ ಬಿಳುವದು ಎಂದರೆ ತುಂಬಿ ಹರಿಯುವದು. ನೀರಿನ ಒತ್ತಡಕ್ಕೆ ಕೆರಯ ವಂಡೆ ಒಡೆದು ನೀರು ಹರಿಯುವದು. ಗಿರಿನಾರ ಇದು ಗುಜರಾತದಲ್ಲಿರುವ ಒಂದು ಸಿದ್ದಿ ಕ್ಷೇತ್ರ. ತಮ್ಮ ತಾಯಿ ತಮಗೆ ಹೆಸರಿಟ್ಟ ಆ ದತ್ತಾತ್ರಯನು ಹನ್ನೆರಡು ಸಾವಿರ ವರ್ಷ ತಪಸ್ಸು ಮಾಡಿದ ಸ್ಥಳ ಅದು. ಸಮುದ್ರ ಮಟ್ಟದಿಂದ ಸುಮಾರು ಹತ್ತು ಸಾವಿರ ಮೀಟರ್ ಎತ್ತರದಲ್ಲಿದೆ. ದತ್ತೋಪಾಸಕರು ಆ ಕ್ಷೇತ್ರಕ್ಕೆ ಭೇಟ ನೀಡಿ ಆ ಬೆಟ್ಟಕ್ಕೆ ಪರಿಕ್ರಮ ಕೈಕೊಳ್ಳುತ್ತಾರೆ. ಬೇಂದ್ರೆಯವರ ನಾಮ ಧೇಯದ ಕ್ಷೇತ್ರದ ಕಣಿವೆಯಲ್ಲಿ ಸೂರ್ಯನ ಬೆಳಕು ತುಂಬಿ ಕೋಡಿ ಬಿದ್ದು ಹರಿಯುತ್ತದೆ. ಕೋಡಿ ಬಿದ್ದ ಹರಿವ ನೀರನ್ಮು ಕುಡಿದು ನೀರಡಿಕೆಯನ್ನು ಕಳೆದುಕೊಳ್ಳಬೇಕು. ಆ ಕೋಡಿ ಹರಿಯುವದನ್ನು ಕಣ್ಣು ತುಂಬಿಕೊಳ್ಳಬೇಕು. ಕಣಿವೆಯನ್ನು ತುಂಬಿದ ತುಂಬಿದ ಸೂರ್ಯನ ಬೆಳಕು, ಕೈಲಾಸ ಶಿಖರದ ತುಂಬೆಲ್ಲಾ ಹರಡಿದೆ. ಕಣ್ಣ ಬಿಟ್ಟು ನೋಡಿದೆಲ್ಲೆಲ್ಲಾ ಅವನ ಬೆಳಕೇ ಬೆಳಕು. ಕೈಲಾಸ ಶಿಖರದಲ್ಲಿ ನಿಂತ ದೀಪಕ ದೃಷ್ಟಿ ನಮ್ಮಲ್ಲಿ ಮೂಡಬೇಕು. ದೀಪಕ ಎಂದರೆ ಹಸಿವನ್ನು ಉತ್ತೇಜಿಸುವ ಬೆಳಕು. ಆ ನೋಟ ಸಿಂಹಾವಲೋಕದಂತೆ ಇರಬೇಕು, ಇರುತ್ತದೆ.

'ದಿಂಬಿನಲಿ ಮೊಗದೋರಿ ಎಸಳನಾಯಾಳಿಸುತ, ಸಿಂಹಾವಲೋಕನದಿ ನೋಡುವಂತೆ'. ಈ ಸಾಲಿಗೆ ವಾಮನ ಬೇಂದ್ರೆಯವರು 1995 ರಲ್ಲಿ ಪ್ರಕಟವಾದ 'ಅರಳು ಮರಳು ಕೃತಿಗೆ ಸಂಪಾದಕರ ನುಡಿ ಬರೆದು ಹೀಗೆ ಹೇಳುತ್ತಾರೆ. '1957 ರ ಸುಮಾರಿಗೆ ಬೇಂದ್ರೆಯವರು ತಮ್ಮ ತಮ್ಮ ಕಾವ್ಯದ ಉದ್ಭವ ಎಂಬ ನಿಲುವಿನ ನಸುಕನ್ನು ಕಂಡರು. ಅವರ ಈ ನಿಲುವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಯಿತು. ಚಿತ್ತ ಭಿತ್ತಿಯ ಚಿತ್ರ ಮತ್ತು ನವ ಊರ್ಮಿ ಇವು ಈ ನಿಲುವಿನ ಪದ್ಯಗಳು. ಬೇಂದ್ರೆಯವರು ಮಲಗುವ ಹಾಸಿಗೆಯ ತಲೆದಿಂಬಿನ ಮೇಲಿನ ಅರಿವೆಯ ಹೊದಿಕೆಯ ನಕ್ಷೆ ಅವರಿಗೆ ಸಿಂಹದಂತೆ ಕಂಡಿತು. ಇದರಿಂದ ಈ ಸಾಲುಗಳು ನಿರ್ಮಿತವಾದವು. ಬೇಂದ್ರೆ ಉದ್ಭವ ಕಾವ್ಯಕ್ಕೆ ಈ ಸಾಲುಗಳು ಅತ್ಯುತ್ತಮ ಉದಾಹರಣೆ.

ಇಲ್ಲಿ ಇನ್ನೊಂದು ಅರ್ಥವೆಂದರೆ ದಿಂಬು( ದಿಂಬಿ) ಎಂದರೆ ಕಮಲದ ಬೀಜ ಕೋಶ. ಕಮಲಕ್ಕೂ ಬೇಂದ್ರೆಯವರ ಕಾವ್ಯದ ಪ್ರತಿಮೆ ಮತ್ತು ರೂಪಕ ದುಂಬಿಗೆ ಅವಿನಾವ ಭಾವ ಸಂಬಂಧ. ಆ ದುಂಬಿ ಕಮಲದ ಹೂವಿನಲ್ಲಿ ಅಡಗಿ ಹೂವಿನ ಎಸಳು ಎಸಳುಗಳನ್ನು ಆಲಯವನ್ನಾಗಿ ಮಾಡಿಕೊಂಡು, ಆನಂದ ಪಡುತ್ತಾ, ತನ್ನ ಸ್ನೇಹ ಸಂಬಂಧಿ ಸೂರ್ಯನನ್ನು ಸಿಂಹಾವಲೋಕನದಿ ನೋಡುತ್ತದೆ. ಈ ಅವಲೋಕನ ಕವಿಯ ಕಾವ್ಯ ಕರ್ಮಕ್ಕೆ ಅವಲೋಕನವನ್ನು ಕೊಡುತ್ತದೆ. ಇನ್ನೊಂದು ವಿಶೇಷತೆ ಎಂದರೆ ಸೂರ್ಯಪಾನ ಗಿಡ ತನ್ನ ಎಸಳುಗಳನ್ನು ಅಗಲಿಸಿ ಸೂರ್ಯನನ್ನು ಸಿಂಹಾವಲೋಕನದಿ ನೋಡುತ್ತ ನಿಲ್ಲುವ ಭಂಗಿಯು ತೋರುತ್ತದೆ
-3-.
'ಸೂರ್ಯಪಾನವ ನೋಡು ಹೇಗೆ ನಿಂತಿಹುದು,
ಎನುವಂತೆ-ದಿವ್ಯತೆಯ ದೀಕ್ಷೆ ಇರುತಿಹುದು.
ಮೇರುದಂಡವು ಚಿಗಿತು ಹೂತ ಹಾಗೆ.
ಹೃದಯದಾಕೂತಿಗಿದೆ ಕಣ್ಣು ಮೇಗೆ.'

'ಸೂರ್ಯಪಾನ'ಎಂದರೆ ಮಿದುಳಿನ ಶಕ್ತಿಯ ಸರಿಯಾದ ಹಾಗೂ ಹೆಚ್ಚಿನ ಉಪಯೋಗಕ್ಕೆ ಕಾರಣವಾಗುತ್ತದೆ. ಕಣ್ಣಿನ ಮೂಲಕ ಮಿದುಳಿಗೆ ಹಾಗೂ ದೇಹಕ್ಕೆ ತಲುಪುವ ಸೂರ್ಯನ ಕಿರಣಗಳು. ನಿತ್ಯ ಸೂರ್ಯಪಾನ ಮಾಡುವದರಿಂದ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಚೈತನ್ಯವಿರುತ್ತದೆ. ದೇಹವನ್ನು ಮತ್ತು ಮನಸ್ಸನ್ನು ನಿತ್ಯ ಸೂರ್ಯಪಾನಕ್ಕೆ ಒಡ್ಡಿಕೊಳ್ಳಬೇಕು. ಸೂರ್ಯಪಾನ ನಮ್ಮಲ್ಲಿ ದೀಕ್ಷೆಯಂತಾಗಬೇಕು. ಆಗ ದಿವ್ಯತೆ ಒಡಮೂಡುತ್ತದೆ. ಸೂರ್ಯಪಾನದಲ್ಲಿ ಕವಿ ಯೌಗಿಕಶಾಸ್ತ್ರದೊಂದಿಗಿನ ಸಂಬಂಧ ಹೇಳುತ್ತಾರೆ. 'ಮೇರುದಂಡವು ಚಿಗಿತು ಹೂತ ಹಾಗೆ' ಮೇರುದಂಡ ಎಂದರೆ ಬೆನ್ನುಮೂಳೆ. ಇದು ಪುರಾಣ ಮತ್ತು ಸಂಕೇತ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ. ಕುಂಡಲಿನಿ ಶಕ್ತಿ ಮಾರ್ಗದ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ. ಬೆನ್ನು ಮೂಳೆಯ ಬುಡದಲ್ಲಿರುವ ಸುಪ್ತ ಸುರುಳಿಯಯಾಕಾರದ್ದು ಇದು. ಮೇರುದಂಡದಲ್ಲಿ ಶಕ್ತಿ ಅಡಗಿದೆ.

ಮೇರುದಂಡ ಶಬ್ದವನ್ನು ಈ ನುಡಿಯಲ್ಲಿ ಬಳಸಿ ತೈತರಿ ವಲ್ಲಿಯ ಬೃಗು ಉಪನಿಷತ್ತಿನ ಸಂಪೂರ್ಣಸಾರವನ್ನು ತಂದು ಅರುಹಿದ್ದಾರೆ. 'ಹೃದಯದಾಕೂತಿಗೆ ಕಣ್ಣು ಮೇಗೆ' ಬೇಂದ್ರೆಯವರು ಒಂದು ಕಡೆ ಹೇಳುತ್ತಾರೆ ನನ್ನ ಮಹಾಕಾವ್ಯ ಎಂದರೆ ಹೃದಯ+ವಿವೇಕ ಎಂದು. ಇಲ್ಲಿ 'ಆಕೂತಿ'ಎಂಬ ಶಬ್ದ ಬಳಸಿದ್ದಾರೆ. ಆಕೂತಿ ಎಂದರೆ ಒಲವು,ಇಚ್ಛೆ ಮತ್ತು ಪ್ರೀತಿ. ಈ ಆಕೂತಿ ಎಂಬ ಶಬ್ದವನ್ನು ಬೇಂದ್ರೆ ತೆಗೆದುಕೊಂಡಿದ್ದು ಋಗ್ವೇದದ ಶಾಂತಿ ಮಂತ್ರದಿಂದ. 'ಸಮಾನೀವ ಆಕೂತಿ ಸಮಾನಾ ಹೃದಯಾ ನಿವ, ಸಮಾನ ಮಸ್ತು ಓ ಮನೋ, ಯಥಾವ್ ಸುಸಹಾಸತೆ'. ನಮ್ಮೆಲ್ಲರ ಉದ್ದೇಶ ಮತ್ತು ಆಕಾಂಕ್ಷೆಗಳು ಒಂದೇ ಆಗಿರಲಿ. ಆಗ ಅದು ನಮ್ಮೆಲ್ಲರನ್ನು ಒಂದು ಗೂಡಿಸುತ್ತದೆ, ಸಂತೋಷ ಪಡಿಸುತ್ತದೆ. ಸೂರ್ಯಪಾನ ಮಾಡುವದರಿಂದ ಮೇರುದಂಡವು ಚಿಗಿತು, ಸಂವೇದನಾ ಮಾರ್ಗವನ್ನು ಜಾಗ್ರತಗೊಳಿಸಿ, ಹೃದಯದ ಒಲವಿನಂತೆ ಕಣ್ಣು ಜ್ಞಾನದ ಬೆನ್ನು ಹತ್ತಿ ಮುಂದೆ-ಮುಂದೆ ಸಾಗುತ್ತದೆ. ಕವಿಯ ಆಶಯವೆಂದರೆ ಎಲ್ಲರೂ ನಿತ್ಯ ಸೂರ್ಯಪಾನ ಮಾಡಿರಿ.

MORE FEATURES

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...

ಕೃಷ್ಣನ ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ

22-04-2025 ಬೆಂಗಳೂರು

“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...

ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಬಗ್ಗೆ ಒಂದು ಚರ್ಚೆ

21-04-2025 ಬೆಂಗಳೂರು

ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...