ಇದು ಮಲಯಾಲಂ ಕವಿ ಮೊಯಿನ್ ಕುಟ್ಟೆ ವೈದ್ಯರು ಬರೆದಿರುವ 'ಬದರುಲ್ ಮುನೀರ್ ಹುಸುನುಲ್ ಜಮಾಲ್' ಎನ್ನುವ ಮಲಯಾಳಂ ಕಾವ್ಯದ ಕನ್ನಡ ರೂಪ. ಮಾಲಯಾಳಂ ಮಾಪಿಳ್ಳೆ ಹಾಡು ಗಳನ್ನು ಬ್ಯಾರಿ ಸಮುದಾಯ ತನ್ನದೆಂದು ಸ್ವೀಕರಿಸಿ ಸಂಭ್ರಮಿಸಿದ. ಒಂದು ಕಾಲದಲ್ಲಿ ಯಾವುದೇ ಮದುವೆ ಸಂಭ್ರಮಗಳಲ್ಲಿ ಮಲಯಾಳಂ ಮಾಪಿಳ್ಳೆ ಹಾಡುಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತಿದ್ದವು. ಇದೇ ಸಂದರ್ಭದಲ್ಲಿ ಮಾಪಿಳ್ಳೆ ಮಲಯಾಳಂನಿಂದ ಬಂದ ಮುಸ್ಲಿಮ್ ಬದುಕಿನ ಹಿನ್ನೆಲೆಯುಳ್ಳ ಕಾವ್ಯಗಳನ್ನು ಜನರು ಮನೆಮನೆಗಳಲ್ಲಿ ಜೋಪಾನ ಮಾಡಿಕೊಂಡಿದ್ದರು. ಆದರೆ ಅವುಗಳು ಅರಬಿ ಮಲಯಾಳಂನಲ್ಲಿ ಇದ್ದುದರಿಂದ ಕಾಲಕ್ರಮೇಣ ಅದರ ಓದುಗರು ಕಡಿಮೆಯಾಗುತ್ತಾ ಹೋದರು. ಜನರಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಪ್ರಜ್ಞೆ ಜಾಗೃತಗೊಂಡ ಬಳಿಕ ಇಂತಹ ಕಾವ್ಯಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಕೂಡ ನಿಷೇಧಕ್ಕೊಳಪಟ್ಟಿತು. ಆದರೆ ಜಾನಪದ ರೂಪದ ಈ ಕಾವ್ಯಗಳು ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಪಟ್ಟುದಲ್ಲ. ಅವುಗಳು ಸೃಜನಶೀಲತೆಗೆ ಸಂಬಂಧಪಟ್ಟದ್ದು. ಬಹುಶಃ ಮುಸ್ಲಿಮ್ ಕಾವ್ಯಲೋಕದಲ್ಲಿ ಈ ಬಗೆಯ ಪ್ರೇಮ, ಪ್ರಣಯ ಕಥನವನ್ನು ನಿರೂಪಿಸುವ ಕಾವ್ಯ, ಅತ್ಯಪೂರ್ವವಾದುದು. ಇದು ಒಂದು ರೀತಿಯಲ್ಲಿ ಮಾನವ ಮತ್ತು ಯಕ್ಷ ಲೋಕದ ನಡುವಿನ ಪ್ರೇಮ ಕತೆ. ಮುಸ್ಲಿಮರಲ್ಲಿ ಜಿನ್ನುಗಳ ಕುರಿತಂತೆ ನಂಬಿಕೆಗಳಿವೆ. ಜಿನ್ನುಗಳು ಮತ್ತು ಮನುಷ್ಯನ ನಡುವೆ ಪ್ರೇಮವೊಂದು ಅಗ್ನಿದಿವ್ಯದಲ್ಲಿ ಪುಟಗೊಂಡು ಅರಳುವ ಕಾವ್ಯ ಇದು. ಮೂಲದಲ್ಲಿ ಇದು ಛಂದೋಬದ್ದ ರಚನೆಯಾಗಿದ್ದು, ಅದನ್ನು ಇಲ್ಲಿ ಗದ್ಯರೂಪಕ್ಕೆ ಇಳಿಸಲಾಗಿದೆ.
©2024 Book Brahma Private Limited.