ಕನ್ನಡ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲಿ ಸಾಲಿ ರಾಮಚಂದ್ರರಾಯರೂ ಒಬ್ಬರು. ‘ಕನ್ನಡದ ಪುಲ್ಲೆನಗೆ ಪಾವನ ತುಲಸಿ’ ಎಂದು ಹಾಡಿದ್ದ ‘ಸಾರಾ’ ಕನ್ನಡದ ಮೊದಲ ವಿಲಾಪಗೀತೆ ಬರೆದವರು. ರಾಮಾಯಣ ಮಹಾಕಾವ್ಯ ಬರೆಯಲು ಹೊರಟು ಟೀಕಾಕಾರ್ಯರ ಟೀಕೆಗಳಿಗೆ ಬೇಸತ್ತು ಎರಡೇ ಭಾಗಗಳಿಗೆ ಪ್ರಕಟಣೆ ನಿಲ್ಲಿಸಿದವರು. ಸಾಲಿ ರಾಮಚಂದ್ರರಾಯರ ‘ಮಾನಸಪುತ್ರ’ ಎಂದು ಗುರುತಿಸಲಾಗುವ ಪಟ್ಟಣಶೆಟ್ಟಿ ಅವರು ಸಾಲಿಯವರ ಸಮಗ್ರ ಕಾವ್ಯ ಪ್ರಕಟಿಸಿದ್ದಾರೆ. 1944ರಲ್ಲಿಯೇ ಅನುವಾದ ಪೂರ್ಣಗೊಂಡಿದ್ದರೂ ಹಿಂಜರಿಕೆಯಿಂದ ಪ್ರಕಟಣೆ ಕಾಣದೆ ಹಸ್ತಪ್ರತಿಯಾಗಿಯೇ ಉಳಿದಿದ್ದ ಮೇಘದೂತವು ಮೊದಲ ಬಾರಿಗೆ ಪ್ರಕಟಣೆಯ ಭಾಗ್ಯ ಕಂಡಿದೆ. ‘ಕಾಲಿದಾಸನ ಅಂತರಂಗ ಮತ್ತು ಕಾವ್ಯರಂಗವನ್ನು ಸಂವೇದನಶೀಲ ಸಾಲಿಯವರು ಏಕಹೃದಯರಾಗಿ ಅರಿತಿದ್ದರು. ಮೂಲ ಭಾವ ಮತ್ತು ಕಾವ್ಯಕ್ಕೆ ಎಲ್ಲಿಯೂ ವ್ಯತ್ಯಯ ಬರದಂತೆ ಸಹೃದಯ ಭಾವದಿಂದ ಮೇಘದೂತವನ್ನು ಕನ್ನಡಿಸಿದ್ದಾರೆ. ಕವಿಗೌರವ, ಕಾವ್ಯಪ್ರೇಮ, ಸಂಸ್ಕೃತಜ್ಞಾನ, ಕನ್ನಡನಿಷ್ಠೆ, ಗೀತಾತ್ಮಕತೆಗಳುನ್ನು ಮೇಳವಿಸಿ ಸಾಲಿಯವರು ನೀಡಿದ ‘ಮೇಘದೂತ’ವು 1944ರಲ್ಲಿಯೇ ಪ್ರಕಟವಾಗಿದ್ದರೆ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮಹತ್ವದ ದಾಖಲೆಯಾಗಿ ಉಳಿಯುತ್ತಿತ್ತು’ ಎಂದು ಪುಸ್ತಕವನ್ನು ಸಂಪಾದಿಸಿದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಅಚ್ಚಗನ್ನಡ ಪದಗಳ ಬಳಕೆ ಈ ಮೇಘದೂತದ ವಿಶೇಷ.
©2024 Book Brahma Private Limited.