"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ್ಯೂ, ಇಲ್ಲಿನ ಪಾತ್ರಗಳು ತಂತಮ್ಮ ಆವರಣದಲ್ಲಿಯೇ ದೊಡ್ಡಮನುಷ್ಯರಾಗಿ ಬದುಕುತ್ತಾರೆ. ಎಲ್ಲರಿಗೂ ಅವರವರ ಆವರಣದ ಅರಿವಿದೆ. ಬೇರೆಯವರ ಆವರಣದ ಬಗ್ಗೆ ಗೌರವವೂ ಇದೆ. ಹಾಗಾಗಿ ಎಲ್ಲ ಘನತೆಯಿಂದ ಬದುಕುತ್ತಾರೆ," ಎನ್ನುತ್ತಾರೆ ಗುರುಪ್ರಸಾದ್ ಕಾಗಿನೆಲೆ. ಅವರು ದೀಪಾ ಜೋಶಿ ಅವರ ‘ತತ್ರಣಿ’ ಕೃತಿ ಕುರಿತು ಬರೆದ ವಿಮರ್ಶೆ
ನಾನು ಇತ್ತೀಚೆಗೆ ಓದಿದ ಒಂದು ವಿಶಿಷ್ಟ ಕಾದಂಬರಿ ’ತತ್ರಾಣಿ’. ಒಂದು ಕಾಲಘಟ್ಟದ ಮತ್ತು ಒಂದು ಕುಟುಂಬದ ಏರಿಳಿತಗಳ ಬದುಕನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ. ಇಲ್ಲಿನ ಪಾತ್ರಗಳೆಲ್ಲವೂ ಈ ಜಗತ್ತಿಗೆ ಬಂದಿರುವುದು ಕೇವಲ ಬದುಕಲು. ಎಲ್ಲರೂ ತಮಗೆ ಸಮಾಜ ಕಟ್ಟಿಕೊಟ್ಟ ಪರಿಧಿಯ ಒಳಗೇ ಜೀವನ ಮಾಡುತ್ತಾರೆ. ಯಾರಿಗೂ ತಮ್ಮ ಬದುಕಿನ ಬಗ್ಗೆ ಸಿಟ್ಟಾಗಲೀ, ಸೆಡವಾಗಲೀ ಅಥವಾ ಸಂತೋಷ, ಹೆಮ್ಮೆಗಳೂ ಇಲ್ಲ. ಇಲ್ಲಿನ ಮುಖ್ಯಪಾತ್ರ ಭುಜಂಗಾಚಾರ್ಯರು ಹುಟ್ಟಿರುವುದು ಮಾಧ್ವ ಬ್ರಾಹ್ಮಣರ ಮನೆಯಲ್ಲಿ. ಅವರು ಜೀವನ ಸಾಗಿಸಲು ಮಾಡುವ ಕೆಲಸಗಳು ಹತ್ತಾರು. ಗಡಿಯಾರದಂಗಡಿ ಇಡುತ್ತಾರೆ, ಲೌಡ್ ಸ್ಪೀಕರು, ಮೈಕುಗಳನ್ನು ಊರಿನ ಮುಸ್ಲಿಮರ ನಿಕಾಹ್‍ಗಳಿಗೂ ಬಾಡಿಗೆ ಕೊಡುತ್ತಾರೆ. ಹಸು ಕಟ್ಟಿ ಹಾಲು ಮಾರುತ್ತಾರೆ. ಪೇಡೆ ಮಾಡಿ, ಬಸ್‍ಸ್ಟ್ಯಾಂಡಿನಲ್ಲಿ ಮಾರಲು ಮಕ್ಕಳನ್ನು ಕಳಿಸುತ್ತಾರೆ, ಮನೆ ಕಟ್ಟಿಸುತ್ತಾರೆ, ಹತ್ತಾರು ಮಂದಿಯನ್ನು ಬದರಿಯ ತನಕ ತಮ್ಮದೇ ವ್ಯಾನಿನಲ್ಲಿ ಕರೆದೊಯ್ಯುತ್ತಾರೆ.
ಇವರು ಎಲ್ಲವನ್ನೂ ಕೇವಲ ಲೌಕಿಕರಾಗಿ ಮಾತ್ರ ಮಾಡುತ್ತಾರೆ, ಅಷ್ಟೇ ಲೌಕಿಕರಾಗಿ ಅನುಭವಿಸುತ್ತಾರೆ. ಮಠದ ಕೆಲಸವನ್ನೂ ’ಹುಸೇನಿ’ಯ ಜತೆ ಮಾಡಬಲ್ಲರು, ದೇವರ ಪೆಟ್ಟಿಗೆಯನ್ನು ಕಟ್ಟಿಕೊಂಡು ಹೋಗಿ ಯಾವುದೋ ದೇವಸ್ಥಾನದಲ್ಲಿ ಮೂರು ಕಲ್ಲುಗಳನ್ನಿಟ್ಟು ಯಾವ ಮುಲಾಜೂ ಇಲ್ಲದೆ ಎದುರಲ್ಲಿಯೇ ರಬ್ಬಾನಿಯ ಜತೆಜತೆಗೂ ಸ್ವಯಂಪಾಕ ಮಾಡಿಕೊಳ್ಳಬಲ್ಲರು. ಬದರೀಯಾತ್ರೆಯಲ್ಲಿ ಎಂಥಾ ಪರಿಪಾಟಲುಗಳು ಬಂದರೂ ಎಗ್ಗದೇ ಕುಗ್ಗದೇ ಯಾತ್ರೆ ಮುಗಿಸುತ್ತಾರೆ.
ಇದೆಲ್ಲದರ ಜತೆ ಮನೆಯ ನಿತ್ಯ ಜಂಜಾಟಗಳಾದ ದುಡಿಮೆ, ಮಕ್ಕಳ, ತಮ್ಮಂದಿರ ಹಾಗೊ ತಂಗಿಯ ಸಂಸಾರಕ್ಕೆ ನೆಲೆ ತೋರಿಸಲು ಎಲ್ಲ ರೀತಿಯಲ್ಲಿಯೂ ಹೊಡೆದಾಡುತ್ತಾರೆ. ಇವೆಲ್ಲದರ ಜತೆಜತೆಗೂ ಮನೆಯ ದೇವರ ಪೂಜೆ, ಉಪವಾಸ, ಪಾರಣೆ, ಶ್ರಾದ್ಧ ಎಲ್ಲವೂ ಆಚ್ಮ್ಮಾರ್ಯರಿಗೆ ದೈನಿಕದ ಅವಶ್ಯಕತೆಗಳು. ನಿಯಮಗಳು ಮಾತ್ರ. ನಾವು ಕೆಲಸಕ್ಕೆ ಹೋಗುವಾಗ ನಮಗೆ ಬೇಕಾಗುವ ಡ್ರೆಸ್ ಕೋಡ್, ಊಟ, ಹಾಗೂ ಕೆಲಸದ ಜಾಗದಲ್ಲಿ ನಾವು ಪಾಲಿಸುವ ಕಂಪೆನಿಯ ಬೈಲಾಗಳಿದ್ದಂತೆ ಇವರ ಪೂಜೆ, ಪುನಸ್ಕಾರ, ನೇಮ ನಿಷ್ಟೆಗಳು. ಅವನ್ನು ಮಾಡುವುದರಿಂದ ಏನು ಪ್ರಯೋಜನ ಎಂದು ಕೇಳದೇ, ಈ ನಿಯಮಗಳನ್ನು ಪಾಲಿಸದಿದ್ದರೆ ಏನು ತೊಂದರೆಯಾಗಬಹುದೆಂಬ ಹೆದರಿಕೆಗೋ ಅಥವಾ ನಿಷ್ಟೆಗೋ ಹೇಗಿರಬೇಕೆಂದು ಬೈಲಾಗಳಲ್ಲಿ ಬರೆದಿದೆಯೋ ಹಾಗೇ ಬದುಕುತ್ತಾರೆ. ಹಾಗೆ ಬದುಕುವುದರಿಂದ ಸಿಗಬಲ್ಲ ಪಾರಮಾರ್ಥಿಕ ಫಲಗಳ ಬಗ್ಗೆ ಇವರಿಗೆ ಚಿಂತೆಯಿಲ್ಲ. ಪಾರಮಾರ್ಥಿಕತೆಯ ಬಗ್ಗೆ ಅರಿವೂ ಇಲ್ಲ.
ಆದರೆ, ಬದರಿಗೆ ಹೋದವರು ಕೇದಾರಕ್ಕೆ ಹೋಗದೇ ಬರುವುದು ಮೂರ್ಖತನವೆಂಬ ಅರಿವೂ (ತಾವು ವೈಷ್ಣವರಾಗಿರುವುದರಿಂದ), ಹುಸೇನಿಯ ಮುಖದಲ್ಲಿ ಕೃಷ್ಣನ ಮುಖವನ್ನು ಕಾಣಬಲ್ಲ ಹೃದಯ ವೈಶಾಲ್ಯವೂ, ಕಾಶಿಯಲ್ಲಿ ಪ್ರಾಣಬಿಟ್ಟ ತುಳಜಕ್ಕನ ಮಿಕ್ಕಿದ ದುಡ್ಡನ್ನು ಅಲ್ಲಿನ ವಿಧವೆಯರಿಗೆ ಕೊಟ್ಟುಬರುವ ದೊಡ್ಡ ಮನಸಿದೆ. ಇಂಥ ವಿಷಯಗಳಲ್ಲಿ ಆಗುವ ನಿರ್ಧಾರ ಹೃದಯದ್ದು ಎಂಬ ಅರಿವೂ ಇವರಿಗಿದೆ.
ಹಾಗಾಗಿ ಒಬ್ಬ ಕಟ್ಟಾ entrepreneur ಒಂದು ಶತಮಾನದ ಹಿಂದೆ ರಾಣಿಬೆನ್ನೂರಿನ ಕಟ್ಟರ್ ಮಾಧ್ವರ ಮನೆಯಲ್ಲಿ ಹುಟ್ಟಿದರೆ ಅ ಜಗತ್ತಿನಲ್ಲಿಯೇ ಇದ್ದುಕೊಂಡು ಏನೇನು ಮಾಡಬಹುದೋ ಅವೆಲ್ಲವನ್ನೂ ಭುಜಂಗಾಚಾರ್ಯರು ಮಾಡುತ್ತಾರೆ.
ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ್ಯೂ, ಇಲ್ಲಿನ ಪಾತ್ರಗಳು ತಂತಮ್ಮ ಆವರಣದಲ್ಲಿಯೇ ದೊಡ್ಡಮನುಷ್ಯರಾಗಿ ಬದುಕುತ್ತಾರೆ. ಎಲ್ಲರಿಗೂ ಅವರವರ ಆವರಣದ ಅರಿವಿದೆ. ಬೇರೆಯವರ ಆವರಣದ ಬಗ್ಗೆ ಗೌರವವೂ ಇದೆ. ಹಾಗಾಗಿ ಎಲ್ಲ ಘನತೆಯಿಂದ ಬದುಕುತ್ತಾರೆ.
ಕೊಂಚ ಹೆಚ್ಚುಕಮ್ಮಿಯಾಗಿದ್ದರೂ ತಾತ್ವಿಕತೆಯ ಭಾರದಿಂದ ನಲುಗಬಹುದಾಗಿದ್ದ ಈ ಕಾದಂಬರಿಯನ್ನು ದೀಪಾ ಅವರು ಬಲು ನಾಜೂಕಿನಿಂದ ತಪ್ಪಿಸಿದ್ದಾರೆ. ಪಾತ್ರಗಳ ಬಗ್ಗೆ ಇವರಿಗೆ ಪೂರ್ವನಿರ್ಧರಿತ ಧೋರಣೆಗಳಿಲ್ಲ. ಹಾಗಾಗಿಯೋ ಏನೋ ಈ ಕಾದಂಬರಿಯ ನಿರೂಪಣೆಯಲ್ಲಿ ಒಂದು ರೀತಿ ಮಾಂತ್ರಿಕ ಮುಗ್ಢತೆ ದೊರಕಿದೆ. ಚಿಕ್ಕಮಗು ತನ್ನ ಬೆರಗುಗಣ್ಣುಗಳಿಂದ ತನ್ನ ಸುತ್ತ ಕಾಣುವ ಪ್ರಪಂಚವನ್ನು ನಿರೂಪಿಸುತ್ತಾ ಹೋದ ಹಾಗೆ ಅನಿಸುತ್ತದೆ. ಅದೇ ಮಗುವಿನ ಕಣ್ಣಿಂದಲೇ ನಮಗೂ ಈ ಪ್ರಪಂಚದ ಒಳಹೊರದಾರಿಗಳು ಲಭ್ಯವಾಗುತ್ತದೆ.
’ಇಲ್ಲಿ ಇದು ಯಾಕೆ?’ ಎಂಬುದು ಈ ಕಾದಂಬರಿಯಲ್ಲಿ ನಾವು ಕೇಳಕೊಳ್ಳಬಹುದಾದ ಪ್ರಶ್ನೆಯಲ್ಲ ಅಂತ ನನಗೆ ಅನಿಸಿತು. ‘ಇದರ ನಡುವೆಯೂ ಇವರಿದ್ದಾರೆ’ 'They lived despite this' ಎಂಬ ಮನಸ್ಥಿತಿಯಲ್ಲಿ ಓದಿದಾಗ ನಮ್ಮ ಎಲ್ಲ ಹೊರಗಿನ ಪೋಷಾಕು, ಮುಖವಾಡಗಳನ್ನು ತೊರೆಯಬಲ್ಲ ಕೇವಲ ಮನುಷ್ಯರ ದರ್ಶನವಾಗಬಹುದು
“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...
“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...
"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...
©2025 Book Brahma Private Limited.