ಯುವ ಕವಿ ಗೊಬ್ಬಿ ಅವರ ನಿರೂಪಣೆ ಶೈಲಿ ಮತ್ತು ಪಾತ್ರಗಳನ್ನ ಸೃಷ್ಟಿ ಮಾಡುವ ಚಾಕಚಕ್ಯತೆ ಪ್ರತಿಯೊಂದು ಕತೆಗಳಲ್ಲಿ ಬಹಳ ಕೆಲಸ ಮಾಡಿದೆ. ಮೂಲಭೂತ ಸೌಕರ್ಯಗಳ ವಿರುದ್ದ ,ಜಾತಿ ಧರ್ಮದ ವಿರುದ್ದ ಲೇಖಕರು ಬರೆಯುವಾಗ ಬಂಡಾಯ ಚಿಂತನೆಗಳು ಹೊರಹೊಮ್ಮಿವೆ ಎನ್ನುತ್ತಾರೆ ಲೇಖಕ ಕಲಿರಾಜ್ ಹುಣಸೂರು. ಯುವ ಕವಿ ಆನಂದ್ ಗೊಬ್ಬಿ ಅವರ ನಿರುದ್ಯೋಗಕ್ಕೆ ಹೆಣವಾದ ಅಪ್ಪ ಕಥಾಸಂಕಲನದ ಬಗೆಗೆ ಅವರು ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದು, ನಿಮ್ಮ ಓದಿಗಾಗಿ..
ಭರವಸೆ ಮೂಡಿಸಿದ ಯುವ ಕವಿ ಆನಂದ್ ಗೊಬ್ಬಿ.
"ಕತೆಗಾರ" ಆನಂದ್ ಎಸ್ ಗೊಬ್ಬಿ ಅವರು ಅದ್ದೂರಿಯಾಗಿ ಸೆರೆ ಹಿಡಿದು ರಚಿಸಿರುವ ಕತೆಗಳೆಲ್ಲವೂ ಸಾಮಾಜಿಕವಾಗಿ ಬಹಳ ಪರಿಣಾಮ ಬೀರುತ್ತಿರುವೆ. "ನಿರುದ್ಯೋಗಕ್ಕೆ ಹೆಣವಾದ ಅಪ್ಪ" ಎಂಬ ಕಥಾಸಂಕಲನ ಓದುಗನನ್ನ ಮತ್ತೊಂದು ಮಗ್ಗುಲಿಗೆ ಹೊರಳುವಂತೆ ಮಾಡುತ್ತದೆ.
ಲೇಖಕರು ಬಹಳ ಪ್ರೀತಿಯಿಂದ ಪುಸ್ತಕ ಕಳಿಸಿಕೊಟ್ಟಿದ್ದರು. ತುಂಬಾ ದಿನಗಳ ನಂತರ ಒಂದಷ್ಟು ವಿವರಣೆ ನೀಡುತ್ತಿದ್ದೇನೆ .
ಲೇಖಕರ ಚಿಂತನೆಗಳು ಪಕ್ವಗೊಂಡಿವೆ.ಭಾಷಶೈಲಿ ಬಹಳ ಪ್ರಭಾವಶಾಲಿಯಾಗಿ ಹೊರಬಂದಿದೆ.
ಯುವ ಕವಿ ಆನಂದ್ ಎಸ್ ಗೊಬ್ಬಿ ಅವರ ಕತೆಗಳಲ್ಲಿ ಬಡತನ ,ನೋವು ,ಮತ್ತು ನಿತ್ಯ ಜೀವನದಲ್ಲಾಗುವ ಬೆಳವಣಿಗೆಗಳು,ಆಗಿರುವ ಮತ್ತು ಮುಗಿದು ಹೋಗಿರುವ ಕೆಲವು ಘಟನಾವಳಿಗಳು ಮನುಷ್ಯನ ಕ್ರೌರ್ಯ,ಲಾಲಸೆ, ಕಾಮ, ಮದ ,ಮತ್ಸರ್ಯ ,ಅಹಂಮಿಕೆ, ಇಂತಹ ವಿಷಯಗಳನ್ನೆಲ್ಲ ಪ್ರತಿಯೊಂದು ಕತೆಗಳಲ್ಲಿ ಕಟ್ಟಿಕೊಟ್ಟಿರುವ ಲೇಖಕರ ದೂರದೃಷ್ಟಿ ಅಪಾರ.ಮತ್ತು ವಾಸ್ತವದ ಸ್ಥಿತಿಗಳ ಬಗೆಗಿನ ಜ್ಞಾನದ ಬೆಳಕು ಲೇಖನಿಯಿಂದ ಹರಡಿಕೊಂಡಿದೆ. ಒಟ್ಟು ಎಂಟು ಕತೆಗಳಲ್ಲಿ ಎಲ್ಲವೂ ವಿಭಿನ್ನವಾಗಿ ಚಿತ್ರಿತಗೊಂಡಿವೆ.
ಒಂಟಿ ಹೆಂಗಸು ಕಮಲಮ್ಮನ ಪಾತ್ರದ "ಗಿರಿಕನ್ಯೆ" ಕತೆ ನನಗೆ ಬಹಳ ಸೆಳೆಯಿತು. ಸ್ವತಂತ್ರವಾಗಿ ಬದುಕು ಕಟ್ಟಿಕೊಂಡು ಸಾಗುವ ಕಮಲಮ್ಮನ ಬಗ್ಗೆ ಸಮಾಜ ಹೇಗೆಲ್ಲಾ ವರ್ತಿಸುತ್ತೆ.ಹಿಂದೆ ಮುಂದೆ ಏನೆಲ್ಲಾ ಮಾತಾನಾಡುತ್ತೆ ಎಂಬ ವಿಷಯದ ಸಂಗ್ರಹವನ್ನೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಛಲಗಾತಿ ಹೆಣ್ಣಿನ ರೀತಿ ಬದುಕಿ ಕಮಲಮ್ಮ ತಮ್ಮ ಮಗಳಿಗೆ ಮದುವೆ ಮಾಡುವ ಪ್ರಸಂಗ ಹಾಗೂ ಊರುಕೇರಿಯ ಜನರ ಕಣ್ಣುಗಳು ಮತ್ತು ಮನಸ್ಸುಗಳ ಹೀನಾಯ ಮನಸ್ಥಿತಿಯನ್ನ ಲೇಖಕರು ಸೆರೆ ಹಿಡಿದು ಕತೆಯನ್ನ ಅಂತ್ಯ ಮಾಡಿರುವ ತಂತ್ರಗಾರಿಕೆ ಮೆಚ್ಚುಗೆ ಆಯಿತು.
"ಆಲದ ಮರ" ಕತೆಯಲ್ಲಿ ಸ್ವತಃ ನಾನು ನನ್ನ ತಂದೆಯನ್ನೇ ಕಂಡೆ.ಅಷ್ಟೊಂದು ಫಿಲ್ ಅಂಶಗಳನ್ನ ವಿವರಣೆ ನೀಡಿದ್ದಾರೆ.ದೇವಿಪುರಾ ಕತೆಯನ್ನ ಓದುವಾಗ ಲೇಖಕರ ದನಿ ಎಲ್ಲಾ ಕಡೆ ಸಾಗಿದೆ.ಅಕ್ರಮ ಸಕ್ರಮಗಳ ಬಗ್ಗೆ ಲೇಖಕರು ಮಾರ್ಮಿಕವಾಗಿ ,ಹಾಗೂ ಪರೋಕ್ಷವಾಗಿ ಸಮಾಜಕ್ಕೆ ಚಾಟಿ ಬೀಸಿದ್ದಾರೆ. ಸಾಹುಕಾರ ಸಿದ್ದಪ್ಪಗೌಡನ ಹಿಟ್ಲರ್ ಧೋರಣೆಗಳನ್ನ ವಿರೋಧ ಮಾಡುವ ಮಾಸ್ತರ್ ಪಾತ್ರ ವನ್ನ ಕತೆಯೊಳಗೆ ಬಿಂಬಿಸಿ ದೇವಿಪುರದಲ್ಲಿ ಮಹಾಕ್ರಾಂತಿಯನ್ನೆ ಸೃಷ್ಟಿ ಮಾಡಿ ಗೌಡನ ನಿದ್ದೆಗೆಡಿಸುವ ದೃಶ್ಯಗಳನ್ನ ದೇವಿಪುರ ಕತೆಯಲ್ಲಿ ಮರೆಯಲಾದೀತೆ? ಈ ಕತೆ ಓದುವಾಗ ಸ್ವತಃ ಓದುಗನೇ ಅನ್ಯಾಯದ ವಿರುದ್ದ ಸಿಡಿದು ನಿಲ್ಲುವಂತೆಯೇ ಬಾಸವಾಗುತ್ತದೆ ಎಂದರೇ ಲೇಖಕರ ಚಿಂತನೆಗಳು ಗಟ್ಟಿಯಾಗಿಯೇ ನೆಲೆಸಿವೆ ಎಂದರ್ಥ. ಯಾವುದೇ ಒಬ್ಬ ಲೇಖಕ ಸಾಮಾಜಿಕವಾಗಿ ಚಿಂತನೆಗಳನ್ನ ಹರಿದುಬಿಡುವಾಗ ಸಾಹಿತ್ಯ ರಂಗದಲ್ಲಿ ಸುಭದ್ರವಾಗಿ ಬೇರೂರುತ್ತಾನೆ. ಕುವೆಂಪು ಅವರ ಮಾತುಗಳು ಈ ಸಂಧರ್ಭದಲ್ಲಿ ನೆನಪಿಗೆ ಬರುತ್ತವೆ.
ಆನಂದ್ ಗೊಬ್ಬಿ ಅವರು ಮೊದಲ ಕತೆಯ ರಚನೆಯಲ್ಲಿಯೇ ತಮ್ಮ ಸಾಮಾರ್ಥ್ಯ ಸಾಬೀತುಪಡಿಸಿ ಮಿಕ್ಕ ಕತೆಗಳ ರಚನೆಯಲ್ಲೂ ಗಟ್ಟಿಯಾಗುತ್ತಾ ಹೋಗಿದ್ದಾರೆ. ಹುಳಿ ಮೊಸರು ಕತೆಯಲ್ಲಿ ದಾಂಪತ್ಯದ ವಿರಸ ಸಾಗಿದೆ. ಲೇಖಕರು ಈ ಕಥಾವಿಷಯವನ್ನ ಮತ್ತಷ್ಟು ವಿಸ್ತರಿಸಬಹುದಿತ್ತು ಎಂದೆನಿಸಿದರೂ, ಕತೆ ಸಾಮಾಜಿಕವಾಗಿ ಪ್ರಭಾವ ಬೀರಿ ಒಳ್ಳೆಯ ಸಂದೇಶ ನೀಡಿದೆ.
ಸಾವಿನ ಸುತ್ತ ಕತೆಯಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಲೇಖಕರು ತಿಳಿ ಹೇಳಿದ್ದಾರೆ.ಸೊಸೆಯಂದಿರ ಸಿಹಿ ಸಿಹಿ ಭಾಷಣ ಯಾತಕ್ಕಾಗಿ ಬಂತೆಂದು ಹಾಗೂ ಸಾವಿಗೀಡಾದ ಮಲ್ಲಪ್ಪನ ಹೆಂಡತಿಯ ಶವ ಸಂಸ್ಕಾರ ಹೇಗೆಲ್ಲಾ ರೂಪ ಪಡೆದುಕೊಳ್ಳುತ್ತೆ ಎಂಬುದನ್ನ ಕತೆಯನ್ನ ಓದಿಯೇ ತಿಳಿಯಬೇಕು.ಮಕ್ಕಳು ಅಂತ ಇದ್ದರೆಷ್ಟು? ಬಿಟ್ಟರೆಷ್ಟು ?ತಂದೆ ತಾಯಿಗಳ ಯೋಗ ಕ್ಷೇಮ ವಿಚಾರಿಸದಿದ್ದಲ್ಲಿ!!.ಈ ಕತೆಯಲ್ಲಿ ಲೇಖಕರ ಲೇಖನಿ ಝಳಪಳಿಸಿದೆ.ಮಾಡರ್ನ್ ಸೊಸೆಯಂದಿರಿಗೆ ಚಾಟಿ ಬೀಸಿದಂತಿದೆ.
"ನಿರುದ್ಯೋಗಕ್ಕೆ ಹೆಣವಾದ ಅಪ್ಪ"ಎಂಬ ಕತೆ ಈ ಕೃತಿಯೊಳಗಿನ ಬಹಳ ಅಮೂಲ್ಯ ಕಥಾವಸ್ತು.ಮತ್ತು ಕೃತಿಯ ಶೀರ್ಷಿಕೆಯೂ ಸಹ ಇದೇ ಆಗಿರುವುದರಿಂದ ಓದುಗ ದೊರೆಗಳ ಗಮನ ಸೆಳೆದಿದೆ.ಈ ಕೃತಿಗೆ ತಕ್ಕನಾದ ನಾಮಕರಣ ಮಾಡಿರುವುದು ಸ್ವಾಗತರ್ಹ.
ಉದ್ಯೋಗದ ಆಸೆಗಾಗಿ ತನ್ನ ತಂದೆಯನ್ನ ಕೊಲೆ ಮಾಡುವ ಸಂಚು ರೂಪಿಸುವ ಮೂರ್ತಿ ,ಬಹಳ ಕಟುಕನಾಗಿ ಈ ಕತೆಯೊಳಗೆ ಬಂದು ಓದುಗರಿಗೂ ಭಯ ತರಿಸುತ್ತಾನೆ ಎಂದರೇ ಲೇಖಕರ ಕಾರ್ಯ ವೈಖರಿಗೆ ಚಪ್ಪಾಳೆ ತಟ್ಟಲೇ ಬೇಕು. ಮೂರ್ತಿಯ ತಂದೆ ಸಾಗರನಿಗೆ ಕೊಲೆ ಮಾಡುವ ಸಂಚು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮತ್ತು ಗೆಳೆಯ ಜಾರ್ಜ್ ಮನೆಯಲ್ಲಿ ಏಕಾಂತವಾಗಿ ಇದ್ದಾಗ ಸಾಗರ್ ನ ಮನಸ್ಥಿತಿಯ ತಳಮಳಗಳನ್ನ ಲೇಖಕ ಗೊಬ್ಬಿ ಸರ್ ಅವರು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಅಂತಿಮ ಕತೆಯಾದ "ನಿಜ ಬದುಕಿನ ಪ್ರೀತಿ ಪಯಣದಲ್ಲಿ"ಕಥಾವಸ್ತುವಿನಲ್ಲಿ ಸ್ವತಃ ನಾನೇ ಕತೆಯೊಳಗೆ ಆವರಿಸಿದ್ದೀನಿ ಎನ್ನುವಷ್ಟು ಅಂದವಾಗಿ ಕಟ್ಟಿಕೊಟ್ಟಿದ್ದಾರೆ. ಮಗು ಆದ ನಂತರ ತವರು ಮನೆಗೆ ಹೆಂಡತಿಯನ್ನ ಕಳಿಸಿ ತದನಂತರ ಉದ್ಬವವಾಗುವ ,ಪಯಣದಲಿ ಸಿಗುವ ಹಲವಾರು ಪಾತ್ರಗಳಲ್ಲಿ ಲೇಖಕರು ಓದುಗನ ಎದೆಯಲಿ ಅಮರವಾಗಿ ನೆಲೆಸುತ್ತಾರೆ.
"ವ್ಯಕ್ತಿತ್ವದ ಒಳ ಸಾರ" ಎಂಬ ಕತೆಯ ಸಂದೇಶವನ್ನ ಮರೆಯಲು ಸಾಧ್ಯವಾಗುವುದಿಲ್ಲ.ಸಿದ್ದನ ಪಾತ್ರ ಮನಸ್ಸಿನಾಳದಲಿ ನೆಲೆಯೂರುತ್ತೆ.ಲೇಖಕರು ಬಳಸಿರುವ ಭಾಷ ಶೈಲಿ ಬಗ್ಗೆ ನನ್ನ ಯಾವುದೇ ರೀತಿಯ ಸ್ವ ಅಭಿಪ್ರಾಯ ಇಲ್ಲ.
ಲಂಕೇಶರ ಅಕ್ಕಾ ಕಾದಂಬರಿ ಇಂತಹ ಭಾಷ ಶೈಲಿಯಿಂದಲೇ ಜನಮನ್ನಣೆ ಗಳಿಸಿತ್ತು.
ಯುವ ಕವಿ ಗೊಬ್ಬಿ ಅವರ ನಿರೂಪಣೆ ಶೈಲಿ ಮತ್ತು ಪಾತ್ರಗಳನ್ನ ಸೃಷ್ಟಿ ಮಾಡುವ ಚಾಕಚಕ್ಯತೆ ಪ್ರತಿಯೊಂದು ಕತೆಗಳಲ್ಲಿ ಬಹಳ ಕೆಲಸ ಮಾಡಿದೆ.
ಮೂಲಭೂತ ಸೌಕರ್ಯಗಳ ವಿರುದ್ದ ,ಜಾತಿ ಧರ್ಮದ ವಿರುದ್ದ ಲೇಖಕರು ಬರೆಯುವಾಗ ಬಂಡಾಯ ಚಿಂತನೆಗಳು ಹೊರಹೊಮ್ಮಿವೆ.
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಅವರ ತತ್ವ ಆದರ್ಶಗಳು ಕೆಲಸ ಮಾಡಿದಂತೆ ಗೊಬ್ಬಿ ಅವರ ವಿಚಾರಧಾರೆಗಳು ಇಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿವೆ.
ಬಹಳ ಚಿಕ್ಕವಯಸ್ಸಿಗೆ ಇಂತಹ ಅಮೂಲ್ಯ ಕೃತಿಯನ್ನ ರಚಿಸಿ ಗೊಬ್ಬಿ ಅವರು ತಮ್ಮ ಸೃಜನಶೀಲತೆ, ಪ್ರಬುದ್ದತೆ, ಮತ್ತು ಸಾಹಿತ್ಯ ರಂಗದಲ್ಲಿ ಶಾಶ್ವತವಾಗಿ ನೆಲೆಯೂರುವಂತಹ ವ್ಯಕ್ತಿತ್ವವನ್ನ ರೂಢಿಸಿಕೊಂಡು ಸಾಗುತ್ತಿರುವುದು ಖುಷಿ ತರಿಸುತ್ತದೆ.
ಅಮರೇಶ ನುಗಡೋಣಿ ಅವರ ಮುನ್ನುಡಿ ಬಹಳ ಗಮನ ಸೆಳೆದು ಒಂದೈದು ಆರು ಬಾರಿ ಪದೇ ಪದೇ ಓದುವಂತೆಯೂ ಪ್ರೇರೇಪಿಸಿತು.ಅಚ್ಚುಕಟ್ಟಾಗಿ ಬೆನ್ನುಡಿ ಬರೆದಿರುವ ಡಾ.ವೆಂಕಟೇಶ ಕೆ.ಕೊಲ್ಲಿ ಅವರ ಸೂಕ್ಷ್ಮ ವಿಷಯಗಳು ಗಮನ ಸೆಳೆದು ನಮ್ಮಂತಹ ಓದುಗರಿಗೆ ಆತ್ಮ ವಿಶ್ವಾಸ ಮೂಡಿಸುವಂತಹ ವಿಷಯ ಹಂಚಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದ ಗ್ರಾಮೀಣ ಭಾಷ ಬಳಕೆಯೇ ಮರೆಯಾಗುತ್ತಿರುವ ಸಂಧರ್ಭದಲ್ಲಿ ಗೊಬ್ಬಿ ಅವರು ಗ್ರಾಮೀಣ ಭಾಷೆಗೆ ಜೀವತುಂಬುವ ಲೇಖಕರಾಗಿ ಹೊರಹೊಮ್ಮುತ್ತಿರುವುದು ಖುಷಿಯ ವಿಚಾರ.
ಗೊಬ್ಬಿ ಅವರ ಸರಳತನ,ಮತ್ತು ಜ್ಞಾನದ ಬಗ್ಗೆ ಅಹಂ ಇಲ್ಲದ ವ್ಯಕ್ತಿತ್ವ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ರೀತಿಯ ಸಿದ್ದಾಂತಗಳಿಗೆ ಒಗ್ಗಿಕೊಳ್ಳದೇ, ವಾಸ್ತವದ ಬಗ್ಗೆ ಗಟ್ಟಿಯಾಗಿ ಮಾತನಾಡುವ ಯುವ ಲೇಖಕರಾಗಿ ,ಕತೆಗಾರರಾಗಿ ,ಕವಿಯಾಗಿ ,ತಮ್ಮ ಮೃದುತ್ವ ವ್ಯಕ್ತಿತ್ವದಿಂದ ಎಲ್ಲರ ಹೃದಯ ಗೆದ್ದು ಸಾಗುತ್ತಿರುವ ಆನಂದ್ ಗೊಬ್ಬಿ ಅವರ ಸಾಹಿತ್ಯದ ಬದುಕು ಪ್ರಜ್ವಲಿಸಲಿ.
ಕೃತಿ ನನಗೆ ಬಹಳ ಇಷ್ಟವಾಯಿತು.ಶುಭವಾಗಲಿ ಕವಿಮಿತ್ರರಿಗೆ. ಇಪ್ಪತ್ತ ಏಳುವರ್ಷದವರಾದ ಆನಂದ್ ಅವರ ಚಿಂತನೆಗಳು ನೂರ್ಮೂಡಿಯಾಗಿ ನಾಡಿಗೆ ಮತ್ತಷ್ಟು ಕೃತಿಗಳನ್ನ ಉಡುಗೊರೆ ನೀಡಲಿ ಎಂದು ಹಾರೈಸುವೆ.
- ಕಲಿರಾಜ್ ಹುಣಸೂರು
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.