Date: 25-08-2020
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಚೀನಾದ ಆಯ್ ವೇಯಿ ವೇಯಿ ಅವರ ಬಗ್ಗೆ ಬರೆದಿದ್ದಾರೆ.
ಕಲಾವಿದ: ಆಯ್ ವೇಯಿ ವೇಯಿ (Ai Wei Wei)
ಜನನ: 28 ಆಗಸ್ಟ್ 1957 (ವಾಯವ್ಯ ಚೀನಾದ ಹೈಲಾಂಗ್ಜಿಯಾಂಗ್ ಪ್ರಾಂತ್ಯದ ಬೇದಾಹುವಾಂಗ್)
ಶಿಕ್ಷಣ: ಬೀಜಿಂಗ್ ಫಿಲ್ಮ್ ಅಕಾಡೆಮಿಯಲ್ಲಿ ಆನಿಮೇಶನ್ ಕಲಿಕೆ
ವಾಸ: 2015ರಲ್ಲಿ ಚೀನಾದಿಂದ ಹೊರತೆರಳಲು ಅವಕಾಶ ಕೊಟ್ಟ ಬಳಿಕ ಜರ್ಮನಿಯ ಬರ್ಲಿನ್, 2019ರಿಂದ ಕೇಂಬ್ರಿಜ್, ಇಂಗ್ಲಂಡ್
ಕವಲು: ಎಕ್ಸೆಸಿವಿಸಂ
ವ್ಯವಸಾಯ: ಶಿಲ್ಪಗಳು, ಇನ್ಸ್ಟಾಲೇಷನ್ ಗಳು, ಫೊಟೊಗ್ರಾಫ್ ಗಳು, ಸಾರ್ವಜನಿಕ ಶಿಲ್ಪಗಳು.
ಪರಿಚಯ ಕ್ಕೆ 'ಇಲ್ಲಿ' ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಗೆ 'ಇಲ್ಲಿ' ಕ್ಲಿಕ್ ಮಾಡಿ
ಕಳೆದ ತಿಂಗಳು ಲಾಸ್ ಏಂಜಲಿಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕೊರೊನಾ ಜಗನ್ಮಾರಿಯ ಕುರಿತು ಕಲಾವಿದ ಆಯ್ ವೇಯಿ ವೇಯಿ ಹೇಳಿದ್ದು ಹೀಗೆ: ನಮ್ಮ ಜಾಗತಿಕ ರಾಜಕೀಯ, ಆರ್ಥಿಕ ಸ್ಥಿತಿ, ಧಾರ್ಮಿಕ ಭಿನ್ನತೆಗಳೆಲ್ಲದರ ಹೊರತಾಗಿ COVID-19 ನಮ್ಮನ್ನು ಕಾಡುತ್ತಿದೆ. ಈ ರೀತಿ ಬೇರಾವುದೂ ಹೀಗೆ ನಮ್ಮ ಮಾನವೀಯತೆ, ಬುದ್ಧಿಶಕ್ತಿ, ವೈಜ್ಞಾನಿಕ ಬೆಳವಣಿಗೆಗಳು ಮತ್ತು ಸರಕಾರದ ನಿಯಂತ್ರಣಗಳ ಸ್ಥಿತಿಯನ್ನು ಸಾಣೆಗೆ ಒಡ್ಡಿದ್ದಿಲ್ಲ. ಮನುಷ್ಯ ಸಮಾಜ ಎಷ್ಟು ದುರ್ಬಲ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಅಂದರೆ ನಾವು ಊಹಿಸಲೂ ಸಾಧ್ಯವಾಗದ ಸಂಗತಿಗಳು ಸಂಭವಿಸಬಹುದು. ಈ ಜಗನ್ಮಾರಿ ಮಾನವೀಯತೆಗೆ ಬಂದೊದಗಿದ ಸಂಕಟ. ಏಕೆಂದರೆ, ಮಾನವ ಎಷ್ಟು ಅಸುರಕ್ಷಿತ ಮತ್ತು ಮನುಷ್ಯ ಸಮಾಜ ಹೇಗೆ ಸುಲಭದಲ್ಲೇ ನಾಶ ಆಗಬಹುದೆಂಬುದನ್ನು ಅದು ತೋರಿಸಿಕೊಟ್ಟಿದೆ.”
ಚೀನಾ ಕಂಡ ಅತ್ಯಂತ ವಿವಾದಾಸ್ಪದ ಸಮಕಾಲೀನ ಕಲಾವಿದ, ರಾಜಕೀಯ ಆಕ್ಟಿವಿಸ್ಟ್ ಆಯ್ ವೇಯಿ ವೇಯಿ ಅವರ ತಂದೆ ಚೀನಾದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಆಯ್ ಕ್ವಿಂಗ್ (Ak Quing). ಅಂದಿನ ಚೀನಾ ಆಡಳಿತಕ್ಕೆ ಎದುರು ಮಾತನಾಡಿದ್ದಕ್ಕಾಗಿ 1950ರ ಉತ್ತರಾರ್ಧದಲ್ಲಿ ಚೀನಾ ಆಡಳಿತದ ಲೇಬರ್ ಕ್ಯಾಂಪಿನಲ್ಲಿ ಶಿಕ್ಷೆ ಅನುಭವಿಸಿದ್ದ ಕ್ವಿಂಗ್, 1978ರ ತನಕವೂ ಅಲ್ಲಿ ಪಾಯಖಾನೆ ತೊಳೆಯುತ್ತಿದ್ದರು. ಆಯ್ ಮಟ್ಟಿಗೆ, ಹಳೆಯ ಚೀನಾ ಎಂದರೆ ಖಾಲಿತನ. ಅಲ್ಲಿನ ಖಾಲಿತನ ಎಷ್ಟು ಗಾಢವಾದದ್ದೆಂದರೆ ಜನರ ಮುಖದಲ್ಲಿ ಭಾವನೆಗಳಿರಲಿಲ್ಲ. ಸಾಂಸ್ಕೃತಿಕ ಕ್ರಾಂತಿಯ ಬಳಿಕವೂ ಜನರಲ್ಲಿ ನಗಬಲ್ಲ, ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಸ್ನಾಯುಗಳು ಬೆಳೆದಿರಲಿಲ್ಲ. ಇಡಿಗೆ ಇಡೀ ನಗರ ನಿಧಾನಿ, ಶಾಂತ, ವಿಷಣ್ಣ ಬೂದು ಬಣ್ಣ ಎಲ್ಲೋ ಸ್ವಲ್ಪ ನೀಲಿ ಬಣ್ಣ ಹೊದ್ದಿತ್ತು. ಆಗೆಲ್ಲ ಒಂದು ಹಳದಿ ಕೊಡೆ ಕಾಣಿಸಿದರೆ ಅದೇ ಶಾಕಿಂಗ್ ಅನ್ನಿಸುತ್ತಿತ್ತು ಎಂದು ಮೆಲುಕು ಹಾಕುತ್ತಾರೆ ಅವರು.
1981ನಲ್ಲಿ ಚೀನೀಯರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ಸಿಕ್ಕ ಮೊದಲಲ್ಲೇ ಅಮೆರಿಕಕ್ಕೆ ಪ್ರಯಾಣಿಸಿದ ಆಯ್, ಅಲ್ಲಿ 12ವರ್ಷಗಳ ಕಾಲ ನ್ಯೂಯಾರ್ಕ್ ನಗರದಲ್ಲಿದ್ದರು. ಕಾನ್ಸೆಪ್ಚುವಲ್ ಮತ್ತು ದಾದಾಯಿಸ್ಟ್ ಕವಲಿನಿಂದ ಪ್ರಭಾವಿತರಾಗಿದ್ದ ಆಯ್, ಆಗ ಹೆಚ್ಚು ಜನರ ಕಣ್ಣಿಗೆ ಬಿದ್ದಿರಲಿಲ್ಲ. 1993ರಲ್ಲಿ ತಂದೆಯ ಅನಾರೋಗ್ಯದ ಕಾರಣಕ್ಕೆ ಚೀನಾಕೆ ಹಿಂದಿರುಗಿದ ಆಯ್, ಚೀನಾದಲ್ಲಿ ಡೆಂಗ್ ಕ್ಸಿಯಾವೊಪಿಂಗ್ ಆಡಳಿತದಲ್ಲಿ ಜನ ಫ್ಯಾಷನ್ ಮತ್ತು ಅಧಿಕಾರಕ್ಕೆ ಹತ್ತಿರ ಇರುವವರ ಭರಾಟೆ (ಕ್ರೋನಿಯಿಸಂ)ಗಳಿಂದ ಆಘಾತಗೊಂಡರು. ಹೊಸ ಚೀನಾ ಅವರಿಗೆ ಗೇಲಿಗೆ ಸರಕಾಯಿತು. ಬಂಡವಾಳಶಾಹಿ-ಕಮ್ಯೂನಿಸ್ಟ್ ಎರಡೂ ವಿಧದ ನಿಯಂತ್ರಣಗಳಿಗೆ ಸತತ ಪ್ರತಿರೋಧ ತೋರುತ್ತಾ ಹೋದ ಆಯ್, “ಶಿಕ್ಷಣ ಯೋಚಿಸಲು ಕಲಿಸಬೇಕು, ಆದರೆ ಅದೀಗ ಪ್ರತಿಯೊಬ್ಬರ ಯೋಚನೆಯನ್ನು ನಿಯಂತ್ರಿಸುವ ಪರಿಕರ ಆಗುತ್ತಿದೆ. ಸರ್ಕಾರ ಮುಕ್ತ ಚರ್ಚೆಗೆ ಭಯ ಪಡುತ್ತಿದೆ” ಎನ್ನುತ್ತಾರೆ.
ಇಂದು ಚೀನಾ ಸರಕಾರದ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಕಲಾವಿದ ಆಯ್ (ಅವರನ್ನು 2011ರಲ್ಲಿ ಚೀನಾ ಆಡಳಿತ ಯಾವುದೇ ವಿಚಾರಣೆ ಇಲ್ಲದೆ ಎಂಟು ತಿಂಗಳ ಕಾಲ ತೆರಿಗೆ ವಂಚನೆ ಕಾರಣವನ್ನು ಮುಂದಿಟ್ಟು ಸೆರೆಯಲ್ಲಿಟ್ಟಿತ್ತು) ಅವರನ್ನು ಪಶ್ಚಿಮದ ದೇಶಗಳು ಚಾಲ್ತಿ ರಾಜಕೀಯ ಕಾರಣಗಳಿಗಾಗಿ ಹೀರೊ ಎಂದು ಪರಿಗಣಿಸುತ್ತಿದ್ದರೆ, ಅದಕ್ಕೆ ಆಯ್ ಸೊಪ್ಪು ಹಾಕುತ್ತಿಲ್ಲ. ಏಕೆಂದರೆ, ಅವರ ನ್ಯೂಯಾರ್ಕ್ ವಾಸ ಅವರಿಗೆ ಈ ಹೀರೊಗಿರಿಯ ಟೊಳ್ಳುತನವನ್ನೂ ಅರ್ಥಮಾಡಿಸಿದೆ.
ಆಯ್ ಅವರ ಅತ್ಯಂತ ಪ್ರಸಿದ್ಧ ಕಲಾಕೃತಿ ಎಂದರೆ, 2010ರಲ್ಲಿ ಟೇಟ್ ಮಾಡರ್ನ್ ಗ್ಯಾಲರಿಯ ಮ್ಯೂಸಿಯಂನಲ್ಲಿ ಹತ್ತುಸಾವಿರ ಚದರ ಮೀಟರ್ ಗಾತ್ರದ ಟರ್ಬೈನ್ ಹಾಲ್ ನಲ್ಲಿ ಪ್ರದರ್ಶಿಸಿದ ಇನ್ಸ್ಟಾಲೇಷನ್ ಕಲಾಕೃತಿ “ಸೂರ್ಯಕಾಂತಿ ಬೀಜಗಳು”. ಅಂದಾಜು 10 ಕೋಟಿ ಸೂರ್ಯಕಾಂತಿ ಬೀಜದ ಮಾದರಿಗಳನ್ನು ಪೋರ್ಸೆಲಿನ್ ನಲ್ಲಿ ಮಾಡಿಸಿ ಇಡೀ ನೆಲದಲ್ಲಿ ಚೆಲ್ಲಿದ್ದೇ ಕಲಾಕೃತಿ. 150ಟನ್ ತೂಕದ ಈ ಪೋರ್ಸೆಲಿನ್ ಕಾಳುಗಳನ್ನು ತಯಾರಿಸಿ ಅದರಲ್ಲಿ ಬೀಜದ ಚಿತ್ರ ಬರೆಯಲು 1600ಮಂದಿಗೆ ಎರಡೂವರೆ ವರ್ಷ ತಗುಲಿತ್ತು!
ಚೀನಾದ ಐತಿಹಾಸಿಕ ಹಾನ್ ಸಾಮ್ರಾಜ್ಯದ ಹೂದಾನಿಯೊಂದಕ್ಕೆ ಸಾಫ್ಟ್ ಡ್ರಿಂಕ್ ಕಂಪನಿಯೊಂದರ ಲೋಗೋ ಹಚ್ಚಿ ಕೊಕೊಕೋಲಾ ವೇಸ್ (1994) ತಯಾರಿಸಿದ್ದು, ಚೀನಾ ಸರಕಾರದ ಕಟು ಟೀಕಾಕಾರನಾಗಿದ್ದೂ, 2008ರಲ್ಲಿ ಬೀಜಿಂಗ್ ಒಲಂಪಿಕ್ಸ್ ಸ್ಟೇಡಿಯಂ “ಬರ್ಡ್ಸ್ ನೆಸ್ಟ್” ಗೆ ಕಲಾ ಸಲಹೆಗಾರನಾಗಿ ಕೆಲಸ ಮಾಡಿದ್ದು… ಹೀಗೆ ವಿಲಕ್ಷಣ ಮೂರ್ತಿಭಂಜಕ ವ್ಯಕ್ತಿತ್ವದ ಆಯ್ “I don’t see myself as a dissident artist, I see them as a dissident government!” ಎನ್ನುತ್ತಾರೆ!
ಒಟ್ಟಿನಲ್ಲಿ ಪೌರಾತ್ಯ ಜಗತ್ತಿನ ಅತ್ಯಂತ ಪ್ರಮುಖ ಸಮಕಾಲೀನ ಕಲಾವಿದರಲ್ಲೊಬ್ಬರು ಆಯ್ ವೇಯಿ ವೇಯಿ.
ಆಯ್ ಅವರ ಒಂದು ಕುತೂಹಲಕರ ಸಂದರ್ಶನ ಈ ಲಿಂಕ್ ನಲ್ಲಿದೆ:
1958ರಲ್ಲಿ ತಂದೆಯೊಂದಿಗೆ ಲೇಬರ್ ಕ್ಯಾಂಪಿನಲ್ಲಿ ಆಯ್ ವೇಯಿ ವೇಯಿ
ಸೂರ್ಯಕಾಂತಿ ಬೀಜಗಳು (2010) ಟೇಟ್ ಮಾಡರ್ನ್ ಮ್ಯೂಸಿಯಂ, ಲಂಡನ್
ಐತಿಹಾಸಿಕ ಹಾನ್ ಸಾಮ್ರಾಜ್ಯಕ್ಕೆ ಸೇರಿದ ಹೂದಾನಿ ಒಡೆದ ಪರ್ಫಾರ್ಮೆನ್ಸ್ ಆರ್ಟ್ ನ ಫೊಟೋಗ್ರಾಫ್ ಗಳು (1994)
ಮರ (2015), ರಾಯಲ್ ಅಕಾಡೆಮಿ ಆಫ್ ಆರ್ಟ್ಸ್, ಲಂಡನ್
ಈ ಅಂಕಣದ ಇತರೆ ಬರೆಹಗಳು
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.