ಜೋಗಿಯವರದು ಸರಳ ಶೈಲಿಯ ಕಥನ. ಭಾಷಾ ಆಡಂಬರವೂ ಇಲ್ಲ. ಕಥೆಯ ವ್ಯಕ್ತಿಗಳೇ ಎದ್ದು ಬಂದು ಕಥೆ ಹೇಳುವಂತಿವೆ. ಕೆಲವೆಡೆ ವ್ಯಂಗ್ಯ , ದುಃಖ, ಸೂಚ್ಯವಾಗಿವೆ ಎನ್ನುತ್ತಾರೆ ಲೇಖಕಿ ಗೀತಾ ಬಾಲು. ಅವರು ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಕತೆಪುಸ್ತಕ ಕೃತಿಯ ಬಗೆಗೆ ಬರೆದ ಲೇಖನ ನಿಮ್ಮ ಓದಿಗಾಗಿ...
ಕೃತಿ : ಕತೆಪುಸ್ತಕ
ಕರ್ತೃ: ಜೋಗಿ
ಪ್ರಕಟಣೆ : 2021
ಬೆಲೆ: 130
'ಕತೆಪುಸ್ತಕ ' ನಾನು ಓದುತ್ತಿರುವ ಜೋಗಿ ಯವರ ಎರಡನೇ ಕೃತಿ . ಈಗಾಗಲೇ ಅವರ ' ತಂದೆ -. ತಾಯಿಯನ್ನು ಪೂಜಿಸಬೇಡಿ , ಪ್ರೀತಿಸಿ ' ಓದಿ , ಅವರ ಸರಳ ಕಥನ ಶೈಲಿಯ ಪರಿಚಯವಿದ್ದ ನನಗೆ ಈ ಬಾರಿ ಅಂಕಿತಾಗೆ ಭೇಟಿ ಕೊಟ್ಟಾಗ ಅವರ ಮತ್ತೊಂದು ಪುಸ್ತಕ ಕೊಳ್ಳುವ ನಿರ್ಧಾರವಿತ್ತು. ಹಾಗೆ ಆಯ್ದ ಪುಸ್ತಕವೇ ಇದು. ಹನ್ನೊಂದು ಕಥೆಗಳ ಸಂಕಲನ. ಪ್ರತಿ ಕಥೆಯೂ ಒಂದಲ್ಲ ಒಂದು ಸಮಸ್ಯೆ ಬಿಂಬಿಸುವಂತದು. ಹಾಗೆಂದು ಹನ್ನೊಂದು ಸಮಸ್ಯೆಗಳ ಸಂಕಲನ ಅಲ್ಲ. ಒಂದೆರಡು ಏಕಾಂಗಿ ಬದುಕಿನ ಸಮಸ್ಯೆಯಾದರೆ, ಒಂದೆರಡು ದಾಂಪತ್ಯ ಸಮಸ್ಯೆ, ಒಂದೆರಡು ಭ್ರಮ ನಿರಸನಗಳು. ಒಂದೆರಡು ಹಗುರವಾದ ಕಥೆಗಳು ಹೀಗೆ.
ನನಗೆ ತುಂಬಾ ಇಷ್ಟವಾದ ಒಂದೆರಡು ಕಥೆಗಳನ್ನು ವಿವರವಾಗಿ ಹೇಳುವೆ.
ಕೆಟ್ಟ ಕವಿತೆಯ ಕೊನೆಯ ಸಾಲು :
ಏಕಾಂಗಿಯಾಗಿದ್ದು ಮಾನಸಿಕ ಉದ್ವಿಗ್ನತೆಯಿಂದ ಬಳಲುವ , ಮಾಲವಿಕಾಳ ಕಥೆ . ಪ್ರಜ್ಞಾವಸ್ಥೆಯಲ್ಲಿ ಅರೆ ಬರೆದಿದ್ದ , ಒಂದೂ ಪೂರ್ಣ ಗೊಳಿಸಲಾರದ ಕವಿತೆಗಳನ್ನೆಲ್ಲ ಸುಪ್ತಾವಸ್ತೆಯಲ್ಲಿ ಪೂರ್ಣಗೊಳಿಸುವ ಪ್ರಯತ್ನ. ಅದೂ ತನ್ನ ಭಯವನ್ನು overcome ಮಾಡುವ ನಿರ್ಧಾರ ತೆಗೆದುಕೊಂಡ ಮೇಲಿನದು. ತನ್ನದೇ ಕವಿತೆಯೇ ಎಂದು ಅಚ್ಚರಿ ಗೊಳ್ಳುವ ಮಾಳವಿಕಾ ಓದುಗರಿಗೂ ಸವಾಲು ಎಸೆಯುತ್ತಾಳೆ.
ಜಗತ್ತಿನ ಅರುವತ್ತು ಅತ್ಯತ್ತಮ ಕಥೆಗಳು:
ಇದೊಂದು ಬಗೆಯಲ್ಲಿ ಲೇಖಕನೊಬ್ಬ ಆತ್ಮಾವಲೋಕನ ಮಾಡಿಕೊಳ್ಳುವ ಕಥೆ. ಜೊತೆಗೆ ಗೆಳೆತನದ ಸಂದಿಗ್ಧತೆಯಲ್ಲಿ ಸಿಲುಕಿದ ಕಥೆಯೂ ಹೌದು. ಕನ್ನಡ ವಿಶ್ವದ ಪ್ರಕಟಣೆಗಾಗಿ ಅರವತ್ತು ಅತ್ಯುತ್ತಮ ಕಥೆಗಳಲ್ಲಿ ೫೯ ಕಥೆಗಳನ್ನು ಆಯ್ಕೆ ಮಾಡಿದ್ದ ಲೇಖಕ ಅರವತ್ತನೆ ಕಥೆಯಾಗಿ ತನ್ನ ಕಥೆಯನ್ನೇ ಆಯ್ಕೆ ಮಾಡಬಹುದೆ ಎಂಬ ಜಿಜ್ಞಾಸೆಯಲ್ಲಿದ್ದಾಗ ಪುಸ್ತಕ ಪ್ರಕಟಣೆ ಜವಾಬ್ದಾರಿ ಹೊತ್ತ ಗೆಳೆಯನೇ ತನ್ನ ಲೇಖನವನ್ನು ಸೇರಿಸಲು ನಿರ್ದೇಶನ ನೀಡಿದಾಗ ಲೇಖಕನೊಬ್ಬನಲ್ಲಿ ಮೂಡಬಹುದಾದ ಭಾವನೆಗಳ ತುಮುಲ ಓದುಗರಿಗೆ ಬಿಟ್ಟ ಪರಿಯಿದು.
ದೇಸಾಯಿಯ ಭಗವದ್ಗೀತೆ:
ಗೀತಯಜ್ಞ ಕ್ಕಾಗಿ ಮಠದ ಸ್ವಾಮಿಗಳ ಹೇಳಿಕೆಯನ್ನು ಅನುಸರಿಸಿ ೧೦೦೮ ಬಾರಿ ಭಗವದ್ಗೀತೆ ಬರೆದ ಭಕ್ತ ದೇಸಾಯಿ , ಅದನ್ನು ಅರ್ಪಸಲು ಮಠಕ್ಕೆ ತಂದಾಗ ತಾನು ಭಕ್ತಿಯಿಟ್ಟು ಬರೆದ ಗಂಟನ್ನು ಜೇಡ ಕಟ್ಟಿ ಧೂಳಿನಿಂದ ಆವೃತವಾದ ಸಂಗ್ರಹದ ಕೊಠಡಿಯಲ್ಲಿ ಇಡಬೇಕಾಗಿ ಬಂದಾಗ ಅವನಿಗೆ , ಅಸ್ತವ್ಯಸ್ತವಾಗಿ ಧೂಳು ಹಿಡಿದು ಅಲ್ಲಲ್ಲೇ ಚದುರಿ ಬಿದ್ದಿದ್ದ ಇಂಥದೇ ಗ್ರಂಥಗಳು ಕುರುಕ್ಷೇತ್ರದ ಕೊನೆಯ ದಿನದ ರಣರಂಗದಲ್ಲಿ ಚದುರಿ ಬಿದ್ದಿದ್ದ ಹೆಣದಂತೆ ಕಂಡದ್ದು ದೇಸಾಯಿಯ ದೌರ್ಭಾಗ್ಯ. ದೂರದ ಬೆಟ್ಟ ನುಣ್ಣಗೆ ಅಲ್ಲವೇ?
ಏಕಾಂಗಿಯಾಗಿ ಸುವ್ಯವಸ್ಥಿತ ಅಪಾರ್ಟ್ಮೆಂಟ್ ನಲ್ಲಿ ಆರಾಮವಾಗಿಯೆ ವಾಸಿಸುತ್ತಿದ್ದು , ಅಚಾನಕ್ಕಾಗಿ ಉಡುಗೊರೆಯಾಗಿ ಬಂದ, ತನ್ನ ಭಾವನೆಗಳನ್ನು ಹಂಚಿಕೊಂಡಂತೆ ಕಾಣುವ ಬೆಕ್ಕನ್ನು ಬಿಟ್ಟಿರಲಾರದೆ ಮನೆ ಕೂಡ ಬಿಡಲು ಸಿದ್ಧವಾಗುವ ಸದಾಶಿವನ ಕಥೆ 'ಸದಾಶಿವ ಲವ್ಸ್ ನೂತನ್ ' , ಪುರುಷನೊಬ್ಬ ತನ್ನ ಕುಡಿತದ ಅಮಲಿನಲ್ಲಿ ಸ್ತ್ರೀ ಅಂತರಂಗ , ತನಗೆ ಬೇಕಾದಂತೆ ಅವಳು ನಡೆದುಕೊಳ್ಳಲಾರದ ಸನ್ನಿವೇಶ ತೆರೆದಿಟ್ಟಾಗ ಸ್ತ್ರೀಯೊಬ್ಬಳು ಪ್ರತಿಕ್ರಯಿಸಿದ ಬಗೆ ತಿಳಿಸುವ 'ವಾರುಣಿಯ ಮುಸ್ಸಂಜೆ ' , ಆರಂಭಿಸಿದ ಕಥೆಯನ್ನು ಪಾಳಿಯ ಮೇಲೆ ಮುಗಿಸ ಬೇಕಾದ ಕಥೆಯಂತೆ ಕಂಡರೂ ಕೊನೆಗೆ ಮೂಲ ಲೇಖಕನಿಗೆ ಸವಾಲೆಸೆಯವ. ಕಥೆ ಸುತ್ತು ಹೊಡೆದು ತನ್ನ ಬಳಿಗೆ ಬಂದಾಗ ಮುಂದೇನು ಆಯ್ತೆಂಬ ಉತ್ತರಕ್ಕೆ ಸರಿಯುತ್ತರ ಕೊಟ್ಟರೂ ಪ್ರತಿಕ್ರಿಯೆ ಮಾತ್ರ ಅತೃಪ್ತಿಕರವೆ ಆದ 'ಅನಲೆಸ್ ' , ಮಾನವ ಮೂರ್ತಿಯನ್ನು ಕೆತ್ತಲಾರೇನೆಂದು ಗುರುಗಳಿಗೆ ಮಾತು ಕೊಟ್ಟಿದ್ದ ಶಿಲ್ಪಿ ಬಲವಂತಕ್ಕೆ ಕೆತ್ತಿದ್ದು ಸತ್ಯವಾಗಿಯೆ ನಿರೂಪಿತವಾಗುವ 'ನಾಯಕರ ಮೂರ್ತಿ ' , ದಾಂಪತ್ಯ ಸಮಸ್ಯೆ ಉದ್ಭವಿಸಿದಾಗ ನಿಶ್ಚಿಂತೆಯಿಂದ ತನಗೆ ಬೇಕಾದ ದಾರಿಯನ್ನೇ ಕಂಡುಕೊಂಡ ಪತ್ನಿಯ 'ಲಾಲ್ ಕಿತಾಬ್’, ಅತೀ ಹಗುರವಾದ ವಸ್ತುವನ್ನು ಒಳಗೊಂಡ ಜಾಹೀರಾತಿನ ಯುವತಿಯನ್ನು ಪ್ರತಿ ದಿನವೂ ಕಾಣುತ್ತಾ ತನ್ನದೇ ಕಲ್ಪನೆಗಳಲ್ಲಿ ತೇಲುವ 'ಬೆನಜೀರ್ ಮುಗುಳ್ನಗು ' ಹೀಗೆ ಪ್ರತಿಯೊಂದು ಕಥೆಯೂ ವಿಶಿಷ್ಟವಾಗಿದೆ.
ಜೋಗಿಯವರದು ಸರಳ ಶೈಲಿಯ ಕಥನ. ಭಾಷಾ ಆಡಂಭರವೂ ಇಲ್ಲ. ಕಥೆಯ ವ್ಯಕ್ತಿಗಳೇ ಎದ್ದು ಬಂದು ಕಥೆ ಹೇಳುವಂತಿವೆ. ಕೆಲವೆಡೆ ವ್ಯಂಗ್ಯ , ದುಃಖ, ಸೂಚ್ಯವಾಗಿವೆ. ಸದಾಶಿವರ ಕಥೆ ಹೇಳುವಾಗ ಏಕಾಂಗಿಯಾಗಿ ಬಳಲುವ ಒಂಟಿಜೀವಿ ಎಂಬ ಪ್ರಸ್ತಾಪನೆ ಇಲ್ಲ. ಆದರೆ ಆ ಅನುಭವ ಓದುಗನಿಗೆ ಆಗುತ್ತದೆ, ಮಾಲವಿಕಾಳ ತೊಂದರೆ ಅವಳಿಗೆ ತಿಳಿಯದಿದ್ದರೂ ಓದುಗ ಅರ್ಥ ಮಾಡಿಕೊಳ್ಳಬಲ್ಲ , ಸಾವಿರದೆಂಟು ಬಾರಿ ಭಗವದ್ಗೀತೆ ಬರೆದು ಸ್ವಾಮಿಗಳಿಗೆ ಒಪ್ಪಿಸಲೆಂದು ಬಂದ ದೇಸಾಯಿಯ ನೋವು , ನಿರಾಸೆ ಓದುಗನ ಮನ ಮುಟ್ಟುತ್ತದೆ. ವಾರುಣಿಯ ಅರ್ಧ ತಿಳಿದ ಸತ್ಯಕ್ಕೆ ಪರಿಹಾರವಿಲ್ಲ ಎಂದೂ ತಿಳಿಯಬಲ್ಲ. ಜಾಹೀರಾತು ಹುಚ್ಚೆಬ್ಬಿಸುವ ವಿಚಾರಗಳು ಕೇವಲ ಕಲ್ಪನೆ ಎನ್ನುವುದು ನಾಯಕನಿಗಿಂತ ಓದುಗನಿಗೇ ಚೆನ್ನಾಗಿ ಅರ್ಥವಾಗುತ್ತದೆ. ಹೀಗೆ ಶೈಲಿ , ಭಾಷೆ , ಕಥನ ಎಲ್ಲವೂ ಸರಳವಾಗಿ ಓದುಗನನ್ನು ತನ್ನೊಡನೆ ಸೆಳೆದೊಯ್ಯುವ ಜೋಗಿಯವರ ‘ಕತೆಪುಸ್ತಕ’ ನಿಜಕ್ಕೂ ಆಕರ್ಷಣೀಯ.
ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಲೇಖಕ ಪರಿಚಯ..
ಕತೆ ಪುಸ್ತಕ ಕೃತಿ ಪರಿಚಯ..
"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...
“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...
“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...
©2025 Book Brahma Private Limited.