Date: 28-10-2020
Location: ಬೆಂಗಳೂರು
ಕಲಾವಿದರು: ಕ್ರಿಸ್ತೊ ವ್ಲಾದಿಮಿರೋವ್ ಯಾವಚೆಫ್ (Christo Vladimirov Javacheff) ಮತ್ತು ಜೇನ್ ಕ್ಲೋದ್ ಮರೀ ದೆನಾ (Jeanne-Claude Marie Denat)
ಜನನ: ಇಬ್ಬರೂ 13, ಜೂನ್ 1935 (ಕ್ರಿಸ್ತೊ: ಬಲ್ಗಾರಿಯಾದ ಗಾಬರೊ; ಜೇನ್: ಫ್ರಾನ್ಸ್ ನ ಕಾಸಬ್ಲಾಂಕಾ)
ಶಿಕ್ಷಣ: ಕ್ರಿಸ್ತೊ: ಸೋಫಿಯಾ ಅಕಾಡೆಮಿ ಆಫ್ ಫೈನ್ ಆರ್ಟ್ಸ್ (ಬಲ್ಗೇರಿಯಾ); ವಿಯೆನ್ನಾ ಅಕಾಡೆಮಿ ಆಫ್ ಫೈನ್ ಆರ್ಟ್ಸ್ (ಆಸ್ಟ್ರಿಯಾ); ಜೇನ್: ಯೂನಿವರ್ಸಿಟಿ ಆಫ್ ಟ್ಯೂನಿಸ್, ಟ್ಯುನೀಷಿಯಾ (ಲ್ಯಾಟಿನ್ ಮತ್ತು ಫಿಲಾಸಫಿ ಪದವಿ)
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಟೆಂಪೊರರಿ ಪಬ್ಲಿಕ್ ಸ್ಕಲ್ಪ್ಚರ್, ಲ್ಯಾಂಡ್ ಆರ್ಟ್
ಕ್ರಿಸ್ತೊ-ಜೇನ್ ಕ್ಲೋದ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಸ್ತೊ-ಜೇನ್ ಕ್ಲೋದ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಸ್ಟೊ-ಜೇನ್ ಕಲಾವಿದ ದಂಪತಿಯ ಗೌರವಾರ್ಥ, ಮುಂದಿನ (2021)ಸೆಪ್ಟಂಬರ್ ತಿಂಗಳಿನಲ್ಲಿ ಪ್ರಾರಿಸ್ ನ ಪ್ರಸಿದ್ಧ L’Arc de Triomphe ಗೆ (ಫ್ರೆಂಚ್ ಕ್ರಾಂತಿಯಲ್ಲಿ ಜೀವತೆತ್ತವರ ಗೌರವಾರ್ಥ ನಿರ್ಮಿಸಲಾದ ಮಹಾದ್ವಾರ ಇದು) ತಾತ್ಕಾಲಿಕವಾಗಿ ಸಂಪೂರ್ಣ ಬಟ್ಟೆ ಹೊದೆಸಿ ಮುಚ್ಚಲಾಗುತ್ತದೆ!
ಈ ದಂಪತಿ ನಿರ್ಮಿಸಿದ “ತಾತ್ಕಾಲಿಕ” ಶಿಲ್ಪಗಳು ಜಗತ್ತಿನ ಗಮನ ಸೆಳೆಯುವಂತಹವು. ಜರ್ಮನಿಯ ಸಂಸತ್ ಭವನವನ್ನೇ ಬಟ್ಟೆಯಲ್ಲಿ ಗಂಟುಕಟ್ಟಿ ಪ್ಯಾಕ್ ಮಾಡಿದ್ದು, ಆಸ್ಟ್ರೇಲಿಯಾದ ಒಂದೂವರೆ ಮೈಲು ಉದ್ದದ ಸಮುದ್ರ ತೀರದ ಬೆಟ್ಟವನ್ನು ಮುಚ್ಚಿದ್ದು… ಅವರ ಸಾರ್ವಜನಿಕ ಶಿಲ್ಪಗಳ ಗಾತ್ರಕ್ಕೆ ಉದಾಹರಣೆಗಳು. ಈ ಗಾತ್ರದ ಕೆಲಸಗಲಲ್ಲಿ ಎದುರಾಗುವ ರಾಜಕೀಯ, ಆಡಳಿತ, ಆರ್ಥಿಕ ಸವಾಲುಗಳನ್ನೆಲ್ಲ ವರ್ಷಗಟ್ಟಲೆ ಎದುರಿಸಿ, ಕೊನೆಗೂ ವಾರ-ಗಂಟೆಗಳ ತನಕ ಮಾತ್ರ ಉಳಿಯುವ ಈ ಶಿಲ್ಪಗಳ ತಾತ್ಕಾಲಿಕತೆಯ ಬಗ್ಗೆ ಕ್ರಿಸ್ಟೊ ಹೇಳುವುದು ಹೀಗೆ: “Artists – and above all architects – seek permanence. I don’t. I like leaving nothing. That takes courage.” ಬಲ್ಗೇರಿಯಾದಲ್ಲಿ ಜನಿಸಿದ ಕ್ರಿಸ್ತೊ, ಅಲ್ಲಿನ ಸೋಫಿಯಾ ಅಕಾಡೆಮಿಯಲ್ಲಿ ಕಲಿತ ಬಳಿಕ, ಪ್ರಾಗ್ ನಲ್ಲಿ ಪೋರ್ಟ್ರೈಟ್ ಕಲಾವಿದರಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. 1956ರಲ್ಲಿ ಹಂಗರಿಯಲ್ಲಿ ಕ್ರಾಂತಿ ಸಂಭವಿಸಿದಾಗ, ಅಲ್ಲಿಂದ ಕದ್ದುಮುಚ್ಚಿ ವಿಯೆನ್ನಾಗೆ ಪ್ರಯಾಣಿಸಿ, ಸ್ವಿಟ್ಜರ್ಲಾಂಡ್ ಮೂಲಕ ಪ್ಯಾರಿಸ್ ಗೆ ತಲುಪಿದ ಕ್ರಿಸ್ಟೊ, ಅಲ್ಲಿ ಸೇನಾಧಿಕಾರಿಯ ಪುತ್ರಿ ಜೇನ್ ಕ್ಲೋದ್ ಅವರನ್ನು ಭೇಟಿ ಆದದ್ದು, ಅವರ ಮನೆಗೆ ಪೋರ್ಟ್ರೈಟ್ ಕಲಾವಿದನಾಗಿ ಹೋಗಿದ್ದಾಗ.
1964ರ ಹೊತ್ತಿಗೆ ಅಮೆರಿಕಕ್ಕೆ ವಲಸೆ ಹೋದ ದಂಪತಿ ದೊಡ್ಡ ಪ್ರಮಾಣದಲ್ಲಿ ಪಬ್ಲಿಕ್ ಸ್ಕಲ್ಪ್ಚರ್ ಗಳನ್ನು ಆರಂಭಿಸಿದಾಗ ಇಟಲಿಯ ಆಧುನಿಕ ಕಲಾ ಚಳುವಳಿ Arte Povera (ಬಡವರ ಕಲೆ)ದ ಭಾಗ ಎಂದು ಪರಿಗಣಿತರಾದರು. ಆಗೆಲ್ಲ ಸಂಕೋಚ ಸ್ವಭಾವದ ಕ್ರಿಸ್ಟೊ ಕಲೆಯ ಕಡೆ ತಲೆ ಹಾಕುತ್ತಿದ್ದರೆ, ಪತ್ನಿ ಜೇನ್ ಕ್ರಿಸ್ಟೊರ ಪ್ರಚರಕಿ-ಬ್ಯುಸಿನೆಸ್ ಮ್ಯಾನೇಜರ್ ಎಂದೇ ಪರಿಗಣಿತರಾಗಿದ್ದರು. ಆದರೆ, ಕ್ರಮೇಣ ಎಲ್ಲ ಕಲಾಕೃತಿಗಳಿಗೂ ಅವರಿಬ್ಬರೂ ಕಲಾವಿದರೆಂದು ದಾಖಲಿಸತೊಡಗಿದರು.
ಖಾಲಿಯಾದ ಡ್ರಂ ಗಳನ್ನು ಬಟ್ಟೆಯಲ್ಲಿ ಹೊದೆಸಿ ಮುಚ್ಚುವ Dockside Packages (1961; Cologne), Iron Curtain—Wall of Oil Drums (1962; Paris), ಅವರ ಆರಂಭದ ಕಲಾಕೃತಿಗಳಾದರೆ, Valley Curtain (1972; Rifle Gap, Colorado) ಕಲಾಕೃತಿಯಲ್ಲಿ 111 ಮೀಟರ್ ಎತ್ತರದಲ್ಲಿ 381 ಮೀಟರ್ ಉದ್ದದ 61 ಟನ್ ತೂಕದ ಪರದೆಯನ್ನು 28ಗಂಟೆಗಳ ಅವಧಿಗೆ ಎರಡು ಬೆಟ್ಟಗಳ ನಡುವಿನ ಕೊಲರಾಡೊ ಕಣಿವೆಗೆ ತೊಡಿಸಿದರು, Surrounded Islands (1983; Biscayne Bay, Florida) ಕಲಾಕೃತಿಯಲ್ಲಿ ಮಯಾಮಿ ಬಳಿ 11ದ್ವೀಪಗಳ ಸುತ್ತ ಬಟ್ಟೆ ಹಾಸಿದರು; 1985ರಲ್ಲಿ ಪ್ಯಾರಿಸ್ ನ ಪೋ ನಫ್ (Pont Neuf) ಸೇತುವೆಗೆ ಬಟ್ಟೆ ಹೊದೆಸಿದರು, ಕಡೆಗೆ 1995ರಲ್ಲಿ ಬರ್ಲಿನ್ ನಲ್ಲಿ ಹಳೆಯ ಸಂಸತ್ ಕಟ್ಟಡವನ್ನೇ (ರೈಸ್ಟಾಗ್ - Reichstag) ಬಟ್ಟೆ ಹೊದೆಸಿ ಮುಚ್ಚಿದರು,
2009ರಲ್ಲಿ ಜೇನ್ ತೀರಿಕೊಂಡ ಬಳಿಕವೂ ತನ್ನ ಕಲಾಯೋಜನೆಗಳನ್ನು ಮುಂದುವರಿಸಿದ ಕ್ರಿಸ್ಟೊ ಅವರ ಇತ್ತೀಚೆಗಿನ ಮಹತ್ವದ ಕೃತಿ, ಇಟಲಿಯಲ್ಲಿ ಮೂರು ಕಿ.ಮೀ ದೂರದ ಎರಡು ದ್ವೀಪಗಳನ್ನು ಸಂಪರ್ಕಿಸುವ The Floating Piers (2016) ಮತ್ತು ಡ್ರಂ ಗಳನ್ನು ಬಳಸಿ ಲಂಡನ್ ನ ಹೈಡ್ ಪಾರ್ಕ್ ಬಳಿ ನದಿಯಲ್ಲಿ ನಿರ್ಮಿಸಿದ The London Mastaba (2018).
ಅವರು ನಿರ್ಮಿಸಿದ ಕಲಾಕೃತಿಗಳಷ್ಟೇ ಪ್ರಸಿದ್ಧ, ಯೋಜಿಸಿದರೂ ನಿರ್ಮಿಸಲು ಸಾಧ್ಯವಾಗದ ಕಲಾಕೃತಿಗಳು. ಆ ಬಗ್ಗೆ ವಿವರಗಳು ಅವರ ವೆಬ್ ಸೈಟ್ ನಲ್ಲಿ ಲಭ್ಯ. ಅವುಗಳಲ್ಲಿ ಮಹತ್ವದ್ದು, ಅಮೆರಿಕದಲ್ಲಿ ಅರಕಾನ್ಸಾಸ್ ನದಿಗೆ 68ಕಿಮೀ ಉದ್ದದ ಬಟ್ಟೆಯ ಚಪ್ಪರ ಹಾಕುವ ಕಲಾಕೃತಿ. ಈ ವಿಚಾರ ನ್ಯಾಯಾಲಯದಲ್ಲೂ ದೀರ್ಘಕಾಲ ಬಾಕಿ ಇದ್ದು, ಕೊನೆಗೆ 2017ರಲ್ಲಿ ಕ್ರಿಸ್ಟೊ, ಡಿಒನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆದುದಕ್ಕೆ ಪ್ರತಿಭಟನೆಯ ರೂಪದಲ್ಲಿ ಆ ಯೋಜನೆಯನ್ನು ಮಾಡುವುದಿಲ್ಲ ಎಂದು ಕೈಬಿಟ್ಟರು.
ಸರಳವಾದ, ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನು ಅವರಿಗೆ ಗೊತ್ತಿಲ್ಲದ ದೃಷ್ಟಿಕೋನವೊಂದರಿಂದ ನೋಡುವ ಪ್ರಯತ್ನಗಳಾಗಿ ಸಾರ್ವಜನಿಕರ ಗಮನ ಸೆಳೆದ ಕಲಾಕೃತಿಗಳಿವು. ಇವುಗಳಲ್ಲಿ ಆಳವಾದ ಚಿಂತನೆಗಳಿಲ್ಲ, ಆದರೆ ಯಾರೂ ಗಮನಿಸಿ, ತಮ್ಮ ನೆಲೆಯಲ್ಲಿ ಚಿಂತಿಸಿಕೊಳ್ಳಬಹುದಾದ ಅಥವಾ ಕನಿಷ್ಠ ಅಚ್ಚರಿಪಡಬಹುದಾದ ಕಲಾಕೃತಿಗಳನ್ನು ರಚಿಸಿದವರು, ಈ ದಂಪತಿ.
ಮೊನ್ನೆ 2020, ಮೇ 30ರಂದು ಕ್ರಿಸ್ಟೊ ತನ್ನ 84ನೇ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದಾಗಿ ತೀರಿಕೊಂಡರು.
ಕ್ರಿಸ್ತೊ ಮತ್ತು ಜೇನ್ ಕ್ಲೋದ್ ಅವರ ಬದುಕಿನ ಕೆಲವು ಕ್ಷಣಗಳ ಡಾಕ್ಯುಮೆಂಟರಿ:
ಕ್ರಿಸ್ತೊ ಮತ್ತು ಜೇನ್ ಕ್ಲೋದ್ ಅವರ ಪರಿಚಯಾತ್ಮಕ ವೀಡಿಯೊ
ಕ್ರಿಸ್ತೊ ಮತ್ತು ಜೇನ್ ಕ್ಲೋದ್ ಅವರ ಸಂದರ್ಶನದ ವೀಡಿಯೊ
ಚಿತ್ರಗಳು
ಕ್ರಿಸ್ತೊ ಮತ್ತು ಜೇನ್ ಕ್ಲೋದ್ ಪ್ಯಾರಿಸ್ ನಲ್ಲಿ ಪೋನಫ್ ಸೇತುವೆಯನ್ನು ಬಟ್ಟೆಯಲ್ಲಿ ಮುಚ್ಚಿದ್ದು.(1985)
ಕ್ರಿಸ್ತೊ ಮತ್ತು ಜೇನ್ ಕ್ಲೋದ್ ಫ್ಲೋರಿಡಾದಲ್ಲಿ ಬಿಸ್ಕೈನ್ ಬೇಯ ದ್ವೀಪಗಳಿಗೆ ಬಟ್ಟೆ ಹೊದೆಸಿದ್ದು (1983)
ಕ್ರಿಸ್ತೊ ಇಟಲಿಯಲ್ಲಿ ಎರಡು ದ್ವೀಪಗಳ ನಡುವೆ ಸೇತುವೆ ಹಾಸಿದ್ದು (2016)
ಕ್ರಿಸ್ತೊ ಲಂಡನ್ ನ ಹೈಡ್ ಪಾರ್ಕ್ ಬಳಿ ರಚಿಸಿದ ಮಸ್ತಬಾ (2016-2018)
ಕ್ರಿಸ್ತೊ ಮತ್ತು ಜೇನ್ ಕೊಲರಾಡೊದಲ್ಲಿ ರಚಿಸಿದ ಕಣಿವೆಯ ಪರದೆ ( 1972)
ಕ್ರಿಸ್ತೊ ಮತ್ತು ಜೇನ್ ಸಿಡ್ನಿಯಲ್ಲಿ ಲಿಟ್ಲ್ ಬೇ ತೀರವನ್ನು ಬಟ್ಟೆಯಿಂದ ಮುಚ್ಚಿದ್ದು. (1969)
ಕ್ರಿಸ್ತೊ ಮತ್ತು ಜೇನ್ ಜರ್ಮನಿಯ ಬರ್ಲಿನ್ ನಲ್ಲಿ ಹಳೆಯ ಸಂಸತ್ ಕಟ್ಟಡ ರೈಸ್ಟಾಗ್ ಅನ್ನು ಮುಚ್ಚಿದ್ದು (1995)
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.