ಲೇಖಕ ಎಸ್ ಸುರೇಂದ್ರನಾಥ್ ಅವರ ಸಣ್ಣ ಕಥೆಗಳ ಸಂಕಲನ ಬಂಡಲ್ ಕಥೆಗಳು ಕೃತಿಯ ಬಗ್ಗೆ ಲೇಖಕ ರಮೇಶ್ ಭಟ್ ಬೆಳಗೋಡು ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..
ಕೃತಿ: ಬಂಡಲ್ ಕಥೆಗಳು (ಸಣ್ಣ ಕಥಾ ಸಂಕಲನ)
ಲೇ: ಎಸ್ ಸುರೇಂದ್ರನಾಥ್
ಪ್ರಕಾಶಕರು: ಛಂದ ಪುಸ್ತಕ
ಪುಟಗಳು : 152
ಬೆಲೆ: ರೂ. 140
ಈ ಸಂಕಲನದಲ್ಲಿ ಎರಡು ಮಾದರಿಯ ಸಣ್ಣಕಥೆಗಳಿವೆ. ಫ್ಯಾಂಟಸಿ ಕಥೆಗಳ ಮತ್ತು ಮ್ಯಾಜಿಕ್ ರಿಯಾಲಿಸಮ್ ಮಾರ್ಗಗಳ ನಡುವೆ ಗುರುತಿಸಬಹುದಾದ ಮೊದಲ ಮಾದರಿಯ ಕಥೆಗಳು ತಮಾಶೆ, ಕೌತುಕ ಮತ್ತು ಕಲ್ಪನೆಯ ವೈವಿದ್ಯದಿಂದ (ಸುಮ್ಮನೆ) ಓದಿಸಿಕೊಳ್ಳುತ್ತವಾದರೂ, ಕಥೆಗಾರನ ಸೃಜನಶೀಲತೆಯ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದಿಲ್ಲ. ಎಂ ಎಸ್ ಕೆ ಪ್ರಭು, ಸುಮತೀಂದ್ರ ನಾಡಿಗ್, ಶಾಂತಾರಾಮ ಸೋಮಯಾಜಿ, ಪ್ರೇಮಶೇಖರ್ ಮೊದಲಾದವರು ಇಂತಹ ಚಮತ್ಕಾರಗಳನ್ನು ಕನ್ನಡ ಓದುಗರಿಗೆ ಅದಾಗಲೇ ಪರಿಚಯಿಸಿದ್ದಾರೆ. ’ಮೊದಲಪುಟದಲ್ಲಿ ಮುಗ್ಗರಿಸಿ’ ಸ್ನೇಹಿತರೇ ಕಥೆಯ ಪಾತ್ರಗಳಾಗಿ ಬರುವ, ತಾನು ಬರೆಯುತ್ತಿರುವ ಕಥೆಗಳನ್ನು ಅದಾಗಲೇ ವಿವೇಕ್ ಶಾನುಭಾಗ್ ಬರೆದುಬಿಟ್ಟಿರುವ, ಅಸಂಗತ ಸಾಧ್ಯತೆಯ ಕಥೆಯಾದರೆ, ನಾ ಗೋಡೆಯೊಳಗೋ ಮತ್ತು ಶೂನ್ಯ ಸಂಪಾದನೆ ಮಾಂತ್ರಿಕ ವಾಸ್ತವ ಕಥೆಗಳು. ಒಂದಾವರ್ತ ಮತ್ತು ಬೆಟ್ಟದ ಬುಡದಲ್ಲಿ ಈ ಎರಡೂ ಕಥೆಗಳು ಮಧ್ಯಮಪುರುಷ ನಿರೂಪಣೆಯ ತಂತ್ರದ ಹೊಸತನದ ಕಥೆಗಳು.
ಈ ಸಂಕಲನ ಉತ್ತರಾರ್ಧದಲ್ಲಿರುವ ಎರಡೋ ಮೂರೋ ಕಥೆಗಳು ’ಪ್ರಾತಿನಿಧಿಕ’ ಸಣ್ಣಕಥೆಗಳ ವ್ಯಾಖ್ಯೆಗೆ ಸಲ್ಲಬಲ್ಲ ಕಥೆಗಳು. ಅವುಗಳಲ್ಲಿ ’ಹೂಮರದ ಮನೆ’ ಮತ್ತು ’ಕೋಮಣಮಾಮ’ ಎಂಬೆರಡು ಕಥೆಗಳಂತೂ ವರ್ಷದ ಶ್ರೇಷ್ಠ ಸಣ್ಣಕಥೆಗಳು ಎಂಬಷ್ಟು ಗಹನವೂ ಮಾರ್ದವವೂ ಆಗಿವೆ. ಹೂಮರದ ಮನೆ ಕತೆಯ ಶ್ರೀಪಾದರಾಯರ ಮನೆಯ ಅಂಗಳದ ಸಂಪಿಗೆ ಮರದಂತೇ ಅವರ ಬದುಕನ್ನು ಚಿತ್ರಿಸಿದ ಪರಿಯು ಓದುನೀಡಬಲ್ಲ ಆಹ್ಲಾದಕತೆ ಮತ್ತು ವಿಷಣ್ಣತೆಗಳ ಎರಡೂ ತುದಿಗಳನ್ನು ಪರಿಚಯಿಸುತ್ತದೆ. ಯಾವ ಹೆಣ್ಣಿನ ಮುಡಿಗೂ ಅಲ್ಲದ, ಯಾವ ದೇವರ ಫೊಟೋದ ತಲೆಗೂ ಸಲ್ಲದ, ಹೂಗಳ ರಾಶಿನೋಡಿ ನೆರೆಕೆರೆಯ ಹೆಣ್ಣುಮಕ್ಕಳಿಗೆ ಬಾಯಿನೀರೂರಿದರೂ ಸಿಡುಕುಮುಖದ ಶ್ರೀಪಾದರಾಯರ ಭಯದಿಂದ, ಹೂಗಳಿಗೆ ಮರದ ಕೆಳಗೆ ಬಿದ್ದು ಧೂಳಿನ ಸ್ವರ್ಗವೇ ಗತಿ. ಇಂತಹ ಶ್ರೀಪಾದ ರಾಯರ ಮನೆಯ ಹೂವನ್ನು ಮಧ್ಯಾಹ್ನದ ಹೊತ್ತು ಬಡಹುಡುಗಿಯೊಬ್ಬಳು ಹೆಕ್ಕಿಕೊಂಡು ಹೋಗಿ ತನ್ನ ತಾಯಿಯೊಡನೆ ಫುಟ್ ಪಾತಿನಮೇಲೆ ಮಾರುತ್ತಿರುವುದನ್ನು ಕಂಡು, ಯೋಚನಾಕ್ರಮದ ಹೊಸಬಾಗಿಲು ತೆರೆದುಕೊಂಡ ರಾಯರು ತಾವೇ ಅಷ್ಟೂ ಹೂಗಳನ್ನು ಅವಳಿಂದ ಖರೀದಿಸಿ ತಂದು ಮನೆಯಲ್ಲಿ ’ಹೆಂಡತಿ ದೇವರ ಫೊಟೋ ಇಟ್ಟಿದ್ದ, ಈಗೇನೂ ಇಲ್ಲದ’ ಗೂಡಿನಲ್ಲಿ ಸುರಿಯತೊಡಗುತ್ತಾರೆ. ಇದು ಅವರ ಬದುಕನ್ನು ಎಷ್ಟು ಮಾಗಿಸುತ್ತದೆ ಎಂದರೆ, ಹೂ ಕಡಿಮೆ ಬಿದ್ದ ದಿನ ಮರ ಹತ್ತಿಕೊಂಬೆ ಅಲುಗಿಸಿ ಹೂವು ಉದುರಿಸುತ್ತಾರೆ. ಮರದಲ್ಲಿ ಹೂವುಗಳೇ ಇಲ್ಲವಾದಾಗ ಮಾರುಕಟ್ಟಿಯಿಂದ ವಿವಿಧ ಹೂಗಳನ್ನು ತಂದು ಮರದಡಿ ಚೆಲ್ಲಿ, ಆ ಬಡಹುಡುಗಿ ಅವುಗಳನ್ನು ಆಯ್ದು ಲಂಗದ ಜೋಳಿಗೆಯಲ್ಲಿ ತುಂಬಿಸಿಕೊಳ್ಳುವುದನ್ನು ಕಣ್ಣು ತುಂಬಿಸಿಕೊಂಡು, ಅವಳ ಫುಟ್ ಪಾತ್ ಅಂಗಡಿಯಿಂದ ಅಷ್ಟನ್ನೂ ತಾವೇ ಖರೀದಿಸಿ, ಮನೆಯ ದೇವರಗೂಡಿನಲ್ಲಿ ಚೆಲ್ಲಿಬಿಡುವಷ್ಟು ಜೀವನೋಲ್ಲಾಸ ಅವರನ್ನು ಆವರಿಸಿಬಿಡುತ್ತದೆ. ಮುಂದೆ ಆ ಹುಡುಗಿ ಬರುವುದನ್ನು ನಿಲ್ಲಿಸಿದರೂ ರಾಯರು ದಿನವೂ ಹೂ ತಂದು ಮರದಡಿ ಸುರಿಯುವ ಕಾಯಕವನ್ನು ಕಾಯಕವನ್ನು ನಿಲ್ಲಿಸುವುದಿಲ್ಲ. ಆಕೆ ಬರಬಹುದು, ಹೂಗಳನ್ನು ಆರಿಸಿಕೊಳ್ಳಬಹುದು ಎಂಬ ಆಸೆಯಿಂದ. ’ಅಷ್ಟೂ ಆಸೆಯಿಲ್ಲದಿದ್ದಲ್ಲಿ ಬದುಕು ಸಹ್ಯವಾಗುವುದಾದರೂ ಹೇಗೆ...’ ಎಂಬ ಕೊನೆಯ ಮಾತಂತೂ ಬದುಕನ್ನು ಸಹನೀಯವಾಗಿಸಲು ಬೇಕಾದ ಜೀವಾಮೃತದಂತೆ ಭಾಸವಾಗುತ್ತದೆ.
’ಕೋಮಣ ಮಾಮ’ ಕಥೆಯಲ್ಲೂ ಅಷ್ಟೇ. ದೊಡ್ಡಜ್ಜ ದಾವಣಗೆರೆಯಿಂದ ಕರೆದುಕೊಂಡು ಬಂದಿದ್ದ ಲಕ್ಷ್ಮಣನೆಂಬ ಅನಾಥ ಹುಡುಗ ಕೋಮಣಮಾಮನಾಗಿ ಮನೆಮಂದಿಯ ಸುಖದುಃಖಗಳ ಪಾಲುದಾರನಾಗಿದ್ದ ದಡ್ಡ. ಕತೆ, ಹಾಡು, ಹಸೆಗಳ ಆಕರವಾಗಿದ್ದ ಕೋಮಣಮಾಮ ಎಂದರೆ ಹುಡುಗರಿಗೆ ಪ್ರೀತಿ, ಭಯ ಭಕ್ತಿ, ಗೌರವ. ಕಮಲೂಕಕ್ಕಿಯ ದುರಂತದ ಮುನ್ಸೂಚನೆಯನ್ನು ಕೊಡುವಲ್ಲಿ, ಅವಳ ನೋವನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ, ಆಕೆಯ ಸಾವಿನಸುದ್ದಿ ತಡವಾಗಿ ತಿಳಿದನಂತರ ನಡುನೀರಿನಲ್ಲಿ ನಿಂತು ಯಕ್ಷಗಾನದ ಮಾತುಗಳಿಂದ ಧರ್ಮಸೂಕ್ಷ್ಮವನ್ನು ವ್ಯಾಖ್ಯಾನಿಸುವಲ್ಲಿ ಅವನ ವ್ಯಕ್ತಿತ್ವದ ಇನ್ನೊಂದುಮುಖ ಬಿಚ್ಚಿಕೊಳ್ಳುವ ಪರಿಯು ಸೂಕ್ಷ್ಮವಾದ ಮತ್ತು ಗಮನಾರ್ಹವಾದ ನಿರೂಪಣೆಗೆ ಉದಾಹರಣೆ. ಕಥೆಗಾರರು ಇಲ್ಲೆಲ್ಲೂ ಭಾರವಾದ ಮಾತುಗಳನ್ನು ಬಳಸುವುದಿಲ್ಲ. ಈ ಎರಡೂ ಕಥೆಗಳಲ್ಲಿ ಅತ್ಯಂತ ಸರಳವಾದ ನಿರೂಪಣೆಯಲ್ಲಿ ಪ್ರತೀಯಮಾನವಾಗುವ ಧ್ವನಿ ಈ ಎರಡೂ ಕಥೆಗಳನ್ನು ಇತ್ತೀಚಿನ ದಿನಗಳ ಅತ್ಯುತ್ತಮ ಕಥೆಗಳ ಸಾಲಿಗೆ ಸೇರಿಸುತ್ತದೆ ಮತ್ತು ತತ್ಕಾರಣಕ್ಕೆ ಈ ಸಂಕಲನವನ್ನು ವರ್ಷದ ಗಮನಾರ್ಹ ಕಥಾಸಂಕಲನವನ್ನಾಗಿಸುತ್ತದೆ.
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.