ಮನದ ಭಿತ್ತಿಯಲ್ಲಿ ಒಡಮೂಡಿದ ಕಥಾವಸ್ತು ‘ನವಿಲ ಕರುಣೆ’ : ರಾಧೇಶ ತೋಳ್ವಾಡಿ ಎಸ್‌


ಲೇಖಕ ರಾಧೇಶ ತೋಳ್ವಾಡಿ ಎಸ್‌ ಅವರು ಬರೆದ ನವಿಲ ಕರುಣೆ ಕಾದಂಬರಿಯಲ್ಲಿನ ಲೇಖಕರ ನುಡಿ ಹಾಗೂ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ...

ಮಕ್ಕಳಿಗಾಗಿ ಒಂದು ಕಾದಂಬರಿ ಬರೆಯಲು ಸಾಧ್ಯವಾದೀತೆಂದು ಈ ಲೇಖಕ ಎಣಿಸಿರಲ್ಲೇ ಇಲ್ಲ. ಕವಿತೆಯನ್ನು ಬರೆಯುತ್ತ ನಿರಳವಾಗಿದ್ದ ಮನಸಿಗೆ ಧುತ್ತೆಂದು ಎದುರಾದ 2020ರ ಲಾಕ್‌ಡೌನ್, ಆಕಾಶದಷ್ಟು ವಿಸ್ತಾರದಿಂದ ಕಾಲಾವಕಾಶವನ್ನು ಒದಗಿಸಿತು. ದೈನಂದಿನ ಬದುಕಿನ ಪರಿಚಿತ ಹಳಿಗಳ ಮೇಲೆ ಸಾಗುತ್ತಿದ್ದ ಭಾವಯಾನವು, ಹತ್ತು ದಿಕ್ಕುಗಳಲ್ಲಿ ಹರಿಯಲು ತೊಡಗಿತು. ಹಲೋ ಹಲೋ ಚಂದಮಾಮ' ಮಕ್ಕಳ ಕವಿತೆಗಳ ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಡಾ|| ಚಿಂತಾಮಣಿ ಕೊಡ್ಲೆಕೆರೆಯವರು, ಕವಿತೆಯಾಚೆಗೂ ಕೈ ಚಾಚಲು ನೀಡಿದ್ದ ಸಲಹೆ ಇನ್ನೂ ಕಾರಗತವಾಗಿರಲಿಲ್ಲ. 'ರೈಲು ರೈಲು ಅಲಸಂಡೆ' ಕವನ ಸಂಕಲನವನ್ನು ಮೆಚ್ಚಿಕೊಂಡರೂ ಡಾ|| ಎಚ್ ಎಸ್ ರಾಘವೇಂದ್ರ ರಾವ್ ಅವರು, ಕನ್ನಡದ ಮಕ್ಕಳಿಗಾಗಿ ಸಮೃದ್ಧವಾಗಿ ಬರಬೇಕಾದ ಗದ್ಯ ಸಾಹಿತ್ಯದ ಅನಿವಾರತೆಯನ್ನು ಒತ್ತಿ ಹೇಳುತ್ತಾ ಸುದೀರ್ಘವಾಗಿ ಮಾತನಾಡಿದ್ದರು. ಅನಾಮತ್ತಾಗಿ ಎದುರಾದ ವಿರಾಮದ ಅವಧಿಯು, ಪ್ರಾಯಃ ನಾಡಿನ ಹಿರಿಯ ವಿಮರ್ಶಕರಿಬ್ಬರ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸುವಂತೆ ಮಾಡಿದ್ದನ್ನು ಇಲ್ಲಿ ಕೃತಜ್ಞತೆ ಮತ್ತು ತುಸು ಅಳುಕಿನಿಂದಲೇ ನೆನೆಯುತ್ತಿರುವೆ. ಕಥಾವಸ್ತುವೂ ಅಷ್ಟೇ ಅನೂಹ್ಯ ರೀತಿಯಲ್ಲಿ ಮನದ ಭಿತ್ತಿಯಲ್ಲಿ ಒಡಮೂಡಿ, ತನ್ನನ್ನು ತಾನು ಬರೆಯಿಸಿಕೊಳ್ಳುತ್ತಾ ಹೋಯಿತು.

- ರಾಧೇಶ ತೋಳ್ವಾಡಿ ಎಸ್‌. (ರುಚಿರ, ಬಂಟ್ವಾಳ)

***

ಆಯ್ದ ಭಾಗ : ಬೆಣ್ಣೆಯ ಜನ್ಮ ಜನ್ಮಾಂತರದ ಕತೆ

ಅಮ್ಮನೂ ಒಂದು ಕೋಗಿಲೆ ಎಂದು ಹೊಳೆದು, ಕೂಡಲೇ ಚೆನ್ನನು ಒಳಗೆ 'ಓಡಿ ಹೋಗಿ ಅಮ್ಮನಿಗೆ ಒಂದು ಹೂಮುತ್ತನ್ನು ಕೊಟ್ಟನು. ಅವಳಿಗೆ ತನ್ನ ತವರು ಮನೆಯ ನೆನಪಾಗಿರಬೇಕೆಂದು ಅವನು ಸರಿಯಾಗಿಯೇ ಊಹಿಸಿದ. ಹೆಚ್ಚೇನೂ ಮಾತನಾಡಿಸದೆ, ಅವಳನ್ನು ಅವಳ ಪಾಡಿಗೆ ಬಿಟ್ಟು ಹೊರಬಂದರೂ ಚೆನ್ನನ ಪುಟಾಣಿ ಮಿದುಳಿನಲ್ಲಿ ನೂರೆಂಟು ಪ್ರಶ್ನೆಗಳು ಮೂಡತೊಡಗಿದ್ದವು. ಕಾಗೆ ಕೋಗಿಲೆಗಳು ನೋಡುವುದಕ್ಕೆ ಒಂದೇ ಥರ ಇದ್ದರೂ ಸ್ವರವೇಕೆ ಅಷ್ಟೊಂದು ಭಿನ್ನ? ಕಾಗೆಯೂ ಕೂಡ ಮಾವಿನ ಚಿಗುರನ್ನು ತಿಂದು ತನ್ನ ಸ್ವರವನ್ನು ಇಂಪಿನ ದನಿಯಾಗಿ ಮಾಡಿಕೊಳ್ಳಬಾರದೆ? ಕಾಗೆಯ ಮರಿಗಳಿಗೆ ಅಷ್ಟೊಂದು ಕಾಲ ಒಡನಾಡಿಯಾಗಿದ್ದ ಕೋಗಿಲಣ್ಣ, ಹಾಗೆ ಇದ್ದಕ್ಕಿದ್ದಂತೆ ಹೊರಟು ಹೋದಾಗ ಏನನಿಸಿರಬಹುದು?' - ಹೀಗೆಲ್ಲ ಯೋಚಿಸುತ್ತಾ ಮನೆಯ ಮುಂದಿನ ಮೆಟ್ಟಲಲ್ಲಿ ಕುಳಿತಿದ್ದಾಗ, “ಚೆನ್ನಾ, ಕಷಾಯ ಕುಡಿ, ಬಾ!” ಎಂದು ಅಮ್ಮ ಅಡುಗೆ ಮನೆಯಿಂದ ಕರೆದಳು. ಅವನು ಅಡುಗೆ ಮನೆಗೆ ಹೋದಾಗ, ಜೀರಿಗೆ ಕೊತ್ತಂಬರಿ ಪುಡಿಯಿಂದ ಮಾಡಿದ ಕಷಾಯವನ್ನು ಸ್ಟವ್‌ನಿಂದ ಕೆಳಗಿಳಿಸಿ, ಅರ್ಧ ಲೋಟ ತಣ್ಣಗಿನ ಹಾಲಿಗೆ ಅದನ್ನು ಬೆರೆಸುತ್ತಿದ್ದಳು. ಅಡುಗೆ ಕಟ್ಟೆಯ ಮೇಲೆ ಕೂತು ಮರು ಮಾತನಾಡದೆ, ಚೆನ್ನನು ಹದವಾಗಿ ಬೆಚ್ಚಗಿದ್ದಕಷಾಯವನ್ನು ಹೀರತೊಡಗಿದ.

ಬೆಳಗಿನ ತಿಂಡಿಯಾಗುವವರೆಗೂ ತನ್ನನ್ನು ಹೊರಗೆ ಹೋಗಲು ಅಮ್ಮ ಬಿಡುವುದಿಲ್ಲ ಎಂದು ಚೆನ್ನನಿಗೆ ಗೊತ್ತಿತ್ತು. ಕುಡಿದ ಕಷಾಯದ ಲೋಟವನ್ನು ಸಿಂಕಿನಲ್ಲಿಟ್ಟು, ಚಾವಡಿಗೆ ಬಂದ ಸರಕಾರಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಅವನ ಅಪ್ಪ, ಡ್ರಾಯಿಂಗ್ ಶೀಟ್‌ನಲ್ಲಿ ಮಗ್ಗಿಯನ್ನು ಬರೆದು ಗೋಡೆಯ ತುಂಬ ಹೆಚ್ಚಿದ್ದರು. ಬಣ್ಣ ಬಣ್ಣದ ಮಾರ್ಕರ್ ಬಳಸಿ ದೊಡ್ಡದಾಗಿ ಬರೆದಿದ್ದ ಮಗ್ಗಿಯು ಚೆನ್ನನಿಗೆ ಚೆನ್ನಾಗಿ ನೆನಪುಳಿಯಲು ಸಹಾಯವಾಗುತ್ತದೆ ಎಂಬುದು ಅವರ ನಿಲುವಾಗಿತ್ತು. 'ಬಂದವರು-ಹೋದವರೆಲ್ಲ ಅದನ್ನು ನೋಡಿ ಏನಂದುಕೊಳ್ಳುತ್ತಾರೆ?' ಎಂದು ನಿರ್ಮಲಾ ವಿರೋಧಿಸಿದ್ದರೂ ವಿಕಾಸ ತಲೆಕೆಡಿಸಿಕೊಂಡಿರಲಿಲ್ಲ. ಬಿಡುವಿನ ದಿನಗಳಲ್ಲಿ, ತಾನು ಮತ್ತು ಅಪ್ಪ ಹೀಗೆ ಬರೆಯುತ್ತಾ, ಹರಟೆ ಹೊಡೆಯುತ್ತಾ ಸಮಯ ಕಳೆಯುವುದು ಈರ್ವರಿಗೂ ಪ್ರಿಯವಾದ ಹವ್ಯಾಸವಾಗಿತ್ತು. ತನಗಾಗಿ ಅಪ್ಪ ಎಷ್ಟೆಲ್ಲ ಮಾಡುತ್ತಾರೆ! ಎಂದು ಅರಿವಾಗುತ್ತಿದ್ದಂತೆ, ಚೆನ್ನನ ಹೃದಯ ತುಂಬಿ ಬಂತು, ವರ್ಣಿಸಲಾಗದ ಏನೋ ಒಂದು ಪುಳಕವುಂಟಾಯಿತು. ಎರಡೊಂದ್ಲೆರಡ... ಎರಡೆರಡ್ಲಿ ನಾಕ ಎಂದು ರಾಗವಾಗಿ, ಶ್ರದ್ಧೆಯಿಂದ ಓದಲು ಶುರು ಮಾಡಿದ. ಹನ್ನೆರಡನೇ ಮಗ್ಗಿ ತಲುಪುವ ಹೊತ್ತಿಗೆ, “ಚೆನ್ನಾ ದೋಸೆ ರೆಡಿ, ತಿನ್ನು ಬಾ!” ಎಂದು ಅಮ್ಮ ಒಳಗಿನಿಂದಲೇ ಕರೆಯುವುದು ಕೇಳಿಸಿತು. “ಇರಮ್ಮಾ ಇನ್ನು ಎಂಟೇ ಮಗ್ಗಿ ಇರುವುದು! ಇಪ್ಪತ್ತೊಂದ್ಲಿವರೆಗೆ ಓದಿಯೇ ಬರ್‍ತೇನೆ!” ಎಂದು ಹೇಳಿ ಓದು ಮುಂದುವರಿಸಿದ. ಅಡುಗೆ ಮನೆಯಿಂದ, ಉದ್ದಿನ ದೋಸೆಯ ಘಮ ಘಮ ಪರಿಮಳವು ಬರತೊಡಗಿತು. ಬಾಯಲ್ಲಿ ಒಸರುವ ಜೊಲ್ಲು ನುಂಗಿಕೊಂಡು, ಚೆನ್ನ ವೇಗವಾಗಿ ಮಗ್ಗಿ ಓದತೊಡಗಿದ - ಹದಿಮೂರೆರಡ್ಲಿ ಇಪ್ಪತ್ತಾರ........ ಹದಿಮೂರೊಂದ್ಲಿ ಹದಿಮೂರೆರಡ್ಲಿ ಇಪ್ಪತ್ತಾರ ..

ಅಮ್ಮ ದೋಸೆಗೆ ಚೆನ್ನನಿಗಿಷ್ಟವಾದ ಕೆಂಪು ಚಟ್ಟಿ ಮಾಡಿದ್ದಳು. ದೋಸೆಯ ಮೇಲೆ ತುಪ್ಪ ಹಾಕಿ, ಕೆಂಪಗೆ ಕಾಯಿಸಿದ್ದಳು. ಅದರ ಬಣ್ಣ, ಪರಿಮಳವನ್ನು ಸವಿಯುತ್ತಾ ಚೆನ್ನ ತಿನ್ನತೊಡಗಿದ. “ಈ ತುಪ್ಪದಿಂದ ಇಷ್ಟು ಒಳ್ಳೆಯ ಘಮ ಘಮ ಹೇಗೆ ಬರುತ್ತದಮ್ಮಾ?" ಚೆನ್ನನ ಮೊಗದಲ್ಲಿ ವಿಸ್ಮಯದ ಭಾವ. ಕಣ್ಣುಗಳು ಇನ್ನಷ್ಟು ಹಿಗ್ಗಿದವು. ಇನ್ನೊಂದು ದೋಸೆಯನ್ನು ಹೊಯ್ದು, ಕಾವಲಿಗೆ ಬಾವಡೆಯನ್ನು ಮುಚ್ಚಿಡುತ್ತಾ, ಚೆನ್ನನ ಕಡೆಗೆ ತಿರುಗಿ ಅಮ್ಮ ಶುರುಮಾಡಿದಳು.

“ತುಪ್ಪ ಒಳ್ಳೆಯದಾಗಿರಬೇಕೆಂದರೆ ತುಂಬಾ ಕೆಲಸ ಉಂಟು ಪುಟ್ಟಾ! ಪ್ರತಿ ದಿನವೂ ಮೊಸರು ಕಡೆದಾಗ ಸಿಕ್ಕುವ ಬೆಣ್ಣೆಯನ್ನು ಪ್ರತ್ಯೇಕವಾದ ಒಂದು ಪಾತ್ರೆಯಲ್ಲಿ ಹಾಕಿ ಅದು ಮುಳುಗುವಷ್ಟು ನೀರು ಹಾಕಬೇಕು, ಪ್ರತಿ ದಿನವೂ ಅದರ ನೀರನ್ನು ಬದಲಿಸುತ್ತಾ ಇರಬೇಕು. ಬೆಣ್ಣೆಯ ಮುದ್ದೆಯು ತುಂಬ ಆದಾಗ, ಅದನ್ನು ಅಗಲವಾದ ಬಾಯಿಯ ದೊಡ್ಡ ಬಾಣಲಿಯಲ್ಲಿ ಹಾಕಿ ತೊಳೆಯುತ್ತಾ ತೊಳೆಯುತ್ತಾ ಏಳುಬಾರಿ ನೀರು ಬದಲಿಸಬೇಕು. ಅಷ್ಟು ಹೊತ್ತಿಗೆ, ಬೆಣ್ಣೆಗೆ ಅಂಟಿದ ಮಜ್ಜಿಗೆಯ ಕಣಗಳು, ಅದರ ಒಂಥರಾ ಪರಿಮಳ ಹೊರಟು ಹೋಗಿರುತ್ತದೆ. ಅಯ್ಯಯ್ಯೋ! ನಿನ್ನ ದೋಸೆ ಈಗ ಕರಟಿಯೇ ಹೋಯ್ಯೋ ಏನೋ!” ಎಂದು ಕಿರಿಚಿದಳು. ಅವಸರ ಅವಸರವಾಗಿ ಬಾವಡೆಯನ್ನು ತೆಗೆದಾಗ, ದೋಸೆಯು ಕಪ್ಪಾಗತೊಡಗಿತ್ತು. ಚೆನ್ನನಿಗೆ ಕುರು ಕುರು ದೋಸೆ ಇಷ್ಟವಾದುದರಿಂದ, “ಸ್ವಲ್ಪ ಕಪ್ಪಗಿದೆ ಅಷ್ಟೇ! ಹಾಕ್ತಾ!” ಎಂದು ಕೇಳಿದಳು. “ಹೂಂ” ಎಂಬ ಉತ್ತರ ಬಂದುದರಿಂದಾಗಿ, ಹಪ್ಪಳದಂತಾಗಿದ್ದ ದೋಸೆಯನ್ನು ಅವನ ತಟ್ಟೆಗೆ ಹಾಕಿದಳು. 'ಕುರುಂ ಕುರುಂ' ಎಂದು ಸಪ್ಪಳ ಮಾಡುತ್ತಾ ದೋಸೆಯನ್ನು ಜಗಿಯತೊಡಗಿದ ಚೆನ್ನನು “ಅಮ್ಮಾ.... ಆ ಮೇಲೆ ಏನು ಮಾಡುವುದಮ್ಮಾ?” ಎಂದು ನೆನಪಿಸಿದ. ಕಾವಲಿಗೆ ಮತ್ತೊಮ್ಮೆ ಎಣ್ಣೆಯನ್ನು ಅಡಿಕೆ ಹಾಳೆಯ ಒಣಗಿದ ಕಡಿಯಿಂದ ಸವರಿ, ನಿರ್ಮಲಾ ಬೆಣ್ಣೆಯ ಮುಂದಿನ ಜನ್ಮದ ಕತೆಯನ್ನು ಹೇಳತೊಡಗಿದಳು:

“ಮಗನೇ, ಬೆಣ್ಣೆ ತೊಳೆದ ನೀರನ್ನೆಲ್ಲ ಬಾಣಲೆಯಿಂದ ಚೆನ್ನಾಗಿ ಬಸಿದು, ಒಲೆಯ ಮೇಲಿಡಬೇಕು. ಸ್ಟವ್ ಹಚ್ಚಿ, ಬೆಂಕಿಯ ಬಿಸಿಯು ಬಾಣಲೆಯನ್ನು ಕಾಯಿಸತೊಡಗಿದಂತೆ, ಬೆಣ್ಣೆಯು ತನ್ನ ಮುದ್ದೆಯಾಕಾರವನ್ನು ಕಳೆದುಕೊಳ್ಳುತ್ತಾ ಕರಗುತ್ತಾ, ಗುಳು ಗುಳು ಗುಳು ಗುಳು ಬಿಳಿ ನೊರೆಯೊಂದಿಗೆ ಕುದಿಯತೊಡಗುತ್ತದೆ. ಸಣ್ಣಗಿನ ಉರಿಯಲ್ಲಿ ಇನ್ನಷ್ಟು ಹೊತ್ತು ಬಾಣಲಿಯನ್ನು ಕಾಯಿಸಿದರೆ, ಕರಗಿದ ಬೆಣ್ಣೆಯು ತನ್ನ ನೀರಿನ ಅಂಶವನ್ನೆಲ್ಲಾ ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗತೊಡಗುತ್ತದೆ. ಶುರು ಶುರುವಿಗೆ ಇಡೀ ಬಾಣಲೆಯಲ್ಲಿ ಹರಡಿಕೊಂಡು ಕುದಿಯುತ್ತಿದ್ದ ಬಿಳಿ ನೊರೆಯು ಕ್ರಮೇಣ ಸಂಪೂರ್ಣವಾಗಿ ಇಲ್ಲವಾಗಿ, ಚಟಪಟ ಸದ್ದೆಲ್ಲ ನಿಂತು ಹೋದರೆ, ಪರಿಶುದ್ಧ ತುಪ್ಪ ಅವತಾರವೆತ್ತಿದಂತೆ! ಇನ್ನೂ ಘಮ ಘಮ ಪರಿಮಳ ಬರಲಿ ಎಂದು ಕೆಲವರು ಎರಡು ಕಲ್ಲು ಉಪ್ಪನ್ನೋ, ತುಳು ಅಥವಾ ವೀಳ್ಯದ ಎಲೆಯನ್ನೋ ಹಾಕುವುದುಂಟು....” ಎಂದು ಅಮ್ಮ ತನ್ನ ಕತೆಯನ್ನು ಮುಗಿಸಿದಳು. ನೋಡಿದರೆ ಅಲ್ಲಿ ಚೆನ್ನನಿರಲಿಲ್ಲ. “ಚೆನ್ನ, ಚೆನ್ನ..., ಎಂದು ಕರೆದರೆ ಅವನಾಗಲೇ ಕಾಂಪೌಂಡ್ ದಾಟಿ, ವರ್ಷಾಳ ಮನೆಗೆ ಹೋಗಿ ಅವರ ಕಿಟಕಿಯಿಂದ ಇಣುಕಿ ನೋಡುತ್ತಿದ್ದ. ಇನ್ನು ಅವನು ಬರುವುದು ಮಧ್ಯಾಹ್ನವೇ...... ಎಂದು ನಿರ್ಮಲಾ ಲೆಕ್ಕ ಹಾಕಿದಳು. “ನಿಮ್ಮಿ...... ನನ್ನ ಟಿಫಿನ್ ಕ್ಯಾರಿಯರ್ ರೆಡಿಯಾ?” ಬಾತ್‌ರೂಂನಿಂದ ವಿಕಾಸ್‌ ಧ್ವನಿ ತೂರಿ ಬಂದಾಗ, ನಿರ್ಮಲಾ ಗಡಿಬಿಡಿಯಿಂದ ಗಂಡನ ಬುತ್ತಿಯನ್ನು ಹುಡುಕತೊಡಗಿದಳು. ಆ ಮೇಲೆ ಇದ್ದಕ್ಕಿದ್ದಂತೆ ಅವಳಿಗೆ ನೆನಪಾಯ್ತು, “ರೀ....... ಯಾಕೆ ಸತಾಯಿಸ್ತೀರಿ? ನಾನು ತಿಂಡಿ ತಿನ್ನೋದು ಇನ್ನೂ ಸ್ವಲ್ಪ ಲೇಟಾಗಿ ಅಂತಾನಾ?” ಅಂದಳು. ಮುನಿಸು ತೋರಿ, ನಗುತ್ತಾ ಬಂದ ವಿಕಾಸ್‌ರಿಗೆ ತಟ್ಟೆಯಲ್ಲಿ ದೋಸೆ, ಚಟ್ನಿ ಬಿಡಿಸಿಟ್ಟು ತಾನೂ ತಿನ್ನಲು ಕುಳಿತಳು, ಕಿಟಕಿಯಿಂದಾಚೆ ಇಣುಕಿದಾಗ, ಚೆನ್ನ ಮತ್ತು ವರ್ಷಾ ಆಟದ ಬಯಲಿನ ಕಡೆಗೆ ನಡೆದು ಹೋಗುತ್ತಿರುವುದು ಕಾಣಿಸಿತು. “ರೀ, ಇವತ್ತು ತುಪ್ಪ ಇಷ್ಟು ಒಳ್ಳೆಯ ಪರಿಮಳ ಬರುವುದು ಹೇಗಮ್ಮಾ ಅಂತ ಚೆನ್ನನ ಪ್ರಶ್ನೆ!” ಅಂದಳು. “ಗೊತ್ತು, ಗೊತ್ತು ನೀನು ಕತೆಯನ್ನು ಬೆಣ್ಣೆಯ ಜನ್ಮದಿಂದ ಶುರು ಮಾಡಿರಬೇಕು ಅಲ್ವಾ? ನಾನಾಗಿದ್ರೆ, ಮಳೆ ಬಿದ್ದ ನೆಲದಲ್ಲಿ ಗರಿಕೆ ಹುಲ್ಲು ಕುಡಿಯೊಡೆಯುವುದರಿಂದ ಶುರು ಮಾಡ್ತಿದ್ದೆ!” ಎಂದು ವಿಕಾಸ, ನಿರ್ಮಲಾಳನ್ನು ರೇಗಿಸಿದರು. “ಹೋಗಿ! ಹಾಗಾದ್ರೆ ಇನ್ನು ಮುಂದೆ ನೀವೇ ಕತೆ ಹೇಳಿ! ಮಳೆ ಸುರಿಯುವಲ್ಲಿಂದ ಯಾಕೆ, ಭೂಮಿ ಹುಟ್ಟುವಲ್ಲಿಂದಾನೇ ಶುರುಮಾಡಿ, ನಂಗೇನು!” ಎಂದು ಮುಖ ಊದಿಸಿಕೊಂಡಳು.

***
ರಾಧೇಶ ತೋಳ್ಪಾಡಿ ಅವರ ಲೇಖಕ ಪರಿಚಯ...
ನವಿಲ ಕರುಣೆ ಕೃತಿ ಪರಿಚಯ...

MORE FEATURES

ಇಲಿ ಬೇಟೆ : ಶಿವರಾಜ್ ಬ್ಯಾಡರಹಳ್ಳಿ

08-09-2024 ಬೆಂಗಳೂರು

"ಈಗಲೂ ಸೌದೆಯಿಂದಲೇ ಅಡಿಗೆ ಮಾಡಿ ತಿನ್ನುವ ಜನರು ಆಹಾರದಲ್ಲಿ ರುಚಿ ಹೆಚ್ಚು ಬಯಸುತ್ತಾರೆ. ಹಾಗೆಯೇ ಧೃಡಕಾಯರಾಗಿ ಬೆ...

ವೀರೇಂದ್ರ ಸಿಂಪಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ

08-09-2024 ಬೆಂಗಳೂರು

“ಇವರ ಕನ್ನಡ ಸಾಹಿತ್ಯದ ಗಣಿಗೆ ಬೆಲೆಬಾಳುವ ಕೃತಿ, ಲೇಖನ, ಅಂಕಣ ಬರಹ, ಅನುವಾದ ಸಾಹಿತ್ಯ, ಜೀವನ ಚರಿತ್ರೆ, ವಿಚಾರ ...

ಡಿ.ಎನ್. ಅಕ್ಕಿ ಮಕ್ಕಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕ: ಫ.ಗು.ಸಿದ್ದಾಪುರ

08-09-2024 ಬೆಂಗಳೂರು

“ಶ್ರೀ ಡಿ.ಎನ್. ಅಕ್ಕಿಯವರು ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವುದನ್ನು ನೋಡಿಯೇ ಆನಂದಿಸಬೇಕು. ಅದು ಶಬ್ದಗಳಿಂದ ಸೆ...