ಇಲಿ ಬೇಟೆ : ಶಿವರಾಜ್ ಬ್ಯಾಡರಹಳ್ಳಿ


"ಈಗಲೂ ಸೌದೆಯಿಂದಲೇ ಅಡಿಗೆ ಮಾಡಿ ತಿನ್ನುವ ಜನರು ಆಹಾರದಲ್ಲಿ ರುಚಿ ಹೆಚ್ಚು ಬಯಸುತ್ತಾರೆ. ಹಾಗೆಯೇ ಧೃಡಕಾಯರಾಗಿ ಬೆಳೆಯುವ ಇಲ್ಲಿನ ಯುವಕರು ಹೊಲ,ತೋಟಗಳಲ್ಲಿ ಮೈ ಬಗ್ಗಿಸಿ ದುಡಿಯುವ ಪರಿ ವರ್ಣಿಸಲು ಅಸಾಧ್ಯ, " ಎನ್ನುತ್ತಾರೆ ಡಾ.ಶಿವರಾಜ್ ಬ್ಯಾಡರಹಳ್ಳಿ. ಅವರು ಬರೆದಿರುವ 'ಇಲಿ ಬೇಟೆ' ಪ್ರಬಂಧ ನಿಮ್ಮ ಓದಿಗಾಗಿ..

ನಮ್ಮ ಬಯಲು ಸೀಮೆಯ ಜನ ಬಡತನ ಬವಣೆಗಳಿಂದ ನರಳಿ ವರ್ಷ ಪೂರ್ತಿ ದುಡಿದು ಹೈರಾಣಾಗುವುದು, ಮುಂಗಾರು ಮಳೆ ಬಿದ್ದ ಮೇಲೆ ಮತ್ತೆ ಮೈ ಕೊಡವಿ ಎದ್ದೇಳುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿದೆ. ನಮ್ಮದು ಬರಡು ಭೂಮಿಯಲ್ಲದಿದ್ದರೂ ರಾಗಿ, ಹುರುಳಿ, ಅವರೇ ತೊಗರಿ ಕಾಳು ಬೆಳೆದುಕೊಂಡು ಕಾಲಯಾಪನೆ ಮಾಡುತ್ತಿರುವ ಜನ ಸಮೂಹವೇ ಹೆಚ್ಚಾಗಿ ಇರುವ ರೈತಾಪಿ ಕುಟುಂಬಗಳ ಇರುವ ಭೂ ಪ್ರದೇಶ. ಯಾವ ಬೆಳೆ ಆಗದಿದ್ದರೂ ರಾಗಿ ಬೆಳೆ ಮಾತ್ರ ಅಷ್ಟೋ ಇಷ್ಟೋ ಆಗೋದಂತೂ ಗ್ಯಾರಂಟಿ ಎನ್ನೋ ನಂಬಿಕೆ ಈ ಭಾಗದ ರೈತರದ್ದು. ಬಿಸಿಲಿಗೆ ಮೈಯೊಡ್ಡಿ ದನ ಕಾಯುವ ಹುಡುಗರು ಮುಂಗಾರು ಮಳೆ ಬಿದ್ದ ಕೂಡಲೇ ಬಿರುಸಾಗಿ ತಮ್ಮ ಹೊಲವನ್ನು ಹಸನು ಮಾಡಲು ಅಣಿಯಾಗುತ್ತಾರೆ. ಕಾಡಿಗೆ ಹೊಂದಿಕೊಂಡತಿರುವ ಇತ್ತಲ ಹಳ್ಳಿಗಳಿಗೆ ಯಾವುದೂ ಕೊರತೆ ಇರುವುದಿಲ್ಲ. ಹಳ್ಳ ಕೊಳ್ಳದಲ್ಲಿ ಮೀನು, ಏಡಿ ಕಾಯಿ ಇಡಿದು ಅಲ್ಲೇ ಒಲೆ ಹೂಡಿ ಸುಟ್ಟು ತಿನ್ನುವ ಕಾಡಿನ ಸಂಸ್ಕೃತಿಗೆ ಎಲ್ಲರೂ ಒಗ್ಗಿಕೊಂಡವರೆ ಆಗಿದ್ದಾರೆ.

ಈಗಲೂ ಸೌದೆಯಿಂದಲೇ ಅಡಿಗೆ ಮಾಡಿ ತಿನ್ನುವ ಜನರು ಆಹಾರದಲ್ಲಿ ರುಚಿ ಹೆಚ್ಚು ಬಯಸುತ್ತಾರೆ. ಹಾಗೆಯೇ ಧೃಡಕಾಯರಾಗಿ ಬೆಳೆಯುವ ಇಲ್ಲಿನ ಯುವಕರು ಹೊಲ, ತೋಟಗಳಲ್ಲಿ ಮೈ ಬಗ್ಗಿಸಿ ದುಡಿಯುವ ಪರಿ ವರ್ಣಿಸಲು ಅಸಾಧ್ಯ. ಎಲ್ಲಾ ಕಾಲದಲ್ಲೂ ಶ್ರಮ ಶ್ರದ್ಧೆ, ದುಡಿಮೆ ಜೊತೆಗೆ ಒಂದಷ್ಟು ಕಳ್ಳ ತನ, ಕಳ್ಳಬೇಟೆಗಳು, ಜಗಳಗಳು, ಬೈದಾಟ ಅಲ್ಲಲ್ಲಿ ನಡೆಯುತ್ತಾ ಸಂಸ್ಕೃತಿಯ ಭಾಗವೆಂಬಂತೆ ಬದುಕುತ್ತಿರುವ ಜನ ಈಗಲೂ ಅನ್ನವನ್ನೇ ದೇವರೆಂದು ನಂಬುವವರಾಗಿದ್ದಾರೆ.

ಮುಂಗಾರು ಗಾಳಿ ಬೀಸಿ 'ಮುಸಿಕಲ್' ನೆತ್ತಿ ಮೇಲೆ ಮಿಂಚುಟ್ಟಿದರೆ ಮಳೆ ಗ್ಯಾರಂಟಿ ಎಂದು ಹೇಳುತ್ತಿದ್ದ ಈರಣ್ಣನೂ, ನಾಟಿ ವೈದ್ಯನಾಗಿ ದನ ಕರುಗಳಿಗೆ ಧೂಳಿ ಕೊಡುವ ಪಂಡಿತರು ಇದ್ದ ಈ ಊರಲ್ಲಿ ಬೇಟೆಯನ್ನು ಚಾಚು ತಪ್ಪದೆ ಮಾಡುತ್ತಾರೆ. ಅವುಗಳಲ್ಲಿ ಮೀನು ಶಿಕಾರಿ, ಹಂದಿ ಶಿಕಾರಿ, ಮೊಲದ ಶಿಕಾರಿ ಹೀಗೆ ಹಲವು ಬೇಟೆಗಳನ್ನು ಆಡಿ ಪಳಗಿದವರೆ ಇದ್ದಾರೆ. ಅವರಲ್ಲಿ ಕೆಲವರು ಮಾತ್ರ ಬದುಕುಳಿದಿರುವ ಹಳೆ ತಲೆಗಳ ಪೈಕಿಯ ಹತ್ತಿಪ್ಪತ್ತು ಜನರ ತಲೆ ನರೆತರೂ ಮೊದಲ ಮುಂಗಾರು ಮಳೆ ಬಿದ್ದ ದಿವಸ ಇಲಿ ಬೇಟೆಯಾಡುವುದನ್ನು ಮರೆಯುವುದಿಲ್ಲ. ಇಲಿ ಬೇಟೆ ಯಾಡುವುದೆಂದರೆ ಬುಡ ಕಟ್ಟು ಅಲೆಮಾರಿ ಸಮುದಾಯ ತನ್ನ ಹೊಟ್ಟೆ ಪಾಡಿಗಾಗಿ ಕಂಡುಕೊಂಡ ಬೇಟೆ ತುಂಬಾ ಪ್ರಾಚೀನವಾದುದು. ಬಿಲಗಳಿಗೆ 'ಹೂದಲು' ಹಾಕಿ ಬಿಲದಲ್ಲಿದ್ದ ಇಲಿಗಳು ಉಸಿರುಕಟ್ಟು ಸಾಯಿಸುವ ತಿಳುವಳಿಕೆಯು ತುಂಬಾ ಹಳೆಯದು. ಕಾಡಂಚಿನ ಊರುಗಳು ಕಾಡುಪ್ರಾಣಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಅನಿವಾರ್ಯತೆ ಎಲ್ಲಾ ಕಾಲದಲ್ಲಿಯೂ ಇದ್ದೆ ಇದೆ.

ಆಗ ನಾವಿನ್ನು ಬಾಲಕರು, ಆ ವರ್ಷ ಒಂದು ದಿನ ಭಾರೀ ಮಳೆ ಯುಗಾದಿ ತೀರಿದ ಮೂರು ದಿನಕ್ಕೆ ಚಚ್ಚಿಯೋಯಿತು. ಮಳೆ ಸುರಿದ ರಭಸಕ್ಕೆ ಕೆರೆ ಕಟ್ಟೆ ಎಲ್ಲ ಕೋಡಿಯಾದವು. ಊರೇ ನೀರಿನಲ್ಲಿ ತೇಲುವಂತೆ ಆಯಿತು. ಸಣ್ಣಪುಟ್ಟ ಕಟ್ಟೆಗಳು ಮದನಾಡಿದವು.ಸಣ್ಣ ಪುಟ್ಟ ಐಕಳು ಕೋಡಿಯಾದ ಜಾಗದಲ್ಲಿ ಮೀನು ಇಡಿಯಲು ಹೊರಟರೆ, ಕೇಂಡೆ ಗೌಡರ ಪೈಕಿ 'ಮರಿಯ' ಮತ್ತು ಸಂಗಡಿಗರು ಹಾರೆ, ಗುದ್ದಲಿ, ಪಿಕಾಸಿ ಸಮೇತ ಹೊಲ ಬಯಲು ಕಡೆ ಇಲಿ ಶಿಕಾರಿಗೆ ಹೊರಟರು.. ಅಂದು ನಡು ಮದ್ಯಾಹ್ನಕ್ಕೇ ಮಳೆ ಸುರಿದು ಹೋಗಿ ಮೋಡದಲ್ಲಿ ಮೂಡಿದ ಕಾಮನಬಿಲ್ಲ ಕಾಂತಿ ಹಳ್ಳಿ ಮಕ್ಕಳ ಕೂತೂಹಲವನ್ನು ಹೆಚ್ಚಿಸುತ್ತಿದ್ದರೆ ಮಳೆಯಿಂದ ಆದ ಹಾನಿಯನ್ನು ತಕ್ಷಣವೇ ಎಚ್ಚೆತ್ತುಕೊಂಡು ಮಾಳಿಗೆ, ಸಡ್ಡು, ಹೆಂಚು ಮನೆಗಳ ಮೇಲೆ ಹತ್ತಿ ಸೋರುವ ಕಡೆ ತಾತ್ಕಾಲಿಕವಾಗಿ ಟಾರ್ಪಲ್ ಹಾಕಿ ಸರಿ ಪಡಿಸಿಕೊಳ್ಳುತ್ತಿದ್ದ ಜನ ಮನೆ ಮೇಲೆ ನಿಂತು ಇಲಿ ಬೇಟೆಯಾಡುವುದನ್ನೇ ನೋಡುತ್ತಿದ್ದರು. ಇದು ಪ್ರತಿ ವರ್ಷದ ಮೊದಲ ಮಳೆಗೆ ನಡೆಯುತ್ತಿದ್ದ ಮೊದಲ ಬೇಟೆಯಾಗಿರುತ್ತಿತ್ತು.ನಾನೂ ಖುಷಿಯಿಂದ ಬೇಟೆಗಾರರ ಬೆನ್ನು ಹತ್ತಿದೆ. ಹತ್ತು ಜನರ ಗುಂಪಿನಲ್ಲಿ ಮರಿಯನೆ ಹಿರಿಯ. ಕಟ್ಟು ಮಸ್ತಾದ ಆಳು. ಇವನಿಗೆ ಯಾವ ಇಲಿ ಎಲ್ಲಿ ವಾಸ ಮಾಡುತ್ತದೆಂದು ತನ್ನ ಕಾಲು ನಡಿಗೆಯಿಂದಲೇ ಕಂಡು ಕೊಂಡಿದ್ದ.ನಡೆದು ನಡೆದೂ ಊರ ತುಂಬಾ ಇದ್ದ ಇಲಿ ಬಿಲಗಳ ಬಗ್ಗೆ ಖಚಿತವಾದ ಮಾಹಿತಿ ಈತನಿಗೆ ಇತ್ತು. ಹೊಲಬಯಲನ್ನು ಕಣ್ಣಲ್ಲೇ ಸರ್ವೇ ಮಾಡುವನಂತೆ ಇದ್ದ. ಸುಗ್ಗಿಯಕಾಲದಲ್ಲಿ ರಾತ್ರಿ ಹೊತ್ತು ಹಣೆಗೆ ಬ್ಯಾಟರಿ ಹಾಕೊಂಡು ಹುಲ್ಲು ಮೆದೆಯ ತಳ ಭಾಗದಲ್ಲಿ ರಾಗಿ ತೆನೆಯನ್ನು ತಿನ್ನಲು ಬರುತ್ತಿದ್ದ ಇಲಿಗಳ ರಾಶಿಯನ್ನೇ ಬೇಟೆಯಾಡಿ ನಿಸ್ಸಿಮನಾಗಿದ್ದ. ಮಳೆ ಬಿದ್ದ ಆ ದಿವಸ ಹೊಲ ಮಾಳದಲ್ಲಿ ಈತ ಯಾವುದೇ ಇಲಿಯ ಬಿಲಕ್ಕೆ ಕಡ್ಡಿ ಚುಚ್ಚಿ ಇಲಿಯನ್ನು ಎಬ್ಬಿಸಿದರೆ ಒಂದೇ ಸಾರಿ ಹತ್ತಾರು ಇಲಿಗಳು ದಿಕ್ಕಾಪಾಲಾಗಿ ಓಡು ತ್ತಿದ್ದವು. ಆ ಓಟದಲ್ಲಿ ಕೆಲವಾದರೂ ಇವನ ಕಣ್ಣಿಂದ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಜೊತೆಗೆ ಇವನ ಜೊತೆ ಇದ್ದ ಹತ್ತು ಜನರೂ ಅಟ್ಟಾಡಿಸಿ ಇಲಿಯನ್ನು ಕೆಲವು ಸಾರಿ ಕಾಲಲ್ಲೇ ತುಳಿದು ಅವುಗಳಿಗೆ ಒಂದು ಗತಿ ಕಾಣಿಸುತ್ತಿದ್ದರು. ಕೆಲವು ಇಲಿಗಳು ಬಿಲಕ್ಕೆ ನುಗ್ಗಿದ ನೀರು ಕುಡಿದು ನಿತ್ರಾಣವಾಗಿ ಇಲಿ ನುಂಗಿದ ಹಾವಿನಂತೆ ಓಡಲು ಆಗದೆ ಬಹು ಬೇಗ ಸುಸ್ತಾಗಿ ತನ್ನ ಕೊರಳನ್ನು ಬೇಟೆಗಾರನ ಕೈಗೆ ಒಪ್ಪಿಸಿ ಶರಣಾಗುತ್ತಿದ್ದವು. ನಾನು ಮಾತ್ರ ಇದನ್ನು ಒಂದು ಆಟವೆಂಬಂತೆ ನೋಡುತ್ತಿದ್ದೆ. ಗಣೇಶನ ವಾಹನವಾದ ಇಲಿಯ ಪಾಡು ಪಾಪ ಅಯ್ಯೋ ಎನಿಸುತ್ತಿತ್ತು. ಕಷ್ಟಕ್ಕೀಡಾಗುವ ಇಂತಹ ಸಮಯದಲ್ಲಿ ಇಲಿಯನ್ನು ದೊಡ್ಡ ಹೊಟ್ಟೆಯ ಗಣೇಶ ಬಂದು ಕಾಪಾಡಬಾರದೇಕೆ ಎಂದು ಅನಿಸುತ್ತಿತ್ತು!

ಊರಂಚಿನ ಬೀಳು ಹೊಲದಲ್ಲಿ ಎಲ್ಲೆಂದರಲ್ಲಿ ಬಿಲ ಕೊರೆದು ಮಣ್ಣ ಗುಡ್ಡೆ ಮಾಡಿದ ಆ ಹೊಲವನ್ನು ಬಹು ದಿನಗಳಿಂದಲೇ ನೋಡಿ ಕೊಂಡಿದ್ದ 'ಮರಿಯ' ಆ ವರ್ಷ ಮಳೆ ಬೀಳುವುದನ್ನೇ ಕಾಯುತ್ತಿದ್ದವನಂತೆ ಮೊದಲ ಮಳೆ ಬಿದ್ದು ರಭಸವಾಗಿ ಕೊಳ್ಳೆಕ್ಕೆಯಲ್ಲಿ ನೀರು ಚಲ್ಲಾಡುತ್ತಿತ್ತು. ಆ ದಿನ ಮರಿಯ ಕೆಲವು ಚಿರಪರಿಚಿತ ಬಿಲಗಳಿಗೆ ತಾನೇ ಕೈ ಹಾಕಿ ಇಲಿಗಳ ಹೊರಗೆಳೆದು ಬಾಲ ಇಡಿದು ನೆಲಕ್ಕೆ ರಪ್ ಅಂತ ಹೊಗೆದು ಪ್ರಾಣ ತೆಗೆಯುತ್ತಿದ್ದ. ಹೀಗೆ ಹತ್ತಾರು ಬಿಲಗಳಿಗೆ ಕೈ ಹಾಕಿದರೂ ಅಂದು ಅವನ ನಿರೀಕ್ಷೆಯಂತೆ ಇಲಿಗಳು ಸಿಗದಿರುವುದು ಅವನ ಬೇಸರಿಕೆಗೆ ಕಾರಣವಾಗಿತ್ತು. ಎಷ್ಟು ಮಳೆ ಬಂದರೇನು ಇಲಿ ಹೊರ ಬರದ ಮೇಲೆ ಮಳೆಯ ಪ್ರಮಾಣ ಕಡಿಮೆ ಎಂದು ಹವಾಮಾನ ಇಲಾಖೆಯವರು ಹೇಳುವಂತೆ ಲೆಕ್ಕಾಚಾರದಲ್ಲಿ ಹೇಳುತ್ತಿದ್ದ.

ಈ ಇಲಿಯ ಬೇಟೆಯಾಡುವುದೆಂದರೆ ನಮ್ಮ ಕಡೆ ಸಲೀಸು ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಜನರಿಗೆ ಪ್ರಾಣಿಗಳ ಬಾಡು ದುಬಾರಿ ಎಂತಲೂ, ಕಾಡು ಮಿಕಗಳಲ್ಲಿ ಅದೇನೇನೋ ಔಷಧಿ ಗುಣಗಳಿವೆ ಎಂತಲೂ ಪೂರ್ವದಿಂದಲೂ ನಂಬಿದ್ದರು. ಕಾಡು ಮೇಡುಗಳ ಮಿಕದ ಬಾಡು ರುಚಿಯಾಗಿರುತ್ತದೆಂದು ತನ್ನ ನಾಲಗೆಯ ಹಂಬಲವನ್ನು ಹೀಗೆ ತೀರಿಸಿಕೊಳ್ಳುವ ಪರಿಯ ಮೋಹವು ಮಾತ್ರ ಹೇಳ ತೀರದು. ಇಲಿ, ಮೊಲ,ಹಕ್ಕಿ, ಗೌಜಲಕ್ಕಿ,ಕಾಡು ಬೆಕ್ಕು, ಕೇರೆ ಹಾವು ಕಾಡು ಹಂದಿ, ಉಡ ಇವುಗಳ ಮಾಂಸದರುಚಿಯನ್ನು ತಿಂದವರು ಬಹಳ ರಸವತ್ತಾಗಿ ವರ್ಣಿಸುವ ಪರಿ ನೋಡಿದರೆ ತಿನ್ನದವನೂ ತಿನ್ನಬೇಕು ಎಂದು ರುಚಿ ಹುಟ್ಟಿಸುವಷ್ಟು ಆಸೆ ಹುಟ್ಟುತ್ತದೆ. ಇಲಿಯ ಬಾಡು ರುಚಿಯೋ ರುಚಿ ಎಂದು ತನ್ನ ಗತಕಾಲದ ನೆನಪುಗಳನ್ನು ಈಗಲೂ ಮೆಲುಕು ಹಾಕುವ ಅಜ್ಜರಿದ್ದಾರೆ. ಬಾಡಿನ ರೇಟು ಏರುತ್ತಿದ್ದರೂ ಇಲಿಯ ಬೇಟೆಯಿಂದಲೇ ತನ್ನ ನಾಲಗೆ ರುಚಿಯನ್ನು ಸಮ ಗೊಳಿಸಿಕೊಳ್ಳುತ್ತಿದ್ದ ಪೂರ್ವಿಕರು ಎಲ್ಲವನ್ನು ನಿಸರ್ಗದ್ಲಲಿಯೇ ಕಾಣುತ್ತಿದ್ದರು. ಪುರಾಣಕ್ಕೆ ಹೋದರೆ ಇಲಿರಾಯ ಗಣೇಶನ ಸವಾರಿಮಾಡುವ ವಾಹನ. ಪಾಪ ಮರಿಯ ಇವೆಲ್ಲವನ್ನು ನೋಡುತ್ತಿರಲಿಲ್ಲ. ಹೊಟ್ಟೆ ತುಂಬಿ ರುಚಿ ಸಿಕ್ಕರೆ ಸಾಕು ಯಾವುದಾದರೇನು? ಆ ದೇವರಲ್ಲಿ ಯೂ ಎರಡು ತರದವುಗಳಲ್ಲವೇ? ಒಂದು ಸಿಹಿ ದೇವರು, ಇನ್ನೊಂದು ಖಾರ ದೇವರು ಹೀಗಿರುವಾಗ ನಾವ್ ತಿನ್ನುವುದ್ರಲ್ಲಿ ಅದ್ಯಾವ ಪಾಪ ಇರಬಹುದು ಎಂದು ತನಗೇ ತಾನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದ. ಈಗ ಬೇಟೆಗಳೆಲ್ಲ ನಿಷಿದ್ಧವಾಗಿರುವಾಗ ಅಂದಿನ ಜನರು ಪಾಪ ಪುಣ್ಯಗಳಿಗಿಂತಲೂ ಹೊಟ್ಟೆ ತುಂಬಿದರೆ ಸಾಕು ಅದೇ ಮುಖ್ಯ ಎನ್ನುವುದಾಗಿತ್ತು.ಬೇಟೆ ಒಂದು ನಮ್ಮ ಸಂಸ್ಕೃತಿ ಯ ಭಾಗವಾಗಿತ್ತು. ಪ್ರಾಣಿಗಳು ಈಗಲೂ ಒಂದನ್ನೊಂದು ಬೇಟೆಯಾಡಿಯೇ ಬದುಕುತ್ತಿವೆ. ಹೀಗಿರುವಾಗ 'ಬೇಟೆ ಯಾಡೋದು ನೋಡು, ಕೋಟೆ ಹತ್ತೊದು ನೋಡು' ಎಂಬ ಮಾತು ವಿಶಿಷ್ಟ ಆಲೋಚನೆಯದ್ದು.

ಕೆಲವು ವರ್ಷಗಳ ಹಿಂದೆ ಮಳೆ ಇಲ್ಲದೆ ನಮ್ಮ ಭಾಗದಲ್ಲಿ ಇಲಿಗಳು ಪೂರಾ ಹೆಚ್ಚಾದವು. 'ಬೊಮ್ಮನಹಳ್ಳಿಯ ಇಲಿಗಳಂತೆ' ಬರ ಬಂದರೂ ಕದ್ದು ತಿನ್ನುವ ರೂಢಿ ಇರುವ ಇಲಿಗಳಿಗೆ ಕಳ್ಳತನ ತಪ್ಪು ಎಂದು ಹೇಗೆ ಗೊತ್ತಾಗಬೇಕು. ಗೊತ್ತಿರುವ ಮಾನವರು ಬಹಿರಂಗವಾಗಿಯೇ ಕಳ್ಳತನ ಮಾಡುತ್ತಿದ್ದಾರಲ್ಲ! ಮನೆಯ ಇಲಿಗೂ ಬೆಟ್ಟದ ಇಲಿಗೂ ಹೇಗೋ ಏನೋ ಹೊತ್ತೊತ್ತಿಗೂ ಅನ್ನ ಸಿಗುವಂತೆ ಮಾಡಿರುವ ಜೀವ ಸೃಷ್ಟಿಯ ವಿಸ್ಮಯ ಹೇಳತೀರದು.ಊರ ತುಂಬಾ ಇಲಿಗಳೇ. ಇಲಿ ಹೆಗ್ಗಣಗಳು ತುಂಬಾ ಶ್ರಮ ಜೀವಿಗಳು ಒಂದು ರಾತ್ರಿ ನಿದ್ದೆ ಗೆಟ್ಟರೆ ಮಾರುದ್ದ ಬಿಲ ತೋಡುವ ಅವುಗಳ ಸಾಹಸ ದೊಡ್ಡದು. ಒಂದು ದಿನ ಮಾಯದ ಮಳೆ ಬಂತು. ಆ ದಿನ ಮರಿಯನಿಗೆ ತಮ್ಮ ಹೊಲದಲ್ಲಿ ಕೊರೆದಿದ್ದ ಮಾರುದ್ದದ್ದ ಬಿಲ ನೋಡಿ ಕಡಿಮೆ ಎಂದರೂ ಹತ್ತಾರು ಇಲಿಗಳ ದೊಡ್ಡ ಗುಂಪು ಎಂದು ಭಾವಿಸಿ ಅಗೆಯಲು ನಿರತನಾದ. ಅಗೆಯುತ್ತಾ ಒಂದು ಸಣ್ಣ ಬಾಲದ ತುಂಡು ಕಣ್ಣಿಗೆ ಕಾಣುತ್ತಲೇ ತನ್ನ ಮನಸ್ಸಿನಲ್ಲಿ ಅಂದು ಕೊಂಡಿದ್ದು ಅದೇ ಎನ್ನುವಂತೆ ಆಯಿತು. ಬಿಲದ ಸುತ್ತ ಪಹರೆಯವರಂತೆ ಮಕ್ಕಳ ಜೊತೆ ನಿಂತು ಇಲಿ ಹೊರಬರುವುದನ್ನೇ ಕಣ್ಣಗಲಿಸಿ ನಾವೆಲ್ಲ ನೋಡುತ್ತಿದ್ದೆವು. ಏನು ಬಗೆ ಮಾಡಿದರೂ ಬಾಲ ಕೈಗೆ ಸಿಗದಂತಾಯ್ತು. ಇಂತ ಮಹತ್ ಬೇಟೆ ತಪ್ಪಬಾರದೆಂದು ಕೈಯಿಂದ ಎಳೆದರೆ ಎಲ್ಲಿ ಜಾರಿ ತಪ್ಪಿಸಿಕೊಳ್ಳುತ್ತದೆಂದು ಬಾಲವನ್ನು ಹಲ್ಲಿನಿಂದ ಕಚ್ಚಿ ಎಳೆಯಲು ಬಾಯಿ ಹಾಕಿದ. ಎಷ್ಟು ಗಟ್ಟಿಯಾಗಿ ಇಡಿದಿತ್ತೆಂದರೆ ಬಾಲದ ಚರ್ಮವೇ ಬಾಯಿಗೆ ಆಂಟಿ ಕೊಂಡಿತು. ಇದು ಸರಿಯಾದ ದೊಡ್ಡ ಇಲಿಯೇ ಇರಬೇಕೆಂದು ನಿಂತಿದ್ದವರೆಲ್ಲ ಅವಕ್ಕಾದರು. ಏನೇ ಆಗಲಿ ಬಿಡಬಾರದು ಎಂದು ಮತ್ತೆ ಪ್ರಯತ್ನ ಪಟ್ಟ ದೇಹದ ಹಸಿವನ್ನು ನಾಲಗೆಗೆ ತಂದು ಕೊಂಡಂತೆ ಮತ್ತಷ್ಟು ಬಗೆ ಮಾಡಿ ಮುಖ ತೂರಿಸಿ ಬಾಲವನ್ನೇ ನುಂಗುವಂತೆ ಬಲವಾಗಿ ಕಚ್ಚಿ ಎಳೆದ. ಎಳೆದ ರಭಸಕ್ಕೆ ಇಲಿಯ ಮೂತಿಯನ್ನು ಅರ್ಧ ನುಂಗಿದ ಹಾವು ಜೊತೆಯಲ್ಲಿಯೇ ಬಂತು ಇದ ಕಂಡು ನಿಂತವರೆಲ್ಲ ಹಾವು….ಎಂದು ಪೇರಿ ಕಿತ್ತರು. ನಾನು ಮತ್ತು ಜೊತೆಯಲ್ಲಿದ್ದವರೆಲ್ಲ ಗಾಬರಿಗೊಂಡು ಬಿದ್ದಂಬೀಳ ಓಡಿದೆವು. ಇಲಿಯು ಒದರಾಡದೆ ತನ್ನ ಬಾಯಿಯನ್ನು ಹಾವಿನ ಬಾಯಿಗೆ ಕೊಟ್ಟು ತನ್ನ ಶರೀರವನ್ನು ಕೊಂಚ ಅಲುಗಾಡಿಸುತ್ತಿತ್ತು. ಮರಿಯ ಬಿಲದ ಮೇಲೆಕ್ಕೆ ಬಂದು ಸರಿಯಾದ ದಡಿ ತೆಗೆದುಕೊಂಡು ಹಾವಿಗೆ ಒಂದು ಬಡಿದ. ಏಟು ತಿಂದ ಹಾವು ವಿಲವಿಲನೆ ಒದರಾಡಿ ಇಲಿಯನ್ನು ಬಿಟ್ಟು ಬೇಲಿ ಮರೆಯಲ್ಲಿ ಕ್ಷಣಾರ್ಧದಲ್ಲಿ ಮರೆಯಾಯಿತು. ಹಾವಿನ ಬಾಯಿಯಿಂದ ತಪ್ಪಿಸಿಕೊಂಡ ಇಲಿಯು ಅಷ್ಟೇನು ಲವಲವಿಕೆಯಿಂದ ಕಾಣುತ್ತಿರಲಿಲ್ಲ. ಗುಟುಕು ಜೀವವಿದ್ದ ಆ ಇಲಿಯನ್ನು ಇಡಿದು ರಪ್ ಅಂತ ಹೊಗೆದ ಮರಿಯ 'ಪಕ್' ಅಂತ ಜೀವ ಬಿಟ್ಟಿತು. ತನ್ನ ಹಳೆ ಚೀಲಕ್ಕೆ ಇಲಿಯನ್ನು ತುಂಬಿಕೊಂಡು ಮುಂದೆ ಮುಂದೆ ಹೊರಟ. ದೂರದಲ್ಲಿ ಹೆದರಿ ಹೋದ ಹುಡುಗರನ್ನು ಕೂಗುತ್ತಾ 'ಬನ್ನಿರೋ ಬಡ್ಡಿ ಮಕ್ಕಳ '…. ಎಂದು ಇಲಿಗೆ ಎದರಿದರೆ ಹುಲಿ ಬಂದ್ರೆ ಏನ್ಮಾಡ್ತೀರಿ! ನೀವು ಧೈರ್ಯ ಇರಬೇಕು. ಗುಂಡಿಗೆ ಗಟ್ಟಿ ಮಾಡ್ಕೋಬೇಕು ಜೀವನವೇ ಒಂದು ಬೇಟೆ ! ಎಂದು ಕೂಗುತ್ತಾ ಮುಂದೇ ಸಾಗಿದ. ನಾವೂ ಹೆಜ್ಜೆ ಹಾಕಿದೆವು

ಕಾಡು ಪಹರೆಯೊಳಗೆ ಯಾವ್ಯಾವ ಜಾಗದಲ್ಲಿ ಇಲಿಗಳು ಸಾಕಷ್ಟು ಸಿಗುತ್ತವೆ ಎಂಬುದನ್ನು ಕಾಡು ಮೇಡು ತಿರುಗಿ ಚನ್ನಾಗಿ ಬಲ್ಲವನಾಗಿದ್ದ ಮರಿಯನನ್ನ 'ಶಿಕಾರಿ ಮರಿಯ 'ಎಂದು ಕರೆಯುತ್ತಿದ್ದರು. ಮಂದೆ ಇಲಿ ಎಲ್ಲೆಲ್ಲಿ ವಾಸ ಮಾಡುತ್ತವೆ, ಕಾಡಿಲಿಗಳ ಚಲನ ವಲನವನ್ನು ಚನ್ನಾಗಿ ಅರ್ಥ ಮಾಡಿಕೊಂಡಿದ್ದ. ಯಾವುದೇ ಬೇಟೆಗೋದರೂ ಬರೀ ಕೈಯ್ಯಲ್ಲಿ ಬರುವವನಲ್ಲ. ಕಾಲೆತ್ತು ಕಡೆದರೆ ಬೇಟೆ ಗ್ಯಾರಂಟಿ ಎನ್ನುವಷ್ಟು ಚಾಣಾಕ್ಷನು ಆಗಿದ್ದನು. ಇದನ್ನು ನೋಡಿದ ಬೇರೆ ಗುಂಪಿನ ಜನರು ಇವನನ್ನು ಕಂಡರೆ ಕರುಬುತ್ತಿದ್ದರು. ಕೆಲವರು ಇವನಿಗೆ 'ಹೊಲಸು ಗರಿ'ಇದೆಯೆಂದೂ ಅದಕ್ಕಾಗಿ ಇಲಿಗಳು ಸಿಗುತ್ತಿವೆ ಎಂದು ನಂಬುತ್ತಿದ್ದರು. ಇಲಿಗಳ ಜೀವ ಜೀವನವನ್ನು ಅರಿತವನಾಗಿದ್ದು ಅವುಗಳ ಸಂತಾನ ಆಹಾರಕ್ರಮ ಎಲ್ಲವೂ ಗೊತ್ತಿತ್ತು.ಇಷ್ಟಾದರೂ ಮರಿಯನಿಗೆ ಬೇಟೆಯಾಡುವಾಗ ಇಲಿ, ತೋಡ, ಮುಂಗುಸಿ ಕೈ ಬೆರಳನ್ನೇ ಕವರಿ ಗಾಯ ಮಾಡಿದ್ದುದು ಇದೆ. 'ಸಾಕಿದ ಗಿಣಿ ಕೈ ಕಚ್ಚುವಂತೆ ' ಇದಕ್ಕೆಲ್ಲ ಎಂದೂ ಹೆದರದ ಮರಿಯ ಅವುಗಳಿಗೆಲ್ಲ ಸೊಪ್ಪು, ನಾರು ಭೇರು ಔಷಧಿ ಮಾಡಿ ಹೇಗೋ ವಾಸಿಮಾಡಿಕೊಳ್ಳುತ್ತಿದ್ದ. ಒಟ್ಟಿನಲ್ಲಿ ಗಂಡಸು ಅಂದ್ರೆ ಮರಿಯ, ಇಲಿ ಮರಿಯ ಎನ್ನುವಂತಾಗಿತ್ತು. ರಾತ್ರಿ ಹೊತ್ತಿನಲ್ಲಿ ಬೇಟೆ ಯಾಡುವುದು ಅಂದ್ರೆ ಗುಂಡಿಗೆ ಗಟ್ಟಿಯಾಗಿರಬೇಕು! ನಿಷಾಚರಿಗಳು ತಿರುಗುವ ಸಮಯ ಅಷ್ಟೇ ಅಲ್ಲ! ಕಲ್ಲು ನೀರು ಕರಗುವ ಸಮಯ! ದೆವ್ವ ದೈವ ಓಡಾಡುವ ಸಮಯ ಎಂದು ನಂಬುವ ಕಾಲವದು

ಸುಗ್ಗಿ ಕಾಲದಲ್ಲಿ ಹುಲ್ಲು ಮೆದೆಗಳ ತೆನೆಯನ್ನು ಮೆದ್ದು ಚನ್ನಾಗಿ ಕೊಬ್ಬಿರುವ ಇಲಿಗಳನ್ನು ಹಣೆ ಬ್ಯಾಟರಿ ಹಿಡಿದು ಬೇಟೆ ಯಾಡುವುದೆಂದರೆ ಸಾಹಸ. ಕಾರಣ ಇಲಿಯನ್ನು ತಿನ್ನಲು ಬರುವ ಹಾವುಗಳು ಒಂದೊಂದು ಸಾರಿ ಬಲೆಗೆ ಬಿದ್ದು ದೊಡ್ಡ ಅನಾಹುತವೇ ಆಗಿರುವುದನ್ನು ಮರೆಯುವುದಿಲ್ಲ. ಊರ ಬಯಲಲ್ಲಿ ದೊಡ್ಡ ಅಂಕಣದ ಮೆದೆಗಳನ್ನು ಹುಡುಕಿ ರಾಗಿ ಹೊಕ್ಕಲು 'ಕಣ' ಮಾಡಿರುವ ಜಾಗವನ್ನೇ ಹುಡುಕುತ್ತಿದ್ದ ಮರಿಯ.

ಅಂದು ದನ ಮೆಯಿಸಿ ಬಂದ ಮರಿಯ ತನ್ನ ಸಂಗಡಿಗರಿಗೆ ಮೊದಲೇ ಸೂಚನೆ ಕೊಟ್ಟು ಬೇಗ ರಾತ್ರಿ ಊಟ ಮುಗಿಸಿ ಬಲೆ ಇಡಿದು ಹಣೆ ಬ್ಯಾಟರಿ ಹಾಕಿಕೊಂಡು ಐದಾರು ಜನರೊಂದಿಗೆ ಹೊರಟ. ಒಂದು ಸಣ್ಣದಾದ ಉದ್ದನೆಯ ಕೋಲನ್ನು ಇಡಿದು ಹತ್ತಾರು ಮೆದೆಗಳ ತಳಭಾಗದಲ್ಲಿ ಬಲೆ ಹೂಡಿ ಸೂ…..ಸೂ…...…. ಚು….ಚು…...ಎಂದು ಸದ್ದು ಮಾಡಿದರೂ ಒಂದೂ ಇಲಿಯು ಬಲೆಗೆ ಬೀಳಲಿಲ್ಲ. ಉಳಿದವರು ಮೆದೆಯ ಸುತ್ತ ಕುಕ್ಕುರುಗಾಲಲ್ಲಿ' ಬಂದೂಕು ಹಿಡಿದ ಕೂರುವ ಸೈನಿಕರಂತೆ' ಕೂತಿದ್ದರು. ಬಹಳ ಹೊತ್ತು ಕಾದರೂ ಒಂದು ಇಲಿಯು ಬಲೆಯ ಕಡೆ ನುಸುಳಲಿಲ್ಲ. ಥು... ತ್ತೇರಿಕೆ ಎಂದು ನಿರಾಶನಾಗಿ ಬಲೆ ಮಡಿಚಿಕೊಂಡು ಮುಂದೆ ನಡೆದ. ನಾವು ಭಯದಲ್ಲಿ ಕತ್ತಲಲ್ಲಿ ಒಬ್ಬರ ಮುಖ ಒಬ್ಬರನ್ನು ಹಣೆ ಬ್ಯಾಟರಿಗಳನ್ನು ಬಿಟ್ಟು ಕೊಂಡು ಅವನ ಹಿಂದೆ ಹೆಜ್ಜೆ ಹಾಕಿದೆವು. ಅಲ್ಲಿಂದ ಒಂದು ಅರ್ಧ ಫರ್ಲಾಂಗು ನಡೆದರೆ ಹುಚ್ಚಿರನ ಮೆದೆ, ಅಲ್ಲಿ 'ಗ್ಯಾರಂಟಿ' ಬೇಟೆ ಎಂದು ತನ್ನ ಸಂಗಡಿಗರನ್ನು ಹುರಿದುಂಬಿಸಿ ಕೊಂಡು ಹೆಜ್ಜೆ ಹಾಕಿದ. ಹೋದ ಕೂಡಲೇ ಗೊತ್ತಾಯಿತು. ಇಲಿಗಳು ಕೇಕೆ ಹಾಕಿಕೊಂಡು ಮೆದೆಯ ಒಳಗೂ ಹೊರಗೂ ರಾಗಿಯ ತೆನೆಯನ್ನು ವಿಲಾಸಿಯಿಂದ ಕುರುಕುತ್ತಿದ್ದವು. ಬಹುದಿನಗಳಿಂದ ಹಸಿದಿರುವಂತೆ ಅರ್ಧ ತಿನ್ನುವುದು ಅರ್ಧ ಉಗುಳುವುದು ಹೀಗೆ ತೆನೆಗಳನ್ನು ಹುತ್ತರಿಸಿ ಬಿಡುತ್ತಿದ್ದವು. ಹೋದವರೆಲ್ಲ 'ಹಿಮದ ಮೇಲೆ ಪಾದ ಇಟ್ಟಂತೆ 'ಹೆಚ್ಚು ಸದ್ದು ಮಾಡದೇ ನಿಧಾನಿಸಿ ಬಂದು ಮೆದೆಯ ಕೆಳಗೆ ಬಲೆ ಬೀಸಿದರು. ಮರಿಯ ಒಂದು ಮೂಲೆಯಿಂದ ಬಿದಿರು ಕೋಲಿನಿಂದ ಚುಚ್ಚಿ ಬಲೆ ಹತ್ತಿರ ಬರುವಂತೆ ಮಾಡುತ್ತಿದ್ದ. ಬಲೆಗೆ ಬಂದವುಗಳು ಮುದುರಿದ ಕೂಡಲೇ ಇಡಿದಿದ್ದವರು ಒಂದೇ ಏಟಿಗೆ ಅಮುಕಿ ಜೀವ ತೆಗೆಯುತ್ತಿದ್ದರು.ನನಗೆ ಜೀವ ಇರುವ ಇಲಿಗಳ ಬಗ್ಗೆ ಭಯವೇ ಇತ್ತು. ಆದರೂ ಬಲೆಯ ಒಂದು ತುದಿಯನ್ನು ಬಾಡಿನಾಸೆಗೆ ಇಡಿದಿದ್ದೆ. ಇಲಿಗಳು ಎಷ್ಟೇ ಒದರಾಡಿದರೂ ಅರಗಳಿಗೆಯಲ್ಲಿ ಹತ್ತಾರು ಇಲಿಗಳು ಆಹುತಿಯಾಗುತ್ತಿದ್ದವು.ಮರಿಯ ಸಣ್ಣನೆ ದನಿಯಲ್ಲಿ ಸೂ…….ಸು…….ಸೂ…..ಎನ್ನುತ್ತಾ ಎತ್ತೆತ್ತಲೋ ಇದ್ದ ಇಲಿಗಳನ್ನು ಬಲೆಯ ಹಂಚಿಗೆ ಬರುವಂತೆ ತನ್ನ ಹಣೆ ಬ್ಯಾಟರಿಯನ್ನು ಬಿಟ್ಟು ಓಡಿಸುತ್ತಿದ್ದ. ಕೆಲವು ಇಲಿಗಳು ಬ್ಯಾಟರಿಯ ಬೆಳಕಿನ ಕಾಂತಿಗೆ ಹೆದರಿ ಮುಂದಿನ 'ಕಾಲನೆತ್ತಿ ಶರಣಾಗುತ್ತಿರುವ ಸೈನಿಕನಂತೆ' ಏದರಿ ನಿಲ್ಲುತ್ತಿದ್ದವು. ಅಂತವುಗಳನ್ನ ಕೈಯಿಂದಲೇ ಇಡಿದು ಹೊರಕ್ಕೆ ಎಳೆದು ರಪ್ ಅಂತ ಹೊಗೆದು ಜೀವ ತೆಗೆಯುತ್ತಿದ್ದ.ಎಳೆದ ಕೋಪಕ್ಕೆ ಇಲಿಗಳು ಕೈ ಗಳನ್ನು ಕವರಿ ಬಿಡುತ್ತಿದ್ದವು.

ಹೀಗೆ ಬೇಟೆ ಸಾಗುತ್ತಿರಬೇಕಾದರೆ ತನ್ನ ಸಂಗಡಿಗರಲ್ಲಿ ಒಬ್ಬನಾದ ಕರಿಯನೂ ಕೂಡ ಒಬ್ಬ ಬಂದಿದ್ದ. ಆತ ನಮ್ಮ ವಾರಿಗೆಯವನು ಅರ್ಧಕ್ಕೆ ಶಾಲೆ ಬಿಟ್ಟು ಕೂಲಿಗೆ ಇಳಿದಿದ್ದ. ಜೊತೆಗೆ ಇಲಿಯ ಬಾಡು ರುಚಿ ಹತ್ತಿಸಿಕೊಡಿದ್ದ ತೆವಲುಗಾರ. ಒಮ್ಮೆ ಮರಿಯನು ಕಣದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಇಲಿಯ ಉಪಜಾತಿಯಾದ 'ತೋಡವು' ಬಗ್ಗಡದ ಗುಂಡಿಯೊಳಗೆ ಬಂದು ಬಿದ್ದಿತು. ಗುಂಡಿ ಅಗೆಯುತ್ತಿದ್ದ ಮರಿಯನು ಅಲ್ಲೇ ಆಟ ಆಡುತ್ತಿದ್ದ ಕರಿಯನಿಗೆ ಇಲಿಯನ್ನು ಸುಟ್ಟು ಉಪ್ಪು ಖಾರ ಹಾಕಿ ಪುಳ್ಳೆ ಸೌದೆಯ ಮೇಲಿಟ್ಟು ಕೊಟ್ಟನು.ಇದರ ರುಚಿಯನ್ನು ಆಸ್ವಾದಿಸಿದ ರುಚಿಯ ಬೆನ್ನ ಹತ್ತಿದ ಕರಿಯ ಇದರ ರುಚಿಯ ಮುಂದೆ ಇನ್ನೇನಿದೆ ಎಂದು ಭಾವಿಸಿ ಓದಿನ ರುಚಿಗೆ ತಿಲಾಂಜಲಿ ಇಟ್ಟ. ಮರಿಯನ ಅಭಿಮಾನಿ ಆದನು. ಇರಲಿ ! ಒಂದು ಮೂಲೆಯಲ್ಲಿ ಬಲೆ ಹಿಡಿದು ಕೂತಿದ್ದ ಕರಿಯನ ಪಟಾ ಪಟಿ ಚಡ್ಡಿಗೆ ಇಲಿಯೊಂದು ನೇರವಾಗಿ ನುಸುಳಿತು. ಕಾರಣ ಮರಿಯ ಅತ್ತ ಕಡೆಯಿಂದ ಕಡ್ಡಿಯಿಂದ ಓಡಿಸುತ್ತಿರುವಾಗ ದಿಕ್ಕಾಪಾಲಾಗಿ ಓಡುತ್ತಿದ್ದ ಇಲಿಗಳು ಹಣೆಯ ಬ್ಯಾಟರಿಗೆ ಕೆಲವು ಗಕ್ಕನೆ ನಿಂತರೆ ಇನ್ನು ಕೆಲವು ಇಲಿಗಳು ಮೆದೆಯ ಒಳಗೆ ಜಾಗ ಮಾಡಿಕೊಂಡು ವಾಪಸು ಹತ್ತುತ್ತಿದ್ದವು. ಅದರಲ್ಲಿ ಒಂದೆರಡು ಇಲಿಗಳು ತಪ್ಪಿಸಿಕೊಂಡು ಓಡಲು ಪ್ರಯತ್ನಿಸುವಾಗ ಆ ಇಲಿಗಳಿಗೆ ಕರಿಯನ ಚಡ್ಡಿಯು ಬಿಲದಂತೆ ಕಂಡಿರಬೇಕು! ಕೊಳವೆಯಾಕಾರದ ಆ ಕತ್ತಲೆ ಇಲಿಗಳಿಗೆ ಯಾವುದೋ ಬಿಲವೆಂದು ಭಾವಿಸಿ ಪ್ರಾಣ ಭೀತಿಯಿಂದ ರಭಸವಾಗಿ ಚಡ್ಡಿಯ ಒಳ ನುಗ್ಗಿದವು. ನುಗ್ಗಿದ ರಭಸಕ್ಕೆ ಬಲೆ ಬಿಟ್ಟು ಕುಣಿದಾಡಿದ ಕರಿಯ ಒಳನುಗ್ಗಿದ ಇಲಿಯಿಂದ ಹೇಗೋ ತಪ್ಪಿಸಿಕೊಂಡ.ಅದ್ಯಾವ ಮಾಯದಲ್ಲಿ ಚಡ್ಡಿ ಒಳ ಹೊಕ್ಕ ಇಲಿಗಳು ಅವನು ಕುಣಿದ ರಭಸಕ್ಕೆ ರಿವರ್ಸ್ ತೆಗೆದುಕೊಂಡು ಪರಾರಿಯಾದವೋ? ಒಟ್ಟಿನಲ್ಲಿ ಏರು ಮುಖದಲ್ಲಿ ಹತ್ತಿದ ಇಲಿಗಳು ಇಳಿಜಾರಿನಲ್ಲಿ ಜಾರಿ ಹೋದದ್ದು ಮಾತ್ರ ಸೋಜಿಗವಾಗಿತ್ತು. ಬಲೆ ಬಿಟ್ಟು ಸಡಿಲವಾಗುತ್ತಿದ್ದಂತೆ ಒಂದು ಕಡೆ ಬಂದ ಇಲಿಗಳೆಲ್ಲ ಬಲೆಯ ಸಂದಿಯಲ್ಲಿ ಓಡಿ ತನ್ನ ಪ್ರಾಣ ಉಳಿಸಿಕೊಂಡು ಪರಾರಿಯಾದವು.

ತುಂಬು ನಿರೀಕ್ಷೆಯಿಂದ ಬಂದ ಬೇಟೆ ಸಫಲವಾಗಲಿಲ್ಲವೆಂದು ನಿರಾಸೆಯಾದ ಮರಿಯ ಹಿಗ್ಗಾ ಮುಗ್ಗಾ ಬೈಯುತ್ತಾ ಇಲಿಯ ಜೊತೆಗೆ ಕರಿಯನನ್ನ ವಾಚಾಮ ಗೋಚರ ಬೈದನು. ಅಸ್ಟೋತ್ತಿಗೆ ಮಧ್ಯ ರಾತ್ರಿ ಯಾಗಿತ್ತು. ಗೂಬೆಗಳು ತಿರುಗಾಡುತ್ತಾ ಗುಟುರು ಹಾಕುತ್ತ ತನ್ನ ಬೇಟೆಗೆ ಹೊಂಚು ಹಾಕುತ್ತಿದ್ದ ಸಮಯದಲ್ಲಿ ನರ ಪ್ರಾಣಿಗಳನ್ನು ದುರುಗುಟ್ಟಿ ನೋಡುತ್ತಿತ್ತು. ಜೊತೆಗೆ ತನ್ನ ದನಿಯಿಂದ ಅಸಹನೀಯ ವಾದ ವಾರೇ ನೋಟವೂ ಕೂಡ ಇತ್ತು. ನಿಷಾಚರಿಗಳೆಲ್ಲ ಕ್ರಿಯಾಶೀಲವಾಗಿದ್ದವು. ಒಂದು ಬಂಡೆ ಕಲ್ಲಿನ ಮೇಲೆ ಇಲಿಗಳನ್ನು ಸುರಿದು ಎಣಿಸಿ ಬಂದವರಿಗೆಲ್ಲ ಹಂಚಿಕೊಂಡು ಮನೆಗೆ ವಾಪಾಸಾದೆವು. ಬಂದ ಹುಡುಗರಿಗೆ ಮೋಸವಾಗದಂತೆ ಇಲಿಯ ಪಾಲು ಸಿಕ್ಕ ಖುಷಿಯಲ್ಲಿ ರಾತ್ರಿ ಅವರವರ ಮನೆಗೆ ತಲುಪಿ ಮೈ ಚೆಲ್ಲಿ ಮಲಗಿದರು. ಮರಿಯನ ಚೀಲದಲ್ಲಿ ಸುಮಾರು ಹತ್ತಿಪ್ಪತ್ತು ಇಲಿಗಳು ಇದ್ದವು. ಬೇಟೆಗೆ ಅವನೇ ನಾಯಕನಾದ್ದರಿಂದ ಪಾಲು ಹೆಚ್ಚಿತ್ತು. ಬೆಳಿಗ್ಗೆ ಎದ್ದ ಕೂಡಲೇ ಇಲಿಗಳನ್ನು ಬೆಂಕಿಯಲ್ಲಿ ಸುಟ್ಟು ಚರ್ಮ ತೆಗೆದು ಕಳ್ಳು ಕೀಲಿನ್ ಮಾಡಿ ಅಡುಗೆ ಮಾಡಲು ಅಣಿಯಾದ. ಚರ್ಮ ಬಿಡಿಸಿದ ಇಲಿಗಳೆಲ್ಲ ಬೆಂಕಿ ಕೆಂಡದಂತೆ ಕಂಗೊಳಿಸುತ್ತಿದ್ದವು. ಮಸಾಲೆ ಅರೆಯಲು ಒಂದು ಕಲ್ಲು ಇಟ್ಟುಕೊಂಡು ಅಡುಗೆ ಮಾಡಲು ಮಾಡಲು ಶುರು ಮಾಡಿದ. ಅವನು ಮಸಾಲೆ ಅರೆಯುವ ಗಮಲಕ್ಕೆ ಇಡೀ ಕೇರಿಯ ತುಂಬೆಲ್ಲ ಘಮಗುಡುತಿತ್ತು. ಇಲಿ ಬೇಟೆಯಾಡಿದವರ ಮನೆಗಳಲ್ಲಿ ಬಾಡಿನ ಪರಿಮಳವು ಗಾಳಿಯಲ್ಲಿ ಅಲೆ ಅಲೆಯಾಗಿ ಇಡೀ ಊರಿಗೆ ವ್ಯಾಪಿಸುತ್ತಿತ್ತು. ಅಡಿಗೆ ಸಿದ್ಧವಾಯಿತು. ಮರಿಯ ತನ್ನ ಎಂದಿನ ಹೆಂಡದ ಬಿಂದಿಗೆಯೊಂದಿಗೆ ಕೂತು ಬಿಸಿ ಮುದ್ದೆ ತಿನ್ನಲು ಪ್ರಾರಂಭಿಸಿದ. ಮುದ್ದೆಗೆ ಹೆಚ್ಚು ಹೊಂದಿಕೆಯಾದ ಸಾರು ಹಿತವಾಗಿತ್ತು. ಗೊಟುಕ್ ಎಂದು ನುಂಗುವುದು ದೇಖುವುದು,ಸರಾಗವಾಗಿ ನಡೆಯುತ್ತಿತ್ತು.

ಹೆಂಡದ ಮತ್ತು ಏರುತ್ತಿದ್ದಂತೆ ತನ್ನ ಜೀವದ ಸಂಗಾತಿ ಬಿಟ್ಟು ಹೋದ ಕಥೆಯನ್ನು ಹೇಳಲು ತೊಡಗಿದನು,' ಒಂದು ಒಳ ಹೋದರೆ ಇನ್ನೊಂದು ಹೊರಬರತ್ತದೆ'.ಅದನ್ನು ಕೇಳಿಸಿಕೊಂಡು ನೆರೆ ಹೊರೆಯವರು 'ಶುರುವಾಯ್ತು ವಾರ್ತೆಗಳು' ಎಂದು ಮೂದಲಿಸಿದರು.ಇಡೀ ಊರಿಗೆ ಕೇಳುವಂತೆ ತನ್ನ ಪೂರ್ವದ ಕತೆ ಬಿಚ್ಚುತ್ತಾ ಹೋದನು.. ಅಸಲಿಗೆ ತನ್ನ ಹೆಂಡತಿ ದೂರದ ಊರಿನವಳಲ್ಲ.ತನ್ನ ತಾತನ ಊರಾದ ಪಕ್ಕದ ಗಣೇಶ ಪುರದವಳು. ಬಾದರಾಯಣ ಸಂಬಂಧದಿಂದಾಗಿ ಮೊದಲೇ ಗೊತ್ತಿದ್ದ ಹುಡುಗಿಯನ್ನು ತಂದು ಮದುವೆ ಮಾಡಿಕೊಂಡಿದ್ದರು. ಮರಿಯನಿಗೂ ಯಾರೂ ಹಿಂದೆ ಮುಂದೆ ಇರಲಿಲ್ಲ.ತಾನು ಇರುವ ಊರಿನಲ್ಲಿಯೇ ಬಳುವಳಿಯಾಗಿ ಒಂದು ಎಕರೆ ಜಮೀನು ಬರೆದು ಮದುವೆ ಮಾಡಲಾಗಿತ್ತು. ಅದು ಬೀಳು ಹೊಲವಾಗಿತ್ತು.ಹೊಲದ ತುಂಬಾ ಇಲಿಗಳೇ ಕೊರೆದು ಬಿಲಗಳನ್ನು ಮಾಡಿ ಕಾಲಿಟ್ಟ ಕಡೆಯಲ್ಲೆಲ್ಲಾ ಇಳಿಯುತ್ತಿದ್ದವು. ಮರಿಯನಿಗೆ ಇದು ಎರಡನೇ ಮದುವೆಯಾಗಿತ್ತು. ಮೊದಲಿನವಳು ಸಂಕಷ್ಟ ಹರ ಗಣಪತಿಯ ಪರಮ ಭಕ್ತೆ. ತಿಂಗಳಿಗೊಮ್ಮೆ ಹಸಿದು ಉಪವಾಸ ಮಾಡಿ ಭಕ್ತಿ ಮೆರೆಯಿತ್ತಿದ್ದವಳು ಏಕೋ ಏನೋ ಇಲಿ ಭೇಟೆ ಯಾಡುವುದು ಅವಳಿಗೆ ಇಷ್ಟವಿರಲಿಲ್ಲ. ಎಷ್ಟು ಹೇಳಿದರೂ ಕೇಳದ ಗಂಡನ ಜೊತೆಯಲ್ಲಿ ಇರುವುದು ಮತ್ತು ಗೆಲ್ಲುವುದು ಕಷ್ಟವೆಂದು ಒಂದು ದಿನ ಕಂಕುಳಲ್ಲಿ ಬಟ್ಟೆ ಇರಿಕಿಕೊಂಡು ಊರಿಂದ ಜಾಗ ಖಾಲಿ ಮಾಡಿದಳು. ಎರಡನೇ ಹೆಂಡತಿಯಾಗಿ ಬಂದವಳು ಮನೆ ಕೆಲಸ ಕಾರ್ಯಗಳನ್ನು ಅಚ್ಚು ಕಟ್ಟಾಗಿ ಮಾಡಿಕೊಂಡೆ ಕಾಲ ನೂಕಿದಳು. ಪ್ರತಿ ದಿನ ಕೂಲಿ ಮಾಡಿಯೇ ಬದುಕುತ್ತಿದ್ದ ಎರಡನೆಯವಳಾದ ತಿಮ್ಮಿ ತನ್ನ ಗಂಡನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು.

ಒಮ್ಮೆ ಸೊಪ್ಪು ಕೀಳಲು ಕೂಲಿಗೆ ಹೋದ ತಿಮ್ಮಿಯನ್ನು ಬಂದ ಹೆಂಗಸರೆಲ್ಲಾ ತುಂಬಾ ಜರಿದರು.' ತಿಮ್ಮಿ ಅದೇನು ನಿನ್ ಗಂಡ ಯಾವಾಗಲೂ ಇಲಿ ಬೇಟೆ ಮಾಡಿ ಹುಲಿಯಂತೆ ಆಗ್ತಿದ್ದಾನೆ.ನೀನು ನೋಡಿದ್ರೆ ಸೊರಗಿ ಸೋರೆ ಕಾಯಿ ತರ ಆಗ್ತಿದ್ದೀಯಲ್ಲ' ಎಂದು ಐದಾರು ಹೆಂಗಸರು ಬಿರು ಮಾತುಗಳಿಂದ ಚುಚ್ಚಿದರು. ಒಂದು ರೀತಿಯಲ್ಲಿ ಸೂಕ್ಷ್ಮವಾಗಿದ್ದ ಆಕೆಯನ್ನು ಅರಿಯದ ಅವರುಗಳು ' ಅದೆಂಗೆ ಕೈ ಹಿಡಿದೋ ನೀನು ' ಎಂದು ಯಾಸೆ ಮಾತನಾಡಿದರು.. ಯಾಕೋ ತಿಮ್ಮಿಗೆ ಮನಸು ಪಿಚ್ಚೆನಿಸಿತು. ಅಂದು ಕೂಲಿಮುಗಿಸಿ ಬಂದವಳೇ ಬಟ್ಟೆ ತುಂಬಿಕೊಂಡು ಅಪ್ಪನ ಮನೆಗೆ ಹೊರಟು ಹೋದವಳು ಮತ್ತೆ ಬಂದಿರಲಿಲ್ಲ. ಮದುವೆಯಾದ ಹೊಸದರಲ್ಲಿ ಇಲಿ ಇಡಿಯುವುದನ್ನು ಬಿಟ್ಟು ಬಿಡಿ ಎಂದು ಪರಿ ಪರಿಯಾಗಿ ಹೇಳಿದರೂ ಮರಿಯ ಕೇಳಿದವನೆ ಅಲ್ಲ. ಇದು ಮನಸಿಗೆ ಬೇಜಾರಾಗಿ ಆ ದಿನ ಹೋದವಳು ಕೂಲಿ ಮಾಡಿಕೊಂಡು ಬದುಕುತ್ತಿದ್ದಳು.ಊರಿನವರು ಪಂಚಾಯಿತಿ ಮಾಡಿದರೂ ಅರ್ಗಿಸಿ ಬರಲ್ಲ ಎಂದು ಕಡ್ಡಿ ಮುರಿದಂಗೆ ಹೇಳಿಯೇ ಬಿಟ್ಟಳು.

ಇನ್ನು ನನ್ನ ಬದುಕೇ ಇಷ್ಟು ಎಂದು ತನ್ನ ಸಿಟ್ಟು ಕೋಪಗಳನ್ನೆಲ್ಲ ತನ್ನ ಬೇಟೆಯಲ್ಲಿಯೇ ಕಳೆಯುತ್ತಾ ಕಾಲ ನೂಕುತ್ತಿದ್ದ. ಎರಡು ಕುರಿ ಮರಿ ಮೇಸುತ್ತಾ ತೆವರಿ ತೆಂಡೆ ಗಳಲ್ಲಿ ಅಣ್ಣ, ಲಕ್ಕ ಎಂದು ಬಹು ಮರ್ಯಾದೆಯಿಂದ ಬದುಕು ನಡೆಸುತ್ತಿದ್ದ ಮರಿಯ ಇಲಿ ಸಿಕ್ಕ ಖುಷಿಯಲ್ಲಿ ಆವತ್ತು ಮಾತ್ರ ಊರಿಗೆ ಮೈಕ್ ಹಾಕಿದಂಗೆ ಆಗುತ್ತಿತ್ತು.

ತನ್ನ ಗುಡಿಸಲು ಮನೆ ಬಯಲಲ್ಲಿ ಇದ್ದುದರಿಂದ ರಾತ್ರಿ ಯಾದರೆ ಸಾಕು ಇಲಿಗಳು ಮನೆಗಳನ್ನು ಹೊಕ್ಕು ಪಾತ್ರೆ ಪಗಡೆ ಗಳನ್ನು ಕವರುತ್ತಿದ್ದವು. ತಿಮ್ಮಿ ಇರುವಾಗಲೇ ಈ ಇಲಿಯ ಕಾಟ ರೋಸು ತರಿಸಿತ್ತು. ಬೆಳಿಗ್ಗೆ ಇಲಿಯ ಬಿಲವನ್ನು ಮುಚ್ಚಿದರೆ ರಾತ್ರಿ ಬಂದು ಬಿಲ ತೋಡಿ ಮಾಯವಾಗುತ್ತಿದ್ದವು. ಇದಕ್ಕಾಗಿ ಅವರಿವರ ಮನೆಗಳಲ್ಲಿ ಬೆಕ್ಕು ತಂದು ಬಿಟ್ಟರೂ ಏನೂ ಪ್ರಯೋಜನ ವಾಗಲಿಲ್ಲ. ರಾಶಿ ರಾಶಿ ಇಲಿಗಳ ಆರ್ಭಟಕ್ಕೆ ಬೆಕ್ಕು ಏದರಿ ಬಾಲ ಮುದುರಿ ಕೂರುತಿದ್ದವು. ಇದೆಲ್ಲ ಪಾಡು ಕಂಡು ತಿಮ್ಮಿಗೆ ಒಂದೇ ಒಂದು ಆಸೆ ಮನೆ ಕಟ್ಟಿಸುವುದೇ ಆಗಿತ್ತು. ಅದಕ್ಕೆಂದೇ ಹಲವು ಇಕ್ಮತ್ತು ಗಳನ್ನು ಹೇಳಿದ ತಿಮ್ಮಿ ಕಾಸಿಗೆ ಕಾಸು ಸೇರಿಸಿ ಗಂಟಾಕಲು ದುಡ್ಡು ಕೂಡಿಸುತ್ತಿದ್ದಳು. ತನ್ನ ದಾರಿಗೆ ಸರಿ ಬರದಿದ್ದ ಗಂಡನ ವರಸೆಯಿಂದ ಬೇಸರಿದ್ದ ತಿಮ್ಮಿಯು ಸೋಡಾ ಚೀಟಿ ಕೊಟ್ಟು ಹೋದಳು.

ಮರಿಯ ಮಾತ್ರ ಆದದ್ದು ಆಯಿತು ಹೊದ್ದದ್ದು ಹೋಯಿತು.ಎಂದು ಮನೆಕಟ್ಟುವುದಕ್ಕೆ ಹಣ ಬೇಕು. ಗೂಡು ಎಷ್ಟು ಮುಖ್ಯ? ನನ್ ಸಂಸಾರವನ್ನು ಹಾಳು ಮಾಡಿದ ಈ ಇಲಿಯ ವಂಶವನ್ನೇ ನಾಶ ಮಾಡುವುದಾಗಿ ಶಪಥ ಮಾಡಿದವನಂತೆ ಒಂದು ಮುಂಗಾರು ಮಳೆ ಬಿದ್ದ ದಿವಸ ಈ ಇಲಿಯ ಶಿಕಾರಿಗೆ ನಾಂದಿ ಯಾಡಿದ. ಹೆಂಡತಿ ಹೋಗಲಿ, ನನ್ನ ಕಿರುಬೆರಳು ಹೋಗಲಿ, ಕಚ್ಚೆ ಫಡ ಹೋಗಲಿ ನಾನು ಮಾತ್ರ ಇಲಿಯ ಸಂಹರಿಸಿಯೇ ಬಿಡುವುದಿಲ್ಲ. ದಿನ ದಿನಕ್ಕೆ ಇಲಿಯ ಬೇಟೆ ಯಾಡುತ್ತಲೇ ತನ್ನ ಕಳೆದು ಹೋದ ದಿನಗಳನ್ನು ನೂಕುತ್ತಿದ್ದ.ಈ ಪರಿಯ ಮರಿಯ ಗಣಪತಿಯ ವಾಹನ ಇಲಿಯ ಬೇಟೆಗೆ ಶುರು ಮಾಡಿದ್ದರಿಂದಲೇ ಗಣೇಶನ ಶಾಪ ತಟ್ಟಿದೆ! ಎಂದು ಊರ ಹೆಂಗಸರು ಮಾತಾನಾಡಿಕೊಂಡದ್ದು ಇದೆ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮರಿಯ ಇಲಿ ಇಡಿಯುವುದರಲ್ಲಿ ನಿಸ್ಸಿಮನಾದ. ಊರಿನಲ್ಲಿ ಇಲಿ ಮರಿಯ ಎಂದೇ ಪ್ರಸಿದ್ಧನಾಗಿದ್ದ. ಇಲಿಯ ಕಾಟ ಹೆಚ್ಚಾಗಿ ಪಕ್ಕದ ಊರಿನವರೂ ಇವನ ಕರೆಸಿ ಬೇಟೆ ಮಾಡಿಸಿ ಪಾಲು ಕೊಡುತ್ತಬಂದರು. ತನ್ನ ಜೀವಿತದ ಅವಧಿಯಲ್ಲಿ ತಲೆ ಕೂದಲಿನಷ್ಟು ಇಲಿಗಳನ್ನು ಕೊಂದು ಸುಟ್ಟು ತೇಕಿದ ಸಾಹಸಮಯ ಬದುಕು ಅವನದು. ರೈತ ಸಂಘದವರು ಇವನನ್ನು ಸನ್ಮಾನಿಸಿದರು. ರೈತ ಮಿತ್ರ ಎಂದು ಹಾಡಿ ಹೊಗಳಿದರು. ಕಾಲ ಸರಿದ ಹಾಗೆ ಮರಿಯನಿಗೆ ಮೊದಲಿದ್ದ ಹುಮ್ಮಸ್ಸು ಇಳಿಯುತ್ತಬಂತು. ಬೇಟೆಯ ಪರಿಯೇ ಭಿನ್ನವಾಯಿತು. ಮಳೆ ಬಂದರೆ ಯಾರೂ ಇಲಿ ಇಡಿಯುವುದಿಲ್ಲ. ಬಾಡಿನ ರುಚಿ ಹತ್ತಿಸಿಕೊಂಡ ಮರಿಯನು ತನ್ನ ಜೀವಿತದ ಆರಂಭದಲ್ಲಿ ನುಸುಳಿಹೋದ ನೆನಪಿನ ಬುತ್ತಿಯನ್ನು ಜ್ಞಾಪಿಸಿಕೊಂಡು ಒಬ್ಬನೇ ಮಾತಾಡಿ ಕೊಳ್ಳುವುದೂ ಇದೆ. ವಯಸ್ಸು ಜಾರಿ ಇಳಿ ವಯಸ್ಸಿಗೆ ಬಂದಿರುವಾಗ ಕೊಂದ ಇಲಿಗಳ ರಾಶಿ ರಾಶಿ ಚಿತ್ರವೇ ಕಣ್ಣ ಮುಂದೆ ಬರುತ್ತವೆ. ಹಾವು ಮುಂಗುಸಿಗಳು ಬಾಯಿ ಹಾಕಿ ಕಾಲು ಕೈ ಕಚ್ಚಿದ ನೆನೆಪುಗಳ ಮೆರವಣಿಗೆ ನಿಲ್ಲುತ್ತವೆ. ಕಾಲದೂಡುತ್ತಲೇ ಹೋದ ಹೆಂಡತಿಯ ನೆನೆದು ಕಣ್ಣೀರ ಹಾಕಿ ತನ್ನ ಎದುರು ಇಲಿ ಓಡಾಡಿದರೂ ಒಡೆಯುವ ಚೈತನ್ಯ ಇಲ್ಲವಾಯಿತು.

ಒಬ್ಬನೇ ಕುಳಿತ ಒಂದು ರಾತ್ರಿ ಹೊತ್ತು ಇಲಿಗಳ ಹಿಂಡು ದುಡುಮ್ಮನೆ ತನ್ನ ಮನೆಯ ಸೂರಿನಿಂದ ಒಂದೊಂದಾಗಿ ಇಳಿಯುತ್ತಾ ಬಂದವು. ಅಷ್ಟೊಂದು ಇಲಿಗಳು ಬಂದೂಕು ಇಡಿದ ಸೈನಿಕರಂತೆ ತನ್ನ ಮುಂದೆ ಬಂದವು ಎಲ್ಲವೂ ಶರಣಾಗತಿಯಲ್ಲಿ ವಿಜ್ಞಾಪಿಸುತ್ತಿರುವಂತೆ ಆದವು. 'ಕೊಂದವರು ಉಳಿವರೆ' ಎನ್ನುವಂತೆ ಅವನನ್ನು ಅಣಕಿಸುವಂತೆ ಸಾಲಿನಲ್ಲಿ ಬಂದವು ಮತ್ತೆ ಇಳಿದು ಜಾಗ ಖಾಲಿ ಮಾಡಿದವು. ಮರಿಯ ಇದು ನಿಜವೋ ಸುಳ್ಳೋ ಭ್ರಮೆಯೊ ಏನಿದು ವಿಪರ್ಯಾಸ? ಎಂದು ಹಾಗೆಯೇ ಮಂಪರು ಕವಿದಂತೆ ನಿದ್ದೆಗೆ ಜಾರಿದ. ಕುಳಿತ್ತಲ್ಲಿಯೇ ಕುಂತವನು ನಿದ್ದೆಯ ಲೋಕಕ್ಕೆ ಹಾರಿದ. ಹೋದ ಇಲಿಗಳು ಬಂದು ಮೈ ಮೇಲೆ ಹತ್ತಿ ಕುಣಿದಾಡಿ ಎಲ್ಲೆಲ್ಲಿ ಕಚ್ಚಿ ಕುರುಕಿ ಗಾಯ ಮಾಡಬಹುದೋ ಹಾಗೆ ಬೇಟೆಯಾಡಿದವು. ಒಂದು ಇಲಿಯನ್ನು ಓಡಿಸಲೂ ನಿಶ್ಶಕ್ತನಾದ ಮರಿಯ ಹಾಗೆಯೇ ಒರಗಿ ಕುಸಿದ. ಇಲಿಗಳು ಮತ್ತಷ್ಟು ಬಂದವು. ಎಲ್ಲೆಲ್ಲೋ ಇದ್ದ ಇಲಿಗಳ ಕೀಚಲು ಶಬ್ದಕ್ಕೆ ಇಡೀ ಮನೆ ತುಂಬ ಇಲಿಗಳ ಜಾತ್ರೆ ಆಯಿತು. ಮನೆಯೆನ್ನೆಲ್ಲ ತಲಾಶ್ ಮಾಡಿದವು. ತಿನ್ನಲು ಚೂರು, ಪಾರು ಏನೂ ಸಿಗದೆ ಹೋಗಿ ಬಂದು ಮರಿಯನನ್ನೇ ಕವರಿ ಕವರಿ ರಾತ್ರಿಯೆಲ್ಲಾ ತಿಂದು ಮೈ ಚರ್ಮವೆಲ್ಲ ಸುಲಿದು ಬಿಟ್ಟವು. ಮರಿಯನ ದೇಹವು ಚರ್ಮ ತೆಗೆದ ಇಲಿಯ ಮೈಯಂತಾಯ್ತು. ಬೆಳಿಗ್ಗೆ ನೋಡಿದವರೆಲ್ಲ ಗಾಬರಿಯಾಗಿ ಯಾವುದೋ ಉಗ್ರವಾದ ಪ್ರಾಣಿ ಬೇಟೆ ಯಾಡಿದೆ ಎಂದು ಮರಿಯನ ಗತ ಕಾಲದ ನೆನಪುಗಳನ್ನು ಮೇಲುಕುತ್ತಾ ಮನೆ ಮುಂದೆ 'ಕುರ್ಜು ' ಕಟ್ಟಲು ಬಿದಿರು ರೆಡಿಮಾಡಿದರು

ಹಾದಿ ಬೀದಿಯಲ್ಲಿ ಓಡಾಡುತ್ತಿದ್ದವರೆಲ್ಲ ಮರಿಯನ ಗುಣ ಗಾನ ಮಾಡುತ್ತ. ಬೇಟೆಯ ಹಾದಿಯಲ್ಲಿ ಏನೆಲ್ಲ ಅಡಗಿದೆ ಅಣ್ಣ ಎಂದು ಮಮ್ಮಲ ಮರುಗಿ ಅಂತಿಮ ಯಾತ್ರೆಯಲ್ಲಿ ತನ್ನ ಕಿರಿಯ ಸಂಗಡಿಗರೆಲ್ಲ ಹೆಗಲು ಕೊಟ್ಟು ಕಳಿಸಿಕೊಟ್ಟರು. ಸುದ್ದಿ ತಿಳಿದ ಮರಿಯನ ಹೆಂಡತಿ ತನ್ನ ನೆನೆಪಿನ ಸುಳಿಯಲ್ಲಿ ಬಂದ ನೆನೆಪನ್ನು ಉಮ್ಮಳಿಸುತ್ತಾ ಜನರೊಂದಿಗೆ ಹೆಜ್ಜೆ ಹಾಕುತ್ತಾ ತನ್ನ ಮುಡಿಯ ಕೂದಲ ಹೂಗಳು ಉದುರಿ ಉದುರಿ ನೆಲಕ್ಕೆ ಬೀಳುತಿತ್ತು. ಹೀಗೆ ಅಂತಿಮ ಯಾತ್ರೆ ಸಾಗುತ್ತಿರಬೇಕಾದರೆ ತಮಟೆ ಶಬ್ದಕ್ಕೆ ಬೇಲಿಯ ಮರೆಯಲ್ಲಿದ್ದ ಬಿಲದಲ್ಲಿ ಅಡಗಿದ್ದ ಇಲಿಗಳ ಗುಂಪು ಮಾತ್ರ ಭಯ ಪಡುತ್ತಾ ಹಿಮ್ಮುಖವಾಗಿ ಚಲಿಸತೊಡಗಿದವು.

- ಡಾ ಶಿವರಾಜ್ ಬ್ಯಾಡಹಳ್ಳಿ

 

MORE FEATURES

ನಾವು ಬದುಕುತ್ತಿರುವ ಪರಿಸರವೇ ಕುಂ.ವೀ ಅವರ ಬರವಣಿಗೆಯ ಶಕ್ತಿಯಾಗಿದೆ

16-09-2024 ಬೆಂಗಳೂರು

“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...

ಮೊಸಳೆ ಸೆರೆ ಹಿಡಿದ ಪ್ರಸಂಗ

16-09-2024 ಬೆಂಗಳೂರು

"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...

ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'

16-09-2024 ಬೆಂಗಳೂರು

"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...