‘ಕೊನೆಯ ಕುಣಿಕೆ’ ಹೆಸರಿನಲ್ಲಿ ಭುಟ್ಟೊ ನಾಟಕ..


“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದಲ್ಲಿ ಪ್ರಕಟಿಸೊಲ್ಲವಾ ಎಂದು ಕೇಳುತ್ತಲೇ ಇದ್ದ ಜೋಹರ್ ಈಗ ನಮ್ಮೊಂದಿಗಿಲ್ಲ. ಭುಟ್ಟೂರಂತಹವರು ನಮ್ಮ ನಡುವೆ ಜೀವಂತವಾಗಿದ್ದಾರೆ. ಬಹುಶಃ ಮುಂದೆಯೂ ಇದ್ದೇ ಇರುತ್ತಾರೆ,” ಎನ್ನುತ್ತಾರೆ ಬಿ. ಜೆ. ಸುವರ್ಣ ಅವರು ತಮ್ಮ “ಕೊನೆಯ ಕುಣಿಕೆ” ನಾಟಕಕ್ಕೆ ಬರೆದ ಲೇಖಕರ ಮಾತು.

ಅದೊಂದು ದಿನ ಆನಂದ್ ಬಜಾರ್ ಪತ್ರಿಕೆಯವರ ಜನಪ್ರಿಯ "ಸಂಡೆ” (Sunday) ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ. ಅಕ್ಟ‌ರ್ ಅವರನ್ನು ಭೇಟಿಯಾದಾಗ, ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನನ್ನ ಆಸಕ್ತಿಯನ್ನು ಕಂಡು “ನೀವೇಕೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಐ.ಎಸ್. ಜೋಹರ್ ಅವರ ಭುಟ್ಟೋ ನಾಟಕವನ್ನು ಕನ್ನಡಕ್ಕೆ ತರಬಾರದು" ಎಂದು ಕೇಳಿದರು. ಆನಂತರ ಸ್ವತಃ ಅಕ್ಟರ್, ಭುಟ್ಟೋ ನಾಟಕದ ಅನುವಾದಕ್ಕೆ ಜೋಹರ್ ಅವರಿಂದ ಒಪ್ಪಿಗೆಯ ಪತ್ರ ಪಡೆದು ಕಳುಹಿಸಿದರು. ನಂತರ ಕನ್ನಡ ಅನುವಾದ ಆಯಿತೆ ರಂಗಪ್ರದರ್ಶನ ಸಾಧ್ಯವೆ? ಎಂದು ಆಗಾಗ ಜೋಹರ್ ವಿಚಾರಿಸಲು ಆರಂಭಿಸಿದರು. ಅವರ ನಾಟಕಾಸಕ್ತಿ, ಕನ್ನಡಾಭಿಮಾನ ಶ್ಲಾಘನೀಯ.

ಅನುವಾದ ಆದಮೇಲೆ, ನಮ್ಮ ಸೂತ್ರಧಾರ ರಂಗ ತಂಡ ಆರ್. ನಾಗೇಶ್ ಅವರ ನಿರ್ದೇಶನದಲ್ಲಿ ಭುಟ್ಟೋ ನಾಟಕದ ಮೊದಲ ಪ್ರದರ್ಶನವನ್ನು (1984) ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಏರ್ಪಡಿಸಿತು. ಪ್ರಮುಖ ರಾಜಕೀಯ ನಾಯಕನೊಬ್ಬನ ಏರಿಳಿತಗಳ ನಾಟಕವನ್ನು ವೀಕ್ಷಿಸಿದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಸಹಮಂತ್ರಿಗಳಾದ ಎಂ.ಪಿ. ಪ್ರಕಾಶ್, ನಾಟಕವನ್ನು ಮೆಚ್ಚಿ ಪ್ರಶಂಸಿಸಿದರು.

ಪ್ರಚಂಡ ಚಪ್ಪಾಳೆಗಳೊಂದಿಗೆ ಪ್ರಾರಂಭವಾದ ಭುಟ್ಟೋ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡಿತು.

ದೂರದರ್ಶನ, ಸಿನೆಮಾ, ಶಿಬಿರ, ತರಬೇತಿ ಮುಂತಾದ ಚಟುವಟಿಕೆಗಳ ನಡುವೆ ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ರಂಗ ಚಟುವಟಿಕೆ ನಿಧಾನವಾಗಿ ಕಡಿಮೆಯಾಗುತ್ತ ಬಂದಿತು. ನಿರ್ದೇಶಕ ನಾಗೇಶ್ ವಿಧಿವಶರಾದರು. ಪ್ರತಿ ಎಲ್ಲಿಯೋ Misplace ಆಗಿಬಿಟ್ಟಿತ್ತು. ಮತ್ತೆ ಪ್ರತಿ ಸಿಕ್ಕಿ ಓದಿದೆ. ಎರಡು ದಶಕಕ್ಕೂ ಹಿಂದೆ ಬರೆದು ಪ್ರದರ್ಶಿಸಿದ ಈ ನಾಟಕದ ವಸ್ತು ಈಗಲೂ ಪ್ರಸ್ತುತ ಎನ್ನಿಸಿ ಪರಿಷ್ಕರಣೆ ಮಾಡಿದೆ. ಅಧಿಕಾರ, ಓಲೈಕೆಯ ನಶೆ, ಜನಸೇವೆಯನ್ನು ಚೆನ್ನಾಗಿ ಮಾಡುತ್ತಲಿದ್ದೇನೆ ಎನ್ನುವ ಭ್ರಮೆ, “ಮದಿರೆ ಮಾನಿನಿ ಮಣಮಣ ಹಣದ ನೆಣದಲ್ಲಿರುವ" ಅನೇಕ ಜನನಾಯಕರು ಇಂದಿಗೂ ನಮ್ಮನ್ನು ಆಳುತ್ತಿದ್ದಾರೆ. ಇದು ಶಾಶ್ವತ ಎಂಬ ನಂಬಿಕೆಯಲ್ಲಿ ಮೆರೆಯುತ್ತಿದ್ದಾರೆ.

ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದಲ್ಲಿ ಪ್ರಕಟಿಸೊಲ್ಲವಾ ಎಂದು ಕೇಳುತ್ತಲೇ ಇದ್ದ ಜೋಹರ್ ಈಗ ನಮ್ಮೊಂದಿಗಿಲ್ಲ. ಭುಟ್ಟೂರಂತಹವರು ನಮ್ಮ ನಡುವೆ ಜೀವಂತವಾಗಿದ್ದಾರೆ. ಬಹುಶಃ ಮುಂದೆಯೂ ಇದ್ದೇ ಇರುತ್ತಾರೆ.

ಸತ್ತು ಮಲಗಿದ್ದ ಭುಟ್ಟೋನ ನಾಟಕವನ್ನು ಮೇಲೆಬ್ಬಿಸಿ ಎಂದು ಸ್ನೇಹಿತರಾದ ಜಯಪ್ರಕಾಶ ಮಾವಿನಕುಳಿ ಆಗಾಗ ಕೇಳುತ್ತಿದ್ದರು. ನಟಿ, ನಿರ್ದೇಶಕಿ ಶ್ವೇತಾ ಶ್ರೀನಿವಾಸ್ ಮತ್ತು ಸಂಗಡಿಗರು ನಾಟಕ ಓದಿ ಅಮೂಲ್ಯ ಅಭಿಪ್ರಾಯ ಕೊಟ್ಟಿದ್ದಾರೆ. ರಂಗರಥ ತಂಡದ ಶ್ರೀ ಆಸಿಫ್ ಕ್ಷತ್ರಿಯ ಸ್ವತಃ ಕಲಾವಿದರು. ನಿರ್ದೇಶಕರು, ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ದುಡಿದವರು, ಉರ್ದು ಭಾಷೆಯ ಪ್ರಕಾಂಡ ಪಂಡಿತರು. ಇಂತಹ ಮೇಧಾವಿ ಆಸಿಫ್ ಈ ಕೃತಿಯನ್ನು ಓದಿ, ಪಾಕಿಸ್ತಾನ ಮತ್ತು ಉರ್ದು ಹಿನ್ನೆಲೆಯ ಕೃತಿಯ ಆಶಯ, ಪ್ರಾರ್ಥನೆ, ಸ್ಥಳ, ಸಂಭಾಷಣೆ ಮುಂತಾದವುಗಳನ್ನು ವಿವರಿಸುತ್ತ ಆವಶ್ಯಕತೆ ಇದ್ದ ಕಡೆ ತಿದ್ದಿ, ಪ್ರತಿಯ ಮೇಲೆ ತಮ್ಮ ಕೈಯಾರೆ ಗುರುತು ಹಾಕಿಕೊಟ್ಟಿದ್ದಾರೆ. ಈ ಎಲ್ಲ ಮಿತ್ರರಿಗೆ ಹಾಗೂ ಜೋಹರ್‌ರವರಿಂದ ಒಪ್ಪಿಗೆ ಪತ್ರ ಕೊಡಿಸಿದ ಎಂ.ಜೆ. ಅಕ್ಟರ್ ಹಾಗೂ ಕಾಳಿದಾಸ ಅವರಿಗೆ ಮತ್ತು ಪ್ರಕಟಣೆಗೆ ಸಹಕರಿಸಿದ ಅಂಕಿತ ಪುಸ್ತಕಕ್ಕೆ ನನ್ನ ಧನ್ಯವಾದಗಳು.

- ಬಿ.ಜೆ. ಸುವರ್ಣ

MORE FEATURES

Harate-kashaya ನನ್ನ ಶಬ್ದ ಸಾಲುಗಳೇ ನಿಮಗೆ ಕಷಾಯ

08-01-2025 ಬೆಂಗಳೂರು

“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...

ತಮ್ಮ ಮೂಗಿನ ನೇರಕ್ಕೆ ಬರೆದದ್ದೇ ಇತಿಹಾಸ ಎಂಬಂತೆ ಬಿಂಬಿಸಲಾಗುತ್ತಿದೆ

08-01-2025 ಬೆಂಗಳೂರು

“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...