ಈ ಹಿಂದೆ ನನ್ನ ಕವನ ಸಂಕಲನಗಳನ್ನು ಪ್ರಕಟಣೆಗಾಗಿ ಪ್ರಕಾಶಕರ ಬಳಿ ಹೋಗಿ ಕೇಳಿದಾಗ ದೂರದಿಂದಲೇ ಕೈ ಮುಗಿದು ಹೇಳಿದ್ದಾರೆ. “ಕವಿತೆಗೆ ಓದುಗರೇ ಇಲ್ಲ ಅದಕ್ಕೆ ಪ್ರಕಟಣೆ ನಮ್ಮಿಂದ ಸಾಧ್ಯವಿಲ್ಲ”. ಕಡ್ಡಿ ಮುರಿದಂತೆ ಖಡಕ್ ಆಗಿ ಹೇಳಿದರು. ಅವರ ಇಂಥ ರೂಕ್ಷ ವ್ಯವಹಾರದಿಂದ ನೊಂದೆ, ಅಪಮಾನಗೊಂಡೆ. ಆ ನೆನಪುಗಳು ಮನದಲ್ಲಿ ಉಳಿದುಕೊಂಡಿವೆ ಎಂಬುದು ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಮಾತು.. ಪ್ರೊ.ಮಾಲತಿ ಪಟ್ಟಣಶೆಟ್ಟಿ ಹಾಗೂ ಪುತ್ರಿ ಸೀಮಾ ಕುಲಕರ್ಣಿ ಅವರ ಕಳ್ಳುಬಳ್ಳಿ ಕವನ ಸಂಕಲನದಲ್ಲಿ ಅವರು ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ..
“ಕಳ್ಳುಬಳ್ಳಿ” ಕವನ ಸಂಕಲನದಲ್ಲಿ ತಾಯಿ ಮತ್ತು ಮಗಳಿಬ್ಬರ ಕವಿತೆಗಳಲ್ಲಿ ಕರುಳ ಮಿಡಿತಗಳ ಬಳ್ಳಿಯು ಚೆಲ್ಲುವರಿದಿದೆ. ಹಾಗೆ ಇಬ್ಬರ ಕಥೆಗಳ, ಕವಿತೆಗಳ ಪ್ರಬಂಧಗಳ ಮತ್ತು ನಾಟಕದಂಥ ಸಾಹಿತ್ಯ ಪ್ರಕಾರಗಳಲ್ಲಿ ತಾಯಿ ಮಕ್ಕಳು ಸಂಯುಕ್ತ ರೂಪದಲ್ಲಿ ಪುಸ್ತಕ ಪ್ರಕಟಿಸಿದ್ದು ವಿರಳವೆಂದು ನಮ್ಮ ತಿಳುವಳಿಕೆ. ಜಗತ್ತಿನಲ್ಲಿ ಹಾಗೆ ನೋಡಿದರೆ ಬಹಳಷ್ಟು ಜೋಡಿಗಳಿವೆ. ಆದರೆ ತಾಯಿ ಮಗಳ ಜೋಡಿಯಲ್ಲಿರುವ ತಿಳುವಳಿಕೆ, ಅನನ್ಯತೆ ಮತ್ತು ಅರ್ಪಣಾಭಾವಗಳು ಬೇರೆ ಜೋಡಿಗಳಲ್ಲಿ ಕಾಣಿಸುವುದಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ. ಈ ಪುಸ್ತಕದ ಪ್ರಕಣೆಯು ಸಾಧ್ಯವಾದದ್ದು ನನ್ನ ಮಗಳು ಸೀಮಾಳ ಪ್ರೇರಣೆಯಿಂದ ಮತ್ತು ಧೃಡ ನಿರ್ಧಾರಗಳಿಂದಾಗಿ. ಪುಸ್ತಕ ಪ್ರಕಟಣೆಯ ನಮ್ಮ ಅಮೂರ್ತ ಬಯಕೆಗೆ ಮೂರ್ತರೂಪವನ್ನು ನೀಡಿದವರು ಆಪ್ತ ಶಿಷ್ಯಂದಿರಾದ ರಾಮನಾಥ ಬನಶಂಕರಿಯವರು ಮತ್ತು ಇವರೇ ಪರಿಚಯಿಸಿದ ಕಲ್ಲಚ್ಚು ಪ್ರಕಾಶನದ ಒಡೆಯರಾದ ಶ್ರೀ ಮಹೇಶ ನಾಯಕರನ್ನು ಈ ಸಂದರ್ಭದಲ್ಲಿ ಹೃದಯಪೂರ್ವಕವಾಗಿ ನೆನೆಯಬಯಸುತ್ತೇವೆ.
ಪ್ರಕಾಶಕರಾದ ಮಹೇಶ ನಾಯಕ ನಮ್ಮ ಕವಿತೆಗಳನ್ನು ಪ್ರಕಟಿಸಲು ಒಪ್ಪಿಕೊಂಡಿದ್ದು ನಮಗೆ ಅಚ್ಚರಿ ತಂದಿದೆ! ಈ ಹಿಂದೆ ನನ್ನ ಕವನ ಸಂಕಲನಗಳನ್ನು ಪ್ರಕಟಣೆಗಾಗಿ ಪ್ರಕಾಶಕರ ಬಳಿ ಹೋಗಿ ಕೇಳಿದಾಗ ದೂರದಿಂದಲೇ ಕೈ ಮುಗಿದು ಹೇಳಿದ್ದಾರೆ. “ಕವಿತೆಗೆ ಓದುಗರೇ ಇಲ್ಲ ಅದಕ್ಕೆ ಪ್ರಕಟಣೆ ನಮ್ಮಿಂದ ಸಾಧ್ಯವಿಲ್ಲ”. ಕಡ್ಡಿ ಮುರಿದಂತೆ ಖಡಕ್ ಆಗಿ ಹೇಳಿದರು. ಅವರ ಇಂಥ ರೂಕ್ಷ ವ್ಯವಹಾರದಿಂದ ನೊಂದೆ, ಅಪಮಾನಗೊಂಡೆ. ಆ ನೆನಪುಗಳು ಮನದಲ್ಲಿ ಉಳಿದುಕೊಂಡಿವೆ. ಯಾವುದಾದರೂ ರಾಜಕಾರಣಿಯನ್ನೋ, ಪ್ರಭಾವಶಾಲಿ ವ್ಯಕ್ತಿಯನ್ನೋ ಹಿಡಿದು ಹೇಳಿಸಿ ಪ್ರಕಾಶಕರಿಂದ ಕೆಲಸ ಮಾಡಿಸಿಕೊಳ್ಳುವ ಜಾಯಮಾನವು ನಮ್ಮದು ಅಲ್ಲವೇ ಅಲ್ಲ. ನಮ್ಮ ಕವಿತೆಗಳಲ್ಲಿ ಕಾವ್ಯ ಗುಣಗಳಿದ್ದರೆ ಯಾರಾದರೂ ಗುರುತಿಸಿ ಪ್ರಕಟಿಸಬಹುದು ಎಂದು ಸಂತೈಸಿಕೊಂಡೆವು. ಕಲ್ಲಚ್ಚು ಪ್ರಕಾಶಕರ ಪ್ರಕಾಶನದ ನೀತಿ ನಿಯಮಗಳನ್ನು ಒಪ್ಪಿಕೊಳ್ಳುತ್ತ ನಮ್ಮ ಬೇಡಿಕೆಗಳನ್ನು ಅವರು ಒಪ್ಪುವಂತೆ ಹೊಂದಾಣಿಕೆ ಮಾಡಿಕೊಂಡೆವು. ಈಗ ಪುಸ್ತಕವು ಬೆಳಕು ಕಂಡಿದೆ. ಇದು ನನ್ನ ಹನ್ನೊಂದನೆ ಕವಿತಾ ಸಂಗ್ರಹ. ಮತ್ತು ಸೀಮಾಳ ಎರಡನೇಯ ಕವಿತಾ ಸಂಗ್ರಹ. ನಮ್ಮಿಬ್ಬರ ಕವಿತೆಗಳು ಒಂದೇ ಪುಸ್ತಕದಲ್ಲಿ ಪ್ರಕಟಣೆಗೊಳ್ಳಬೇಕೆಂಬ ಮನದಾಸೆಗೆ ಸಂತೃಪ್ತಿ ಸಿಕ್ಕು ಇಬ್ಬರಿಗೂ ಅತೀವ ಸಂತಸವಾಗಿದೆ.
ಎರಡು ತಿಂಗಳ ಹಿಂದಷ್ಟೇ ಮಲೇಶಿಯಾದ ರಾಜಧಾನಿ ಕೌಲಾಲಂಪೂರದಲ್ಲಿರುವ ನನ್ನ ಮಗಳು ಸೀಮಾಳ ಕರೆ ಬಂತು. “ಅವ್ವ, ನನಗೊಂದು ಹೊಸ ವಿಚಾರ ಬಂದದ, ನೀನು ಒಪೊಗೊಂಡ್ರ ನಿನ್ನವಷ್ಟು ನನ್ನವಷ್ಟು ಕವಿತಾ ಕೂಡಿಸಿಕೊಂಡು ಒಂದು ಸಂಗ್ರಹ ಯಾಕ ಪ್ರಕಟಿಸಬಾರದು ಅನ್ನಿಸುತ್ತಿದೆ” ಅಂದಳು. “ಹೌದು ನಿನ್ನ ವಿಚಾರ ಹೊಸದ, ಆದರ ಕೂಸ, ಅದನ ಪ್ರಕಟಿಸಲಿಕ್ಕೆ ಯಾರ ಮುಂದಾಗತಾರವ್ವಾ?” ಅಂದೆ “ಆ ಚಿಂತಿ ನನಗ ಬಿಟ್ಟುಕೊಡು” ಸೀಮಾ ಇರುವದು ಮಲೇಶಿಯಾದಲ್ಲಿ, ನಾನಿರುವದು ಧಾರವಾಡದಲ್ಲಿ. ಆಕೆಯ ಕೆಲಸದ ಸಮಯ ಬೇರೆ, ನನ್ನದು ಬೇರೆ.ಮತ್ತ ಸಂಪರ್ಕಗಳು ಕಠಿಣ. ಮೇಲೆ ಆಕೆ ಸಂಸಾರೊAದಿಗಳು, ನನಗೋ ಹೆಗಲೇರಿ ಕುಳಿತ ಸಾಹಿತ್ಯಿಕ ಕೆಲಸಗಳು, ಈ ಎಲ್ಲ ಅಡೆತಡೆಗಳ ಮಧ್ಯದಲ್ಲೂ ಆಕೆ ಪುಸ್ತಕ ಪ್ರಕಟಣೆಯ ದಾರಿಯನ್ನು ಇಷ್ಟು ಬೇಗ ಶೋಧಿಸಿದ್ದು ನನಗೆ ತುಂಬ ಹೆಮ್ಮೆ ಎನ್ನಿಸಿದೆ!
ನನ್ನ ಕಾವ್ಯ ಬರಹದ ಪಯಣಕ್ಕೆ ನಾಲ್ಕು ದಶಕಗಳು ಸಂದಿವೆ. ಕವಿತೆ, ಕಥೆ, ಪ್ರಬಂಧ, ವಿಮರ್ಶೆ, ಸಂಪಾದನ ಹಾಗೂ ಮಕ್ಕಳ ಸಾಹಿತ್ಯದಂಥ ಪ್ರಕಾರಗಳಲ್ಲಿ ಅಷ್ಟಿಷ್ಟು ಬರೆದಿದ್ದೇನೆ. ಪ್ರಶಸ್ತಿಗಳು, ಬಹುಮಾನಗಳು, ಗೌರವಗಳು ಬಂದಿವೆ. ಮಾಧ್ಯಮಿಕ, ಪದವಿಪೂರ್ವ ಹಾಗೂ ಪದವಿ ವರ್ಗಗಳಿಗಾಗಿ ಇರುವ ಪಠ್ಯಕ್ರಮದಲ್ಲಿ ನನ್ನ ಕಥೆ, ಕವನ ಪ್ರಬಂಧಗಳು ಸೇರಿಕೊಂಡಿವೆ. ಈ ನನ್ನ ಸಾಧನೆಯ ಬಗ್ಗೆ ಒಂದಿಷ್ಟೂ ತೃಪ್ತಿಯಿಲ್ಲ. ನನ್ನ ಈ ಹಂಬಲಕ್ಕೆ ಕೊನೆ ಎಂಬುದಿಲ್ಲ ಎಂದು ನನಗೆ ಗೊತ್ತಿದೆ.
ಕನ್ನಡದ ಗಂಧ ಗಾಳಿಯಿಲ್ಲದ, ಕನ್ನಡ ದಿನಪತ್ರಿಕೆಗಳಾಗಲಿ, ನಿಯತಕಾಲಿಕೆಗಳಾಗಲಿ ಸಿಗದ ದೇಶಗಳಲ್ಲಿ ಪತಿಯೊಂದಿಗೆ ಆಕೆ ಇರಬೇಕಾದ ಪರಿಸ್ಥಿತಿ ಇದೆ. ನನ್ನ ಮಗಳ ಓದು ಬರಹಕ್ಕೆ ಸಿಗುವ ಸಮಯ ಎಂದರೆ ರಾತ್ರಿ 10 ಗಂಟೆಯ ಮೇಲೆಯೇ. ಆಕೆ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದರಿಂದ ಇಂಗ್ಲೀಷನಲ್ಲಿಯೂ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಬರೆದ ಲೇಖನಗಳು ಪ್ರಕಟಗೊಂಡಿವೆ. ಕಾವ್ಯ ರಚನೆಗಾಗಿ ಅವಳಲ್ಲೊಂದು ಹುಚ್ಚು ಮನಸ್ಸಿದೆ! ಈಗಾಗಲೇ ಅವಳ ಮೊದಲನೇಯ ಕವಿತಾ ಸಂಗ್ರಹ “ಸುತ್ತಿ ಸುಳಿದು” ಹೊರ ಬಂದಿದೆ. ಆದರೂ ಸಾಹಿತ್ಯ ಕ್ಷೇತ್ರದಲ್ಲಿ ಅವಳಿನ್ನೂ ಅಂಬೆಗಾಲಿಕ್ಕುವ ಕವಿ.
ಸೀಮಾನಿಗೆ ನಾನು ತಾಯಿಯಾದದ್ದು ಸಹಜವಾದ ಸತ್ಯ. ಆದರೆ ಆಕೆ ನನಗೆ ತಾಯಿಯಾದದ್ದು ನಿತ್ಯದ ನಿಜ. ಮುಗ್ಧತೆಯ ಸಾಗರದಲ್ಲಿಯ ಬಿರುಗಾಳಿಗೆ ದಿಕ್ಕೆಟ್ಟ ನನ್ನ ಬಾಳ ನೌಕೆಗೆ ಧೈರ್ಯದ ಹಾಯಿ ಕಟ್ಟದವಳು ಮಗಳೇ! ಬಾಳ ಕ್ರೂರ ಚಳಿಮಳೆಗಾಳಿಗಳಲ್ಲಿ ಮೌನದ ಮರದಲ್ಲಿ ಇಬ್ಬರೂ ಆತುಕೂತು ಅತ್ತಿದ್ದೇವೆ. ಹತ್ತು ಹಲವು ಸಂದರ್ಭಗಳಲ್ಲಿ ಆಕೆ ನೀಡಿದ ಸಮಯೋಚಿತ ಸಲಹೆಗಳು ಇಂದಿಗೂ ನನ್ನಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ. ಓದಿನಲ್ಲಿ ಆಕೆ ತುಂಬ ಜಾಣೆ. ಬಿ.ಎಸ್ಸಿ ಅಂತಿಮ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎರಡು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದದ್ದು ನನಗೆ ಹೆಮ್ಮೆಯ ವಿಷಯ. ಮಲೇಶಿಯಾದಂತ ಪರದೇಶದಲ್ಲಿ ಕುಳಿತು ಸಿಕ್ಕ ಅಲ್ಪ ಸಮಯದಲ್ಲಿ ಕಥೆ,ಕವನ ಮತ್ತು ಲೇಖನಗಳನ್ನು ಬರೆದು ಇ, ಮೇಲ್ ಮೂಲಕ ನನಗೆ ಕಳಿಸಿದಾಗ ಸಂತಸಪಡುವ ನನ್ನ ಮನಸ್ಸು ಆಗಾಗ ಹೇಳುತ್ತದೆ. ‘ನೋಡು ಹೇಗೆ ಹಬ್ಬಿಕೊಂಡಿದೆ ನಿನ್ನ ಸಾಹಿತ್ಯದ ಬಳ್ಳಿ’! ಆದ್ರ ಹೃದಯದ ಒಬ್ಬ ಮಗನೂ ನನಗೆ ಇದ್ದಿದ್ದರಿಂದ ನನ್ನದು ಈಗ ಸಂತೃಪ್ತ ಜೀವನ! ಹೀಗೆ ಮೂಡಿಕೊಂಡಿವೆ ಕರುಳ ಬಳ್ಳಿಯಲ್ಲಿ ಎರಡು ಚಂದದ ಹೂವು!
ಈಗ ನಾನು ನೆನೆಯಲೇಬೇಕಾದದ್ದು ನನ್ನ ಮಗಳ ಬರೆಯುವ ಅದಮ್ಯ ಸಾಹಸವನ್ನು ಮತ್ತು ಕಳ್ಳು - ಬಳ್ಳಿ ಪುಸ್ತಕದ ಪ್ರಕಟಣೆಗಾಗಿ ಅವಳು ತೋರಿದ ಬದ್ಧತೆಯನ್ನು ಪ್ರಶಂಸಿಸುತ್ತೇನೆ. ಶ್ರೀ ಬನಶಂಕರಿಯವರ ಸಮಯೋಚಿತ ಸಹಾಯವನ್ನು ಹೃದಯವಪೂರ್ವಕವಾಗಿ ಸ್ಮರಿಸುತ್ತೇನೆ! ನಮ್ಮ ಕವಿತಾ ಸಂಗ್ರಹವನ್ನು ಆಕರ್ಷಕ ವಿನ್ಯಾಸಗಳೊಂದಿಗೆ ಪ್ರಕಟಿಸಿದ ಶ್ರೀ ಮಹೇಶ ನಾಯಕ ಅವರ ಔದಾರ್ಯವನ್ನು ಎಂದೂ ಮರೆಯಲಾರೆ. ಮುಖಪುಟವನ್ನು ಮತ್ತು ಒಳಗಿನ ಚಿತ್ರವಿನ್ಯಾಸಗಳನ್ನು ಮಾಡಿದ ಕಲ್ಲಚ್ಚು ಪ್ರಕಾಶನದ ಬಳಗಕ್ಕೆ ನಮ್ಮ ಹಾರ್ದಿಕ ನಮನಗಳು ಸಲ್ಲಲೇಬೇಕು.
ಕಾವ್ಯವನ್ನು ಓದದ ಜಗತ್ತಿನಲ್ಲಿ ಕೆಲವರಾದರೂ ಅದನ್ನು ಪ್ರೀತಿಸುವವರು ಇದ್ದಾರು ಎಂಬ ಆಶವಾದ ನಮ್ಮಿಬ್ಬರಲ್ಲಿದೆ. ಕವಿತೆಯನ್ನು ರಚಿಸುವ ಕವಿಗಂತೂ ಸಿಗುವ ಆನಂದವು ಶಬ್ದಗಳಲ್ಲಿ ವರ್ಣಿಸಲಾಗದು. ಅದನ್ನು ನಮ್ಮ ಸೆರಗಿನಲ್ಲಿ ಗಂಟು ಕಟ್ಟಿಕೊಂಡು ಸುಖಿಸುತ್ತಿದ್ದೇನೆ. ನಮ್ಮ ಈ ಕವಿತಾ ಸಂಗ್ರಹವನ್ನು ಓದಿ ಓದುಗರು ಖುಷಿಪಟ್ಟರೆ ಅದೇ ನಮಗೆ ಸಿಗುವಂಥ ದೊಡ್ಡ ಪ್ರಶಸ್ತಿ ಮತ್ತು ಬಹುಮಾನ!!
- ಮಾಲತಿ ಪಟ್ಟಣಶೆಟ್ಟಿ
"ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾ...
“ಈ ಪುಸ್ತಕ ತೇಜಸ್ವಿ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಮಗೆ ಕಟ್ಟಿಕೊಡುತ್ತದೆ. ಗೊತ್ತಿರುವ ಕೆಲವ...
“ಸುಮಾರು ಅರವತ್ತೆರೆಡು ಆಕರ ಗ್ರಂಥಗಳನ್ನು ಅಭ್ಯಸಿಸಿ ಈ ಕೃತಿಯನ್ನು ರಚಿಸಿದ ಡಾ. ಗಜಾನನ ಶರ್ಮರ ಕೆಲಸ ಸ್ತುತ್ಯಾರ...
©2025 Book Brahma Private Limited.