''ಕರಾವಳಿ ವಲಯದ ಹೆಚ್ಚಿನ ಕವಿ, ವಿದ್ವಾಂಸರು, ಸಾಹಿತಿಗಳು ಎಲೆಮರೆಯಕಾಯಿಯಾಗಿಯೇ ಉಳಿದುಬಿಟ್ಟವರು. ಪಂಜೆ, ಗೋವಿಂದ ಪೈ, ಅಡಿಗ ಹೀಗೆ ಕೆಲವರನ್ನು ಬಿಟ್ಟರೆ ಉಳಿದವರ ಹೆಸರು ಸಮಗ್ರ ಕರ್ನಾಟಕ ಸ್ತರದಲ್ಲಿ ಕೇಳಿ ಬಂದದ್ದು ವಿರಳ,'' ಎನ್ನುತ್ತಾರೆ ಲೇಖಕ ಜಿ. ಎನ್. ಉಪಾಧ್ಯ. ಅವರು ಬಿ. ಜನಾರ್ದನ ಭಟ್ ಅವರ ‘ಕರಾವಳಿಯ ಕವಿರಾಜಮಾರ್ಗ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
9ನೆಯ ಶತಮಾನದ ಶ್ರೀವಿಜಯ ವಿರಚಿತ `ಕವಿರಾಜಮಾರ್ಗ' ಕನ್ನಡದ ಆಚರ‍್ಯ ಕೃತಿಗಳಲ್ಲಿ ಒಂದು. `ಪದ್ಯಂ ಸಮಸ್ತ ಜನತಾ ಹೃದ್ಯಂ' ಎಂಬುದು ಅವನ ಪ್ರಸಿದ್ಧವಾದ ಹೇಳಿಕೆ. ಪ್ರಾಚೀನಕನ್ನಡ ವಾಙ್ಮಯ ಪದ್ಯಗಂಧಿಯಾದುದು. 19ನೆಯ ಶತಮಾನದ ಕೊನೆಗೆ ಮುದ್ದಣ ಕವಿ `ಪದ್ಯಂ ವಧ್ಯಂ ಗದ್ಯಂ ಹೃದ್ಯಂ' ಎಂದು ಘಂಟಾಘೋಷವಾಗಿ ನುಡಿದ. 20ನೆಯ ಶತಮಾನ ಕನ್ನಡ ಸಾಹಿತ್ಯದ ಮತ್ತೊಂದು ಸುವರ್ಣಯುಗ. ಹೊಸಗನ್ನಡ ಸಾಹಿತ್ಯ ಏಕಕಾಲಕ್ಕೆ ಮೈಸೂರು, ಧಾರವಾಡ, ಮಂಗಳೂರು ಹಾಗೂ ಮುಂಬೈ ವಲಯಗಳಲ್ಲಿ ತುಂಬಿ ತೀವಿ ಬಂದದ್ದು ಈಗ ಇತಿಹಾಸ.
ಕರಾವಳಿ ಅಥವಾ ಮಂಗಳೂರು ವಲಯದಲ್ಲಿ ಆಧುನಿಕ ಕನ್ನಡಕಾವ್ಯ ವಾಹಿನಿ ಸಾಗಿ ಬಂದ ಹಾದಿಯ ಅವಲೋಕ, ವಿಮರ್ಶೆ ಡಾ. ಬಿ. ಜನಾರ್ದನ ಭಟ್ ವಿರಚಿತ `ಕರಾವಳಿಯ ಕವಿರಾಜಮಾರ್ಗ' ಗ್ರಂಥದಲ್ಲಿ ಸೊಗಸಾಗಿ ಅನಾವರಣಗೊಂಡಿದೆ. ಹೊಸಗನ್ನಡ ಸಾಹಿತ್ಯಚರಿತ್ರೆಯ ಭಾಗವಾಗಿಯೇ ಈ ಕೃತಿಯನ್ನು ನಾವು ಅಧ್ಯಯನ ಮಾಡಬಹುದಾಗಿದೆ. ಕರಾವಳಿಯ ಕವಿಗಳ ಆ ಕಾಲದ ವಿವೇಕ, ಪ್ರಜ್ಞೆ, ಮನೋಧರ್ಮ, ಪರಿಸರ, ಇಕ್ಕಟ್ಟು ಸಂವೇದನೆಗಳೆಲ್ಲ ಹೇಗೆ ಭಿನ್ನ ಎಂಬುದನ್ನು ಎತ್ತಿತೋರಿರುವುದು ಈ ಕೃತಿಯ ಅತಿಶಯತೆ. ಆಧುನಿ ಕಕನ್ನಡ ಸಾಹಿತ್ಯದ ಆಗುಹೋಗುಗಳ ಬಗೆಗೆ, ಅದರ ಪ್ರಯೋಗ ಮತ್ತು ಆಶೋತ್ತರಗಳ ಕುರಿತು ಖಚಿತವಾದ ವ್ಯಾಖ್ಯಾನ, ವಿಶ್ಲೇಷಣೆ ಒಂದು ಬಗೆಯ ಹೋಲಿಸ್ಟಿಕ್ ದರ್ಶನವನ್ನು ನಾವು ಈ ಕೃತಿಯಲ್ಲಿ ಕಾಣಬಹುದಾಗಿದೆ. ಕರಾವಳಿ ಕರ್ನಾಟಕದ ಆಧುನಿಕ ಕಾವ್ಯಜಗತ್ತಿಗೆ ಪ್ರವೇಶಿಸಲು ಹೊಸದಾರಿಯೊಂದನ್ನು ಅವರು ಇಲ್ಲಿ ತೋರಿಸಿಕೊಟ್ಟಿದ್ದಾರೆ.
ಕನ್ನಡ ನವೋದಯ ಸಾಹಿತ್ಯ ಸಂದರ್ಭದಲ್ಲಿ ಕರ್ನಾಟಕ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹತ್ತು ಹಲವು ಭಾಗಗಳಲ್ಲಿ ಹರಿದು ಹಂಚಿ ಹೋಗಿತ್ತು. ಈ ಹೊತ್ತಿನಲ್ಲಿ ಕರಾವಳಿಯ ಕವಿಗಳು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪುನರುಜ್ಜೀವನದ ಕೆಲಸದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಕಳೆದ ಶತಮಾನದ ಆರಂಭದಲ್ಲಿ ದ.ಕ. ಜಿಲ್ಲೆಯಲ್ಲಿ ತಲೆಯೆತ್ತಿದ ನವೋದಯ ಹಾಗೂ ಆ ಬಳಿಕದ ಕನ್ನಡ ಕಾವ್ಯದ ಹೆಜ್ಜೆ ಹಾದಿ ಹಾಗೂ ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಸ್ತುತ ಕೃತಿ ಕೈದೀವಿಗೆಯಂತಿದೆ. ಮಂಗಳೂರು ವಲಯದಲ್ಲಿ ಪ್ರಸಿದ್ಧರಾದ ಹದಿನಾಲ್ಕು ಮಂದಿ ಕವಿಗಳ ಯಶೋಗಾಥೆಯ ಒಳನೋಟದ ವಿವರಗಳಿರುವುದು ಈ ಕೃತಿಯ ಹೆಚ್ಚುಗಾರಿಕೆ. ಪಂಜೆ ಅವರಿಂದ ತೊಡಗಿ ರಾಮಚಂದ್ರದೇವ ಅವರವರೆಗೆ ಸಮೃದ್ಧವಾಗಿ ಕನ್ನಡ ಕಾವ್ಯ ನೌಕೆಯನ್ನು ಮುನ್ನಡೆಸಿದ ಸಾಧಕರನ್ನು ಚಾರಿತ್ರಿಕ ವಿಮರ್ಶೆ ಮತ್ತು ಕರ್ತೃನಿಷ್ಠ ವಿಮರ್ಶೆಯ ನೆಲೆಯಲ್ಲಿ ವಿವೇಚಿಸಿರುವುದು ಅವಲೋಕನೀಯವಾಗಿದೆ. ಈ ಕವಿಗಳ ಕಾವ್ಯದ ಬಗೆಗೆ ಪ್ರೀತಿಯನ್ನು, ಆಸಕ್ತಿಯನ್ನು ಹುಟ್ಟಿಸುವುದು ಹಾಗೂ ಅವರ ಕೊಡುಗೆಯನ್ನು ಲೋಕಮುಖಕ್ಕೆ ಪರಿಚಯಿಸಿರುವುದು ವರ್ತಮಾನದ ತುರ್ತು ಸಹ ಹೌದು. ಈ ಪ್ರದೇಶದ ಕವಿಗಳು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಮಹತ್ವದ ನೆಲೆಗಳನ್ನು, ಧ್ವನಿಗಳನ್ನು ಗುರುತಿಸಿ ಸ್ಥಾನ ನಿರ್ದೇಶನ ಮಾಡಿರುವುದು ಡಾ. ಭಟ್ ಅವರ ಪ್ರತಿಭೆಗೆ, ವಿದ್ವತ್ತಿಗೆ, ವ್ಯಾಪಕ ಓದು ಅಧ್ಯಯನಕ್ಕೆ ನಿದರ್ಶನ.
ಕರಾವಳಿ ವಲಯದ ಹೆಚ್ಚಿನ ಕವಿ, ವಿದ್ವಾಂಸರು, ಸಾಹಿತಿಗಳು ಎಲೆಮರೆಯಕಾಯಿಯಾಗಿಯೇ ಉಳಿದುಬಿಟ್ಟವರು. ಪಂಜೆ, ಗೋವಿಂದ ಪೈ, ಅಡಿಗ ಹೀಗೆ ಕೆಲವರನ್ನು ಬಿಟ್ಟರೆ ಉಳಿದವರ ಹೆಸರು ಸಮಗ್ರ ಕರ್ನಾಟಕ ಸ್ತರದಲ್ಲಿ ಕೇಳಿ ಬಂದದ್ದು ವಿರಳ. ಉದಾಹರಣೆಗೆ 1931 ರಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಪಂಡಿತ ಮುಳಿಯ ತಿಮ್ಮಪ್ಪಯ್ಯ ಅವರು ಮಾಡಿದ ಅದ್ಭುತವಾದ ವಿಚಾರಪ್ರದ ಉಪನ್ಯಾಸವನ್ನು ಕೇಳಿದ ಅಂದಿನ ಖ್ಯಾತ ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರು `ನಿಮ್ಮಂತಹ ವಿದ್ವಾಂಸರ ಪರಿಚಯವನ್ನೇ ನನಗೆ ಯಾರೂ ಮಾಡಲಿಲ್ಲವಲ್ಲ' ಎಂದು ಉದ್ಗಾರತೆಗೆದರಂತೆ. ಇನ್ನು ಗ್ರಾಮೀಣ ಪ್ರಾಂತದಲ್ಲಿ ನೆಲೆಸಿದ ಉಳಿದ ಲೇಖಕರ ಪಾಡು ಏನಾಗಿತ್ತು ಎಂಬುದನ್ನು ನಾವು ಊಹಿಸಿಕೊಳ್ಳಬಹುದಾಗಿದೆ. ಮಂಗಳೂರು ಕೇಂದ್ರದ ಕಾವ್ಯ ಕೃಷಿಯ ಕುರಿತು ಬಂದ ಅಧಿಕೃತ ಕೃತಿಗಳು ಬಹಳ ಕಡಿಮೆ. ಈ ದೃಷ್ಟಿಯಿಂದ ಡಾ. ಜನಾರ್ದನ ಭಟ್ ವಿರಚಿತ `ಕರಾವಳಿಯ ಕವಿರಾಜಮಾರ್ಗ' ಗ್ರಂಥ ದೊಡ್ಡ ಕೊರತೆಯೊಂದನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಹಲವು ಹೊಸ ಹೊಸ ಲಹರಿಗಳನ್ನು ಹುಟ್ಟುಹಾಕುವಲ್ಲಿ ಸಫಲವಾಗಿದೆ. ನಮ್ಮ ಹಿರೀಕರನ್ನು ವಿಮರ್ಶಾತ್ಮಕವಾಗಿ ನೋಡುವ ದೂರವನ್ನು ಸಾಧಿಸಿರುವುದು ಈ ಕೃತಿಯ ಧನಾತ್ಮಕ ಅಂಶ.
ನವೋದಯದ ಆದ್ಯಕವಿ ಪಂಜೆ ಮಂಗೇಶರಾವ್ ಅವರದು ಬಹುಮುಖ ಪ್ರತಿಭೆ ಹಾಗೂ ನಾನಾ ಮುಖಗಳ ವ್ಯಕ್ತಿತ್ವ. `ಆಧುನಿಕ ಕನ್ನಡದ ಮೊದಲ ಕವನಗಳನ್ನು, ಮೊದಲನೆಯ ಸಣ್ಣಕತೆಯನ್ನೂ ಮೊದಲನೆಯ ಅಂಕಣ ಬರಹಗಳನ್ನೂ ಬರೆದವರೆಂಬ ಅಪೂರ್ವ ಕೀರ್ತಿಗೆ ಪಾತ್ರರಾಗಿರುವ ಪಂಜೆ ಅವರ ಮುಖ್ಯ ಕಾರ್ಯಕ್ಷೇತ್ರ ಮಂಗಳೂರಾಗಿತ್ತು. ಹೊಸಗನ್ನಡ ನವೋದಯ ಸಾಹಿತ್ಯದ ಮಂಗಳೂರು ಕೇಂದ್ರದ ನಾಯಕರಾಗಿದ್ದವರು ಪಂಜೆ ಮಂಗೇಶರಾಯರು. ಅವರಿಂದಾಗಿ ದಕ್ಷಿಣ ಕನ್ನಡದಲ್ಲಿ ಕತೆಗಾರರ ತಂಡವೇ ಹುಟ್ಟಿಕೊಂಡಿತು'' ಎಂಬುದನ್ನು ಸವಿಸ್ತಾರವಾಗಿ ಇಲ್ಲಿ ದಾಖಲಿಸಲಾಗಿದೆ. ಹೊಸ ಕವಿತೆಗೆ ಹೆದ್ದಾರಿ ನಿರ್ಮಿಸಿದ ರಾಷ್ಟ್ರಕವಿ ಎಂ. ಗೋವಿಂದ ಪೈ, ಭಕ್ತಿ ವಿರಕ್ತಿ, ಅನುರಕ್ತಿಗಳ ಸಂಗಮ, ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪಯ್ಯ, ಆಂಗ್ಲ ಸಾಹಿತ್ಯ ವಿಹಾರಿ, ಹಟ್ಟಿಯಂಗಡಿ ನಾರಾಯಣರಾವ್, ಪ್ರಯೋಗಶೀಲ ಕವಿ ಗುರು ಮುಳಿಯ ತಿಮ್ಮಪ್ಪಯ್ಯ, ನವೋದಯ ಸಾಹಿತ್ಯಕ್ಕೆ ಎಣ್ಣೆ ಹೊಯ್ದ ಕವಿ ಸೇಡಿಯಾಪು, ವ್ಯಂಗ್ಯ ದರ್ಶನದ ಕವಿ ಪಾ. ವೆಂ. ಆಚಾರ್ಯ, ಐಕ್ಯಗಾನದ ಕವಿ ಕಯ್ಯಾರಕಿಞ್ಞಣ್ಣರೈ, ನವೋದಯದಿಂದ ನವ್ಯಕ್ಕೆ ಪೇಜಾವರ ಸದಾಶಿವ ರಾವ್, ನವೋದಯದಕವಿರಾಜ ಹಂಸ ಸಾಂತ್ಯಾರು ವೆಂಕಟರಾಜ, ಹೊಸಕಾವ್ಯದಗುರು ಗೋಪಾಲಕೃಷ್ಣ ಅಡಿಗ, ಸಮಾಜ ವಿಮರ್ಶಕ ಕವಿ ಅ. ಗೌ. ಕಿನ್ನಿಗೋಳಿ ಹೀಗೆ ಸಿದ್ಧಿ ಪ್ರಸಿದ್ಧಿಯನ್ನು ಪಡೆದವರ ಜತೆಜತೆಗೆ ಅವಜ್ಞೆಗೆ, ಉಪೇಕ್ಷೆಗೆ ಒಳಗಾದ ಕವಿ ಸಾಧಕರ ಸಾಹಿತ್ಯ ಪರಿಚಾರಿಕೆಯನ್ನು ಸುದೀರ್ಘವಾಗಿ ಚರ್ಚಿಸಿರುವುದು ಒಂದು ಮಾದರಿ ಉಪಕ್ರಮ.
ಆಧುನಿಕ ಕನ್ನಡ ವಾಙ್ಮಯದ ಇತಿಹಾಸಕ್ಕೆ ಜರೂರಾದ ಆಕರ ಸಾಮಗ್ರಿಯನ್ನು ವಿಪುಲವಾಗಿ ಒದಗಿಸಿಕೊಡುವಲ್ಲಿ ಡಾ. ಜನಾರ್ದನ ಭಟ್ ಅವರು ಯಶಸ್ವಿಯಾಗಿದ್ದಾರೆ. ಕರಾವಳಿ ತೀರದ ಸಮೃದ್ಧವೂ, ವೈವಿಧ್ಯಮಯವೂ ಆದ ಸಾಂಸ್ಕೃತಿಕ ಇತಿಹಾಸ ಈ ಮೂಲಕ ನಾಡಿಗೆ ಲಭ್ಯವಾಗಿದೆ. ಇದೊಂದು ಚಾರಿತ್ರಿಕ ಮಹತ್ವದ ಕೃತಿ. ಈ ಕೃತಿಗಾಗಿ ಡಾ. ಜನಾರ್ದನ ಭಟ್ ಅವರಿಗೆ ಕನ್ನಡಿಗರು ಕೃತಜ್ಞರಾಗಿದ್ದಾರೆ. ಇದನ್ನು ಪ್ರಕಟಿಸಿದ ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯದ ಮಿತ್ರರಿಗೂ ಹಾರ್ದಿಕ ಅಭಿನಂದನೆಗಳು.
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
“ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡ...
"ಷರ್ಲಾಕ್ ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿ...
©2025 Book Brahma Private Limited.