ಜೀವನದ ಕಲ್ಲುಮುಳ್ಳುಗಳ ಹಾದಿಯ ಕಥಾ ಸಂಕಲನ ಕಲ್ಲು ಹೂವಿನ ನೆರಳು


ಜೀವನ ಹೂವಿನಂತೆ ಕಂಡರೂ ಅಲ್ಲಿ ನಿಜವಾದ ಹೂವಿನ ಘಮಲಿಲ್ಲ. ನಿಜವಾದ ಹೂವಿನ ಕೋಮಲತೆ ಇಲ್ಲ. ಕಲ್ಲು ಹೂವಿನ ಕಠಿಣತೆ ಪ್ರತಿ ಕತೆಯಲ್ಲಿ ನೆರಳಾಗಿ ಓದುಗರ ಜೊತೆ ಬರುತ್ತದೆ ಎನ್ನುತ್ತಾರೆ ಲೇಖಕಿ ಶೀಲಾ ಗೌಡರ. ಅವರು ಲೇಖಕ ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನದ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಕೃತಿ - ಕಲ್ಲು ಹೂವಿನ ನೆರಳು
ಲೇಖಕರು - ಅನಿಲ್ ಗುನ್ನಾಪೂರ

ಪುಟ: 90
ಪುಸ್ತಕದ ಬೆಲೆ - 120
ಪ್ರಕಾಶನ - ವೈಷ್ಣವಿ ಪ್ರಕಾಶನ
ಪುಸ್ತಕ ತರಿಸಲು ಸಂಪರ್ಕಿಸಿ - 96201 70027

ಶ್ರೀ ಅನಿಲ್ ಗುನ್ನಾಪೂರ ರವರು ಬರೆದ “ಕಲ್ಲು ಹೂವಿನ ನೆರಳು” ಕಥಾಸಂಕಲನದ ಕತೆಗಳು ಜೀವನಕ್ಕೆ ತುಂಬಾ ಹತ್ತಿರವಾಗಿದ್ದು,ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. ಜೀವನ ಅಂದುಕೊಂಡಷ್ಟು ಸರಳವಲ್ಲ. ದೂರದಿಂದ ಚೆನ್ನಾಗಿ ಕಂಡರೂ ಪ್ರತಿಯೊಬ್ಬರೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹೋರಾಡುವವರೇ. ಹೂವಿನಂತೆ ಕಂಡರೂ ಅಲ್ಲಿ ನಿಜವಾದ ಹೂವಿನ ಘಮಲಿಲ್ಲ. ನಿಜವಾದ ಹೂವಿನ ಕೋಮಲತೆ ಇಲ್ಲ. ಕಲ್ಲು ಹೂವಿನ ಕಠಿಣತೆ ಪ್ರತಿ ಕತೆಯಲ್ಲಿ ನೆರಳಾಗಿ ಓದುಗರ ಜೊತೆ ಬರುತ್ತದೆ.

‘ಅವನಿ’
ಕತೆಯಲ್ಲಿ ಮಲೆನಾಡಿನ ಕಾಡಿನ ನಿಗೂಢತೆಯ ಮೇಲೆ ಬೆಳಕು ಚಲ್ಲಿದ್ದಾರೆ. ಕಾಡಿನಲ್ಲಿ ಕತೆಗಾರ, ಮತ್ತು ಅವರ ಗೆಳೆಯನ ಜೊತೆ ನಾವೂ ಸಹ ಪ್ರಯಾಣಿಕರಾಗಿ ಕತ್ತಲಿಗೆ-ಕಾಡುಪ್ರಾಣಿಗಳಿಗೆ ಅಂಜುತ್ತಲೇ ಹುಲಿಯ ಫೋಟೋ ತೆಗೆವ ಸಾಹಸಮಯ ಕೆಲಸದಲ್ಲಿ ನಾವೂ ಅವರೊಟ್ಟಿಗೆ ಭಾಗಿಯಾದಂತಹ ಅನುಭವ. ಅಜ್ಜಿಯ ಸಾವಿನ ಅವಘಡ ನಡೆದೇ ಹೋಯ್ತು ಎಂದು ಮರಗುತ್ತ, ಬೆರಗು ಕಣ್ಣಿನಿಂದ ಓದುತ್ತಿರುವಾಗ ಅದು ಕನಸೆಂದು ತಿಳಿದ ತಕ್ಷಣ ಮತ್ತೆ ಹಗುರಾಗಿ ಹಾರಿದಂತ ಆನಂದ. ಎರಡನೇ-ಮೂರನೇ ರಾತ್ರಿ ಮತ್ತೆ ಹುಲಿ ಫೋಟೋ ಕ್ಲಿಕ್ಕಿಸುವ ಸಾಹಸಕ್ಕೆ ಗೌತಮ್ ಕೈ ಹಾಕಿದಾಗ , ಬೇಡ ಬೇಡ ಎನ್ನುತ್ತಲೇ ಕತೆಗಾರನೂ ಕುತೂಹಲ ತಾಳದೇ ಗೆಳೆಯನ ಬೆನ್ನಟ್ಟಿದಾಗ , “ಅಯ್ಯೋ! ಸುಮ್ಮನೇ ಮನೆಯಲ್ಲಿ ಮಲಗಬಾರದಿತ್ತೇ…..?.....ಹುಂಬು ಸಾಹಸಿಗರು….!” ಎಂದು ಕೊಳ್ಳುತ್ತ ಓದುಗಳಾದ ನಾನೂ ಅವರ ಬೆನ್ನತ್ತಿ ಕಾಡಿನ ಕತ್ತಲಲ್ಲಿ ಹುಲಿಯನ್ನು ಕಂಡಾಗ “ಯಾರು ಬದುಕ ಬಹುದು? ಯಾರು ಸಾಯ ಬಹುದು? ಇಬ್ಬರೂ….. ಅಯ್ಯೋ…..! “ ಎಂದು ತಡಬಡಿಸಿ ,ನಿಬ್ಬೆರಗಾಗಿ ಓದುತ್ತಿರುವಾಗ ಹುಲಿ ತನ್ನ ಬಾಲವನ್ನು ಮಾತ್ರ ಫೋಟೋದಲ್ಲಿ ಕರುಣಿಸಿ , ಕಣ್ಮರೆಯಾದಾಗ ಮುಖವನ್ನ ಬಿಗಿಗೊಳಿಸಿದ್ದ ಮುಖದ ಮೇಲಿನ ಒಂದೊಂದೇ ಗೆರೆಗಳು ಅಳಿದು ನಿರಮ್ಮಳ ಗೆಲುವಿನ ಭಾವದಿಂದ ಹೃದಯ ಹಗುರವಾಗುತ್ತದೆ.

ಕತೆ ಲೀಲಾಜಾಲವಾಗಿ ಓದಿಸಿಕೊಳ್ಳುತ್ತ ಕಾಡನ್ನು ಸುತ್ತಿಸಿ ಬಿಡುತ್ತದೆ. ಎಸ್ಟೇಟ್ ನಲ್ಲಿ ಒಂಟಿಯಾಗಿ ಬದುಕುತ್ತಿದ್ದರೂ , ಧಾರಾವಾಹಿಯೊಡನೆ ಅಜ್ಜಿಯ ಬೆಸುಗೆ , ಅವಳ ಜೀವನ ಪ್ರೀತಿ, ಸ್ವಾಭಿಮಾನ, ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಕತೆಯ ಮುಕ್ತಾಯ ಮಾತ್ರ ಸಂಪೂರ್ಣ ಕತೆಯ ಆಶಯವನ್ನು ತುಂಬಾ ಸೂಕ್ಷವಾಗಿ ಹಿಡಿದಿಡುತ್ತದೆ. “ಫೋಟೋದಲ್ಲಿ ಹುಲಿಯ ಬಾಲ ಮಾತ್ರ ಸೆರೆಸಿಗುವುದು” ಅಳಿವಿನಂಚಿನಲ್ಲಿರುವ ಹುಲಿ ಮತ್ತು ಇತರೆ ವನ್ಯ ಜೀವಿಗಳ ಸಂಕೇತವೆನಿಸುತ್ತದೆ.

ಗುಲ್ ಮೊಹರ್ ಹುಡುಗ
ತುಂಬಾ ಸರಳವಾಗಿ ಓದಿಸಿಕೊಂಡು ಹೋಗುವ ಈ ಕತೆ ಮಧ್ಯಮ ವರ್ಗದ, ಮಧ್ಯ ವಯಸ್ಸಿನವರ ಸಂಸಾರದ ಜವಾಬ್ದಾರಿಯನ್ನು ತೂಗಿಸಿಕೊಂಡು ಹೋಗುವ ಅವರ ಕಷ್ಟ ಕೋಟಲೆಗಳಿಗೆ ಕನ್ನಡಿ ಹಿಡಿದಿದೆ. ಜಾಗತೀಕರಣದ ತೀವ್ರ ಪೈಪೋಟಿಯಲ್ಲಿ “ survival of fittest” ತತ್ವ ಅನ್ವಯವಾಗುತ್ತಿರುವುದು,ಅದಕ್ಕಾಗಿ ಕೌಶಲ್ಯಗಳು,ತ್ಯಾಗ-ಪರಿಶ್ರಮಗಳು ಅನಿವಾರ್ಯವಾಗುತ್ತಿರುವುದು ಈ ಕತೆಯಲ್ಲಿ ಬಿಂಬಿತವಾಗಿದೆ. ಈಗಿನ ದಿನಮಾನಗಳಲ್ಲಿ ಕುಟುಂಬ ನಡೆಸಲು ಗಂಡ-ಹೆಂಡತಿಯರಿಬ್ಬರೂ ದುಡಿಯುವುದು ಅನಿವಾರ್ಯವಾಗಿ, ಕೆಲಸದ ಒತ್ತಡದಲ್ಲಿ ತಾಯ್ತನ ಒಂದು ಸುಂದರ ಅನುಭವವಾಗದೇ , ಇಂದಿನ ಹೆಣ್ಣು ಮಕ್ಕಳಿಗೆ ಬಂಧನದ ಅನುಭೂತಿ ನೀಡುತ್ತಿರುವುದು ಸುಳ್ಳಲ್ಲ.

ಇನ್ನೊಂದು ಮಗು ಈಗಲೇ ಬೇಡ ಎಂಬುದು ನಳಿನಿಯ ಜವಾಬ್ದಾರಿಯುತ ಮಾತಾದರೂ ಅದು ಸಂಸಾರದಲ್ಲಿ ಬೆಲೆ ಕಾಣದೇ ಹಾಗೇ ಕರಗಿಹೋಗುವುದು. ಅದನ್ನು ತಡೆಯಲು ಆಕೆ ಮಾಡುವ ಪ್ರತಿಕ್ಷಣದ ತೊಳಲಾಟಗಳು, ಕೊನೆಗೆ ಸೋತು ಅನಿವಾರ್ಯತೆಗೆ ಕಟ್ಟು ಬೀಳುವುದು…. “ನಿಜ! ಕಂಡೀಶನ್ ಗಳ ಮೇಲೆ ಬದುಕಿನ ಬಂಡಿ ಸಾಗುವುದಿಲ್ಲ!”

‘ಅದನ್ನು’ ಖರೀದಿಸಲು ಗಂಡ ಹೆಂಡತಿಯಿಬ್ಬರೂ ಮುಜುಗರ ಪಟ್ಟುಕೊಳ್ಳುವುದು, ಕುಟುಂಬ ಯೋಜನೆ ಗಾಗಿ ಮಹಿಳೆಯರಿಗೆ ಇರುವ ವೈದ್ಯಕೀಯ ದಾರಿಗಳ ಬಗ್ಗೆ ಸುಶಿಕ್ಷಿತೆಯಾದ ನಳಿನಿ ಗಮನ ಹರಿಸದಿರುವುದು, ಮಹಿಳಾ ವೈದ್ಯರನ್ನ ಭೇಟಿಯಾಗಿ ಸಲಹೆ ಪಡೆಯದಿರುವುದು ಇಂದಿನ ಸಮಾಜದಲ್ಲಿ ಇಂತಹ ವಿಷಯಗಳ ಚರ್ಚೆಗೆ ಮುಕ್ತವಾಗಿ ಜನರ ಮನ ತೆರೆದುಕೊಂಡಿಲ್ಲ ಎಂಬುದನ್ನು… ಮತ್ತು ಮಹಿಳೆಯರಿಗೆ ಈ ಕುರಿತು ಹೆಚ್ಚಿನ ಜ್ಙಾನದ ಕೊರತೆಯನ್ನೂ ತೋರಿಸುತ್ತದೆ.

ಇನ್ನು ಈ ಸಂಸಾರದ ಜಂಜಾಟದಲ್ಲೇ , ಗುಲ್ ಮೊಹರದಂತ ಮನಸಿನ ಮಕ್ಕಳು ಮಾತ್ರ ತಮ್ಮದೇ ಮುಗ್ದವಾದ ಪ್ರಪಂಚದಲ್ಲಿ ತುಂಬಾ ಸುಖಿಯಾಗಿರುತ್ತಾರೆ. ಒಳ್ಳೆಯ ಮನಸುಗಳೊಟ್ಟಿಗೆ ಸಂಬಂಧಗಳನ್ನು ಕಟ್ಟಿಕೊಳ್ಳುವಲ್ಲಿ ಅಹಂಕಾರ ಇಣುಕುವುದಿಲ್ಲ. ಮತ್ತೊಬ್ಬರು ತಮ್ಮ ಮೇಲಿಟ್ಟಿರುವ ಪ್ರೀತಿ –ವಿಶ್ವಾಸಕ್ಕೆ ಅವರಿಂದ ಮೋಸ ವಾಗುವುದಿಲ್ಲ, ಎಂಬುದನ್ನು ಕತಾಹಂದಿರದಲ್ಲಿ ಚನ್ನಾಗಿ ಹೆಣೆಯಲಾಗಿದೆ. ತಾಯ್ತನ ಅನುಭವಿಸಲು ತಮ್ಮ ಒಡಲ ಕುಡಿಗಳೇ ಬೇಕಿಲ್ಲ. ಪ್ರೀತಿಯ ಒಳಗಣ್ಣು ತೆರೆದು ಜಗತ್ತನ್ನು ನೋಡಿದರೆ ಸಾಕು.

ಚಿನ್ಮಯ ನಿಲಯ
ಬದುಕು ಬಲು ನಿಗೂಡವಾದ ದಾರಿ. ಹಲವು ಅಚ್ಚರಿಯ ತಿರುವುಗಳ ಪಯಣ. ಅನೇಕ ಕನಸುಗಳನ್ನು ಹೊತ್ತು , ಕನಸುಗಳ ಈಡೇರಿಕೆಗಾಗಿ ಶ್ರಮಪಟ್ಟು ಎಲ್ಲವೂ ಚನ್ನಾಗಿ ನಡೆದಿದೆ ಎಂದು ಕೊಳ್ಳುವಾಗಲೇ ಬಹಳಷ್ಟು ಎಡವಟ್ಟುಗಳು ನಡೆದುಹೋಗಿರುತ್ತವೆ. ವಿಧಿಯಾಟ ತುಂಬಾ ವಿಚಿತ್ರ. ಅದಕ್ಕೆ ಸಾಕ್ಷಿಯಾಗಿ ನಿಲ್ಲುವುದು ಸುಭಾಷ್ ಮತ್ತು ಚಂಪಾರ ಜೋಡಿ. ಮುದ್ದಾದ ಮಗುವಿಗೆ ತಾಯಿ-ತಂದೆಯಾದರೂ ಆ ಮಗುವಿನ ಸಂಪೂರ್ಣ ಬೆಳವಣಿಗೆಯಾಗದೇ ಅವನ ಪಾಲನೆ – ಪೋಷಣೆಯಲ್ಲಿ ವಿಶೇಷವಾಗಿ ತಾಯಿ ಅನುಭವಿಸುವ ಕಷ್ಟವನ್ನು ಕತೆಯಲ್ಲಿ ತುಂಬಾ ಚನ್ನಾಗಿ ಚಿತ್ರಿಸಿದ್ದಾರೆ.

ಬುದ್ದಿಮಾಂಧ್ಯವಾದರೂ ಮನುಷ್ಯನಲ್ಲಿನ ವಯೋಸಹಜ ತುಡಿತಗಳ ಜೀವಂತಿಕೆ ಈ ಕತೆಯಲ್ಲಿ ಮೂಡಿ ಬಂದಿದೆ. ಚಿಕ್ಕವಯಸ್ಸಿನಲ್ಲೇ ವಿಧವೆಯಾದ ಚಂದ್ರವ್ವಳೂ ಇದಕ್ಕೆ ಹೊರತಲ್ಲ. ಚಂದ್ರವ್ವಳ ಸ್ನೇಹದಿಂದ ಚಿನ್ನುವಿನಲ್ಲಿ ಕಂಡುಬರುತ್ತಿದ್ದ ಧನಾತ್ಮಕ ಬದಲಾವಣೆಯ ವಾಸ್ತವಾಂಶ ವನ್ನು ಅರಿಯದೇ ಗುರೂಜಿ ಮಂತ್ರಿಸಿಕೊಟ್ಟ ದಾರದ ಪ್ರಭಾವ ಎಂದು ಭಾವಿಸಿದ್ದ ಅಂಕಲ್ – ಆಂಟಿಯರ ಮನಸ್ಥಿತಿ ನಮ್ಮ ಸಮಾಜದ ಮೂಡನಂಬಿಕೆಗಳಿಗೆ ಹಿಡಿದ ಕನ್ನಡಿಯಾಗಿದೆ. ಸತ್ಯ ತಿಳಿದ ನಂತರ ಚಂಪಾ ಆಂಟಿ ಚಂದ್ರವ್ವಳ್ಳನ್ನು ಮರಳಿ ಕಳಿಸುವುದರೊಂದಿಗೆ ಕತೆ ಮುಕ್ತಾಯವಾಗುತ್ತದೆ. ಕೊನೆಯಲ್ಲಿ ಇಬ್ಬರ ಕಣ್ಣಲ್ಲೂ ನೀರಿತ್ತು ಎಂಬ ವಾಕ್ಯ ಇಬ್ಬರೂ ಹೆಣ್ಣು ಮಕ್ಕಳ ಅಸಹಾಯಕತೆ, ಸಮಾಜದ ಬಗ್ಗೆಇರುವ ಭಯವನ್ನು ವ್ಯಕ್ತ ಪಡಿಸುತ್ತವೆ. ಚಂದ್ರವ್ವನನ್ನು ಇಟ್ಟುಕೊಂಡಿದ್ದರೆ ಚಿನ್ನುವಿನಲ್ಲಿ ಮತ್ತಷ್ಟು ಬದಲಾವಣೆ ಸಾದ್ಯವಿತ್ತೇ? ಚಂದ್ರವ್ವನಿಗೆ ಕೊನೆವರಗೂ ಚಿನ್ನುವಿನ ಜೊತೆ ಇರುವಷ್ಟು ತಾಳ್ಮೆ ಇತ್ತೇ? ಹೀಗೇ ಹತ್ತು ಹಲವು ಯೋಚನೆಗಳ ಮೂಲಕ ಚಂಪಾಳ ನಿರ್ಧಾರವನ್ನು ವರೆಗೆ ಹಚ್ಚುತ್ತದೆ.

ಶ್ಯಾರಿಯ ಗೆಲ್ಲಾ ಡಬ್ಬಿ
ತಂದೆಯ ಬೇಜವಾಬ್ದಾರಿ, ಕುಡಿತದ ದುಷ್ಪರಿಣಾಮದ ಪರಾಕಾಷ್ಟೆಯನ್ನು ಎತ್ತಿ ಹಿಡಿಯುವ ಈ ಕತೆ ಕruಳು ಹಿಂಡುತ್ತದೆ. ಓದುವ ಬರೆಯುವ, ಆಡುವ-ಕುಣಿಯುವ ಬಾಲ್ಯದ ಹಲವು ಸಹಜ ಕನಸುಗಳನ್ನು ಹೊತ್ತ ಶಾರವ್ವಳ ದುರಂತ ಸಾವು ಮಕ್ಕಳ ಪ್ರತಿ ತಂದೆ-ತಾಯಿಯರ, ಸಮಾಜದ ಕರ್ತವ್ಯ ಚ್ಯುತಿಯನ್ನ ಒತ್ತಿಹೇಳುತ್ತದೆ. ಕುಡುಕ ಗಂಡನಜೊತೆ ಸಂಸಾರ ಸಾಗಿಸುವಲ್ಲಿ ಬಾಯಕ್ಕ ತೋರಿದ ದಿಟ್ಟತನ, ತ್ಯಾಗ-ಸಹನೆಗಳೆಲ್ಲ ವ್ಯರ್ಥವಾಗಿ , ಮಗಳು ಶಾರವ್ವ ದುಷ್ಟರ ಹೀನಕೃತ್ಯಗಳಿಗೆ ಬಲಿಯಾಗುವ ಘಟನೆ ಸಮಾಜದಲ್ಲಿ ಮಕ್ಕಳ ಸುರಕ್ಷತೆಯ ಕೊರತೆಯನ್ನ ಬಿಂಬಿಸುತ್ತದೆ.

ಪರಿಮಳ
ಸಮಾಜದಲ್ಲಿ ಬಹುತೇಕ ಹೆಣ್ಣುಮಕ್ಕಳು ಅನುಭವಿಸುವ ದಯನೀಯ ಸ್ಥಿತಿಯ ಚಿತ್ರಣ ಕತೆಯಲ್ಲಿದೆ. ಗಂಡ ಬೇರೊಬ್ಬಳನ್ನು ಮದುವೆಯಾಗಿ ,ಮಗಳನ್ನೂ ತ್ಯಜಿಸಿ ಮನೆ ಬಿಟ್ಟು ಹೋದಾಗ , ಸಮಾಜದ ಕಾಮುಕ ಕಣ್ಣುಗಳ ಮಧ್ಯದಲ್ಲಿ , ಸಮಾಜದ ಕೊಂಕು ನುಡಿಗಳ ಇರಿತವನ್ನು ತಾಳುತ್ತ , ಸಂಸಾರದ ನೊಗವನ್ನು ಹೊತ್ತು ಸಾಗುವ ಪಮ್ಮಿಯ ತಾಯಿ ಜೀವನದಲ್ಲಿ ಬಹಳ ನೊಂದು ನೇಣು ಹಾಕಿಕೊಳ್ಳಲು ಮುಂದಾದಾಗ ಅಕಸ್ಮಾತ್ ಆಗಿ ಎದ್ದು ಬಂದ ಪಮ್ಮಿಯ ಪ್ರಶ್ನೆಗೆ ತಾಯಿ “ ನಿನಗೆ ಜೋಕಾಲಿ ಕಟ್ಟುತ್ತಿದ್ದೆ…” ಎನ್ನುವ ಮಾತು, ಪಮ್ಮಿ ತುಂಬಾ ಖುಶಿಯಾಗಿ “ಕಟ್ಟು … ಇಬ್ಬರೂ ಜೋಕಾಲಿ ಆಡೋಣ” ಎನ್ನುವ ಪಮ್ಮಿಯ ಪ್ರತಿಕ್ರಿಯೆ ಸಮಾಜದಲ್ಲಿ ಮಕ್ಕಳಿಗಾಗೇ ಜೀವ ಹಿಡಿದಿರುವ ಅದೆಷ್ಟೋ ಸಂಸಾರದ ಕತೆಗಳಾಗಿವೆ. ಕತೆಯಲ್ಲಿ ಒಂಟಿ ಮಹಿಳೆಯರ ಮೇಲಾಗುವ ಮಾನಸಿಕ, ದೈಹಿಕ ದೌರ್ಜನ್ಯಗಳಮೇಲೆ ಬೆಳಕು ಚಲ್ಲಿದೆ.

ಹುಚ್ಚಯ್ಯನ ಲೀಲೆ
ನಾಟಕದ ಒಂದು ಪಾತ್ರದಿಂದ ಚೆನ್ನಪ್ಪನ ನಡವಳಿಕೆಗಳಲ್ಲಾದ ಅಪ್ರತಿಮ ಬದಲಾವಣೆ ಯನ್ನು ಕತೆ ಚನ್ನಾಗಿ ಪ್ರಸ್ತುತ ಪಡಿಸಿದೆ. ಯಾವಾಗಲೂ ಸಿಕ್ಕಾಪಟ್ಟೆ ಜಿಪುಣನಾಗಿದ್ದ ಚೆನ್ನಪ್ಪನಿಗೆ , ಬೇರೆಯವರಿಗೆ ದಾನ ಮಾಡುವದರಲ್ಲಿ, ಸಹಾಯ ಮಾಡುವುದರಲ್ಲಿ ಇರುವ ಖುಶಿಯ ಅನುಭವವೇ ಇರಲಿಲ್ಲ. ನಾಟಕದ ಮೂಲಕ ಆ ಅನನ್ಯ ಅನುಭವ ಪಡೆದ ಚನಯ್ಯ ಜನರ ಕಣ್ಣಿಗೆ ದೈವಾಂಶ ಸಂಭೂತನಾಗಿ ಕಂಡುಬಂದ. ಕೊನೆಗೆ ಕೊಡುವುದರಲ್ಲೇ ಅಪರಿಮಿತ ಆನಂದ ಕಂಡ ಚೆನ್ನಯ್ಯ ತನ್ನದೆಲ್ಲವನ್ನೂ ಕೊಟ್ಟೇ ಹುಚ್ಚಯ್ಯನಲ್ಲಿ ತಾನೇ ಲೀನವಾದ ಕತೆ ತುಂಬಾ ಸುಂದರವಾಗಿದೆ.

ಕಮಲಜ್ಜಿ
ಈ ಕತೆ ಇಂದು ಮನೆಮನೆಯ ಕತೆಯಾಗಿ ತುಂಬಾ ಹತ್ತಿರವಾಗುತ್ತದೆ. ಬಾಳ ಮುಸ್ಸಂಜೆಯಲ್ಲಿ ಮಕ್ಕಳ ನೆನಪುಗಳೊಂದಿಗೆ ತಾವು ಬಾಳಿದ ಮನೆಯಲ್ಲಿ ಒಂಟಿಯಾಗಿ ದಿನಗಳನ್ನು ದೂಡುತ್ತಿರುವ ಹಿರಿಯ ಜೀವಗಳು ಒಂದೆಡೆಯಾದರೆ, ಜಾಗತೀಕರಣದ ಸವಾಲುಗಳನ್ನು ಎದುರಿಸುತ್ತ , ಸ್ಪರ್ಧಾತ್ಮಕ ಯುಗದಲ್ಲಿ ಜೀವನದ ಜವಾಬ್ದಾರಿಗಳನ್ನು ನಿಭಾಯಿಸಲು ಹೊಲ ಮನೆ ತೊರೆದು ಪಟ್ಟಣಗಳಿಗೆ ದುಡಿಯಲು ಹೋಗುವ ಮಧ್ಯವಯಸ್ಸಿನವರ ಅನಿವಾರ್ಯತೆ, ಪಟ್ಟಣದಲ್ಲಿ ಜೀವನ ನಡೆಸುವ ಕಷ್ಟ, ಉದ್ಯೋಗದ ಅಭದ್ರತೆ…ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕತೆ ಮಾರ್ಮಿಕವಾಗಿ ತಿಳಿಸುತ್ತದೆ. ತಾಯಿಯನ್ನು ಆಸ್ಪತ್ರೆಗೆ ತೋರಿಸಿ, ಊರಿಗೆ ಮರಳಲು ದುಡ್ಡೇ ಉಳಿಯದ ಸ್ಥಿತಿಯಲ್ಲಿ ಮತ್ತೆ ಅವ್ವ ತನ್ನ ಮೊಮ್ಮಗನ ಕೈಗೆ ಕೊಡುವ ಚಿಲ್ಲರೆ ಹಣವೇ ಗತಿಯಾಗುವುದು ತಾಯಿಯ ಮಮತೆ, ಶ್ರೀರಕ್ಷೆ ಯನ್ನ ತ್ತಿ ಹಿಡಿಯುತ್ತದೆ. ಅನಿವಾರ್ಯತೆಯಲ್ಲಿ ಇಂದು ಮಾನವೀಯತೆ ಕರಗಿ, ಕೊರಗಿ, ಸೊರಗುತ್ತಿರುವುದು ಮನಕಲುಕುತ್ತದೆ.

ಅನಿಲ್ ಗುನ್ನಾಪೂರ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

ಕಲ್ಲು ಹೂವಿನ ನೆರಳು ಕೃತಿಯ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...