ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ... ದೀರ್ಘ ಕಾಲದ ಸಾಹಿತ್ಯಿಕ ಜಪದ ಫಲಶೃತಿ


ಬಹುಕಾಲಗಳ ಕಾಲ ಸಾಹಿತ್ಯ ಓದು ಬರಹದ ಗೀಳನ್ನು ಗಿಟ್ಟಿಸಿಕೊಂಡ ಇವರು ಸಾಹಿತ್ಯದ ಜಪ, ತಪವ ಮಾಡಿ "ಶರಧಿಯಲ್ಲಿ ಒಂದು ಮಳೆ ಹನಿಗೆ ಸ್ಥಾನವಿಲ್ಲವೇ?" ಎಂದು ವಿನಮ್ರವಾಗಿ ಪ್ರಶ್ನೆ ಮಾಡುತ್ತಾ ಮೆಲ್ಲಗೆ ಕವಿತೆಗಳ ಮಾಲೆಯನ್ನು ಮನಮುಟ್ಟುವಂತೆ ಪೋಣಿಸಿ ಪುಸ್ತಕ ಲೋಕಾರ್ಪಣೆಗೊಳಿಸಿದ್ದಾರೆ ಎನ್ನುತ್ತಾರೆ ಯುವ ಸಾಹಿತಿ ಕೆ.ಶ್ರೀಧರ್ (ಕೆ.ಸಿರಿ). ಅವರು ಶಾಂತಾ ಜಯಾನಂದ್ ಅವರ `ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ' ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಲೇಖಕರು: ಶಾಂತಾ ಜಯಾನಂದ್ 
ಕೃತಿ: ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ
ಪುಟಗಳು: 86
ಬೆಲೆ: 200
ಮುದ್ರಣ: 2021
ಪ್ರಕಾಶಕರು: ಕಾಜಾಣ ಪ್ರಕಾಶನ 

ಕಾವ್ಯ ಅರಳುವ ಬಗೆಯೇ ಹಾಗೆ ಅದೊಂದು ರೀತಿಯ ಸುಮವರಳುವ ಹಾಗೆ ಸೂಕ್ಷ್ಮ ಮನಸ್ಸಿನ ಕಾವ್ಯಾತ್ಮಕ ಅಭಿವ್ಯಕ್ತಿಯುಳ್ಳ ಭಾವನಜೀವಿಗಳಿಗೆ ಮಾತ್ರ ಕಾವ್ಯ ಹುಟ್ಟುವ ಸಮಯದ ಅನುಭವದ ಅರಿವಾಗುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಅಗ್ರಜ ಸಾಹಿತಿಗಳಲ್ಲಿ ಬಹುತೇಕ ಸಾಹಿತಿಗಳು ಕಾವ್ಯದಿಂದ ಕಥಾಲೋಕಕ್ಕೆ ಬಂದಿರುವುದು ಗಮನಿಸಬೇಕಾದ ಅಂಶ. ಅಂತಹುದೇ ದಿಗ್ಗಜ ಸಾಹಿತಿಗಳ ಹಾದಿಯಲ್ಲಿ ಉದಯೋನ್ಮುಖ ಕಾವ್ಯಾತ್ಮಕ ಕನಸುಗಳೊಂದಿಗೆ ಶಾಂತಾ ಜಯಾನಂದ್ ರವರು ತಮ್ಮ ಸಾಹಿತ್ಯಿಕ ಪಯಣವನ್ನು ಚೊಚ್ಚಲ ಕವನ ಸಂಕಲನದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಅವರ ಸಾಹಿತ್ಯ ಹಾದಿಯಲ್ಲಿ ಸಾಹಿತ್ಯದ ಸೌರಭವೇ ಸಂಭ್ರಮಿಸಲಿ. ಬಹುಶಃ ಶಾಂತ ಜಯಾನಂದ್ ರವರು ತಮ್ಮ ಜೀವನದ ಬಹುತೇಕ ದಿನಗಳು ಸಂಸಾರ, ಬದುಕು ಬವಣೆಗಳ ಜೊತೆ ನೆಮ್ಮದಿಯ ಸೂರಿಗಾಗಿ ಸಾಹಿತ್ಯವನ್ನರಸಿದಂತಿದೆ. ಬಹುಕಾಲಗಳ ಕಾಲ ಸಾಹಿತ್ಯ ಓದು ಬರಹದ ಗೀಳನ್ನು ಗಿಟ್ಟಿಸಿಕೊಂಡ ಇವರು ಸಾಹಿತ್ಯದ ಜಪ, ತಪವ ಮಾಡಿ "ಶರಧಿಯಲ್ಲಿ ಒಂದು ಮಳೆ ಹನಿಗೆ ಸ್ಥಾನವಿಲ್ಲವೇ?" ಎಂದು ವಿನಮ್ರವಾಗಿ ಪ್ರಶ್ನೆ ಮಾಡುತ್ತಾ ಮೆಲ್ಲಗೆ ಕವಿತೆಗಳ ಮಾಲೆಯನ್ನು ಮನಮುಟ್ಟುವಂತೆ ಪೋಣಿಸಿ ಪುಸ್ತಕ ಲೋಕಾರ್ಪಣೆಗೊಳಿಸಿದ್ದಾರೆ. ಬರೀ ಮೆಚ್ಚುಗೆಯ ಮಾತುಗಳನ್ನಾಡದೆ ಖಾರವಾದ ವಿಮರ್ಶೆಯನ್ನು ನೀಡಿ ಎಂದು ಸಹೃದಯಿಯವರಲ್ಲಿ ಅರುಹಿದ್ದಾರೆ. 

ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಮನದೊಳಗಡೆ ಅಡಗಿರುವ ಭಾವನೆಗಳನ್ನು ಮತ್ತೆ ನುಡಿಸುವ ಪ್ರಯತ್ನದಲ್ಲಿದ್ದಾರೆ ಪುಸ್ತಕದ ಲೇಖಕರು 'ಬುದ್ಧ ಮತ್ತು ತಾಯಿ' ಎಂಬ ಕವಿತೆಯಿಂದ ಪ್ರಾರಂಭವಾಗಿ  'ಹೆಕ್ಕುತ್ತೇನೆ ನೆನಪುಗಳ' ಕವಿತೆಯೊಂದಿಗೆ ಕೊನೆಗಳ್ಳುವ ಈ ಕೃತಿ ನಮ್ಮಲ್ಲಿರುವ ಕಾವ್ಯಾತ್ಮಕ ಅಭಿರುಚಿಯನ್ನು ಕೆರಳಿಸದೆ ಬಿಡುವುದಿಲ್ಲ ಸಮಗ್ರ ಕವಿತೆಗಳನ್ನು ಒಮ್ಮೆ ನೋಡಿದಾಗ ಲೇಖಕರ ಜೀವನಾನುಭವದ ಬದುಕಿನ ಪಾಕ ಮೈಳೈಸಿದಂತಿದೆ ಕವಿತೆಗಳಲ್ಲಿ ಕವಿ ತನಗೆ ತಾನೆ ಸ್ವಗತ ಮಾಡಿಕೊಂಡಂತಿದೆ, ಸಹಜ ಕವಿತೆಗಳ ಅಭಿವ್ಯಕ್ತಿ ಇರುವುದರಿಂದ ಲೇಖಕರು ಪ್ರಕೃತಿ ಪ್ರೇಮಿಗಳಲ್ಲದೆ ನಿಸರ್ಗದೇವಿಯ ಆರಾಧಕರೂ ಹೌದೂ ಎನ್ನುವಂತಿದೆ ಕೆಲ ಕವಿತೆಗಳ ಭಾವ ಲೇಖಕರು ಅವಿಭಕ್ತ ಕುಟುಂಬದ ಹಿನ್ನೆಲೆಯಿಂದ ಬಂದ ಇವರು 'ಕುಟುಂಬ ದ್ವೀಪಗಳು', 'ಅಪ್ಪ',  'ಅಮ್ಮನಿಗೊಂದು ಪತ್ರ', 'ತಾಯಿಮಗಳ ಸಂವಾದ', 'ತಾಯ್ತನಕ್ಕೆ ಲಿಂಗಭೇದವಿಲ್ಲ', 'ತವರು', 'ರೇಷ್ಮೆಗೂಡು', 'ದಾಂಪತ್ಯ' ಕವಿತೆಗಳಲ್ಲಿ ಮಾತೃ ಪಿತೃ ಪ್ರೇಮದ ಪರಾಕಾಷ್ಠತೆ, ಕೂಡುಕುಟುಂಬ ತುಂಬಿದ ಅಂಬುದಿಯ ಹಾಗೆ, ಪ್ರಸ್ತುತ ವಿಭಕ್ತ ಕುಟುಂಬ ಬರಿ ಮೊಬೈಲು, ಗೇಮು, ಒಂದರ್ಥದಲ್ಲಿ ಭಾವನಹೀನ ಬದುಕು ಎಂದು ಬೇಸರ ವ್ಯಕ್ತಪಡಿಸಿ ಒಂದಾಗಿ ಬಾಳುವ ಸಂದೇಶ ನೀಡಿದ್ದಾರೆ, ತಂದೆ ತಾಯಿಗಳು ಸಂಸ್ಕಾರದ ಆಲದ ಮರಗಳು ಈ ಆಲದ ಮರದ ಕೆಳಗೆ ಬೆಳೆಯುವ ನಾವು ಹುಲ್ಲಿನ ಹಾಗೆ ಎಂತಹುದೆ ಮಳೆ ಗಾಳಿ ಬೀಸಲಿ ತಂದೆ ತಾಯಿ ಸಂಸ್ಕಾರದ ಆಲದ ಮರದ ಆಶ್ರಯ ನಮ್ಮನ್ನು ಕಾಪಾಡುವುದು. 

 " ಒಂಟಿತನಕ್ಕೆ ತುಂಟುತನದ ಉತ್ತರ ನಾವು ನಮ್ಮವರೆಂಬ ಅಬ್ಬರ ಪ್ರೀತಿಗೆ ಅದರ ನೀತಿಗೆ ಸಂಸಾರ ಅಮರ " ಕುಟುಂಬ ದ್ವೀಪದ ಈ ಕವಿತಾ ಸಾಲುಗಳು ಸಾಮರಸ್ಯದ ಗೂಢಾರ್ಥ ಹೊಂದಿವೆ, ಅಪ್ಪ ಕವಿತೆಯ "ಅಪ್ಪ ಎಂದರೆ ಆಪ್ಯಾಯಮಾನ  ಭರವಸೆಯ ಬಾಳಿನಲಿ ಸದಾ ಅವನಿಂದಾದ ಜೀವನಯಾನ " ಎಂದು ತಂದೆಯ ವ್ಯಕ್ತಿತ್ವ ಕುರಿತು ಭಾವನಾತ್ಮಕವಾಗಿ ಬರೆದಿದ್ದಾರೆ, ಅಮ್ಮನಿಗೊಂದು ಪತ್ರ ಕವಿತೆಯಲ್ಲಿ 

"ಜೀವನದ ಒಂದೊಂದು
ಅನುಭವ ಸಾರ
ನೀ ನನಗಿಟ್ಟ ಬಿಕ್ಷೆಯಮ್ಮ 
ತಿಳಿದೋ ತಿಳಿಯದೆಯೋ
ನಾನು ತಪ್ಪೆಹಸಗಿದ್ದರೆ 
ನಿನ್ನ ಕಂದನ ಕ್ಷಮಿಸಮ್ಮಾ" ಎಂದು ತಾಯಿ ಮಗಳ ಸಂವಾದ ಕವಿತೆಯಲ್ಲಿ  ಕವಿಯಾಗುವ, ಹಾಗೂ ಫಲಾಪೇಕ್ಷೆಯುಳ್ಳ  ಭ್ರಮಾಲೋಕದ ಕವಿಯಾಗದೆ "ನಿನ್ನ ಭಾವಗಳ ಜೊತೆಗೆ ಹಾಳೆ ಪೆನ್ನಿಲ್ಲವೇನಮ್ಮಾ? ಹೌದು ಮಗಳೇ ಅಭಿವ್ಯಕ್ತಿಗೆ ಇಡೀ ಬದುಕಿದೆ" ಎಂದು ಸಾರ್ಥಕದ ಬರಹದ ಬದುಕಿನ ಬರಹಗಾರರಾಗುವ ಪರಿಯನ್ನು ತಿಳಿಸಿದ್ದಾರೆ.

ಮುಂದುವರೆದು 'ಬುದ್ಧ ಮತ್ತು ತಾಯಿ' ಕವಿತೆಯಲ್ಲಿ ' ಅರಮನೆಯೆಂಬ ಸೆರೆಮನೆಯಲ್ಲಿ ಬಂಧಿಯಾಗಿರುವ ನಾನು ನಿನ್ನಂತೆ ನಾನು ಬರಲು ಸಾಧ್ಯವೇ? ನೀನು ಬುದ್ಧ ಲೋಕಮಾನ್ಯ ನಾನೊಬ್ಬಳು ತಾಯಿಯಷ್ಟೇ " ಎಂದು ಬುದ್ಧನನ್ನು ಕೊಂಚ ವಿಮರ್ಶಿಸಿದಂತಿದ್ದರೂ ಪ್ರಶ್ನಿಸಿರುವ ರೀತಿ ಅರ್ಥಗರ್ಭಿತವಾಗಿದೆ. 'ದೇವರು ಎಂದರೇನು'? ಎಂಬ ಕವಿತೆಯಲ್ಲಿ ಗೆಳತಿಗೆ ಹೇಳುವ ಸಂಭಾಷಣಾ ಕವಿತೆಯಲ್ಲಿ ದೇವರು ಹೆಸರಿರದ ನಿರಾಕಾರ ಮೂರ್ತಿ ಹುಡುಕಿದರೂ ಸಿಗಲಾರದ ಉತ್ತರವೇ ನಿನ್ನ ಪ್ರಶ್ನೆಗೆ ಉತ್ತರವೆಂದು ತಿಳಿಸಿದ್ದಾರೆ, ' ಜೋಗತಿ' ಕವಿತೆಯಲ್ಲಿ " ಎಳೆ ಹುಡುಗಿಯ ದೇವರಿಗೆ ಬಿಟ್ಟಾರೆ ಕಿರುಬಾಲೆಯ ಬಾಳಿನಲಿ ಬೆಳಕಾಗಿ ಬಾರವ್ವ ಎಲ್ಲವ್ವ" ಎಂದು 'ಇಂಥವರು ಇನ್ನೂ ಇರುವರು' 

"ತೇತ್ರಾಯುಗದಲ್ಲಷ್ಟೇ ಅಲ್ಲ,
ಸೀತೆಯ ಅಗ್ನಿ ಪ್ರವೇಶಕ್ಕೆ
ಈಗಲೂ ಕಾಯುತ್ತಿದ್ದಾರೆ" ಎಂದು  ಮೂಡನಂಬಿಕೆಗಳ ವಿರುದ್ಧ ತಮ್ಮ ಬರಹದಲ್ಲಿ ಪ್ರತಿಭಟಿಸಿ ತಮ್ಮ ಬಂಡಾಯದ ಧ್ವನಿಯನ್ನು ಎತ್ತಿದ್ದಾರೆ. 'ಪಾಂಚಾಲಿಯ ಪ್ರಶ್ನೆಗಳು' ಕವಿತೆಯಲ್ಲಿ "ಭಾವ ಬಿಕ್ಕುವಾಗ ಒಲವು ಉಕ್ಕುವಾಗ ಯಾರ ಬಳಿ ಮೊದಲು ಹೇಳಲಿ"?  ಎಂದು 'ಭಾವಬಿತ್ತಿ' ಕವಿತೆಯಲ್ಲಿ 

"ಹಿಂತಿರುಗಿ ಬಿಡಿ ಭಾವಗಳೇ
ಹಿಂಗಾರು ಮುಂಗಾರುಗಳ
ಹಂಗೇಕೆ ನಿಮಗೆ
ಸದಾ ಮಳೆಯಾಗುತಿರಲಿ
ಭಾವಗೋಳವೆಂಬ ಜೀವಗೋಳದಲಿ" ಎಂದು 'ಹೆಣ್ತನ' ಕವಿತೆಯಲ್ಲಿ "ಪೊರೆ ಕಳಚಿ 

ಮತ್ತೆ ಹೊಸ ರೂಪ ಧರಿಸಿ
ಹೆಣ್ಣಾಗಬೇಕಿದೆ
ಹೆಣ್ತನವೆಂದರೆ
ಮುಟ್ಟು ಮೈ ಮಾಂಸಗಳ ಬಿಟ್ಟು
ಮತ್ತೆ ಮುಟ್ಟಬಲ್ಲ 
ರೂಪರೂಪಗಳನ್ನು ದಾಟಿದವಳು

ಅಲ್ಲವೇ" ಎಂದು ಪ್ರಶ್ನಿಸಿ 'ಬಾಳ ಸಂಜೆಯ ಪ್ರಶ್ನೆಗಳು', 'ಗೆಳತಿ', 'ಏಕೆ ಹೀಗೆ', 'ಶರಧಿ', 'ದಾಂಪತ್ಯ', 'ಅಕ್ಟೋಪಸ್ಸಿನಂತಾ ನೆನಪುಗಳು' ಕವಿತೆಯಲ್ಲಿ 'ಕಾಡದಿರಿ ನೆನಪುಗಳೆ' ಎಂದು, 'ಹೆಕ್ಕುತ್ತೇನೆ ನೆನಪುಗಳ' ಕವಿತೆಯಲ್ಲಿ ಬಾಲ್ಯ, ಯೌವ್ವನದಲ್ಲಿನ ರಸಮಯ ಕಾವ್ಯಾತ್ಮಕ ರಸಮಯ ಕ್ಷಣಗಳನ್ನು ನೆನಪಿಸಿ ಸ್ತ್ರೀ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೊರಹಾಕಿದ್ದಾರೆ ಈ ದೃಷ್ಟಿಯಲ್ಲಿ ಲೇಖಕರು ಸ್ತ್ರೀ ಸಂವೇದಿ ಧೋರಣೆಗಳುಳ್ಳ ಕವಯಿತ್ರಿಯಾಗಿಯೂ ಕಾಣುತ್ತಾರೆ.

'ಭೂಮಿಯ ಬೊಗಸೆ ತುಂಬಾ ಬಣ್ಣಗಳಾಟ' ಕವಿತೆಯಲ್ಲಿ ಬಾಳ ಬದುಕಿನ ಬಣ್ಣಗಳ ಬಗ್ಗೆ, 'ನದಿಗಳಿಗೂ ನೆನಪಿದೆ' ಕವಿತೆಯ ಮೂಲಕ ಸಿಂಧೂನಾಗರೀಕತೆಯಿಂದ 21 ನೇ ಶತಮಾನದವರೆಗೆ ನಾಗರೀಕತೆ ವಿಕಾಸವಾಗಿರುವ ಕುರುಹುಗಳಿವೆ ಎಂದು 'ಕಲ್ಲು ಬೆಂಚು ಮೌನವಾಗಿತ್ತು' ಕವಿತೆಯಲ್ಲಿ ಜಡತ್ವದ ಕಲ್ಲಿನಲ್ಲಿ ಜೀವಂತಿಕೆಯ ನೆನಪುಗಳುಳ್ಳ ಭಾವನೆಗಳನ್ನು ಬಿತ್ತಿದ್ದಾರೆ, 'ಧರೆ' ಕವಿತೆಯಲ್ಲಿ ಶಿವನ  ಜಡೆಯ ಮೇಲಿರುವ ಗಂಗೆ ಧರೆಗೆ ಬಂದ ಭಗೀರಥನ ಪ್ರಯತ್ನವನ್ನು ನೆನಪಿಸಿದ್ದಾರೆ, 'ಮಹಾಮಿಲನನ' ಕವಿತೆಯಲ್ಲಿ ಭೂರಮೆಗೆ ಆಷಾಡದ ಮಳೆ, ರವಿಮಿಲನ ಒಲವೆಂದರೆ ಭೂಮಿ ಗಗನಗಳು ಮಹಾಮಿಲನ ಎಂಬ ಅನಂತತೆಯ ಸಾರವನ್ನು 'ಮುತ್ತುಗ' ಕವಿತೆಯಲ್ಲಿ ಗುಲ್ ಮೊಹರ್ ಮರಗಳ ಮತ್ತು ಆಕಾಶದ ಮುತ್ತುಗದ ಪ್ರೀತಿ  'ಇಷ್ಟದೈವ' ಕವಿತೆಯಲ್ಲಿ ಪ್ರಕೃತಿಯಲ್ಲಿ ದೈವತ್ವ ಕಾಣುವುದು, 'ಅರ್ಬುದ' ಕವಿತೆಯಲ್ಲಿ ಕೃತಕ ಚಿಕಿತ್ಸೆಯ ಅಪಾಯವನ್ನು ಎಚ್ಚರಿಸಿ  ತಮ್ಮ ಪ್ರಕೃತಿಯ ಪ್ರೇಮವನ್ನು ಹೊರಹಾಕಿ ನಿಸರ್ಗಕವಿಯಾಗಿಯೂ ಲೇಖಕರು ಕಾಣುತ್ತಾರೆ.

 'ಸಖಾ', 'ಗೆರೆ', 'ದಾಂಪತ್ಯ', 'ನೀ ಹೀಗೆ ನೋಡಬೇಡ' ಕವಿತೆಗಳಲ್ಲಿ ಪ್ರೇಮ, ವಿರಹದ ಭಾವಗಳ ತುಂಬಿ ಪ್ರೇಮ ಕವಿಯಾಗಿಯೂ ಹೊರಹೊಮ್ಮಿದ್ದಾರೆ. 'ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ' ಕವಿತೆಯ ಮೂಲಕ 'ಕವಿತೆ ಬರೆಯುತ್ತಿದ್ದೇನೆ', 'ಕವಿತೆ ಕಟ್ಟು' ಕವಿತೆಯಲ್ಲಿ ಲೇಖಕರು ನನ್ನ ಆತ್ಮತೃಪ್ತಿಯ ಅಭಿವ್ಯಕ್ತಿಗಾಗಿ ನೆಮ್ಮದಿಯ ಸೂರಿಗಾಗಿ ನನ್ನ ಬದುಕಿನ ಅಸ್ಮಿತೆಗಾಗಿ ಬದುಕಿನ ದಾಖಲೆಯ ಕುರುಹಿಗಾಗಿ ನಾನು ಸಾಹಿತ್ಯ ಬರೆಯುತ್ತೇನೆ ಎಂಬ ಸ್ವಗತವನ್ನು ತಮಗೆ ತಾವೇ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ಕವಿತೆಗಳನ್ನು ಓದಿದಾಗ ಪ್ರಾಸಬದ್ದವಾದ ಕವಿತೆಯ ಜೊತೆಗೆ ಅಚ್ಚುಕಟ್ಟಾದ ಬದುಕ ಬಾಳುವ ಸಂದೇಶ ಈ ಕವನ ಸಂಕಲನದಲ್ಲಿದೆ ಕವಿತೆಯಲ್ಲಿ ಸಹಜತೆ ಇರುವುದರಿಂದ ಓದುಗರನ್ನು ರಸವತ್ತಾಗಿ ರುಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ " ಶಾಂತಿಯುತ ಬದುಕಿನ ಧೀರ್ಘಕಾಲಿಕ  ತಪಕ್ಕೆ ಸಂದ ಜಯದ ಆನಂದವೇ" ಶಾಂತ ಜಯಾನಂದ ರವರ ಈ ಕೃತಿ. ಇನ್ನಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮಿಂದ ಕೊಡಮಾಡಲ್ಪಡಲಿ ಎಂದು ಶುಭಾರೈಸುತ್ತಾ ನನ್ನ ಮಾತುಗಳಿಗೆ ವಿರಾಮವನ್ನಿಡುತ್ತೇನೆ.

ಶಾಂತಾ ಜಯಾನಂದ್ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..


 

MORE FEATURES

ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ

18-12-2024 ಬೆಂಗಳೂರು

"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...

ಕಾವ್ಯವನ್ನು ಕಣ್ಣಿನಿಂದ ಕಿವಿಗೆ ಹಸ್ತಾಂತರಿಸಿ ಹೃದಯಕ್ಕೆ ಮುಟ್ಟುವಂತೆ ಮಾಡಿದವರು ಕಂಬಾರರು

18-12-2024 ಬೆಂಗಳೂರು

“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...

ಅಖಂಡ ನಾಲ್ಕು ವರ್ಷಗಳ ಚಿಂತನ ಮಂಥನ ಪಾತ್ರಗಳ ಪರದಾಟ..

18-12-2024 ಬೆಂಗಳೂರು

“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...