'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಕಥೆಯಲ್ಲಿ ಪರಿಶ್ರಮದಿಂದ ಓದಿ ಸಾಧನೆಯ ಮೆಟ್ಟಿಲೇರಿದ ಸಾಗರನ ಕಥೆಯಿದೆ. ಆದರೆ ಅವನ ಮಗನೇ ತಂದೆ ಸತ್ತರೆ ತನಗೆ ನೌಕರಿಯಾದರೂ ಸಿಕ್ಕಿತೆಂಬ ಆಸೆಪಡುವ ನೀಚ. 1996 ರ ಸುತ್ತೋಲೆಯಂತೆ ತಂದೆ ಸತ್ತರೆ ಅನುಕಂಪದ ಆಧಾರದ ಮೇಲೆ ಮಗನಿಗೆ ಕೆಲಸ, ಅಪ್ಪ ತನ್ನ ಸಾವಿನಲ್ಲೂ ನಿರುದ್ಯೋಗದ ಕಾರಣನೀಡಿ ಮಗನ ಸುಖ ಬಯಸುತ್ತಾನೆ. ಹೀಗೆ ಹುಳಿ ಮೊಸರು ಕಥೆಯಲ್ಲಿ ಕೌಟುಂಬಿಕ ಕಲಹಗಳಿವೆ. ಹೆಣ್ಣೋಬ್ಬಳ ಬಂಡಾಯವಿದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪರಿತಪಿಸುವ ಪಾತ್ರವಿದೆ ಎನ್ನುತ್ತಾರೆ ಲೇಖಕ ಪ್ರಕಾಶ್ ಎನ್ ಜಿಂಗಾಡೆ. ಅವರು ಆನಂದ ಎಸ್ ಗೊಬ್ಬಿ ಅವರ ’ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...
ಕೃತಿ: ನಿರುದ್ಯೋಗಕ್ಕೆ ಹೆಣವಾದ ಅಪ್ಪ
ಲೇಖಕ: ಆನಂದ ಎಸ್. ಗೊಬ್ಬಿ
ಪುಟ ಸಂಖ್ಯೆ: 140
ಬೆಲೆ: 150
ಮುದ್ರಣ: 2020
ಪ್ರಕಾಶನ: ಮಾತೋಶ್ರೀ ಪ್ರಕಾಶನ
ಶ್ರೀ ಆನಂದ್ ಎಸ್ ಗೋಬಿಯವರು ಪ್ರೀತಿಯಿಂದ ಕಳುಹಿಸಿದ "ನಿರುದ್ಯೋಗಕ್ಕೆ ಹೆಣವಾದ ಅಪ್ಪ" ಕಥಾಸಂಕಲನ ಇಂದು ಓದಿ ಮುಗಿಸಿದೆ. ಅಪ್ಪಟ ಸ್ಥಳೀಯ ಭಾಷಾ ಸೊಗಡಿನ ಶೈಲಿಯಿಂದ ಕೂಡಿದ ಕಥಾನಕಗಳು ಉತ್ತರ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸಂಸ್ಕೃತಿಯೊಡನೆ ಓದುಗರನ್ನು ಬೆಸೆಯುತ್ತದೆ. ಇಲ್ಲಿ ಲೇಖಕರು ಸ್ಥಳೀಯ ಆಡುನಭಾಷೆಯಿಂದಲೇ ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ನನ್ನನ್ನು ನಾನು ಕಲ್ಬುರ್ಗಿಯ ಭಾಷೆಗೆ ಒಗ್ಗಿಸಿಕೊಂಡು ಅಲ್ಲಿನ ಸಂಸ್ಕೃತಿಗೆ ಹೊಂದಿಕೊಂಡು ಕೃತಿಯೆಡೆಗೆ ಹೋಗಿರುವೆನೋ ಎಂದು ಭಾಸವಾಯಿತು. ದೇವಿಪುರ ಗ್ರಾಮ ಪಂಚಾಯ್ತಿ ಕಥೆಯಲ್ಲಿ ದೇಶೀ ಸಂಸ್ಕೃತಿ ಮತ್ತು ಆಚರಣೆಗಳು ಮೇಳೈಸಿಕೊಂಡಿವೆ, ಜಾತ್ರೆ, ಪಂಚಾಯ್ತಿ, ಗೌಡನ ದರ್ಪ, ಹೊಲೆಯರ ಸ್ವಾಭಿಮಾನ, ಸ್ಕೂಲ್ ಮೇಷ್ಟ್ರ ಆದರ್ಶವಾದ ಎಲ್ಲವೂ ಕಥೆಯೊಂದಿಗೆ ಮಿಳಿತಗೊಂಡಿವೆ. 'ಆಲದ ಮರ' ಕಥೆಯಲ್ಲಿ ಎತ್ತು ಕಳೆದು ಹೋದ ಕಥೆ, ಹಳ್ಳಿ ಬೈಗುಳಗಳು ನಿಂಗಿಯ ಮಾತುಗಳು ಓದುಗರನ್ನು ಸೆಳೆಯುತ್ತವೆ. ಗಿರಿಕನ್ಯೆಯಲ್ಲೂ ಹಳ್ಳಿ ಬೈಗುಳಗಳು, ನಿಂಗಿಯ ಸಂಬಂಧಗಳು, ಕಮಲಮ್ಮ ಮಗಳಿಗೆ ಗಂಡು ಹುಡುಕುವಲ್ಲಿ ಪಟ್ಟ ತಾಪತ್ರಯಗಳು, ತಾಯಿಯಾಗಿ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಗಳು ಸೊಗಸಾಗಿ ಮೂಡಿವೆ. ಇಲ್ಲಿಯ ಘಟನೆಗಳು ಅದೇ ಭಾಷೆಯಲ್ಲಿ ಓದಿದರೆ ಮಾತ್ರ ಸಂಸ್ಕೃತಿ ಸೊಗಡಿನ ಘಾಟು ಓದುಗರಿಗೆ ನಶೆಯಂತೆ ಹತ್ತುತ್ತದೆ.
'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಕಥೆಯಲ್ಲಿ ಪರಿಶ್ರಮದಿಂದ ಓದಿ ಸಾಧನೆಯ ಮೆಟ್ಟಿಲೇರಿದ ಸಾಗರನ ಕಥೆಯಿದೆ. ಆದರೆ ಅವನ ಮಗನೇ ತಂದೆ ಸತ್ತರೆ ತನಗೆ ನೌಕರಿಯಾದರೂ ಸಿಕ್ಕಿತೆಂಬ ಆಸೆಪಡುವ ನೀಚ. 1996 ರ ಸುತ್ತೋಲೆಯಂತೆ ತಂದೆ ಸತ್ತರೆ ಅನುಕಂಪದ ಆಧಾರದ ಮೇಲೆ ಮಗನಿಗೆ ಕೆಲಸ, ಅಪ್ಪ ತನ್ನ ಸಾವಿನಲ್ಲೂ ನಿರುದ್ಯೋಗದ ಕಾರಣನೀಡಿ ಮಗನ ಸುಖ ಬಯಸುತ್ತಾನೆ. ಹೀಗೆ ಹುಳಿ ಮೊಸರು ಕಥೆಯಲ್ಲಿ ಕೌಟುಂಬಿಕ ಕಲಹಗಳಿವೆ. ಹೆಣ್ಣೋಬ್ಬಳ ಬಂಡಾಯವಿದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪರಿತಪಿಸುವ ಪಾತ್ರವಿದೆ.
ಒಂದು ಸಾವಿನ ಸುತ್ತ, ಕಥೆಯಲ್ಲಿ ಸಾವಿನ ಸೂತಕವಿದೆ, ಕುಟುಂಬದ ಸದಸ್ಯರ ದುರಾಸೆಯಿದೆ. ಶವದ ಮನೆಯಲ್ಲೂ ಜಗಳವಿದೆ. ಸತ್ತ ದುಃಖಕ್ಕಿಂತ ದುರಾಸೆಯನ್ನು ಲೇಖಕರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿತ್ವದ ಒಳಸಾರ, ನಿಜ ಬದುಕಿನ ಪ್ರೀತಿ ಪಯಣ ಕಥೆಗಳಲ್ಲೂ ಸಂದೇಶದ ಜೊತೆ ಹಳ್ಳಿಯ ಬದುಕು ಬೆಸೆದುಕೊಂಡಿದೆ. ನಮ್ಮ ಸುತ್ತಮುತ್ತಲಿನಲ್ಲಿ ನಡೆದ ಘಟನೆಗಳೇನೋ ಎಂಬಂತೆ ಗೋಚರಿಸುತ್ತವೆ, ಬಡತನ, ರೈತಾಪಿ ಬದುಕು, ಪಂಚಾಯ್ತಿ, ಜಾತ್ರೆ, ಮದುವೆಯ ವಿಷಯಗಳು, ಹಾದರ ಸಂಬಂದಗಳು, ಅನೈತಿಕತೆಗಳು ಅಲ್ಲಲ್ಲಿ ಹಸಿ ಬಿಸಿ ಬೈಗುಳದ ಪದಗಳಿಂದಲೇ ನೈಜತೆಯ ಷರಾ ಹಾಕಿದಂತಿದೆ. ಹಳ್ಳಿಯ ಜೀವನ ಕಂಡವರಿಗೆ ಕೃತಿ ಮತ್ತಷ್ಟು ಆಪ್ತತೆಯನ್ನು ತಂದು ಕೊಡುತ್ತವೆ.
ಲೇಖಕ ಆನಂದ್ ಗೋಬಿಯವರು ಅಪ್ಪಟ ಗ್ರಾಮ್ಯ ಭಾಷೆಯಲ್ಲಿಯೇ ಬೆಸೆಯುತ್ತಾ ಹೋಗುತ್ತಾರೆ. ಅದು ಕೃತಿಯ ಶಕ್ತಿಯೂ ಹೌದು ಅದೇ ಕೃತಿಯ ದೌರ್ಬಲ್ಯವೂ ಹೌದು, ಗ್ರಾಮ್ಯ ಭಾಷೆ ಕಲ್ಬುರ್ಗಿಯ ಸಂಸ್ಕೃತಿಯ ನೈಜ ಚಿತ್ರಣ ಕಟ್ಟಿಕೊಟ್ಟರೆ. ಅದೇ ಅತಿಯಾದ ಗ್ರಾಮ್ಯ ಪದಗಳೇ ಅಲ್ಲಿಯ ಭಾಷೆ ಅರಿವಿಲ್ಲದವನಿಗೆ ಕೃತಿಯನ್ನು ಪ್ರಯಾಸದಿಂದ ಓದುವ ಓದುವ ಪ್ರಮೇಯ ಬರಬಹುದು. ಆದರೆ ದೇಶೀ ಸೊಗಡಿನ ಭಾಷೆಯಲ್ಲಿ ಹಿಡಿತವಿರುವ ಆನಂದ್ ಗೋಬಿಯವರು ಆ ಭಾಷಾ ಶೈಲಿಯನ್ನು ಹೊರತು ಪಡಿಸಿ ಆಚೀಚಿನ ಭಾಷೆಯ ಶೈಲಿಯತ್ತ ಹೋಗಿಲ್ಲ, ಅದೇ ಕೃತಿಯ ಶಕ್ತಿ. ಬರೀ ಒಂದು ಪ್ರಾಂತ್ಯಕ್ಕೆ ಚೌಕಟ್ಟಿಗೆ ಸೀಮಿತಪಡಿಸಿದರೆ ತುಳು ಮತ್ತು ಕೊಂಕಣಿ ಭಾಷೆಯ ಸಿನಿಮಾಗಳು ಆಯಾ ಪ್ರಾಂತ್ಯದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗುವಂತೆಯೇ ಈ ಕೃತಿಯೂ ಎಂಬ ಭಾವ ಮೂಡಿತು.
ಇನ್ನು ಆನಂದ್ ಗೋಬಿಯರ ಕಥಾ ನಿರೂಪಣ ತಂತ್ರ ಮನ ತಟ್ಟುತ್ತದೆ. ಇಲ್ಲಿ ಕಥೆಯನ್ನು ಪ್ರಯಾಸವಾಗಿ ಬೆಳೆಸುವ ಗೋಜಿಗೆ ಹೋಗದೇ ಇರುವಂತೆಯೇ ವಾಸ್ತವವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಹಳ್ಳಿ ಭಾಷೆ ಮುದ ನೀಡುತ್ತದೆ. ಕಿವಿಯಾರೆ ಕೇಳುವ ಮುದ ಅನ್ಯ ಪ್ರಾಂತಿಗನಿಗೆ ಸಿಕ್ಕದು ಎಂಬುದನ್ನು ಬಿಟ್ಟರೆ ಆನಂದ್ ರವರ ಶೈಲಿಯನ್ನು ಶ್ಲಾಘಿಸಲೇ ಬೇಕು. ಗ್ರಾಮ್ಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಎಲ್ಲಾ ರೀತಿಯ ಹಳ್ಳಿಯ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಹೋಗುತ್ತಾರೆ. ಒಟ್ಟಾರೆ ಆನಂದ್ ಗೊಬ್ಬಿ ನೆಲದ ಸೊಗಡನ್ನು ಸಶಕ್ತವಾಗಿ ಕಟ್ಟಿದರೂ, ನೆಲದ ಭಾಷೆಯ ಅರಿವಿಲ್ಲದ ನನ್ನಂತವನು ಆನಂದ್ ರವರ ಹೊತ್ತಿಗೆಯಲ್ಲಿ ತನ್ನತನದ ಭಾಷೆಯನ್ನು ಹುಡುಕಿ ವಿಫಲನಾಗಬಹುದು, ಈ ವಿಷಯದಲ್ಲಿ ಆನಂದ್ ಸ್ವಲ್ಪವಾದರೂ ನಮ್ಮ ಪರವಾಗಿದ್ರೆ ಚೆಂದವಿರುತ್ತಿತ್ತು.
-
ಪ್ರಕಾಶ್ ಎನ್. ಜಿಂಗಾಡೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಆನಂದ ಎಸ್ ಗೊಬ್ಬಿ ಅವರ ಲೇಖಕ ಪರಿಚಯ ...
ನಿರುದ್ಯೋಗಕ್ಕೆ ಹೆಣವಾದ ಅಪ್ಪ ಕರತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
“ವ್ಯಾಪಾರದ ಉದ್ದೇಶದಿಂದ ಆರಂಭವಾದ ದಾರಿ ಹೇಗೆಲ್ಲ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಲೇಖಕ ವಸ...
“ಬದುಕ ಬೇಕು ಮುಂದೆ ಸಾಗಬೇಕು. ಬದುಕಿನ ಪ್ರೀತಿಯನ್ನು ಬೆಳೆಸಿಕೊಂಡು ಬದುಕಬೇಕು ಎಂಬುದನ್ನು ಲೇಖಕರು ಅತ್ಯಂತ ಸುಂ...
"ಸ್ತ್ರೀ ಅಸ್ಮಿತೆಯ ಸಂಕಥನವನ್ನು ಆಧುನಿಕ ಕನ್ನಡ ಮಹಿಳಾ ಕಥಾ ಸಾಹಿತ್ಯವನ್ನು ಅನುಲಕ್ಷಿಸಿ ಇಲ್ಲಿ ಕಟ್ಟಲಾಗಿದೆ. ಕಥ...
©2025 Book Brahma Private Limited.