ಅನೇಕ ಚಿಂತನೆಗೆ ಹಚ್ಚುವ ವಿಷಯಗಳು ಇಲ್ಲಿವೆ


“ವ್ಯಾಪಾರದ ಉದ್ದೇಶದಿಂದ ಆರಂಭವಾದ ದಾರಿ ಹೇಗೆಲ್ಲ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಲೇಖಕ ವಸುಧೇಂದ್ರ ಅವರು ರೇಷ್ಮೆ ಬಟ್ಟೆ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ,” ಎನ್ನುತ್ತಾರೆ ಸುಷ್ಮಿತಾ ನೇರಳಕಟ್ಟೆ. ಅವರು ವಸುಧೇಂದ್ರ ಅವರ “ರೇಷ್ಮೆ ಬಟ್ಟೆ” ಕೃತಿ ಕುರಿತು ಬರೆದ ವಿಮರ್ಶೆ.

ವ್ಯಾಪಾರದ ಉದ್ದೇಶದಿಂದ ಆರಂಭವಾದ ದಾರಿ ಹೇಗೆಲ್ಲ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಲೇಖಕ ವಸುಧೇಂದ್ರ ಅವರು ರೇಷ್ಮೆ ಬಟ್ಟೆ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ವಸುಧೇಂದ್ರರ ಬರಹಗಳ ಸಂಗಕ್ಕೆ ನಾನು ಬಿದ್ದಿದ್ದು ತೇಜೋ-ತುಂಗಭದ್ರಾ ಕಾದಂಬರಿಯ ಮೂಲಕ. ಗೆಳತಿಯೊಬ್ಬರು ಈ ಕಾದಂಬರಿ ಓದಲು ಆರಂಭಸಿದಾಗ ಅರ್ಥ ಆಗುತ್ತಿಲ್ಲ ಎಂದು ಹಲುಬಿದವರು, ಕಾದಂಬರಿ ಮುಗಿದಾಗ ಅದ್ಭುತ ಎಂದು ಉದ್ಘಾರ ತೆಗೆದಾಗ ಅಚ್ಚರಿಯಿಂದಲೇ ತೇಜೋ ತುಂಗಭದ್ರವನ್ನು ಕೈಗೆತ್ತಿಕೊಂಡಿದ್ದೆ. ತೇಜೋ ತುಂಗಭದ್ರ ನನ್ನ ಯಾವ ಪರಿ ಆವರಿಸಿತ್ತೆಂದರೇ ವಾರ ಕಳೆದರೂ ಅದರ ಗುಂಗಿನಿಂದ ಹೊರ ಬರಲಾಗಿರಲಿಲ್ಲ. (ಈಗಲೂ ಆ ಗುಂಗೂ ನನ್ನಲ್ಲಿ ಇದೆ). ಆನಂತರ ವಸುಧೇಂದ್ರರನ್ನು ಇನ್ನಷ್ಟು ಓದುವ ಹಂಬಲಕ್ಕೆ ಬಿದ್ದು ಅಲ್ಪಸ್ಪಲ್ಪ ಓದಿರುವೆ. ಅದಕ್ಕೆ ಇತ್ತೀಚಿನ ಸೇರ್ಪಡೆ ರೇಷ್ಮೆ ಬಟ್ಟೆ.

ತೇಜೋ ತುಂಗಭದ್ರ ಓದಿನ ಗುಂಗೂ ಈಗಲೂ ಇದಿದ್ದರಿಂದಲೋ ಏನೋ ಈ ಕಾದಂಬರಿಯನ್ನೂ ಅದರ ಮಡಿಲಲ್ಲೇ ಕುಳಿತು ಓದಲು ಆರಂಭಿಸಿದ್ದೆ. ಅದೇ ನಾನು ಮಾಡಿದ ತಪ್ಪು. ಆರಂಭದಲ್ಲಿ ರೇಷ್ಮೆ ಮೃದುತ್ವ ನನಗೆ ಹಿತ ನೀಡಲಿಲ್ಲ. ಖುಷಿಯ ವಿಚಾರ ಏನಂದರೇ ನನ್ನ ತಪ್ಪಿನ ಅರಿವು ನನಗೆ ಬಹಳ ಬೇಗ ಆಯ್ತು. ತಪ್ಪನ್ನು ತಿದ್ದಿಕೊಂಡ ನಾನು ವ್ಯಾಪಾರದ ದಾರಿಯಲ್ಲಿ ನಡೆಯಲು ಪ್ರಾರಂಭಸಿದೆ. ರೇಷ್ಮೆ ಬಟ್ಟೆ ನಿಧಾನಕ್ಕೆ ನನ್ನನ್ನು ಆವರಿಸಿಕೊಳ್ಳಲು ತೊಡಗಿತು.

ಎರಡನೇ ಶತಮಾನದ ಚಾರಿತ್ರಿಕ ಘಟನೆಗಳನ್ನು ಇಟ್ಟುಕೊಂಡು ಕಾಲ್ಪನಿಕತೆಯನ್ನು ಬೆರೆಸಿ ಬರೆದ ಕಾದಂಬರಿ ಇದಾಗಿದೆ. ಭಾರತ-ಚೀನಾ ದೇಶದ ನಡುವೆ ಹುಟ್ಟಿಕೊಂಡ ವ್ಯಾಪಾರದ ದಾರಿಯೊಂದು ಹೇಗೆ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರಿತ್ತು ಎನ್ನುವುದನ್ನು ಲೇಖಕರು ಕೊಂಡ್ಯೊಯ್ದ ರೀತಿ ಕುತೂಹಲ ಭರಿತವಾಗಿದೆ. ವಿವಿಧ ಭಾಗದ ಜನರು ತಮ್ಮ ತಮ್ಮ ಧರ್ಮಗಳನ್ನು ಅನುಸರಿಸುವ ಅವರದೇ ಆದ ಪರಿ, ಸರಕು ವಿನಿಮಯ ಪದ್ಧತಿಯಿಂದ ನಾಣ್ಯಗಳ ಚಲಾವಣೆಗೆ ಒಗ್ಗಿಕೊಳ್ಳಲು ಆರಂಭದಲ್ಲಿ ಹೆಣಗಾಡುವ ಜನರ ಮನಸ್ಥಿತಿ, ದೇಶಗಳ ವರ್ಣನೆ, ಹವಿನೇಮ-ಸಗನೇಮಿಯ ಬದುಕು ಬವಣೆ, ಮಿತ್ರವಂದಕ-ಮಧುಮಾಯಳ ಪ್ರೇಮ, ತ್ಯಾಗ, ಸವಣರ ಬದುಕು, ಲಿಹ್ವಾಳ ಅಸಹಾಯಕತೆ, ಕೊನೆಗೆ ತನ್ನದೇ ರೀತಿಯಲ್ಲಿ ಪ್ರತಿಕಾರ ತೀರಿಸಿಕೊಳ್ಳುವ ಬಗೆ, ದ್ರಾಕ್ಷಾ ರಸ, ರೇಷ್ಮೆ ಹುಳು, ಬುದ್ಧ ಇತ್ಯಾದಿಗಳ ಜತೆ ಅನೇಕ ಚಿಂತನೆಗೆ ಹಚ್ಚುವ ವಿಷಯಗಳು ಇಲ್ಲಿವೆ.

ಪಾಯಸದಲ್ಲಿ ಸಿಗುವ ದ್ರಾಕ್ಷಿ ಗೋಡಂಬಿಗಳಂತೆ ಕಾದಂಬರಿಯಲ್ಲಿ ಬಳಕೆಯಾಗಿರುವ ಉಪಮೆಗಳು ಓದಿನ ಖುಷಿ ಹೆಚ್ಚಿಸುತ್ತವೆ. ಸಂದರ್ಭೋಚಿತವಾಗಿ ಬರುವ ಅರ್ಥಗರ್ಭಿತ ನುಡಿಗಳು ಮನಸ್ಸನ್ನು ತಟ್ಟಿ, ಎಚ್ಚರಿಸಿ ಹೋಗುತ್ತವೆ. ಒಟ್ಟಾರೆಯಾಗಿ ರೇಷ್ಮೆ ಬಟ್ಟೆ ಕೆಲಕಡೆ ತಾಳ್ಮೆಯನ್ನು ಬೇಡುತ್ತದೆಯಾದರೂ, ತಾಳ್ಮೆಯ ಪ್ರತಿಫಲ ಸಕಾರಾತ್ಮಕವಾಗಿಯೇ ಇದೆ.

MORE FEATURES

ವಿಜ್ಞಾನ ತಂತ್ರಜ್ಞಾನಗಳು ಹಿರಿಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿವೆ

04-04-2025 ಬೆಂಗಳೂರು

“ಮತ್ತೆ ಕಾದಂಬರಿ ಬರೆಯಬೇಕು ಎಂದುಕೊಂಡ ತಕ್ಷಣವೇ ಗೌರಮ್ಮಳ ಬದುಕನ್ನು ಒಳಗೊಂಡಂತೆ ನನ್ನ ಹಳ್ಳಿಯ ಬದುಕಿನ ಸುಂದರ ಘ...

ವೇಶ್ಯೆ ಕೆಟ್ಟವಳಲ್ಲ ವೇಶ್ಯೆ ವೃತ್ತಿಯೂ ಕೆಟ್ಟದ್ದಲ್ಲ 

04-04-2025 ಬೆಂಗಳೂರು

“ವಿನಾಯಕರ ಈ ಬರೆಹ ವೇಶೈಯೊಬ್ಬಳ ಜೀವನದಲ್ಲಿ ಪುಸ್ತಕಗಳು ನಿರ್ವಹಿಸಿರುವ ಬಹಳಾ ದೊಡ್ಡ ಜವಾಬ್ದಾರಿಯ ಕುರಿತು ಮಾತನಾ...

ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿರುವ ಕೃತಿ

04-04-2025 ಬೆಂಗಳೂರು

"ಎಂದೂ ಹುಟ್ಟದ ಮಗುವಿಗೆ ಬರೆದ ಪತ್ರ ಇದು ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವ...