ಹೆಣ್ಣಿಗೆ ಭಿನ್ನ ದೇಹವಿರುವುದರಿಂದಲೇ ಅವಳ ಅನುಭವ ಲೋಕವೂ ಭಿನ್ನ ಮುನ್ನುಡಿ


"ಸ್ತ್ರೀ ಅಸ್ಮಿತೆಯ ಸಂಕಥನವನ್ನು ಆಧುನಿಕ ಕನ್ನಡ ಮಹಿಳಾ ಕಥಾ ಸಾಹಿತ್ಯವನ್ನು ಅನುಲಕ್ಷಿಸಿ ಇಲ್ಲಿ ಕಟ್ಟಲಾಗಿದೆ. ಕಥನವು ಸ್ತ್ರೀ ಬದುಕಿನ ಜೊತೆಗೆ ಹೆಣೆದುಕೊಂಡ ಸೃಜನಶೀಲ ಪ್ರಕಾರ. ವ್ಯವಸ್ಥೆಯು ನಿರ್ದೇಶಿಸಿದಂತೆ ಬದುಕುವ ಅಥವಾ ಹಾಗೆ ನಟಿಸುವ ಅವಳಿಗೆ ಕಥನವು ತನ್ನ ಒಳಜಗತ್ತನ್ನು ತೆರೆದಿಡುವ ಕಿಟಕಿ," ಎನ್ನುತ್ತಾರೆ ಗೀತಾ ವಸಂತ. ಅವರು ಚೇತನಾ ಹೆಗಡೆ ಅವರ ‘ಸ್ತ್ರೀ ಅಸ್ಮಿತೆ: ವಿಭಿನ್ನ ನೆಲೆಗಳು’ ಕೃತಿ ಕುರಿತು ಬರೆದ ಮುನ್ನುಡಿ.

ಅಸ್ಮಿತೆಯನ್ನರಸುತ್ತಾ...

ತನ್ನ ನಿಜಸ್ವರೂಪದ ಶೋಧವು ತತ್ವಜ್ಞಾನದ ಮೂಲ ಹುಡುಕಾಟ. ಅಸ್ಮಿತೆಯ ಪ್ರಶ್ನೆಯು ಇರವು ಮತ್ತು ಅರಿವಿನ ನಡುವಿನ ದೀರ್ಘ ಅನುಸಂಧಾನದಿಂದ ಉತ್ತರಿಸಬಲ್ಲದ್ದು. ‘ನಾನು ಇದ್ದೇನೆ’ ಎಂಬ ಭಾವವು ಹಲವು ಭೌತ ಹಾಗೂ ಅಭೌತ ಸಂಗತಿಗಳೊಂದಿಗೆ ತಳಕು ಹಾಕಿಕೊಂಡಿರುತ್ತದೆ. ದೇಹ, ಮನಸ್ಸು ಹಾಗೂ ಪ್ರಜ್ಞೆಗಳ ಬೇರೆ ಬೇರೆ ಆಯಾಮಗಳಲ್ಲಿ ನಮ್ಮ ಅಸ್ಮಿತೆಯು ರೂಪುಗೊಳ್ಳುತ್ತದೆ. ಪ್ರಕೃತಿಯ ಭಾಗವಾದ ಈ ಅಸ್ತಿತ್ವಕ್ಕೆ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವರೂಪಗಳು ಸೇರಿಕೊಳ್ಳುತ್ತ ನಾವು ಏನಾಗಿದ್ದೇವೆ ಎಂಬುದು ವಿಸ್ಮೃತಿಗೆ ಸರಿಯುತ್ತವೆ. ಅಂಥ ವಿಸ್ಮೃತಿಯ ತಳದಿಂದ ಮತ್ತೆ ನಮ್ಮನ್ನೆತ್ತಿಕೊಂಡು ಬಂದು ನಿಲ್ಲಿಸುವುದು ವಿಜ್ಞಾನ, ತತ್ವಜ್ಞಾನ, ಮನೋವಿಜ್ಞಾನ, ಪರಿಸರ ವಿಜ್ಞಾನ, ಜೈವಿಕ ವಿಜ್ಞಾನ ಹೀಗೆ ಎಲ್ಲ ಜ್ಞಾನಶಾಖೆಗಳಿಗೂ ಸವಾಲು. ಇನ್ನು ‘ಹೆಣ್ಣು – ಗಂಡು’ ಎಂಬ ಜೈವಿಕ ಭಿನ್ನ ಅಸ್ಮಿತೆಗಳು ಸಾಮಾಜೀಕರಣ ಹಾಗೂ ಸಾಂಸ್ಕೃತೀಕರಣದ ಮೂಸೆಯಲ್ಲಿ ರೂಪುಗೊಂಡ ಬಗೆಗಳನ್ನು ಶೋಧಿಸುವುದು ಮತ್ತೊಂದು ಸವಾಲು. ಚೇತನಾ ಇಂಥ ಸವಾಲನ್ನು ತನ್ನ ಅಧ್ಯಯನಕ್ಕೆ ಆಯ್ದುಕೊಳ್ಳುವ ಸಾಹಸ ಮಾಡಿದ್ದಾಳೆ. ಈ ಪಯಣದಲ್ಲಿ ಅವಳ ಮಾರ್ಗದರ್ಶಕಳಾಗಿ ನಾನೂ ನನ್ನೊಳಗಿನ ‘ಇರವು-ಅರಿವಿನ’ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ. ಇಂಥ ಪ್ರಕ್ರಿಯೆಗೆ ಸಾಮುದಾಯಿಕ ಹಾಗೂ ಶೈಕ್ಷಣಿಕ ಸ್ವರೂಪ ದೊರೆತಾಗ ಅದೊಂದು ಸಂಕಥನವಾಗಿ ಬೆಳೆಯುತ್ತದೆ. ಸ್ತ್ರೀ ಅಸ್ಮಿತೆಯ ಸಂಕಥನ ರೂಪುಗೊಂಡಿದ್ದು ಹೀಗೆ.

ಸ್ತ್ರೀ ಅಸ್ಮಿತೆಯ ಸಂಕಥನವನ್ನು ಆಧುನಿಕ ಕನ್ನಡ ಮಹಿಳಾ ಕಥಾ ಸಾಹಿತ್ಯವನ್ನು ಅನುಲಕ್ಷಿಸಿ ಇಲ್ಲಿ ಕಟ್ಟಲಾಗಿದೆ. ಕಥನವು ಸ್ತ್ರೀ ಬದುಕಿನ ಜೊತೆಗೆ ಹೆಣೆದುಕೊಂಡ ಸೃಜನಶೀಲ ಪ್ರಕಾರ. ವ್ಯವಸ್ಥೆಯು ನಿರ್ದೇಶಿಸಿದಂತೆ ಬದುಕುವ ಅಥವಾ ಹಾಗೆ ನಟಿಸುವ ಅವಳಿಗೆ ಕಥನವು ತನ್ನ ಒಳಜಗತ್ತನ್ನು ತೆರೆದಿಡುವ ಕಿಟಕಿ. ಅದು ತನ್ನ ಮೇಲೆ ಹೇರಿದ ಮೌಲ್ಯಗಳ ಒಜ್ಜೆಯನ್ನು ಇಳಿಸಿ, ಗರಿಗೆದರಿ ಹಾರಾಡುವಂತೆ ಮಾಡುವ ಮಂತ್ರದಂಡವೂ ಹೌದು. ಬೇಕಾದಾಗ ವಾಚಾಳಿಯಾಗುವ, ಬೇಡದಿರುವಾಗ ಮೌನದಲ್ಲಿ ಅಡಗುವ, ಸಂಕೇತಗಳ ಮೂಲಕ ಅಭಿವ್ಯಕ್ತಿಯಾಗಿಸುವ ಎಲ್ಲ ಸಾಧ್ಯತೆಗಳೂ ಈ ಕಥನ ಪ್ರಕಾರಕ್ಕೆ ಇದೆ. ಇದು ಮೌಖಿಕ ಹಾಗೂ ಲಿಖಿತ ಜಗತ್ತುಗಳಿಗೆರಡಕ್ಕೂ ಅನ್ವಯಿಸುವ ಮಾತು. ಚೇತನಾ ಇಲ್ಲಿ ಸ್ವಾತಂತ್ರೋತ್ಯ್ತರ ಕಾಲದ ಕಥಾಜಗತ್ತಿನೊಂದಿಗೆ ಸಂವಾದ ನಡೆಸಿದ್ದಾರೆ. ಆಧುನಿಕತೆಯು ಹಲವು ವಿಧದಲ್ಲಿ ಭಾರತದ ಸಂದರ್ಭವನ್ನು ಪ್ರವೇಶಿಸಿ ಮಹಿಳೆಯರ ಬದುಕಿನಲ್ಲಿ ಬಿಡುಗಡೆಯ ದಾರಿಯನ್ನು ತೆರೆದಂತೆಯೇ ಬಿಕ್ಕಟ್ಟುಗಳನ್ನೂ ಸೃಷ್ಟಿಸಿತು. ವ್ಯವಸ್ಥೆಯ ರಚನೆಯಲ್ಲಿಯೇ ಅಲ್ಲೋಲ ಕಲ್ಲೋಲವಾಗುವಂತಹ ಚಿಂತನೆಗಳು ಹುಟ್ಟಿದವು. ಹೆಣ್ಣಿನ ಬದುಕಿನ ಸಂಕಟಗಳ ಮೂಲ ವ್ಯವಸ್ಥೆಯ ರಚನೆಯಲ್ಲೇ ಇದೆ ಎಂಬ ತಿಳಿವುಗಳು ಕನ್ನಡ ಕಥನ ಸಾಹಿತ್ಯವನ್ನು ಪ್ರಭಾವಿಸಿದವು. ನಮ್ಮ ಸಂಸ್ಕೃತಿ , ಪುರಾಣ ಪ್ರತೀಕಗಳನ್ನು ನೋಡುವ ಕಣ್ಣೋಟ ಬದಲಾಯಿತು. ಇಂಥ ಸಂಕ್ರಮಣ ಕಾಲದ ಕಥನಗಳ ಮೂಲಕ ಅಸ್ಮಿತೆಯನ್ನು ಅರಿಯುವ ಸೂಕ್ಷ್ಮ ಸಂದರ್ಭಕ್ಕೆ ಚೇತನಾ ಅವರ ಬರವಣಿಗೆ ಸಾಕ್ಷಿಯಾಗಿದೆ.

ಹಾಗೆ ನೋಡಿದರೆ ಆಧುನಿಕ ಕನ್ನಡ ಕಥನ ಸಾಹಿತ್ಯವು ಆರಂಭಗೊಂಡದ್ದೇ ಮಹಿಳಾ ಪ್ರಶ್ನೆಗಳನ್ನು ಎತ್ತಿಕೊಳ್ಳುವ ಮೂಲಕ. ಕನ್ನಡದ ಮೊದಲ ಕಾದಂಬರಿ ಎನಿಸಿಕೊಂಡ ‘ಇಂದಿರಾಬಾಯಿ’ ಯಿಂದಲೇ ಇದನ್ನು ಕಾಣಬಹುದು. ಕೌಟುಂಬಿಕ ಹಾಗೂ ಸಾಮಾಜಿಕ ಚೌಕಟ್ಟಿನಲ್ಲಿ ಸಹಜವಾಗಿ ವಿಕಸನಗೊಳ್ಳದೇ ಮುರುಟುವ ಹೆಣ್ಣಿನ ಕಥನಗಳು ನಮ್ಮ ಸಾಂಪ್ರದಾಯಿಕ ದೃಷ್ಟಿಕೋನಗಳ ಹಿಂದಿರುವ ಕ್ರೌರ್ಯವನ್ನು ಬಿಚ್ಚಿಡುತ್ತಹೋದವು. ಮನುಷ್ಯ ಸಹಜ ಸ್ವಾತಂತ್ಯ್ರದಲ್ಲಿ ಗರಿಬಿಚ್ಚಿದ ಆಧುನಿಕ ಸಂವೇದನೆ ಹೊಸ ಹೆಣ್ಣಿನ ಉದಯಕ್ಕೆ ನಾಂದಿಯಾಯಿತು. ಕುವೆಂಪು ಅವರ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳುವಿನಲ್ಲೂ ಈ ಪ್ರಜ್ಞೆ ಸುಪ್ತವಾಗಿದೆ. ಹೆಣ್ಣಿನ ಪ್ರಾಕೃತಿಕ ಶಕ್ತಿಯ ದರ್ಶನ ಮಾಡಿಸುವಂತಿದೆ. ಅದೇ ಕಾರಂತರಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಸರಸಮ್ಮನ ಸಮಾಧಿಯ ಸುನಾಲಿನಿ “ಕೊಟ್ಟಿಗೆಯಲ್ಲಿ ಕಟ್ಟುವ ದನವೂ ತಾನೂ ಒಂದೆಯೇ?” ಎಂದು ಪ್ರಶ್ನಿಸುವದು ತನ್ನ ಅಸ್ಮಿತೆಯ ತೀವ್ರ ಎಚ್ಚರದಲ್ಲಿ. ನವ್ಯ ಕಥನಕಾರರು ಅಸ್ತಿತ್ವದ ಕುರಿತು ತೀವ್ರ ಪ್ರಶ್ನೆಗಳನ್ನೆತ್ತಿದ್ದರೂ ಅದು ಗಂಡುಕೇಂದ್ರದಿಂದಲೇ ಆಗಿತ್ತು. ಮುಂದೆ ಎಪ್ಪತ್ತರ ದಶಕದಾಚೆಗೆ ಹೆಣ್ಣಿನ ಅಸ್ತಿತ್ವದ ಪ್ರಶ್ನೆ ತೀವ್ರಗೊಂಡಿದ್ದು ಸ್ತ್ರೀವಾದಿ ದೃಷ್ಟಿಕೋನದ ಬೆಳವಣಿಗೆಯಿಂದಾಗಿ. ಚರಿತ್ರೆಯಲ್ಲಿ ಕಾಣೆಯಾದ ತಮ್ಮ ಹೆಜ್ಜೆಗುರುತುಗಳನ್ನು ಹುಡುಕಿಕೊಳ್ಳುತ್ತ ಹೊಸ ಚರಿತ್ರಯನ್ನೇ ನಿರ್ಮಿಸಬಲ್ಲ ಕಸುವು ಪಡೆಯುವವರೆಗೆ ಸ್ತ್ರೀ ವಾದದ ಅಧ್ಯಯನ ಶಿಸ್ತು ತನ್ನನ್ನು ಜಾಗತಿಕವಾಗಿ ವಿಸ್ತರಿಸಿಕೊಂಡಿದೆ. ಸ್ವಾತಂತ್ಯ್ರ, ಸಮಾನತೆ, ಸಮಾನ ಅವಕಾಶ, ಹಕ್ಕುಗಳ ಕುರಿತ ರಾಜಕೀಯ ಪ್ರಜ್ಞೆಯಿಂದ ಹೊರಟ ಈ ಹೋರಾಟ ಹೆಣ್ಣಿನ ಸಾಂಸ್ಕೃತಿಕ ಅನನ್ಯತೆ, ಜೈವಿಕ ವಿಶಿಷ್ಟತೆ ಹಾಗೂ ಹೆಣ್ಣು ಸೃಷ್ಟಿಸಬಹುದಾದ ಜ್ಞಾನದ ಅನನ್ಯತೆ,,, ಹೀಗೆ ತನ್ನ ಹೊರಚಾಚುಗಳನ್ನು ವಿಸ್ತರಿಸಿಕೊಂಡಿದೆ. ಚೇತನಾ ಅವರ ಗ್ರಹಿಕೆಗಳು ಸ್ತ್ರೀವಾದದ ಈ ಎಲ್ಲ ಸಮಗ್ರ ನೆಲೆಗಳಲ್ಲೂ ಹೊಕ್ಕು ಹೊರಟಿವೆ. ಅವರ ಅಧ್ಯಯನಕ್ಕೆ ಹಲವು ಆಯಾಮಗಳು ದೊರೆತಿವೆ. ಅಸ್ಮಿತೆಯ ಪ್ರಶ್ನೆಗಳು ಕಾಲದಿಂದ ಕಾಲಕ್ಕೆ ಹೊಸದಾಗುತ್ತ, ಹೆಣ್ಣು ತನ್ನನ್ನು ಬಹುವಿನ್ಯಾಸಗಳಲ್ಲಿ ಕಟ್ಟಿಕೊಂಡ ಕಸುವನ್ನು ತೋರಿಸುತ್ತ ಮುನ್ನಡೆದಿದೆ. ಅವರು ಎತ್ತುವ ಪ್ರಶ್ನೆಗಳು ಸ್ತ್ರೀಯ ಬಹುಸ್ವರೀಯತೆಗೆ ನಿದರ್ಶನಗಳಾಗಿವೆ.

ಹೆಣ್ಣಿನ ಅಸ್ಮಿತೆಯ ಪ್ರಶ್ನೆಗಳನ್ನು ಅವಳ ದೇಹ, ಲೈಂಗಿಕತೆಗಳ ಮೂಲಕ ಅರಿಯುವದು ಮೂಲಭೂತವಾದುದು. ಹೆಣ್ಣಿಗೆ ಭಿನ್ನ ದೇಹವಿರುವುದರಿಂದಲೇ ಅವಳ ಅನುಭವ ಲೋಕವೂ ಭಿನ್ನ. ಅನುಭವದ ಭಿನ್ನತೆಯೇ ಅರಿವಿನ ಅನನ್ಯತೆಯನ್ನೂ ಸೃಷ್ಟಿಸುತ್ತದೆ. ಅವಳ ದೇಹ ಪ್ರಜ್ಞೆಗಳು ಈ ಜಗತ್ತಿನೊಂದಿಗೆ ಮಿಡಿಯುವ ವಿನ್ಯಾಸವೇ ಭಿನ್ನ ಎಂಬ ಅರಿವು ಸೂಕ್ಷ್ಮ ತಿಳಿವಿಗೆ ಮಾತ್ರ ದಕ್ಕುವಂಥದು. ಆದರೆ ಅವಳ ದೇಹ ಮತ್ತು ಪ್ರಜ್ಞೆ ಅವಳದೇ ಆಗಿಲ್ಲ ಎಂಬುದೇ ಲಿಂಗರಾಜಕಾರಣ. ಅದು ಅಧಿಕಾರ ರಾಜಕಾರಣವೂ ಹೌದು. ಪಿತೃಪ್ರಧಾನತೆಗೆ ಸ್ತ್ರೀ ದೇಹವು ಸ್ವಂತದ ಹಕ್ಕಿನ ಸಂತಾನವನ್ನು ಪಡೆಯುವ ಸಾಧನ. ವಂಶಾಧಿಕಾರ, ರಾಜ್ಯಾಧಿಕಾರ, ಸಂಪತ್ತಿನ ಒಡೆತನ ಮುಂತಾದ ವಿಷಯಗಳು ಅದಕ್ಕೆ ಮುಖ್ಯ. ಸ್ವತಃ ಸ್ತ್ರೀಪುರುಷನ ಒಡವೆ, ಒಡೆತನದ ವಸ್ತು. ಆದ್ದರಿಂದಲೇ ಹೆಣ್ಣು ದೇಹಕ್ಕಂಟಿದ ಪಾವಿತ್ಯ್ರತೆಯ ಹಾಗೂ ಪಾತಿವ್ರತ್ಯದ ಪ್ರಶ್ನೆಗಳು ಇತಿಹಾಸದುದ್ದಕ್ಕೂ ಅವಳನ್ನು ಎಡಬಿಡದೇ ಕಾಡಿವೆ. ಅವಳನ್ನು ಹಿಂಸೆಯ ಮಡುವಿನಲ್ಲಿ ಅದ್ದಿ ತೆಗೆದಿವೆ. ಆದರೂ ಈ ರಕ್ತದಾಹ ಇನ್ನೂ ನಿಂತಿಲ್ಲ. ಇಂಥ ತೀವ್ರ ಪ್ರಶ್ನೆಗಳನ್ನು ಚೇತನಾ ತಮ್ಮ ಅಧ್ಯಯನದಲ್ಲಿ ಸಮಚಿತ್ತದಿಂದ ನಿರ್ವಹಿಸಿದ್ದಾರೆ.

ಇನ್ನೊಂದು ಬಹುಮುಖ್ಯ ಪ್ರಶ್ನೆ ಅವಳ ತಾಯ್ತನಕ್ಕೆ ಸಂಬಂಧಿಸಿದುದು. ತಾಯ್ತನ ಹಾಗೂ ಹೆಣ್ತನ ಎರಡೂ ಒಂದೇ ಎಂದು ಭಾವಿಸುವ ಪರಂಪರೆಯಲ್ಲಿ ತಾಯಿಯಾಗದವಳನ್ನು ಎಲ್ಲಿಟ್ಟು ನೋಡುವುದು? ಅಥವಾ ತನ್ನ ವ್ಯಕ್ತಿತ್ವದ ಪೂರ್ಣತೆಗೆ ತಾಯ್ತನವು ಅನಿವಾರ್ಯವಲ್ಲ ಎನ್ನುವ ಹೊಸಕಾಲದ ಹೆಣ್ಣನ್ನು ಹೇಗೆ ಅರಿಯುವುದು? ಇಂಥ ಪ್ರಶ್ನೆಗಳನ್ನು ಕಥನಗಳ ಮೂಲಕ ಚೇತನಾ ಸೂಕ್ಷ್ಮವಾಗಿ ಎದುರುಗೊಂಡಿದ್ದಾರೆ. ತಾಯ್ತನವೆಂಬುದು ಪೂರ್ತಿ ಜೈವಿಕವೇ ಅಥವಾ ಅದೊಂದು ಪೊರೆಯುವ ಜೀವಪೋಷಕ ಮನೋಭಾವವೆ? ಗಂಡಿನಲ್ಲೂ ಈ ತಿಳಿವು ಮೂಡುವುದು ಸಾಧ್ಯವಿಲ್ಲವೇ? ಎಂಬುದನ್ನೂ ಅವರು ಪರಿಶೀಲಿಸುತ್ತಾರೆ. ತಾಯ್ತನದ ಈ ಜೀವಪರ ಮನೋಭಾವವನ್ನು ಲೋಕಮೀಮಾಂಸೆಯಾಗಿ ಕಟ್ಟುವ ಸಾಧ್ಯತೆಯೊಂದು ಸ್ತ್ರೀವಾದದ ಸಂದರ್ಭದಲ್ಲಿ ಮೊಳೆತಿದೆ. ಲೋಕದ ಕೇಡುಗಳನ್ನು ನಿವಾರಿಸಬಲ್ಲ ಈ ಸಾಧ್ಯತೆಯನ್ನು ಚೇತನಾ ತಮ್ಮ ಸಂಕಥನದಲ್ಲಿ ಧನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಹೇರಲ್ಪಟ್ಟ ತಾಯ್ತನವು ಆಧುನಿಕ ಹೆಣ್ಣಿನ ಅಸ್ತಿತ್ವದ ಭಾಗವಾಗಿಲ್ಲ. ತಾಯ್ತನದ ಸುತ್ತ ಕಟ್ಟಿಕೊಂಡ ಮೌಲ್ಯಗಳ ಹುತ್ತವನ್ನು ಅವರ ಚಿತ್ತ ದಾಟಿ ಬಂದಿದೆ. ತಾಯ್ತನ ಸೃಷ್ಟಿಯ ಒಂದು ಅದ್ಭುತ ಸಾಧ್ಯತೆ ಎಂದು ಒಪ್ಪಿಕೊಳ್ಳುತ್ತಲೇ, ಅದು ಆಯ್ಕೆಯ ಸಂಗತಿಯಾಗಿರಬೇಕು ಹಾಗೂ ಅಧಿಕಾರದಿಂದ ಮುಕ್ತವಾಗಿರಬೇಕು ಎಂಬ ಸಹಜ ನಿಲುವೊಂದನ್ನು ಕಾಣಿಸುತ್ತಾರೆ. ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಬಾಡಿಗೆ ತಾಯ್ತನದಂಥ ಸಾಧ್ಯತೆಯು ತಾಯ್ತನದ ಕುರಿತ ಮಿಥ್ ಗಳನ್ನು ಒಡೆಯುವ ಸ್ಥಿತಿಯನ್ನೂ ಅವರು ಚರ್ಚಿಸುತ್ತಾರೆ. ಯಾವುದನ್ನೂ ಭಾವುಕವಾಗಿ ಗ್ರಹಿಸದೇ ವಸ್ತುಸ್ಥಿತಿಯ ಸಂಕೀರ್ಣತೆಯಲ್ಲಿ ಅರಿಯುವ ಅಧ್ಯಯನಪೂರ್ಣತೆ ಚೇತನಾ ಅವರ ಬರಹದ ಬಗೆಗೆ ಆಸ್ಥೆಯನ್ನು ಮೂಡಿಸುತ್ತದೆ.

ಸ್ತ್ರೀ ಎಂಬ ಪರಿಕಲ್ಪನೆಯು ಏಕರೂಪದ, ಏಕಸ್ವರದ ಗ್ರಹಿಕೆಯಲ್ಲವೆಂದು ಚೇತನಾ ಅವರ ಗ್ರಹಿಕೆಯಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಕತೆಗಳನ್ನು ವಿಷ್ಲೇಷಣೆಗೆ ಆಯ್ದುಕೊಳ್ಳುವಾಗ ಅನುಸರಿಸಲಾದ ಪ್ರಾತಿನಿಧಿಕತೆ ಸಮರ್ಥನೀಯವಾಗಿದೆ. ಅಸ್ತಿತ್ವವನ್ನು ಕಂಡುಕೊಳ್ಳುವ ಹಾಗೂ ಕಟ್ಟಿಕೊಳ್ಳುವ ಸಂಕೀರ್ಣ ಬೌದ್ಧಿಕ ಹಾಗೂ ಮಾನಸಿಕ ಅವಸ್ಥೆಗಳನ್ನು ಇಲ್ಲಿ ಮುಖಾಮುಖಿಯಾಗಿಸಲಾಗಿದೆ. ಬೇರೆ ಬೇರೆ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯ, ಭಿನ್ನ ಕಾಲ - ದೇಶಗಳ ಹಿನ್ನೆಲೆಯ ಸ್ತ್ರೀಯರ ಕಥನಗಳು ಸ್ತ್ರೀತ್ವದ ವಿರಾಟ್ ಸ್ವರೂಪವನ್ನು ದರ್ಶನ ಮಾಡಿಸಲು ಶಕ್ತವಾಗಿದೆ. ತೌಲನಿಕ ಅಧ್ಯಯನವು ಬಹುನೆಲೆಗಳಲ್ಲಿ ಹೆಣ್ಣುಬದುಕು ವಿಸ್ತಾರಗೊಳ್ಳುತ್ತ ನಡೆದ ಅನಂತ ದಾರಿಗಳನ್ನು ಉತ್ಸಾಹದಿಂದ ತೆರೆಯುತ್ತ ಹೋಗಿದೆ.

ಸ್ತ್ರೀತ್ವವನ್ನು ಅದರಿಂದ ಹೊಮ್ಮುವ ಅರಿವನ್ನು ತಾತ್ವಿಕವಾಗಿ ನಿರ್ವಚಿಸುವುದು ಒಂದು ಬಗೆಯಾದರೆ, ಪ್ರಸ್ತುತ ಬದುಕನ್ನು ಕಾಣುವ – ಕಟ್ಟುವ ಕ್ರಮವೊಂದನ್ನು ಅದು ನೀಡುವುದೇ? ಎಂದು ಅನ್ವಯಕ್ರಮದಿಂದ ನೋಡುವುದು ಇನ್ನೊಂದು ಬಗೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀಯ ಅಸ್ಮಿತೆಯು ಎದುರಿಸುತ್ತಿರುವ ಹೊಸ ಸವಾಲುಗಳನ್ನು ಚೇತನಾ ಗುರುತಿಸಿದ್ದಾರೆ. ತನ್ನ ಅಸ್ಮಿತೆಯನ್ನು ಅರಿತ ಪ್ರಖರ ಪ್ರಖರ ತಿಳಿವಿನಲ್ಲಿ ಮುನ್ನಡೆಯುತ್ತಿರುವ ಪ್ರಬಲ ಹೆಣ್ಣಿನ ಉದಯವಾಗುತ್ತಿರುವ ಈ ಕಾಲದಲ್ಲೂ ಇರುವ ಹಾಗೂ ಬದಲಾದ ಸ್ವರೂಪದ ಸವಾಲುಗಳ ಕುರಿತು ಇಲ್ಲಿ ಚರ್ಚೆಯಿದೆ. ಮಹಿಳೆಯರು ತಮ್ಮನ್ನು ಸ್ವಯಂ ಸಂಘಟಿಸಿಕೊಳ್ಳಲು ತಮ್ಮ ಅಸ್ಮಿತೆಯ ಮೂಲ ಸ್ವರೂಪ ಹಾಗೂ ಅದರ ಶಕ್ತಿ - ಸಾಧ್ಯತೆಗಳನ್ನು ಅರಿಯುವುದು ಮೊದಲ ಹೆಜ್ಜೆ. ಇದು ಸಾಮಾಜಿಕ ಚಲನೆಗೂ ಪ್ರೇರಣೆಯಾಗುವ ಸಂಗತಿ. ಹೇರಿದ ಕವಚವನ್ನು ನಿಧಾನವಾಗಿ ಕಳಚಿಕೊಳ್ಳುತ್ತ ಅಸೀಮ ಆಗಸದೆಡೆ ನೋಟನೆಟ್ಟ ಸ್ತ್ರೀ ಸಂಕಥನವಿದು. ‘ರೂಪಿಸಲ್ಪಟ್ಟ’ ಹೆಣ್ಣಿನ ಅಸಹಜತೆಯನ್ನು ತೊರೆದು ನಿಜದ ಸತ್ವದಲ್ಲಿ ಬೇರೂರಿ ಬೆಳೆಯುವ ಹಂಬಲಗಳ ಕಥನ. ಜಗತ್ತಿನ ಎಲ್ಲ ದೇಶಗಳ, ಎಲ್ಲ ಭಾಷೆ – ಜನಾಂಗಗಳ ಹೆಣ್ತನದ ಬಿಂದುಗಳಲ್ಲಿ ಸಂಧಿಸುತ್ತ ಈ ಅರಿವು ವಿಶ್ವಾತ್ಮಕವಾಗುತ್ತದೆ. ಇಂಥ ಅರಿವಿನ ಅಮೂರ್ತ ನೆಲೆಗಳನ್ನು ತಾತ್ವಿಕ ಪರಿಕಲ್ಪನೆಯಲ್ಲಿ ಖಚಿತಗೊಳಿಸುವ ಬೌದ್ಧಿಕ ಪ್ರಯತ್ನವನ್ನು ನಡೆಸಿರುವ ಚೇತನಾ ಅಭಿನಂದನಾರ್ಹರು. ಇದು ಇಲ್ಲಿಗೆ ಕೊನೆಯಾದ ಸಂಕಥನವಲ್ಲ. ಬದುಕು ಸದಾ ವಿಕಾಸಮುಖಿ, ಚಲನಶೀಲ. ಸ್ತ್ರೀ ಬದುಕಿನ ಬದಲಾಗುತ್ತಿರುವ ವಿನ್ಯಾಸಗಳನ್ನು ಸದಾ ಶೋಧಿಸುವುದು ಸೃಜನಶೀಲ ಕುತೂಹಲ. ಇಷ್ಟು ಬರೆಯಲು ಪ್ರೇರೇಪಿಸಿದ ಚೇತನಾಳಿಗೆ ನನ್ನ ಪ್ರೀತಿ. ಅವಳ ಬೌದ್ಧಿಕ ಬದುಕು ವಿಕಾಸಗೊಳ್ಳುತ್ತಿರಲಿ.

 

 

 

 

 

 

 

MORE FEATURES

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...

11-04-2025 ಬೆಂಗಳೂರು

"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವ...

ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ

11-04-2025 ಬೆಂಗಳೂರು

"‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ...

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...