ಭಾವವೇ ಕಾವ್ಯಕ್ಕೆ ಜೀವಾಳವಾಗಬೇಕಿಲ್ಲ; ವಿಚಾರವೂ ಆಗಬಹುದು. ಸಲಹೆ, ಉಪದೇಶ, ಆಶಯಗಳು ಪ್ರಮುಖ ಕಾವ್ಯಾಂಶವಾಗಿ ಪ್ರಭಾವಿಸಿದರೆ ಕಾವ್ಯದ ಔನ್ನತ್ಯವನ್ನು ಕಾಣಬಹುದು ಎಂಬುದಕ್ಕೆ ಎ.ಟಿ. ಆನಂದ (ಜಾನಕಿತನಯಾನಂದ) ಅವರ ‘ಅನರ್ಘ್ಯ’ ಸಂಕಲನದ ಕವಿತೆಗಳಿವೆ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿದ ಬರಹವಿದು.
ಪ್ರಾಸ, ತಂತ್ರ, ಶೈಲಿ, ಲಯ, ಸ್ವರ ಯಾವುದನ್ನೂ ಗಂಭೀರವಾಗಿ ಸ್ವೀಕರಿಸದೇ, ಕೇವಲ ವಸ್ತು ಪ್ರಧಾನವಾಗಿ ಧ್ವನಿಸುವ ‘ಅನರ್ಘ್ಯ’ ಸಂಕಲನದ ಒಟ್ಟು 123 ಕವಿತೆಗಳು, ತಮ್ಮ ಸಲಹೆ, ಸೂಚನೆ, ಉಪದೇಶದಂತಹ ವಿಚಾರ-ಆಶಯಗಳಿಂದ ವಿಶೇಷವೆನಿಸುತ್ತವೆ. ಸಾಮಾಜಿಕ ನ್ಯಾಯರಹಿತ ವಿದ್ಯಮಾನಗಳನ್ನು ವಿಡಂಬಿಸುತ್ತವೆ. ಧಾರ್ಮಿಕತೆಯ ಸ್ಪರ್ಶ ನೀಡುತ್ತವೆಯಾದರೂ ಮೌಢ್ಯವನ್ನು ತಿರಸ್ಕರಿಸುತ್ತವೆ.ಬದುಕಿನ ನಶ್ಚರತೆ, ಅಧ್ಯಾತ್ಮಿಕ ಕಾಣ್ಕೆಯತ್ತ ಒಲವು ಕವಿತೆಗಳ ಪ್ರಮುಖ ಅಂಶಗಳಾಗಿವೆ. ಆಶಾವಾದವೂ ಜೀವನ ಚಾಲನಾ ಶಕ್ತಿಯಾಗಬೇಕು ಎಂದು ಕವಿತೆಗಳು ಆಶಿಸುತ್ತವೆ.
ಅಂಧಕಾರದ ಅತಿಥಿಯನು/ಸತ್ಕರಿಸದಿರು ಮನವೆ/ ಅನ್ಯಾಯ ಅಧರ್ಮವನು/ ಆದರಿಸದಿರು ಅದುವೆ’ (ಕವಿತೆ: ಅಂಧಕಾರದ ಅತಿಥಿಯನು) ಈ ಸಾಲುಗಳು ನೈತಿಕತೆಯನ್ನು ಜಾಗೃತಗೊಳಿಸುವ ಹಾಗೂ ಕವಿಯ ಸಾಮಾಜಿಕ ಹೊಣೆಯನ್ನು ಪ್ರತಿನಿಧಿಸುತ್ತವೆ. ಹಿರಿಯರನ್ನು ಗೌರವಿಸುವ ಸಂಸ್ಕೃತಿಯೇ ಅವಹೇಳನಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ‘ಅಜ್ಜಿ ಬಾಯಿಂದ ಹೊರಡುವ ಮಾತುಗಳು ಜೀವನ ಸಾರವನ್ನು ಬೋಧಿಸುತ್ತವೆ’ (ಕವಿತೆ: ಅಜ್ಜಿ) ಎಂದು ಯುವಪೀಳಿಗೆಯ ಗಮನ ಸೆಳೆಯುತ್ತಾರೆ.‘ಒಂದೆರಡು ದಿನ ಬದುಕಿದರೂ ನಿನ್ನದು ಸಾರ್ಥಕ ಜೀವನ ಪರಿ’ (ಕವಿತೆ: ಬಾ ಸುಮ ಬಾ, ನೀ ಅರಳಿ ಬಾ) ಎಂದು ಬದುಕುವ ರೀತಿಗೆ ಹೂವಿನಂತಹ ಉತ್ತಮ ಉಪಮೆ ನೀಡಿ, ಕವನದ ಅರ್ಥವಂತಿಕೆ ಹೆಚ್ಚಿಸುತ್ತಾರೆ. ದೇವರ ಮಕ್ಕಳು ನಾವೆಲ್ಲ/ ಆ ದೇವರೇ ಇಲ್ಲಾ ಎನ್ನುವುದು ತರವಲ್ಲ (ಕವಿತೆ: ದೇವರ ಮಕ್ಕಳು ನಾವೆಲ್ಲ) ಎಂದು ಸಮಾಧಾನದಿಂದ ಹೇಳುವ ಪರಿಯು ಕವಿತೆಯ ಸೊಬಗಾಗಿದೆ.
‘ಸುಡು ಎನ್ನ ಸುಡುಜ್ವಾಲೆಯಾಗಿ / ನನ್ನೆಲ್ಲ ಕಲ್ಮಶ ಕರಗಿ ಶುಭ್ರ ವಿಭೂತಿಯಾಗಿ’ (ಕವಿತೆ: ಸುಡು ಎನ್ನ ಸುಡುಜ್ವಾಲೆಯಾಗಿ) ಎನ್ನುವ ಕವಿಯ ಸಮರ್ಪಣಾ ಭಾವದ ಪರಾಕಾಷ್ಟೆಯು ಪ್ರಾರ್ಥನೆಯ ಸ್ವರೂಪ ಹೇಗಿರಬೇಕು ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಪ್ರಾರ್ಥನೆಯಲ್ಲಿ ಸ್ವಾರ್ಥವಿರದೇ, ಮನಪರಿಶುದ್ಧವಾಗಿಸಿ ಸಮಾಜ ಸೇವೆಯಲ್ಲಿ ತೊಡಗಿಸು ಎಂಬ ನಿಷ್ಕಳಂಕ-ಪ್ರಾಂಜಲ ಮನಸ್ಸಿರಬೇಕು ಎಂಬುದನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಆಧುನಿಕತೆಯ ಒತ್ತಡದಿಂದ ತತ್ತರಿಸಿದ ಬದುಕು ‘ಹುಟ್ಟಿದರೂ ಹೊರೆ, ಸತ್ತರೂ ಹೊರೆ/ ನಮಗಿಂತ ಪ್ರಾಣಿ-ಪಕ್ಷಿ ಸಂಕುಲಗಳೇ ಮೇಲು’ (ಕವಿತೆ: ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇವೆ) ಮನುಷ್ಯನ ಅಸಹಾಯಕತೆಯು ಕವನದ ಅರ್ಥಪೂರ್ಣ ಧ್ವನಿ. ಸಾವು ಇದ್ದೇ ಇದೆ ಎಂದು ಪ್ರತಿಕ್ಷಣ ಹೆದರಿ/ ಕೂರುವ ಅವಶ್ಯಕತೆ ಇಲ್ಲ/ ಅದರ ಕಲ್ಪನೆಯಿಟ್ಟು ಭಯ-ಭಕ್ತಿಯಲ್ಲಿ ನಡೆದರೆ ಸಾಕೆನಿಸುತ್ತದೆ (ಕವಿತೆ: ಯಾರಿಗಿಲ್ಲ ಹೇಳು?) ಸಾವನ್ನು ಸಲೀಸಾಗಿ ಎದುರಿಸುವ ಸೂತ್ರವೊಂದನ್ನು ನೀಡುವ ಈ ಸಾಲುಗಳು, ಕಾವ್ಯದ ಜುಳು-ಜುಳು ನಿನಾದ ಇರದಿದ್ದರೂ ನೀತಿಬೋಧಕವಾಗಿ ತಟ್ಟುವ ರೀತಿಯನ್ನು ತಳ್ಳಿ ಹಾಕುವಂತಿಲ್ಲ. ‘ಎಲ್ಲೋ ಇಹುದು ಸಾಗರದ ತೀರ/ ಆದರೂ ನದಿ/ ಹರಿಯುತ್ತಲಿರುವುದು/ ಸೇರಲು ನಿರಂತರ/ ಹತ್ತಿರವಾಗಿಸಲು ಅಂತರ (ಕವಿತೆ: ನಂಬಿಕೆಗೆ ಬಲ) ಎಂದು ಉಸುರುವ ಕವಿತೆಯು ಬದುಕಿನಲ್ಲಿ ನಂಬಿಕೆಯ ಮಹತ್ವ ತಿಳಿಸುತ್ತದೆ. ಇಂತಹ ನಂಬಿಕೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ, ದೇವನಲಿ ಲೀನಗೊಳಿಸುವ ಮೋಕ್ಷದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ. ದೇವರ ವಿರಾಟ ಸ್ವರೂಪವನ್ನು ಸರಳ ಹಾಗೂ ಕಡಿಮೆ ಶಬ್ದಗಳಲ್ಲಿ ‘ಅವನು (ದೇವರು) ಅಗಣಿತ/ ನಮ್ಮ ಗಣಿತ-ಕಾಗುಣಿತಗಳೆಲ್ಲ ಮಿತ (ಕವಿತೆ: ದೇವರು) ಹೀಗೆ ವ್ಯಾಖ್ಯಾನಿಸುತ್ತಾರೆ. ಬೆಳಕಿರುವುದೆಲ್ಲ ಸತ್ಯ, ಕತ್ತಲಿರುವುದೆಲ್ಲ ಅಸತ್ಯವೆನ್ನುವುದು ಕೇವಲ ತಪ್ಪು ಅಭಿಪ್ರಾಯ (ಕವಿತೆ: ನಗ್ನ ಸತ್ಯ) ಹೇಳುತ್ತಾ ಓದುಗರನ್ನು ಹೊಸ ಚಿಂತನೆಯತ್ತ ಸೆಳೆಯುತ್ತವೆ. ಹಗಲು-ರಾತ್ರಿ ಎಂಬುದು ಮನುಷ್ಯನ ಸೀಮಿತ ಕಲ್ಪನೆ. ಸೃಷ್ಟಿಯ ಚಲನೆಯಲ್ಲಿ ಎರಡೂ ಅಗತ್ಯ. ಎರಡು ಗಾಲಿಗಳಿಲ್ಲದ ಬಂಡಿಯನ್ನು ಕಲ್ಪಿಸಿಕೊಳ್ಳಲಾಗದು ಎಂಬ ವಿಸ್ತಾರ ದೃಷ್ಟಿಕೋನದ ಸ್ವರೂಪವನ್ನು ತೋರುವಲ್ಲಿ ಯಶಸ್ವಿಯಾಗಿದೆ.
ಭಾವವೇ ಕವಿತೆಯ ಜೀವಾಳವಾಗಬೇಕಿಲ್ಲ. ವಿಚಾರವೂ ಕವಿತೆಯೇ ಆಗಿದೆ. ಗುಣಲಕ್ಷಣಗಳು ಕಾವ್ಯವನ್ನು ವ್ಯಾಖ್ಯಾನಿಸುತ್ತವೆ ಎಂದರೂ ಚಿಂತನೆ ಪ್ರಧಾನ ವಸ್ತುವೂ ಕಾವ್ಯದ ಗುಣಲಕ್ಷಣಗಳನ್ನು ಒಳಗೊಳ್ಳುವ ಸಾಮರ್ಥ್ಯ ಪಡೆದಿರುತ್ತದೆ ಎಂಬಂತೆ ‘ಅನರ್ಘ್ಯ’ ಕವಿತೆಗಳು ತಮ್ಮದೇ ಆದ ಅಭಿವ್ಯಕ್ತಿ ಕ್ರಮದಿಂದ ಓದುಗರ ಗಮನ ಸೆಳೆಯುತ್ತವೆ.
(ಪುಟ:188, ಬೆಲೆ: 120 ರೂ, ಶ್ರೇಯಸ್ ಬುಕ್ ಪಬ್ಲಿಕೇಷನ್ಸ್, ಬೆಂಗಳೂರು, 2021)
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.