‘ಬುದ್ಧಧರ್ಮ ಈ ನೆಲದ ತಿಳುವಳಿಕೆ’: ಎಸ್. ನಟರಾಜ ಬೂದಾಳು


“ಬುದ್ಧ ಮತ್ತು ಬೌದ್ಧ ತಾತ್ವಿಕತೆಯನ್ನು ಪರಿಚಯಿಸುವ ಈ ಪುಸ್ತಕವನ್ನು ಓದುವುದರಿಂದ ಏನು ಉಪಯೋಗ? ಈ ಪ್ರಶ್ನೆಯನ್ನು ಇದಿರಾಗುವುದು ತಪ್ಪೇನಲ್ಲ. ಬೌದ್ಧ ದರ್ಶನಕ್ಕೆ ಒಂದು ವಿಶೇಷ ಗುಣವಿದೆ. ಅದು ಇತರ ಧರ್ಮಗಳಂತೆ ಆಯಾ ಧರ್ಮೀಯರಿಗೆ ಮಾತ್ರವಲ್ಲ. ವಿಜ್ಞಾನದಂತೆ ಜಗತ್ತಿನ ಎಲ್ಲರಿಗೂ ಸಲ್ಲುವಂತಹದು” ಎನ್ನುತ್ತಾರೆ ಲೇಖಕ ಎಸ್. ನಟರಾಜ ಬೂದಾಳು. ಅವರು ತಮ್ಮ ‘ಬುದ್ಧ’ ಕೃತಿಗೆ ಬರೆದ ಲೇಖಕನ ನುಡಿ ನಿಮ್ಮ ಓದಿಗಾಗಿ...

ಕನ್ನಡದಲ್ಲಿ ಬುದ್ಧನನ್ನು ಕುರಿತ ವಾಚಿಕೆಯೊಂದನ್ನು ಸಿದ್ಧಪಡಿಸಬೇಕೆಂಬ ಬಹಳ ದಿನಗಳ ಹಂಬಲ ಇದೀಗ ಕೈಗೂಡಿದೆ. ಇದು ಬುದ್ಧನಡೆಯ ಏಳನೆಯ ಪುಸ್ತಕವಾಗಿ ಆ ಸರಣಿಗೆ ಸೇರ್ಪಡೆಯಾಗಿದೆ. ಬುದ್ಧನನ್ನು ಮತ್ತು ಬೌದ್ಧ ತಾತ್ವಿಕತೆಯನ್ನು ಪರಿಚಯಿಸಿಕೊಳ್ಳಬೇಕು ಎಂದು ಬಯಸುವವರಿಗೆ ಇದೊಂದು ಕೈಪಿಡಿ ಎಂದು ಮಾತ್ರ ಹೇಳಬಲ್ಲೆ. ಹೆಚ್ಚಿನ ಅಧ್ಯಯನವನ್ನು ಬಯಸುವವರಿಗೆ ಕೆಲವು ಪುಸ್ತಕಗಳನ್ನು ಅಲಾಯಿದ ಸೂಚಿಸಿದ್ದೇನೆ. ಬುದ್ಧ ಸರಣಿಯ ಕಿರುಪುಸ್ತಕಗಳಿಗೆ ಕನ್ನಡದ ಸಮೂಹ ತೋರಿದ ಆದರ ಪ್ರೀತಿಗಳು ನನಗೆ ಸಂತೋಷ ತಂದಿವೆ. ಇದರ ಹಿಂದೆ ಅನೇಕರ ದುಡಿಮೆ ಇದೆ. ನನ್ನನ್ನು ಈ ದಾರಿಗೆ ಹಚ್ಚಿದವರು ಗುರುಗಳಾದ ಕೆ. ಎಂ ಶಂಕರಪ್ಪನವರು. ಇನ್ನು ಅನೇಕರು ಮುಂದಕ್ಕೆ ಹೋಗುವ ಸರಿದಾರಿ ತೋರಿದ್ದಾರೆ. ಕಾಲ ಕಾಲಕ್ಕೆ ಒದಗಿಬಂದ ನೆರವನ್ನು ನೆನಪಿಸಿಕೊಂಡರೆ ವಿಸ್ಮಯವೆನ್ನಿಸುತ್ತದೆ. ಗುರುಮಾರ್ಗದಲ್ಲಿ ಈ ವಿಸ್ಮಯವೂ ಸಹಜನಡೆಯೇ ಆಗಿದೆ. ಈ ಕೈಪಿಡಿಗೆ ಅನೇಕ ಮಿತಿಗಳಿವೆ. ಇಷ್ಟು ಕಿರುಹೊತ್ತಗೆಯಲ್ಲಿ ಆಕಾಶಸಮವಾದ ಧಮ್ಮವನ್ನು ಕಾಣಿಸಿಕೊಡುವುದು ಕಷ್ಟ. ಇಷ್ಟು ಸಾಕು' ಎಂದು ಹರಿಯುವ ನದಿಯನ್ನು ನಿಲ್ಲಿಸಬಾರದು. ಆದರೆ ನಮ್ಮ ಬೊಗಸೆಗೆ ಸಿಕ್ಕಷ್ಟನ್ನು ತಂದುಕೊಡುವುದರಲ್ಲಿ ತಪ್ಪಿಲ್ಲವೆಂದು ನಂಬಿದ್ದೇನೆ. ಹಾಗಾಗಿ ಇಲ್ಲಿ ವಿವರಿಸಿರುವ ಬೌದ್ಧ ತಾತ್ವಿಕತೆಯು ನನ್ನ ಬೊಗಸೆಗೆ ಸಿಕ್ಕಿದ್ದು ಎಂಬುದನ್ನು ಮೊದಲಿಗೆ ಹೇಳಬಯಸುತ್ತೇನೆ.

ಬುದ್ಧಧರ್ಮ ಈ ನೆಲದ ತಿಳುವಳಿಕೆ. ಭಾರತದ್ದೂ ಹೌದು; ಕರ್ನಾಟಕದ್ದೂ ಹೌದು. ಬೌದ್ಧ ಮಹಾಯಾನ ಮತ್ತು ಬೌದ್ಧ ತಾತ್ವಿಕತೆಯ ಒಂದು ಕವಲಾದ ನಾಥಪಂಥಗಳು ಪ್ರವರ್ತಿತವಾದದ್ದು ಕರ್ನಾಟಕದಿಂದ. ಆದರೆ ಈ ಎರಡೂ ಸಂಗತಿಗಳು ಇವತ್ತು ನಮ್ಮ ಸ್ಮೃತಿಪಟಲದಿಂದ ಮರೆಯಾಗಿ ಹೋಗುವಂತೆ ಮಾಡಲಾಗಿದೆ. ಅದಕ್ಕೆ ಕಾರಣಗಳಿವೆ, ಈ ಹೊತ್ತು ನಮ್ಮ ಜೀವನಕ್ರಮದಲ್ಲಿ ಎಂದು ಕರೆದುಕೊಂಡು ಬಾಳುತ್ತಿರುವ ಜೀವನಕ್ರಮಗಳಲ್ಲಿ ಪ್ರಧಾನವಾಗಿ ಎರಡು ಧಾರೆಗಳಿವೆ. ಒಂದು ಶ್ರಮಣಧಾರೆ ಇನ್ನೊಂದು ವೈದಿಕ ಧಾರೆ. ಬೌದ್ಧ, ನಾಥ, ಸಿದ್ಧ, ಶೈವ, ಶಾಕ್ತ, ಆಜೀವಿಕ, ಜೈನ, ವಚನ, ಅವಲ ಅನೇಕ ತತ್ವಪದ ಧಾರೆಗಳು, ಸೂಫಿ ಮುಂತಾದುವು ಶ್ರಮಣಧರ್ಮಗಳು, ವೇದೋಪನಿಷತ್ತುಗಳಿಂದ ಪ್ರಣೀತವಾದದ್ದು ವೈದಿಕಧರ್ಮ. ಈ ನೆಲದ ಎಲ್ಲ ದಲಿತ- ಶ್ರೂದರೂ ಶ್ರಮಣ ಧರ್ಮದ ಅನುಯಾಯಿಗಳು ಎಂಬುದು ನಿರ್ವಿವಾದವಾದುದು. ಅದೂ ಈ ಸಮೂಹಗಳಿಗೆ ಮರೆತುಹೋಗಿದೆ. ಶ್ರಮಣ ಮತ್ತು ವೈದಿಕ ಧಾರೆಗಳ ನಡುವೆ ಕೊಳು-ಪಡೆ ದೀರ್ಘಕಾಲದಿಂದ ನಡೆಯುತ್ತ ಬಂದಿದೆ. ಅನೇಕ ಕಡೆ ಸಾಮರಸ್ಯದ ನಡೆಗಳಿದ್ದರೆ ಮತ್ತೆ ಕೆಲವು ಕಡೆ ಗಂಭೀರವಾದ ಸಂಘರ್ಷಾತ್ಮಕ ನಡೆಗಳಿವೆ.

ಬೌದ್ಧ ತಾತ್ವಿಕತೆಯ ಮಹತ್ವ ಅರಿವಾಗಲು ಅದು ಜಗತ್ತಿನ ಇತರ ಧರ್ಮಗಳಿಗಿಂತ ಹೇಗೆ ಮತ್ತು ಯಾಕೆ ಭಿನ್ನ ಎಂಬುದನ್ನು ಕಂಡುಕೊಳ್ಳಬೇಕು. ಇತರ ದರ್ಶನಗಳು ಮುಂದಿಟ್ಟ ತಪ್ಪುದಾರಿಯನ್ನು ಸರಿಪಡಿಸಲೋಸುಗವೇ ಬೌದ್ಧ ಧರ್ಮ ಹುಟ್ಟಿಕೊಂಡದ್ದು. ಮಿಥ್ಯಾದೃಷ್ಟಿಗಳಿಂದ ಲೋಕದ ಜನರು ಅನುಭವಿಸುತ್ತಿರುವ ಸಂಕಟಪರಿಹಾರಕ್ಕಾಗಿಯೇ ಬುದ್ಧಗುರು ತನ್ನ ದರ್ಶನವನ್ನು ಲೋಕಕ್ಕೆ ನೀಡಿದುದರಿಂದ ಅವನನ್ನು ವೈದ್ಯಗುರು (ಭೈಷಜ್ಯಗುರು) ಎಂದು ಕರೆದದ್ದು. ಬುದ್ಧಗುರು ತತ್ವವೈದ್ಯನಾಗಿರುವುದರಿಂದ ಅವನ ಬಳಿ ಕೇವಲ ಧರ್ಮಕ್ಕಾಗಿ ಹೋಗದೆ ದುಃಖಕ್ಕೆ ಈಡಾದ ಯಾವ ಮನುಷ್ಯನೂ ಹೋಗಬಹುದು ಮತ್ತು ದುಃಖಪರಿಹಾರ ಮಾಡಿಕೊಳ್ಳಬಹುದು.

ಬುದ್ಧ ಮತ್ತು ಬೌದ್ಧ ತಾತ್ವಿಕತೆಯನ್ನು ಪರಿಚಯಿಸುವ ಈ ಪುಸ್ತಕವನ್ನು ಓದುವುದರಿಂದ ಏನು ಉಪಯೋಗ? ಈ ಪ್ರಶ್ನೆಯನ್ನು ಇದಿರಾಗುವುದು ತಪ್ಪೇನಲ್ಲ. ಬೌದ್ಧ ದರ್ಶನಕ್ಕೆ ಒಂದು ವಿಶೇಷ ಗುಣವಿದೆ. ಅದು ಇತರ ಧರ್ಮಗಳಂತೆ ಆಯಾ ಧರ್ಮೀಯರಿಗೆ ಮಾತ್ರವಲ್ಲ. ವಿಜ್ಞಾನದಂತೆ ಜಗತ್ತಿನ ಎಲ್ಲರಿಗೂ ಸಲ್ಲುವಂತಹದು. ಬುದ್ಧಗುರುವನ್ನು ಕೇವಲ ಬೌದ್ಧ ಧರ್ಮದ ಸ್ಥಾಪಕನೆಂದು ಗೌರವಿಸುವುದಕ್ಕಿಂತ ಇಡಿಯಾಗಿ ಮನುಷ್ಯಕುಲಕ್ಕೆ ಬೇಕಾದ ಸರಿಯಾದ ಅರಿವು ಮತ್ತು ಬಾಳುವ ಕ್ರಮವನ್ನು ತಿಳಿಸಿಕೊಟ್ಟವನೆಂದು ಗೌರವಿಸುವುದೇ ಸರಿಯಾದುದು. ವಿಜ್ಞಾನವನ್ನು ಹೇಗೆ ಎಲ್ಲ ಧರ್ಮೀಯರೂ ಸ್ವೀಕರಿಸಿ ಬದುಕುತ್ತಾರೆಯೋ ಹಾಗೆಯೇ ಬೌದ್ಧ ತಾತ್ವಿಕತೆಯು ಎಲ್ಲರಿಗೂ ಸರಿಯಾದ ಜೀವನ ಕ್ರಮ.

ಬೌದ್ಧ ತಾತ್ವಿಕತೆಯನ್ನು ಅರಿತುಕೊಳ್ಳುವ ಕ್ರಮದ ಬಗೆಗೆ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ಭಾವಿಸಿದ್ದೇನೆ. ಏಕೆಂದರೆ ಏನನ್ನು ತಿಳಿದುಕೊಳ್ಳಬೇಕು ಎನ್ನುವುದರಷ್ಟೇ ಮುಖ್ಯವಾದುದು ಅದನ್ನು ಹೇಗೆ ತಿಳಿದುಕೊಳ್ಳಬೇಕು ಎನ್ನುವುದು, ಬುದ್ಧನೇ ತನ್ನ ದರ್ಶನವನ್ನು 'ಇದು ತುಂಬಾ ಆಳವಾದುದು, ಗಂಭೀರವಾದುದು ಮತ್ತು ಸಾಮಾನ್ಯ ಮೇಲ್ಪದರದ ಗ್ರಹಿಕೆಗೆ ದಕ್ಕದುದು' ಎಂಬ ಎಚ್ಚರದೊಂದಿಗೇ ನೀಡಿದ್ದಾನೆ. ಹಾಗಾಗಿ ಅದನ್ನು ದಕ್ಕಿಸಿಕೊಳ್ಳಲು ಅಗತ್ಯವಾದ ಸಿದ್ಧತೆಗಳಿಲ್ಲದೆ ಅದನ್ನು ಇದಿರಾಗುವುದಕ್ಕೆ ಸಾಧ್ಯವಾಗದು. ಉದಾಹರಣೆಗೆ ಕಾಲ್ಪನಿಕ ಸಂಗತಿಗಳನ್ನು ವಾಸ್ತವ ಸಂಗತಿಗಳೆಂದು ಗ್ರಹಿಸುವುದನ್ನು ತಿರಸ್ಕರಿಸದ ಹೊರತು ವಾಸ್ತವ ಸಂಗತಿಗಳ ನಿಜವನ್ನು ಅರಿಯಲು ಸಾಧ್ಯವಾಗದು. ಮತ್ತೂ ಗಮನಿಸಿದರೆ, ನಮ್ಮನ್ನು ಆವರಿಸುವ ಮರಹು ದೇಹಸಹಜವಾದುದು, ಜೈವಿಕವಾದುದು. ಹಾಗಾಗಿ ಅಂತಹ ತಪ್ಪು ಗ್ರಹಿಕ ಅಥವಾ ಮರವನ್ನು ನಿವಾರಿಸಿಕೊಂಡು ಎಚ್ಚರದ ಸ್ಥಿತಿಗೆ ದೇಹ ಮನಸ್ಸುಗಳನ್ನು ತಂದುಕೊಳ್ಳದ ಹೊರತು ಬೌದ್ಧ ತಾತ್ವಿಕತೆಯನ್ನು ಇದಿರಾಗಲು ಸಾಧ್ಯವಾಗದು, ಹಾಗೆ ನಿವಾರಿಸಿಕೊಳ್ಳಬೇಕಾದ ಅನೇಕ ಸಂಗತಿಗಳಿವೆ. ಅವುಗಳನ್ನು ನಿಭಾಯಿಸುವುದು ಸರಳವಾದುದಲ್ಲ. ಇವುಗಳನ್ನು ಹೇಳಿ ಇಕ್ಕಟ್ಟನ್ನುಂಟುಮಾಡುವುದು ನನ್ನ ಉದ್ದೇಶವಲ್ಲ. ಆದರೆ ಬೌದ್ಧ ತಾತ್ವಿಕತೆಯನ್ನು ಇದಿರಾಗಲು ಅಗತ್ಯವಾದ ಪೂರ್ವಸಿದ್ಧತೆಗಳನ್ನು ತಮ್ಮ ಮುಂದಿಡುವುದಷ್ಟೆ ನನ್ನ ಉದ್ದೇಶ. ಬುದ್ಧ ಹೇಳಿದ ಕೊನೆಯ ಮಾತು ಅದೇ: “ನಿನಗೆ ನೀನೇ ಬೆಳಕು', ಅವರವರ ವಿವೇಕದ ದೀಪವನ್ನು ಹಚ್ಚಿಕೊಂಡು ಅದರ ಬೆಳಕಿನಲ್ಲಿ ಈ ಕೃತಿಯನ್ನು ತೆರೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಬೌದ್ಧ ದರ್ಶನದಲ್ಲಿರುವ ಬೇರೆ ಬೇರೆ ಚಿಂತನಾಪ್ರಸ್ಥಾನಗಳ ನಡುವಿನ ತಾತ್ವಿಕ ತಿಕ್ಕಾಟಗಳ ಬಗೆಗೆ ಈ ಕೃತಿಯಲ್ಲಿ ಹೆಚ್ಚಿನ ಪ್ರಾಶಸ್ತ್ರವನ್ನು ಕೊಟ್ಟಿಲ್ಲ. ಈ ತಿಕ್ಕಾಟಗಳಿಗೂ ದೀರ್ಘಕಾಲೀನವಾದ ಚರಿತ್ರೆ ಇದೆ. ಅವು ಮುಂದುವರಿದೇ ಇವೆ. ಮುಂದಕ್ಕೂ ಇರಲೇಬೇಕು, ಇರುತ್ತವೆ. ಏಕೆಂದರೆ ಬೌದ್ಧ ತಾತ್ವಿಕತಯು ಮುಕ್ತ ಅಂತ್ಯವುಳ್ಳದ್ದು. ಅದು ಈಗಾಗಲೇ ಹೇಳಿ ಮುಗಿಸಿರುವ ದರ್ಶನವಲ್ಲ. ಅಲ್ಲಿ ಸಾವಿರಾರು ಬುದ್ಧರ ಕಲ್ಪನೆ ಇದೆ. ಈಗ ಆಗಿ ಹೋಗಿರುವ ಬುದ್ಧರ ಜೊತೆಗೆ ಮುಂದೆ ಬರುವ ಭವಿಷ್ಯದ ಬುದ್ಧರ ಕಲ್ಪನೆಯೂ ಇದೆ. ಇದಕ್ಕೆ ಕಾರಣ ಎಲ್ಲರಲ್ಲಿಯೂ ಬುದ್ಧಸತ್ವ ಇರುವುದು, ಜ್ಞಾನದ ಹರಿವೇ ಹಾಗೆ, ಅದರ ಹರಿವಿಗೆ ಕೊನೆಯೆಂಬುದಿಲ್ಲ. ವಿಜ್ಞಾನದ ತಿಳುವಳಿಕೆಯೂ ಅದೇ ರೀತಿಯದ್ದು, ಜ್ಞಾನಕ್ಕೆ ಹೊಸ ವಿಸ್ತರಣೆಗಳು ದೊರಕಿದ ಹಾಗೆ ಈವರೆಗಿನ ತಿಳವಳಿಕೆ ಬದಲಾಗುತ್ತ ಹೋಗುತ್ತದೆ. ಇದು ಬೌದ್ಧ ಧರ್ಮಕ್ಕೆ ಮಾತ್ರ ಒಪ್ಪಿತ ಸಂಗತಿ, ಉಳಿದ ಧರ್ಮಗಳಿಗೆ ಅಲ್ಲ. ಬೌದ್ಧ ದರ್ಶನದ ಕೇಂದ್ರ ತಾತ್ವಿಕತೆ ಎಂದೇ ಪರಿಗಣಿತವಾಗಿರುವ 'ಶೂನ್ಯತೆ ಅಥವಾ ಮಧ್ಯಮಮಾರ್ಗವನ್ನು ಅದರ ಅನೇಕ ಮೂಲಕ ಮಹಾಯಾನ ಪ್ರಸ್ಥಾನವನ್ನಾಧರಿಸಿ ವಿವರಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಇಲ್ಲಿ ಹೇಳಿರುವ ಯಾವುದೂ ಸ್ವತಃ ಬುದ್ಧನೇ ಹೇಳಿರುವ ಹಾಗೆ ಪ್ರಶ್ನಾತೀತವಲ್ಲ.

ಸರಿಯಾದ ಲೋಕವಿವರಣೆಯನ್ನು ಮತ್ತು ಅದರ ಅನ್ವಯಕ್ರಮವನ್ನು ಯಾವ ಮೂಲದಿಂದ ಅರಿತುಕೊಂಡರೂ ಅದು ಬೌದ್ಧ ಧರ್ಮವೇ ಆಗಿರುತ್ತದೆ ಮತ್ತು ಅಂತಹ ವಿವರಣೆಯನ್ನಾಧರಿಸಿದ ಬಾಳಿದರೆ ಅದು ನಿಶ್ಚಿತವಾಗಿ ಬೌದ್ಧ ಧರ್ಮದ ಬಾಳುವೆಯ ಕ್ರಮವೇ ಆಗಿರುತ್ತದೆ. ಅದು 'ಸರಿಯಾದ ತಿಳುವಳಿಕೆಯಾಗಿರುವುದರಿಂದ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಹೊಳೆಯಬಹುದು. ಬುದ್ಧ ಸತ್ವ ಎಲ್ಲರಲ್ಲಿಯೂ ಇದೆ. ಅದನ್ನು ಆನಾವರಣ ಮಾಡಿಕೊಳ್ಳುವ ಹೊಣೆ ನಮ್ಮದೇ ಉಳಿದ

ಈ ಕೃತಿಯನ್ನು ಸೋದರ ಪ್ರೀತಿಯ ಪಲ್ಲವ ವೆಂಕಟೇಶ್ ಪ್ರಕಟಿಸುತ್ತಿದ್ದಾರೆ. ಶಿವನಕೆರೆ ಬಸವಲಿಂಗಯ್ಯ, ದಾವಣಗೆರೆ ಮತ್ತು ಇತರ ಅನೇಕ ಗೆಳೆಯರು ಈ ಬುದ್ಧ ಸರಣಿಯ ನೂರಾರು ಪುಸ್ತಕಗಳನ್ನು ಕೊಂಡು ಹಂಚಿದ್ದಾರೆ. ನಮ್ಮ ನಡುವಿನ ಸಾಕ್ಷಿಪ್ರವಯಾಗಿರುವ ದೇವನೂರ ಮಹಾದೇವ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೆಳೆಯರಾದ ಕೆ ಸಿ ರಘು ಈ ಕೃತಿಯ ಬಗೆಗೆ ತಮ್ಮ ಅನಿಸಿಕೆ ನೀಡಿದ್ದಾರೆ. ಸಹಜಯಾನಿ ಆಚಲಬಂಧು ಪದ್ಮಾಲಯ ನಾಗರಾಜ್ ಆನೇಕ ಸೂಚಿಗಳನ್ನು ನೀಡಿದ್ದಾರೆ, ಇವರೆಲ್ಲರೂ ಈ ಪುಸ್ತಕ ಭಾಗವೇ ಆಗಿದ್ದಾರೆ. ಈ ಪುಸ್ತಕದ ಮುಖಪುಟದ ಕಲಾವಿದರಾದ ಶ್ವೇತ ಅವರಿಗೆ ಮತ್ತು ಮುದ್ರಿಸಿದ ಸ್ಕ್ಯಾನ್ ಪ್ರಿಂಟರ್‌ನವರಿಗೆ ನನ್ನ ನೆನಕೆಗಳು.

ಎಸ್ ನಟರಾಜ ಬೂದಾಳು

MORE FEATURES

ನಾ. ಡಿಸೋಜರ ಜಾಣ ಹಾದಿಯ ಪಯಣ

05-01-2025 ಬೆಂಗಳೂರು

ನಮ್ಮನ್ನಗಲಿದ ಹಿರಿಯ ಚೇತನ ಕಾದಂಬರಿಕಾರ, ನಾಟಕಕಾರ ನಾ. ಡಿಸೋಜ ಅವರ ನೆನಪುಗಳ ಕುರಿತು ಎಚ್.ಎಸ್. ಸತ್ಯನಾರಾಯಣ ಅವರ&ldqu...

ಕೃಷ್ಣಾನಂದರಿಗೆ ಕಾಗೆಗಳ ಬಗ್ಗೆ ಭಾರೀ ಆಸಕ್ತಿ; ನಾಗೇಶ್ ಹೆಗಡೆ

05-01-2025 ಬೆಂಗಳೂರು

ಬೆಂಗಳೂರು: ನಿನ್ನೆ ಡಾ. ಕೃಷ್ಣಾನಂದ ಕಾಮತ್‌ ಮತ್ತು ಡಾ. ಜ್ಯೋತ್ಸ್ನಾ ಕಾಮತ್‌ ಅವರ ಸಂಸ್ಮರಣೆ ಇತ್ತು. ತುಸು...

ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಬಹುದಾದ ನಾಟಕವಿದು

05-01-2025 ಬೆಂಗಳೂರು

"ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್...