ನಾ. ಡಿಸೋಜರ ಜಾಣ ಹಾದಿಯ ಪಯಣ


ನಮ್ಮನ್ನಗಲಿದ ಹಿರಿಯ ಚೇತನ ಕಾದಂಬರಿಕಾರ, ನಾಟಕಕಾರ ನಾ. ಡಿಸೋಜ ಅವರ ನೆನಪುಗಳ ಕುರಿತು ಎಚ್.ಎಸ್. ಸತ್ಯನಾರಾಯಣ ಅವರ“ ನಾ. ಡಿಸೋಜರ ಜಾಣ ಹಾದಿಯ ಪಯಣ” ಅಂಕಣ ಬರಹ..

 

“ಕುಂಜಾಲ ಕಣಿವೆಯ ಕೆಂಪು ಹೂವು” ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದಾಗ ಮೋದಲು ನಾ. ಡಿಸೋಜ ಅವರ ಹೆಸರು ಮೊದಲು ಗಮನಿಸಿದ್ದು. ಕಣಿವೆಯಲ್ಲಿ ಹಲವು ವರಷಕ್ಕೊಮ್ಮೆ ಬಿಡುವ ಕೆಂಪು ಹೂವೊಂದನ್ನು ಅರಸಿ ಹೊರಡುವ ಅಪೂರ್ವ ನಿರೂಪಣೆಯ ಕಥನ ಮನದಲ್ಲಿ ನೆಲೆ ನಿಂತುಬಿಟ್ಟಿತ್ತು. ನಾನು ಆರಂಭದಲ್ಲಿ ಓದಿದ ನೆನಪಿನಲ್ಲುಳಿದ ಕತೆಗಳಲ್ಲಿ ಇದೂ ಒಂದು. ಅಲ್ಲಿಂದ ಅವರ ಅನೇಕ ಕತೆ-ಕಾದಂಬರಿಗಳನ್ನು ಓದಿದೆ. ಹೀಗೆ ಮನಸ್ಸಿಗೆ ಬಂದ ಡಿಸೋಜ ಅವರ ಬಗ್ಗೆ ಒಂದು ಕುತೂಹಲವಿತ್ತಾದ್ದರಿಂದ ಚಿಕ್ಕಮಗಳೂರಿನ ನಮ್ಮ ಪದವಿ ಕಾಲೇಜಿನ ಕನ್ನಡ ಸಂಘವನ್ನು ಉದ್ಘಾಟಿಸಲು ಬಂದಿದ್ದ ಅವರನ್ನು ಹತ್ತಿರದಿಂದ ಮಾತಾಡಿಸಲು ಹೋದೆ. ತುಂಬ ಸರಳ ಸಜ್ಜನಿಕೆಯ ಗಂಭೀರ ವ್ಯಕ್ತಿತ್ವ. ನಮಗೆ ಪಾಠ ಮಾಡುತ್ತಿದ್ದ ಮೇಷ್ಟ್ರುಗಳಂತೆಯೇ ಕಂಡ ಅನರಲ್ಲಿ ತಾನೊಬ್ಬ ಲೇಖಕನೆಂಬ ಯಾವ ಬಿಗುಮಾನವೂ ಇರಲಿಲ್ಲ. ನಮ್ಮ ಕೆಲವು ಬರಹಗಾರರನ್ನು ಮಾತಾಡಿಸೋದೆ ಬಲುಕಷ್ಟ! ಕೆಲವರನ್ನು ಯಾಕಾದರೂ ಮಾತಾಡಿಸಿದೆನೋ ಎಂಬ ಪಶ್ಚಾತ್ತಾಪ ಆಗಿದ್ದೂ ಇದೆ. ಆಗಲೂ ಈಗಲೂ ಸೌಜನ್ಯದ ಮೂರ್ತಿಯಂತೆಯೇ ಇದ್ದಾರೆ ನಾ.ಡಿ.

 

ಅವತ್ತು ನಮ್ಮ ಕನ್ನಡ ಸಂಘ ಉದ್ಘಾಟನೆಗೆ ಬಂದಿದ್ದಾಗ ಅವರು ಹೇಳಿದ ಮಾತು; “ಕೋಣ-ಕೋಣರಿಗೆ ಒಂದು ಹಾದಿ, ಕೋಣ-ಜಾಣರಿಗೆ ಎರಡು ಹಾದಿ, ಜಾಣ-ಜಾಣರಿಗೆ ಮೂರು ಹಾದಿ!” ಸಾಹಿತವಲಯದಲ್ಲಿ ಸದ್ದುಗದ್ದಲವಿಲ್ಲದ ಜಾಣ ಹಾದಿಯಲ್ಲಿ ನಡೆದು, ತಮ್ಮದೆ ಆದ ಅಪಾರ ಓದುಗ ವಲಯವನ್ನು ಸೃಷ್ಟಿಸಿಕೊಂಡು ನೆಮ್ಮದಿಯಾಗಿದ್ದಾರೆ.

 

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಫೋನ್ ಮಾಡಿ ಅಭಿನಂದಿಸಿದೆ. ತುಂಬ ತಣ್ಣಗೆ ಪ್ರತಿಕ್ರಿಯಿಸಿದ್ದರು. ಅವರ ಬಗ್ಗೆ ಲೇಖನ ಬರೆದ ವಿಚಾರ ಹೇಳಿದೆ. “ಕಳಿಸಿಕೊಡಿ ನೋಡುವ, ಸಮ್ಮೇಳನದ ಗಲಾಟೆ ಎಲ್ಲ ಮುಗಿದಮೇಲೆ ನಿಧಾನಕ್ಕೆ ನಾನುಓದೋದು ಬೇಜಾರುಮಾಡ್ಕೊಬಾರದು” ಎಂದು ಹೇಳಿದರು. ನಾನು ಪ್ರಕಟಿತ ಲೇಖನ ಕಳಿಸಿದೆ. ಒಂದೆರಡು ತಿಂಗಳ ಬಳಿಕ ನೆನಪಿಂದ ಫೋನ್ ಮಾಡಿ ತಮ್ಮ ಸಂತೋಷ ವ್ಯಕ್ತಪಡಿಸಿದರು. “ಸ್ವಲ್ಪ ಧಾರಾಳವಾಗೇ ಹೊಗಳಿದ್ದೀರಿ” ಎಂದು ನಗಾಡಿದರು. “ಸಮ್ಮೇಳನಾಧ್ಯಕ್ಷನಾಗದಿದ್ದರೆ ಬರೆಯುತ್ತಿದ್ದಿರೆ?”ಎಂದು ಕೇಳಲು ಮರೆಯಲಿಲ್ಲ!! ಇಂತಹ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ನಿಜ ನಮ್ಮ ಎಷ್ಟೊ ಲೇಖಕರನ್ನು ಕಾರಣವಿಲ್ಲದೆ ನೆನಪಿಸಿಕೊಳ್ಳುವ ಪರಿಪಾಠವೇ ನಮ್ಮಲಿಲ್ಲ! ಒಂದೋ ಪದವಿ ಸಿಗಬೇಕು, ಇಲ್ಲ ಪ್ರಶಸ್ತಿ ಬರಬೇಕು ಅಥವಾ ಕೀರ್ತಿಶೇಷರಾಗಬೇಕು!!!

 

ಸಾಗರಕ್ಕೆ ಹೋದ ಮೇಲೆ ನಾ ಡಿಯವರ ಮನೆಗೆ ಹೋಗದೆ ಬರುವುದುಂಟೆ? ಯಾರೆ ಹುಡುಕಿಕೊಂಡು ಹೋದರೂ ಬಹಳ ಖುಷಿಯಿಂದ ಮಾತಾಡುತ್ತಾರೆ.ವಯೋಸಹಜ ಕಾರಣಗಳಿಂದ ಮೆತ್ತಗಾಗಿದ್ದಾರೆ. ನಾನು ಹೋದಾಗ ನಿಧಾನವಾಗಿ ನಡೆದುಕೊಂಡು ಬಂದು ಬಾಗಿಲು ತೆರೆದರು. ನಮ್ಮ ಮನೆ ತುಂಬ ಚಿಕ್ಕದು ಜಾಗ್ರತೆ ಬನ್ನಿ ಎಂದರು. ರೈಲ್ವೆ ಭೋಗಿಯಂತಿರುವ ಉದ್ದದ ಮನೆಯ ಹಾಲಿನ ತುಂಬ, ನೆಲದ ಮೇಲೆಲ್ಲ ತಮಗೆ ಸಂದ ಸ್ಮರಣಿಕೆಗಳನ್ನು ಸಾಲಾಗಿ ಜೋಡಿಸಿಟ್ಟಿದ್ದಾರೆ! ವಯಸ್ಸಾದ ತಮಗೂ ತಮ್ಮ ಪತ್ನಿಗೂ ಇದನ್ನೆಲ್ಲ ಮೇಂಟೇನ್ ಮಾಡೋದೆ ಕಷ್ಟ ಎಂದು ವಿಷಾದಿಸಿದರು! ಹಾಗಂತ ಜನ ತೋರಿದ ಪ್ರೀತಿಯನ್ನು ನಿರಾಕರಿಸುವ ಮನಸ್ಸೂ ಇಲ್ಲ.

 

ಎಷ್ಟು ಎತ್ತರ ಇದ್ದಾರಪ್ಪಾ ಇವರು ಅನ್ನಿಸುವಷ್ಟು ಉದ್ದಕ್ಕಿದ್ದಾರೆ ನಾ. ಡಿಸೋಜ ಅವರು. ಬಣ್ಣ ಬಣ್ಣದ ಲುಂಗಿ, ತುಂಬು ತೋಳಿನ ಅಂಗಿಯಲ್ಲಿ ಇನ್ನೂ ಎತ್ತರ ಕಾಣುವ ದೇಹ. ಸಾಹಿತ್ಯ ಕೃಷಿಯಲ್ಲೂ ಇದೇ ಎತ್ತರ ಅವರದ್ದು. ಕಾದಂಬರಿ, ಸಣ್ಣಕತೆ, ಮಕ್ಕಳ ಸಾಹಿತ್ಯ, ಜೀವನಚರಿತ್ರೆಗಳ ಪ್ರಕಾರದಲ್ಲಿ ಅವರು ರಚಿಸಿರುವ ಕೃತಿಗಳ ಸಂಖ್ಯೆ ನೂರಾಮೂರು! “ಕಾದಂಬರಿ ನಿಮಗೆ ಅತ್ಯಂತ ಪ್ರಿಯವಾದ ಪ್ರಕಾರವಲ್ವಾ?” ಅಂದೆ, “ಹೌದುಹೌದು, ನಾನು ಮೊದಲು ಬರೆದಿದ್ದು ಕಾದಂಬರಿಗಳನ್ನೆ. ಬಂಜೆ-ಬೆಂಕಿ ಎಂಬುದು ನನ್ನ ಮೊದಲ ಕಾದಂಬರಿ. ಆಮೇಲಿನವು ನೀವು ಓದಿದಿರಲ್ವಾ?”ಎಂದರು. “ನಾನು ಒಂದುಕಾಲದಲ್ಲಿ ನಿಮ್ಮ ಹಾಗೂ ಕೆ ಟಿ ಗಟ್ಟಿಯವರ ಕಾದಂಬರಿಗಳ ಅಭಿಮಾನಿ ಸರ್” ಎಂದರೆ, “ಈಗಲ್ವಲ್ಲ!”ಎಂದು ನಸುನಕ್ಕರು. “ನೀವು ನೀರಿನ ಬಗ್ಗೆನೆ ಜಾಸ್ತಿ ಬರ್ದಿರೋದು, ದ್ವೀಪ, ನೀರು, ಹರಿವ ನದಿ, ಒಂದು ಜಲಪಾತದ ಸುತ್ತ.....ಇತ್ಯಾದಿ ಅಲ್ವೆ?” ಎಂದು ಮಾತಿನ ಲಹರಿಗೆಳೆದರೆ ಸಾಕು, ನಿಧಾನವಾಗಿ, ಯೋಚನೆ ಮಾಡಿ ಮಾತು ಆರಂಭಿಸುವುದು. “ನಾನು ಕೆಲಸಕ್ಕೆ ಸೇರಿದ್ದು ಪಿಡಬ್ಲೂಡಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ! ಆಮೇಲೆ ಶರಾವತಿ ನದಿ ಕಣಿವೆ ಯೋಜನೆಯೊಳಗೆ ಪ್ರಥಮದರ್ಜೆ ಗುಮಾಸ್ತನಾಗಿದ್ದೆ! ಆಗೆಲ್ಲ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶದ ಜನರ ಬವಣೆಗಳನ್ನು ಹತ್ತಿರದಿಂದ ಕಂಡೆ. ಅಣೆಕಟ್ಟು, ಕಾಮಗಾರಿ, ಜನರ ದುಃಖದುಮ್ಮಾನ, ಪರಿಹಾರ, ಇವೆಲ್ಲದರ ತಾರತಮ್ಯ, ರಾಜಕೀಯ ಎಲ್ಲವೂ ಈ ಬಗೆಯ ಬರವಣಿಗೆಗೆ ಕಾರಣವಾದವು!ಅದಲ್ಲದೆ ಬೇರೆ ವಸ್ತುಗಳೂ ಕಾದಂಬರಿಯೊಳಗೆ ಬಂದಿವೆಯಲ್ಲ!”

“ನಿಮಗೆ ಬಾಲ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇದು ಸಂತೋಷದ ವಿಚಾರ ನಮಗೆಲ್ಲ” ಎಂದರೆ ನಾ. ಡಿಸೋಜ ಅವರು ಸುಮ್ಮನಾಗುತ್ತಾರೆ. ಅವರ ಕೃತಿಗಳನ್ನು ಕನ್ನ ಡ ವಿಮರ್ಶೆ ಗಂಭೀರವಾಗಿ ಚರ್ಚಿಸಿಲ್ಲ. ಈ ಬಗ್ಗೆ ಅವರಿಗೇನೂ ಬೇಸರವಿಲ್ಲ! ಓದುಗರು ಮೆಚ್ಚಿಕೊಂಡಿರುವುದರ ಬಗ್ಗೆಯೇ ತೃಪ್ತಿ ವ್ಯಕ್ತಪಡಿಸುವ ಸ್ಥಿತಪ್ರಜ್ಞತೆ ಅವರದು!

 

“ಗಿರೀಶ್ ಕಾಸರವಳ್ಳಿಯವರು ನಿಮ್ಮ ದ್ವೀಪ ಕಾದಂಬರಿಯನ್ನು ಚೆನ್ನಾಗಿ ತೆರೆಗೆ ತಂದಿದ್ದಾರೆ ಅಲ್ವ ಸರ್?” ಎಂದು ಮಾತು ಬದಲಾಯಿಸಿದರೆ,

“ನನ್ನ ಹಲವಾರು ಕಾದಂಬರಿಗಳು ಚಲನಚಿತ್ರಗಳಾಗಿವೆಯಲ್ಲ! ಕಾಡಿನಬೆಂಕಿ, ದ್ವೀಪ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ....ಇತ್ಯಾದಿ. ದ್ವೀಪ ಮತ್ತು ಕಾಡಿನಬೆಂಕಿ ತುಂಬ ಪ್ರಸಿದ್ಧಿ ಪಡೆದವು ಅಷ್ಟೇ. ಗಿರೀಶರು ನನ್ನ ಕಾದಂಬರಿಯನ್ನು ತುಂಬ ಚೆನ್ನಾಗಿ ತೆರೆಗೆ ತಂದಿದ್ದಾರೆ, ನೀರೂ ಒಂದು ಪಾತ್ರವಾದಂತೆ ಭಾಸವಾಗುತ್ತದೆ.”

ಸದ್ದಿಲ್ಲದಂತೆ ಬದುಕುವ ನಾ ಡಿಸೋಜ ಅವರನ್ನು ಅರಸಿಕೊಂಡು ಬಂದಿರುವ ಪ್ರಶಸ್ತಿಗಳೂ ಹಲವಿವೆ; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಷ್ಟ್ರಪತಿಗಳ ರಜತ ಕಮಲ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ....ಇತ್ಯಾದಿ. ಅಂದಹಾಗೆ, ಕುವೆಂಪು ವಿ ವಿ ಇವರ ಜೀವಮಾನದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದ್ದರಿಂದ ಇವರೀಗ ಡಾ. ನಾರ್ಬರ್ಟ್ ಡಿಸೋಜ.

 

ಮೊನ್ನೆ ಮೊನ್ನೆ ಸಾಗರದಲ್ಲಿ ಉಪನ್ಯಾಸಕ್ಕೆ ಹೋದಾಗ, ಗೆಳೆಯ ಸರ್ಫ್ ರಾಜ್ ಅವರು ನನ್ನನ್ನೂ ನೀಲಕಂಠೇಗೌಡರನ್ನೂ ನಾ ಡಿಯವರ ಮನೆಗೆ ಕರೆದೊಯ್ದರು. ತುಂಬ ಮೆತ್ತಗಾಗಿದ್ದಾರೆನಿಸಿತು. ಒಂದರ್ಧಗಂಟೆ ಮಾತಾಡಿದೆವು. “ನಾನೂ ನಿಮ್ಮ ಮಾತು ಕೇಳಲು ಬರೋನಿದ್ದೆ ಆಗಲಿಲ್ಲ “ ಎಂದೆ. ಪುಸ್ತಕ ಪ್ರಕಟಣೆ ರಾಯಲ್ಟಿ ಮುಂತಾದ ವಿಚಾರಗಳನ್ನು ಕುರಿತೆ ಆ ದಿನ ಹೆಚ್ಚು ಮಾತಾಡಿದ್ದು. ಎಲ್ಲವನ್ನೂ ಅರಿತೂ ಮನಸ್ಸನ್ನು ಕಹಿ ಮಾಡಿಕೊಳ್ಳದೆ ಸಮಾಧಾನಿಯಾಗಿರುವ ಅವರ ವ್ಯಕ್ತಿತ್ವ ತುಂಬ ಎತ್ತರದ್ದಾಗಿ ಕಂಡಿತು. ಅವರಂತೆಯೇ ಸಮಾಧಾನಿಯಾಗಿ ಬದುಕಿದರೆ ಸಾಕೆಂಬ ಒತ್ತಾಸೆ ಅವರ ಸಾಮಿಪ್ಯದಿಂದ ಲಭಿಸಿತು. ನಿಜಕ್ಕೂ ಇವರು ಸಾಗರದ ದೀಪ!

MORE FEATURES

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...

ತಮ್ಮ ವಿನಾಶ ಮಾತ್ರ ಅಂಗೈ ಗೆರೆಗಳಷ್ಟೇ ಸ್ಪಷ್ಟ

07-01-2025 ಬೆಂಗಳೂರು

“ನಮ್ಮೊಳಗಿನ ಮನುಷ್ಯತ್ವವನ್ನು ಬಡಿದೆಬ್ಬಿಸುತ್ತವೆ. ಇಂಥಾ ಜೀವಂತ ಜ್ವಾಲಾಮುಖಿಗಳಂಥ ಕಥೆಗಳನ್ನು ಓದಿದಾಗ, ನನ್ನಿಂ...

ಎಲ್ಲರಿಗೂ ಅವರವರ ಆವರಣದ ಅರಿವಿದೆ

07-01-2025 ಬೆಂಗಳೂರು

"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...