ಬೆಂಗಳೂರು: ನಿನ್ನೆ ಡಾ. ಕೃಷ್ಣಾನಂದ ಕಾಮತ್ ಮತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಸಂಸ್ಮರಣೆ ಇತ್ತು. ತುಸುವೂ ಬೋರ್ ಹೊಡೆಸದೆ ಎಲ್ಲರೂ ಚಂದ ಮಾತಾಡಿದರು. ‘ಬುಕ್ ಬ್ರಹ್ಮʼದಲ್ಲಿ ಅದು ಲೈವ್ ಇತ್ತು. ಅವಕಾಶ ಮಾಡಿಕೊಂಡು ಅದನ್ನು ನಾನೇ ಒಮ್ಮೆ ನೋಡಬೇಕು.
ಈ ದಂಪತಿಯ ಮಗ ವಿಕಾಸ್ ಬಂದಿದ್ದರು ಅಮೆರಿಕದಿಂದ. ಸೊಸೆ (ದಕ್ಷಿಣ ಕೊರಿಯಾದ ಡಾ. ಕಿಮ್ ಬಂದಿರಲಿಲ್ಲ; ಇವರಿಬ್ಬರ ದತ್ತು ಪುತ್ರಿ ಮೀನಾ ಕಾಮತ್ (12) ಕೂಡ ಬಂದಿರಲಿಲ್ಲ.)
ನಾವು ಹತ್ತು ಮಂದಿ ಮಾತಾಡಿದೆವು. ಅಬ್ಬ, ಮೂರು ಗಂಟೆಯ ಅವಧಿಯಲ್ಲಿ ಅಷ್ಟೂ ಜನರ ಮಾತುಗಳನ್ನು ಬಿ.ಕೆ. ಸುಮತಿಯವರು ಚಂದ ನಿರ್ವಹಣೆ ಮಾಡಿದ್ದರಿಂದ ಸರಿಯಾಗಿ 1ಗಂಟೆಗೆ ಊಟಕ್ಕೆ ಹೊರಟೆವು.
ಉದ್ಘಾಟನೆ ವಿಶ್ವೇಶ್ವರ ಭಟ್ ಅವರದ್ದಾಗಿತ್ತು. ನಂತರ ಎಸ್. ದಿವಾಕರ್, ನೇಮಿಚಂದ್ರ, ಜಯಂತ ಕಾಯ್ಕಿಣಿ ಮತ್ತು ನಾನು (ನಾಗೇಶ ಹೆಗಡೆ) ಮಾತಾಡಿದೆವು. ನನ್ನ ನಂತರ ಎನ್. ಗಾಯತ್ರಿ, ಎಚ್. ಕೃಷ್ಣಮೂರ್ತಿ, ಡಾ. ಎಂ. ಭೈರೇಗೌಡ, ಸುಷ್ಮಾ ಆರೂರ್, ಶೇಷಶಾಸ್ತ್ರಿ.
ಜಯಂತ್ ಕಾಯ್ಕಿಣಿ ಮಾತಾಡಿದ ನಂತರ ಎಲ್ಲರಿಗೂ ಹೊಟ್ಟೆ ಹುಣ್ಣಾಗಿರಬೇಕು! ಅಷ್ಟು ಚಂದದ ಅವರ ಮಾತನ್ನು ಕೇಳಿದ ನಂತರ ಯಾರೇ ಮಾತಾಡಿದರೂ ಡಲ್ ಎನಿಸುತ್ತದೆ. ನನ್ನ ಸರದಿ ಆಗ ಬಂತು. ʻಈ ಸಂಭ್ರಮದ ಸಂಸ್ಮರಣೆಯ ಕ್ಷಣ ಎಲ್ಲರೂ ಎದ್ದು ನಿಂತು ಅರ್ಧ ನಿಮಿಷ ಮುಗುಳ್ನಗೆ ಸೂಸಿದ್ದರೆ ಚಲೋ ಇರುತ್ತಿತ್ತುʼ ಎಂದು ನಾನು ಹೇಳಿದ್ದೇ ತಡ, ಎಲ್ಲರೂ ಎದ್ದು ನಿಂತೇಬಿಟ್ಟರು. ʻಮೌನ ಬೇಕಾಗಿಲ್ಲ; ಎಲ್ಲರೂ ಖುಷಿಯ ನಗೆ ನಗಬಹುದುʼ ಎಂದೆ.
ಅದಕ್ಕೆ ಕಾರಣವನ್ನೂ ಕೊಟ್ಟೆ:
ಖ್ಯಾತ ಇಂಗ್ಲಿಷ್/ಕನ್ನಡ ಸಾಹಿತಿ ಡಾ. ಜಿ.ಎಸ್.ಆಮೂರ್ ಹಿಂದೊಮ್ಮೆ ಕುಮಟಾ ಕಾಲೇಜಿನ ಅಧ್ಯಾಪಕ ಆಗಿದ್ದಾಗ ಕೃಷ್ಣಾನಂದರು ಹಾಸ್ಟೆಲ್‌ನಲ್ಲಿದ್ದರು. ಆಮೂರ್ ಅದೇ ಹಾಸ್ಟೆಲಿನ ವಾರ್ಡನ್ ಆಗಿದ್ದರು.
“ಈ ಕೃಷ್ಣಾನಂದನ ಮುಗುಳ್ನಗೆ ಬಹುಃಶ ಆತ ಮಲಗಿದ್ದಾಗಲೂ ಹಾಗೇ ಇರ್ತದೆಂದು ಕಾಣುತ್ತದೆ. ಜ್ಯೋತ್ಸಾಳನ್ನು ಕೇಳಬೇಕು, ಅವಳೂ ನನ್ನ ವಿದ್ಯಾರ್ಥಿನಿ ಆಗಿದ್ದಳುʼ ಎಂದು ಬರೆದಿದ್ದರು. (ಚಪ್ಪಾಳೆ)
ಎಲ್ಲರ ಮುಗುಳ್ನಗೆ ಸೆಶನ್ ಮುಗಿದ ನಂತರ, ಕಾಮತರ ವ್ಯಕ್ತಿ ಚಿತ್ರಣಕ್ಕೆಂದು ವಿಜ್ಞಾನ ಸಾಹಿತಿ ಡಾ. ಟಿ.ಆರ್. ಅನಂತರಾಮು ಅವರ ಮಾತನ್ನು ಕೋಟ್ ಮಾಡಿದೆ: "ಡಾ. ಕಾಮತರು ಶಿವಗಂಗೆ ಬೆಟ್ಟದಂತೆ. ಉತ್ತರದಿಂದ ನೋಡಿದರೆ ಆ ಬೆಟ್ಟ ಶಿವಲಿಂಗವಾಗಿಯೂ, ಪೂರ್ವದಿಂದ ನೋಡಿದರೆ ಕಾಲೂರಿದ ಬಸವನಂತೆಯೂ ದಕ್ಷಿಣದಿಂದ ಹೆಡೆ ಎತ್ತಿದ ಸರ್ಪದಂತೆಯೂ, ಪಶ್ಚಿಮದಿಂದ ಗಣಪತಿಯಂತೆಯೂ…‘ ಎಂದಿದ್ದನ್ನು ನೆನಪಿಸಿದೆ.
ಕಾಮತ ದಂಪತಿಯ ಸೊಸೆ ಕಿಮ್ ಕೂಡ ತಮ್ಮ ಮಾವನ (ಬಾಪ್ಪಾನ) ಬಗ್ಗೆ ಅಂಥದ್ದೇ ಬೇರೊಂದು ಉಪಮೆ ಕೊಟ್ಟಿದ್ದಾರೆ. ʻಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ಚಿತ್ರಣ ಕೊಡೋದು ಹೇಗೆ ಅಸಾಧ್ಯವೊ ನನ್ನ ಬಾಪ್ಪಾನ ಚಿತ್ರಣವೂ ಅಷ್ಟೇ ಕಷ್ಟ ಸಾಧ್ಯʼ ಎಂದಿದ್ದಾರೆ.
ನನಗೆ ಕೊಟ್ಟ 10 ನಿಮಿಷಗಳಲ್ಲಿ ಮೂರು ನಿಮಿಷ ಮುಗಿದೇ ಹೋದವು.
ನನಗೆ ಕೃಷ್ಣಾನಂದ ಕಾಮತರ ವಿಜ್ಞಾನ ಮತ್ತು ಪರಿಸರ ಸಾಹಿತ್ಯದ ಬಗ್ಗೆ ಮಾತಾಡಲು ಹೇಳಿದ್ದರು. ಭಾರತದಲ್ಲಿ ಓದಿದ ಬುದ್ಧಿವಂತರೆಲ್ಲ ಅಮೆರಿಕದಲ್ಲಿ ಸೆಟ್ಲ್ ಆಗುವುದನ್ನು (ಪ್ರತಿಭಾ ಪಲಾಯನ) ತಡೆಯಲು 1968ರಲ್ಲಿ ಸರಕಾರ ಒಂದು ಯೋಜನೆ ರೂಪಿಸಿ ಅನೇಕರನ್ನು ಸ್ವದೇಶಕ್ಕೆ ಎಳೆದು ತಂತು. ಆ ಸಂದರ್ಭದಲ್ಲಿ ಕಾಮತರು ನ್ಯೂಯಾರ್ಕ್ ಸ್ಟೇಟ್ ವಿವಿಯಲ್ಲಿ ಕೀಟವಿಜ್ಞಾನದ ಡಾಕ್ಟರೇಟ್ ಪಡೆದಿದ್ದರು. ಅವರನ್ನು ಇಲ್ಲಿಗೆ ಎಳೆ ತಂದ ಮೇಲೆ ಇಲ್ಲಿ ಅವರಿಗೆ ಅವಕಾಶ ಕೊಡಲು ಇಲ್ಲಿನ ಲೋಕಲ್ ಪಾಲಿಟಿಕ್ಸ್ ಬಿಡಲಿಲ್ಲ. ಹಾಗೆ, ಅಲ್ಲೂ ಇಲ್ಲದೆ, ಇಲ್ಲೂ ಇರಲಾಗದೆ ಅತಂತ್ರರಾದವರಲ್ಲಿ ಡಾ. ಕಾಮತ್ ಕೂಡ ಒಬ್ಬರು. ಹಾಗಾಗಿ ಅವರು ವಿಜ್ಞಾನಿಯಾಗಿ ಬೇರೂರಲು ಸಾಧ್ಯ ಆಗಲೇ ಇಲ್ಲ.
ಒಂದರ್ಥದಲ್ಲಿ ಅವರ ದುರದೃಷ್ಟ ಕನ್ನಡ ಸಾಹಿತ್ಯ ಲೋಕಕ್ಕೆ ವರವೇ ಆಯಿತು. ಎಂದೂ ಎಲ್ಲೂ ಖಾಲಿ ಕೂರದ ಕೃಷ್ಣಾನಂದರ ನಾನಾ ಆಸಕ್ತಿಗಳು ಪ್ರಕಟವಾದವು. ವಿಜ್ಞಾನ ಸಂಶೋಧನೆಗೆ ವಿದಾಯ ಹೇಳಿ ಅವರು ತಮ್ಮ ಆಸಕ್ತಿಯ ಫೋಟೊಗ್ರಫಿ, ಕೀಟ, ಪ್ರಾಣಿ ಪಕ್ಷಿ ಆದಿವಾಸಿ ಅಧ್ಯಯನ, ಜಾನಪದ ವಸ್ತು ಸಂಗ್ರಹ, ಬರೆವಣಿಗೆ ಇಂಥವುಗಳಲ್ಲಿ ತೊಡಗಿಕೊಂಡರು. ಅವರು IIScಯ ಸಮೀಪವೇ ಮನೆ ಮಾಡಿ, ಅಲ್ಲಿ ತಮ್ಮ ʼವೈಜ್ಞಾನಿಕ ಫೊಟೊಗ್ರಫಿ ಸ್ಟೂಡಿಯೊʼ ಸೆಟಪ್ ಮಾಡಿದರು. ಸೈಂಟಿಸ್ಟ್ ಗಳಿಗೆ ಬೇಕಾದ ಮೈಕ್ರೊಫೊಟೊ, ಥಿನ್‌ಸ್ಲೈಡ್ ಫೋಟೊ ಎಲ್ಲ ಇವರೇ ಕ್ಲಿಕ್ ಮಾಡಿ, ಡಾರ್ಕ್ ರೂಮಿನಲ್ಲಿ ಡೆವಲಪ್ ಮಾಡಿ, ಪ್ರಿಂಟ್ ಹಾಕಿಸಿ ಕೊಡುತ್ತಿದ್ದರು.
ಅವರಲ್ಲಿದ್ದ ವಿಜ್ಞಾನ ಬೇರೊಂದು ರೀತಿಯಲ್ಲಿ ಪ್ರಕಟವಾಗುತ್ತಿತ್ತು. ಭಾರತದ ಕತ್ತಲ ಭೂಭಾಗವನ್ನು (ತೀರ ಹಿಂದುಳಿದ ಸಮಾಜಗಳನ್ನು) ಅನ್ವೇಷಿಸುತ್ತ, ಅಲ್ಲಿ ಸೆರೆ ಹಿಡಿದ ಚಿತ್ರಗಳನ್ನು ತಮ್ಮ ಮನೆಯಲ್ಲಿನ ಡಾರ್ಕ್‌ರೂಮಿನಲ್ಲಿ ನಿಂತು ಸಂಸ್ಕರಣೆ ಮಾಡಿ ಬೆಳಕಿಗೆ ಒಡ್ಡುತ್ತಿದ್ದರು.
ಹೆಸರಾಂತ ವಿನೋದ ಕವಿ ವಿ.ಜಿ. ಭಟ್ಟರು ಇವರ ಜಾನಪದ ವಸ್ತು ಸಂಗ್ರಹದ ಹುಚ್ಚಿನ ಬಗ್ಗೆ ಒಂದು ಕವನ ಬರೆದಿದ್ದಾರೆ:
ಕೃಷ್ಣಾನಂದರ ಗುಜರಿ ಗುತ್ತಿಗೆ/ ಹೊತ್ತು ತರುವನು ಹಳೆ ರದ್ದಿ/
ಉಳುಕಿದರೂನೂ ಆತನ ಕುತ್ತಿಗೆ ತಪ್ಪದೆ ಹೊರುವನು ಜಿದ್ದಿ
ಗೋಣಿಯ ಚೀಲದಿ ಮಂದಿ ಬಿಸಾಕಿದ ಪುರಾಣಕಾಲದ ವಸ್ತು
ಮನೆಗೆ ಸೇರಿಸುವ ಒರೆಸಿ ಪೇರಿಸುವ/ ಹರಕು ಮುರುಕಿಗೂ ಶಿಸ್ತು
ಇರಿಸಿ ತೋರಿಸಿದ ಭಾರದ ಗಂಟೆ/ಹರಿದ ತಾಳೆಗರಿ ಕಟ್ಟಿದ ಗ್ರಂಥ/
ಕಂಡು ಬೆಚ್ಚಿದೆನು ಮಸಮಸಕಾಗಿಹ/ಮಹಾಕವಿ ಮಹಾಕವಿ ಪಂನ ಸಹಿ
ಅದಿರಲಿ, ಮಹಾಕವಿ ಪಂಪನ ಸಹಿ…
ಈ ಕವನವನ್ನು ಗೌರೀಶ ಕಾಯ್ಕಿಣಿಯವರು ಕಾಮತರ ನೆನಪಿನ ‘ಕಮ್ಮಟಿಗʼ ಹೆಸರಿನ ಸಂಸ್ಮರಣ ಗ್ರಂಥದಲ್ಲಿ ಎತ್ತಿ ತೋರಿಸಿದ್ದಾರೆ.
ಕೃಷ್ಣಾನಂದರಿಗೆ ಕಾಗೆಗಳ ಬಗ್ಗೆ ಭಾರೀ ಆಸಕ್ತಿ. ಕಾಗೆ ತನ್ನ ಮೊಟ್ಟೆಗಳ ಜೊತೆಗೆ ಕೋಗಿಲೆಯ ಮೊಟ್ಟೆಗಳನ್ನು ಕಂಡರೂ ಅದಕ್ಕೆ ಹೆಚ್ಚುವರಿ ಮೊಟ್ಟೆಗಳ ಪರಿಜ್ಞಾನ ಇಲ್ಲದ್ದರಿಂದ ‘ಈ ಕಾಗೆಗಳ ಸಮಾಜದಲ್ಲಿ ಉತ್ತಮ ಗಣಿತ ಶಿಕ್ಷಕರ ಕೊರತೆ ಇದೆʼ ಎಂದು ಕೃಷ್ಣಾನಂದರು ತಮಾಷೆ ಮಾಡಿದ್ದನ್ನು ನಾನು ಇಂದಿನ ನನ್ನ ಉಪನ್ಯಾಸದಲ್ಲಿ ಹೇಳಬೇಕಿತ್ತು. ಟೈಮ್ ಇರಲಿಲ್ಲ.
ಕೃಷ್ಣಪ್ಪ ಎಂಬಾತ ತನ್ನ ಹೊಟೆಲ್‌ನಲ್ಲಿ ಕರಿದ ತಾಜಾ ಬೋಂಡಾಗಳನ್ನು ಅಂಗಡಿಯ ಮುಂಗಟ್ಟೆಯಲ್ಲಿ ಇಟ್ಟು ‘ಯಾರೂ ಕೈ ಹಾಕಬೇಡಿʼ ಎಂಬ ಫಲಕವನ್ನು ಜೋಡಿಸಿದ್ದಾರೆ. ಆಗ ಕಾಗೆಯೊಂದು ಬಂದು ಒಂದು ಬೋಂಡಾವನ್ನು ಕಚ್ಚಿಕೊಂಡು ಹೋಗುತ್ತದೆ. ಅಲ್ಲಿ ಬರೆದ ಫಲಕದಲ್ಲಿ ‘ಕೈ ಹಾಕಬೇಡಿʼ ಎಂದಿತ್ತೇ ಹೊರತೂ ‘ಚುಂಚು ಹಾಕಬೇಡಿʼ ಎಂದು ಇರಲಿಲ್ಲವಲ್ಲ ಎಂದು ಕಾಮತರು ತಮಾಷೆ ಮಾಡುತ್ತಾರೆ.
ಡಾ. ಕಾಮತರ ಈ ವಿನೋದಪ್ರಜ್ಞೆಯ ಬಗ್ಗೆ ಇಂದು ಹೇಳಲಿಲ್ಲ. ಅಷ್ಟು ಚಂದ ಮಾತಾಡಿದ ಜಯಂತ್ ಇದನ್ನು ‘ಕಮ್ಮಟಿಗʼ ಪುಸ್ತಕದಲ್ಲಿ ಬರೆದಿದ್ದಾರೆ. ಅವರಿಗೂ ಅದನ್ನು ಹೇಳಲು ಸಮಯ ಇರಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಸಮೃದ್ಧ ಕೊಡುಗೆ ನೀಡಿದ ಕಾಮತರಿಗೆ ಸಿಕ್ಕಿದ್ದು, ಸಾಹಿತ್ಯ ಅಕಾಡೆಮಿಯ ಒಂದು ಪುಸ್ತಕ ಬಹುಮಾನ ಮತ್ತು ಗೌರೀಶ್ ಕಾಯ್ಕಿಣಿ ನೆನಪಿಸ ಪ್ರಶಸ್ತಿ ಇವೆರಡೇ. ಜೊತೆಗೆ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ 1997ರಲ್ಲಿ. ಇದರಲ್ಲೂ ಅವರು ಸಮಯದ ಕೊರತೆಯಿಂದಾಗಿ ಅಧ್ಯಕ್ಷೀಯ ಭಾಷಣ ಓದಲು ಸಾಧ್ಯವಾಗಲಿಲ್ಲ.
ಆಕಾಶವಾಣಿಯ ಅಧಿಕಾರಿಯಾಗಿದ್ದ ಜ್ಯೋತ್ಸಾ ಎಲ್ಲೆಲ್ಲೋ ವರ್ಗವಾಗಿ ಹೋಗುತ್ತಿದ್ದಾಗ ಕೃಷ್ಣಾನಂದ ಇನ್ನೆಲ್ಲೋ ಮಧ್ಯಪ್ರದೇಶದ ವನವಾಸಿಗಳ ಮಧ್ಯೆಯೋ ಬಂಗಾಳದಲ್ಲೋ ಕಳೆದು ಹೋಗುತ್ತಿದ್ದರು (ಹಾಗೆ ಪರಸ್ಪರ ದೂರ ಇದ್ದುದರಿಂದಲೇ ಕೃಷ್ಣಾನಂದರು ಅಷ್ಟೊಂದು ಚಂದದ ‘ಪ್ರೇಯಸಿಗೆ ಪತ್ರಗಳುʼ ಬರೆಯಲು ಸಾಧ್ಯವಾಗಿದ್ದು ಎಂದು ಜಯಂತ್ ತಮಾಷೆ ಮಾಡಿದ್ದರು.
ಆದರೆ ಹೊನ್ನಾವರದ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಈ ಜೋಡಿ ಒಟ್ಟಿಗೆ ಹೋಗಿತ್ತು. ಯಾಕೆ ಅಂದರೆ, ಸಮ್ಮೇಳನದ ಅಧ್ಯಕ್ಷರಾಗಿ ಬರಬೇಕಿದ್ದ ಇವರು ಎಲ್ಲೋ ದಾರಿ ಮಧ್ಯೆ ಕಾಡಾನೆ, ಕರಡಿ ಕಂಡರೆ ಕ್ಯಾಮರಾ ಹಿಡಿದು ಇಳಿದು ಹೋಗಿಬಿಡುತ್ತಾರೋ ಎಂಬ ಭಯದಿಂದ ಸಂಘಟಕರು ಪತ್ನಿಯನ್ನು ಜೊತೆಗೆ ಕರೆತನ್ನಿ ಎಂದಿರಬೇಕುʼ ಎಂದು ಕೃಷ್ಣಾನಂದ ಅಧ್ಯಕ್ಷೀಯ (ಲಿಖಿತ) ಭಾಷಣದಲ್ಲಿ ʼಅಂಥವ ನಾನುʼ ಎಂದು ಹೇಳಿದ್ದಾರೆ.
ಇನ್ನು ಒಂದೇ ಒಂದು ನಿಮಿಷ ಬಾಕಿ ಇದೆ. ಡಾ.ಕೃಷ್ಣಾನಂದರದು ʻಪ್ರತಿಭಾ ಪಲಾಯನʼ ಅಲ್ಲ, ಕನ್ನಡನಾಡಿನಮಟ್ಟಿಗೆ ಪ್ರತಿಭೆಯ ಅನನ್ಯ ಅನಾವರಣʼ ಎಂದೆಲ್ಲ ವಿವರಿಸಬೇಕಿತ್ತು.
ಕಾಮತರ ಜನ್ಮಭೂಮಿ ಹೊನ್ನಾವರಕ್ಕೆ ವಿಶ್ವೇಶ್ವರ ಭಟ್ಟರು ನಿನ್ನೆ ಹೋಗಿದ್ದರಂತೆ. ನಾನು ಕಳೆದ ವಾರ ಅಲ್ಲಿದ್ದೆ.
ಕಾಮತರ ಹೆಸರಿನಲ್ಲಿ ಜ್ಯೋತ್ಸ್ನಾ ಸ್ಥಾಪಿಸಿದ "ಕೃಷ್ಣಕಲ್ಪ" ಹೆಸರಿನ ಗ್ರಂಥಾಲಯವನ್ನು ನೋಡಲು ಹೋಗಿದ್ದೆ. ಅಲ್ಲಿ ಬೀಗ ಹಾಕಿತ್ತು. ಇಡೀ ಬೀದಿಯಲ್ಲಿ ಯಾರೂ ಇರಲಿಲ್ಲ. ದೂರ ಕುಮಟಾದಲ್ಲಿದ್ದ ಕಾಮತ್ ಕಸಿನ್‌ಗೆ ಫೋನ್ ಮಾಡಿದೆ. ಅವರು ‘ಕೀಲಿ ಅಲ್ಲೇ…. ಇದೆ ನೋಡಿ, ಓಪನ್ ಮಾಡ್ಕೊಳಿʼ ಎಂದರು.
ಕೀಲಿ ಅಷ್ಟೊಂದು ಬಹಿರಂಗವಾಗಿ ಎಲ್ಲರಿಗೂ ಲಭಿಸುವಂತೆ ಇದ್ದರೂ ಯಾರೂ ಅದನ್ನು ಬಳಕೆ ಮಾಡಿದಂತಿಲ್ಲ. ನಾನು ಮತ್ತು ಪತ್ನಿ ರೇಖಾ ಅದರ ಬೀಗ ತೆಗೆದು ಮೊಬೈಲ್ ಬೆಳಕಿನಲ್ಲಿ ಸ್ವಿಚ್ ಹಾಕಿದಾಗ ಅಮೋಘ ಗ್ರಂಥಾಲಯ ಕಣ್ಣಿಗೆ ಬಿತ್ತು. ಜಗತ್ತಿನ ಎಲ್ಲ ಮಹಾನ್ ಸಾಹಿತ್ಯ ಕೃತಿಗಳ ಸಂಗ್ರಹ ಅಲ್ಲಿತ್ತು. ಅಪ್ರತಿಮ ಸಂಗ್ರಹ!
ಯಾರೂ ನೋಡುವವರಿಲ್ಲದೇ ದೂಳು ಮೆತ್ತಿಕೊಂಡ ಕಪಾಟುಗಳು ನಮ್ಮನ್ನ ನೋಡಿ ಆಕಳಿಸಿದಂತೆ ಬಾಯಿ ತೆರೆದವು.
ಯಾರ್ಯಾರದೋ ಮನೆಗೆ ಹೋಗಿ ಎಂತೆಂಥ ಅದ್ಭುತ ನೆನಪುಗಳನ್ನು ಸಂಗ್ರಹಿಸುತ್ತಿದ್ದ ಕೃಷ್ಣಾನಂದರ ಈ ಗ್ರಂಥ ಸಂಗ್ರಹವನ್ನು ಯಾರೂ ನೋಡುವವರಿಲ್ಲ.
ಆದರೆ ಎಲ್ಲರಿಗೂ ಲಭ್ಯ ಆಗುವಂತೆ ಆ ಮಹಾನ್ ದಂಪತಿಯ ಸಾಧನೆ ಸಂಗ್ರಹಗಳ ಇನ್ನೊಂದು ಕೀಲಿ ಇಲ್ಲಿ ನಮ್ಮೆದುರು ಕೂತಿದೆ, ಅದೇ ಅವರ ಮಗ ವಿಕಾಸ್ ಕಾಮತ್. ಅವರು ನಿರ್ವಹಿಸುತ್ತಿರುವ www.kamat.com/‘ ಜಾಲತಾಣಕ್ಕೆ ಹೋದರೆ ಆ ಬೆರಗಿನ ಪ್ರಪಂಚವನ್ನು ಯಾರೇ ಆದರೂ ಉಚಿತ ನೋಡಬಹುದು.
ನಮಸ್ಕಾರ.
ಇಂದಿನ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಮಾತಿನ ಎಷ್ಟೊಂದು ಅಣಿಮುತ್ತುಗಳು ಮಿನುಗಿದವು. (ಬುಕ್ ಬ್ರಹ್ಮದಲ್ಲಿ ನೋಡಬಹುದು, ಕೇಳಬಹುದು); ಈ ದಂಪತಿಯ ಕುರಿತ ಅತ್ಯುತ್ತಮ ಭಾಷ್ಯ ಬಂದಿದ್ದು ನಮ್ ಜಯಂತ್ ಕಾಯ್ಕಿಣಿಯಿಂದ:
ʻಕೃಷ್ಣಾನಂದ ಅಂದರೆ ಸದಾ ಮುಗುಳ್ನಗೆಯ ಮಹಾ ಮೌನಿ. ಜ್ಯೋತ್ಸಾ ಆದರೋ ಆಕಾಶವಾಣಿ!ʼ
*
ಯಾರು ಕಡಿಮೆ ಮಾತಾಡಿ ತಮ್ಮ ಸಮಯವನ್ನು ಮುಂದಿನ ಉಪನ್ಯಾಸಕರಿಗೆ ದಾನ ಮಾಡುತ್ತಾರೊ ಅವರಿಗೆ ವಿಶೇಷ ಬಹುಮಾನ ಇದೆʼ ಎಂದು ಖ್ಯಾತ ನಿರೂಪಕಿ ಬಿ.ಕೆ.ಸುಮತಿಯವರು ಆರಂಭದಲ್ಲೇ ಹೇಳಿದ್ದರು. ಪ್ರತಿಯೊಬ್ಬರ ಮಾತು ಮುಗಿದ ಕೂಡಲೇ ‘ನನಗೆ ಬಹುಮಾನ ಸಿಗುತ್ತದಾ?ʼ ಎಂದು ಎಲ್ಲರು ಕೇಳುವವರೇ. ನಾನೂ ಕೇಳಿದೆ. (ಜಯಂತ್ ಮಾತ್ರ, ʻನನಗೆ ಬಹುಮಾನ ಬೇಡʼ ಎಂದು ಮಾತು ಮುಗಿಸಿ ಕೂತವರು) ಕೊನೆಯಲ್ಲಿ ಡಾ. ಬೈರೇಗೌಡರಿಗೆ ಆ ಬಹುಮಾನ ಲಭಿಸಬೇಕು ಎಂದು ಸರ್ವಾನುಮತದಲ್ಲಿ ತೀರ್ಮಾನಿಸಲಾಯಿತು.
*
ಆಸಕ್ತರಿಗಾಗಿ:
ನಾನು ಹೇಳಬೇಕೆಂದಿದ್ದ, ಆದರೆ ಹೇಳದೇ ಉಳಿದ ಮಾತುಗಳ ಸಂಕ್ಷಿಪ್ತ ವಿವರ ಹೀಗಿದೆ:
ಅಮೆರಿಕದಿಂದ ಕರೆಸಿಕೊಂಡ ಈ ಪ್ರತಿಭಾವಂತ ವಿಜ್ಞಾನಿಯನ್ನು ರಾಜಸ್ಥಾನದಲ್ಲಿ, ಬಂಗಾಳದ ಪ್ಲಾಸಿಯಲ್ಲಿ ತುಂಬ ಹಿಂಸಿಸಲಾಯಿತು. ಅದೇ ಸಮಯಕ್ಕೆ 1974ರಲ್ಲಿ ಡಾ. ವಿನೋದ್ ಶಾ ಎಂಬ ಯುವ ಕೃಷಿ ವಿಜ್ಞಾನಿ ನಮ್ಮ ದೇಶದ ಟೆಕ್ನೊಕ್ರಸಿ/ ರಾಜಕೀಯದ ಬಗ್ಗೆ ರೇಜಿಗೆ ಹುಟ್ಟಿ ಆತ್ಮಹತ್ಯ ಮಾಡಿಕೊಳ್ಳುತ್ತಾರೆ. “ನಾನು ಹಾಗೆಲ್ಲ ಆತ್ಮಹತ್ಯೆ ಮಾಡಿಕೊಳ್ಳಲಾರೆ. ನನ್ನ ಕುಟುಂಬದ ಹಿತ ರಕ್ಷಣೆಗೆ ನಾನು ದಿನವೂ ಸಾಯಲು ಸಿದ್ಧ ಇದ್ದೇನೆʼ ಎಂದು ಡಾ. ಕಾಮತ್ ಬರೆದಿದ್ದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಡಾ. ಕೃಷ್ಣಾನಂದ ಹೇಳಿದ್ದು:
"ನ್ಯೂಝಿಲೆಂಡ್, ಜರ್ಮನಿ, ಫಿನ್ಲೆಂಡ್, ಫಿಲಿಪ್ಪೀನ್ಸ್ ಜನರು ಕೃಷಿಯಷ್ಟೇ ಪರಿಶ್ರಮದಿಂದ ಅರಣ್ಯವನ್ನು ಬೆಳೆಸಿ ರಫ್ತು ಮಾಡುತ್ತಿದ್ದಾರೆ. ನಾವು ಮಾತ್ರ ಈಗಲೂ ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ ಕೇಶರಾಶಿಯನ್ನು ರಫ್ತು ಮಾಡಿ ಡಾಲರು ಸಂಪಾದಿಸುವ ಪ್ರಸಂಗ ತಂದುಕೊಂಡಿದ್ದೇವೆ.
ಅರಣ್ಯಗಳನ್ನು ಬೆಳೆಸಬೇಕೆ ಹೊರತು ತಂತಾನೇ ಬೆಳೆಯಲು ಬಿಡಬಾರದು. ಬ್ರಿಟಿಷರ ದಟ್ಟ ಕಾಡುಗಳನ್ನು ಕಡಿದು ತಾತ್ಪೂರ್ತಿಕ ಲಾಭವನ್ನು ಪಡೆದರೇ ಹೊರತೂ ವ್ಯವಸ್ಥಿತ ಅರಣ್ಯ ನಿರ್ಮಾಣ ಮಾಡಲಿಲ್ಲ. ನಮ್ಮ ದೇಶದಲ್ಲಿ ಕೃಷಿ ಕಾಲೇಜು, ಕೃಷಿ ವಿವಿಗಳು ನಾಯಿಕೊಡೆಗಳಂತೆ ದೇಶಾದ್ಯಂತ ತಲೆ ಎತ್ತಿವೆಯಾದರೂ ಅರಣ್ಯ ಕೃಷಿಗೆ ಅರಣ್ಯ ಶಿಕ್ಷಣಕ್ಕೆ, ಸಂಶೋಧನೆಗೆ ಮೀಸಲಾದ ಒಂದಾದರೂ ಕಾಲೇಜು ಇಲ್ಲ."
(ಕೆಳಗಿನದು ʻಪರಿಸರ ಪರ್ಯಟನʼ ಸಂಪಾದಕಿ ಜ್ಯೋತ್ಸ್ನಾ ಕಾಮತ್ ಅವರದು. ತಮ್ಮ ಜಿಲ್ಲೆ ಉತ್ತರ ಕನ್ನಡವನ್ನು ನೋಡಿದ ಡಾ. ಕಾಮತರು ‘ನಾ ಕಂಡಂತೆʼ ಎಂಬ ಲೇಖನದಲ್ಲಿ ಹೇಳಿದ್ದು)
“ನಮ್ಮದು ಅರಣ್ಯಪ್ರಧಾನ ಜಿಲ್ಲೆಯಾಗಿದ್ದಿತು. ಅರಣ್ಯ ಸಂಪತ್ತನ್ನು ಕೃಷಿಯಂತೆ ಕೈಗೊಂಡಿತ್ತು ಅಮೆರಿಕ. ಅಲ್ಲಿಯ ಸಾಧನೆಯನ್ನು ಕಣ್ಣಾರೆ ಕಂಡು ಬಂದವ ನಾನು. ಇಲ್ಲೇ ಒಂದು ಅರಣ್ಯ ಪರಿಸರ ವಿಜ್ಞಾನದ ಕಾಲೇಜನ್ನು ಆರಂಭಿಸಬೇಕೆಂದು ಕನಸು ಕಾಣುತ್ತಿದ್ದೆ ನಾನು. ಆಗ ಸಮಾಜಸೇವಕರು, ಶಿಕ್ಷಣ ತಜ್ಞರು, ಸಂಸತ್ ಸದಸ್ಯರೂ ಆಗಿದ್ದ ದಿನಕರ ದೇಸಾಯಿ ಅವರಿಗೆ ಈ ಸಾಧ್ಯತೆ ಕುರಿತು ವಿನಂತಿ ಮಾಡಿಕೊಂಡೆ. ಅವರಿಗೂ ಸ್ಥಳೀಯರು ತಮ್ಮ ಬದುಕನ್ನು ಕಟ್ಟಿಕೊಳ್ಳುವಂಥ ವಿದ್ಯೆಯನ್ನು ನೀಡುವ ಆಸಕ್ತಿ ಇತ್ತು. ಮುದ್ರಣ, ಬೆರಳಚ್ಚು, ಹೊಲಿಗೆ, ಬಡಿಗತನ ಇತ್ಯಾದಿಗೆಂದು ಯಂತ್ರೋಪಕರಣ ತರಿಸಿದ್ದರು. ಆದರೆ ಯಾರಿಗೂ ಆಸಕ್ತಿ ಇರಲಿಲ್ಲ. ಶ್ರಮವಿಲ್ಲದೆ ಸಂಬಳ ತರುವ, ಸರಕಾರಿ ನೌಕರಿಗೇ ಸ್ಪರ್ಧೆ ನಡೆಸಿದ್ದರು. ಹೊನ್ನಾವರದ ಕಲ್ಲಾಪುರ ವಕೀಲರು ಯುವಕ ಯುವತಿಗಾಗಿ ನಾರು, ಹಲಗೆ, ಕಾಷ್ಠ ಕೆಲಸದ ತರಬೇತಿಗೆ ಕೊಡಲು ಹೋಗಿ ವಿಫಲರಾದರು. ನಮ್ಮ ಆದ್ಯತೆಯನ್ನು ಸಕ್ರಿಯವಾಗಿ ಗುರುತಿಸದಿದ್ದರೆ ಸಾಹಿತ್ಯವೂ ಸೇರಿದಂತೆ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗದು” ಎಂದು ದಿನಕರ ದೇಸಾಯಿ ಹೇಳಿದ್ದರು.
"ನಮ್ಮಲ್ಲಿ ಧೀಮಂತರಿಗೇನೂ ಕೊರತೆ ಇಲ್ಲ. ಮುಂಬಯಿ, ಬೆಂಗಳೂರು, ದಿಲ್ಲಿಯ ಕೋರ್ಟು, ಬ್ಯಾಂಕು ಅಧಿಕಾರಿ ಆದರು. ಸಂಗೀತ, ಸಿನೆಮಾದಲ್ಲಿ ಹೆಸರು ಮಾಡಿದರು. ಆದರೆ ಜಿಲ್ಲೆಗೆ ಏನೂ ಉಪಯೋಗ ಆಗಲಿಲ್ಲ".
ಡಾ. ಕಾಮತ್ ಹೇಳಿದ್ದು (ಇನ್ನಷ್ಟು):
ಜಾಗತಿಕ ಸಮ್ಮೇಳನವನ್ನು ನಡೆಸಿ, ವಿಶ್ವಕುಟುಂಬಿಯಾಗಲು ಹೊರಟ ಕನ್ನಡಿಗನಿಗೆ ತನ್ನ ಊರಿಗೆ ಬರುವ ಪಕ್ಷಿಗಳನ್ನು ಸರಿಯಾಗಿ ಹೆಸರಿಸಲು ಕೂಡ ಬಿಡುವಿಲ್ಲ. ಚಿಕ್ಕವೆಲ್ಲ ಗುಬ್ಬಚ್ಚಿ, ಬೆಳ್ಳಗಿದ್ದಿದ್ದೆಲ್ಲ ಬೆಳ್ಳಕ್ಕಿ. ಉದ್ದದ್ದೆಲ್ಲ ಕೊಕ್ಕರೆ. ಹೋದ ವರ್ಷ (1985ರಲ್ಲಿ) ಬೆಳ್ಳೂರಿಗೆ ಸಾವಿರಕ್ಕೂ ಹೆಚ್ಚು ಪೇಂಟೆಡ್ ಸ್ಟಾರ್ಕ್ ಹಕ್ಕಿಗಳು ವಲಸೆ ಬಂದಿದ್ದವು. ಈ ವರ್ಷ ಒಂದೂ ಬರಲಿಲ್ಲ, ಏಕೆಂದರೆ ಬೆಂಗಳೂರಿಗೆ ನೀರು ಪೂರೈಕೆ ಮಾಡಲೆಂದು ಶಿಂಷಾ ನದಿಯನ್ನು ತಿರುಗಿಸಿದೆವು.
“ಈ ಪೇಂಟೆಡ್ ಸ್ಟಾರ್ಕ್ ಹಕ್ಕಿಗೆ ‘ಕುಸುರಿನ ಕೊಕ್ಕರೆʼ ಎಂದಾದರೂ ಹೆಸರಿಸಬಹುದಿತ್ತು. ಈ ಹಕ್ಕಿಗಳಲ್ಲಿ ಜೀವಕಳೆ ತುಂಬಿಸಲಿಕ್ಕಾಗಿ ಸೃಷ್ಟಿಕರ್ತನು ತನ್ನೆಲ್ಲ ಕಲಾಕಾರರ ಸೇವೆಯನ್ನೂ ಬಳಸಿಕೊಂಡಿರಬೇಕು. ಅರಿಸಿನ ಬಣ್ಣದ ಉದ್ದ ಚುಂಚನ್ನು ಗುಡಿಗಾರರಿಂದ ರೂಪಿಸಿರಬೇಕು. ಕಾಡಿಗೆ ಕಣ್ಣುಗಳ ನಿರ್ಮಾಣಕ್ಕೆ ಬಿದರಿ ಕಲಾಕಾರರನ್ನೂ, ಅಚ್ಚ ಬಿಳಿ ಮೈಬಣ್ಣಕ್ಕೆ ಉಪ್ಪಾರರಿಂದ ಚಿಪ್ಪಿನ ಸುಣ್ಣವನ್ನು ಕುಟ್ಟಿಸಿರಬೇಕು. ರೆಕ್ಕೆಗಳ ಅಂಚುಗಳಿಗೆ ಕಡಲ ತೆರೆಗಳನ್ನು ಹೋಲುವಂಥ ನಕ್ಷೆಗಳನ್ನು ಕಲಮ್‌ಕಾರಿ ಚಿತ್ರಕಾರರಿಂದ ಕಡುಹಸಿರು ಬಣ್ಣದಲ್ಲಿ ರಚಿಸಿರಬೇಕು. ಕಂಠ, ಕಾಲು, ಪುಚ್ಚಗಳಿಗೆ ಕೆಂಬಣ್ಣಕ್ಕೆಂದು ರಾಜಸ್ಥಾನಿ ಹೆಂಗಳೆಯರಿಂದ ಗುಲಾಲು ಸಿಂಪಡಿಸಿ ಸವರಿರಬೇಕು. ನಾಚುತ್ತ ಬಳುಕುತ್ತ ಠೀವಿಯಿಂದ ನಿಂತ ಈ ಕೊಕ್ಕರೆಗಳನ್ನು ಕೈತುಂಬ ದಕ್ಷಿಣೆ ಉಡುಗೊರೆ ಕೊಟ್ಟು ಗೌರವಿಸಬೇಕಿತ್ತು.
ಇಂಥ ಅಪೂರ್ವ ಹಕ್ಕಿ ಕರ್ನಾಟಕಕ್ಕೆ ವಲಸೆ ಬರುತ್ತಿದೆ ಎಂದೇ ಜನರಿಗೆ ಗೊತ್ತಿಲ್ಲ. ಇನ್ನು ದರ್ಶನಭಾಗ್ಯ ಎಲ್ಲಿಂದ ಸಿಗಬೇಕು?
- ನಾಗೇಶ್ ಹೆಗಡೆ
“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...
“ನಮ್ಮೊಳಗಿನ ಮನುಷ್ಯತ್ವವನ್ನು ಬಡಿದೆಬ್ಬಿಸುತ್ತವೆ. ಇಂಥಾ ಜೀವಂತ ಜ್ವಾಲಾಮುಖಿಗಳಂಥ ಕಥೆಗಳನ್ನು ಓದಿದಾಗ, ನನ್ನಿಂ...
"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...
©2025 Book Brahma Private Limited.