ಅನುವಾದವೆಂಬುದು ಸಾಂಸ್ಕೃತಿಕ ಅನುಸಂಧಾನದ ಕಾರ್ಯ


“ದ್ವೇಷಾಸೂಯೆಗಳು ಬದುಕನ್ನು ಕಟ್ಟಲಾರವು. ಪ್ರೀತಿ ಪ್ರೇಮಗಳು ಬಾಳನ್ನು ಬೆಳಗುವ ಶಕ್ತಿಗಳು. ಇದೇ ಮಾನವ ಧರ್ಮದ ಮೂಲಮಂತ್ರ,” ಎನ್ನುತ್ತಾರೆ ಎಸ್.ಜಿ. ಸಿದ್ಧರಾಮಯ್ಯ ಅವರು ವೀಣಾ ಮುರುಳಿ ಸೀತಾರಾಮು ಅವರ “ತದ್ಭವ” ಕೃತಿಗೆ ಬರೆದ ಮುನ್ನುಡಿ.

ನೆಲನಿಷ್ಠೆಯ ವಿಶ್ವಪ್ರಜ್ಞೆ `ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪಂಪ ಮಹಾಕವಿ ಹೇಳಿದ ಮಾತು, ಈ ಕೃತಿಯನ್ನು ಓದಿದ ಯಾರಿಗೂ ಅನುಭವಕ್ಕೆ ಬರುವ ಸತ್ಯ. ಭಾಷೆ, ಬದುಕು, ಸಂಸ್ಕೃತಿ ಎಷ್ಟೇ ಭಿನ್ನವಾಗಿದ್ದರೂ, ವೈವಿಧ್ಯತೆಯಿಂದ ಕೂಡಿದ್ದರೂ ಮನುಷ್ಯನ ಗುಣಸ್ವಭಾವಗಳು, ರಾಗದ್ವೇಷಗಳು, ದೋಷ ದೌರ್ಬಲ್ಯಗಳು ಸಮಾನಶೀಲ ಭಾವದಲ್ಲಿ ಸರ್ವವ್ಯಾಪಿಯಾಗಿರುವುವು. ಅತ್ತರೆ, ನಕ್ಕರೆ ಎಲ್ಲರ ಕಣ್ಣಲ್ಲೂ ನೀರು ಬರುವುದು ಎಷ್ಟು ಸಹಜವೋ ಆ ಕಣ್ಣೀರಿನ ರುಚಿ ಉಪ್ಪುಪ್ಪಾಗಿರುವುದೂ ಅಷ್ಟೇ ಸಹಜ. ಬಿಳಿಯನ ಕಣ್ಣೀರು ಸಿಹಿಯದ್ದಲ್ಲ, ಕರಿಯನ ಕಣ್ಣೀರು ಕಹಿಯದ್ದಲ್ಲ. ವರ್ಗ ವರ್ಣ ಭೇದ ನೀತಿಗಳನ್ನು ದಾಟಿದ ಗುಣ ಮನುಷ್ಯನ ದೇಹ-ಮನೋಧರ್ಮ. ಆದ್ದರಿಂದಲೇ ಮನುಷ್ಯ ಜಾತಿ ತಾನೊಂದೆ ವಲಂ.

ಇಂಥ ಮೂಲ ಮನುಷ್ಯನನ್ನು ಅರ್ಥಾತ್ ಭಿನ್ನಭೇದಗಳ ಗಡಿಗೆರೆಗಳನ್ನು ದಾಟಿದ ಅಪ್ಪಟ ಮನುಷ್ಯ ಸಂವೇದನೆಗಳನ್ನು ಅನ್ವೇಷಿಸಿದಂತೆ ಲೋಕದರ್ಶನವನ್ನು ಕಟ್ಟಿಕೊಟ್ಟಿರುವ ಕಥೆಗಳು ಇಲ್ಲಿವೆ. ಜಗತ್ತಿನ ಪ್ರಸಿದ್ಧ ಬರಹಗಾರರು ಇಲ್ಲಿ ಸಮಾವೇಶಗೊಂಡಿದ್ದಾರೆ. ಗುಣಕ್ಕೆ ಮತ್ಸರವುಂಟೆ ಎಂಬ ಭಾವದಲ್ಲಿ ಗುಣಗ್ರಾಹಿಯಾಗಿ ಲೇಖಕಿ ಇಲ್ಲಿನ ಕಥೆಗಳನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಓ ಹೆನ್ರಿ, ಇವಾನ್ ತುರ್ಗೇವ್, ಮೊಪಾಸ, ಹೆಮಿಂಗ್ವೇ, ಮಾರ್ಕ್ ಟ್ವೆಂನ್, ಚೆಕಾಫ್, ಮಾಕ್ಸಿಂ ಗಾರ್ಕಿ ಇವರೆಲ್ಲ 19-20ನೇ ಶತಮಾನಗಳ ಕಾಲಾವಧಿಯಲ್ಲಿ ಬದುಕಿದ್ದವರು. ಅವರ ಕಥೆಗಳು ತ್ರಿಕಾಲಪ್ರಜ್ಞೆಯಲ್ಲಿ ಮನುಷ್ಯನ ಬದುಕನ್ನು, ಬದುಕಿನ ಮೌಲ್ಯವನ್ನು ಅನ್ವೇಷಿಸಿದ ಕಥೆಗಳು. ಆ ಮುಖೇನವಾಗಿ ಮಾನವೀಯತೆ, ಜೀವಪರತೆ, ನಿಸರ್ಗಧರ್ಮ ಪಾಲನೆ ಇಂಥ ಸಾರ್ವಕಾಲಿನ ಸತ್ಯಾನ್ವೇಷಣೆಗೆ ತೊಡಗಿದವರು.

ಅವರ ಭಾಷೆ-ನೆಲೆ-ಸಂಸ್ಕೃತಿ-ಪರಂಪರೆ ಭಿನ್ನವಾಗಿದ್ದರೂ ಅವರ ಕೇಂದ್ರಪ್ರಜ್ಞೆಯಲ್ಲಿ ಮನುಷ್ಯನ ಉತ್ತಮ ಮನುಷ್ಯನ ಹುಡುಕಾಟವಿದೆ. ಉತ್ತಮ ಬದುಕಿನ ಕಡೆಗೆ ತುಡಿತವಿದೆ. ಅಷ್ಟರಮಟ್ಟಿಗೆ ಅವರ ಬೇರುಗಳು ತಾವು ಬದುಕಿ ಬಾಳಿದ ನೆಲಮೂಲಕ್ಕೆ ನಿಷ್ಠವಾಗಿವೆ. ನೆಲಸಂಸ್ಕೃತಿಯ ಅಸ್ಮಿತೆ ಅವರ ಬರಹಗಳ ಜೀವದ್ರವ್ಯವಾಗಿದೆ. ನಿಜವಾದ ಸಂವೇದನಾಶೀಲ ಕಲೆಗಾರನ ಕಲಾತ್ಮತೆ ಹೀಗಲ್ಲದೆ ಬೇರೆ ಇರಲು ಸಾಧ್ಯವಿಲ್ಲ.

ತನ್ನತನವನ್ನು ತನ್ನ ಅಸ್ಮಿತೆಯಾಗಿ, ತನ್ನ ಸಂಸ್ಕೃತಿಯ ಬೇರಾಗಿ ಉಸಿರಾಡುತ್ತಾ ವಿಶ್ವಮಾನ್ಯತೆಯ ವಿಶ್ವಕುಟುಂಬ ಪ್ರಜ್ಞೆಯಲ್ಲಿ ನಮ್ಮ ಚಿಂತನೆ ಭಾವನೆಗಳನ್ನು ವಿಸ್ತರಿಸಿಕೊಳ್ಳುವುದೇ ನಿಜವಾದ ವಿಕಾಸ. ದ್ವೇಷಾಸೂಯೆಗಳು ಬದುಕನ್ನು ಕಟ್ಟಲಾರವು. ಪ್ರೀತಿ ಪ್ರೇಮಗಳು ಬಾಳನ್ನು ಬೆಳಗುವ ಶಕ್ತಿಗಳು. ಇದೇ ಮಾನವ ಧರ್ಮದ ಮೂಲಮಂತ್ರ. ಇಂಥ ಮನುಜ ಮತ, ವಿಶ್ವಪಥದ ಹೆಜ್ಜೆ ಗುರುತುಗಳನ್ನು ಕಾಣಿಸುವ ಕಥೆಗಳಿವು. `ಹಿಂದಣ ಅನಂತವನ್ನು ಮುಂದಣ ಅನಂತವನು ಒಂದು ದಿನ ಒಳಕೊಂಡಿತ್ತು ನೋಡಾ.’ ಆ ಒಂದು ದಿನವನೊಳಕೊಂಡು ಮಾತನಾಡುವ ಮಹಾಂತರು ಸಾಹಿತಿಗಳು. ಇಂಥ ಮೇರು ಸಾಹಿತಿಗಳ ಕಥೆಗಳನ್ನು ಆಯ್ಕೆ ಮಾಡಿಕೊಂಡ ಲೇಖಕಿಯ ಮನೋಲೋಕಕ್ಕೆ ಹಿಡಿದ ಕನ್ನಡಿ ರೂಪದ ಅನುವಾದ ಕೃತಿ ಇದು.

ಇವು ಕನ್ನಡದ ಕಥೆಗಳೇ ಎಂಬ ಭಾವನೆ ಓದಿನ ಸಂದರ್ಭದಲ್ಲಿ ನಮಗಾಗುತ್ತದೆ. ಅಷ್ಟು ಸಹಜ ಶೈಲಿಯ ಅನುವಾದ ಇದಾಗಿದೆ. ಇಂಥ ಅನುವಾದಕ್ಕೆ ತೊಡಗಿದ ಲೇಖಕಿ ವೀಣಾ ಮುರಳೀಧರ್ ಅವರು ಕನ್ನಡ ಪ್ರಜ್ಞೆಯನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ವಿಚಾರ.

ಅನುವಾದವೆಂಬುದು ಸಾಂಸ್ಕೃತಿಕ ಅನುಸಂಧಾನದ ಕಾರ್ಯ. ಸಾಂಸ್ಕೃತಿಕ ಮನಸ್ಸು ಮಾತ್ರ ಉದಾರತೆಯಲ್ಲಿ, ಸಹಿಷ್ಣುತಾ ಗುಣಸ್ವಭಾವದಲ್ಲಿ ಎಲ್ಲ ಒಳ್ಳೆಯದನ್ನೂ ಒಳಗೊಳ್ಳುತ್ತದೆ. ಆ ಒಳಗೊಳ್ಳುವ ಪ್ರಜ್ಞೆಯೇ ವಿಶ್ವ ಕುಟುಂಬ ಪ್ರಜ್ಞೆ. ಇದು ಕನ್ನಡದ ಪ್ರಜ್ಞೆಯೂ ಹೌದು. ಲೇಖಕಿಗೆ ಹಾಗೂ ಇಂಥ ಕೃತಿಯನ್ನು ಪ್ರಕಟಿಸಿದ ಚಾರುಮತಿ ಪ್ರಕಾಶನದ ವಿದ್ಯಾರಣ್ಯ ಅವರಿಗೆ ಅಭಿನಂದನೆಗಳು; ನಮನಗಳು.

- ಎಸ್.ಜಿ. ಸಿದ್ಧರಾಮಯ್ಯ

MORE FEATURES

ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ

02-01-2025 ಬೆಂಗಳೂರು

“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...

ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ

02-01-2025 ಬೆಂಗಳೂರು

"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...

ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿ

02-01-2025 ಬೆಂಗಳೂರು

“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...