ಅಂತರಂಗದ ಸ್ವಗತ : ಭಾವ ತರಂಗಗಳ ಮೀಟುವ ಆತ್ಮ ಕಥನ


“ಒಟ್ಟಿನಲ್ಲಿ ಇಡೀ ಕೃತಿ ಓದಿ ಮುಗಿಸಿದಾಗ ಒಂದು ಅವರ್ಣನೀಯ ಭಾವ ನಿಮ್ಮನ್ನು ಖಂಡಿತ ಆವರಿಸಿಕೊಳ್ಳದೆ ಬಿಡದು. ಆತ್ಮಕಥನ ಹೇಗಿರಬೇಕು ಎನ್ನುವುದಕ್ಕೆ ಈ ಕೃತಿ ಒಂದು ನಿದರ್ಶನ ಕೂಡ,” ಎನ್ನುತ್ತಾರೆ ನರೇಂದ್ರ ಎಸ್ ಗಂಗೊಳ್ಳಿ. ಅವರು ಪಾರ್ವತಿ ಜಿ. ಐತಾಳ್‌ ಅವರ "ಅಂತರಂಗದ ಸ್ವಗತ" ಕೃತಿ ಕುರಿತು ಬರೆದ ವಿಮರ್ಶೆ.

ಒಬ್ಬ ವ್ಯಕ್ತಿ ನಮ್ಮೊಡನೆ ತನ್ನ ಜೀವನದ ವೈವಿಧ್ಯಮಯ ಘಟನೆಗಳನ್ನು, ಸುಖ-ದುಃಖ ಸೋಲು ಗೆಲುವು ಪರಿಶ್ರಮ ಪರಿಪಾಟಲುಗಳ ಜೊತೆಯಲ್ಲಿ ಒಂದು ಪರಿಶುದ್ಧ ಮನಸ್ಸು ಮತ್ತು ಪ್ರಾಮಾಣಿಕತೆಯಿಂದ ತನ್ನ ಹೃದಯದ ಮಾತುಗಳನ್ನು ಆಪ್ತತೆಯಿಂದ ಹಂಚಿಕೊಳ್ಳುತ್ತಿದ್ದರೆ ಅದನ್ನು ಅಷ್ಟೇ ಆಸಕ್ತಿಯಿಂದ ಕೇಳೋಣ ಎನಿಸುತ್ತದೆ. ಇದೇ ಪರಿಯಲ್ಲಿ ಬರವಣಿಗೆಯ ಮೂಲಕ ತಮ್ಮ ಹೃದಯದ ಮಾತುಗಳನ್ನು ತಮ್ಮ ಆತ್ಮಕಥನ 'ಅಂತರಂಗದ ಸ್ವಗತ' ದಲ್ಲಿ ಮೂಡಿಸಿದವರು ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕಿ ಮತ್ತು ಅನುವಾದಕಿಯಾಗಿ ಖ್ಯಾತಿ ಪಡೆದಿರುವ ಲೇಖಕಿ ಡಾ. ಪಾರ್ವತಿ ಜಿ ಐತಾಳ್ ಅವರು. ಮತ್ತು ಅದೇ ಕಾರಣಕ್ಕೆ ಈ ಕೃತಿ ಓದುಗನಿಗೆ ಇಷ್ಟವಾಗುತ್ತದೆ.

ಕನ್ನಡ ಇಂಗ್ಲಿಷ್ ಮಲಯಾಳಂ ಹಿಂದಿ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಸಾಧಿಸಿ ಪಂಚ ಭಾಷಾ ಲೇಖಕಿಯಾಗಿ ಗುರುತಿಸಿಕೊಂಡು ವಿಶೇಷವಾಗಿ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿರುವ ಡಾ. ಪಾರ್ವತಿ ಜಿ ಐತಾಳ್ ತಮ್ಮ ಆತ್ಮಕಥನದಲ್ಲಿ ಹಂಚಿಕೊಂಡಿರುವ ವಿಷಯಗಳು, ಬಳಸಿಕೊಂಡ ಭಾಷೆ, ಅಡಗಿರುವ ಭಾವನೆಗಳು ಎಲ್ಲವೂ ಕೂಡ ಆಕರ್ಷಣೀಯ. ನೂರಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿರುವ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ನೂರಾರು ಸನ್ಮಾನಗಳಿಗೆ ಭಾಜನರಾಗಿರುವ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿಯೂ ಗುರುತಿಸಿಕೊಂಡಿರುವ ಕೌಟುಂಬಿಕ ಜೀವನದಲ್ಲಿಯೂ ಯಶಸ್ಸನ್ನು ಕಂಡಿರುವ ಬಹುಮುಖ ಪ್ರತಿಭಾನ್ವಿತ ಸರಳ ಸಜ್ಜನಿಕೆಯ ನೇರ ವ್ಯಕ್ತಿತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಈ ಕಥನವು ನಿಜವಾದ ಅರ್ಥದಲ್ಲಿ ಸಾಧಿಸಬೇಕು ಎನ್ನುವವರಿಗೆ ಒಂದು ಅದ್ಭುತವಾದ ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸ್ವಚ್ಛಂದ ಬಾಲ್ಯ, ಗೂಡಿನಿಂದ ಗಗನಕ್ಕೆ, ಹೆಗಲೇರಿದ ಹೊಣೆಗಳು, ಅಕ್ಷರ ಲೋಕದೊಳಗೆ, ಕಾಲನಿಗೆ ತಲೆಬಾಗಿ ಎನ್ನುವ ಐದು ಭಾಗಗಳಲ್ಲಿ ಲೇಖಕರು ತಮ್ಮ ಬದುಕಿನ ವಿವಿಧ ಘಟ್ಟಗಳನ್ನು ಅತ್ಯಂತ ಆಪ್ತವಾಗಿ ಚಿತ್ರಿಸುತ್ತ ಸಾಗುತ್ತಾರೆ. ಎಲ್ಲಿಯೂ ಅನವಶ್ಯಕ ವಿವರಗಳನ್ನು ಹೇಳದೆ ಪ್ರಮಾಣಿಕವಾಗಿ ತಾವು ಬದುಕಿನಲ್ಲಿ ಕಂಡುಕೊಂಡಿದ್ದನ್ನು, ಸಾಗಿಬಂದ ಹಾದಿಯನ್ನು, ಎದುರಿಸಿದ ಕಷ್ಟಗಳನ್ನು, ಗೆಲುವಿನ ಸಂಭ್ರಮಗಳನ್ನು ಸ್ಥಿತಪ್ರಜ್ಞತೆಯಿಂದ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಧರ್ಮತಡ್ಕದ ಬ್ರಾಹ್ಮಣ ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿದ ಪಾರ್ವತಿಯವರು ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು ಮತ್ತು ಸ್ತ್ರೀ ಸ್ವಾತಂತ್ರ್ಯಕ್ಕೆ ಹೆಚ್ಚಿನ ಅವಕಾಶಗಳು ಇಲ್ಲದ ವಾತಾವರಣದ ನಡುವೆ ಬೆಳೆದು ಬಂದದ್ದು, ಓದಿನ ಆಸಕ್ತಿ ಬೆಳೆಸಿಕೊಂಡದ್ದು , ಅನಿವಾರ್ಯವಾಗಿ ಮಲೆಯಾಳ ಕಲಿತದ್ದು, ಶಿಕ್ಷಕ ವೃತ್ತಿ ಸೇರಿದ್ದು, ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿಯಾದದ್ದು ಅನುವಾದ ಸಾಹಿತ್ಯ ಮತ್ತು ಸ್ವತಂತ್ರ ಕೃತಿ ರಚನೆ ಎರಡರಲ್ಲಿಯೂ ಸೈ ಎನಿಸಿಕೊಂಡಿದ್ದು, ಅವಮಾನ, ಸನ್ಮಾನ, ವಿರೋಧಿಗಳಿಗೆ ಸಾಧನೆಗಳ ಮೂಲಕ ಉತ್ತರಿಸಿದ್ದು ಇತ್ಯಾದಿ ವಿಚಾರಗಳ ಜೊತೆಗೆ ಕೌಟುಂಬಿಕ ವಿಷಯಗಳನ್ನು ಇಲ್ಲಿ ಆಪ್ತವಾಗಿ ದಾಖಲಿಸಿದ್ದಾರೆ. ಹತ್ತಾರು ಘಟನೆಗಳು ಸಮಾಜದ ವಿವಿಧ ಜನರ ಮುಖವಾಡಗಳಿಗೆ ಕನ್ನಡಿ ಹಿಡಿಯುತ್ತವೆ. ಮಹಿಳಾ ಸ್ವಾತಂತ್ರ್ಯ ಮತ್ತು ಮಹಿಳಾ ಸಬಲೀಕರಣದ ಕುರಿತಂತೆ ಲೇಖಕಿಯ ದೃಷ್ಟಿಕೋನ ಮತ್ತು ಅದಕ್ಕೆ ಅನುರೂಪವಾದ ಅವರ ಹೋರಾಟದ ಜೀವನ ಸ್ತುತ್ಯರ್ಹ. ಕಾಲನಿಗೆ ತಲೆಬಾಗಿ ಎನ್ನುವ ಶೀರ್ಷಿಕೆಯಡಿಯಲ್ಲಿ ಅವರು ನೀಡಿರುವ ವಿವರಗಳು ಓದುಗನ ಹೃದಯವನ್ನು ಭಾರವಾಗಿಸುತ್ತವೆ.

ಒಟ್ಟಿನಲ್ಲಿ ಇಡೀ ಕೃತಿ ಓದಿ ಮುಗಿಸಿದಾಗ ಒಂದು ಅವರ್ಣನೀಯ ಭಾವ ನಿಮ್ಮನ್ನು ಖಂಡಿತ ಆವರಿಸಿಕೊಳ್ಳದೆ ಬಿಡದು. ಆತ್ಮಕಥನ ಹೇಗಿರಬೇಕು ಎನ್ನುವುದಕ್ಕೆ ಈ ಕೃತಿ ಒಂದು ನಿದರ್ಶನ ಕೂಡ. ಅಂಕಿತ ಪುಸ್ತಕ ಈ ಕೃತಿಯನ್ನು ಹೊರತಂದಿದೆ. ಓದುವ ಖುಷಿ ನಿಮ್ಮದಾಗಲಿ.

MORE FEATURES

ಲೇಖಕರಿಗೆ ಕೌತುಕಮಯವಾಗಿ ಬರೆಯುವ ಕಲೆ ಒಲಿದಿದೆ

07-04-2025 ಬೆಂಗಳೂರು

“ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆ...

ನಾಟಕರಂಗದ ಚಿತ್ರಣವನ್ನು ನೀಡುವ ಕಾದಂಬರಿ ‘ಗೆದ್ದವರು ಯಾರು’

07-04-2025 ಬೆಂಗಳೂರು

"ನಾಟಕದ ಬಗ್ಗೆ ಆಸಕ್ತಿ ಇರದ ಶ್ರೀಕಂಠಯ್ಯನು ಈ ಯೋಜನೆಗೆ ಒಪ್ಪಿಕೊಂಡಿರುವುದು ಸಂಗೀತ, ವೀಣಾವಾದನ ಮತ್ತು ನೃತ್ಯದಲ್ಲ...

ಈ ನಾಟಕ ಕಟ್ಟುವ ಕ್ರಿಯೆಯಲ್ಲಿ ತೊಡಗುವುದು ನಾಟಕದ ವಿಶಿಷ್ಟ ಭಾಗ ಅನ್ನಿಸಿತು

06-04-2025 ಬೆಂಗಳೂರು

"ಒಂದು ನಾಟಕೀಯ ಲಾಜಿಕ್, ಅದರಲ್ಲಿ ಯಾವುದೇ “ಗ್ರೇ ಏರಿಯಾಗಳಿಗೆ ಅವಕಾಶ ಇಲ್ಲದಂತೆ” 0 ಮತ್ತು 1ಗಳು (...